ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುವ ಇರುಳುಗಣ್ಣು

Last Updated 17 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಇರುಳುಗಣ್ಣು ರೋಗವಲ್ಲ. ಬದಲಾಗಿ ಪರಿಸ್ಥಿತಿ ವೈಪರೀತ್ಯದ ಲಕ್ಷಣವಾಗಿದೆ. ಕತ್ತಲೆಕುರುಡುತನಕ್ಕೆ ಇನ್ನಿತರ ಕಾರಣಗಳೂ ಇವೆ. ಮಯೋಪಿಯಾ, ಕ್ಯಾಟರ್ಯಾಕ್ಟ್, ಗ್ಲುಕೋಮಾ, ಸರ್ಟನ್ ಗ್ಲುಕೊಮಾ ಮೆಡಿಕೇಷನ್‌ ಹಾಗೂ ಮಧುಮೇಹ. ವಿಟಮಿನ್ ‘ಎ’ ಕೊರತೆಯೇ ಈ ಸಮಸ್ಯೆಯ ಮುಖ್ಯ ಕಾರಣ.

ಇರುಳು ಗಣ್ಣು ಅಥವಾ ನೈಟ್ರೊಲೋಪಿಯಾ ಸಮಸ್ಯೆ ಇರುವವರಿಗೆ ರಾತ್ರಿ ಹೊತ್ತು ದೃಷ್ಟಿ ಕ್ಷೀಣವಾಗುತ್ತದೆ. ಹೆಚ್ಚು ಬೆಳಕಿದ್ದ ಸ್ಥಳದಿಂದ ಏಕಾಏಕಿ ಕತ್ತಲು ಹಾಗೂ ಕಡಿಮೆ ಬೆಳಕು ಇರುವ ಕಡೆಗಳಿಗೆ ಬಂದಾಗ ದೃಷ್ಟಿ ಹೊಂದಾಣಿಕೆಯೂ ಕಷ್ಟವಾಗುತ್ತದೆ. ಈ ಸಮಸ್ಯೆ ಇರುವವರು ರಾತ್ರಿ ಹೊತ್ತು ವಾಹನ ಚಾಲನೆ ಮಾಡುವುದು ಅತ್ಯಂತ ಅಪಾಯಕಾರಿ.

ಇರುಳುಗಣ್ಣು ರೋಗವಲ್ಲ. ಬದಲಾಗಿ ಪರಿಸ್ಥಿತಿ ವೈಪರೀತ್ಯದ ಲಕ್ಷಣವಾಗಿದೆ. ಕತ್ತಲೆಕುರುಡುತನಕ್ಕೆ ಇನ್ನಿತರ ಕಾರಣಗಳೂ ಇವೆ. ಮಯೋಪಿಯಾ, ಕ್ಯಾಟರ್ಯಾಕ್ಟ್, ಗ್ಲುಕೋಮಾ, ಸರ್ಟನ್ ಗ್ಲುಕೊಮಾ ಮೆಡಿಕೇಷನ್‌ ಹಾಗೂ ಮಧುಮೇಹ. ವಿಟಮಿನ್ ‘ಎ’ ಕೊರತೆಯೇ ಈ ಸಮಸ್ಯೆಯ ಮುಖ್ಯ ಕಾರಣ.
ಕಣ್ಣಿನಲ್ಲಿ ದೃಷ್ಟಿಯನ್ನು ಸೆಳೆಯುವ ಸಾಮರ್ಥ್ಯ ನೇರಳೆ ದೃಶ್ಯ ಗ್ರಾಹಿಯಿಂದ ಅಗುತ್ತದೆ. ಇದಕ್ಕೆ ವಿಟಮಿನ್ ‘ಎ’ ಅಂಶ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್ ‘ಎ’ ಕೊರತೆ ನೇರಳೆ ದೃಶ್ಯ ಸೆಳೆಯುವಲ್ಲಿ ವೈಫಲ್ಯ ತಂದಿಡುತ್ತದೆ. ಕಣ್ಣಿನ ರೆಟಿನಾವು ಮಂದ ಬೆಳಕಿನಲ್ಲಿ ಕಾಣುವ ವಸ್ತುವನ್ನು ಗ್ರಹಿಸುವ ಶಕ್ತಿ ಹೊಂದಿದ್ದರೆ ಈ ಸಮಸ್ಯೆ ಬರುವುದಿಲ್ಲ. ಆದರೆ ವಿಟಮಿನ್ ‘ಎ’ ಕೊರತೆ ಈ ಎಲ್ಲಾ ಸಮಸ್ಯೆ ತಂದೊಡ್ಡುತ್ತದೆ. ಈ ಕೊರತೆ ಮಂದ ಬೆಳಕಿನಲ್ಲಿ ವಸ್ತುಗಳನ್ನು ಗ್ರಹಿಸಲು ಕಷ್ಟಸಾಧ್ಯವಾಗುವಂತೆ ಮಾಡುತ್ತದೆ.

ವಿಟಮಿನ್ ‘ಎ’ ಕೊರತೆಯ ಮೊದಲ ಸೂಚನೆ ಇರುಳುಗಣ್ಣು ಸಮಸ್ಯೆ. ಇದನ್ನು ನಿರ್ಲಕ್ಷಿಸಿದರೆ ಮುಂದೆ ಎಕ್ಸರೋಪ್ತೋಲ್ಮಿಯಾ (ಕಣ್ಣೀರು ಬತ್ತಿಹೋದ ಒಣ ಕಣ್ಣು) ಹಾಗೂ ಕೆರತೋಮ್ಲೇಷಿಯಾ (ಕಣ್ಣಿನ ಕರೋನಾ ಭಾಗವನ್ನು ತೆಳುವಾಗಿಸುವ ಹಾಗೂ ಹುಣ್ಣಾಗಿಸು) ಸಮಸ್ಯೆಗೆ ಕಾರಣವಾಗಲಿದೆ. ಆರಂಭದಲ್ಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡರೆ ಸಮಸ್ಯೆಯಿಂದ ಹೊರಬರಲು ಸಾಧ್ಯ. ಇಲ್ಲದಿದ್ದಲ್ಲಿ ಸಂಪೂರ್ಣ ಅಂಧತ್ವ ಉಂಟಾಗುವ ಅಥವಾ ಕಣ್ಣಿನ ಕರೋನಾ ಭಾಗಕ್ಕೆ ದೊಡ್ಡ ಪ್ರಮಾಣದ ಘಾಸಿ ಉಂಟಾಗುವ ಸಾಧ್ಯತೆ ಇರುತ್ತದೆ.

ವಿಟಮಿನ್ ‘ಎ’ ಕೊರತೆಯು ವ್ಯಕ್ತಿಯ ಯಾವುದೇ ವಯೋಮಾನದಲ್ಲಿ ಕಾಡಬಹುದು. ಸರಿಯಾಗಿ ತಾಯಿಯ ಎದೆಹಾಲು ಪಡೆಯದ ಐದು ವರ್ಷ ಕೆಳಗಿನ ಮಕ್ಕಳು ಬಹುಬೇಗ ಈ ಸಮಸ್ಯೆಗೆ ಒಳಗಾಗುತ್ತಾರೆ. ಅಲ್ಲದೇ ಎದೆಹಾಲು ಉಣಿಸಲಾಗದಿದ್ದ ಸಂದರ್ಭದಲ್ಲಿ ಅದಕ್ಕೆ ಪೂರಕ ಪೌಷ್ಟಿಕ ಆಹಾರ ಸಿಗದಿದ್ದರೂ, ಮಕ್ಕಳಲ್ಲಿ ಈ ಸಮಸ್ಯೆ ಎದುರಾಗಬಹುದು.  ಅಪೌಷ್ಟಿಕತನದಿಂದ ಮಕ್ಕಳಿಗೆ ಉದರ ಸಮಸ್ಯೆ, ಸಿರೋಸಿಸ್, ಗಿರಾಡಿಸಿಸ್, ಸ್ಪ್ರೂ ಹಾಗೂ ಇತ್ಯಾದಿ ಸಮಸ್ಯೆ ಎದುರಾಗಬಹುದು. ಅಲ್ಲದೇ ಶರೀರದಲ್ಲಿ ವಿಟಮಿನ್ ಅಂಶದ ಸಂಗ್ರಹವೂ ಕಡಿಮೆ ಆಗಬಹುದು.

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪ್ರತಿವರ್ಷ ಸುಮಾರು 2,50,000 ದಿಂದ 5,00,000 ಮಕ್ಕಳು ವಿಟಮಿನ್ ‘ಎ’ ಕೊರತೆಯಿಂದ ದೃಷ್ಟಿಹೀನರಾಗುತ್ತಿದ್ದಾರೆ. ಅಂಧತ್ವದ ಕಾರಣದಿಂದಲೇ ಒಂದು ವರ್ಷದ ಒಳಗೆ ಈ ಮಕ್ಕಳಲ್ಲಿ ಅರ್ಧದಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ. ಪ್ರಮುಖವಾಗಿ ವಿಟಮಿನ್ ‘ಎ’ ಕೊರತೆಯಿಂದಾಗಿ ಇರುಳು ಗಣ್ಣು ಹಾಗೂ ತಾಯಂದಿರ ಮರಣ ಪ್ರಮಾಣ ಹೆಚ್ಚಾಗುತ್ತಿದೆ. ಅಲ್ಲದೇ ಅಭಿವೃದ್ಧಿಶೀಲ  ರಾಷ್ಟ್ರಗಳಲ್ಲಿ ಗರ್ಭಿಣಿಯರಲ್ಲಿ ಕೂಡ ವಿಟಮಿನ್ ಎ ಕೊರತೆ ಹೆಚ್ಚಾಗಿ ಕಂಡುಬರುತ್ತಿದೆ. ಇದು ಕೇವಲ ಕಣ್ಣಿನ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಬದಲಾಗಿ ಶರೀರದ ಇತರೆ ಅವಯವಗಳ ಮೇಲೂ ಪ್ರಭಾವ ಉಂಟು ಮಾಡುತ್ತದೆ.

ಶಾರೀರಿಕ ದುರ್ಭಲತೆ ಹಾಗೂ ಕುಗ್ಗಿಸುವಿಕೆ ಜತೆಗೆ ವಿವಿಧ ಸೋಂಕು ಕೂಡ ಆವರಿಸಲು ಸಹಾಯಕವಾಗುತ್ತದೆ. ಮಕ್ಕಳಲ್ಲಿ ರೋಗವನ್ನು ಪ್ರತಿರೋಧಿಸುವ ಶಕ್ತಿ ಕಡಿಮೆ ಇರುತ್ತದೆ. ಇದರಿಂದ ಮಕ್ಕಳು ದಡಾರದಂತಹ ರೋಗಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ವಿಟಮಿನ್ ‘ಎ’ ಕೊರತೆ ಸಾವಿನ ಪ್ರಮಾಣವನ್ನು ವೃದ್ಧಿಸುತ್ತದೆ. ಅತಿ ಸಣ್ಣ ಪ್ರಮಾಣದ ವಿಟಮಿನ್ ‘ಎ’ ಕೊರತೆ ಕೂಡ ಮಕ್ಕಳಲ್ಲಿ ದೊಡ್ಡ ಪರಿಣಾಮ ಬೀರುತ್ತದೆ. ಮಕ್ಕಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಕರುಳು ಸಂಬಂಧಿ ಸಮಸ್ಯೆಗೂ ಕಾರಣವಾಗುತ್ತದೆ. ಗಂಭೀರ ಪ್ರಮಾಣದ ಸೋಂಕಿಗೆ ಕಾರಣವಾಗುವ ಸಾಧ್ಯತೆಯೂ ಇರುತ್ತದೆ.

ಸರಿಯಾದ ಪ್ರಮಾಣದಲ್ಲಿ ವಿಟಮಿನ್ ‘ಎ’ ಮೂಲಗಳನ್ನು ದೈನಂದಿನ ಆಹಾರ ಕ್ರಮದಲ್ಲಿ ಒದಗಿಸುವುದೊಂದೇ ಈ ಕೊರತೆಯ ನಿವಾರಣೆಗೆ ಸಿದ್ಧಸೂತ್ರವಾಗಿದೆ. ಅಲ್ಲದೇ ಇದು ದೊಡ್ಡ ಪ್ರಮಾಣದಲ್ಲಿ ಕಾಡಬಹುದಾದ ಅಂಧತ್ವ ಹಾಗೂ ಅದರ ಸಂಬಂಧಿ ಸಮಸ್ಯೆಯನ್ನು ತಡೆಯುತ್ತದೆ.

ಪ್ರಾಣಿಗಳ ಆಹಾರವಾದ ಕಾಡ್‌ಲಿವರ್ ಎಣ್ಣೆ, ಮೀನು, ಲಿವರ್, ಮೊಟ್ಟೆ ಹಾಗೂ ಹಾಲು ಅಗಾಧ ಪ್ರಮಾಣದಲ್ಲಿ ವಿಟಮಿನ್ ‘ಎ’ ಅಂಶವನ್ನು ಒಳಗೊಂಡಿರುತ್ತವೆ. ಹಸಿರು ಎಲೆ, ತರಕಾರಿ, ಹಳದಿ, ಕಿತ್ತಳೆ ಹಾಗೂ ಕೆಂಪು ಬಣ್ಣದ ಹಣ್ಣುಗಳು ಹಾಗೂ ತರಕಾರಿಗಳಾದ ಪಪ್ಪಾಯ, ಮಾವು, ಕಿತ್ತಳೆ, ಕ್ಯಾರೆಟ್, ಸ್ಕ್ವಾಶ್, ಕುಂಬಳಕಾಯಿ, ಟೊಮೆಟೊ ಉತ್ತಮವೆನಿಸಿವೆ. ಆಹಾರದ ಕೊಬ್ಬಿನ ರೂಪದಲ್ಲಿ ಶರೀರಕ್ಕೆ ತಲುಪುವ ವಿಟಮಿನ್ ‘ಎ’ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ.

ಎದೆಹಾಲು ಸೇವಿಸಲು ಸಾಧ್ಯವಾಗದ ಮಕ್ಕಳಿಗೆ ಅದಕ್ಕೆ ಸರಿಸಮನಾದ ವಿಟಮಿನ್ ಅಂಶ ಒಳಗೊಂಡ ಆಹಾರವನ್ನು ನೀಡಬೇಕಾಗುತ್ತದೆ. ವಿಟಮಿನ್ ‘ಎ’ ಕೊರತೆ ಇರುವುದನ್ನು ವೈದ್ಯರನ್ನು ಸಂಪರ್ಕಿಸಿ ದೃಢಪಡಿಸಿಕೊಳ್ಳುವುದು ಉತ್ತಮ. ಮಕ್ಕಳು ಹಾಗೂ ಯುವಕರಲ್ಲಿ ಸ್ವಲ್ಪ ಅಂಧತ್ವದ ಲಕ್ಷಣ ಕಾಣಿಸಿದರೂ ನಿರ್ಲಕ್ಷ್ಯ ಮಾಡುವುದು ಒಳ್ಳೆಯದಲ್ಲ. ಆದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ ತಪಸಣೆಗೆ ಒಳಪಡುವುದು ಉತ್ತಮ. ಇರುಳುಗಣ್ಣು ಸಮಸ್ಯೆ ಮೇಲ್ನೋಟಕ್ಕೆ ತಿಳಿಯುವ ಸಮಸ್ಯೆ ಅಲ್ಲ. ಯಾವುದೇ ಮಗು ಅಥವಾ ಯುವಕರು ವಿಟಮಿನ್ ‘ಎ’ ಕೊರತೆಯಿಂದ ಬಳಲುತ್ತಿದ್ದರೆ, ವೈದ್ಯರು ಸೂಚಿಸಿದ ವಿಟಮಿನ್ ‘ಎ’ ಅಂಶವಿರುವ ಉಪ ಆಹಾರ ಸೇವನೆಯನ್ನು ತಕ್ಷಣ ಆರಂಭಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT