ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಕಗ್ಗಂಟಾದ ಜಿ.ಪಂ. ಅಧ್ಯಕ್ಷ ಸ್ಥಾನ

Last Updated 4 ಮೇ 2016, 11:27 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಭುಗಿಲೆದ್ದ ಅಸಮಾಧಾನ ಕಾಂಗ್ರೆಸ್‌ ಮುಖಂಡರಲ್ಲಿ ಆತಂಕವನ್ನು ಸೃಷ್ಟಿಸಿದ್ದು, ಜಿಲ್ಲಾ ಪಂಚಾಯಿತಿ ಸದಸ್ಯರ ಆಕ್ರೋಶವನ್ನು ಎದುರಿಸುವಂತಾಯಿತು.

ಕಾರ್ಯಕರ್ತರು, ಮುಖಂಡರ ಅಸಮಾಧಾನದಿಂದ ಕಂಗೆಟ್ಟ ಕಾಂಗ್ರೆಸ್‌ ನಾಯಕರು, ಪೊಲೀಸ್‌ ಬಂದೋಬಸ್ತ್‌ ನಲ್ಲಿಯೇ ಸಭೆ ನಡೆಸುವಂತಾಯಿತು. ಎಲ್ಲಿ ನೋಡಿದರೂ, ಪೊಲೀಸರ ಬಿಗಿ ಪಹರೆ ಕಂಡು ಬಂತು. ಕಾಂಗ್ರೆಸ್‌ ಕಚೇರಿ, ಪ್ರವಾಸಿ ಮಂದಿರ ಹಾಗೂ ಜಿಲ್ಲಾ ಪಂಚಾಯಿತಿ ಸಭಾಂಗಣದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆಯೇ ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭ ವಾಗಿದ್ದವು. ಅಧ್ಯಕ್ಷ ಸ್ಥಾನಕ್ಕೆ ಬಸನಗೌಡ ಪಾಟೀಲ ಯಡಿಯಾಪುರ, ರಾಜಶೇಖರ ಪಾಟೀಲ ವಜ್ಜಲ್‌, ಅಶೋಕರಡ್ಡಿ ಗೋನಾಲ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ, ಕೊನೆಗಳಿಗೆಯಲ್ಲಿ ಕೊಂಕಲ್‌ ಕ್ಷೇತ್ರದ ಬಸರಡ್ಡಿ ಅನಪೂರ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದು, ಆಕಾಂಕ್ಷಿಗಳ ಬೆಂಬಲಿಗರಲ್ಲಿ ಅಸಮಾಧಾನವನ್ನು ಉಂಟು ಮಾಡಿತು.

ಸೋಮವಾರ ಸಂಜೆಯವರೆಗೂ ಮೂವರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಕುರಿತು ಸರಣಿ ಸಭೆಗಳು ನಡೆದವು. ಆದರೆ ಮಂಗಳವಾರ ಬೆಳಿಗ್ಗೆ ಇಲ್ಲಿಯ ಕಾಂಗ್ರೆಸ್‌ ಕಚೇರಿಯಲ್ಲಿ ಸಭೆ ಆರಂಭವಾಗುತ್ತಿದ್ದಂತೆಯೇ ಚಿತ್ರಣವೇ ಬದಲಾಯಿತು. ಪ್ರಬಲ ಆಕಾಂಕ್ಷಿಗಳ ಪಟ್ಟಿಯಲ್ಲಿ ಹೆಸರಿಲ್ಲದೇ ಇದ್ದ ಬಸರಡ್ಡಿ ಅನಪೂರ ಅವರನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು, ಕಾಂಗ್ರೆಸ್‌ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು.

‘ಸೋಮವಾರ ಸಂಜೆಯವರೆಗೂ ಎಲ್ಲವೂ ಸರಿಯಾಗಿಯೇ ಇತ್ತು. ಮಂಗಳವಾರ ಬೆಳಿಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು, ಬಸರಡ್ಡಿ ಅನಪೂರ ಅವರ ಹೆಸರನ್ನು ಸೂಚಿಸಿದ್ದರಿಂದ ಅವರನ್ನೇ ಆಯ್ಕೆ ಮಾಡಲಾಯಿತು’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದರು.

ಪೊಲೀಸ್‌ ಬಂದೋಬಸ್ತ್‌: ಜಿಲ್ಲಾ ಕಾಂಗ್ರೆಸ್‌ ಕಚೇರಿಯ ಎದುರು ಕಾಂಗ್ರೆಸ್‌ ಕಾರ್ಯಕರ್ತರು, ಸಚಿವರು ಹಾಗೂ ಶಾಸಕರ ಕಾರಿಗೆ ಕಲ್ಲು, ಕುರ್ಚಿಗಳನ್ನು ತೂರಿ ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇದನ್ನು ಅರಿತ ಕಾಂಗ್ರೆಸ್‌ ಮುಖಂಡರು, ಪೊಲೀಸ್‌ ಬಂದೋಬಸ್ತ್‌ಗೆ ಮನವಿ ಮಾಡಿದರು. ಸಭೆ ಮುಗಿಸಿ, ಸಚಿವರು, ಶಾಸಕರು ಪೊಲೀಸರ ಪಹರೆಯಲ್ಲಿ ಕಾರುಗಳನ್ನು ಏರಿದರು.

ಇನ್ನೊಂದೆಡೆ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಊಟಕ್ಕೆ ತೆರಳಿದ ಜಿಲ್ಲಾ ಪಂಚಾಯಿತಿ ಸದಸ್ಯರಿಗೂ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯರು ಪ್ರವಾಸಿ ಮಂದಿರದಿಂದ ಜಿಲ್ಲಾ ಪಂಚಾಯಿತಿ ಸಭಾಂಗಣಕ್ಕೆ ತೆರಳುವ ಸಂದರ್ಭದಲ್ಲಿಯೂ ಮುಂದೊಂದು ಪೊಲೀಸ್‌ ಜೀಪು ಹಾಗೂ ಹಿಂದೆ ಡಿಆರ್‌ ವ್ಯಾನ್‌ನ ಭದ್ರತೆಯನ್ನು ಒದಗಿಸಲಾಗಿತ್ತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆಯ ನಂತರವೂ ಜನಜಂಗುಳಿ ಹೆಚ್ಚಾಗಿದ್ದರಿಂದ, ಸಂಜೆ ನಾಲ್ಕು ಗಂಟೆಯವರೆಗೂ ಪೊಲೀಸರು ಹರಸಾಹಸ ಮಾಡಬೇಕಾಯಿತು.

ಜೆಡಿಎಸ್‌ ಬೆಂಬಲ: ಇದೆಲ್ಲದರ ಮಧ್ಯೆ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಸಮ್ಮತಿಸಿದ ಜೆಡಿಎಸ್‌, ಕಾಂಗ್ರೆಸ್‌ಗೆ ಬೇಷರತ್‌ ಬೆಂಬಲ ಸೂಚಿಸಿತು.
ಇದರ ಫಲವಾಗಿ ಅತಂತ್ರ ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಸುಲಭವಾಗಿ ಆಯ್ಕೆಯಾಗುವುದು ಸಾಧ್ಯವಾಯಿತು.

24 ಸದಸ್ಯ ಬಲದ ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್‌ 12, ಬಿಜೆಪಿ 11 ಹಾಗೂ ಜೆಡಿಎಸ್‌ ಒಂದು ಸ್ಥಾನ ಗಳಿಸಿವೆ. ಅಧಿಕಾರ ಪಡೆಯಲು ಕಾಂಗ್ರೆಸ್‌ಗೆ ಜೆಡಿಎಸ್‌ನ ಬೆಂಬಲ ಅವಶ್ಯಕವಾಗಿತ್ತು.

ಜೆಡಿಎಸ್‌ ಬೆಂಬಲ ಪಡೆಯುವಲ್ಲಿ ಯಶಸ್ವಿಯಾದ ಕಾಂಗ್ರೆಸ್‌ ಪಕ್ಷದ ಮುಖಂಡರು, ತಮ್ಮದೇ ಪಕ್ಷದ ಕಾರ್ಯಕರ್ತರ ಅಸಮಾಧಾನ ಎದುರಿಸುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT