ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುಗಳ್ಳರನ್ನು ಮಟ್ಟಹಾಕಿ

Last Updated 21 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಸಕಲೇಶಪುರದ ಬಿಸಿಲೆ ಅರಣ್ಯ ಪ್ರದೇಶ ಕಳೆದೆರಡು ತಿಂಗಳಿಂದ ಅವ್ಯಾಹತವಾಗಿ ನಡೆಯುತ್ತಿರುವ ಕಳ್ಳಬೇಟೆಯ ಕಾರಣದಿಂದಲೇ ಸುದ್ದಿಯಾಗುತ್ತಿದೆ. ಪಶ್ಚಿಮಘಟ್ಟದ ಬಿಸಿಲೆ ರಕ್ಷಿತಾರಣ್ಯವು ಹುಲ್ಲುಗಾವಲು, ಶೋಲಾ, ಮಳೆ ಕಾಡು ಹಾಗೂ ಎಲೆ ಉದುರುವ ಕಾಡಿಗೆ ಹೆಸರುವಾಸಿಯಾಗಿದೆ. ಈ ಕಾಡಿನಲ್ಲಿ ಮತ್ತೆಲ್ಲೂ ಕಾಣಸಿಗದ ಸಿಂಹಬಾಲದ ಸಿಂಗಳಿಕ, ಜೇನುಬೆಕ್ಕು ಸೇರಿದಂತೆ ಹಲವು ಅಳಿವಿನಂಚಿನ ವನ್ಯಜೀವಿಗಳಿವೆ. ಇಂತಹ ಕಾಡಿನಲ್ಲಿ ನಿರಂತರವಾಗಿ ಕಳ್ಳಬೇಟೆ ನಡೆಯುತ್ತಿದೆ ಎಂದು ವರದಿಯಾಗುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ತೆಗೆದುಕೊಳ್ಳದೆ ಮೌನಕ್ಕೆ ಶರಣಾಗಿದೆ. ಇದು ಇಲಾಖೆಯಲ್ಲಿ ಇರುವ ಜಡತ್ವಕ್ಕೆ ಸಾಕ್ಷಿ. 

ಮಾರ್ಚ್‌ ತಿಂಗಳಲ್ಲಿ ಬಿಸಿಲೆ ರಕ್ಷಿತಾರಣ್ಯದ ಗಿರಿಹೊಳೆಗೆ ವಿಷಹಾಕಿ ಮೀನು ಸೇರಿದಂತೆ ಜಲಚರಗಳನ್ನು ಸಾಯಿಸಲಾಗಿತ್ತು. ಈ ಪ್ರಕರಣದಲ್ಲಿ  ಇಬ್ಬರನ್ನು ಬಂಧಿಸಲಾಗಿದೆ. ಈ ಆರೋಪಿಗಳು ಕೊಡಗಿನ ಪುಷ್ಪಗಿರಿಯಲ್ಲೂ ಇದೇ ರೀತಿಯ ಕೃತ್ಯವನ್ನು ನಡೆಸಿದ್ದರು. ಬಿಸಿಲೆಯಲ್ಲಿ ಬೇಟೆ ತಡೆ ಶಿಬಿರಕ್ಕೆ ಕೂಗಳತೆಯ ದೂರದಲ್ಲಿಯೇ ತೇಗದ ಮರದ ಕಳ್ಳಸಾಗಾಣೆ ಸಹ ನಡೆದಿದೆ. ಇದೀಗ ಮತ್ತೆ ಬಿಸಲೆ ಅರಣ್ಯಕ್ಕೆ ಕಳ್ಳಬೇಟೆಗಾರರ ಗುಂಪು ನಾಯಿಗಳ ಜೊತೆಯಲ್ಲಿ ಕಿಂಚಿತ್ತು ಭಯವೇ ಇಲ್ಲದಂತೆ ನುಗ್ಗಿ ಕಾಡುಪ್ರಾಣಿಗಳ ಕಗ್ಗೊಲೆ ಮಾಡಿ ತಿಂದು ಮೂರ್‍ನಾಲ್ಕು ದಿನ ತಂಗಿದ್ದಾರೆ. ಇಷ್ಟೆಲ್ಲಾ ಕಾನೂನು­ಬಾಹಿರ ದುಷ್ಕೃತ್ಯಗಳು ನಡೆದರೂ ಅರಣ್ಯ ಸಿಬ್ಬಂದಿ ನಿರ್ಲಿಪ್ತವಾಗಿ ಇರುವುದು ಇಲಾಖೆಯಲ್ಲಿರುವ ನಿಷ್ಕ್ರಿಯತೆಗೆ ಸಾಕ್ಷಿಯಾಗಿದೆ.

ಕಳ್ಳಬೇಟೆ ಕೇವಲ ಬಿಸಿಲೆ ರಕ್ಷಿತಾರಣ್ಯಕ್ಕೆ ಸೀಮಿತವಾಗಿಲ್ಲ. ಕಳ್ಳಬೇಟೆಗಾರರು ಅರಣ್ಯಕ್ಕೆ ನುಗ್ಗಿ ಪ್ರಾಣಿಗಳ ಕೊಂದು ಅಲ್ಲಿಯೇ ತಿಂದ ಘಟನೆ ಜಗಳೂರಿನ ಕೊಂಡುಕುರಿ ಅರಣ್ಯದಲ್ಲೂ ಇತ್ತೀಚೆಗೆ ನಡೆದಿತ್ತು. ಶನಿವಾರ ಕರ್ನಾಟಕ– ತಮಿಳುನಾಡು ರಾಜ್ಯದ ಗಡಿ ಅಂಚಿನಲ್ಲಿರುವ ಮಹದೇಶ್ವರ ಬೆಟ್ಟದ ಪಾಲಾರ್‌ ಅರಣ್ಯದ ವ್ಯಾಪ್ತಿಯಲ್ಲೂ ಬೇಟೆಗೆ ಬಂದಿದ್ದ ೩೦ಕ್ಕೂ ಹೆಚ್ಚು ಕಾಡುಗಳ್ಳರು ಮತ್ತು  ಅರಣ್ಯ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಅರಣ್ಯಾಧಿಕಾರಿ ಬಳಿಯಿದ್ದ ರೈಫಲ್‌ ಕೈಕೊಟ್ಟು ಗುಂಡು ಹಾರಿಲ್ಲ. ಕಳ್ಳರ ಕೈಮೇಲಾಗಬಹುದು ಎಂದು ಸಿಬ್ಬಂದಿ ಘಟನೆಯ ಸ್ಥಳದಿಂದ ವಾಪಸಾಗಿದ್ದಾರೆ. ಭಾನುವಾರ ಬೆಳಿಗ್ಗೆ ಹೆಚ್ಚಿನ ಸಿಬ್ಬಂದಿ ಜೊತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ತೆರಳಿದಾಗಲೂ ಕಾಡುಗಳ್ಳರು ಗುಂಡು ಹಾರಿಸಿದ್ದಾರೆ.

ಬಿಸಿಲೆ ಮತ್ತು ಜಗಳೂರಿನ ಘಟನೆಗಳನ್ನು ಗಮನಿಸಿದರೆ ಅರಣ್ಯ ಇಲಾಖೆ ಸತ್ತಂತಿದೆ ಅಥವಾ ಕಳ್ಳಬೇಟೆಗಾರರಿಗೆ ಅನುಕೂಲ ಮಾಡಿಕೊಡಲು ಸತ್ತಂತೆ ನಟಿಸುತ್ತಿದೆ ಎನ್ನುವ ಅನುಮಾನ ಬಲವಾಗಿ ಬರುತ್ತದೆ. ಪಾಲಾರ್‌ ಪ್ರಕರಣದಲ್ಲಿ ಸಿಬ್ಬಂದಿಯ ಶ್ರಮವನ್ನು ಮೆಚ್ಚಬೇಕಾಗುತ್ತದೆ. ಆದರೆ ಬಂದೂಕು ಕೈಕೊಟ್ಟಿದೆ ಎಂದರೆ ಬಳಕೆಯ ಸ್ಥಿತಿಯಲ್ಲಿ ಇಟ್ಟಿರಲಿಲ್ಲ  ಎನ್ನುವ ಅರ್ಥ ಬರುತ್ತದೆ. ಇದರ ಜೊತೆಯಲ್ಲಿ ಬಂಡೀಪುರದ ಪರಿಸರ ಸೂಕ್ಷ್ಮ ವಲಯದಲ್ಲಿ ಅಕ್ರಮವಾಗಿ ರೆಸಾರ್ಟ್‌ ನಿರ್ಮಾಣವಾಗುತ್ತಿದೆ ಎಂದು ವರದಿಯಾಗಿದೆ. ಇವುಗಳನ್ನು ಗಮನಿಸಿದರೆ ಅರಣ್ಯ ಇಲಾಖೆ ಕಳ್ಳಬೇಟೆ, ಕಾಡುಗಳ್ಳರನ್ನು ತಡೆದು ಅರಣ್ಯ ಮತ್ತು ಕಾಡುಪ್ರಾಣಿಗಳನ್ನು ರಕ್ಷಿಸಲು ವಹಿಸುತ್ತಿರುವ ಶ್ರಮ ಸಾಲದು ಎನಿಸುತ್ತದೆ. ಕಳ್ಳರ ಬಗ್ಗೆ ಹೆದರಿಕೆಯಿದ್ದರೆ ಸಿಬ್ಬಂದಿಗೆ ಅಗತ್ಯವಾದ ಶಸ್ತ್ರ ನೀಡುವ ಜೊತೆಯಲ್ಲಿ  ಮನಸ್ಥೈರ್ಯವನ್ನು ಹೆಚ್ಚಿಸುವ ಕೆಲಸವೂ ಆಗಬೇಕು. ಕಾಡುಗಳ್ಳರನ್ನು ಮಟ್ಟಹಾಕಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT