ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನ ಇಪ್ಪತ್ತೈದು ಸಂಸದರ ಅಮಾನತು

ಸ್ಪೀಕರ್‌ ಕಠಿಣ ಕ್ರಮ, 9 ವಿರೋಧ ಪಕ್ಷಗಳಿಂದ ಸದನ ಬಹಿಷ್ಕಾರ
Last Updated 3 ಆಗಸ್ಟ್ 2015, 19:47 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ಸಿಂಗ್‌ ಚೌಹಾಣ್‌ ರಾಜೀನಾಮೆಗೆ ಆಗ್ರಹಿಸಿ ಲೋಕಸಭೆ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದ 25 ಕಾಂಗ್ರೆಸ್‌ ಸದಸ್ಯರನ್ನು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಸೋಮವಾರ 5 ದಿನಗಳ ಅವಧಿಗೆ ಅಮಾನತು ಮಾಡುವುದರೊಂದಿಗೆ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ.

ಒಟ್ಟು 44 ಕಾಂಗ್ರೆಸ್‌ ಸದಸ್ಯರಲ್ಲಿ 25 ಮಂದಿಯನ್ನು ಸ್ಪೀಕರ್‌ ಅಮಾನತುಗೊಳಿಸಿದರು. ಈ ಕ್ರಮ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಕಾರಣವಾಗಿದ್ದು, ಈ ಐದೂ ದಿನ ಕಲಾಪ ಬಹಿಷ್ಕರಿಸಲು 9 ವಿರೋಧ ಪಕ್ಷಗಳು ತೀರ್ಮಾನಿಸಿವೆ.

ಸಂಸತ್ತಿನ ಮುಂಗಾರು ಅಧಿವೇಶನ ಆರಂಭದಿಂದಲೂ ಆರೋಪಿ ಸಚಿವರು, ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್‌ ಪ್ರತಿಭಟನೆ ನಡೆಸುತ್ತಿದೆ. ಪ್ರತಿದಿನ ಪ್ರತಿಭಟನಾಕಾರರು ಲೋಕಸಭೆಯಲ್ಲಿ ಸ್ಪೀಕರ್‌ ಪೀಠದ ಮುಂದಿನ ಆವರಣಕ್ಕೆ ಧಾವಿಸಿ, ಘೋಷಣೆ ಕೂಗಿ ಕಲಾಪಕ್ಕೆ ಅಡ್ಡಿ ಉಂಟುಮಾಡುತ್ತಿದ್ದರಿಂದ ಸ್ಪೀಕರ್‌ ತಮಗಿರುವ ಅಧಿಕಾರ ಬಳಸಿ ಕಠಿಣ ಕ್ರಮ ಕೈಗೊಂಡರು.

ಲೋಕಸಭೆ ಹಾಗೂ ರಾಜ್ಯಸಭೆ ಟಿ.ವಿ ಪ್ರತಿದಿನ ಉಭಯ ಸದನಗಳ ಕಲಾಪವನ್ನು ನೇರ ಪ್ರಸಾರ ಮಾಡುತ್ತವೆ. ಲೋಕಸಭೆಯಲ್ಲಿ ಈ ಉದ್ದೇಶಕ್ಕಾಗಿ ಒಂಬತ್ತು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪ್ರತಿಭಟನಾನಿರತ ಸದಸ್ಯರು ಫಲಕಗಳನ್ನು ಸಚಿವರು, ಸಂಸದರಿಗೆ ಅಡ್ಡವಾಗಿ ಹಿಡಿಯುತ್ತಿದ್ದರು.

ಫಲಕಗಳನ್ನು ಪ್ರದರ್ಶಿಸಿದಂತೆ ಸ್ಪೀಕರ್‌ ಪದೇ ಪದೇ ಕಾಂಗ್ರೆಸ್‌ ಸದಸ್ಯರಿಗೆ ಸೂಚಿಸುತ್ತಿದ್ದರು. ಈ ಸೂಚನೆ ಧಿಕ್ಕರಿಸಿ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದರಿಂದ ಕಾಂಗ್ರೆಸ್‌ ಸದಸ್ಯರನ್ನು ಸದನದ ನಿಯಮ 374 (ಎ) ಅನ್ವಯ ಸುಮಿತ್ರಾ ಮಹಾಜನ್‌ ಅಮಾನತುಗೊಳಿಸಿದರು.

ಕಾಂಗ್ರೆಸ್‌ ಸದಸ್ಯರ ಅಮಾನತು ಕುರಿತು ಸ್ಪೀಕರ್‌ ರೂಲಿಂಗ್‌ ಕೊಡುವ ಮೊದಲು ಆಡಳಿತ ಪಕ್ಷದೊಳಗೆ ಬಿರುಸಿನ ಚಟುವಟಿಕೆಗಳು ನಡೆದವು. ಅನೇಕ ಬಿಜೆಪಿ ಸದಸ್ಯರು ಸ್ಪೀಕರ್‌ ಕೊಠಡಿಗೆ ಹೋಗಿ ಬರುತ್ತಿದ್ದುದು ಕಂಡುಬಂತು.

ಬೆಳಿಗ್ಗೆ 11ಕ್ಕೆ ಆರಂಭವಾದ ಲೋಕಸಭೆ ಕಾಂಗ್ರೆಸ್‌ ಸದಸ್ಯರ ಗದ್ದಲದ ನಡುವೆಯೇ ಪ್ರಶ್ನೋತ್ತರ ಕಾರ್ಯಕ್ರಮ ಮುಗಿಸಿತು. ಅನಂತರ ಕಲಾಪವನ್ನು ಮಧ್ಯಾಹ್ನ 2ಕ್ಕೆ ಮುಂದೂಡಲಾಯಿತು. ಸದನ ಮತ್ತೆ ಸೇರಿದಾಗ ಉಪ ಸ್ಪೀಕರ್‌ ತಂಬಿದುರೈ ಅಧ್ಯಕ್ಷರ ಪೀಠದಲ್ಲಿದ್ದರು.
ಬಿಜೆಪಿ ಸದಸ್ಯ ಬಿ.ಎಸ್‌. ಯಡಿಯೂರಪ್ಪನವರು ಗಮನ ಸೆಳೆಯುವ ಸೂಚನೆ ಮಂಡಿಸಿ, ರೈತರ ಆತ್ಮಹತ್ಯೆ ಪ್ರಕರಣಗಳನ್ನು ಪ್ರಸ್ತಾಪಿಸುತ್ತಿದ್ದರು. ಆಗಲೂ ಕಾಂಗ್ರೆಸ್‌ ಸದಸ್ಯರು ತಮ್ಮ ಪ್ರತಿಭಟನೆ ಮುಂದುವರಿಸಿದರು.

‘ಮೋದಿ ಅವರೇ ಮೌನ ಬಿಡಿ; ಆರೋಪಿ ಸಚಿವರ ಮೇಲೆ ಕ್ರಮ ಕೈಗೊಳ್ಳಿ’, ‘ಕಿರಿಯ ಮೋದಿ ಹಿರಿಯ ಮೋದಿಗಿಂತ ಪ್ರಭಾವಿ’ ಎನ್ನುವ  ಘೋಷಣೆಗಳನ್ನು ಕೂಗಿ ಸರ್ಕಾರಕ್ಕೆ ಇರುಸುಮುರುಸು ಉಂಟುಮಾಡಿದರು.

ಸ್ವಲ್ಪ ಹೊತ್ತಿನಲ್ಲೇ ಸದನಕ್ಕೆ ಬಂದ ಸ್ಪೀಕರ್‌ ಮಹಾಜನ್‌, ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್‌ ಸದಸ್ಯರನ್ನು ಹೆಸರಿಸಿದರು. ಸದನದೊಳಗೆ ಶಿಸ್ತು ಕಾಪಾಡುವ ಉದ್ದೇಶದಿಂದ ಸದಸ್ಯರನ್ನು ಹೆಸರಿಸಿರುವುದಾಗಿ ಸ್ಪೀಕರ್‌ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಕಲಾಪಕ್ಕೆ ಅಡ್ಡಿಪಡಿಸುವ ಸದಸ್ಯರನ್ನು ಸ್ಪೀಕರ್‌ ಹೆಸರಿಸಿದರೆ ನಿಯಮ 374(ಎ) ಅನ್ವಯ, ಐದು ದಿನಗಳ ಅವಧಿಗೆ ಅಥವಾ ಅಧಿವೇಶನದ ಉಳಿದ ಕಲಾಪಕ್ಕೆ ಇವೆರಡರಲ್ಲಿ ಯಾವುದು ಕಡಿಮೆಯೋ ಆ ಅವಧಿಗೆ ಸದಸ್ಯರು ಅಮಾನತು ಆಗುತ್ತಾರೆ. ತಮ್ಮ ಪಕ್ಷದ ಸದಸ್ಯರ ಅಮಾನತಿನ ಬಳಿಕ ಕಾಂಗ್ರೆಸ್‌ ಧರಣಿ ನಡೆಸಿದ್ದರಿಂದ ಸದನವನ್ನು ಮುಂದೂಡಲಾಯಿತು. ಸುಮಿತ್ರಾ ಮಹಾಜನ್‌ ಅವರ ರೂಲಿಂಗ್ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಅವರನ್ನು ಸಿಟ್ಟಿಗೆಬ್ಬಿಸಿತ್ತು. ಕಾಂಗ್ರೆಸ್‌ ಸದಸ್ಯರ ಅಮಾನತು ತೀರ್ಮಾನವು ಭಾರತದ ಪ್ರಜಾಪ್ರಭುತ್ವದಲ್ಲಿ ಕರಾಳ ದಿನ ಸೋನಿಯಾ ಅವರು ಟೀಕಿಸಿದರು.

ಆರೋಪಿ ಸಚಿವರು ರಾಜೀನಾಮೆ ಕೊಟ್ಟರೆ ಕಲಾಪ ಸುಗಮವಾಗಿ ನಡೆಯುತ್ತದೆಂದು ಖರ್ಗೆ ಸ್ಪಷ್ಟಪಡಿಸಿದರು.  ಬಿಜೆಪಿಯ ಸಚಿವರು, ಮುಖ್ಯಮಂತ್ರಿಗಳ ಮೇಲಿನ ಆರೋಪದಲ್ಲಿ ಸತ್ಯಾಂಶ ಇಲ್ಲದಿರುವುದರಿಂದ ರಾಜೀನಾಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಸಚಿವ ರಾಜನಾಥ್‌ ಸಿಂಗ್‌ ಸ್ಪಷ್ಟಪಡಿಸಿದರು.

ಮೋದಿ ಸರ್ಕಾರ ಗುಜರಾತ್‌ ಮಾದರಿ ಅನುಸರಿಸುತ್ತಿದೆ. ಸದಸ್ಯರನ್ನು ಅಮಾನತು ಮಾಡಿ ಏಕಪಕ್ಷೀಯವಾಗಿ ಕಲಾಪ ನಡೆಸುವ ಹುನ್ನಾರ ನಡೆಸುತ್ತಿದೆ ಎಂದು ಖರ್ಗೆ ಅನಂತರ ಆರೋಪಿಸಿದರು. ಸೋನಿಯಾ ಹಾಗೂ ರಾಹುಲ್‌ ಬಹಳ ಹೊತ್ತು ಸದನದೊಳಗೆ ಇದ್ದು ವಿವಿಧ ವಿರೋಧ ಪಕ್ಷಗಳ ನಾಯಕರ ಜತೆ ಸಮಾಲೋಚನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT