ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಿನ ಹಾಡು

Last Updated 24 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

70ರ ದಶಕ. ಕಾಳಿನದಿ ತಪ್ಪಲಿನ ಅಪ್ಪಟ ಮಲೆನಾಡ ಹಳ್ಳಿ ಬೀಸಗೋಡು ಹಾಗೂ ಸುತ್ತಲಿನ ಗ್ರಾಮಸ್ಥರ ಬಾಳು ಅಕ್ಷರಶಃ ನರಕವಾಯಿತು. ಈ ಭಾಗದಲ್ಲಿ ಹೇರಳವಾಗಿ ದೊರಕುತ್ತಿದ್ದ ಮ್ಯಾಂಗನೀಸ್ ಅದಿರು ಅಗೆಯಲು ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್ ಲಿಮಿಟೆಡ್ ಕಂಪೆನಿ ಸುಮಾರು ೨ಸಾವಿರ ಎಕರೆಗೂ ಮಿಕ್ಕಿ ಅರಣ್ಯದಲ್ಲಿ ಗಣಿಗಾರಿಕೆ ಆರಂಭಿಸಿದ ಪರಿಣಾಮ ಅದು. ಅರಣ್ಯ ಕಾಯ್ದೆಯಾಗಲೀ, ಪರಿಸರ ಸಂರಕ್ಷಣಾ ಕಾಯ್ದೆಯಾಗಲಿ ಜಾರಿಗೆ ಬಂದಿರದ ಕಾರಣ,  ಗಣಿಗಾರಿಕೆಯಿಂದಾಗಬಹುದಾದ ದುಷ್ಪರಿಣಾಮಗಳ ಕುರಿತು ಚಿಂತನೆ ನಡೆಸುವ ಗೋಜಿಗೆ ಹೋಗದ ಸರ್ಕಾರ, ಇಂಥದ್ದೊಂದು ಸಂಪದ್ಭರಿತ ಕಾಡಿನ ಪ್ರದೇಶವನ್ನು ಗಣಿಗಾರಿಕೆಗೆ ಪುಕ್ಕಟೆಯಾಗಿ ಕೊಟ್ಟುಬಿಟ್ಟಿತ್ತು!

ವಾರ್ಷಿಕ ಸರಾಸರಿ ೫ಸಾವಿರ ಮಿ.ಮಿ.ಗೂ ಹೆಚ್ಚು ಮಳೆ ಸುರಿಯುವ ಕಣಿವೆಯ ಅಡವಿ; ನಂದಿ,  ಬಿಳಿಮತ್ತಿ, ಹೊಳೆಮತ್ತಿ, ಹೊನಗಲು, ಶ್ರೀಗಂಧ, ಬೀಟೆ,  ದುರ್ನಾತದ ಮರ, ದೇವದಾರು, ಕರಿಮರ,  ಹೆಬ್ಬಲಸು, ಗುಳಿಮಾವು ಹೀಗೆ ಹತ್ತು ಹಲವಾರು ಸಸ್ಯ ಪ್ರಬೇಧಗಳನ್ನು ಒಡಲಿನಲ್ಲಿ ಹುದುಗಿಸಿಕೊಂಡಿರುವ ಅಪ್ಪಟ ನಿತ್ಯಹರಿದ್ವರ್ಣ ಕಾಡು; ಹುಲಿ,  ಕಾಡುಕೋಣ, ಚಿರತೆ, ಜಿಂಕೆ, ಕಡವೆ, ಕೆಂದಳಿಲು,  ಹಾರ್ನ್‌ಬಿಲ್ ಮುಂತಾದ ಅನೇಕ ಪ್ರಾಣಿ ಪ್ರಬೇಧಗಳು; ಪ್ರತಿ ವರ್ಷ ಆನೆಗಳು ವಲಸೆ ಬರುವ ಆನೆ ಕಾರಿಡಾರ್ ಪ್ರದೇಶ; ಹೀಗೆ ಹಲವಾರು ವಿಶೇಷಣೆ ಇದ್ದ ಕಾಡು ಗಣಿಗಾರಿಕೆ ಪ್ರಾರಂಭವಾದ ನಂತರ ಬುಡ ಸಮೇತ ಮಾಯವಾಗತೊಡಗಿತು.

ಕರ್ಕಿನಬೈಲು, ಕಿಚ್ಚುಪಾಲು, ಗಣಪುಮನೆ ಪ್ರದೇಶಗಳಲ್ಲಿ ಕಾಡು ಅಳಿದು ಬೋಳಾದ ಗುಡ್ಡಗಳ ನೆತ್ತಿ ಮತ್ತು ಮೈಮೇಲೆಲ್ಲಾ ಆಳದ ಗಣಿಗಾರಿಕೆಯ ಬೃಹತ್ ಗುಂಡಿಗಳು ನಿರ್ಮಾಣವಾದವು. ಬೀಸಗೋಡು ಮತ್ತು ದೇಹಳ್ಳಿ ಪ್ರದೇಶದಲ್ಲಿ  ಕೆಲಸಗಾರರ ವಸತಿ, ಅದಿರು ಸಾಗಿಸುವ ರಸ್ತೆಗಳು ಮತ್ತು ದಾಸ್ತಾನು ಪ್ರದೇಶಗಳಿಗೆಂದು ಮತ್ತಷ್ಟು ಅರಣ್ಯಗಳು ಬರಿದಾದವು. ಮಳೆಗಾಲದಲ್ಲಿ ಗಣಿಗಾರಿಕೆಯ ಹೊಂಡಗಳು ನೀರಿನಿಂದ ತುಂಬಿ,  ಮಣ್ಣು ಸಡಿಲವಾಗಿ, ಕಟ್ಟೆಯೊಡೆದು- ತಗ್ಗಿನ ಪ್ರದೇಶಗಳಿಗೆ ಪ್ರವಾಹ ನುಗ್ಗತೊಡಗಿತು.

ಹಾಗೆಂದೇ  ಬೀಸಗೋಡಿನ ತಗ್ಗಿನ ಪ್ರದೇಶವಾದ ಆನೆಹೊಂಡ, ಹೊಸ್ಮನೆಯಂಥ ಅನೇಕ ಹಳ್ಳಿಗಳ ಕೆರೆ-ಹೊಂಡ, ಗದ್ದೆ-ತೋಟಗಳು ಹೂಳು ತುಂಬತೊಡಗಿದವು. ಹಳ್ಳಿಗರ ಜಾನುವಾರುಗಳು ಮತ್ತು ಕಾಡಿನ ಜಿಂಕೆ,  ಕಡವೆಗಳಂಥ ಸಸ್ತನಿಗಳು ಈ ಗಣಿಹೊಂಡಗಳಿಗೆ ಕಾಲುಜಾರಿ ಬಿದ್ದು ಸಾಯತೊಡಗಿದವು. ಕಾಡುನಾಶದಿಂದ ಅರಣ್ಯದಲ್ಲಿ ಆಹಾರ ಮತ್ತು ನೀರು ಸಿಗದೆ ಕಾಡು ಪ್ರಾಣಿಗಳು ರೈತರ ಹೊಲಗದ್ದೆಗಳಿಗೆ ಇನ್ನಿಲ್ಲದ ಪ್ರಮಾಣದಲ್ಲಿ ದಾಳಿಯಿಡತೊಡಗಿದವು. ಅತಿಯಾದ ಗಣಿಗಾರಿಕೆಯಿಂದಾಗಿ ಜಲಾನಯನ ಪ್ರದೇಶದ ನೈಸರ್ಗಿಕ ಜಲಚಕ್ರ ಅಸ್ತವ್ಯಸ್ತವಾಯಿತು. ಮ್ಯಾಂಗನೀಸ್‌ಯುಕ್ತ ನೀರು ಅಂತರ್ಜಲ ಸೇರಿ,  ಕುಡಿಯುವ ನೀರೂ ಕಲುಷಿತಗೊಂಡಿತು. ತಗ್ಗಿನ ಪ್ರದೇಶದಲ್ಲಿನ ಹಳ್ಳಿಗರಿಗೆ ಬೇಸಿಗೆಯಲ್ಲಿ ಸ್ವಚ್ಛ ನೀರು ಪಡೆಯುವುದೂ ದುಸ್ತರವಾಗತೊಡಗಿತು.

ಜನರ ಸಹನೆ ಕಟ್ಟೆಯೊಡೆಯಿತು. ಈ ಗಣಿಗಾರಿಕೆಯಿಂದ ತಮಗೆ ಉಳಿಗಾಲವಿಲ್ಲವೆಂದು ಮನಗಂಡರು. ಹಾಗೆಂದೇ ತೊಂಬತ್ತರ ದಶಕದ ಆರಂಭದಲ್ಲಿ ಶಾಂತಿಯುತವಾಗಿ ಗಣಿಗಾರಿಕೆ ವಿರೋಧಿ ಹೋರಾಟ ಆರಂಭಿಸಿದರು. ಅದಕ್ಕೆ ಜಿಲ್ಲೆಯ ಪರಿಸರ ಚಳವಳಿಗಳಾದ ವೃಕ್ಷಲಕ್ಷ ಆಂದೋನದಂಥ ಸಂಘಟನೆಗಳು ಸಹಯೋಗವಿತ್ತವು. ಈ ಗಣಿಗಾರಿಕೆ ವಿರೋಧಿ ಚಳವಳಿ ಮುಂದಿನ ಸುಮಾರು ಎಂಟು ವರ್ಷಗಳ ಕಾಲ ಅನೇಕ ನೆಲೆಗಳಲ್ಲಿ ಶಾಂತಿಯುತವಾಗಿ ನಡೆಯಿತು. ವೃಕ್ಷಲಕ್ಷ ಆಂದೋಲನ ನಡೆದು ವರದಿ ನೀಡಲಾಯಿತು.

ಮಲೆನಾಡಿನಲ್ಲಿ ಗಣಿಗಾರಿಕೆಯೊಂದರ ದುಷ್ಪರಿಣಾಮಗಳ ಕುರಿತು ಕೈಗೊಂಡ ಮೊದಲ ವೈಜ್ಞಾನಿಕ ವರದಿ ಅದು.
ಈ ಸಮಯದಲ್ಲಿಯೇ ಗಣಿವಿರೋಧಿ ಸಮಿತಿ ಗಣಿಗಾರಿಕೆಯನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತು. ಬೆಂಗಳೂರು, ದೆಹಲಿಗೆ ನಿಯೋಗವನ್ನೂ ಒಯ್ಯಲಾಯಿತು! ನಿರಂತರ ಪ್ರತಿಭಟನೆ ಸಭೆಗಳು, ವೈಜ್ಞಾನಿಕ ಅಧ್ಯಯನ ವರದಿ ತಯಾರಿ, ಸರ್ಕಾರದೊಂದಿಗೆ ಮಾತುಕತೆ, ಕಾನೂನಿನ ಹೋರಾಟ, ಉನ್ನತ ಅಧಿಕಾರಿಗಳಿಂದ ಸ್ಥಳ ಸಮೀಕ್ಷೆ... ಹೀಗೆ ಅನೇಕ ಮಜಲುಗಳಲ್ಲಿ ಪ್ರಯತ್ನ ನಡೆಯಿತು. ಇವೆಲ್ಲದರಿಂದಾಗಿ, ೧೯೯೮ರಲ್ಲಿ ಬೀಸಗೋಡು ಗಣಿಗಾರಿಕೆಗೆ ಬೇಕಾದ ಅರಣ್ಯ ಗುತ್ತಿಗೆ ಒಪ್ಪಂದ ಪುನರ್ನವೀಕರಣಕ್ಕೆ ಸರ್ಕಾರ ಹಿಂದೇಟು ಹಾಕಿತು. ಅಂತೆಯೇ, ಗಣಿಗಾರಿಕೆ ನಿಂತಿತು. ಆ ಮೂಲಕ ಪಶ್ಚಿಮಘಟ್ಟ ಪ್ರದೇಶದ ತೀರಾ ಪರಿಸರಸೂಕ್ಷ್ಮ ಪ್ರದೇಶವೊಂದು ಗಣಿಗಾರಿಕೆಯ ದವಡೆಯಿಂದ ಪಾರಾಯಿತು.

ಸಮಸ್ಯೆಗೆ ಪರಿಹಾರ
ಕಂಪೆನಿ ಗಣಿ ಕೆಲಸವನ್ನೇನೋ ನಿಲ್ಲಿಸಿತ್ತು. ಆದರೆ, ಅದು ತೆಗೆದ ನೂರಾರು ಬೃಹತ್ ಗಣಿಗುಂಡಿಗಳು ಹಾಗೇ ಇದ್ದವು. ಗಣಿಗಾರಿಕೆ ಪ್ರದೇಶವನ್ನು ಪುನರುಜ್ಜೀವನಗೊಳಿಸುವ ಕುರಿತಂತೆ ‘ಇಂಡಿಯನ್ ಮೈನ್ಸ್ ಬ್ಯೂರೋ’ ಸೂಚಿಸುವ ಯಾವ ಸೂಚನೆಗಳನ್ನೂ ಪಾಲಿಸದೇ ಅದು ಕಾಲ್ಕಿತ್ತಿತ್ತು. ಯುದ್ಧ ಭೂಮಿಯಂತೆ ತೋರುತ್ತಿದ್ದ ಈ ಛಿದ್ರ-ಛಿದ್ರವಾಗಿದ್ದ ಕಾಡನ್ನು ಪುನರುಜ್ಜೀವನಗೊಳಿಸುವ ಕೆಲಸ ಊರವರ ಪಾಲಿಗುಳಿದಿತ್ತು. ಈ ಪರಿಸರದ ಸಂರಕ್ಷಣೆ ಕೆಲಸದಲ್ಲೂ ಊರವರೆಲ್ಲ ಒಟ್ಟಾಗಿ ಶ್ರಮಿಸಲು ನಿರ್ಧರಿಸಿದರು.

ಗ್ರಾಮ ಅರಣ್ಯ ಸಮಿತಿಗಳನ್ನು ರಚಿಸಿಕೊಂಡು ಗ್ರಾಮದ ಅಳಿದುಳಿದ ಕಾಡನ್ನು ರಕ್ಷಿಸಲು ಆರಂಭಿಸಿದರು. ಅರಣ್ಯ ಇಲಾಖೆಯ ಜೊತೆ ಸೇರಿ ಗಣಿಹೊಂಡಗಳ ಖಾಲಿ ಪ್ರದೇಶದಲ್ಲಿ ಸ್ಥಳೀಯ ಪ್ರಬೇಧಗಳ ಅರಣ್ಯ ಬೆಳೆಸಲು ಪ್ರಾಂಭಿಸಿದರು. ಈ ಕೆಲಸ ಇಂದಿಗೂ ಸಾಗಿದೆ. ಗಿಡಮೂಲಿಕಾ ವನಗಳನ್ನು ಹಾಗೂ ಜಲಾನಯನ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ.

   ಗಣಿಗಾರಿಕೆ ನಿಂತು ಹದಿನೈದು ವರ್ಷಗಳ ನಂತರ ಇದೀಗ ಬೀಸಗೋಡು ಪುನಃ ತನ್ನ ನೈಸರ್ಗಿಕ ಸ್ವರೂಪ ಪಡೆಯಲು ಆರಂಭಿಸಿದೆ. ಗಣಿಗಾರಿಕೆಯಿಂದ ಬರಿದಾಗಿ ಹೋಗಿದ್ದ ಪ್ರದೇಶದಲ್ಲೆಲ್ಲ ಹಸಿರು ಹೊದಿಕೆ ಆವರಿಸುತ್ತಿದೆ. ಆಳದ ಗುಂಡಿಗಳಲ್ಲಿ ಗಿಡಮರಗಳು ಬೆಳೆಯುತ್ತಿವೆ. ರಾಶಿ-ರಾಶಿಯಾಗಿ ಬಿದ್ದಿದ್ದ ಮಣ್ಣಿನ ಗುಡ್ಡಗಳಲ್ಲಿ ಪುನಃ ಕಾಡು ಬೆಳೆಯುತ್ತಿದೆ. ಗ್ರಾಮವೊಂದರ ಜನತೆ ಕೈಜೋಡಿಸಿದರೆ ಕಾಡಿನ ಸಂರಕ್ಷಣೆ ಎಷ್ಟು ಪರಿಣಾಮಕಾರಿಯಾಗಬಲ್ಲದು ಎಂದು ಬೀಸಗೋಡಿಗೆ ಹೋದರೆ ನಾವಿಂದು ನೋಡಬಹುದು! 

ಈ ಕೆಲಸಗಳಿಗೆಲ್ಲ ಪುನಶ್ಚೇತನ ನೀಡುವ ದೃಷ್ಟಿಯಿಂದ ಈಚೆಗೆ ಬೀಸಗೋಡು ಜನರು ಪರಿಸರ ಜಾಗೃತಿ ಶಿಬಿರವೊಂದನ್ನು ಆಯೋಜಿಸಿದ್ದರು. ಸುತ್ತಲಿನ ಹಳ್ಳಿಗರು ಮತ್ತು ನೂರಾರು ಶಾಲಾ ಮಕ್ಕಳು, ಗಣ್ಯಾತಿಗಣ್ಯರು, ಪರಿಸರ ತಜ್ಞರು ದಿನವಿಡೀ ಈ ಪ್ರದೇಶದಲ್ಲಿ ಓಡಾಡಿ ಸದ್ಯದ ಸ್ಥಿತಿಯ ಕುರಿತು  ಅಭಿಪ್ರಾಯ ವಿನಿಮಯ ಮಾಡಿಕೊಂಡರು. ಬೀಸಗೋಡು-ನಾಡಿನ ಪರಿಸರ ಸಂರಕ್ಷಣೆ ಪ್ರಯತ್ನಗಳ ಭವ್ಯ ಇತಿಹಾಸವೂ ಹೌದು, ಆಶಾದಾಯಕ ಭವಿಷ್ಯತ್ತಿನ ಸಾಧ್ಯತೆಯ ದ್ಯೋತಕವೂ ಹೌದು. ಈ ಪರಿಸರ ಪಾಠ ನಾಡಿನಾದ್ಯಂತ ಪಸರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT