ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ಹಾವಳಿ: ಕೃಷಿ ಕಾರ್ಮಿಕರ ಪ್ರತಿಭಟನೆ

Last Updated 6 ಮಾರ್ಚ್ 2015, 10:59 IST
ಅಕ್ಷರ ಗಾತ್ರ

ಸಿದ್ದಾಪುರ:  ಮಿತಿಮೀರಿದ ಕಾಡಾನೆ ಹಾವಳಿಯಿಂದ ಆಕ್ರೋಶಗೊಂಡ ಕಾರ್ಮಿಕರು ತೋಟದ ಕೆಲಸವನ್ನು ಸ್ಥಗಿತಗೊಳಿಸಿ ಗುರುವಾರ ಬೀದಿಗಿಳಿದು ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿದರು.

ಸುಡುಬಿಸಿಲಿನಲ್ಲಿ ಮೆರವಣಿಗೆಯಲ್ಲಿ ಪಟ್ಟಣದ ಬಸ್‌ ನಿಲ್ದಾಣ ತಲುಪಿ ಅಲ್ಲಿ ಮಾನವ ಸರಪಳಿ ನಿರ್ಮಿಸಿ ‘ಕಾಡಾನೆ ಹಾವಳಿಯಿಂದ ನಮಗೆ ಮುಕ್ತಿ ದೊರಕಿಸಿ, ನಮ್ಮ ಮಕ್ಕಳನ್ನು ನಿರ್ಭೀತಿಯಿಂದ ಬದುಕಲು ಅವಕಾಶ ಕಲ್ಪಿಸಿ’ ಎಂದು ಘೋಷಣೆಗಳನ್ನು ಕೂಗಿದರು.

ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿ ಬಸ್‌ ನಿಲ್ದಾಣದಲ್ಲಿ ಧರಣಿ ನಡೆಸಿದರು.

‘ಕಾಡಾನೆ ಹಾವಳಿಯಿಂದ ಕಂಗೆಟ್ಟಿದ್ದೇವೆ, ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದೇವೆ, ಕುಟುಂಬಕ್ಕೆ ಆಧಾರವಾಗಿದ್ದ ಹಿರಿಯರನ್ನು ಕಳೆದುಕೊಂಡು ಸಂಕಷ್ಟದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ’ ಎಂದು ಪ್ರತಿಭಟನಾ ನಿರತ ಕಾರ್ಮಿಕರು ಅಳಲು ತೋಡಿಕೊಂಡರು.
ಪಟ್ಟಣದ ವ್ಯಾಪಾರಸ್ಥರು ಒಂದು ಗಂಟೆ ಕಾಲ ಅಂಗಡಿಗಳನ್ನು ಬಂದ್‌ ಮಾಡಿ ಕಾರ್ಮಿಕರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. 

‘ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದರೂ ಸರ್ಕಾರ ಸಮರ್ಪಕ ಹಾಗೂ ಶಾಶ್ವತ ಪರಿಹಾರ ಮಾರ್ಗ ಕಂಡುಕೊಳ್ಳದೆ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ’ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಸಿಐಟಿಯು ಕೊಡಗು ಜಿಲ್ಲಾ ಅಧ್ಯಕ್ಷ  ಡಾ.ಐ.ಆರ್‌. ದುರ್ಗಾಪ್ರಸಾದ್‌ ಆರೋಪಿಸಿದರು. 

ಪ್ರತಿಭಟನಾ ಸ್ಥಳಕ್ಕೆ ಬಂದ ವಲಯ ಅರಣ್ಯಾಧಿಕಾರಿ ದೇವಯ್ಯ ಅವರಿಗೆ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಿದರು.
ಅರಣ್ಯದಲ್ಲಿ ಕಾಡಾನೆಗಳ ಮೇವಿಗೆ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಹಲವು ತಜ್ಞರ ಸಲಹೆಯೊಂದಿಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೂ ಅವುಗಳನ್ನು ಪರಿಶೀಲಿಸಿ ಅನುಷ್ಠಾನಕ್ಕೆ ತರುವುದಕ್ಕೆ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ದೂರಿದರು.

‘ಒಂದೆಡೆ ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶದ ಜನಜೀವನದ ನೈಜ ಸ್ಥಿತಿಯನ್ನು ಅರಿಯದೆ ಪರಿಸರ ರಕ್ಷಣೆಯ ಹೆಸರಿನಲ್ಲಿ ಜನಜೀವನದ ಮೇಲೆ ಪ್ರತಿಕೂಲ ಅಂಶಗಳನ್ನು ಹೇರುವ ಆದೇಶಗಳನ್ನು ಜಾರಿಗೆ ತರುತಿದೆ, ಮತ್ತೊಂದೆಡೆ ರಾಷ್ಟ್ರದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಮುಕ್ತ ಅವಕಾಶ ನೀಡಿ ಉದ್ಯಮಿಗಳಿಗೆ ರತ್ನಗಂಬಳಿ ಹಾಸುತ್ತಿದೆ. ಸರ್ಕಾರದ ನಿರ್ದಿಷ್ಟ ಉದ್ದೇಶ ಜನತೆಗೆ ತಿಳಿಯಬೇಕಿದೆ’ ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ  ಪಿ.ಆರ್‌. ಭರತ್‌ ಹೇಳಿದರು.

ಪ್ರತಿಭಟನೆಯಲ್ಲಿ ಕೊಡಗು ಪ್ಲಾಂಟೇಶನ್‌ ಜನರಲ್‌ ವರ್ಕರ್ಸ್ ಯೂನಿಯನ್‌ ಕಾರ್ಯದರ್ಶಿ ಮಹದೇವ್‌, ಸಿಐಟಿಯು ಕಾರ್ಯದರ್ಶಿ ಎಚ್‌.ಬಿ. ರಮೇಶ್‌, ಸದಸ್ಯರಾದ ಮೋನಪ್ಪ, ನಾರಾಯಣ, ಅನಿಲ್‌ ಹಾಗೂ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT