ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ವಿರುದ್ಧ ಭಾರದ್ವಾಜ್‌ ಟೀಕೆ: ಪಕ್ಷದಿಂದ ಎಚ್ಚರಿಕೆ

Last Updated 2 ಜುಲೈ 2015, 19:30 IST
ಅಕ್ಷರ ಗಾತ್ರ

ನವದೆಹಲಿ: ಲಲಿತ್‌ ಮೋದಿ ವೀಸಾ ವಿವಾದದಲ್ಲಿ ಸಿಲುಕಿಕೊಂಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ‘ತಲೆ ದಂಡ’ ಪಡೆಯದಿದ್ದರೆ ಸಂಸತ್ತಿನ ಅಧಿವೇಶನ ನಡೆಯಲು ಬಿಡುವುದಿಲ್ಲ ಎನ್ನುವ ಕಾಂಗ್ರೆಸ್‌ ಮುಖಂಡರ ನಿಲುವಿಗೆ ಮಾಜಿ ಕಾನೂನು ಸಚಿವ ಎಚ್‌.ಆರ್‌. ಭಾರದ್ವಾಜ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭಾರದ್ವಾಜ್‌ ಅವರ ಹೇಳಿಕೆ ಆ ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಮತ್ತೊಂದು ನಿದರ್ಶನ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್, ಮಾಜಿ ಸಚಿವರಿಗೆ ಪಕ್ಷದ ತಂತ್ರಗಳನ್ನು ಟೀಕಿಸದಂತೆ ಎಚ್ಚರಿಕೆ ನೀಡಿದೆ. ಬೇಕಿದ್ದರೆ, ಪಕ್ಷದ ವೇದಿಕೆಗಳಲ್ಲಿ ಸಲಹೆಗಳನ್ನು ಕೊಡಬಹುದು ಎಂದೂ ತಿಳಿಸಿದೆ.

‘ಸುಷ್ಮಾ ಸ್ವರಾಜ್‌, ವಸುಂಧರಾ ರಾಜೆ ನಿಯಮಗಳನ್ನು ಮೀರಿ ನಡೆದುಕೊಂಡಿದ್ದರೆ, ಕಾನೂನು ಕ್ರಮಗಳನ್ನು ಕೈಗೊಳ್ಳಲಿದೆ. ಈ ಕಾರಣಗಳನ್ನು ಮುಂದಿಟ್ಟುಕೊಂಡು ಸಂಸತ್‌ ಅಧಿವೇಶನಕ್ಕೆ ಅಡ್ಡಿ ಮಾಡುವುದು ಉತ್ತಮ ನಡವಳಿಕೆ ಅಲ್ಲ’ ಎಂದು ಭಾರದ್ವಾಜ್‌ ಪ್ರಮುಖ ಇಂಗ್ಲಿಷ್‌ ದೈನಿಕಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಸಂಸತ್‌ ಇರುವುದು ಜನರ ಪ್ರಮುಖ ಸಮಸ್ಯೆಗಳನ್ನು ಕುರಿತು ಚರ್ಚಿಸುವುದಕ್ಕೆ. ಲಲಿತ್‌ ಮೋದಿ– ಸುಷ್ಮಾ– ರಾಜೇ ಅವರ ವಿಷಯ ಕುರಿತೂ ಅಲ್ಲಿ ಚರ್ಚಿಸಬಹುದು. ಕಾಂಗ್ರೆಸ್‌ ಮುಖಂಡರಿಗೆ ನಿಜವಾದ ಕಾಳಜಿ ಇದ್ದರೆ ಸಂಸತ್ತಿನೊಳಗೆ ಅದನ್ನು ಪ್ರಸ್ತಾಪಿಸಲಿ’ ಎಂದು ಅವರು ಕಿವಿಮಾತು ಹೇಳಿದ್ದಾರೆ.
‘ಕಾಂಗ್ರೆಸ್‌, ಬಿಜೆಪಿ ರಾಜಕಾರಣದೊಳಗೆ ಮೂಗು ತೂರಿಸಿ ವಸುಂಧರಾ ರಾಜೇ ಅವರ ಪುತ್ರ ದುಷ್ಯಂತ್‌ ಸಿಂಗ್‌ ಅವರ ವ್ಯವಹಾರಗಳನ್ನು ಟೀಕೆ ಮಾಡಬಾರದು’ ಎಂದೂ ಭಾರದ್ವಾಜ್‌ ಹೇಳಿದ್ದಾರೆ.

‘ಕಾಂಗ್ರೆಸ್‌ ಸ್ಥಿತಿ ಏನಾಗಿದೆ. ಪಕ್ಷವನ್ನು ಪುನಶ್ಚೇತನಗೊಳಿಸಲು ಯಾರು ಪ್ರಯತ್ನಿಸುತ್ತಿದ್ದಾರೆ. ಜೈರಾಂ ರಮೇಶ್‌ ಸಣ್ಣಪುಟ್ಟ ವಿಷಯಗಳಿಗೆ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ. ಐಪಿಎಲ್‌ ಹಗರಣ ಕುರಿತು ಜಾರಿ ನಿರ್ದೇಶನಾಲಯ ಮತ್ತಿತರ ಸಂಸ್ಥೆಗಳು ಕ್ರಮ ಕೈಗೊಳ್ಳುತ್ತವೆ. ಅದರಲ್ಲಿ ಕಾಂಗ್ರೆಸ್‌ ಮಾಡುವುದು ಏನಿದೆ?’ ಎಂದು ಅವರು  ಕೇಳಿದ್ದಾರೆ. ‘ದುರ್ಬಲವಾಗಿರುವ ಪಕ್ಷವನ್ನು ಪುನಶ್ಚೇತನಗೊಳಿಸುವ ಕೆಲಸವನ್ನು ಕಾಂಗ್ರೆಸ್‌ ನಾಯಕರು ಮಾಡಬೇಕಿದೆ. ಉತ್ತರ ಪ್ರದೇಶ, ಬಿಹಾರದಲ್ಲಿ ಪಕ್ಷದ ಅಸ್ತಿತ್ವ ಎಲ್ಲಿದೆ. ಅಲ್ಲಿ ಚುನಾವಣೆ ಗೆಲ್ಲುವುದಕ್ಕೆ ಏನು ಮಾಡಿದ್ದಾರೆ. ಯಾವ ಯೋಜನೆ ಇದೆ. ಈ ಕೆಲಸವನ್ನು ಯಾರು ಮಾಡುತ್ತಿದ್ದಾರೆ?’ ಎಂದು ಭಾರದ್ವಾಜ್‌ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

‘ಯುಪಿಎ– 1ರಲ್ಲಿ ನಾನು ಮಂತ್ರಿಯಾಗಿದ್ದಾಗ ಸಚಿವರು ಹಾಗೂ ಸಂಸತ್‌ ಸದಸ್ಯರು ಕ್ರೀಡಾ ಸಂಸ್ಥೆಗಳಲ್ಲಿ ಸ್ಥಾನ ಪಡೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದೆ’ ಎಂದೂ ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಎಚ್ಚರಿಕೆ: ಮೋದಿ ವೀಸಾ ಹಗರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕಾಂಗ್ರೆಸ್‌ ಅನುಸರಿಸುವ ತಂತ್ರಕ್ಕೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಸಚಿವ ಎಚ್‌.ಆರ್‌. ಭಾರದ್ವಾಜ್‌ ಅವರಿಗೆ ಗುರುವಾರ ಎಚ್ಚರಿಕೆ ನೀಡಲಾಗಿದೆ.

ಭಾರದ್ವಾಜ್‌ ಪಕ್ಷದ ಹಿರಿಯ ನಾಯಕ. ಅವರ ಹಿರಿತನ ಗೌರವಿಸುತ್ತೇವೆ. ಅದರಿಂದಾಗಿ ನಾಲ್ಕು ಸಲ ರಾಜ್ಯಸಭೆ ಸದಸ್ಯತ್ವ, ಮಂತ್ರಿ ಸ್ಥಾನ ಕೊಡಲಾಗಿತ್ತು. ಎರಡು ರಾಜ್ಯಗಳಿಗೆ ರಾಜ್ಯಪಾಲರಾಗಿ ನೇಮಿಸಲಾಗಿತ್ತು ಎಂದೂ ಕಾಂಗ್ರೆಸ್‌ ಹೇಳಿದೆ. ಭಾರದ್ವಾಜ್‌ ಅವರು ಇಳಿ ವಯಸಿನಲ್ಲಿ ತಾಳ್ಮೆ– ಸಂಯಮ ವಹಿಸಬೇಕು. ಕಾಂಗ್ರೆಸ್‌ ನಾಯಕರನ್ನು ಬಹಿರಂಗವಾಗಿ ಟೀಕೆ ಮಾಡುವ ಬದಲು ಪಕ್ಷದ ವೇದಿಕೆಗಳಲ್ಲಿ ಸಲಹೆಗಳನ್ನು ಕೊಡಬಹುದು. ಅದರಿಂದ ಅವರ ಮೇಲಿನ ಗೌರವ ಹೆಚ್ಚುತ್ತದೆ ಎಂದು ಕಾಂಗ್ರೆಸ್‌ ವಕ್ತಾರರಾದ ಮೀಮ್‌ ಅಫ್ಜಲ್‌ ತಿಳಿಸಿದ್ದಾರೆ.
*
ದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ಗೆ  ಮೋದಿ ಅವರ ವೇಗಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲ. ರಾಹುಲ್‌ಗೆ ವಾಸ್ತವದ ಅರಿವಿಲ್ಲ. ಹಿರಿಯ ನಾಯಕರ ಸಂಪರ್ಕವಿಲ್ಲ.
- ಎಚ್‌.ಆರ್‌. ಭಾರದ್ವಾಜ್‌,
ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT