ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಡೋಮ್‌: ವಿವಾದದಲ್ಲಿ ಕೇಂದ್ರ ಸಚಿವ

Last Updated 25 ಜೂನ್ 2014, 20:43 IST
ಅಕ್ಷರ ಗಾತ್ರ

ನವದೆಹಲಿ: ‘ಎಚ್‌ಐವಿ ಸೋಂಕು ತಡೆ­ಯಲು ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್‌ ಬಳಸುವಂತೆ ಒತ್ತು ನೀಡಿ ಪ್ರಚಾರ ಮಾಡಿದರೆ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌  ಅವರು ಸಂದರ್ಶನದಲ್ಲಿ ನೀಡಿರುವ ಹೇಳಿಕೆ ವಿವಾದಕ್ಕೆ ಎಡೆಮಾಡಿ­ಕೊಟ್ಟಿದೆ.

‘ದಾಂಪತ್ಯದಲ್ಲಿ ನಿಷ್ಠೆಯು ಈ ಪಿಡುಗು ತಡೆಯುವಲ್ಲಿ ಅತ್ಯುತ್ತಮ ಮಾರ್ಗೋಪಾಯವೆಂದೂ ಸಚಿವರು ಅಭಿಪ್ರಾಯಪಟ್ಟಿದ್ದಾರೆ’ ಎಂದೂ ‘ದ ನ್ಯೂಯಾರ್ಕ್‌ ಟೈಮ್ಸ್‌’ ದೈನಿಕದ  ವರದಿ ತಿಳಿಸಿದೆ. ಸಚಿವ ಹರ್ಷವರ್ಧನ್‌ ಅವರು ಬುಧವಾರ ಈ ಕುರಿತು ಪ್ರತಿಕ್ರಿಯಿಸಿ, ತಮ್ಮ ಹೇಳಿಕೆಯನ್ನು ಸಂದರ್ಶನದಲ್ಲಿ  ತಿರುಚಲಾಗಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

‘ಕಾಂಡೋಮ್‌ ಬಳಕೆ ಸುರಕ್ಷಿತ ಲೈಂಗಿಕತೆಯ ಭರವಸೆ ನೀಡುತ್ತದೆ. ಆದರೆ, ಅಂತಿಮವಾಗಿ ತನ್ನ ಸಂಗಾತಿಗೆ ನಿಷ್ಠೆಯಿಂದ ಇರುವುದೇ ಅತ್ಯಂತ ಸುರಕ್ಷಿತ ಲೈಂಗಿಕತೆ’ ಎಂದು ಹರ್ಷ­ವರ್ಧನ್‌ ಅವರು ಸ್ಪಷ್ಟನೆ ನೀಡಿದ್ದಾರೆ. ಅವರ ಈ ಸ್ಪಷ್ಟನೆ ಬಗ್ಗೆಯೂ ಹಲವರು ಹುಬ್ಬೇರಿಸಿದ್ದಾರೆ.

‘‘ಏಡ್ಸ್ ಅರಿವು ಆಂದೋಲನದ ವೇಳೆ ಕಾಂಡೋಮ್‌ ಬಳಕೆಗೆ ಒತ್ತು ನೀಡಿದರೆ, ‘ನೀವು ಯಾವುದೇ ಅಕ್ರಮ ಲೈಂಗಿಕ ಸಂಬಂಧ ಹೊಂದಬಹುದು. ಆದರೆ, ಎಲ್ಲಿಯವರೆಗೆ ಕಾಂಡೋಮ್‌ ಬಳಸುತ್ತೀರೋ ಅಲ್ಲಿಯವರೆಗೆ ಯಾವ ಸಮಸ್ಯೆಯೂ ಇಲ್ಲ’ ಎಂಬ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ’’ ಎಂಬ ಹೇಳಿಕೆಯನ್ನು ಹರ್ಷವರ್ಧನ್‌ ಅವರ ಉಲ್ಲೇಖದೊಂದಿಗೆ ಅಮೆರಿಕದ ‘ದ ನ್ಯೂಯಾರ್ಕ್‌ ಟೈಮ್ಸ್’ ಬುಧವಾರ ಸಂದರ್ಶನ ಪ್ರಕಟಿಸಿತ್ತು.

ಪತಿ–ಪತ್ನಿ ನಡುವೆ ನಮ್ಮ (ಭಾರತೀಯ) ಸಂಸ್ಕೃತಿಯ ಅವಿಭಾಜ್ಯ ಅಂಗವೂ ಆದ ಪರಸ್ಪರ ನಿಷ್ಠೆಯ ಲೈಂಗಿಕ ಸಂಬಂಧ ಉತ್ತೇಜಿಸುವುದಕ್ಕೆ ಒತ್ತು ನೀಡುವಂತಹ ಪ್ರಚಾರಾಂದೋಲ­ನವನ್ನು ತಾವು ನೋಡಲು ಬಯಸುವುದಾಗಿ ಇಎನ್‌ಟಿ ತಜ್ಞರೂ ಆದ (ಕಣ್ಣು, ಕಿವಿ, ಮೂಗು ತಜ್ಞರು) ಹರ್ಷವರ್ಧನ್‌  ಹೇಳಿದ್ದರು.

ಟೀಕಾಪ್ರವಾಹ: ಹರ್ಷವರ್ಧನ್‌ ಅವರು ಹೀಗೆ ಹೇಳಿ­ದ್ದಾ­ರೆಂಬುದು ಸುದ್ದಿಯಾಗು­ತ್ತಿದ್ದಂತೆಯೇ ಸಾಮಾ­ಜಿಕ ಜಾಲತಾಣ­ದಲ್ಲಿ ಟೀಕಾಪ್ರವಾಹವೇ ಹರಿದಿದೆ. ಅಸುರಕ್ಷಿತ ಲೈಂಗಿಕತೆಯಿಂದಾಗಿಯೇ ಭಾರತವು ಜಗತ್ತಿನ ಮೂರನೇ ಅತಿ ದೊಡ್ಡ ಎಚ್‌ಐವಿ ಸೋಂಕಿತ ರಾಷ್ಟ್ರವಾಗಿರುವಾಗ ಸಚಿವರು ‘ನೈತಿಕತೆಯನ್ನು ಪ್ರೇರೇಪಿಸಿ, ಕಾಂಡೋಮ್‌ಗಳನ್ನಲ್ಲ’ ಎಂಬ ಸಂದೇಶ ನೀಡಿದ್ದಾರೆಂದು ವ್ಯಂಗ್ಯ ಮಾಡಲಾಗಿದೆ.

ಸಮರ್ಥನೆ: ‘ಕಾಂಡೋಮ್‌ಗಳ ಉಪಯೋಗದ ಬಗ್ಗೆ ನಾನು ತಪ್ಪು ಮಾಹಿತಿ ನೀಡಿ­ದ್ದೇನೆಂದು ಅಥವಾ ಕಾಂಡೋಮ್‌ ಬಳಕೆಯ ನೈತಿಕತೆಯ ಬಗ್ಗೆ ನನಗೆ ಸಮಸ್ಯೆ ಇದೆ’ ಎಂಬಂತೆ ಮಾಧ್ಯಮ ವರದಿಗಳು ಬಿಂಬಿ­ಸು­ತ್ತಿವೆ. ನಾನು ಕಳೆದ 20 ವರ್ಷಗಳಿಂದಲೂ ಸುರಕ್ಷಿತ ಲೈಂಗಿಕತೆಗಾಗಿ ಕಾಂಡೋಮ್‌ ಬಳಸುವ ಜತೆಗೆ ಸಂಬಂಧ­ದಲ್ಲಿ ನಿಷ್ಠೆಯನ್ನು ಅಳವಡಿಸಿಕೊಳ್ಳು­ವಂತೆ ಅರಿವು ಮೂಡಿಸುತ್ತಾ ಬಂದಿದ್ದೇನೆ. ನನ್ನ ಪ್ರತಿಪಾ­ದ­ನೆಯು, ವಿಶ್ವಸಂಸ್ಥೆಯ ಏಡ್ಸ್ ಪ್ರಚಾರಾಂ­ದೋ­ಲನದ ‘ಎಬಿಸಿ’ ಸೂತ್ರವಾದ, ಇಂದ್ರಿಯ ಸಂಯಮ, ನಿಷ್ಠೆ­ಯಿಂದ ಇರಿ, ಕಾಂಡೋಮ್‌ ಬಳಸಿ ಎಂಬ ಧಾಟಿ­ಯಲ್ಲೇ  ಇದೆ’ ಎಂದು ವಿವರಿಸಿದ್ದಾರೆ.

‘‘ಕಾಂಡೋಮ್‌ಗಳು ಕೆಲವೊಮ್ಮೆ ಬಳಕೆ ವೇಳೆ ಹರಿದು ಹೋಗಿ ಅನಾಹುತಗಳಾಗುತ್ತವೆ ಎಂಬುದು ಪ್ರತಿ­ಯೊಬ್ಬ ಸ್ವಯಂಸೇವಾ ಕಾರ್ಯಕರ್ತನಿಗೂ ಗೊತ್ತಿ­ರು­ತ್ತದೆ. ಆದ್ದರಿಂದ ಭಾರತ ಸರ್ಕಾರದಿಂದ ನಡೆ­ಯುವ ಪ್ರಚಾರಾಂದೋಲನಗಳಲ್ಲಿ ‘ಏಕ ಸಂಗಾತಿ ನಿಷ್ಠೆಯೇ ಸುರಕ್ಷಿತ ಲೈಂಗಿಕತೆ’ ಎಂಬುದನ್ನು ಒತ್ತಿ ಹೇಳ­­-­ಬೇಕು ಎಂದು ಹರ್ಷವರ್ಧನ್‌ ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT