ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಹೀನಾಯ ಸಿķತಿ: ದೇವೇಗೌಡ ಲೇವಡಿ

Last Updated 7 ಫೆಬ್ರುವರಿ 2016, 19:56 IST
ಅಕ್ಷರ ಗಾತ್ರ

ಬೆಂಗಳೂರು:  ‘ಪ್ರಾದೇಶಿಕ ಪಕ್ಷಗಳನ್ನು ಮಟ್ಟ ಹಾಕಲು ಹೊರಟಿದ್ದರಿಂದಲೇ ಕಾಂಗ್ರೆಸ್‌ ಪಕ್ಷವು ದೇಶದಲ್ಲಿ ಹೀನಾಯ ಪರಿಸ್ಥಿತಿ ತಲುಪಿದೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅಭಿಪ್ರಾಯಪಟ್ಟರು.

ಹೆಬ್ಬಾಳ ಉಪಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಪರ ಆರ್‌.ಟಿ. ನಗರದಲ್ಲಿ ಭಾನುವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಪಂಚಾಯತ್‌ರಾಜ್‌ ಚುನಾವಣೆಯಲ್ಲಿ  ಕಾಂಗ್ರೆಸ್‌ಗೆ ತೀವ್ರ ಹಿನ್ನಡೆ ಆಗಿದೆ.

ರಾಹುಲ್‌ ಗಾಂಧಿ  ಪ್ರತಿನಿಧಿಸುವ ಕ್ಷೇತ್ರದಲ್ಲಿ ಕೇವಲ ಎರಡು ಸ್ಥಾನಗಳಲ್ಲಿ ಮಾತ್ರ ಗೆದ್ದಿದೆ. ಸೋನಿಯಾ ಗಾಂಧಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದಲ್ಲಿ ಒಂದು ಪಾಲಿಕೆಯನ್ನೂ ಕಾಂಗ್ರೆಸ್‌ ಗೆದ್ದಿಲ್ಲ. ತಮಿಳುನಾಡಿನಲ್ಲಿ ಕಾಮರಾಜ್‌ ಕಾಲದಲ್ಲೇ ಕಾಂಗ್ರೆಸ್‌ ಆಟ ಕೊನೆಯಾಗಿದೆ’ ಎಂದರು. 

ಸೋನಿಯಾ ಏಕೆ ಪ್ರಧಾನಿ ಆಗಿಲ್ಲ ಎಂಬುದೂ ಗೊತ್ತು. ಸಂದರ್ಭ ಬಂದಾಗ ಅದನ್ನೂ ಹೇಳುತ್ತೇನೆ ಎಂದರು. ‘ಪಕ್ಷವನ್ನು ಉಳಿಸುವ ಹಂಬಲ ನನಗೆ. ಈ ಪಕ್ಷ ಏಕೆ ಉಳಿಯಬೇಕು ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು.

ರಾಷ್ಟ್ರೀಯ ಪಕ್ಷಗಳನ್ನು ಓಲೈಸಿದ್ದರಿಂದಲೇ ಮಹಾದಾಯಿ ವಿಚಾರದಲ್ಲಿ ಹಿನ್ನಡೆ ಆಗಿದೆ. ರಾಜ್ಯದಲ್ಲಿ ಸಾವಿರಾರು ರೈತರು ಸತ್ತಿದ್ದಾರೆ. ಯಾರಾದರೂ ಕೇಳುವವರಿದ್ದಾರೆಯೇ’ ಎಂದರು.

‘ಇವತ್ತು ಎಲ್ಲ ಅಹಿಂದ ಎನ್ನುತ್ತಿದ್ದಾರೆ. ನಾನು ಯಾವ ಸಮಾಜಕ್ಕೆ ದ್ರೋಹ ಮಾಡಿದ್ದೇನೆ. ಕುಮಾರಸ್ವಾಮಿ ಯಾರಿಗೆ ದ್ರೋಹ ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.

‘1999ರ ಚುನಾವಣೆಯಲ್ಲಿ  ನಾನು ಹಾಗೂ ಜೆಡಿಎಸ್‌  ರಾಜ್ಯ ಘಟಕದ ಅಧ್ಯಕ್ಷರಾಗಿದ್ದ  ಸಿದ್ದರಾಮಯ್ಯ ಇಬ್ಬರೂ ಸೋತೆವು.  ಸಿದ್ದರಾಮಯ್ಯ ಬೇಸರ ಮಾಡಿಕೊಂಡು ರಾಜಕೀಯ ಬೇಡ  ವಕೀಲಿಕೆ ಮಾಡುತ್ತೀನಿ  ಎಂದರು. 10 ದಿನ ಅವರ ಮನವೊಲಿಕೆ ಮಾಡಿದೆವು. ಮುಖ್ಯಮಂತ್ರಿ ಮಾಡಿಲ್ಲ ಎಂಬ ಕಾರಣಕ್ಕೆ ನನ್ನ ಮೇಲೆ ಅವರಿಗೆ ಕೋಪ ಇರಬಹುದು’ ಎಂದರು.

ಜಮೀರ್‌ ವಿರುದ್ಧ ಆಕ್ರೋಶ: ಚುನಾವಣಾ ಪ್ರಚಾರದಿಂದ ದೂರ ಉಳಿದ ಶಾಸಕ ಜಮೀರ್‌ ಅಹಮದ್‌ ಖಾನ್‌ ಬಗ್ಗೆಯೂ ಕಿಡಿಕಾರಿದ ಅವರು, ‘ಒಮ್ಮೆ ದೇವೇಗೌಡರನ್ನು  ದೇವರು ಎನ್ನುತ್ತಾರೆ. ನಂತರ ಒದೀತಾರೆ.  ರಾಜಕೀಯದಲ್ಲಿ ಏನು ಬೇಕಾದರೂ ಹೇಳಬಹುದು ಎಂದು ಭಾವಿಸಿದ್ದಾರೆ.  ಮನುಷ್ಯನಿಗೆ ನಿಯತ್ತು ಇರಬೇಕು. ಇವರೇನು ಮನುಷ್ಯರಾ’ ಎಂದು ಪ್ರತಿಕ್ರಿಯಿಸಿದರು.

‘ಎಸ್‌.ಎಂ.ಕೃಷ್ಣ ಸಹಿತ ಮೂಲ ಕಾಂಗ್ರೆಸಿಗರೆಲ್ಲ ಮೂಲೆಗುಂಪಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಪಕ್ಷಕ್ಕೆ ಕರೆತಂದಿದ್ದು ಎಸ್‌.ಎಂ.ಕೃಷ್ಣ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ನನಗೂ ಕೃಷ್ಣಾ ಅವರಷ್ಟೇ ವಯಸ್ಸಾಗಿದೆ. ಆದರೂ ನಾನೊಂದು ತರಹ ಹಠವಾದಿ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ರಾಜ್ಯದಾದ್ಯಂತ ಪ್ರಚಾರ ನಡೆಸುತ್ತೇನೆ’ ಎಂದರು.

‘ಮುಸ್ಲಿಮರ ಮತ ಒಡೆಯಲು ಜೆಡಿಎಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎಂದು ಆರೋಪ ಮಾಡುತ್ತಿದ್ದಾರೆ.  ನಾವು ಇಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿ
ಯನ್ನು  ಕಣಕ್ಕಿಳಿಸಲು ನಿರ್ಧರಿಸಿದ ಬಳಿಕವೇ ಕಾಂಗ್ರೆಸ್‌ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ನೀಡಿತು. ಉಪಚುನಾವಣೆ ನಡೆಯುವ ಮೂರು  ಕ್ಷೇತ್ರಗಳ ಪೈಕಿ ಪರಿಶಿಷ್ಟ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ವರ್ಗದವರನ್ನು ಕಣಕ್ಕಿಳಿಸುವುದಾಗಿ ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌ ಅವರೇ ಹೇಳಿದ್ದರು’ ಎಂದರು.

‘ನಾಯಕರನ್ನು ನಂಬಿ ಪ್ರಚಾರ ಆರಂಭಿಸಿದ್ದ ಬೈರತಿ ಸುರೇಶ್ ಅವರಿಗೆ ಅವಮಾನ ಆಗಿಲ್ಲವೇ?’ ಎಂದು ಪ್ರಶ್ನಿಸಿದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ‘ ಕಾಂಗ್ರೆಸ್‌ಗೆ ನೀಡುವ ಮತದಿಂದ ಬಿಜೆಪಿಗೆ ಲಾಭವಾಗುತ್ತದೆ. ಹೆಬ್ಬಾಳದಲ್ಲಿ  ಬಿಬಿಎಂಪಿ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ 24 ಸಾವಿರ ಮತಗಳು ಬಿದ್ದಿವೆ. ಮುಸ್ಲಿಮರು ಒಗ್ಗಟ್ಟಾಗಿ  ನಮಗೆ 15 ಸಾವಿರದಷ್ಟು ಮತಗಳನ್ನು ನೀಡಿದರೆ ನಮ್ಮ ಅಭ್ಯರ್ಥಿ ಗೆಲ್ಲುವುದು ಖಚಿತ’ ಎಂದರು.

‘ಲೋಕಾಯುಕ್ತರನ್ನು ನೇಮಿಸಲು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಯೂನಿಟ್‌ಗೆ ₹ 4.35 ದರದಲ್ಲಿ  ಸೌರ ವಿದ್ಯುತ್‌ ಲಭ್ಯವಿದ್ದರೂ ಸರ್ಕಾರ ₹ 9.18 ತೆತ್ತು ಸೌರವಿದ್ಯುತ್‌ ಖರೀದಿಸುತ್ತಿದೆ. ಯೂನಿಟ್‌ಗೆ ₹ 4.8 5ರಂತೆ 350 ಮೆಗಾವಾಟ್‌ ಜಲವಿದ್ಯುತ್‌ ಪೂರೈಸಲು ಕಂಪೆನಿಯೊಂದು ಸಿದ್ಧವಿದ್ದರೂ ಸರ್ಕಾರ ಖರೀದಿಸಲು ಸಿದ್ಧ ಇಲ್ಲ.

ಇನ್ನೊಂದೆಡೆ ಸರ್ಕಾರ ಜನರ ತೆರಿಗೆ ಹಣದಿಂದ ₹ 44 ಕೋಟಿ ಖರ್ಚು ಮಾಡಿ ಹೂಡಿಕೆದಾರರ ಸಮಾವೇಶ ನಡೆಸುತ್ತದೆ’ ಎಂದು ಟೀಕಿಸಿದರು. 
‘ಮೇಣದ ಬತ್ತಿ ಹಿಡಿದು ಪ್ರತಿಭಟನೆ ಮಾಡಿದರೆ ಭ್ರಷ್ಟಾಚಾರ  ನಿಲ್ಲುವುದಿಲ್ಲ.

ಭ್ರಷ್ಟಾಚಾರದ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿ ಸಾಕಾಗಿದೆ. ಬಿಬಿಎಂಪಿ ಚುನಾವಣೆಯಲ್ಲಿ ನಮಗೆ ಕೇವಲ 14 ಸ್ಥಾನ ಮಾತ್ರ ಸಿಕ್ಕಿದೆ. ಕಸ ಗುಡಿಸಲೂ  ಯೋಗ್ಯತೆ ಇಲ್ಲದವರನ್ನು ಜನ ಬೆಂಬಲಿಸಿದರು.  ಜನರು ಅನ್ಯಾಯ, ಅಧರ್ಮವನ್ನು ಬೆಂಬಲಿಸುವುದಾದರೆ ನಾನು ಯಾವ ಪುರುಷಾರ್ಥಕ್ಕೆ ಹೋರಾಟ ನಡೆಸಲಿ’ ಎಂದರು.

ಅಭ್ಯರ್ಥಿ ಇಸ್ಮಾಯಿಲ್‌ ಷರೀಫ್‌ ನಾನಾ, ಶಾಸಕರಾದ ಗೋಪಾಲಯ್ಯ, ಅಖಂಡ ಶ್ರೀನಿವಾಸಮೂರ್ತಿ, ಉಪಮೇಯರ್‌ ಹೇಮಲತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT