ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುವ ಕಾನನದ ಕಾನೂರ ಮನೆ

ಪಿಸುಗುಡುವ ಚಿತ್ರಪಟ * ವಿವೇಕ್‌ ಮುತ್ತುರಾಮಲಿಂಗಂ
Last Updated 28 ಮೇ 2016, 19:30 IST
ಅಕ್ಷರ ಗಾತ್ರ

ಅದು 2003ರ ಮುಂಗಾರು ಸಮಯ. ನಾನು ಮತ್ತು ನನ್ನ ಆಪ್ತ ಗೆಳೆಯ ಕಿಶೋರ್‌ ಮೂರ್ತಿ ಇಬ್ಬರೂ ಕರ್ನಾಟಕ ಪಶ್ಚಿಮ ಘಟ್ಟದಲ್ಲಿನ ಗೋವರ್ಧನಗಿರಿಗೆ ಚಾರಣಕ್ಕೆ ಹೋಗಿದ್ದೆವು. 16ನೇ ಶತಮಾನದ ರಾಣಿ ಚೆನ್ನಭೈರಾದೇವಿಯ ಕೋಟೆ ನಮ್ಮ ಚಾರಣದ ಅಂತಿಮ ಗುರಿಯಾಗಿತ್ತು. ನಿಧಾನಕ್ಕೆ ಆವರಿಸಿಕೊಳ್ಳುತ್ತಿರುವ ಕಾಡಿನ ಸೆರಗಲ್ಲಿ ಮರೆಯಾಗುತ್ತಿರುವ ಪಾಳುಬಿದ್ದ ಕೋಟೆಯದು.

ಮೊದಲಿನಿಂದಲೂ ಕಿಶೋರ್‌ ಮತ್ತು ನಾನು ಕಾಲೇಜಿಗೆ ರಜ ಹಾಕಿ ಆಗೀಗ ಕಾಡು ಸುತ್ತಲು ಹೋಗುವುದು ಸಾಮಾನ್ಯವಾಗಿತ್ತು. ಅದು ನಮಗೆ ಅತ್ಯಂತ ಖುಷಿ ಕೊಡುವ ಸಂಗತಿಯಾಗಿತ್ತು. ಈಗ ಮತ್ತೆ ಕೈಬೀಸಿ ಕರೆಯುವ ಅದರ ಆಕರ್ಷಣೆಗೆ ಓಗೊಟ್ಟು ಕಾಡಿನ ಮಡಿಲಿಗೆ ಮರಳಿದ್ದೆವು. ಈ ಸಲ ನಾವು ಆಯ್ದುಕೊಂಡಿದ್ದು ಶಿವಮೊಗ್ಗದ ಶರಾವತಿ ಕಣಿವೆಯ ಹಚ್ಚ ಹಸಿರ ಅಡವಿ.

ನಾವಿಬ್ಬರೂ ಅರಣ್ಯ ಸಂಚಾರದಲ್ಲಿ ಪರಿಣತರೇ ಆಗಿದ್ದರೂ ಈ ಸಲ ಅದೃಷ್ಟ ನಮ್ಮ ಪರವಾಗಿ ಇದ್ದಂತಿರಲಿಲ್ಲ. ಬೆಳಕು ವೇಗವಾಗಿ ಕಂದುತ್ತಿದ್ದುದರಿಂದ ಸಾಧ್ಯವಾದಷ್ಟೂ ಬೇಗ ರಾತ್ರಿ ಉಳಿದುಕೊಳ್ಳಲು ಒಂದು ಆಶ್ರಯ ಕಂಡುಕೊಳ್ಳುವುದು ನಮ್ಮ ಅವಶ್ಯಕತೆಯಾಗಿತ್ತು. ಅದೇ ಸಮಯಕ್ಕೆ ಸರಿಯಾಗಿ ಮಳೆ ಬರುವ ಸೂಚನೆಗಳೂ ಗೋಚರಿಸತೊಡಗಿ, ನಮ್ಮ ಆತಂಕವನ್ನು ಇನ್ನೂ ಹೆಚ್ಚಿಸಿತು. ಆ ಕಳವಳದ ಕ್ಷಣಗಳಲ್ಲಿಯೇ ನಾವು ನಿಂತುಕೊಂಡಿದ್ದ ಹಳ್ಳದ ಇನ್ನೊಂದು ದಡದಲ್ಲಿ ಮನೆಯೊಂದರಲ್ಲಿ ತುಯ್ದಾಡುತ್ತಿರುವ ದೀಪದ ಬೆಳಕು ಕಾಣಿಸಿತು.

ಆ ರಾತ್ರಿ ನಮಗೆ ಆಶ್ರಯ ಕೊಟ್ಟು ಆತಿಥ್ಯ ನೀಡಿದ ಆ ಮನೆ ಕಾನೂರಿನ ಕೃಷಿಕ ನೀಲಕುಮಾರ್‌ ಜೈನ್‌ ಅವರದು. ಅವರ ಪತ್ನಿ ರಾಜಮತಿ, ಶಾಲೆಗೆ ಹೋಗುವ ಮೂವರು ಮಕ್ಕಳ ಕುಟುಂಬ ಅದು. ಮೊದಲ ಆತಿಥ್ಯದಲ್ಲಿಯೇ ನಮ್ಮ ಮತ್ತು ಆ ಕುಟುಂಬದ ಸುದೀರ್ಘ, ಸುಮಧುರ ಸಂಬಂಧದ ಸೂಚನೆಗಳು ಗೋಚರಿಸಿದ್ದವು.

ರಾಜಮತಿ ಅವರು ಅದ್ಯಾವ ಪರಿ ಪ್ರೀತಿ – ವಾತ್ಸಲ್ಯದಿಂದ ನಮ್ಮನ್ನು ಉಪಚರಿಸಿದರೆಂದರೆ, ಕೆಲವೇ ಕ್ಷಣಗಳಲ್ಲಿ ‘ಅದು ನಮ್ಮದೇ ಮನೆ’ ಅನ್ನಿಸಲು ಶುರುವಾಗಿಬಿಟ್ಟಿತ್ತು.ರಾತ್ರಿ ಊಟಕ್ಕೆ ಕೆಂಪಕ್ಕಿಯ ಬಿಸಿಬಿಸಿ ಅನ್ನ, ಮಂಗಳೂರು ಸೌತೆಕಾಯಿಯ ಹುಳಿ ಮಾಡಿ ತೋಟದಿಂದ ಕೊಯ್ದು ತಂದ ಬಾಳೆಎಲೆಯ ಮೇಲೆ ಒತ್ತಾಯ ಮಾಡಿ ಬಡಿಸಿದರು.

ಅಡುಗೆ ಮನೆ ಮತ್ತು ಹೊರಜಗುಲಿ ನಡುವೆ ಅವಸರವಸರವಾಗಿ ಓಡಾಡುತ್ತಲೇ ಇದ್ದ ಅವರು ಒಂದು ನಿಮಿಷವೂ ಬಿಡದೇ ನಮ್ಮೊಂದಿಗೆ ಮಾತಾಡುತ್ತಲೇ ಇದ್ದರು. ತುಂಬ ಹೊತ್ತಿನವರೆಗೆ ನಮ್ಮ ಮಾತುಕತೆ ಮುಂದುವರಿದಿತ್ತು.

ರಾತ್ರಿ ಹಾಸಿಗೆಯಲ್ಲಿ ಮಲಗಿ  ರಾಜಮತಿ ಮತ್ತು ಮಕ್ಕಳು ಹಾಡಿದ ಇಂಪಾದ ಜನಪದ ಗೀತೆಗಳನ್ನು ಕೇಳುತ್ತಾ ನಾನು ಮತ್ತು  ಕಿಶೋರ್‌ ಯಾವ ಮಾಯೆಯಲ್ಲಿ ನಿದ್ರಾವಶರಾದೆವೋ ಗೊತ್ತಾಗಲಿಲ್ಲ. ಅವತ್ತು ರಾತ್ರಿ ರಭಸವಾಗಿ ಮಳೆ ಸುರಿಯಿತು.
* * *
2003ರ ಆ ಚಾರಣದ ನಂತರ ಕಾನೂರಿಗೆ ನಾನು ಭೇಟಿ ನೀಡುವುದು ವಾರ್ಷಿಕ ಸಂಗತಿಯಾಗಿಬಿಟ್ಟಿತು. ಇಂಥ ಭೇಟಿಗಳಲ್ಲೆಲ್ಲ ನನ್ನ ಗುರಿ ಚೆನ್ನಭೈರಾದೇವಿಯ ಕೋಟೆಯಿಂದ ನೀಲಕುಮಾರ್‌ ಮತ್ತು ರಾಜಮತಿ ಅವರ ತೋಟಕ್ಕೆ ಬದಲಾಯಿತು.

ಪ್ರತಿ ಸಲ ಅಲ್ಲಿಗೆ ಹೋಗುವಾಗಲೂ ಅಪ್ಪಟ ಗ್ರಾಮ್ಯ ಬದುಕನ್ನು ಪ್ರೀತಿಸುವ ಬೇರೆ ಬೇರೆ ಸ್ನೇಹಿತರನ್ನು ಜತೆಗೆ ಕರೆದುಕೊಂಡು ಹೋಗಿ, ದಟ್ಟವಾದ ಕಾಡುಗಳಲ್ಲಿ ಅಡ್ಡಾಡಿ ಮಲೆನಾಡ ಮಳೆಯಲ್ಲಿ ತೋಯ್ದು ಖುಷಿಪಡುತ್ತಿದ್ದೆ. ಕೆಲವೊಮ್ಮೆ ಈ ಅಂತರ್ಜಾಲ, ಅಸೈನ್‌ಮೆಂಟುಗಳ ಜಗತ್ತಿನಿಂದ ತಪ್ಪಿಸಿಕೊಳ್ಳಲು, ನನ್ನ ಅಂತರಂಗದ ಪ್ರಕ್ಷುಬ್ಧತೆಯನ್ನು ಶಮನಮಾಡಿಕೊಳ್ಳಲು ಒಬ್ಬಂಟಿಯಾಗಿ ಅಲ್ಲಿಗೆ ಹೋಗುವುದೂ ಇತ್ತು.

ಆ ತೋಟ – ಮನೆ – ಕುಟುಂಬವನ್ನು ಹತ್ತಿರದಿಂದ ಗಮನಿಸುತ್ತಾ ಹೋದಂತೆ ನನಗೆ ಒಂದು ಅಂಶ ತಿಳಿಯಿತು. ಆ ತೋಟ –ಕುಟುಂಬದಲ್ಲಿ ತುಂಬಿ ತುಳುಕುತ್ತಿರುವ ಸಂತೋಷದ ಮೂಲಸೆಲೆ ರಾಜಮತಿ ಅವರೇ ಆಗಿದ್ದರು.

ರಾಜಮತಿ ಮನೆಯಲ್ಲಿರುವಾಗ ಬೇಸರದ ಕ್ಷಣಗಳು ಎಂಬುದೇ ಇರುತ್ತಿರಲಿಲ್ಲ. ಯಾವಾಗಲೂ ‘ಕಾಫೀ ಬೇಕಾ? ಟೀ ಬೇಕಾ?’ ಎಂದು ಕೇಳುತ್ತಾ, ಏನೇನೋ ತಿಂಡಿಗಳನ್ನು ಮಾಡಿಕೊಡುತ್ತಾ ಎಲ್ಲರೂ ಖುಷಿಯಾಗಿರುವಂತೆ ಅವರು ನೋಡಿಕೊಳ್ಳುತ್ತಿದ್ದರು. ಆತಿಥ್ಯದ ವಿಷಯದಲ್ಲಿ ಅವರಿಗೆ ಸರಿಸಾಟಿಯೇ ಇಲ್ಲ.  ಯಾವಾಗಲೂ ಅದು ಇದು ಏನಾದರೂ ಒಂದು ಮಾಡುತ್ತಲೇ ಇರುತ್ತಿದ್ದರೇ ವಿನಾ ಸುಮ್ಮನೇ ಕುಳಿತುಕೊಳ್ಳುವವರೇ ಅಲ್ಲ.

ಸಾಯಂಕಾಲ ಆಕಳ ಹಾಲು ಕರೆದು ನಮಗೆ ತಾಜಾ ಹಾಲಿನ ಟೀ ಮಾಡಿಕೊಡುತ್ತಿದ್ದರು. ಹೊಸ್ತಿಲಲ್ಲಿ ಕೂತು ಬಿಸಿ ಬಿಸಿ ಟೀ ಹೀರುವ ಕೆಲವೇ ಗಳಿಗೆಗಳಲ್ಲಿ ಮಾತ್ರ ಅವರು ತಮ್ಮದೇ ಲೋಕದಲ್ಲಿ ಕಳೆದುಹೋದವರಂತೆ ತೋರುತ್ತಿದ್ದರು. ಅಂಥ ಕ್ಷಣಗಳಲ್ಲಿ ಅವರ ತಲೆಯಲ್ಲಿ ಏನು ಓಡುತ್ತಿರಬಹುದು ಎಂದು ನನಗೆ ಅಚ್ಚರಿಯಾಗುತ್ತಿತ್ತು.

ನೀಲ್‌ಕುಮಾರ್‌ ಮತ್ತು ರಾಜಮತಿ ಅವರ ತೋಟಕ್ಕೆ ನಾನು ಕೊನೆಯ ಸಲ ಭೇಟಿ ನೀಡಿದ್ದು ಕಳೆದ ವರ್ಷ ನವೆಂಬರ್‌ನಲ್ಲಿ. ಅದು ಒಂದು ದಿನದ ಚುಟುಕು ಭೇಟಿ. ನಾನಾಗ ಮಳೆ ಮತ್ತು ಹವಾಮಾನ ಬದಲಾವಣೆಯ ನಡುವಿನ ಸಂಬಂಧಗಳ ಮೇಲಿನ ಅಧ್ಯಯನದಲ್ಲಿ ತೊಡಗಿಕೊಂಡಿದ್ದೆ.  (The couple’s understanding of the rains and how it was being affected by climate change) ದುರದೃಷ್ಟವಶಾತ್‌ ಆ ಭರವಸೆ ಈಡೇರಿಸಲು ಸಾಧ್ಯವಾಗಲೇ ಇಲ್ಲ.

ಅದಾಗಿ ಒಂದು ತಿಂಗಳ ನಂತರ, ಅಂದರೆ ಕಳೆದ ವರ್ಷ ನವೆಂಬರ್‌ 24ರ ರಾತ್ರಿ ರಾಜಮತಿ ಅವರಿಗೆ ತೀವ್ರ ಹೃದಯಾಘಾತವಾಗಿ, ಅವರನ್ನು ಕುಟುಂಬದವರು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿಯೇ ಕೊನೆಯುಸಿರೆಳೆದಿದ್ದರು. ‘ವಿವೇಕಣ್ಣಾ’ ಎಂದು ವಾತ್ಸಲ್ಯಪೂರ್ಣವಾಗಿ ಕರೆಯುತ್ತಿದ್ದ ಅವರ ಧ್ವನಿ ಇಲ್ಲದೇ ಈಗ ಕಾನೂರಿನ ಮನೆ ಮೌನವಾಗಿದೆ.
* * *
ಪ್ರೀತಿಯ ರಾಜಮತಿ, ಎಲ್ಲಿಯೇ ಇರಿ, ನೀವು ಚೆನ್ನಾಗಿದ್ದೀರೆಂದು ನಂಬಿದ್ದೇನೆ. ನನಗೊಂದೇ ಒಂದು ಆಸೆ ಇದೆ. ಏನೆಂದರೆ, ನಿಮ್ಮ ಪರಿಚಯವಾಗಲಿಕ್ಕೆ, ನಿಮ್ಮೊಡನೆ ಒಡನಾಡಲಿಕ್ಕೆ ನಾನು ನಿಜಕ್ಕೂ ಅದೃಷ್ಟ ಮಾಡಿದ್ದೆ ಎಂಬುದನ್ನು ನಿಮಗೆ ತಿಳಿಸಬೇಕಿದೆ.

ಬೆಂಗಳೂರು ಮೂಲದ ವಿವೇಕ ಮುತ್ತುರಾಮಲಿಂಗಂ ಸ್ವತಂತ್ರ ಛಾಯಾಗ್ರಾಹಕರು. ‘ಕೆನ್‌ ಸ್ಕೂಲ್‌ ಆಫ್‌ ಆರ್ಟ್‌’ನಲ್ಲಿ ಲಲಿತಕಲೆಯನ್ನು ಅಭ್ಯಸಿಸಿರುವ ಅವರು, ಔಷಧವಿಜ್ಞಾನವನ್ನೂ ಓದಿದ್ದಾರೆ. ಬೆಂಗಳೂರಿನಲ್ಲಿನ ಮಣಿಪಾಲ ಆಸ್ಪತ್ರೆಯ ಯೂರೋಲಾಜಿ ವಿಭಾಗದಲ್ಲಿ ಕಿರಿಯ ಶಸ್ತ್ರಚಿಕಿತ್ಸಕರಾಗಿ ಕೆಲಸ ಮಾಡಿದ ಅನುಭವವೂ ಇದೆ.

ವಿವೇಕ್‌ ಅವರ ಛಾಯಾಚಿತ್ರಗಳು ‘ದ ವಾಲ್‌ ಸ್ಟ್ರೀಟ್‌ ಜರ್ನಲ್‌’, ‘ನ್ಯಾಷನಲ್‌ ಜಿಯೊಗ್ರಾಫಿಕ್‌ ಟ್ರಾವೆಲರ್‌’, ‘ದ ಸಂಡೇ ಗಾರ್ಡಿಯನ್‌’, ‘ಮದರ್‌ಲ್ಯಾಂಡ್‌ ಮ್ಯಾಗಜಿನ್‌’, ‘ಡೌನ್‌ ಟು ಅರ್ತ್‌’, ‘ಓಪನ್‌’ ಸೇರಿದಂತೆ ಅನೇಕ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 2009ರಿಂದ 2011ರವರೆಗೆ ‘ಟೈಮ್‌ ಔಟ್‌’ ನಿಯತಕಾಲಿಕೆಯಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.

‘ಸಾಮಾಜಿಕ ಪ್ರಸ್ತುತತೆ, ಪರಿಸರದ ತುರ್ತು, ಸಾಂಸ್ಕೃತಿಕ ಮಹತ್ವದ ವಿಷಯಗಳು ನನ್ನ ಛಾಯಾಗ್ರಹಣದ ದಾರಿಯನ್ನು ರೂಪಿಸಿದ ಮುಖ್ಯ ಅಂಶಗಳು. ನನ್ನ ಚಿತ್ರಗಳ ಮೂಲಕ ಸಾಮಾಜಿಕ ಬದಲಾವಣೆ ಮತ್ತು ಸುಸ್ಥಿರತೆಯ ಪ್ರಕ್ರಿಯೆಗೆ ಏನಾದರೂ ಕೊಡುಗೆ ನೀಡಲು ಸಾಧ್ಯವೇ ಎಂಬುದು ನನ್ನ ಮುಖ್ಯ ಕಾಳಜಿ’ ಎನ್ನುವ ವಿವೇಕ್‌ ಅವರ ಛಾಯಾಚಿತ್ರಗಳನ್ನು vivekm.comದಲ್ಲಿ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT