ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಮೈತ್ರಿಗೆ ಜೆಡಿಎಸ್‌ ಸಜ್ಜು

9ರಂದು ಮೇಯರ್‌ ಚುನಾವಣೆ?
Last Updated 31 ಆಗಸ್ಟ್ 2015, 19:53 IST
ಅಕ್ಷರ ಗಾತ್ರ

ಬೆಂಗಳೂರು: ಮೇಯರ್‌ ಮತ್ತು ಉಪ ಮೇಯರ್‌ ಚುನಾವಣೆ ಸೆ. 9ರಂದು ನಡೆಯುವ ಸಾಧ್ಯತೆ ಇದ್ದು, ಕಾಂಗ್ರೆಸ್‌ ಜತೆ ಕೈಜೋಡಿಸುವ ಸುಳಿವನ್ನು ಜೆಡಿಎಸ್‌ ಸೋಮವಾರ ನೀಡಿದೆ.

ಜೆಡಿಎಸ್‌ ಶಾಸಕರ ಜತೆ ಸಭೆ ನಡೆಸಿದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ, ‘ಕಾಂಗ್ರೆಸ್‌ ನಮ್ಮ ಮೊದಲ ಆದ್ಯತೆ’ ಎಂದು ಘೋಷಿಸಿದರು.

ಅವರ ಈ ಹೇಳಿಕೆ ಬೆನ್ನಹಿಂದೆಯೇ ಜೆಡಿಎಸ್‌ ಶಾಸಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಚುನಾವಣೆಗೆ ಪ್ರಾದೇಶಿಕ ಆಯುಕ್ತರು ಒಂದೆರಡು ದಿನಗಳಲ್ಲಿ ಅಧಿಸೂಚನೆ ಹೊರಡಿಸಲಿದ್ದಾರೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಮತದಾನದ ಅಧಿಕಾರ ಹೊಂದಿದ ಪಾಲಿಕೇತರ ಸದಸ್ಯರ ಪಟ್ಟಿಯನ್ನು ಬಿಬಿಎಂಪಿ ಸೋಮವಾರ ಸಿದ್ಧಪಡಿಸಿದೆ. ಆ ಪಟ್ಟಿ ಪ್ರಕಾರ ಪಾಲಿಕೇತರ 62 ಸದಸ್ಯರು ಮತದಾನದ ಅವಕಾಶ ಪಡೆದಿದ್ದಾರೆ. ಒಟ್ಟು 260 ಸದಸ್ಯರು ಮತದಾನದ ಅವಕಾಶ ಪಡೆದಿದ್ದು ಬಹುಮತಕ್ಕೆ 131 ಮತಗಳ ಅಗತ್ಯವಿದೆ.

ಜೆಡಿಎಸ್‌ ಮೈತ್ರಿ ಬಯಸಿ ಕಾಂಗ್ರೆಸ್‌ ಮಂಗಳವಾರ ಅಧಿಕೃತ ಪ್ರಸ್ತಾವ ಸಲ್ಲಿಸುವ ಸಾಧ್ಯತೆ ಇದೆ. ಸಚಿವ ರಾಮಲಿಂಗಾರೆಡ್ಡಿ ಅವರು ಎಚ್‌.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ವರಿಷ್ಠರ ಆಹ್ವಾನವನ್ನು ತಲುಪಿಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಅವರ ಮಧ್ಯಸ್ಥಿಕೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಕುಮಾರಸ್ವಾಮಿ ಅವರೊಂದಿಗೆ ಮೊಬೈಲ್‌ ಮೂಲಕ ಮಾತನಾಡಿ ಮೇಯರ್‌ ಚುನಾವಣೆಯಲ್ಲಿ ಬೆಂಬಲ ಯಾಚಿಸಿದ್ದಾರೆ ಎಂದೂ ತಿಳಿದುಬಂದಿದೆ. ಅದಕ್ಕೆ ಸವಾಲು ಎಂಬಂತೆ ಬಿಜೆಪಿ ನಾಯಕರು ರಾಜನಾಥ್‌ ಸಿಂಗ್‌ ಅವರಿಂದ ದೇವೇಗೌಡರಿಗೆ ಮನವಿ ಮಾಡಿಸಲು ಯತ್ನಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ನಡೆದ ಈ ಯತ್ನಗಳಿಗೆ ವ್ಯತಿರಿಕ್ತವಾಗಿ ಮಾತನಾಡಿರುವ ಸಚಿವ ಡಿ.ಕೆ. ಶಿವಕುಮಾರ್‌, ‘ಕುಮಾರಸ್ವಾಮಿ ಅವರಿಗೆ ಸಿನಿಮಾ ನಂಟಿದೆ. ಬಿಬಿಎಂಪಿ ಬೆಳವಣಿಗೆ ಕುರಿತು ಅವರಿಗೇ ಎಲ್ಲ ಗೊತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ. ಅದಕ್ಕೆ ಕುಮಾರಸ್ವಾಮಿ ಅವರೂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಮಧ್ಯೆ ಕೇರಳದಲ್ಲಿ ಬೀಡುಬಿಟ್ಟಿರುವ ಪಕ್ಷೇತರ ಹಾಗೂ ಜೆಡಿಎಸ್‌ ಶಾಸಕರು ರೆಸಾರ್ಟ್‌ನಲ್ಲಿ ತಮ್ಮ ವಿಹಾರ ಮುಂದುವರಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT