ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ನಿರ್ವಹಣೆಯ ಸಮುದಾಯ ಮಾದರಿ

Last Updated 28 ಜೂನ್ 2016, 19:30 IST
ಅಕ್ಷರ ಗಾತ್ರ

ಹಬ್ಬ ಎಂದ ಕೂಡಲೆ ನೆನಪಾಗೋದು ಹೊಸ ಬಟ್ಟೆ, ಸಿಹಿ ತಿನಿಸು, ಊರುಗಳಿಂದ ಬರುವ ನೆಂಟರು. ಈಗ ಈ ಪಟ್ಟಿಗೆ ಕಸವೂ ಸೇರಿಕೊಂಡಿದೆ.
ಹಬ್ಬದ ಮರುದಿನ ಮನೆಗಳ ಅಕ್ಕಪಕ್ಕ, ಖಾಲಿ ನಿವೇಶನ, ರಸ್ತೆ ಬದಿ, ಕೆರೆ ಹಾಗೂ ರಾಜಕಾಲುವೆಗಳ ಬಳಿ ಬೀಳುವ ಕಸದ ರಾಶಿ. ವಾರಗಟ್ಟಲೆ ವಿಲೇವಾರಿಯಾಗದೆ ಕೊಳೆತು ನಾರುವ ಕಸದಿಂದ ರೋಗ ಹರಡುವ ಭೀತಿ. ಕಸ ವಿಲೇವಾರಿ ಮಾಡದ ಬಿಬಿಎಂಪಿ ವಿರುದ್ಧ ಆರೋಪಗಳ ಸುರಿಮಳೆ. ಸದ್ಯ ಇದು ನಗರದ ಪರಿಸ್ಥಿತಿ.

ಇದಕ್ಕೆ ಅಪವಾದವೆಂಬಂತೆ ನಗರದ ಯಲಹಂಕದ ನಾಗರಿಕರು ಕಸದ ವಿಲೇವಾರಿ ಹಾಗೂ ನಿರ್ವಹಣೆಯಲ್ಲಿ ತಮ್ಮದೇ ಆದ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಯಾವುದೇ ಹಬ್ಬ, ಸಭೆ, ಸಮಾರಂಭ ಅಥವಾ ಉತ್ಸವಗಳು ನಡೆದಾಗ ಸ್ಥಳೀಯರೇ ಕಸದ ಅವಶೇಷವೂ ಉಳಿಯದಂತೆ ವಿಲೇವಾರಿ ಮಾಡುತ್ತಿದ್ದಾರೆ. ಹೀಗಾಗಿ ಯಲಹಂಕದ ಬಹುತೇಕ ವಾರ್ಡ್‌ಗಳಲ್ಲಿ ಈಗ ಕಸ ವಿಲೇವಾರಿ ಸಮಸ್ಯೆ ಎದುರಾಗುತ್ತಿಲ್ಲ.

ಯಲಹಂಕ ವಲಯದಲ್ಲಿರುವ 11 ವಾರ್ಡ್‌ಗಳಲ್ಲಿಯೂ ನಾಗರಿಕರೇ ಸ್ವಯಂಸೇವಕರಾಗಿ ಕಸ ವಿಲೇವಾರಿ ಮತ್ತು ನಿರ್ವಹಣೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಯಾವುದೇ ಸಭೆ, ಸಮಾರಂಭ ಅಥವಾ ಉತ್ಸವಗಳು ನಡೆದಾಗ  ಸ್ಥಳೀಯ ಸ್ವಯಂಸೇವಕರು ಪಾಲಿಕೆ ಸಹಾಯ ಪಡೆದು ಕಸ ವಿಲೇವಾರಿ ಮಾಡುತ್ತಾರೆ. ಹಸಿಕಸದಿಂದ ಗೊಬ್ಬರ ತಯಾರಿಸಿ ರೈತರಿಗೆ ಮಾರಾಟ ಮಾಡುತ್ತಾರೆ. 

ಯಲಹಂಕದ ನಾಗರಿಕರು ಸೇರಿ ಮಾಡಿಕೊಂಡಿರುವ ಗುಂಪಿಗೆ ‘ಯಲಹಂಕ ಇಕೊ ಗ್ರೂಪ್’ ಎಂದು ಹೆಸರು ಇಡಲಾಗಿದೆ. ಇದು ಸ್ಥಳೀಯ ನಾಗರಿಕರು ಕಸ ನಿರ್ವಹಣೆಗಾಗಿ ಮಾಡಿಕೊಂಡಿರುವ ನಾಗರಿಕ ವೇದಿಕೆ. ಈ ನಾಗರಿಕ ವೇದಿಕೆಗೆ ನಾಂದಿ ಹಾಡಿದವರು ಈ ಹಿಂದೆ ಯಲಹಂಕದಲ್ಲಿ ಪಾಲಿಕೆ  ಅಧಿಕಾರಿಯಾಗಿದ್ದ ಸರ್ಫರಾಜ್ ಖಾನ್.

ವೈಇಜಿ ಹುಟ್ಟಿದ್ದು
ಕಳೆದ ಗಣಪತಿ ಹಬ್ಬದಲ್ಲಿ ಮೊದಲ ಬಾರಿಗೆ ಕಸ ವಿಲೇವಾರಿ ಹಾಗೂ ಗಣೇಶ ವಿಸರ್ಜನೆಗಾಗಿ ಪಾಲಿಕೆಯವರು ಪ್ರತ್ಯೇಕ ಸ್ಥಳಗಳನ್ನು ಗೊತ್ತು ಮಾಡಿದ್ದರು.  ಇದರಿಂದಾಗಿ ಕೆರೆಗಳ ಮಾಲಿನ್ಯ ತುಸು ಕಡಿಮೆಯಾಯಿತು. ಪಾಲಿಕೆಯ ಮೊದಲ ಪ್ರಯತ್ನಕ್ಕೆ ಕೈಜೋಡಿಸಿದ್ದ ಸ್ವಯಂಸೇವಕರನ್ನು ಒಂದೂಗೂಡಿಸಿದ್ದ ಯಲಹಂಕದಲ್ಲಿದ್ದ ಪಾಲಿಕೆ ಅಧಿಕಾರಿ ಸರ್ಫರಾಜ್ ಖಾನ್.  ಇದು ವೈಪಿಜಿ ಹುಟ್ಟಲು ಕಾರಣವಾಯಿತು.

ಹಬ್ಬಗಳ ನಿರ್ವಹಣೆ
ಬಕ್ರೀದ್ ಸಂದರ್ಭ ಪ್ರಾಣಿಗಳ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲ ಅಥವಾ ಕಪ್ಪು ಬಣ್ಣದ ಕವರ್‌ಗಳಲ್ಲಿ ತುಂಬಿ ಖಾಲಿ ನಿವೇಶನ, ಕೆರೆ ಸಮೀಪ ಅಥವಾ ರಾಜ ಕಾಲುವೆಗಳಲ್ಲಿ ಹಾಕುತ್ತಿದ್ದರು. ಇದು  ನಾಯಿಗಳ ಕಾಟ ಹೆಚ್ಚಾಗಲು ಮುಖ್ಯ ಕಾರಣವಾಗಿತ್ತು.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇಕೊ ಗ್ರೂಪ್ ವತಿಯಿಂದ ಸಮೀಕ್ಷೆ ನಡೆಸಲಾಯಿತು. ಹಬ್ಬಕ್ಕೆ ಎರಡು ದಿನ ಮೊದಲು ಸ್ವಯಂಸೇವಕರು ಸಭೆ ನಡೆಸಿ, ಯಾವ ಯಾವ ವಾರ್ಡ್‌ಗಳಲ್ಲಿ ಮಾಂಸದ ಅಂಗಡಿಗಳಿವೆ, ಯಾವ ಪ್ರದೇಶದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿದೆ ಎಂಬುದನ್ನು ಪತ್ತೆ ಮಾಡಿದರು. ಸ್ವಚ್ಛತೆ ಕಾಪಾಡುವ ಕುರಿತು ಮಸೀದಿಗಳಿಂದ ಪ್ರಕಟಣೆ ಹೊರಡಿಸಲಾಯಿತು. ತ್ಯಾಜ್ಯ ಸಂಗ್ರಹಿಸಲು ಆಟೊ– ಟ್ರ್ಯಾಕ್ಟರ್‌ ವ್ಯವಸ್ಥೆ ಮಾಡಲಾಯಿತು. ಪ್ರಾಣಿಗಳ ವಧಾಗಾರಗಳಿಂದ (ಕಸಾಯಿಖಾನೆ) ನೇರವಾಗಿ ತ್ಯಾಜ್ಯ ಸಂಗ್ರಹಿಸಲಾಯಿತು.

ಸಂಗ್ರಹವಾದ ಪ್ರಾಣಿತ್ಯಾಜ್ಯವನ್ನು ಪಾಲಿಕೆಗೆ ಸೇರಿದ್ದ ಜಮೀನಿನಲ್ಲಿ ವ್ಯವಸ್ಥಿತವಾಗಿ ಹೂಳಲಾಯಿತು.  ಆಯುಧಪೂಜೆ, ರಾಮನವಮಿ ಹಾಗೂ ಯುಗಾದಿ ಹಬ್ಬದ ಸಮಯದಲ್ಲೂ ಕಸ ನಿರ್ವಹಣೆಗೆ ಇದೇ ಕ್ರಮ ಅನುಸರಿಸಲಾಯಿತು. ಪ್ಲಾಸ್ಟಿಕ್ ಬೇರ್ಪಡಿಸಿದ ನಂತರವೇ ಹಸಿಕಸವನ್ನು ಗುಂಡಿಯಲ್ಲಿ ಹೂಳಲಾಗುತ್ತಿತ್ತು.

ಶ್ರೀರಾಮನವಮಿ ಹಬ್ಬದ ವೇಳೆ ಪ್ಲಾಸ್ಟಿಕ್‌ ಲೋಟ ಬಳಸದಂತೆ ಜನರ ಮನವೊಲಿಸಲಾಗಿತ್ತು. ಪ್ಲಾಸ್ಟಿಕ್‌ ಬಳಸಿದವರು ಅದನ್ನು ರಸ್ತೆಗೆ ಎಸೆಯದಂತೆ ಎಚ್ಚರ ವಹಿಸಲಾಯಿತು. ಬಳಕೆಯಾದ ಪ್ಲಾಸ್ಟಿಕ್ ಲೋಟಗಳನ್ನು ಅಟ್ಟೂರಿನಲ್ಲಿ ‘ಸ್ವಚ್ಛ’ (ಸರ್ಕಾರೇತರ ಸಂಸ್ಥೆ) ನಡೆಸುವ ಸಂಸ್ಕರಣಾ ಘಟಕಕ್ಕೆ ನೀಡಲಾಯಿತು.

ಮುಂದಿನ ಯೋಜನೆಗಳು
ಮಾಂಸದ ಅಂಗಡಿಗಳಿಂದ ಉತ್ಪತ್ತಿಯಾಗುವ ತ್ಯಾಜ್ಯದ ವಿಲೇವಾರಿಗಾಗಿ ಹಲವು ಪ್ರಯತ್ನಗಳು ನಡೆಯುತ್ತಿವೆ. ‘ಪ್ರಾಣಿ ತ್ಯಾಜ್ಯ’ ನಿರ್ವಹಣೆಗಾಗಿ ಯಲಹಂಕದಲ್ಲಿಯೇ ಅನಿಮಲ್‌ ವೇಸ್ಟೇಜ್‌ ಪ್ಲಾಂಟ್‌ ಆರಂಭಿಸುವಂತೆ ಪಾಲಿಕೆಗೆ ಮನವಿ ಮಾಡಿದ್ದಾರೆ.

ಬೇಗ ಕೊಳೆಯದ ಕೋಳಿ ಪುಕ್ಕಗಳ ನಿರ್ವಹಣೆಗೆ ಒಂದು ಯಂತ್ರ ನೀಡುವಂತೆ ಕೋರಲಾಗಿದೆ. ಕೋಳಿ ಪುಕ್ಕಗಳನ್ನು ಪುಡಿ ಮಾಡಿ, ಅದನ್ನು ಗೊಬ್ಬರದಲ್ಲಿ ಮಿಶ್ರಣ ಮಾಡಿ ಬಳಸುವ ಆಲೋಚನೆ ತಂಡಕ್ಕೆ ಇದೆ.

ಖಾಲಿ ನಿವೇಶನ ಹಾಗೂ ಕೆರೆಗಳ ಬಳಿ ಹೊಸದಾಗಿ ಕಸದ ರಾಶಿ (ಬ್ಲಾಕ್‌ ಸ್ಪಾಟ್‌) ಹುಟ್ಟಿಕೊಳ್ಳದಂತೆ ಎಚ್ಚರ ವಹಿಸಲಾಗುತ್ತಿದೆ. ಪೇಯಿಂಗ್ ಗೆಸ್ಟ್ ರೂಂಗಳು ಹಾಗೂ ಹೋಟೆಲ್ ಇರುವ ಕಡೆ ನಿತ್ಯ ಕಸ ಸಂಗ್ರಹ ಮಾಡುವಂತೆ ನೋಡಿಕೊಳ್ಳಲಾಗುತ್ತಿದೆ.

ಜನವಸತಿ ಪ್ರದೇಶಗಳಲ್ಲಿ ಫ್ಲೈಓವರ್‌ಗಳ ಕೆಳಭಾಗದಲ್ಲಿ ಬ್ಲಾಕ್‌ಸ್ಪಾಟ್‌ ಇದ್ದಲ್ಲಿ, ಅದನ್ನು ತೆರವುಗೊಳಿಸಿ, ಅಲ್ಲಿ ಮತ್ತೆ ಕಸ ಸಂಗ್ರಹವಾಗದಂತೆ ತಡೆಯಲು ಅಗ್ಲಿ ಇಂಡಿಯನ್ಸ್‌ ಸರ್ಕಾರೇತರ ಸಂಸ್ಥೆಯ ನೆರವು ಪಡೆಯಲಾಗುತ್ತಿದೆ.

ಕಾರ್ಯನಿರ್ವಹಣೆ
ವೈಇಜಿಯಲ್ಲಿ ಸದ್ಯಕ್ಕೆ 200 ಮಂದಿ ಸದಸ್ಯರಿದ್ದಾರೆ. ಈ ಸಂಸ್ಥೆ ನಿರ್ವಹಿಸುತ್ತಿರುವ ಕೆಲಸಗಳ ವಿವರ ಇಂತಿದೆ...
* ಹಬ್ಬಗಳಲ್ಲಿ ಸಂಗ್ರಹವಾಗುವ ಕಸ ಹಾಗೂ ತ್ಯಾಜ್ಯ ವಿಲೇವಾರಿ
* ಕಸ ನಿರ್ವಹಣೆ ಕುರಿತು ಜನರಲ್ಲಿ ಅರಿವು ಮೂಡಿಸುವುದು
* ಯಲಹಂಕ ಸುತ್ತಮುತ್ತಲ ಕೆರೆಗಳ ಬಳಿ ಸ್ವಚ್ಛತಾ ಕಾರ್ಯ
* ಸುತ್ತಮುತ್ತಲ ಕೈಗಾರಿಕೆಗಳು, ದೇವಾಲಯಗಳು, ಮಾರುಕಟ್ಟೆಗಳು ಹಾಗೂ ಅಪಾರ್ಟ್‌ಮೆಂಟ್‌ಗಳಿಂದ ಸಂಗ್ರಹಿಸುವ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸಿ ರೈತರಿಗೆ ಮಾರಾಟ.

ಅಗ್ಲಿ ಇಂಡಿಯನ್ಸ್‌
ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯದಂತೆ ಹಾಗೂ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಯುವಜನರ ತಂಡ. ಇವರು ನಗರದ ಯಾವುದೇ ಭಾಗದಲ್ಲಿ ಕಸ ರಾಶಿ, ಫ್ಲೈಓವರ್‌ಗಳ ಬಳಿ ಗಲೀಜು ಕಂಡಲ್ಲಿ ಅದನ್ನು ಸ್ವಚ್ಛಗೊಳಿಸಿ ಅಲ್ಲಿ ಯಾರೂ ಕಸ ಹಾಕದಂತೆ ಮಾಡುತ್ತಾರೆ.

ಕಸದ ರಾಶಿಗಳನ್ನು ತೆರವುಗೊಳಿಸಿ ಆ ಸ್ಥಳದಲ್ಲಿ ಹೂ ಕುಂಡ ಇಡುವುದು, ಗೋಡೆ ಅಥವಾ ಫ್ಲೈಓವರ್‌ಗಳ ಮೇಲೆ ಚಿತ್ರಗಳನ್ನು ಬಿಡಿಸಿ, ಒಟ್ಟಾರೆ ಕಸ ಹಾಕಿದ್ದ  ಸ್ಥಳವನ್ನು ಸುಂದರವಾಗಿ ಕಾಣುವಂತೆ ಮಾಡುತ್ತಾರೆ. ಮರುದಿನ ಅಲ್ಲಿಗೆ ಯಾರೇ ಕಸ ತಂದು ಸುರಿಲು ನಿಂತರೂ ಅಲ್ಲಿ ಕಸ ಎಸೆಯಲು ಅವರಿಗೇ ಮನಸ್ಸು ಬಾರದ ವಾತಾವರಣ ನಿರ್ಮಾಣ ಮಾಡಿರುತ್ತಾರೆ.    ಅಷ್ಟೇ ಅಲ್ಲದೆ ತೆರೆದ ಮ್ಯಾನ್‌ಹೋಲ್‌, ಕಸದಿಂದ ತುಂಬಿರುವ ಚರಂಡಿ ಇರುವ ಪ್ರದೇಶವನ್ನೂ ಸಹ ಕಸ ಮುಕ್ತಗೊಳಿಸಿ, ಸುಂದರವಾಗಿ ಮಾಡುತ್ತಾರೆ.

ಒಣಎಲೆ–ಪ್ಲಾಸ್ಟಿಕ್‌ ನಿರ್ವಹಣಾ ಘಟಕ
ಅಟ್ಟೂರಿನಲ್ಲಿ ಬಿಬಿಎಂಪಿ ಒಣಎಲೆ ನಿರ್ವಹಣಾ ಘಟಕ ಪ್ರಾರಂಭಿಸಿದೆ. ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಗ್ರಹಿಸಿದ ಒಣಎಲೆಗಳನ್ನು ಅಲ್ಲಿ ಕತ್ತರಿಸಲಾಗುತ್ತದೆ. ನಂತರ ಅದನ್ನು ಒಂದು ಕಡೆ ಸಂಗ್ರಹಿಸಿ, ಸಗಣಿ ನೀರನ್ನು ಹಾಕಿ ಕೊಳೆಯಿಸಿ ಗೊಬ್ಬರ ಮಾಡಲಾಗುತ್ತಿದೆ. ಅದಕ್ಕಾಗಿ ಪಾಲಿಕೆ ವತಿಯಿಂದ ನಾಲ್ಕು ಮಂದಿಯನ್ನು ನೇಮಿಸಲಾಗಿದೆ.  ಈಗ ಅದರ ನಿರ್ವಹಣೆ ಜವಾಬ್ದಾರಿಯನ್ನು ಇಕೊ ಗ್ರೂಪ್‌ ವಹಿಸಿಕೊಳ್ಳಲು ಮುಂದಾಗಿದ್ದು,  ಅನುಮತಿ ನೀಡುವಂತೆ ಪಾಲಿಕೆಗೆ ಮನವಿ ಮಾಡಿದೆ.

ಅಟ್ಟೂರಿನಲ್ಲೇ ಪ್ಲಾಸ್ಟಿಕ್‌ ಸಂಸ್ಕರಣಾ ಘಟಕವೂ ಇದೆ. ಸ್ವಚ್ಛ ಸಂಸ್ಥೆ ನಡೆಸುತ್ತಿರುವ ಈ ಯೂನಿಟ್‌ಗೆ ಪಾಲಿಕೆ ಸ್ಥಳಾವಕಾಶ ಕಲ್ಪಿಸಿದೆ. ಸುತ್ತಮುತ್ತಲ ಪ್ರದೇಶಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕ್‌ ವಸ್ತುಗಳನ್ನು ಇಲ್ಲಿ ಸಂಸ್ಕರಿಸಿ, ಮರುಬಳಕೆ ಮಾಡಲಾಗುತ್ತದೆ.

ತ್ಯಾಜ್ಯ ವಿಂಗಡಣೆಯಿಂದ ಲಾಭ
ಯಲಹಂಕದ ಎಲ್ಲ ವಾರ್ಡ್‌ಗಳಲ್ಲಿಯೂ ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯವನ್ನು ವಿಂಗಡಿಸಲಾಗುತ್ತಿದೆ. ಪಾಲಿಕೆ ವತಿಯಿಂದ ಕಸ ಸಂಗ್ರಹ ಮಾಡುವವರೇ 17 ರೀತಿಯ ಒಣ ಕಸವನ್ನು ವಿಂಗಡಣೆ ಮಾಡಿ ಮಾರಿಕೊಳ್ಳುತ್ತಾರೆ. ವೇತನದ ಜೊತೆಗೆ ₹ 2 ಸಾವಿರದಷ್ಟು ಹಣ ಹೆಚ್ಚುವರಿಯಾಗಿ ಸಿಗುತ್ತದೆ. ಹೀಗಾಗಿಯೇ ಕಸದ ನಿರ್ವಹಣೆ ತುಂಬಾ ಸುಲಭವಾಗಿ ಆಗುತ್ತಿದೆ. 
–ಅಜಯ್‌, ಗ್ರೂಪ್‌ನ ಸದಸ್ಯ

ಯಲಹಂಕ ಪಾಲಿಕೆ ಕಚೇರಿ ಸಂಖ್ಯೆ: 080– 22975936   

ವೈಇಜಿ ಸದಸ್ಯ ಅಜಯ್‌: 9632974343
ವೈಇಜಿ ವಾಟ್ಸ್‌ಆ್ಯಪ್‌ ಸಂಖ್ಯೆ: 9731401881

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT