ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ನೆಲೆ ಕಾಣುವ ತವಕ

ಕರಕುಶಲ ನಿಗಮದ ಅಧ್ಯಕ್ಷೆ ವೀಣಾಗೆ ಪರಿಷತ್‌ ಚುನಾವಣೆ ಟಿಕೆಟ್‌
Last Updated 30 ಮೇ 2016, 6:21 IST
ಅಕ್ಷರ ಗಾತ್ರ

ಮಡಿಕೇರಿ:  ವಿಧಾನಸಭೆ, ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕೊಡಗು ಜಿಲ್ಲೆಯಲ್ಲಿ ನೆಲಕಚ್ಚಿದ್ದ ಕಾಂಗ್ರೆಸ್‌ಗೆ ಇದೀಗ ಹೊಸತಂತ್ರಕ್ಕೆ ಮುಂದಾಗಿದೆ.

ಅಚ್ಚರಿಯ ಬೆಳವಣಿಗೆಯಲ್ಲಿ ಜಿಲ್ಲೆಯ ಕಾಂಗ್ರೆಸ್‌ ಹಿರಿಯ ನಾಯಕಿ, ಕರಕುಶಲ ನಿಗಮದ ಅಧ್ಯಕ್ಷೆ ವೀಣಾ ಅಚ್ಚಯ್ಯ ಅವರಿಗೆ ವಿಧಾನ ಪರಿಷತ್‌ ಚುನಾವಣೆಗೆ ಟಿಕೆಟ್‌ ನೀಡಿದೆ. ಆ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಬಲ ತುಂಬುವ ಕೆಲಸಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಹಾಗೂ ಕಾಂಗ್ರೆಸ್‌ ಹೈಕಮಾಂಡ್‌ ಮುಂದಾಗಿರುವುದು ಕಾರ್ಯಕರ್ತರಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಗಿದೆ.

ಮೈಸೂರು– ಮಡಿಕೇರಿ ಕ್ಷೇತ್ರದ ಸಂಸದ ಪ್ರತಾಪ್‌ ಸಿಂಹ, ಎರಡೂ ಕ್ಷೇತ್ರಗಳ ಶಾಸಕರಾದ ಅಪ್ಪಚ್ಚು ರಂಜನ್‌, ಕೆ.ಜಿ. ಬೋಪಯ್ಯ, ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಹಣಿ ಬಿಜೆಪಿಯಿಂದ ಆಯ್ಕೆಯಾದವರು. ಜೊತೆಗೆ, ಜಿಲ್ಲಾ ಪಂಚಾಯಿತಿ ಆಡಳಿತ ಬಿಜೆಪಿ ಕೈಯಲ್ಲಿದೆ; 10 ಮಂದಿ ಮಾತ್ರ ಕಾಂಗ್ರೆಸ್‌ ಸದಸ್ಯರಿದ್ದಾರೆ! ನಗರಸಭೆ ಮಾತ್ರ ಕಾಂಗ್ರೆಸ್‌ ಆಡಳಿತದ ತೆಕ್ಕೆಯಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದರೂ ಜಿಲ್ಲೆಯಲ್ಲಿ ಯಾರೂ ಆಯ್ಕೆಯಾಗದ ಕಾರಣ ಜಿಲ್ಲೆಯ ನಾಯಕರಿಗೆ ಹಿನ್ನಡೆ ಉಂಟಾಗಿತ್ತು. ಅಧಿಕಾರವಿದ್ದರೂ ಅನುಭವಿಸಲಾಗದ ಸ್ಥಿತಿಯಿದೆ.

ಇದೀಗ ಕರಕುಶಲ ನಿಗಮದ ಅಧ್ಯಕ್ಷೆ ವೀಣಾ ಅಚ್ಚಯ್ಯ ಅವರನ್ನು ವಿಧಾನ ಪರಿಷತ್‌ಗೆ ಕಳುಹಿಸಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಬೇರನ್ನು ಗಟ್ಟಿಗೊಳಿಸುವ ಪ್ರಯತ್ನಕ್ಕೆ ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಾಂಗ್ರೆಸ್‌ ಶಾಸಕರ ಸಂಖ್ಯೆ ಹೆಚ್ಚಿರುವ ಕಾರಣ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ವೀಣಾ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಕೊಡಗು ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವರು ಬೆಂಗಳೂರಿನವರು. ಒಂದೊಮ್ಮೆ ವೀಣಾ ಆಯ್ಕೆಯಾದ ಬಳಿಕ ಸಂಪುಟ ವಿಸ್ತರಣೆಯಾದರೆ ಮಹಿಳಾ ಕೋಟಾದಲ್ಲಿ ಕೊಡಗು ಜಿಲ್ಲೆಗೆ ಪ್ರಾತಿನಿಧ್ಯ ನೀಡುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.
ಗೆದ್ದು ಪರಿಷತ್‌ ಸದಸ್ಯೆಯಾಗಿ ಮುಂದುವರಿದರೂ ಜಿಲ್ಲೆಯ ಕಾರ್ಯಕರ್ತರಿಗೆ ಹಾಗೂ ಜಿಲ್ಲೆಗೆ ಲಾಭವೇ. ವೀಣಾಗೆ ಟಿಕೆಟ್‌ ನೀಡಿರುವುದು ಜಿಲ್ಲಾ ಕಾಂಗ್ರೆಸ್‌ ವಲಯದಲ್ಲಿ ಹರ್ಷಕ್ಕೆ ಕಾರಣವಾಗಿದೆ.

ವೀಣಾ ಅಚ್ಚಯ್ಯ ಹಾದಿ: 1987ರಲ್ಲಿ ಮಕ್ಕಂದೂರು ಕ್ಷೇತ್ರದಿಂದ ವೀಣಾ ಅವರು ಮೊದಲ ಬಾರಿಗೆ ಜಿಲ್ಲಾ ಪರಿಷತ್‌ಗೆ ಆಯ್ಕೆಯಾಗಿದ್ದರು. ಬಳಿಕ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ, 2000ರಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಚೆಯ್ಯಂಡಾಣೆ ಕ್ಷೇತ್ರದಿಂದ (ಮಹಿಳಾ ಮೀಸಲು) ಗೆದ್ದು ಬಂದಿದ್ದರು. ಅದೇ ಅವಧಿಯಲ್ಲಿ ಇವರಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಗುವ ಅವಕಾಶವೂ ಲಭಿಸಿತು. 2004ರಿಂದ 2011ರ ವರೆಗೆ ಎರಡು ಅವಧಿಗೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿ ದುಡಿದ ಅನುಭವವೂ ವೀಣಾ ಅವರಿಗಿದೆ. ಬಳಿಕ 2008ರಲ್ಲಿ ವಿರಾಜಪೇಟೆ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಪ್ರಸ್ತುತ ಕೆಪಿಸಿಸಿ ಕಾರ್ಯದರ್ಶಿಯೂ ಹೌದು.

‘ಪಕ್ಷಕ್ಕೆ ಬಲ ಬಂದಿದೆ
ಮಡಿಕೇರಿ
: ‘ಕೊಡಗು ಜಿಲ್ಲೆ ಕಾಂಗ್ರೆಸ್‌ ಜನಪ್ರತಿನಿಧಿಗಳಿಲ್ಲದ ಖಾಲಿ ಖಜಾನೆ ಆಗಿತ್ತು. ಎಲ್ಲಾ ಚುನಾವಣೆಗಳು ಕಾಂಗ್ರೆಸ್‌ಗೆ ಸೋಲಾಗಿತ್ತು. ನಮ್ಮದೇ ಸರ್ಕಾರವಿರುವ ಕಾರಣಕ್ಕೆ ಜಿಲ್ಲೆಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪಕ್ಷದ ಪ್ರತಿನಿಧಿಯ ಅಗತ್ಯವಿತ್ತು. ಪಕ್ಷ ವಿಧಾನ ಪರಿಷತ್‌ ಚುನಾವಣೆಗೆ ಟಿಕೆಟ್‌ ನೀಡುವ ಮೂಲಕ ಅವಕಾಶ ಮಾಡಿಕೊಟ್ಟಿದೆ; ಜಿಲ್ಲಾ ಘಟಕಕ್ಕೂ ಬಲ ಬಂದಿದೆ. ಪಕ್ಷ ಸಂಘಟನೆಗೂ ಸಹಾಯವಾಗಲಿದೆ. ವೀಣಾ ಅಚ್ಚಯ್ಯ ಅವರಿಗೂ ಸಾಕಷ್ಟು ಅನುಭವಿದೆ’ ಎನ್ನುತ್ತಾರೆ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಪಿ. ರಮೇಶ್‌.

ಕೆಪಿಸಿಸಿ ಅಧ್ಯಕ್ಷರು, ಎಐಸಿಸಿಯ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರ ಆಶೀರ್ವಾದಿಂದ ಟಿಕೆಟ್‌ ಲಭಿಸಿದೆ. ಕೊಡಗಿನ ಕಾರ್ಯಕರ್ತರನ್ನ ಪಕ್ಷ ಗುರುತಿಸಿದೆ.  ಜಿಲ್ಲೆಯಲ್ಲಿ ಪಕ್ಷ ಬಲಪಡಿಸುವುದೇ ನನ್ನ ಉದ್ದೇಶ
–ವೀಣಾ ಅಚ್ಚಯ್ಯ, ವಿಧಾನ ಪರಿಷತ್‌ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT