ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಿದ ಬೆಚ್ಚನೆ ನೆನಪು

ಬಸವನಗುಡಿಯ ನ್ಯಾಷನಲ್‌ ಕಾಲೇಜಿನಲ್ಲಿ ಗುರುವಂದನೆ
Last Updated 26 ಏಪ್ರಿಲ್ 2015, 20:37 IST
ಅಕ್ಷರ ಗಾತ್ರ

ಬೆಂಗಳೂರು: ಅಲ್ಲಿ ನೆರೆದಿದ್ದವರೆಲ್ಲ ಅರವತ್ತು ವಯಸ್ಸು ದಾಟಿದ ಶಿಷ್ಯರು; ಅವರಿಗೆ 90ರ ಆಸುಪಾಸಿನ ಗುರುಗಳು. ಭಾನುವಾರ ನ್ಯಾಷನಲ್‌ ಕಾಲೇಜು ಆವರಣದಲ್ಲಿ ಅವರೆಲ್ಲ ಸಮಾಗಮ ಆದಾಗ ಕಾಲ ನಾಲ್ಕೂವರೆ ದಶಕ ಸರ್ರನೇ ಹಿಂದೆ ಸರಿದಿತ್ತು. 

ನ್ಯಾಷನಲ್‌ ಕಾಲೇಜಿನ 1973ನೇ ಬ್ಯಾಚ್‌ನ ಬಿಎಸ್ಸಿ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನೆ ಕಾರ್ಯಕ್ರಮ ಬಲು ಹೃದಯಸ್ಪರ್ಶಿ ಆಗಿತ್ತು. ವಿದ್ಯೆ–ಬುದ್ಧಿ ಧಾರೆ ಎರೆದ ಗುರುವರ್ಯರಿಗೆ ಶಿಷ್ಯರೆಲ್ಲ ಕುಟುಂಬಸಮೇತರಾಗಿ ಶಿರಸಾಷ್ಟಾಂಗ ನಮಸ್ಕಾರ ಮಾಡಿದರು. ಪ್ರೀತಿ ತುಂಬಿದ ಸನ್ಮಾನ ಮಾಡಿ ಸಾರ್ಥಕ ಭಾವದಲ್ಲಿ ಹರ್ಷಧಾರೆಯನ್ನೂ ಸುರಿಸಿದರು.

ಶಾಸಕ ವೈಎಸ್‌ವಿ ದತ್ತ, ‘ವೆಂಕಟೇಶ ದತ್ತ’ನಾಗಿ ಕಾಲೇಜಿನಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕಿದರು. ‘ಟಿ.ಜಿ. ರಾಘವೇಂದ್ರ ಸರ್‌ಗೆ ನಾವೆಲ್ಲ ಟೈಗರ್‌ ಎಂದೇ ಕರೆಯುತ್ತಿದ್ದೆವು’ ಎಂದು ದತ್ತ ಹೇಳುತ್ತಿದ್ದಾಗ, ವೇದಿಕೆ ಮೇಲೆ ಕುಳಿತಿದ್ದ ರಾಘವೇಂದ್ರ ಅವರು ಮನಸಾರೆ ನಕ್ಕರು.

ಹಿರಿಯ ಪತ್ರಕರ್ತ ಕೆ.ಎಸ್‌. ಸಚ್ಚಿದಾನಂದಮೂರ್ತಿ ಇದೇ ಬ್ಯಾಚಿನ ವಿದ್ಯಾರ್ಥಿ. ‘ಕಾಲೇಜು ದಿನಗಳಲ್ಲಿ ನಾನು ಔಟ್‌ ಸ್ಟ್ಯಾಂಡಿಂಗ್‌ ವಿದ್ಯಾರ್ಥಿಯಾಗಿದ್ದೆ. ಏಕೆಂದರೆ, ಸದಾಕಾಲ ನಾನು ತರಗತಿ ಹೊರಗೆ ನಿಂತಿರುತ್ತಿದ್ದೆ’ ಎಂದು ಅವರು ಹೇಳಿದಾಗ ಸಹಪಾಠಿಗಳೆಲ್ಲ ಬಿದ್ದು ಬಿದ್ದು ನಕ್ಕರು. ‘ಹಿಂದಿನ ಬೆಂಚಿನ ಹುಡುಗನನ್ನೂ ಮುಂದೆ ತಂದ ಗುರುವರ್ಯರಿಗೆ ನನ್ನ ನಮಸ್ಕಾರ’ ಎಂದು ಹೃದಯ ತುಂಬಿ ಹೇಳಿದರು.

ಅಖಿಲೇಶ್‌ ಬಾಬು ಅವರು ಮಾತನಾಡಲು ಬಂದಾಗ ಗೆಳೆಯರೆಲ್ಲ ಒಟ್ಟಾಗಿ ಕೂಗಿದರು: ‘ರೋಲ್‌ ನಂ.1’ ಎಂದು. ಅವರ ಹೆಸರು ‘ಎ’ದಿಂದ ಶುರುವಾಗುವ ಕಾರಣ ಹಾಜರಿ ಪುಸ್ತಕದಲ್ಲಿ ಮೊದಲ ಸ್ಥಾನದಲ್ಲಿ ಇತ್ತಂತೆ. ಸಿ.ಬಿ. ಯಶವಂತಕುಮಾರ್‌ ಮೈಕ್‌ ಮುಂದೆ ನಿಂತಾಗ ‘ನಟೋರಿಯಸ್‌ ಸ್ಟೂಡೆಂಟ್‌’ ಎನ್ನುವ ಅಭಿದಾನ ಸಭಿಕರ ಗುಂಪಿನಿಂದ ಕೇಳಿಬಂತು. ಈ ಅಭಿದಾನಕ್ಕೆ ಪುಷ್ಟಿ ನೀಡುವಂತೆ ಯಶವಂತಕುಮಾರ್‌, ‘ಎಚ್‌.ಎಸ್‌. ಮೂರ್ತಿ ಸರ್‌ ನಮಗೆ ಹುಡುಗಿಯರ ಮುಂದೇ ಬೈಯ್ಯುತ್ತಿದ್ದರು ಕಣ್ರಿ’ ಎಂದು ತಕರಾರು ತೆಗೆದರು.

ಎನ್‌.ವಿ. ರಾಮಚಂದ್ರಮೂರ್ತಿ ರಾಮನಗರದಿಂದ ನಿತ್ಯ ರೈಲಿನಲ್ಲಿ ಕಾಲೇಜಿಗೆ ಬಂದು ಹೋಗುತ್ತಿದ್ದ ಕ್ಷಣಗಳನ್ನು ಮೆಲುಕು ಹಾಕಿದರು. ‘ಬಡತನದಲ್ಲಿ ಬೆಳೆದ ನನಗೆ ಎಚ್‌.ನರಸಿಂಹಯ್ಯ ಮೇಷ್ಟ್ರು ಕರೆದು ಸೀಟು ಕೊಡದಿದ್ದರೆ ಬಿಎಸ್ಸಿ ಶಿಕ್ಷಣ ಕನಸಿನ ಮಾತಾಗಿತ್ತು’ ಎಂದು ಕೃತಜ್ಞತೆಯಿಂದ ಸ್ಮರಿಸಿದರು.

ಈ ಗೆಳೆಯರ ಗುಂಪಿನ ಮತ್ತೊಬ್ಬ ಸದಸ್ಯ ಎನ್‌.ರಾಘವೇಂದ್ರ, ‘ನನಗೆ ಬಿ.ಪಿ, ಸುಗರ್‌ ಯಾವುದೂ ಇಲ್ಲ ಗೊತ್ತಾ’ ಎಂದಾಗ, ಜತೆಗಾರರು, ‘ಅರವತ್ತು ದಾಟಿದರೂ ನಿನಗೆ ಬಿ.ಪಿ, ಸುಗರ್‌ ಏನೂ ಬಂದಿಲ್ಲ ಎಂದರೆ ಬೇರೆ ಏನೋ ಗಂಭೀರ ಸಮಸ್ಯೆ ಇರಬೇಕು’ ಎಂದು ಕಾಲೆಳೆದರು. ಗುರುಗಳ ಕಣ್ಣು ತಪ್ಪಿಸಿ ಸಿಗರೇಟ್‌ ಹೊಡೆದ ಕ್ಷಣದ ಮೆಲುಕೂ ಅಲ್ಲಿತ್ತು. ಆಗ ಶಿಷ್ಯರ ಮಾತಿಗೆ ವೇದಿಕೆ ಮೇಲಿದ್ದ ಗುರುಗಳು ಬಾಯಿತುಂಬಾ ನಕ್ಕರು.

ಉಮಾದೇವಿ, ಕಾಲೇಜು ದಿನಗಳಲ್ಲಿ ಕಲಿತಿದ್ದ ಸೂತ್ರವನ್ನು ಥಟ್‌ ಅಂತ ಹೇಳಿ ಚಪ್ಪಾಳೆ ಗಿಟ್ಟಿಸಿದರು. ಸತ್ಕಾರ ಸ್ವೀಕರಿಸಿ ಮಾತನಾಡಿದ ಎಸ್‌. ದೇಶಿಕಾಚಾರ್ಯ, ‘ಹೃದಯ ತುಂಬಿ ಬಂದಿದೆ. ಇಂತಹ ಸಂಸ್ಕಾರ ರೂಢಿಸಿಕೊಂಡ ಶಿಷ್ಯೋತ್ತಮರು ಸಿಕ್ಕಿದ್ದು ಧನ್ಯತಾಭಾವ ಮೂಡಿಸಿದೆ’ ಎಂದು ಭಾವುಕರಾಗಿ ಹೇಳಿದರು.

ಕಾಲೇಜಿನ ದಿನಗಳ ನಂತರದ ಬದುಕನ್ನು ಪ್ರತಿಯೊಬ್ಬ ಹಳೆಯ ವಿದ್ಯಾರ್ಥಿಯೂ ಹಂಚಿಕೊಂಡರು. ಬಹುತೇಕರು ಬ್ಯಾಂಕ್‌ ಉದ್ಯೋಗಿಗಳಾಗಿ ನಿವೃತ್ತರಾದರೆ, ಅವರ ಮಕ್ಕಳು ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ವಿವರ ಹೊರಬೀಳುತ್ತಿತ್ತು. ‘ಒಬ್ಬರಂತೂ ಮಗನಿಗೆ ಕನ್ಯೆ ಸಿಗುತ್ತಿಲ್ಲ, ನಿಮ್ಮಲ್ಲಿದ್ದರೆ ಹೇಳಿ’ ಎಂದು ಸಂಬಂಧ ಬೆಳೆಸಲೂ ಮುಂದಡಿ ಇಟ್ಟರು.

ಬಹುತೇಕರು ಅಜ್ಜಂದಿರಾದ ಖುಷಿ ಹಂಚಿಕೊಂಡರು. ಕಾರ್ಯಕ್ರಮದ ಕೊನೆಗೆ ಎಲ್ಲರೂ ಒಟ್ಟಾಗಿ ಫೋಟೊ ತೆಗೆಸಿಕೊಂಡರು. 1973ರಲ್ಲಿ ತೆಗೆಸಿಕೊಂಡ ಗ್ರೂಪ್‌ ಫೋಟೊದ ಪ್ರತಿ ಸಹ ಎಲ್ಲರ ಕೈಯಲ್ಲಿತ್ತು.
*
ವಿಜ್ಞಾನದ ಪ್ರಯೋಗಗಳನ್ನು ನಮ್ಮ ಗುರುಗಳು ಮಜ್ಜಿಗೆ ಹುಳಿ ಸೇರಿದಂತೆ ಅಡುಗೆ ಪದಾರ್ಥಗಳಿಗೆ ಹೋಲಿಸಿ ಹೇಳಿದ್ದರಿಂದ ಆ ಪ್ರಯೋಗಗಳು ನಮ್ಮ ಮನದಾಳದಲ್ಲಿ ಅಚ್ಚೊತ್ತಿ ನಿಂತಿವೆ.

ವೈಎಸ್‌ವಿ ದತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT