ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸವನಹಳ್ಳಿ ಕೆರೆಯಲ್ಲೂ ನೊರೆ

ಕೆರೆ ಒಡಲು ಸೇರುತ್ತಿದೆ ಕಲುಷಿತ ನೀರು
Last Updated 30 ಮೇ 2016, 0:30 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಜಾಪುರ ರಸ್ತೆಯಲ್ಲಿರುವ ಕಸವನಹಳ್ಳಿ ಕೆರೆ ಕೋಡಿಯಲ್ಲಿ ಭಾನುವಾರ ನೊರೆ ಕಾಣಿಸಿಕೊಂಡಿದೆ.
ಹರಳೂರು ರಸ್ತೆಯ ಬಳಿ ಕೆರೆ ಕೋಡಿಯಲ್ಲಿ ಮೊದಲ ಬಾರಿಗೆ ನೊರೆ ಕಾಣಿಸಿಕೊಂಡಿದ್ದು, ಸ್ಥಳೀಯ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.

ಕಳೆದ ವರ್ಷ ಬೆಳ್ಳಂದೂರು ಹಾಗೂ ವರ್ತೂರು  ಕೆರೆ ಕೋಡಿಯಲ್ಲಿ ಭಾರಿ  ಪ್ರಮಾಣದ ನೊರೆ ಕಾಣಿಸಿ­ಕೊಂಡಿತ್ತು. ನೊರೆಗೆ ಬೆಂಕಿ ಬಿದ್ದು ದೇಶದಾದ್ಯಂತ ಸುದ್ದಿಯಾಗಿತ್ತು. ಸಾರಕ್ಕಿ ಕೆರೆಯಲ್ಲೂ ನೊರೆ ಕಾಣಿಸಿಕೊಂಡಿತ್ತು. ನಗರದ 10ಕ್ಕೂ ಅಧಿಕ ಕೆರೆಗಳಲ್ಲಿ ನೊರೆ ಸಮಸ್ಯೆ ಇದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿಗಳು ಹೇಳಿದ್ದರು. ಈಗ ಈ ಪಟ್ಟಿಗೆ ಕಸವನಹಳ್ಳಿ ಸೇರ್ಪಡೆಯಾಗಿದೆ.

ಶನಿವಾರ ಸಂಜೆ ಸುರಿದ ಮಳೆಯಿಂದಾಗಿ ಕೆರೆಗೆ ನೀರು ಹರಿದು ಬರುತ್ತಿದೆ. ಜತೆಗೆ ನೊರೆ ಸಮಸ್ಯೆಯೂ ಕಾಣಿಸಿಕೊಂಡಿದೆ. ಕಸವನಹಳ್ಳಿ ಕೆರೆ 80 ಎಕರೆ ವಿಸ್ತೀರ್ಣ ಹೊಂದಿದೆ.  ಇತ್ತೀಚೆಗೆ ಕೆರೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ಕಸವನಹಳ್ಳಿ ಕೆರೆ ಹಾಗೂ ಕೈಕೊಂಡ್ರಹಳ್ಳಿ ಕೆರೆ ಅಕ್ಕಪಕ್ಕದಲ್ಲಿವೆ. ಈ ಕೆರೆಯ ನೀರು ಕೈಕೊಂಡ್ರಹಳ್ಳಿ ಕೆರೆಗೆ ಹರಿಯುತ್ತದೆ. ಈ ಎರಡೂ ಕೆರೆಗಳ ನಡುವೆ ಇರುವ ಜಲಾನಯನ ಪ್ರದೇಶದಲ್ಲಿ ದೊಡ್ಡ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.

ಈ ಭಾಗದಲ್ಲಿ ಒಳಚರಂಡಿ ಮಾರ್ಗಗಳಿಲ್ಲ. ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಗಳು ಮಾಯವಾಗಿವೆ. ಕಿರಿದಾದ ಕಾಲುವೆಗಳಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

‘ಮಳೆಗಾಲ ಆರಂಭವಾಗುವ ಮುನ್ನವೇ ಚರಂಡಿಗಳನ್ನು ಸರಿಪಡಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅಧಿಕಾರಿಗಳು  ಕ್ರಮ ಕೈಗೊಂಡಿಲ್ಲ. ಬೆಳ್ಳಂದೂರು ಕೆರೆಯ ಸ್ಥಿತಿ ಈ ಕೆರೆಗೂ ಬಂದಿರುವುದು ವಿಪರ್ಯಾಸ’ ಎಂದು ಸ್ಥಳೀಯ ನಿವಾಸಿ ವೆಂಕಟಸ್ವಾಮಿ ಬೇಸರ ವ್ಯಕ್ತಪಡಿಸಿದರು.

‘ಕೆರೆಗೆ ಕಲುಷಿತ ನೀರು ಸೇರುತ್ತಿದೆ. ಕೆರೆಯನ್ನು ಅಭಿವೃದ್ಧಿ ಪಡಿಸಿದರೂ ಜಲಾನಯನ ಪ್ರದೇಶದಲ್ಲಿ ಬೃಹತ್‌ ಕಟ್ಟಡಗಳು ತಲೆ ಎತ್ತಿವೆ. ಅಪಾರ್ಟ್‌ಮೆಂಟ್‌ಗಳ ಕೊಳಚೆ ನೀರು ಸಹ ಕೆರೆಯ ಒಡಲು ಸೇರುತ್ತಿದೆ’ ಎಂದು ದೂರಿದರು.

ಅಗರ–ಬೆಳ್ಳಂದೂರು ಕೆರೆ ಪಾತ್ರದಲ್ಲಿ ಕಟ್ಟಡ ಕಾಮಗಾರಿ ನಡೆಸುವುದಕ್ಕೆ ತಡೆ ನೀಡುವಂತೆ ಕೋರಿ ನಮ್ಮ ಬೆಂಗಳೂರು ಫೌಂಡೇಷನ್‌ ಹಾಗೂ   ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳು  ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಗೆ (ಎನ್‌ಜಿಟಿ) ದೂರು ನೀಡಿದ್ದವು. ಕೆರೆಯಂಗಳದಲ್ಲಿ ಹಾಗೂ ಬಫರ್‌ ಜೋನ್‌ನಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಎನ್‌ಜಿಟಿ ತಾಕೀತು ಮಾಡಿತ್ತು.
*
ಅಭಿಯಾನಕ್ಕೆ  ಬೆಂಬಲ
ಕೈಕೊಂಡ್ರಹಳ್ಳಿ ಹಾಗೂ ಕಸವನಹಳ್ಳಿ ಕೆರೆಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸರ್ಜಾಪುರದ ಕೆಲವು ನಿವಾಸಿಗಳು change.org ವೆಬ್‌ ತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಅಭಿಯಾನಕ್ಕೆ ಈಗಾಗಲೇ 2,706 ಮಂದಿ ಸಹಿ ಹಾಕಿ ಬೆಂಬಲ ಸೂಚಿಸಿದ್ದಾರೆ. ಜತೆಗೆ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿರುವ ಸ್ಥಳೀಯರು, ಕೆರೆ ಉಳಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT