ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಿನ ದಾರಿಯಲ್ಲಿ ಪ್ರೀತಿಯ ಹುಡುಕಾಟ

ವನ್ಯಜೀವಿ ಸಂಶೋಧಕ ಅರ್ಜುನ್ ಶ್ರೀವತ್ಸ ಸಂದರ್ಶನ
Last Updated 20 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನಿಮ್ಮನ್ನು ನೀವು ಪುಟ್ಟದಾಗಿ ಹೇಗೆ ಪರಿಚಯಿಸಿಕೊಳ್ಳುವಿರಿ?
ನಾನೊಬ್ಬ ವನ್ಯಜೀವಿ ಸಂಶೋಧಕ, ವನ್ಯಜೀವಿಗಳ ಜೀವಶಾಸ್ತ್ರ ಹಾಗೂ ಸಂರಕ್ಷಣೆ ವಿಷಯದಲ್ಲಿ ಎಂ.ಎಸ್‌ಸಿ ಮಾಡಿರುವೆ. ಕಳೆದ ಆರು ವರ್ಷಗಳಿಂದ ವನ್ಯಜೀವಿಗಳ ಸಂಶೋಧನೆಯಲ್ಲಿ ಪಾಲ್ಗೊಳ್ಳುತ್ತಿರುವೆ. ಚಿತ್ರಕಲೆ ನನ್ನ ಅಭಿವ್ಯಕ್ತಿ ಮಾಧ್ಯಮ. ಅದನ್ನು ನಾನೇನೂ ಶಾಸ್ತ್ರೀಯವಾಗಿ ಕಲಿಯಲಿಲ್ಲ. ಕಾಡು ಮತ್ತು ಕಲೆ ನನ್ನ ಬದುಕಿನಲ್ಲಿ ಹಾಸುಹೊಕ್ಕಾಗಿದೆ.

ಕಾಡಿನ ಮೋಹ ಬೆಳೆದದ್ದು ಹೇಗೆ? ಏಕೆ?
ಚಿಕ್ಕಂದಿನಿಂದಲೂ ವನ್ಯಜೀವಿಗಳ ಬಗ್ಗೆ ಪ್ರೀತಿಯಿತ್ತು. ಶಾಲೆಯ ನೇಚರ್ ಕ್ಲಬ್‌ನಿಂದ 2002ರಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಪ್ರವಾಸ ಹೋಗಿದ್ದೆ. ಆಗ ನನಗೆ 12 ವರ್ಷ. ಕಾಡಿನಲ್ಲಿ ಆನೆ ನೋಡಿದ್ದು ಅದೇ ಮೊದಲು. ನನ್ನ ಬದುಕಿನ ಉಳಿದ ವರ್ಷಗಳನ್ನು ಪ್ರಾಣಿಗಳೊಂದಿಗೇ ಕಳೆಯಬೇಕು ಎಂದು ನಿರ್ಧರಿಸಿದೆ. ನಂತರದ ದಿನಗಳಲ್ಲಿ ವನ್ಯಜೀವಿ ಸಂಶೋಧನೆಗಳಲ್ಲಿ ಭಾಗವಹಿಸಿದೆ. ನನ್ನೊಳಗಿನ ಪ್ರಾಣಿ ಪ್ರೀತಿ ಅದೆಷ್ಟೋ ಪಟ್ಟು ಹೆಚ್ಚಾಯಿತು.

ಚಿತ್ರಕಲೆ ಕಲಿತದ್ದು ಹೇಗೆ? ಎಲ್ಲಿ? ಅದರಿಂದ ಆಗಿರುವ ಪ್ರಯೋಜನವೇನು?
ಮೊದಲೇ ಹೇಳಿದಂತೆ ನಾನು ಚಿತ್ರಕಲೆಗಾಗಿ ಯಾವುದೇ ತರಬೇತಿ ಪಡೆದಿಲ್ಲ. ಕಲೆಯನ್ನು ಇಷ್ಟಪಟ್ಟೆ, ಅಭ್ಯಾಸ ಮಾಡಿದೆ, ಕಲಾವಿದನಾದೆ. ತೈಲಚಿತ್ರ, ಎಚಿಂಗ್, ಚುಕ್ಕಿಚಿತ್ರದ ತಂತ್ರಗಳನ್ನು ಅನುಸರಿಸಿದೆ. ಇತ್ತೀಚೆಗೆ ಡಿಜಿಟಲ್ ಆರ್ಟ್ ಮತ್ತು ಕಾರ್ಟೂನ್

ಬೈನ್ಯಾಕ್ಯುಲರ್‌ನಲ್ಲಿ ದೃಷ್ಟಿ ನೆಟ್ಟು ನಿಂತರೆ ತನ್ನನ್ನೇ ಮರೆತು ಪ್ರಕೃತಿಯಲ್ಲಿ ಲೀನನಾಗುವ ಈ ಯುವಕನ ಹೆಸರು ಅರ್ಜುನ್ ಶ್ರೀವತ್ಸ. ಈಗಿನ್ನೂ 26ರ ಹೊಸ್ತಿಲಿನಲ್ಲಿರುವ ಈತನ ಮನದ ತುಂಬಾ ಕಾಡಿನ ಕನಸು, ವನ್ಯಜೀವಿಗಳನ್ನು ಉಳಿಸಬೇಕೆಂಬ ಆಸೆ. ಪರಿಸರ ಸಂಶೋಧನೆ, ವನ್ಯಜೀವಿ ಸಂರಕ್ಷಣೆಗಾಗಿ ಜೀವನ ಮೀಸಲಾಗಿಡಲು ಸಿದ್ಧ ಎನ್ನುವ ಈ ಕಾಡಿನ ಕಡುಮೋಹಿಗೆ ‘ಸ್ಯಾಂಕ್ಚುಯರಿ ಏಷ್ಯಾ’ ಸಂಸ್ಥೆಯ ಯುವ ಪರಿಸರವಾದಿ ಗೌರವ ದೊರೆತಿದೆ. ‘ಕಾಡು ಪ್ರಾಣಿ ಉಳಿಸೋದು ಅಂದ್ರೆ ಕಾಡಂಚಿನ ಜನರಿಗೆ ನಷ್ಟ ಮಾಡೋದಲ್ಲ. ವನ್ಯಜೀವಿಗಳನ್ನು ಉಳಿಸಬೇಕೆನ್ನುವ ಚಿಂತನೆ ನಮ್ಮ ದೇಶದ ಪರಂಪರೆಯಲ್ಲಿಯೇ ಹಾಸುಹೊಕ್ಕಾಗಿದೆ’ ಎಂಬ ಹೊಳಹಿನೊಂದಿಗೆ ಪರಿಸರ ಸಂರಕ್ಷಣೆಯ ವಾದ ಮುಂದಿಡುವ ಬೆಂಗಳೂರು ಮೂಲದ ಈ ಯುವ ವಿಜ್ಞಾನಿ ಕಾಡು, ಕಾಡು ಪ್ರಾಣಿ, ಪರಿಸರ, ನದಿ, ದೇವತೆ, ಪುರಾಣ, ಜೀವಶಾಸ್ತ್ರ, ಅರ್ಥಶಾಸ್ತ್ರ, ಕಾಡಿನಂಚಿನ ಜನ, ಪ್ರವಾಸೋದ್ಯಮ, ಶಿಕ್ಷಣ, ಚಿತ್ರಕಲೆ ಹೀಗೆ ಹಲವು ವಿಷಯಗಳ ಬಗ್ಗೆ ಆಸಕ್ತರು. ಪ್ರಶಸ್ತಿಯ ನೆಪದಲ್ಲಿ ‘ಸಾಪ್ತಾಹಿಕ ಪುರವಣಿ’ಗಾಗಿ ಅರ್ಜುನ್‌ ಶ್ರೀವತ್ಸ ಅವರ ಸಂದರ್ಶನ.

ತಂತ್ರಗಳನ್ನು ಪ್ರಯೋಗಿಸುತ್ತಿದ್ದೇನೆ.
ಒಬ್ಬ ಜೀವ ವಿಜ್ಞಾನಿಯಾಗಿ ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳುವುದು ಎಷ್ಟೋ ಮುಖ್ಯವೋ, ಅದನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವುದೂ ಅಷ್ಟೇ ಮುಖ್ಯ ಎಂದು ಭಾವಿಸಿರುವೆ. ಬಹುತೇಕ ವೈಜ್ಞಾನಿಕ ಸಂಶೋಧನೆಗಳು ಜನರನ್ನು ತಲುಪುವುದೇ ಇಲ್ಲ. ನಮ್ಮ ದೇಶದ ಸಂಶೋಧಕರು ಅದ್ಭುತ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಲ್ಲ.

ಸಂಶೋಧಕ–ಸಾಮಾನ್ಯ ಜನರ ನಡುವೆ ಇರುವ ಅಂತರ ತುಂಬಲು ಕಲೆಯನ್ನು ನಾನು ಮಾಧ್ಯಮವಾಗಿ ಬಳಸುತ್ತಿದ್ದೇನೆ. ಇದೇ ಉದ್ದೇಶಕ್ಕಾಗಿ ಫೇಸ್‌ಬುಕ್‌ (facebook.com/pocket.science.india) ಪುಟ ಆರಂಭಿಸಿರುವೆ. ಅದರಲ್ಲಿ ವೈಜ್ಞಾನಿಕ ಅಧ್ಯಯನದಿಂದ ಕಂಡುಕೊಂಡ ಪ್ರಾಣಿ ಪ್ರಪಂಚದ ಕೌತುಕಗಳನ್ನು ಕಾರ್ಟೂನ್ ರೂಪದಲ್ಲಿ ಪ್ರಕಟಿಸುತ್ತಿರುವೆ. ಪರಿಸರ ಸಂರಕ್ಷಣೆಗಾಗಿ ದುಡಿಯುತ್ತಿರುವ ಕೆಲವು ಸಂಸ್ಥೆಗಳು ನನ್ನ ಕಾರ್ಟೂನ್‌ಗಳನ್ನು ಪ್ರಾದೇಶಿಕ ಭಾಷೆಗೆ ಅನುವಾದಿಸಿ ಬಳಸಿಕೊಂಡಿವೆ.

ಕಾಡಿಗೆ ಹತ್ತಿರ ಇರುವ ಹಳ್ಳಿಗಳ ಶಾಲೆಯ ಮಕ್ಕಳಲ್ಲಿ ತಿಳಿವಳಿಕೆ ಮೂಡಿಸಲು, ಪರಿಸರ ಸಂಶೋಧನೆಗಾಗಿ ನಿಧಿ ಸಂಗ್ರಹಿಸಲು ಹಾಗೂ ಅರಣ್ಯ ಇಲಾಖೆಯ ಮಾಹಿತಿ ಕೇಂದ್ರಗಳಲ್ಲಿ ಪೋಸ್ಟರ್‌ಗಳಾಗಿಯೂ ನನ್ನ ಕಾರ್ಟೂನ್‌ಗಳು ಬಳಕೆಯಾಗಿವೆ.

‘ನಾನು ಇದನ್ನು ಸಾಧಿಸಲೇ ಬೇಕು...’ ಎಂದುಕೊಂಡ ಯಾವ ಕನಸು ಹಂಚಿಕೊಳ್ಳಲು ಇಷ್ಟಪಡುವಿರಿ ನನಗೆ ಇಂಥದ್ದೇ ಸಾಧಿಸಬೇಕು ಅನ್ನೋ ಒಂದೇ ಒಂದು ಗುರಿ ಇಲ್ಲ; ಆದರೆ ಜೀವನದಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಬೇಕಾದಷ್ಟು ಆಲೋಚನೆಗಳಿವೆ. ಸದ್ಯಕ್ಕೆ ನನ್ನ ಪಿಎಚ್.ಡಿ ಮುಗಿಸಬೇಕು. ನಂತರ ಈ ದೇಶದಲ್ಲಿ ವಿಜ್ಞಾನದ ಬಗ್ಗೆ ಪ್ರೀತಿ ಬೆಳೆಯುವುದಕ್ಕೆ, ವನ್ಯಜೀವಿಗಳ ರಕ್ಷಣೆಗೆ, ಸಹಜವಾಗಿ ಇರುವ ಪ್ರಾಣಿ, ವನ ಸಂಪತ್ತನ್ನು ಉಳಿಸುವುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವ ಆಸೆ ಇದೆ. ವನ್ಯಜೀವಿ ವಿಜ್ಞಾನಿಯಾಗಿ ಮತ್ತು ಕಲಾವಿದನಾಗಿ ನನಗಿರುವ ಕೌಶಲವನ್ನು ಬಳಸಿ ನನ್ನಿಂದ ಏನೆಲ್ಲಾ ಸಾಧ್ಯವೋ ಅದೆಲ್ಲವನ್ನೂ ಮಾಡುತ್ತೇನೆ.

ನಿಮ್ಮ ಈವರೆಗಿನ ಸಾಧನೆಯನ್ನು ಹೇಗೆ ಗುರ್ತಿಸುವಿರಿ?
ವನ್ಯಜೀವಿ ಸಂಶೋಧನೆಯ ನನ್ನ ಮೊದಲ ಅನುಭವ 2008ರಲ್ಲಿ ಬಿಎಸ್‌.ಸಿ ಮಾಡುವ ಸಮಯದ್ದು. ಆ ದಿನಗಳಲ್ಲಿ ಆಗುಂಬೆಯ ಮಳೆಕಾಡು ಸಂಶೋಧನಾ ಕೇಂದ್ರದಲ್ಲಿ (ರೇನ್ ಫಾರೆಸ್ಟ್ ರೀಸರ್ಚ್ ಸ್ಟೇಷನ್) ಸ್ವಯಂ ಸೇವಕನಾಗಿ, ರೇಡಿಯೋ ಟ್ಯಾಗ್ ಮಾಡಿದ್ದ ಕಾಳಿಂಗ ಸರ್ಪದ ಬೆನ್ನು ಹತ್ತಿದ್ದೆ. ರಾಜಸ್ತಾನದ ಚಂಬಲ್ ಕಣಿವೆಯಲ್ಲಿರುವ ಅಳಿವಿನಂಚಿನ ಘರಿಯಾಲ್ (ಮೀನು ತಿನ್ನುವ ಮೊಸಳೆ) ಗಣತಿಯಲ್ಲಿ ಪಾಲ್ಗೊಂಡಿದ್ದೆ.

ವನ್ಯಜೀವಿ ಸಂರಕ್ಷಣಾ ಸಂಶೋಧನೆಗೆ 2009ರಲ್ಲಿ ಪ್ರವೇಶ ಪಡೆದೆ. ಸಂಶೋಧಕಿ ಡಾ. ಕೃತಿ ಕಾರಂತ್ ಅವರ ಸ್ನಾತಕೋತ್ತರ ಅಧ್ಯಯನದಲ್ಲಿ ಸಹಾಯಕನಾಗಿ ಕೆಲಸ ಮಾಡಿದೆ. ಈ ವೇಳೆ ನಾಗರಹೊಳೆ ಸುತ್ತಮುತ್ತಲ ಸುಮಾರು 200 ಮಂದಿಯನ್ನು ಸಂದರ್ಶನ ಮಾಡಿದ್ದೆ. ಸ್ಥಳೀಯರ ಸಾಮಾಜಿಕ – ಆರ್ಥಿಕ ಸ್ಥಿತಿಗತಿ, ಪರಿಸರ ಪ್ರವಾಸೋದ್ಯಮದ ಪ್ರಭಾವ, ವನ್ಯಜೀವಿಗಳೊಂದಿಗೆ ಮುಖಾಮುಖಿ ಮತ್ತು ಅರಣ್ಯ ಸಂರಕ್ಷಣೆಯ ಸ್ಥಳೀಯ ಗ್ರಹಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ರಣಥಂಬೋರ್, ಸಾರಿಸ್ಕಾ, ಡಾಂಡೇಲಿ–ಅಣಶಿ, ಭದ್ರಾ, ನಾಗರಹೊಳೆ ಮತ್ತು ಪೆರಿಯಾರ್ ರಾಷ್ಟ್ರೀಯ ಉದ್ಯಾನಗಳ ಅಂಚಿನ ಹಳ್ಳಿಗಳಲ್ಲೂ ತಿರುಗಾಡಿ ಇಂಥದ್ದೇ ಮಾಹಿತಿ ಕಲೆಹಾಕಿದೆ. ಈ ಸಂಶೋಧನೆಯ ಸಂದರ್ಭ ವನ್ಯಜೀವಿಗಳ ಮೇಲೆ ಪ್ರವಾಸೋದ್ಯಮದ ಪರಿಣಾಮ, ರಾಷ್ಟ್ರೀಯ ಉದ್ಯಾನಗಳ ಸುತ್ತಲಿನ ಭೂಮಿಯ ಉಪಯೋಗದ ಮಾದರಿಯ ಬಗ್ಗೆ ಹಲವು ಇಣುಕುನೋಟ ದೊರೆಯಿತು.

2009ರಿಂದ ವೈಲ್ಡ್‌ಲೈಫ್ ಕನ್ಸರ್ವೇಷನ್ ಸೊಸೈಟಿಯಲ್ಲಿ ಸ್ವಯಂಸೇವಕನಾಗಿ ಕೆಲಸ ಮಾಡುತ್ತಾ ಪಶ್ಚಿಮಘಟ್ಟಗಳಲ್ಲಿ ಸಾರಂಗ, ಕಾಡುಕೋಣ, ಆನೆಗಳನ್ನು ಅಭ್ಯಸಿಸುತ್ತಿದ್ದೇನೆ. 2010ರ ಜನವರಿಯಲ್ಲಿ ಮಧ್ಯಪ್ರದೇಶದ ಕಾನ್ಹ ಹುಲಿ ಮೀಸಲು ಅರಣ್ಯದ ಸುತ್ತಮುತ್ತ ಅರಣ್ಯ ಸಂಪತ್ತು ಕಡಿಮೆಯಾಗಿರುವ ಬಗ್ಗೆ ಅಧ್ಯಯನ ನಡೆಸಿದೆ. ಕಳೆದ ಜೂನ್ 2012ರಲ್ಲಿ ವನ್ಯಜೀವಿ ಜೀವಶಾಸ್ತ್ರ ಮತ್ತು ಸಂರಕ್ಷಣೆಯಲ್ಲಿ ಎಂ.ಎಸ್‌ಸಿ ಪದವಿ ಪಡೆದೆ. ಈ ವೇಳೆ ಪಶ್ಚಿಮಘಟ್ಟದ ಸೀಳುನಾಯಿಗಳ ಬಗ್ಗೆಯೇ ವಿಶೇಷ ಅಧ್ಯಯನ ನಡೆಸಿದ್ದೆ. ಕಳೆದ ಎರಡು ವರ್ಷಗಳಿಂದ ವೈಲ್ಡ್ ಲೈಫ್ ಕನ್ಸರ್ವೇಷನ್ ಸೊಸೈಟಿ ಇಂಡಿಯಾದಲ್ಲಿ ಡಾ. ಉಲ್ಲಾಸ ಕಾರಂತರ ಮಾರ್ಗದರ್ಶನದಲ್ಲಿ ಸೀಳುನಾಯಿ, ಚಿರತೆ, ಹುಲಿ, ಕರಡಿ ಸೇರಿದಂತೆ ಪಶ್ಚಿಮಘಟ್ಟಗಳ ದೊಡ್ಡ ಸಸ್ತನಿಗಳ ಬಗ್ಗೆ ಕೆಲಸ ಮಾಡುತ್ತಿದ್ದೇನೆ.

ವನ್ಯಜೀವಿ ಸಂರಕ್ಷಣೆ ಕುರಿತು ಈವರೆಗೆ ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಲೇಖನಗಳನ್ನು ಹಾಗೂ ಭಾರತ, ಚೀನಾ ಮತ್ತು ಮಲೇಷ್ಯಾಗಳಲ್ಲಿ ನಡೆದ ವನ್ಯಜೀವಿ ಸಂರಕ್ಷಣ ಕಾರ್ಯಾಗಾರಗಳಲ್ಲಿ ನನ್ನ ವಿಚಾರಗಳನ್ನು ಮಂಡಿಸಿದ್ದೇನೆ. ಸ್ಯಾಂಕ್ಚುರಿ ಏಷ್ಯಾ, ಕನ್ಸವೇರ್ಷನ್ ಇಂಡಿಯಾ ಸೇರಿದಂತೆ ಹಲವು ಪತ್ರಿಕೆ ಮತ್ತು ಅಂತರ್ಜಾಲ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಹತ್ತಾರು ಲೇಖನಗಳಿಗೆ ಸಹ ಲೇಖಕನಾಗಿ ಕೆಲಸ ಮಾಡಿದ್ದೇನೆ.

ನಿಮ್ಮ ಪ್ರಕಾರ ಭಾರತದ ವನ್ಯಜೀವಿ ಜಗತ್ತಿಗೆ ಇರುವ ದೊಡ್ಡ ಆಪತ್ತು ಏನು?
ವೈವಿಧ್ಯ ಮತ್ತು ವನ್ಯಜೀವಿಗಳ ವಿಪುಲತೆಯ ದೃಷ್ಟಿಯಿಂದ ಭಾರತ ಜಗತ್ತಿನ ಅತ್ಯುತ್ತಮ ರಾಷ್ಟ್ರಗಳಲ್ಲಿ ಒಂದು. ಅನೇಕರಿಗೆ ಈ ಸಂಗತಿ ತಿಳಿದಿಲ್ಲ. ನಮ್ಮ ದೇಶದಲ್ಲಿ ಸುಮಾರು 500 ಬಗೆಯ ಸಸ್ತನಿಗಳು, 1000ಕ್ಕೂ ಹೆಚ್ಚು ಜಾತಿಯ ಪಕ್ಷಿಗಳಿವೆ. ಸರೀಸೃಪಗಳು ಮತ್ತು ಉಭಯವಾಸಿಗಳ ವೈವಿಧ್ಯತೆಯೂ ಗಮನಾರ್ಹ ಮಟ್ಟದಲ್ಲಿದೆ. ಆದರೆ, ‘ಅಭಿವೃದ್ಧಿ’ಯ ಬೇಡಿಕೆಯಿಂದಾಗಿ ದೇಶದ ಪ್ರಕೃತಿ ಶ್ರೀಮಂತಿಕೆಯನ್ನು ಹಾಳುಮಾಡುತ್ತಿದ್ದೇವೆ. ದೇಶದ ಶೇ 20ಕ್ಕೂ ಕಡಿಮೆ ಭೂಪ್ರದೇಶದಲ್ಲಿ ಕಾಡು ಇದೆ. ಇದರಲ್ಲಿಯೂ ಕೇವಲ ಶೇ 3ರಿಂದ 4ರಷ್ಟನ್ನು ಮಾತ್ರ ರಾಷ್ಟ್ರೀಯ ಉದ್ಯಾನ ಅಥವಾ ವನ್ಯಜೀವಿ ಸಂರಕ್ಷಣಾ ತಾಣವಾಗಿ ಘೋಷಿಸಿ, ರಕ್ಷಿಸಲಾಗುತ್ತಿದೆ.

ನಿಯಂತ್ರಣವಿಲ್ಲದ ಕಾಡು ನಾಶ, ಅಭಿವೃದ್ಧಿಯ ತಪ್ಪು ಕಲ್ಪನೆ, ಅಕ್ರಮ ಗಣಿಗಾರಿಕೆ, ಹುಲ್ಲುಗಾವಲುಗಳನ್ನು ನೆಡುತೋಪುಗಳನ್ನಾಗಿ ಮಾರ್ಪಡಿಸುತ್ತಿರುವುದು, ನೈಸರ್ಗಿಕವಾಗಿ ಸೂಕ್ಷ್ಮವಾಗಿರುವ ಸಮುದ್ರ ತೀರಗಳನ್ನು ಬಂದರುಗಳಾಗಿ ಮರು ರೂಪಿಸುತ್ತಿರುವುದು, ನದಿ ಜೋಡಣೆ ಪ್ರಯತ್ನಗಳು ಪ್ರಾಣಿಗಳ ಆವಾಸ ಸ್ಥಾನವನ್ನು ಹಾಳು ಮಾಡುತ್ತವೆ. ಪರಿಸರ ಒಮ್ಮೆ ಹಾಳಾದರೆ ಅದನ್ನು ಮತ್ತೆ ಮೊದಲಿನಂತೆ ಮಾಡುವುದು ಅಸಾಧ್ಯ.

ಮನುಷ್ಯನೊಂದಿಗೆ ಪ್ರಾಣಿಗಳ ಸಂಘರ್ಷ ಹೆಚ್ಚುತ್ತಿದೆ. ಅನೇಕ ಕಡೆ ಪ್ರಾಣಿಗಳನ್ನು ಹಿಡಿದು ಮೃಗಾಲಯಗಳಿಗೆ ಬಿಡಬೇಕು ಅಥವಾ ಅವುಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂಬ ವಾದ ಕೇಳಿ ಬರುತ್ತಿದೆ. ಮನುಷ್ಯನೊಂದಿಗೆ ವನ್ಯಜೀವಿಗಳ ಸಹಬಾಳ್ವೆ ಸಾಧ್ಯವಿಲ್ಲವೇ?

ವನ್ಯಜೀವಿಗಳನ್ನು ಉಳಿಸಿಕೊಳ್ಳಬೇಕು ಎಂಬ ವಿಚಾರದಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಅವನ್ನು ರಕ್ಷಿಸುವ ಭರದಲ್ಲಿ ಮನುಷ್ಯನ ಜೀವವನ್ನು ಅಪಾಯಕ್ಕೆ ದೂಡಬಾರದು. ಮಾನವನೊಂದಿಗೆ ಕಾಡುಪ್ರಾಣಿಗಳು ಮುಖಾಮುಖಿಯಾಗುವ ಎಲ್ಲ ಸಂದರ್ಭಗಳೂ ಅಪಾಯಕಾರಿ ಅಲ್ಲ. ಮನುಷ್ಯ–ಕಾಡುಪ್ರಾಣಿ ಮುಖಾಮುಖಿಯಲ್ಲಿ ಮನುಷ್ಯನ ಜೀವ ಹೋಗುವ ಸಾಧ್ಯತೆಯೂ ಕಡಿಮೆ. ಆದರೆ ಕಾಡುಪ್ರಾಣಿಗಳಿಂದ ಹಾನಿಗೊಳಗಾದವರಿಗೆ ತಕ್ಕ ಪರಿಹಾರ ತಕ್ಷಣ ಸಿಗುವಂತಾಗಬೇಕು. ಅರಣ್ಯದಂಚಿನ ಜನರ ಮನಸ್ಸಿಗೆ ವನ್ಯಜೀವಿಗಳು ನಮ್ಮನ್ನು ಕಾಡುವ ಪೀಡೆಗಳಲ್ಲ ಎಂಬ ಖಾತ್ರಿ ಸಿಕ್ಕಾಗ ಸಂರಕ್ಷಣೆಯ ಮನೋಭಾವ ಬೆಳೆಯುತ್ತದೆ. ಮಾನವ–ವನ್ಯಜೀವಿಗಳ ಸಹಬಾಳ್ವೆ ಸಾಧ್ಯವಾಗುವುದಾದರೆ ಜಗತ್ತಿನಲ್ಲಿ ಭಾರತಕ್ಕಿಂತ ಉತ್ತಮ ದೇಶ ನನಗೆ ಎಲ್ಲಿಯೂ ಕಾಣಿಸುವುದಿಲ್ಲ.

ಸಂಸ್ಕೃತಿಗೂ–ವನ್ಯಜೀವಿ ಸಂರಕ್ಷಣೆಗೂ ಇರುವ ಸಂಬಂಧವೇನು?
ಕುಬೇರನ ವಾಹನ ಮುಂಗುಸಿ, ವಾಯದೇವನ ವಾಹನ ಕೃಷ್ಣಮೃಗ, ಲಕ್ಷ್ಮಿಯ ವಾಹನ ಗೂಬೆ, ಯಮನ ವಾಹನ ಕಾಡುಕೋಣ, ಪಾರ್ವತಿಯ ವಾಹನ ಹುಲಿ– ಹೀಗೆ ಎಲ್ಲ ದೇವತೆಗಳಿಗೂ ಒಂದೊಂದು ಪ್ರಾಣಿ ವಾಹನವಾಗಿದೆ. ಆಯಾ ದೇವರನ್ನು ಪೂಜಿಸುವವರ ಪಾಲಿಗೆ ಆ ಪ್ರಾಣಿ ಪವಿತ್ರವಾಗಿದೆ. ಆನೆಯನ್ನು ಸ್ವತಃ ಗಣೇಶನೆಂದು ಭಾವಿಸುವವರ ಸಂಖ್ಯೆಯೂ ದೊಡ್ಡದಿದೆ. ನಮ್ಮ ಕಣ್ಣಿಗೆ ಪ್ರಾಣಿಗಳು ಕೇವಲ ಮಾಂಸ ಹೊತ್ತ ದೇಹದಂತೆ ಕಾಣುವುದಿಲ್ಲ. ಅದಕ್ಕೆ ಮೀರಿದ ಅಧ್ಯಾತ್ಮದ ಸಂಬಂಧ ಬೆಸೆದುಕೊಂಡಿರುವುದು ಬೇಟೆಗೆ ಸಂಸ್ಕೃತಿ ವಿಧಿಸಿದ ಕಡಿವಾಣ.

ಭೌಗೋಳಿಕವಾಗಿ ಮತ್ತು ಪಾರಿಸರಿಕವಾಗಿ ಭಾರತವು ಆಗ್ನೇಯ ಏಷ್ಯಾದ ದೇಶಗಳನ್ನು ಹೋಲುತ್ತದೆ. ಆದರೆ ವನ್ಯಜೀವಿಗಳ ವಿಚಾರದಲ್ಲಿ ನಾವು ಇತರರಿಗಿಂತ ಉತ್ತಮ ಸ್ಥಾನದಲ್ಲಿದ್ದೇವೆ. ಹತ್ತಿರದ ಇಂಡೋನೇಷ್ಯಾ, ಮಲೇಷ್ಯಾ, ಸುಮಾತ್ರಾ ಅಥವಾ ಥಾಯ್ಲೆಂಡ್‌ನಲ್ಲಿ ಈಗಾಗಲೇ ಕಾಡು ಪ್ರಾಣಿಗಳನ್ನು ಬೇಟೆಯಾಡಿ ನಾಶ ಮಾಡಲಾಗಿದೆ. ಸಹಿಷ್ಣುತೆ ಮತ್ತು ವನ್ಯಜೀವಿಗಳನ್ನು ಪೂಜ್ಯಭಾವದಿಂದ ನೋಡಲು ಕಲಿಸುವ ನಮ್ಮ ಸಂಸ್ಕೃತಿ ಅವುಗಳ ಸಂರಕ್ಷಣೆಗೆ ಪೂರಕವಾಗಿದೆ. ಇದರ ಜೊತೆಗೆ ಬೇಟೆ ನಿಯಂತ್ರಣ ಮತ್ತು ಕಾಡು ಕಾಯುವಲ್ಲಿ ನಮ್ಮ ಅರಣ್ಯ ಇಲಾಖೆ ಸಿಬ್ಬಂದಿಯ ಕಳೆದ 40 ವರ್ಷಗಳ ಪರಿಶ್ರಮವೂ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗಲು ಮತ್ತೊಂದು ಕಾರಣ.

ವನ್ಯಜೀವಿ ಸಂರಕ್ಷಣೆ ವಿಚಾರದಲ್ಲಿ ಈವರೆಗಿನ ನಿಮ್ಮ ಅನುಭವದಲ್ಲಿ ನೀವು ನೆನಸಿಕೊಳ್ಳಲು ಬಯಸುವ ಮಾನವೀಯ ಘಟನೆ ಯಾವುದು?
2009ರಲ್ಲಿ ನಾನು ನಾಗರಹೊಳೆಯಲ್ಲಿ ವೃದ್ಧೆಯೊಬ್ಬರನ್ನು ಭೇಟಿಯಾಗಿದ್ದೆ. ನಾನು ಅಲ್ಲಿಗೆ ಹೋದ ಹಿಂದಿನ ದಿನವಷ್ಟೇ ಅವರ ಎರಡು ಗುಂಟೆ ಗದ್ದೆಯಲ್ಲಿದ್ದ ಭತ್ತದ ಬೆಳೆಯನ್ನು ಆನೆಗಳು ತಿಂದು ಹಾಕಿದ್ದವು. ವಿಧವೆ ಮಗಳು ಮತ್ತು ಮೊಮ್ಮಗಳೊಂದಿಗೆ ವಾಸಿಸುತ್ತಿದ್ದ ಅವರು ನನ್ನೊಂದಿಗೆ ಮಾತನಾಡುವಾಗ ದುಃಖದ ಕಟ್ಟೆಯೊಡೆದು ಕಣ್ಣೀರಿಟ್ಟರು. ಅಂಥ ಸಂದರ್ಭದಲ್ಲೂ ಅವರು ಹೇಳಿದ ಒಂದು ಮಾತು ನನ್ನಲ್ಲಿ ಇಂದಿಗೂ ಬೆಚ್ಚಗೆ ಕುಳಿತಿದೆ.

ನನ್ನ ಪ್ರಶ್ನೆ ಹೀಗಿತ್ತು– ‘ಇಂಥ ಸ್ಥಿತಿಯನ್ನು ನೀವು ಹೇಗೆ ನಿಭಾಯಿಸುವಿರಿ?’
ಆಕೆ ಕೊಟ್ಟ ಉತ್ತರ: ‘ದೇವರು ನಮ್ಮ ಬದಲು ಪ್ರಾಣಿಗಳಿಗೆ ಊಟ ಕೊಡಬೇಕೆಂದು ನಿರ್ಧರಿಸಿದ್ದಾನೆ. ಇದರರ್ಥ ಈಗಲೂ ನಾವು ಅವನ ಸೇವೆ ಮಾಡುತ್ತಿದ್ದೇವೆ’.

ಯೋಚಿಸಿದಷ್ಟೂ ಅರ್ಥ ಹೊಮ್ಮಿಸುವ ಮಾತು ಅದು. ಮಕ್ಕಳಲ್ಲಿ/ಸಾರ್ವಜನಿಕರಲ್ಲಿ ವ್ಯವಸ್ಥಿತವಾಗಿ, ಪರಿಣಾಮಕಾರಿಯಾಗಿ ಪರಿಸರ ಜಾಗೃತಿ ಮೂಡಿಸಲು ನೀವು ನೀಡುವ ಸಲಹೆಗಳು...

ನಿಸರ್ಗ ಮತ್ತು ಕಾಡುಪ್ರಾಣಿಗಳ  ಹೆಚ್ಚು ಮಾಹಿತಿ ನೀಡುವ ಪಠ್ಯಕ್ರಮ ಶಾಲಾ ಶಿಕ್ಷಣದಲ್ಲಿ ಜಾರಿಯಾಗಬೇಕು. ವನ್ಯಜೀವಿಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಆಸ್ವಾದಿಸಲು ಅರಣ್ಯ ಇಲಾಖೆ ಇನ್ನೂ ಕೆಲ ಸೌಕರ್ಯ ಒದಗಿಸಬೇಕು. ಆಫ್ರಿಕಾ ಅಥವಾ ದಕ್ಷಿಣ ಅಮೆರಿಕದ ವನ್ಯಜೀವಿಗಳನ್ನು ಕೇಂದ್ರೀಕರಿಸುವ ಬದಲು ಭಾರತದ ವನ್ಯಜೀವಿಗಳ ಬಗ್ಗೆ ಮಾಹಿತಿ ಇರುವ ಸಾಕ್ಷ್ಯಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಬೇಕು.

ಪರಿಸರ ಮತ್ತು ಅಭಿವೃದ್ಧಿ ಪರಸ್ಪರ ವಿರುದ್ಧ ಪದಗಳೇ?
ಖಂಡಿತಾ ಇಲ್ಲ. ನಮಗೆಲ್ಲರಿಗೂ ಅಭಿವೃದ್ಧಿಯ ಅಗತ್ಯ ಅರ್ಥವಾಗಿದೆ. ಪರಿಸರ ಪ್ರೇಮಿಗಳು ನಿಜಕ್ಕೂ ಅಭಿವೃದ್ಧಿಯ ವಿರೋಧಿಗಳಲ್ಲ. ಮಹಾ ನಗರಗಳಲ್ಲಿ ಸಂಚಾರ ಸಮಸ್ಯೆಗಳಿವೆ. ಸಣ್ಣ ನಗರ, ಹಳ್ಳಿಗಳಲ್ಲಿ ಕನಿಷ್ಠ ಸೌಕರ್ಯಗಳಿಲ್ಲ. ನಾವು ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ಅದನ್ನು ಬಿಟ್ಟು ಕಲ್ಲಿದ್ದಲಿಗೋಸ್ಕರ ಕಾಡುಗಳನ್ನು ಸವರಿಬಿಟ್ಟರೆ, ನದಿ ಜೋಡಣೆ ಅಂತ ಹೊರಟರೆ ಹೇಗೆ? ಅಭಿವೃದ್ಧಿಗಾಗಿ ಅಳಿದುಳಿದ ಕಾಡು ಕಳೆದುಕೊಳ್ಳುವುದು ಬೇಡ.

ಪರಿಸರ ಪ್ರವಾಸೋದ್ಯಮ ಕುರಿತು ನಿಮ್ಮ ಆಲೋಚನೆ ಏನು?
ರಾಷ್ಟ್ರೀಯ ಉದ್ಯಾನಗಳನ್ನು ತಲುಪುವುದು ಈಗ ಹಿಂದಿಗಿಂತಲೂ ಸುಲಭ. ಕ್ಯಾಮೆರಾ ಮತ್ತು ಇತರ ಫೋಟೊಗ್ರಫಿ ಸಲಕರಣೆಗಳನ್ನು ಕೊಳ್ಳುವಷ್ಟು ಹಣ ಹೆಚ್ಚಿನ ಸಂಖ್ಯೆಯ ಜನರಲ್ಲಿದೆ. ದೇಶದಲ್ಲಿ ವನ್ಯಜೀವಿ ಛಾಯಾಗ್ರಾಹಕರ ಸಂಖ್ಯೆ ದಿಢೀರ್ ಹೆಚ್ಚಾಗಿದೆ. ಪರಿಸರ ಪ್ರವಾಸೋದ್ಯಮಕ್ಕೆ ಪ್ರಾಮುಖ್ಯತೆ ಸಿಗಲು ಇದು ಮುಖ್ಯ ಕಾರಣ. ಒಂದು ದಿನದಲ್ಲಿ ಕಾಡಿನೊಳಗೆ ಇಷ್ಟೇ ಸಂಖ್ಯೆಯ ವಾಹನ, ಪ್ರವಾಸಿಗರು ಹೋಗಬೇಕು ಎಂಬ ನಿಯಮ ನಮ್ಮಲ್ಲಿನ್ನೂ ಬಂದಿಲ್ಲ. ಮಧ್ಯ ಹಾಗೂ ಉತ್ತರ ಭಾರತದ ಕೆಲವು ಕಾಡುಗಳಲ್ಲಿ ತುಂಬ ಸುಲಭವಾಗಿ ಹುಲಿಗಳು ಕಾಣಿಸುತ್ತವೆ. ಆ ಕಾರಣಕ್ಕೆ ಅಲ್ಲಿ ಪರಿಸರ ಪ್ರವಾಸೋದ್ಯಮ ಒಂದು ದೊಡ್ಡ ವ್ಯಾಪಾರವಾಗಿದೆ. ಅಷ್ಟು ಒಂದು ಸಂಖ್ಯೆಯಲ್ಲಿ ವಾಹನಗಳು ಕಾಡಿಗೆ ನುಗ್ಗಿದರೆ ಪ್ರಾಣಿಗಳ ಮೇಲೆ ಒತ್ತಡ ಬೀಳುತ್ತದೆ. ಈ ಸಮಸ್ಯೆಗೆ ನಾವು ಪರಿಹಾರ ಕಂಡುಕೊಳ್ಳಬೇಕು.

ನನ್ನ ಅನುಭವದಲ್ಲೇ ಹೇಳುವುದಾದರೆ, ದೇಶದಲ್ಲಿ ವನ್ಯಜೀವಿ ಪ್ರವಾಸೋದ್ಯಮವನ್ನೇ ಜನ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಅದನ್ನು ಮೊದಲು ಸರಿಪಡಿಸಬೇಕು. ಜನರಿಗೆ ಮೊದಲು ತಿಳಿವಳಿಕೆ ಮೂಡಿಸಬೇಕು. ನಾನು ಮುಂಚೆ ಹೇಳಿದ ಹಾಗೆ, ಹುಲಿ ನೋಡಬೇಕು ಅನ್ನೋದರ ಸುತ್ತಲೇ ಇದೆಲ್ಲ ಹರಡಿಕೊಂಡಿದೆ. ಅರಣ್ಯ ಇಲಾಖೆಯವರು ಒಂದಿಷ್ಟು ಶ್ರಮ ಹಾಕಿ, ಪ್ರವಾಸಿಗರಿಗೆ ಇಂಥ ಸೂಕ್ಷ್ಮ ವಿಚಾರಗಳನ್ನು ತಿಳಿಹೇಳಬೇಕು.

ಹೀಗಿದ್ದರೆ ನಮ್ಮ ದೇಶ ಬಲು ಚೆನ್ನಾಗಿರುತ್ತೆ ಎಂದು ನಿಮಗೆ ಎಂದಾದರೂ ಅನ್ನಿಸಿದ್ದು ಉಂಟೆ? ಹಾಗಿದ್ದರೆ ಅದು ಯಾವುದು?
ನಮ್ಮ ಪರಿಸರ, ಪ್ರಾಣಿಗಳು, ನಿಸರ್ಗವನ್ನು ಉಳಿಸಿಕೊಳ್ಳುವುದಕ್ಕೆ ನಾವು ಆರಿಸಿಕೊಂಡ ಸರ್ಕಾರ ಮತ್ತು ನಮ್ಮ ಜೊತೆಯ ಜನರೊಂದಿಗೇ ಸಂಘರ್ಷಕ್ಕೆ ಇಳಿಯಬೇಕಾದ ಸ್ಥಿತಿ ನೋಡಿದಾಗ ತುಂಬ ಬೇಜಾರಾಗುತ್ತದೆ. ದೇಶದ ನಿಸರ್ಗ ಸಂಪತ್ತಿಗೆ ರಕ್ಷಣೆ ನೀಡುವುದು ಸರ್ಕಾರಗಳಿಗೆ ಕಡ್ಡಾಯ ಎಂಬಂಥ ಸ್ಥಿತಿಗೆ ನಮ್ಮ ದೇಶ ತಲುಪಬೇಕು ಎನ್ನುವುದು ನನ್ನ ಕನಸು.

‘ಸ್ಯಾಂಕ್ಚುರಿ ಏಷ್ಯಾ ವೈಲ್ಡ್‌ಲೈಫ್ ಅವಾರ್ಡ್‌’ನಂಥ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಿದ್ದೀರಿ. ಈ ಪ್ರಶಸ್ತಿ ಘೋಷಣೆಯಾದ ನಂತರ ನಿಮ್ಮಲ್ಲಿ ಏನಾದರೂ ಬದಲಾವಣೆ ಆಗಿದೆಯೇ?
ಇದೊಂದು ಅದ್ಭುತವಾದ ಗೌರವ. ಶ್ರಮವನ್ನು ಗುರ್ತಿಸಿ, ಪ್ರೋತ್ಸಾಹಿಸಿರುವುದು ಖುಷಿ ಕೊಟ್ಟಿದೆ. ಇನ್ನೂ ದೊಡ್ಡ ಕನಸುಗಳನ್ನು ಕಾಣುವುದಕ್ಕೆ, ದೇಶದ ವನ್ಯ ಸಂಪತ್ತಿನ ಸಂರಕ್ಷಣೆಗೆ ಇನ್ನಷ್ಟು ಶ್ರಮ ಹಾಕುವುದಕ್ಕೆ ಈ ಪ್ರಶಸ್ತಿ ಸಹಾಯ ಮಾಡುತ್ತದೆ. ನನ್ನ ಬೆನ್ನಿಗೆ ನಿಂತು ಪ್ರೋತ್ಸಾಹ ನೀಡಿ, ಮಾರ್ಗದರ್ಶನ ಮಾಡಿದ ಡಾ. ಉಲ್ಲಾಸ ಕಾರಂತ, ಡಾ. ಕೃತಿ ಕಾರಂತ ಅವರನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳುವೆ. ನಾನು ಎಲ್ಲರ ಥರದ ಆಫೀಸಿನ ಕೆಲಸಕ್ಕೆ ಜೋತು ಬೀಳದೆ, ಆಸೆ ಪಟ್ಟು ಆಯ್ಕೆ ಮಾಡಿಕೊಂಡ ಕೆಲಸ ಇದು. ಆಯ್ದುಕೊಂಡ ಕೆಲಸದಲ್ಲಿ ನಾನು ಯಶಸ್ವಿಯಾಗಿರುವೆ ಅನ್ನೋದನ್ನ ತಂದೆ–ತಾಯಿ ಗಮನಿಸುತ್ತಿದ್ದಾರೆ.

ವನ್ಯಜೀವಿ ಸಂರಕ್ಷಕರಿಗೆ ಗೌರವ

ದೇಶದಲ್ಲಿ ವನ್ಯಜೀವಿಗಳ ಸಂರಕ್ಷಣೆಗಾಗಿ ಶ್ರಮಿಸುತ್ತಿರುವವರಿಗೆ ಕಳೆದ 15 (2000ನೇ ಇಸವಿ) ವರ್ಷಗಳಿಂದ ‘ಸ್ಯಾಂಕ್ಚುಯರಿ ಏಷ್ಯಾ’ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಓದುಗರು, ಲೇಖಕರು, ವನ್ಯಜೀವಿ ಛಾಯಾಗ್ರಾಹಕರಿಂದ ಪ್ರಶಸ್ತಿಗಾಗಿ ಹೆಸರು ಸೂಚಿಸಲು ಮನವಿ ಮಾಡಲಾಗುತ್ತದೆ. ಆ ನಂತರ ನಾಮಾಂಕಿತರ ಪೈಕಿ ದೇಶದ ಜೀವ ವೈವಿಧ್ಯ ರಕ್ಷಣೆಗಾಗಿ ಅತ್ಯುನ್ನತ ಸೇವೆ ಸಲ್ಲಿಸಿರುವವರನ್ನು ಗೌರವಿಸಲಾಗುತ್ತದೆ.

ಜೀವಮಾನಸೇವಾ ಪ್ರಶಸ್ತಿ, ವನ್ಯಜೀವಿ ಸೇವಾ ಪ್ರಶಸ್ತಿ, ಹಸಿರು ಶಿಕ್ಷಕ ಪ್ರಶಸ್ತಿ, ಯುವ ಪರಿಸರವಾದಿ ಪ್ರಶಸ್ತಿ, ಪರಿಸರವಾದಿ ಪ್ರಶಸ್ತಿ, ದ ವಿಂಡ್ ಅಂಡರ್ ದ ವಿಂಗ್ಸ್ ಪ್ರಶಸ್ತಿ, ದ ಸ್ಪೆಷಲ್ ಟೈಗರ್ ಪ್ರಶಸ್ತಿ– ಹೀಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ.  ಕೆ.ಎಂ. ಚಿಣ್ಣಪ್ಪ, ಪ್ರವೀಣ್ ಭಾರ್ಗವ್ ಹಾಗೂ ಉಲ್ಲಾಸ ಕಾರಂತ ಸೇರಿ ಕರ್ನಾಟಕದ 12 ಮಂದಿಯನ್ನು ಸ್ಯಾಂಕ್ಚುಯರಿ ಏಷ್ಯಾ ಈವರೆಗೆ ಗುರ್ತಿಸಿದೆ. ಈ ಬಾರಿಯ ‘ಯುವ ಪರಿಸರವಾದಿ’ ಪ್ರಶಸ್ತಿಗೆ ಅರ್ಜುನ್‌ ಶ್ರೀವತ್ಸ ಪಾತ್ರರಾಗಿದ್ದಾರೆ. ಕಳೆದ ಡಿ. 5ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT