ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುತ್ತಿರುವ ದುಃಸ್ವಪ್ನ

Last Updated 26 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಕಠ್ಮಂಡು (ಪಿಟಿಐ): ಕಣ್ಣೆದುರೇ ಅಲುಗಾಡಿದ ಮನೆ ಕ್ಷಣ ಮಾತ್ರದಲ್ಲಿಯೇ ಅವಶೇಷವಾಯಿತು. ತಮ್ಮ ಹೆಮ್ಮೆಯೆಂದು ಹೇಳಿಕೊಳ್ಳುತ್ತಿದ್ದ ಐತಿಹಾಸಿಕ ಸ್ಮಾರಕ, ಕಟ್ಟಡಗಳು ಪುಡಿಪುಡಿಯಾದವು.
ಎದುರಲ್ಲೇ ನಡೆದ ಅವಘಡದಿಂದ ಆಘಾತಕ್ಕೊಳಗಾಗಿರುವ ಜನ ಮರುಕಂಪನದಿಂದ ಮತ್ತಷ್ಟು ಭಯಭೀತರಾಗಿದ್ದಾರೆ.

‘ಕಣ್ಣೆದುರೇ ಘಟಿಸಿದ ದುರಂತ ಕಂಡು ಆಘಾತಗೊಂಡಿದ್ದೇವೆ. ತುಂಬಾ ದುಃಖಕರ ಘಟನೆ ಇದು. ಸ್ವಲ್ಪವೂ ಆಹಾರ, ನೀರು ಇಲ್ಲದೆ ನನ್ನ ಇಡೀ ಕುಟುಂಬ ಸಂಕಷ್ಟಕ್ಕೊಳಗಾಗಿದೆ. ಇಲ್ಲಿನ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿಕೊಂಡಿವೆ’ ಎಂದು ನೇಪಾಳದಲ್ಲಿ ಸಿಲುಕಿರುವ ಕೋಲ್ಕತ್ತ ಮೂಲದ ಕಾರ್ಮಿಕನೊಬ್ಬ ಅಳಲು ತೋಡಿಕೊಂಡ.

‘ನಾವು ಸುಮಾರು 500–1000 ಕಾರ್ಮಿಕರು ಇಲ್ಲಿಗೆ ಬಂದಿದ್ದೇವೆ. ನಾವೆಲ್ಲರೂ ಮರಳಿ ಹೋಗಬೇಕು ಎಂದು ಬಯಸುತ್ತಿದ್ದೇವೆ. ಆದರೆ ವಿದ್ಯುತ್‌ ಕೂಡ ಇಲ್ಲದೇ ಇರುವುದರಿಂದ ಮಾಹಿತಿ ದೊರಕುತ್ತಿಲ್ಲ. ಹೀಗಾಗಿ ಮನೆಗೆ ಮರಳುವುದು ಹೇಗೆಂದು ತೋಚುತ್ತಿಲ್ಲ. ಭಾರತದಿಂದ ಕೆಲವು ರಕ್ಷಣಾ ವಿಮಾನಗಳು ಬಂದಿವೆ ಎನ್ನುವುದು ಗೊತ್ತಾಗಿದೆ. ಅವರನ್ನು ಸಂಪರ್ಕಿಸಿ ಮನೆಗೆ ಮರಳಲು ಪ್ರಯತ್ನಿಸುತ್ತಿದ್ದೇವೆ’ ಎಂದು ಆತ ಹೇಳಿದ್ದಾನೆ.

ಮನೆಗಳನ್ನು ಕಳೆದುಕೊಂಡ ಜನರು ಬಯಲಿನಲ್ಲಿಯೇ ರಾತ್ರಿ ಕಳೆದರು. ಆದರೆ ಮರುಕಂಪನದ ಅನುಭವಗಳು ಮತ್ತೆ ಮತ್ತೆ ಉಂಟಾಗುತ್ತಿದ್ದರಿಂದ ಭಯದಿಂದಲೇ ನಿದ್ರಾರಹಿತರಾಗಿ ಕಳೆಯಬೇಕಾಯಿತು.

‘ಕಳೆದ 20 ವರ್ಷಗಳಿಂದ ನನ್ನ ಕುಟುಂಬದೊಂದಿಗೆ ಇಲ್ಲಿ ವಾಸಿಸುತ್ತಿದ್ದೇನೆ. ನಾವು ಕೋಣೆಯೊಂದರ ಒಳಗೆ ಕುಳಿತುಕೊಂಡಿದ್ದಾಗ ಭೂಮಿ ಕಂಪಿಸುತ್ತಿರುವ ಅನುಭವವಾಯಿತು. ತಕ್ಷಣವೇ ಹೊರಗೋಡಿ ಬಂದೆವು. ಜೀವ ರಕ್ಷಣೆಗಾಗಿ ಜನರು ಓಡುತ್ತಿರುವುದನ್ನು ಕಂಡೆವು. ನಮಗೆ ನೀಡಿದ ಸ್ವಲ್ಪ ಆಹಾರ ಉಳಿದುಕೊಂಡಿದೆ. ಶಿಬಿರದಲ್ಲಿರುವ ಎಲ್ಲರಿಗೂ ಆಹಾರ ಮತ್ತು ನೀರಿನ ಕೊರತೆ ಉಂಟಾಗಿದೆ. ನಾವು ಕೋಲ್ಕತ್ತಕ್ಕೆ ಹೋಗಲೇಬೇಕು. ಆದರೆ ಹೇಗೆ ಎನ್ನುವುದೇ ಚಿಂತೆ’ ಎಂದು ಮತ್ತೊಬ್ಬ ಕಾರ್ಮಿಕ ಹೇಳಿದ್ದಾನೆ.

ಕಾಫಿಶಾಪ್‌ನಲ್ಲಿ ಕುಳಿತಿದ್ದ ಹವ್ಯಾಸಿ ಛಾಯಾಗ್ರಾಹಕ ಥಾಮಸ್‌ ನಿಬೊ, ಇದು ಲಘು ಕಂಪನ ಎಂದುಕೊಂಡಿದ್ದರಂತೆ.
‘ಈ ಪ್ರದೇಶಕ್ಕೆ ಭೂಕಂಪನ ಹೊಸತಲ್ಲ. ಹಲವು ಜನರಿಗೂ ಇದೇ ರೀತಿ ಅನುಭವವಾಯಿತು. ತುಸು ಹೊತ್ತು ಕಂಪಿಸಿ ಬಳಿಕ ನಿಲ್ಲುವುದು ಎಂದು ಭಾವಿಸಿದ್ದೆವು. ಆದರೆ ನಾವು ಅಂದುಕೊಂಡಂತೆ ಅದು ಇರಲಿಲ್ಲ’ ಎಂದು ಅವರು ಹೇಳಿದ್ದಾರೆ.

‘ನಾನು ಶಬ್ದ ಕೇಳಿದಾಗ ಯಾವುದೋ ಬೃಹತ್‌ ಹೆಲಿಕಾಪ್ಟರ್‌ ಇಳಿಯುತ್ತಿದೆ ಎಂದೇ ಭಾವಿಸಿದ್ದೆ’ ಎಂದು ಕಠ್ಮಂಡುವಿನ ಟ್ಯಾಟೂ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಮ್ಯಾಥ್ಯೂ ವೊಚೀಚೊವ್‌ಸ್ಕಿ ಹೇಳಿದ್ದಾರೆ.

‘ನಾವು ಶನಿವಾರವೇ ದೇಶಕ್ಕೆ ಮರಳಬೇಕಿತ್ತು. ಆದರೆ ವಿಮಾನ ಹಾರಾಟ ರದ್ದಾಗಿತ್ತು. ಏಳು ಗಂಟೆ ಕಾಯಿರಿ ಎಂದು ಸೂಚಿಸಿದ್ದರು. ವಿಮಾನಯಾನ ಸಂಸ್ಥೆಯಿಂದ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ’ ಎಂದು ಆಸ್ಟ್ರೇಲಿಯಾದ ಪ್ರವಾಸಿಯೊಬ್ಬರು ಹೇಳಿದರು.

‘ತೀವ್ರವಾದ ಕಂಪನವುಂಟಾದಾಗ ನಾನು ಸುಮಾರು 500 ಮೀಟರ್ ದೂರದಲ್ಲಿದ್ದೆ. ನೋಡನೋಡುತ್ತಿದ್ದಂತೆಯೇ ಅದು ನೆಲಕ್ಕುರುಳಿತು. ಸುತ್ತಮುತ್ತಲೂ ದೂಳು ತುಂಬಿದ್ದರಿಂದ ಏನೂ ಕಾಣಿಸುತ್ತಿರಲಿಲ್ಲ. ರಜೆಯ ದಿನವಾಗಿದ್ದರಿಂದ ಗೋಪುರದ ಒಳಗೆ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ತುಂಬಿದ್ದರು’ ಎಂದು ಧರಹರಾ ಗೋಪುರ ನೆಲಕ್ಕುರುಳುವುದನ್ನು ಕಣ್ಣಾರೆ ಕಂಡ ಸ್ಥಳೀಯನೊಬ್ಬ ವಿವರಿಸಿದ್ದಾನೆ.

‘ಸಿಲುಕಿಕೊಂಡವರ ಮೇಲೇ ಓಡಿದರು’
‘ಭಾರಿ ಪ್ರಮಾಣದ ಅವಶೇಷಗಳು ತುಂಬಿದ್ದ ಜಾಗದಲ್ಲಿ ಮಹಿಳೆಯೊಬ್ಬಳು ತನ್ನ ಮಕ್ಕಳು ಅದರ ಅಡಿ ಸಿಲುಕಿದ್ದಾರೆ ಎಂದು ರೋದಿಸುತ್ತಿದ್ದ ದೃಶ್ಯವನ್ನು ಕಂಡೆ.  ಕೆಲವರು ಅವರ ಮೇಲೆ ಓಡುತ್ತಿದ್ದರು. ನಾವು  ಅಕ್ಕಪಕ್ಕದಲ್ಲಿಯೇ ಓಡಿದೆವು. ಆದರೆ ಆಕೆಯ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಆ ಮಕ್ಕಳು ಬದುಕುಳಿದಿರುವ ಸಾಧ್ಯತೆಯೇ ಇರಲಿಲ್ಲ’ ಎಂದು ಕಠ್ಮಂಡುವಿನ ಟ್ಯಾಟೂ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಮ್ಯಾಥ್ಯೂ ವೊಚೀಚೊವ್‌ಸ್ಕಿ ತಮ್ಮ ಅನುವಭ ಹಂಚಿಕೊಂಡಿದ್ದಾರೆ.

*
ನೇಪಾಳದಲ್ಲಿ ‘ಆಪರೇಷನ್‌ ಮೈತ್ರಿ’ ಪರಿಹಾರ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ ಭಾರತ
*
ಪರಿಹಾರ ಕಾರ್ಯಾಚರಣೆಗಾಗಿ ಭಾರತದಿಂದ ತೆರಳಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಾವಿರ ಸಿಬ್ಬಂದಿ
*
ಐಎಎಫ್‌ನ 13 ವಿಮಾನ, 5 ಹೆಲಿಕಾಪ್ಟರ್‌ಗಳು ನೇಪಾಳಕ್ಕೆ. ಸನ್ನದ್ಧ ಸ್ಥಿತಿಯಲ್ಲಿ ಮತ್ತಷ್ಟು ವಿಮಾನಗಳು
*
ಮೃತ ಶವಗಳ ಸಾಮೂಹಿಕ ಅಂತ್ಯಕ್ರಿಯೆ. ಆಸ್ಪತ್ರೆ ಆವರಣ, ರಸ್ತೆಗಳಲ್ಲಿಯೇ ಗಾಯಾಳುಗಳಿಗೆ ವೈದ್ಯರಿಂದ ಚಿಕಿತ್ಸೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT