ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುವ ಹಳೆಯ ಕಥನ

Last Updated 21 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಬೆಂಗಳೂರಿನ ‘ರಂಗಶಂಕರ’ದಲ್ಲಿ ಧಾರವಾಡದ ‘ಸಮುದಾಯ’ ರಂಗತಂಡ ಪ್ರದರ್ಶಿಸಿದ ‘ಹಸಿವೆಂಬೋ ಹಸಿವು’ ಅಥವಾ ‘ದೇವರ ಹೆಣ’ ನಾಟಕ ಪ್ರಸಿದ್ಧ ಲೇಖಕ ಕುಂ.ವೀರಭದ್ರಪ್ಪ ಅವರ ಸಣ್ಣಕತೆಯನ್ನು ಆಧರಿಸಿದ್ದು.

ದಲಿತಪ್ರಜ್ಞೆ, ಹಸಿವು-ಬಡತನ, ಶೋಷಣೆ, ಉಳ್ಳವರ ದಬ್ಬಾಳಿಕೆ ಮುಂತಾದ ಮಾನವೀಯ ಮೌಲ್ಯಗಳ ಹಾಗೂ ಅನ್ಯಾಯಗಳ ವಿರುದ್ಧ ಕಥೆ ಹೆಣೆಯುವುದು ಅವರ ವೈಶಿಷ್ಟ್ಯ. ಈ ನಾಟಕದಲ್ಲೂ ಬಡವ-ಬಲ್ಲಿದರ ನಡುವಿನ ದೊಡ್ಡ ಕಂದರವನ್ನು, ಹಸಿವಿನ ಹಾಹಾಕಾರವನ್ನು ಹೃದಯಸ್ಪರ್ಶಿಯಾಗಿ ರಂಗದ ಮೇಲೆ ನಿರೂಪಿಸಿದ್ದಾರೆ.

ಬಹುಶಃ ೩೦–-೪೦ ವರ್ಷಗಳ ಕೆಳಗೆ ಇದ್ದಿರಬಹುದಾದ ಒಂದು ಹಳ್ಳಿಯ ಸಾಮಾನ್ಯ ಕಥೆ. ಹಸಿವು ಅಂದಿನ ದೊಡ್ಡ ಬಾಧೆ. ಈಗ ಹೊಟ್ಟೆ ಹಸಿವಿನ ಚುರುಕು, ಅದರ ಸಮಸ್ಯೆ ಅಷ್ಟಾಗಿ ಮನದಟ್ಟಾಗದಿರಬಹುದು. ಕಾರಣ ಸರ್ಕಾರದ ಈಗಿನ ಅನೇಕ ಫಲಾನುಭವಿ  ಯೋಜನೆಗಳು, ವ್ಯವಸಾಯ ಪ್ರದೇಶಗಳಲ್ಲಿ ಕೂಲಿ ಕಾರ್ಮಿಕರ ಕೊರತೆ, ಸಮಾಜದ ಕೆಳಮಟ್ಟದ ಜನರಿಗೆ ಇರುವ ಕಾನೂನು ಪ್ರಜ್ಞೆ, ಅರಿವು ಮುಂತಾದ ಅಂಶಗಳೆನ್ನಬಹುದು.

ಹಳ್ಳಿಯ ಚಿತ್ರಗಳು ಇಂದು ಬದಲಾಗಿವೆ. ಆದ್ದರಿಂದ ಈ ನಾಟಕದ ಕಾಲಘಟ್ಟವನ್ನು ತುಸು ಹಿಂದಿನ ದಶಕಗಳದ್ದೆಂದು ಕಲ್ಪಿಸಿಕೊಳ್ಳಬೇಕು. ಇಲ್ಲಿ ನಡೆಯುವ ಪ್ರಕರಣಗಳು ಹಳ್ಳಿಗಾಡಿನಲ್ಲಿ ನಡೆಯುತ್ತಿದ್ದುದಂತೂ ನಿಜ. ದಲಿತ ಕುಟುಂಬವೊಂದರ ಕರುಣಾಜನಕ ಕಥೆ ಇಲ್ಲಿ ಅನಾವರಣಗೊಳ್ಳುತ್ತದೆ.

ಗೌಡರ ಮನೆಯಲ್ಲಿ ಜೀತ ಮಾಡುತ್ತಿದ್ದ ಟೊಣ್ಯನ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಮಕ್ಕಳು ಬಟ್ಟೆಯ ಮೇಲಿನ ಚಿಗಟಗಳನ್ನೇ ಹೆಕ್ಕಿ ತಿನ್ನುವ, ನೆಲದ ಮೇಲೆ ಹರಿದಾಡುವ ಕೆಂಜಗಗಳನ್ನೇ ಹಿಡಿದು ತಿಂದು ಹೊಟ್ಟೆ ತುಂಬಿಸಿಕೊಳ್ಳುವಂಥ ದೈನೇಸಿ ಪರಿಸ್ಥಿತಿ. ಊರಗೌಡನ ಮನೆಯ ‘ದೇವರು’ ಎನ್ನುವ ಎತ್ತು ಅನಾರೋಗ್ಯದಿಂದ ಸಾಯುವ ಹಂತ ತಲುಪಿದ ಸುದ್ದಿ ಕೇಳಿ ಟೊಣ್ಯನ ಮನೆಯವರಿಗೆಲ್ಲ ಆನಂದವೋ ಆನಂದ. ಸತ್ತ ಪ್ರಾಣಿ ತಿಂದು ಬದುಕುವ ಅಭ್ಯಾಸ- ಅವರದು.

ಸತ್ತ ಎತ್ತಿನ ಹೆಣ ದೊರೆಯುವ ಸಂತಸದಿಂದ ಟೊಣ್ಯ ಕುಣಿಯುತ್ತ ಗೌಡರ ಮನೆ ತಲುಪಿದರೆ, ಅಲ್ಲಾಗಲೇ ಸತ್ತ ಆ ಎತ್ತಿಗೆ ಪೂಜೆ ಮಾಡಿ ತೋಟದಲ್ಲಿ ಹೂಳುವ ಏರ್ಪಾಟು ಮಾಡುತ್ತಿರುವುದನ್ನು ಕಂಡು ಟೊಣ್ಯನ ಎದೆ ಒಡೆಯುತ್ತದೆ. ಹೆಣವನ್ನು ತನಗೇ ಕೊಡಬೇಕೆಂದವನು ಹಟ ಹಿಡಿದರೂ ಪ್ರಯೋಜನವಾಗದೇ ಎತ್ತಿನಹೆಣವನ್ನು ಗೌಡನ ತೋಟದಲ್ಲಿ ಹೂಳುತ್ತಾರೆ.

ಹಸಿವಿಂದ ಸಾಯುತ್ತಿರುವ ಮನೆಯವರ ಪರಿಸ್ಥಿತಿ ನೆನೆದು ದಿಕ್ಕೆಟ್ಟ ಟೊಣ್ಯ ಮುಂದಿನ ಪರಿಣಾಮ ಯೋಚಿಸದೆ ಗೋರಿಯನ್ನು ಅಗೆದು ಎತ್ತಿನಹೆಣ ತೆಗೆದು ಅದರ ಮಾಂಸವನ್ನು ಹೆಂಡತಿಗೆ ಅಡುಗೆ ಮಾಡಲು ಕೊಟ್ಟು, ಚರ್ಮ ಮಾರಲು ಹೋದಾಗ ಗೌಡನ ಕೈಗೆ ಸಿಕ್ಕುಬಿದ್ದು ಹೊಡೆತ ತಿನ್ನುತ್ತಾನೆ.

ಕೊನೆಗೆ ಪೊಲೀಸರು ಅವನ ಮನೆಮಂದಿಯನ್ನೆಲ್ಲ ಜೈಲಿಗೆ ಹಾಕುವುದಾಗಿ ಬೆದರಿಸಿದಾಗ ಆ ಬಡ ಕುಟುಂಬ ಹೆದರುವ ಬದಲು, ಅಲ್ಲಾದರೂ ತಮಗೆ ಹೊಟ್ಟೆತುಂಬ ಊಟ ಸಿಗುವುದಲ್ಲ ಎಂದು ಖುಷಿಗೊಳ್ಳುತ್ತಾರೆ. ಅವರು ಸೆರೆವಾಸಕ್ಕೂ ರೆಡಿಯೆಂದು ತಿಳಿದಾಗ ಪೊಲೀಸ್ ಕಕ್ಕಾಬಿಕ್ಕಿಯಾಗಿ ಅಲ್ಲಿಂದ ಮಾಯ! ಆದರವರು ತಮ್ಮನ್ನು ಜೈಲಿಗೆ ಹಾಕಿಸಲೇಬೇಕೆಂದು ಗೌಡನಿಗೆ ದುಂಬಾಲು ಬೀಳುತ್ತಾರೆ. ಹಸಿವು ಅವರಲ್ಲಿ ಭಂಡತನ, -ಹಟ ಹುಟ್ಟು ಹಾಕಿರುತ್ತದೆ. ಅವರು ಹಸಿವಿನಿಂದ ಅರಚುತ್ತ ಗೌಡನ ಕಾಲು ಕಟ್ಟಿಕೊಂಡಾಗ ಕಂಗಾಲಾಗುವ ಪರಿಸ್ಥಿತಿ ಗೌಡನದಾಗುತ್ತದೆ.

ನಾಟಕ ಮುಗಿದಾಗ ಪ್ರೇಕ್ಷಕರಲ್ಲಿ ಒಂದು ಅನನ್ಯ ಅನುಭವ. ಎದುರಿಗೆ ಕಾಣುವ ಕಡುಬಡತನದ ರೂಪಗಳು, ಸನ್ನಿವೇಶ, ಹತಾಶ ಮನೋಭಾವ ನೋಡುಗರನ್ನು ಆವರಿಸಿಕೊಂಡಿದ್ದವು. ಹಸಿವಿನ ತೀವ್ರತೆಯನ್ನು ಕರುಳು ಕಿವುಚುವ ದೃಶ್ಯಗಳ ಮೂಲಕ ಇಲ್ಲಿ ಮನಗಾಣಿಸಲಾಗಿದೆ. ಹಳ್ಳಿಯಲ್ಲಿನ ದಲಿತ ಕುಟುಂಬವೊಂದರ ಬಡತನದ ಪರಮಾವಧಿ, ಅಲ್ಲಿನ ಗೌಡಿಕೆಯ ದರ್ಪ, ಅಧಿಕಾರ, ಶ್ರೀಮಂತಿಕೆಯ ಅಟ್ಟಹಾಸ, ಕ್ರೌರ್ಯವನ್ನು ಟೊಣ್ಯನ ಸಂಸಾರದ ಉದಾಹರಣೆಯ ಮೂಲಕ ನೋಡುಗರಿಗೆ ಮನಮಿಡಿಯುವಂತೆ ದಾಟಿಸಲಾಗಿದೆ.

ನಾಟಕದ ಪ್ರಾರಂಭ ದೃಶ್ಯದಲ್ಲೇ ಕಥೆಯ ತಿರುಳನ್ನು ಸಾಂಕೇತಿಸುವಂತೆ ಶ್ರಮಸಂಸ್ಕೃತಿಯ ಚಿತ್ರಣ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ನಾಂದಿಗೀತೆಯ ಮೂಲಕ ಎಲ್ಲ ಪಾತ್ರಗಳನ್ನು ಸ್ಥಾಯೀರೂಪದಲ್ಲಿ ಪರಿಚಯಿಸುವ ರಂಗದ ಮೊದಲ ದೃಶ್ಯ ಪರಿಣಾಮಕಾರಿಯಾಗಿದೆ. ಸಮಾಜದ ತಳಮಟ್ಟದ ಪ್ರತಿನಿಧಿ ಟೊಣ್ಯ ಆಡುವ ಒಂದೊಂದು ಮಾತೂ ಎದೆಯನ್ನು ಭರ್ಜಿಯಂತೆ ತಿವಿದು ನಮ್ಮ ನೈತಿಕಪ್ರಜ್ಞೆಯನ್ನು ಕಾಡುತ್ತದೆ.

ಜಿೀವನವೆಲ್ಲ ಗೌಡನ ಮನೆಯಲ್ಲಿ ಜೀತಮಾಡಿ ನವೆಯುವ ಅವನು- ‘ನಿಮಗೆ ನಮ್ಮ ರಕ್ತ ಬೇಕು, ನಮ್ಮ ಬೆವರು ಬೇಕು, ನಮ್ಮ ಎದೆಬಸಿತದ ದುಡಿಮೆ ಬೇಕು, ನಮ್ಮ ಇಡೀ ಜೀವನದ ಜೀತ ನಿಮಗೇ ಮುಡಿಪಾಗಬೇಕು. ಆದರೆ ನಾವು ಮಾತ್ರ ನಿಮಗೆ ಬೇಡವಾದೆವೇ? ನಾವು ಮಾಡಿಕೊಡುವ ಎಕ್ಕಡ ತೊಡುವ ನೀವು ಅದೇ ಕಾಲುಗಳಿಂದ ನಮ್ಮನ್ನು ಒದೀತೀರಾ?...ಬದುಕಿದ್ದೆಲ್ಲ ನೀವು ತೊಗೊಳ್ಳಿ, ಸತ್ತಿದ್ದನ್ನಾದರೂ ನಮಗೆ ಕೊಡಲಾರಿರಾ?’ -ಎಂದು ಅಂಗಲಾಚುವ ಅವನ ಆರ್ತನಾದ ನೋಡುಗರೆದೆಯಲ್ಲಿ ಅನುರಣಿಸುತ್ತದೆ.

ಟೊಣ್ಯನ ಕರುಣಾಜನಕ ಪಾತ್ರದೊಳಗೆ ಜೋಸೆಫ್ ಕಳೆದುಹೋಗಿದ್ದರು. ‘ತೊಗೊಳ್ಳಿ ನೀವು ತೊಟ್ಟುಬಿಟ್ಟ ಅಂಗಿ’ಎಂದು ತನ್ನ ಮೈಮೇಲಿನ ಅಂಗಿ ಕಳಚಿ ಗೌಡನ ಮುಖದ ಮೇಲೆಸೆದು  ತನ್ನ ಬಡಕಲು ಬೆತ್ತಲೆ ಮೈದೋರಿ ಭಾವುಕನಾಗಿ ನೆಲದ ಮೇಲೆ ಹೊರಳಾಡಿದ ಅವರು ಅಭಿನಯಿಸುತ್ತಿದ್ದಾರೆ ಎಂದೆನಿಸಲೇ ಇಲ್ಲ. ಬಡತನವೇ ಮೈತಳೆದು ಬಂದಂತಿದ್ದ ಅವನ ಹೆಂಡತಿಯ ಪಾತ್ರಧಾರಿ ಅತ್ಯುತ್ತಮವಾಗಿ ನಟಿಸಿ ಗಮನ ಸೆಳೆದಳು.

ಗೌಡ, ಪೊಲೀಸ್, ಟೊಣ್ಯನ ಮಕ್ಕಳು, ಗೌಡನ ಮಗ ಲಾಯರಿ ತಮ್ಮ ಸಹಜಾಭಿನಯದಿಂದ ಮೆಚ್ಚುಗೆಗೆ ಪಾತ್ರರಾದರು. ನಾಟಕ ನಿರ್ದೇಶಿಸಿದ ನೀನಾಸಂ ಪದವೀಧರ ವಾಸುದೇವ ಗಂಗೇರ ಅವರ ಸೂಕ್ಷ್ಮ ಪ್ರಜ್ಞೆ, ಜಾಣ್ಮೆಯಿಂದ ನಾಟಕ ಪರಿಣಾಮಕಾರಿಯಾಗಿತ್ತು. ಸಂಗೀತ-, ಬೆಳಕು ಕೂಡ ಇದರಲ್ಲಿ ಪಾಲು ಪಡೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT