ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡು ಪ್ರಾಣಿಗಳಿಗೆ ಟ್ಯಾಂಕರ್‌ ನೀರು

ಮಾನವೀಯತೆ ಮೆರೆಯುತ್ತಿರುವ ರೈತ ಉದಯಕುಮಾರ್
Last Updated 3 ಮೇ 2016, 19:30 IST
ಅಕ್ಷರ ಗಾತ್ರ

ಶ್ರೀನಿವಾಸಪುರ(ಕೋಲಾರ ಜಿಲ್ಲೆ): ತಾಲ್ಲೂಕಿನ ಗುಮ್ಮರೆಡ್ಡಿಪುರ ಗ್ರಾಮದ ರೈತರೊಬ್ಬರು ಬೇಸಿಗೆಯಲ್ಲಿ ಕಾಡುಪ್ರಾಣಿಗಳ ದಾಹ ತೀರಿಸುವ ಉದ್ದೇಶದಿಂದ ಕಾಡಂಚಿನ ಹಳ್ಳಕ್ಕೆ ಟ್ಯಾಂಕರ್‌ನಿಂದ ನೀರು ಬಿಡುತ್ತಿದ್ದಾರೆ.

  ‘ಇತ್ತೀಚೆಗೆ ಜಿಂಕೆಯೊಂದು ಕೆಸರು ತುಂಬಿದ್ದ ಹಳ್ಳಕ್ಕೆ ಇಳಿದು ನೀರಿಗಾಗಿ ಹುಡುಕಾಟ ನಡೆಸಿದ್ದ ದೃಶ್ಯ ನನ್ನ ಮನ ಕಲಕಿತು. ಬೇಸಿಗೆಯಲ್ಲಿ ಕಾಡು ಪ್ರಾಣಿಗಳಿಗೆ ನೀರುಣಿಸಬೇಕು ಎಂದು ತೀರ್ಮಾನಿಸಿದೆ. ಈ ನಿರ್ಧಾರವನ್ನು ನನ್ನ ಅಣ್ಣ ಜಿ.ಪಿ.ಆಂಜನೇಯರೆಡ್ಡಿ ಅವರಿಗೆ ತಿಳಿಸಿದೆ. ಅದಕ್ಕೆ ಒಪ್ಪಿಗೆ ನೀಡಿದರು. ವಾರಕ್ಕೆ ಎರಡು ಟ್ಯಾಂಕರ್‌ ನೀರನ್ನು ಹಳ್ಳಕ್ಕೆ ಬಿಡುತ್ತಿದ್ದೇನೆ’ ಎಂದು ರೈತ ಉದಯಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಭಾಗದ ಕೆರೆ– ಕುಂಟೆಗಳಲ್ಲಿ ನೀರಿಲ್ಲ. ಒಂದು ಟ್ಯಾಂಕರ್‌ ನೀರಿಗೆ ₹ 600 ಕೊಡಬೇಕು. ಆದರೂ ಪರವಾಗಿಲ್ಲ. ಸ್ವಂತ ಟ್ಯಾಂಕರ್‌ ಇರುವುದರಿಂದ ನಿಯಮಿತವಾಗಿ ಹಳ್ಳಕ್ಕೆ ನೀರು ತುಂಬುತ್ತಿದ್ದೇನೆ. ಮಳೆ ಬಂದು ಹಳ್ಳ ತುಂಬುವ ವರೆಗೆ ಈ ಕಾರ್ಯ ಮುಂದುವರಿಸುತ್ತೇನೆ’ ಎಂದು ಹೇಳಿದರು.

ದಳಸನೂರು ಸರ್ಕಾರಿ ಅರಣ್ಯ ಸೇರಿ ಇಲ್ಲಿನ ವಿಶಾಲವಾದ ಮಾವಿನ ತೋಟಗಳಲ್ಲಿ ಜಿಂಕೆ, ಮೊಲ, ಹಂದಿ, ನರಿ, ಮುಂಗುಸಿ, ಅಳಿಲು, ಕೋತಿ ಮುಂತಾದ ಪ್ರಾಣಿಗಳು, ನವಿಲು, ಕೊಕ್ಕರೆ, ಬೆಳ್ಳಕ್ಕಿ, ಕಾಗೆ ಇತರ ಪಕ್ಷಿಗಳು ನೆಲೆಸಿವೆ. ಆದರೆ ಕಾಡಿನ ಯಾವುದೇ ಭಾಗದಲ್ಲಿ ನೀರು ಸಿಗುವುದಿಲ್ಲ. ಮುಖ್ಯವಾಗಿ ಮೊಲ ಹಾಗೂ ಜಿಂಕೆಗಳು ರಾತ್ರಿ ಹೊತ್ತು ನೀರು ಹುಡುಕಿಕೊಂಡು ಹಳ್ಳಿಗಾಡಿನ ಕಡೆ ಹೆಜ್ಜೆ ಹಾಕುತ್ತಿವೆ.

ಎರಡು ವರ್ಷಗಳ ಹಿಂದೆ, ಇದೇ ಪ್ರದೇಶಕ್ಕೆ ಅಂಟಿಕೊಂಡಿರುವ ಪಾಳ್ಯ ಗ್ರಾಮದ ಕಾಡಲ್ಲಿ ನೀರಿನ ಕೊರತೆಯಾಗಿ ಹಲವು ಕಾಡು ಹಂದಿಗಳು ಸತ್ತಿದ್ದವು. ಈಗ ಅಂಥದ್ದೇ ಪರಿಸ್ಥಿತಿ ಉಂಟಾಗಿದೆ. ಕಾಡು ಪ್ರಾಣಿಗಳಿಗೆ ಅಗತ್ಯವಾದ ಆಹಾರ–ನೀರು ಸಿಗುತ್ತಿಲ್ಲ. ರಾತ್ರಿ ವೇಳೆ ಕಾಡಿನ ಒಂದು ಕಡೆಯಿಂದ ಇನ್ನೊಂದು ಕಡೆಗೆ ರಸ್ತೆ ದಾಟಿ ಹೋಗುವ ಪ್ರಾಣಿಗಳು ವಾಹನಗಳಿಗೆ ಸಿಕ್ಕಿ ಸಾವನ್ನಪ್ಪುವುದು ಸಾಮಾನ್ಯವಾಗಿದೆ. ದಕ್ಷಿಣ ಭಾಗದಲ್ಲಿ ಇಂಥ ಯಾವುದೇ ನೀರಿನ ಮೂಲ ಇಲ್ಲ. ಹಾಗಾಗಿ ಕಾಡು ಪ್ರಾಣಿಗಳು ಬೆಸಿಗೆಯಲ್ಲಿ ಹೆಚ್ಚಿನ ತೊಂದರೆ ಅನುಭವಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT