ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಂಚಲ್ಲೇ ಕಾಣದಾದ ಚನ್ನಾಪುರ

ಗ್ರಾಮಾಂತರಂಗ
Last Updated 31 ಜುಲೈ 2014, 10:13 IST
ಅಕ್ಷರ ಗಾತ್ರ

ಈ ಹಳ್ಳಿಯ ಹೆಸರು ಕೋಲಾರ ತಾಲ್ಲೂಕಿನ ತೊಟ್ಲಿ ಗ್ರಾಮ ಪಂಚಾಯತಿಯ ಭೂಪಟದಲ್ಲಿ ಇದ್ದರೂ ಹಳ್ಳಿ ಕಾಡಂಚಿನಲ್ಲಿದೆ ಎಂಬ ಕಾರಣಕ್ಕೆ ಜನ ವಾಸವಿರದೇ ಪಕ್ಕದ ದಿನ್ನೂರಿಗೆ ಹೋಗಿ ನೆಲೆಸಿದ್ದರು. ಹಲವು ವರ್ಷಗಳ ಕಾಲ ಅಲ್ಲಿ ಜನವಾಸವೇ ಇರಲಿಲ್ಲ. ಆಮೇಲೆ, ಸುಮಾರು 25 ವರ್ಷದ ಹಿಂದೆ ಧೈರ್ಯ ಮಾಡಿದವರು ಲಕ್ಷ್ಮಯ್ಯ, ವೆಂಕಟಮ್ಮ ದಂಪತಿ.

ಆ ದಂಪತಿಯೂ ಸೇರಿದಂತೆ ಅವರ ನಾಲ್ವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿ ಅಲ್ಲಿ ಈಗ 8 ಮನೆಯಲ್ಲಿ 30 ಮಂದಿ ಇದ್ದಾರೆ. ಮಳೆ ಇಲ್ಲದೆ, ಬೆಳೆ ಬೆಳೆಯಲಿಕ್ಕಾಗದೆ, 12 ಯುವಕರು ನಗರಕ್ಕೆ ದಿನವೂ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಉಳಿದವರಿಗೆ ವಯಸ್ಸಾಗಿರುವುದರಿಂದ ಕೃಷಿಯಲ್ಲೇ ಜೀವನ ದೂಡುತ್ತಿದ್ದಾರೆ.

ಕಾಡಂಚಿನ ನೆಲದಲ್ಲೇ ಜೀವನ ಹುಡುಕಿಕೊಂಡಿರುವ ಅವರ ಹಳ್ಳಿಗೆ ಈಗಲೂ ಮುಖ್ಯ ರಸ್ತೆಯಿಂದ ಸಂಪರ್ಕ ಕಲ್ಪಿಸುವ ಸುಮಾರು ಮೂರೂವರೆ ಕಿಮೀ ರಸ್ತೆ ಅಭಿವೃದ್ಧಿಯನ್ನೇ ಕಂಡಿಲ್ಲ.

ಕೋಲಾರ–ಚಿಂತಾಮಣಿ ರಸ್ತೆಯಲ್ಲಿ, ಈ ಹಳ್ಳಿಯ ರಸ್ತೆ ಆರಂಭವಾಗುವ ಸ್ಥಳದಲ್ಲೇ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಲ್ಲಿ ಈ ರಸ್ತೆಯನ್ನು 2010–11ನೇ ಸಾಲಿನಲ್ಲಿ ₨ 4 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂಬ ಬರಹವುಳ್ಳ ಕಲ್ಲನ್ನು ನೆಡಲಾಗಿದೆ. ಆದರೆ ಆ ಸ್ಥಳದಿಂದ ಹಳ್ಳಿಯವರೆಗೆ ಎಲ್ಲಿಯೂ ರಸ್ತೆ ಅಭಿವೃದ್ಧಿಯಾಗಿಲ್ಲ.

ಉದ್ದಕ್ಕೂ ಮಣ್ಣಿನ ರಸ್ತೆಯೇ ಮಲಗಿಕೊಂಡಿದೆ. ಈ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಆ ಅವಧಿಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಾಗಿದ್ದವರೊಬ್ಬರೇ ಪಡೆದು, ನಡೆಸಿದಂತೆ ನಕಲಿ ದಾಖಲೆ ಸೃಷ್ಟಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಕಲ್ಲು ಗಣಿಗಾರಿಕೆ:
ಈ ಹಳ್ಳಿಯಲ್ಲಿ ರಸ್ತೆಯದಷ್ಟೇ ಸಮಸ್ಯೆ ಅಲ್ಲ. ಹಳ್ಳಿ ಸಮೀಪದಲ್ಲೇ ಇರುವ ಪುಟ್ಟ ಬೆಟ್ಟವನ್ನು ಸುತ್ತಮುತ್ತಲಿನ ಹಳ್ಳಿಯ ಜನರೇ ಕಲ್ಲು ಗಣಿಗಾರಿಕೆಗಾಗಿ ಕರಗಿಸಿದ್ದಾರೆ, ಅದಕ್ಕೆ ಗ್ರಾಮ ಪಂಚಾಯತಿಯಿಂದ ಇದುವರೆಗೂ ಯಾರೊಬ್ಬರೂ ಅನುಮತಿ ಪಡೆದಿಲ್ಲ. ಶುಲ್ಕ ಪಾವತಿಸಿಲ್ಲ.  ಹಳ್ಳಿ ಜನರೇ ಕಲ್ಲನ್ನು ಒಡೆದು ಮಾರುತ್ತಿದ್ದಾರೆ. ಹಳ್ಳಿ ಜನರೇ ಅಲ್ಲಿ ಕೂಲಿ ಕೆಲಸವನ್ನೂ ಮಾಡುತ್ತಿದ್ದಾರೆ ಎನ್ನುತ್ತಾರೆ.

70 ಅಡಿ ಎತ್ತರವಿತ್ತು: ಈ ಬೆಟ್ಟದಂಥ ಕಲ್ಲಿನ ಗುಡ್ಡ ಸುಮಾರು 70 ಅಡಿಯಷ್ಟು ಎತ್ತರವಿತ್ತು. ಈಗ ಆ ಜಾಗದಲ್ಲಿ ದೊಡ್ಡ ಹಳ್ಳವಿದೆ. ಗಣಿಗಾರಿಕೆ ಈಗ ಗುಡ್ಡದ ಸುತ್ತಲೂ ವಿಸ್ತರಿಸುತ್ತಿದೆ.  ಈ ವಿಷಯದಲ್ಲಿ ಗ್ರಾಮ ಪಂಚಾಯತಿ ಇದುವರೆಗೂ ಗಮನ ಹರಿಸಿಲ್ಲ. ದಿನವೂ ಲಕ್ಷಾಂತರ ರೂಪಾಯಿ ಕಲ್ಲಿನ ವ್ಯವಹಾರ ನಡೆಯುತ್ತಿದೆ ಎನ್ನುತ್ತಾರೆ ತೊಟ್ಲಿ ಗ್ರಾಮದ ಟಿ.ವಿ.ರಮೇಶ್‌.

ಆ ಹಳ್ಳದಲ್ಲಿ ನಿಂತ ನೀರನ್ನೇ ತಮ್ಮ ಜಮೀನಿಗೆ  ಲಕ್ಷ್ಮಯ್ಯ, ವೆಂಕಟಮ್ಮ ದಂಪತಿ ಹರಿಸಿ ನೆಲಗಡಲೆ, ತೊಗರಿ ಬೆಳೆಯುತ್ತಿದ್ದಾರೆ. ಅಲ್ಲಿ ನೀರು ಖಾಲಿಯಾದರೆ, ಮಳೆ ಬರದಿದ್ದರೆ ಅವರಿಗೆ ಕೃಷಿಯೂ ಇಲ್ಲ. ಜೀವನವೂ ಇಲ್ಲ ಎನ್ನುತ್ತಾರೆ ಅವರು.

ಪಂಚಾಯತಿ ಕೊರೆಯಿಸಿರುವ ಕೊಳವೆಬಾವಿ ನೀರು ಟ್ಯಾಂಕ್‌ನ ಮೂಲಕ ದೊರಕುತ್ತಿದೆ. ಆದರೆ ಅದರಲ್ಲಿ ನೀರು ಖಾಲಿಯಾಗಿರುವುದು ಈ ಜನರಲ್ಲಿ ಆತಂಕ ಮೂಡಿಸಿದೆ. ರಸ್ತೆ ಮತ್ತು ನೀರಿನ ಸಮಸ್ಯೆ ತೀರಬೇಕಷ್ಟೆ ಎನ್ನುತ್ತಾರೆ ಅವರು.

ವಿಪರ್ಯಾಸವೆಂದರೆ, ಕೋಲಾರ–ಚಿಂತಾಮಣಿ ರಸ್ತೆಯಿಂದ ಈ ಹಳ್ಳಿಯವರೆಗೂ ಒಂದೇ ಒಂದು ಬೀದಿ ದೀಪವೂ ಇಲ್ಲ. ರಸ್ತೆಯೂ ಸರಿ ಇಲ್ಲ. ಹೀಗಾಗಿಯೇ ಇದು ಯಾರಿಗೂ ಹೆಚ್ಚು ಗೋಚರಿಸದ, ಯಾರೂ ಹೋಗದ ಹಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT