ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುತ್ತಿರುವ ಅಸಂಘಟಿತ ಕಾರ್ಮಿಕರ ನೋವು

ಬದುಕಿನ ಸಂಕಷ್ಟದ ಹಲವು ಮಜಲುಗಳನ್ನು ತೆರೆದಿಟ್ಟ ಲೇಖಕಿ ಡಾ.ವಿಜಯಾ
Last Updated 20 ಸೆಪ್ಟೆಂಬರ್ 2014, 19:49 IST
ಅಕ್ಷರ ಗಾತ್ರ

ಬೆಂಗಳೂರು: ‘ಸದಾ ನನ್ನನ್ನು ಕಾಡುತ್ತಿರುವ ನೋವೆಂದರೆ ಅಸಂಘಟಿತ ವಲಯದ ಕಾರ್ಮಿಕರ ಕಷ್ಟಕರ ಬದುಕು. ಗಾರ್ಮೆಂಟ್‌­ಗಳಲ್ಲಿ ಮಹಿಳೆಯರು ನೀರು ಕುಡಿಯದೇ ಕೆಲಸ ಮಾಡುತ್ತಿರುತ್ತಾರೆ. ಏಕೆಂದರೆ ಅವರಿಗೆ ಕೆಲಸದ ಗಡುವು ವಿಧಿಸಲಾಗಿರುತ್ತದೆ. ನೀರು ಕುಡಿದರೆ ಶೌಚಾಲಯಕ್ಕೆ ಹೋಗಬೇಕಾಗುತ್ತದೆ. ಆ ಸಮಯ ನಷ್ಟವಾಗುತ್ತದೆ ಎಂಬ ಆತಂಕ ಅವರದ್ದು. ಈ ಸಂಕಷ್ಟಗಳಿಗೆ ಯಾರೂ ಧ್ವನಿಯಾಗುತ್ತಿಲ್ಲ’

–ಹೀಗೆಂದು ಹೇಳಿ ಬೇಸರ ವ್ಯಕ್ತಪಡಿಸಿದ್ದು ಲೇಖಕಿ ಡಾ.ವಿಜಯಾ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದ ನಯನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಅವರು ಬದುಕಿನ ಸಂಕಷ್ಟದ ಹಲವು ಮಜಲುಗಳನ್ನು ತೆರೆದಿಟ್ಟರು.

‘ಈ ಕಾರ್ಮಿಕರಿಗೆ ಸರಿಯಾಗಿ ವೇತನ ಸಿಗುತ್ತಿಲ್ಲ. ಸೂಕ್ತ ರಕ್ಷಣೆಯೂ ಇಲ್ಲದಂತಾಗಿದೆ. ಪೌರ ಕಾರ್ಮಿಕರದ್ದು ಕೂಡ ಕಷ್ಟದ ಬದುಕು. ನನ್ನ ಸ್ನೇಹಿತೆಯೊಬ್ಬಳು ನೈಜ ಘಟನೆ ಇಟ್ಟು­ಕೊಂಡು ಪುಸ್ತಕ ಬರೆದಿದ್ದಾಳೆ.  ಕಾರ್ಮಿಕ­ಳೊಬ್ಬಳಿಗೆ ಹುಟ್ಟಿದ ಮಗುವಿಗೆ ಕೈಬೆರಳುಗಳು ಇರುವುದಿಲ್ಲ. ಆ ತಾಯಿಗೆ ತುಂಬಾ ಖುಷಿ­ಯಾಗುತ್ತದೆ. ಏಕೆಂದರೆ ತನ್ನ ಮಗುವಿಗೆ ಕಸಗುಡಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮಗುವನ್ನು ಶಾಲೆಗೆ ಕಳುಹಿಸಬಹುದು ಎಂಬುದು ಆಕೆಯ ಆ ಖುಷಿಗೆ ಕಾರಣ’ ಎಂದು ಭಾವುಕರಾದರು.

ಕಹಿ ಘಟನೆಗಳೇ ಸ್ಫೂರ್ತಿ: ‘ಚಿಕ್ಕ ವಯಸ್ಸಿನಲ್ಲೇ ಪತಿಯಿಂದ ಬೇರೆಯಾಗಿದ್ದು ಕಹಿ ಘಟನೆ ಎಂದು ಹೇಳಲು ನಾನು ಇಷ್ಟಪಡುವುದಿಲ್ಲ.

ಮಾಯಾರಾವ್‌ ಕಡೆಗಣನೆಗೆ ಆಕ್ರೋಶ
‘ಕಥಕ್‌ ನೃತ್ಯಪಟು ಮಾಯಾರಾವ್‌ ನಿಧನರಾದಾಗ ಅವರ ಮನೆಗೆ ಹೋಗಿದ್ದೆ. ದುರದೃಷ್ಟವೆಂದರೆ ಸರ್ಕಾರದ ಒಬ್ಬ ಪ್ರತಿನಿಧಿಯೂ ಅಲ್ಲಿರಲಿಲ್ಲ. ಇಂಥ ನೃತ್ಯಪಟುವನ್ನು ಸರ್ಕಾರ ಏಕೆ ಈ ರೀತಿ ಕಡೆಗಣಿಸಿತು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇದೊಂದು ನಾಚಿಕೆಗೇಡಿನ ವಿಷಯ’ ಎಂದು ಡಾ.ವಿಜಯಾ ಅವರು ಆಕ್ರೋಶ ವ್ಯಕ್ತಪಡಿಸಿದರು.
‘ಜ್ಞಾನಪೀಠ ಪುರಸ್ಕೃತ ಸಾಹಿತಿ ಮೃತಪಟ್ಟಾಗ ಸಂದ ರೀತಿಯ ಗೌರವ ಅಂತರರಾಷ್ಟ್ರೀಯ ನೃತ್ಯಪಟುವಿಗೂ ಸಲ್ಲಬೇಕಿತ್ತು. ಈ ರೀತಿಯ ತಾರತಮ್ಯ ಮಾಡಬಾರದಿತ್ತು. ಮಾಯಾರಾವ್‌ ಅವರ ನಿಧನದ ವಿಷಯಕ್ಕೆ ಸುದ್ದಿ ವಾಹಿನಿಗಳಲ್ಲೂ ಸರಿಯಾದ ಆದ್ಯತೆ ಸಿಗಲಿಲ್ಲ’ ಎಂದರು.

ಏಕೆಂದರೆ ಈ ಘಟನೆ ನನ್ನ ಬಾಳಿಗೆ ಹೊಸ ತಿರುವು ನೀಡಿತು. ನನ್ನ ಕಾಲಿನ ಮೇಲೆ ನಿಲ್ಲಲು ಸಹಾಯ ಮಾಡಿತು. ಹಾಗಾಗಿ ಕೆಲ ಕಹಿ ಘಟನೆಗಳೇ ನನ್ನ ಬದುಕಿಗೆ ಸ್ಫೂರ್ತಿಯಾದವು’ ಎಂದರು.

ಪತ್ರಿಕಾ ಕ್ಷೇತ್ರಕ್ಕೆ ಋಣಿ: ‘ಹೊಟ್ಟೆ ತುಂಬಿಸಿದ್ದು ಹಾಗೂ ನನ್ನ ಮಕ್ಕಳನ್ನು ಸಾಕಲು ಕಾರಣ­ವಾಗಿದ್ದು ಪತ್ರಿಕಾ ಕ್ಷೇತ್ರ. ಆದರೆ, ಈ ಕ್ಷೇತ್ರಕ್ಕೆ ಕಾಲಿಟ್ಟಾಗ ನನ್ನ ಬರವಣಿಗೆಯನ್ನೇ ಕೆಲವರು ಹೀಗಳೆದರು. ಅದು ತುಂಬಾ ನೋವುಂಟು ಮಾಡಿತ್ತು. ಹೊಟ್ಟೆ ಪಾಡು ಎಂದುಕೊಂಡು ಸುಮ್ಮನಿದ್ದೆ. ಸಿನಿಮಾ ಕ್ಷೇತ್ರಕ್ಕೆ ಮಹಿಳಾ ಪತ್ರಕರ್ತರು ಹೋಗಬಾರದು ಎಂಬ ಅಘೋಷಿತ ನಿಯಮವಿತ್ತು. ನಾನು ಅದನ್ನೇ ಸವಾಲಾಗಿ ಸ್ವೀಕರಿಸಿದೆ’ ಎಂದು ಎದುರಾದ ಸವಾಲುಗಳನ್ನು ಮೆಲುಕು ಹಾಕಿದರು.

ಬದಲಾಗದ ಬೀದಿ ನಾಟಕ: ‘ಬೀದಿ ನಾಟಕ ರೂಪಿಸಲು ಬಿ.ವಿ.ಕಾರಂತರ ಮಾತುಗಳೇ ನನಗೆ ಸ್ಫೂರ್ತಿ. ಬೀದಿಯಲ್ಲಿ ಕಡಲೆ ಕಾಯಿ ಮಾರು­ವವರೂ ನಾಟಕ ನೋಡುವಂಥ ಪರಿಸ್ಥಿತಿ ನಿರ್ಮಾಣವಾಗಬೇಕು ಎಂಬುದು ಅವರ ನಿಲುವಾಗಿತ್ತು’ ಎಂದರು.

‘70ರ ದಶಕದಲ್ಲಿ ಬೀದಿ ನಾಟಕಕ್ಕೆ ಹೊಸ ಸ್ವರೂಪ ಕೊಟ್ಟೆವು. ತುರ್ತು ಪರಿಸ್ಥಿತಿ ಸಂದರ್ಭ­ದಲ್ಲಿ ಬೀದಿ ನಾಟಕಗಳ ಮೂಲಕವೂ ಹೋರಾಟ­ದಲ್ಲಿ ತೊಡಗಿದ್ದೆವು. ಆದರೆ, ಇಂದಿಗೂ ಬೀದಿ ನಾಟಕದ ಸ್ವರೂಪದಲ್ಲಿ ಯಾವುದೇ ಬದಲಾ­ವಣೆ ಆಗಿಲ್ಲ. ಇದೊಂದು ವಿಷಾದದ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.

ಮುದ್ರಣಾಲಯ ತೆರೆದಿದ್ದು: ‘ತುರ್ತು ಪರಿಸ್ಥಿತಿಯ ದಿನಗಳಲ್ಲಿ ನನ್ನ ಕೆಲ ಲೇಖನಗಳು ಮುದ್ರಣವಾಗಿರಲಿಲ್ಲ. ಆ ಸಿಟ್ಟಿನಿಂದ ಆಗ ಮುದ್ರಣಾಲಯ ಸ್ಥಾಪಿಸಿದೆ. ಶಂಕರಪ್ಪ ಎಂಬ ಆತ್ಮೀಯರು ಅದಕ್ಕೆ ‘ಇಳಾ’ ಎಂದು ಹೆಸರಿಟ್ಟರು. ರಾತ್ರಿ ಹೊತ್ತು ಮುದ್ರಣ ಮಾಡುತ್ತಿದ್ದೆವು. ಮುದ್ರಣಾಲಯದ ಸಣ್ಣ ಜಾಗದಲ್ಲಿ ಅಡುಗೆ ಮಾಡುತ್ತಿದ್ದೆವು. ಅಲ್ಲೇ ಊಟ ಮಾಡಿ ಮಲಗು­ತ್ತಿದ್ದೆವು’ ಎಂದು ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸಿಕೊಂಡರು.

ವೇಶ್ಯೆಯರಿಗೆ ಸೌಲಭ್ಯ ನೀಡಿ: ‘ವೇಶ್ಯೆ ವೃತಿಯನ್ನು ಕಾನೂನುಬದ್ಧಗೊಳಿಸಿ ಎಂದು ಕೆಲವರು ಒಳ್ಳೆಯ ಆಶಯ ಇಟ್ಟುಕೊಂಡು ಹೇಳಿದ್ದಾರೆ. ಆದರೆ, ಇದರಿಂದಾಗಿ ವೇಶ್ಯೆಯರ ಜೀವನ ಸರಿ ಹೋಗುವುದಿಲ್ಲ. ಬದಲಾಗಿ ವೇಶ್ಯೆಯರಿಗೆ ಹಾಗೂ ಅವರ ಮಕ್ಕಳಿಗೆ ಉತ್ತಮ ಸೌಲಭ್ಯ ಕಲ್ಪಿಸಲು ಮುಂದಾಗಬೇಕು. ಪೊಲೀಸರು, ಗಿರಾಕಿಗಳು ಹಾಗೂ ಮಧ್ಯವರ್ತಿಗಳಿಂದ ಆಗುತ್ತಿ­ರುವ ಸಮಸ್ಯೆಗಳಿಂದ ಅವರನ್ನು ಮುಕ್ತಗೊಳಿಸ­ಬೇಕು’ ಎಂದು ಸಲಹೆ ನೀಡಿದರು.

ಸ್ತ್ರೀವಾದ: ‘ಸ್ತ್ರೀವಾದದಲ್ಲಿ ಏಕರೂಪತೆ ಇಲ್ಲ. ಬುಡಕಟ್ಟು, ದಲಿತ ಹೆಣ್ಣು ಮಕ್ಕಳ ಆಶಯಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹೋರಾಟ ಭಿನ್ನವಾಗಿ ನಡೆಯಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

ಅಸಮರ್ಪಕ ಯೋಜನೆಗಳು: ‘ಸರ್ಕಾರದ ಕೆಲ ಯೋಜನೆಗಳ ಅಳವಡಿಕೆ ಅಸರ್ಮಪಕವಾಗಿವೆ. ಭ್ರಷ್ಟರಿಗೆ ದಾರಿ ಮಾಡಿಕೊಟ್ಟಿವೆ. ಅನ್ನಭಾಗ್ಯ ಯೋಜನೆಯೂ ಅದರಲ್ಲೊಂದು. ಯಾವುದೇ ಮುಂದಾಲೋಚನೆ ಇಲ್ಲದೇ ಯೋಜನೆಗಳನ್ನು ರೂಪಿಸಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT