ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡು ಬಿಡದ ಕಾಕನ ಏಕಾಂಗಿ ಹೋರಾಟ

Last Updated 6 ಜುಲೈ 2015, 19:30 IST
ಅಕ್ಷರ ಗಾತ್ರ

ಧಾರವಾಡದಿಂದ ಪಶ್ಚಿಮಕ್ಕೆ ಸುಮಾರು 25 ಕಿಲೋ ಮೀಟರ್ ದೂರದಲ್ಲಿದೆ ರಾಗಿಕಲ್ಲಾಪುರ. ಇಲ್ಲೊಂದು ದಟ್ಟಾರಣ್ಯ. ಶತಮಾನಗಳಿಂದ ವಾಸವಾಗಿದ್ದ ದನಗರ ಗೌಳಿಗಳು, ವಡ್ಡರು, ವಾಲ್ಮೀಕಿಗಳು, ಜೇನು ಕುರುಬರು... ಈ ಎಲ್ಲಾ ಆದಿವಾಸಿಗಳನ್ನು ಸರ್ಕಾರ ಅಲ್ಲಿಂದ ಎತ್ತಂಗಡಿ ಮಾಡಿದೆ.

   ಅರಣ್ಯ ಸಂರಕ್ಷಣೆ ಹೆಸರಿನಲ್ಲಿ ಪರಂಪರಾಗತವಾಗಿ ಬಾಳುವೆ ಮಾಡಿಕೊಂಡು ಬಂದ ಕಾಡಿನ ಜನರನ್ನು ನಾಡಿಗೆ ಸ್ಥಳಾಂತರಿಸಲಾಗಿದೆ. ಸಮೀಪದ ಟಿ. ರಾಮಚಂದ್ರಾಪುರ ಎಂಬ ಹೊಸ ವಸತಿ ಪ್ರದೇಶಕ್ಕೆ ಇವರನ್ನು ಕಳುಹಿಸಲಾಗಿದೆ. ಹಲವು ದಶಕಗಳಿಂದ ಈ ವಾಸಿಗಳ ಮನೆಯಾಗಿದ್ದ ಅರಣ್ಯದಲ್ಲಿ ದನಕರುಗಳನ್ನು ಮೇಯಿಸುವುದನ್ನು ನಿರ್ಬಂಧಿಸಲಾಗಿದೆ. ಎಲ್ಲ ಕಡೆ ಕೂಪ್ ಮಾಡಿ ಸಸಿಗಳನ್ನು ನೆಟ್ಟು ಬೇಲಿ ಹಾಕಲಾಗಿದೆ. ಗೌಳ್ಯಾರ ದೊಡ್ಡಿಗಳು ಎಂದೇ ಕರೆಯಲಾಗುವ ಇಲ್ಲಿಯ ದೂಪಾರ್ತವಾಡೆ, ಕೊಕ್ಕರೇವಾಡಿ, ಹುಣ್ಚಿಕ್ಕನೂರು, ಮಲ್ಲಾನಕೇರಿ, ಕುಮ್ಕಾರಟ್ಟಿ... ಇವೆಲ್ಲ ಊರುಗಳು ಈಗ ಇತಿಹಾಸ ಸೇರಿವೆ. 

ಆದರೆ ಜಪ್ಪಯ್ಯ ಎಂದರೂ ಕಾಡು ಬಿಡದ ಕಾಕನೊಬ್ಬ ಇಲ್ಲೇ ತಳವೂರಿದ್ದಾನೆ. ಕೋಟೆಯಂತಿರುವ ಈ ಕಾಡಿನಲ್ಲಿರುವ ಈ ಕಾಕನ ಹೆಸರು ಕೊಚ್ಚರಗಿ ಲಗಮಣ್ಣ. ಈತ ಕಾಡು ಬಿಡಲು ಒಪ್ಪದ ಕಾರಣ, ಆತ ಹೊರಕ್ಕೆ ಹೋಗದಂತೆ ಅರಣ್ಯ ಇಲಾಖೆ ಗುಡಿಸಲಿನ ಸುತ್ತ ಭದ್ರವಾದ ತಂತಿಬೇಲಿ ಹಾಕಿದೆ. ಅದರ ಸುತ್ತ ಆಳೆತ್ತರದ ಕಂದಕ ತೋಡಲಾಗಿದೆ. ತನ್ನ ಹಾಡಿಯ ಗುಡಿಸಲಿನಿಂದ ಆಚೆಗೆ ಅವನು ದಾಟಿ ಹೋಗದಂತೆ, ಆಚೆಯ ಜನರು ಒಳಗಡೆ ಬರದಂತೆ ಮಾಡಲಾಗಿದೆ.

ಈ ಭಾಗದ ಸಾಕಷ್ಟು ಜನ ಗೌಳಿಗಳು ದನಗಳಿಗೆ ಮೇಯಲು ಹುಲ್ಲುಗಾವಲು ಸಿಗದೆ ದನಕರುಗಳನ್ನು ಸಾಕುವುದನ್ನು ಬಿಟ್ಟಿದ್ದಾರೆ. ಅಂಥ ಪರಿಸ್ಥಿತಿಯಲ್ಲೂ ಕೆಲವು ದನಗಳನ್ನು ಕಟ್ಟಿಕೊಂಡು, ಅವುಗಳಿಗೆ ಮೇವನ್ನು ರೈತರಿಂದ ಖರೀದಿಸಿ ಹಟದ ಬದುಕು ಬದುಕುತ್ತಿದ್ದಾನೆ ಈ ಕೊಚ್ಚರಗಿ. ತನ್ನ ಜನ್ಮಭೂಮಿಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾನೆ. ಅರಣ್ಯ ಸಂರಕ್ಷಣೆಯ ಸರಹದ್ದಿನಲ್ಲ್ಲಿ ಲೀನವಾಗುತ್ತಿರುವ ಊರನ್ನು ಉಳಿಸಿಕೊಳ್ಳಲು, ಅದನ್ನು ಮತ್ತೆ ಕಟ್ಟಿ ಬೆಳೆಸಲು ಈ ತಾತ ತನಗೆ ತೋಚಿದ ದಾರಿಗಳನ್ನು ಹುಡುಕುತ್ತಿದ್ದಾನೆ. ಹಾಳು ಬಿದ್ದ ವಾಡೆಯ ಕಲ್ಲುಗಳ ಮೇಲೆ ಕುಳಿತು ಗೇಣಿಕೆ ಹಾಕುತ್ತಾನೆ. ಅಲ್ಲೊಂದು ಧ್ವಜಸ್ತಂಭ ಸ್ಥಾಪಿಸಿದ್ದಾನೆ. ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವದಂದು 

ಧ್ವಜಾರೋಹಣ ಮಾಡುತ್ತಾನೆ. ದೇವರ ಮೂರ್ತಿ ಮಾಡಿ ಅಲ್ಲೊಂದು ಗುಡಿಯನ್ನು ಕಟ್ಟಿದ್ದಾನೆ. ಇಲ್ಲೊಂದು ಶಾಲೆಯಾಗಬೇಕು,  ನೀರು, ವಿದ್ಯುತ್‌, ಒಳ್ಳೆಯ ರಸ್ತೆಯ ಕನಸು ಕಾಣುತ್ತಾನೆ. ‘ಏನಾರ ಮಾಡಿ ಈ ಊರು ಉಳಿಸಿಕೊಡ್ರೀಯಪ್ಪಾ’ ಎಂದು ಕೈಮುಗಿಯುತ್ತಾನೆ. ತನ್ನದೇ ಹುಟ್ಟೂರಿನಲ್ಲಿ ನೆಲೆಯೂರಲು ಅವನು ಪಡುತ್ತಿರುವ ಕಷ್ಟವನ್ನು ಅವನು ವಿವರಿಸಿದ ಪರಿ ಕೇಳಿ:

 ನಾಲ್ಕು ವರ್ಷಗಳ ಹಿಂದೆ ದನಗಳಿಗೆ ಮೇವನ್ನು ಖರೀದಿಸಿ ತಂದು ಇಟ್ಟುಕೊಂಡಿದ್ದೆ. ಅದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ಹಚ್ಚಿ ಸುಟ್ಟುಬಿಟ್ಟರು. ಮೇವಿಲ್ಲದೆ ಐದು ದನಗಳು ಸತ್ತುಹೋದವು. ನನ್ನನ್ನು ಇಲ್ಲಿಂದ ಹೊರಗೆ ಹಾಕಬೇಕೆಂದು ಸಿಬ್ಬಂದಿ ಪೊಲೀಸರನ್ನು ಕರೆದುಕೊಂಡು ಬಂದು ಬಹಳ ತೊಂದರೆ ಕೊಟ್ಟರು. ನನ್ನನ್ನು ಗುಡಿಸಲಿನಿಂದ ಎತ್ತಿ ಹೊರಗೆ ಹಾಕಿದರು. ಹೊತ್ತಲ್ಲದ ಹೊತ್ತಿನಲ್ಲಿ ಬಂದು ಬೆದರಿಕೆ ಹಾಕುತ್ತಿದ್ದರು. ಮನೆ ಕಟ್ಟಲು ಪಾಯ ತೆಗೆದರೆ ಅದನ್ನು ಮುಚ್ಚಿದರು. ‘ಇದು ಅರಣ್ಯ ಇಲಾಖೆಗೆ ಸೇರಿದ ಜಾಗ, ಖಾಲಿಮಾಡು’ ಎಂದು ನೋಟಿಸ್‌ ಕೊಟ್ಟರು. ‘ಇದು ನಿನ್ನದೇ ಜಾಗ ಅನ್ನುವುದಕ್ಕೆ ಏನು ಆಧಾರವಿದೆ, ಸರ್ಕಾರಕ್ಕೆ ಕಂದಾಯ, ಟ್ಯಾಕ್ಸ್ ಕಟ್ಟಿದ್ದೀಯೇನು?’ ಎಂದು ಕೇಳುತ್ತಾರೆ. ಇವರು ಕೇಳುವ ಕಾಗದಪತ್ರ ನಾನು ಎಲ್ಲಿಂದ ತರಲಿ?

ಈ ಊರನ್ನು ಉಳಿಸಿಕೊಳ್ಳಬೇಕೆಂದು ಊರೂರು ಅಲೆದು ದೊಡ್ಡ ಜನರನ್ನು ಭೇಟಿಯಾಗಿ, ಅದನ್ನು ಅರಣ್ಯ ಇಲಾಖೆಯವರು ಕಿತ್ತುಕೊಳ್ಳದಂತೆ ಬೇಡಿಕೊಂಡು ಬಂದಿದ್ದೇನೆ. ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಿದ್ದೇನೆ. ಈಗಿನ ಅರಣ್ಯ ಅಧಿಕಾರಿಗಳು ಮೊದಲಿನವರಂತೆ ಕಿರುಕುಳ ನೀಡುತ್ತಿಲ್ಲ. ಆದರೆ ನಮ್ಮನ್ನು ಇಲ್ಲಿಂದ ಓಡಿಸಬೇಕೆಂದು ಹುನ್ನಾರವಂತೂ ಇದ್ದೇ ಇದೆ. ಇಲ್ಲಿಗೆ ಯಾವುದೇ ವಾಹನ, ಚಕ್ಕಡಿ ಬರದಂತೆ ಕಂದಕ ತೋಡಿದ್ದಾರೆ. ಹೊರಗಿನಿಂದ ಮೇವನ್ನು ತರಲು ಆಗುತ್ತಿಲ್ಲ. ಹಲವಾರು ವರ್ಷಗಳಿಂದ ಸಂಗ್ರಹಿಸಿಟ್ಟ ಗೊಬ್ಬರ ಮಾರಬೇಕೆಂದರೆ ಅದಕ್ಕೂ ತೊಂದರೆ ಕೊಡುತ್ತಿದ್ದಾರೆ. ಗೊಬ್ಬರ ಅಲ್ಲಿಯೇ ಮಣ್ಣಾಗಿ ಹೋಗಿದೆ.

‘ನಾಡಿನಲ್ಲಿ ನಿಮಗೆ ಸರ್ಕಾರ ಅಗ್ಗದ ದರದಲ್ಲಿ ಪಡಿತರ ಧಾನ್ಯಗಳನ್ನು ಕೊಡುತ್ತದೆ. ಅಲ್ಲಿ ಕುಡಿಯುವ ನೀರು, ವಿದ್ಯುತ್, ಶಿಕ್ಷಣ ಹೀಗೆ ಹಲವಾರು ಉಚಿತ ಸೌಲಭ್ಯಗಳಿವೆ. ಸಾರಿಗೆ, ಸಂಪರ್ಕ, ಉದ್ಯೋಗ ಖಾತ್ರಿ ಎಲ್ಲವೂ ಇವೆ. ಅಂತಹ ಅನುಕೂಲಗಳನ್ನು ಬಿಟ್ಟು ಈ ಕಾಡೇ ಬೇಕೆಂದು ಏಕೆ ಹಟ ಹಿಡಿದಿದ್ದೀರಿ’? ಎಂದು ಕೇಳುತ್ತಾರೆ. ಆದರೆ ನಮಗೆ ಈ ಸಹಾಯ ಏನು ಬೇಡ. ನಮ್ಮ ಪಾಡಿಗೆ ನಮ್ಮನ್ನು ನೆಮ್ಮದಿಯಿಂದ ಇರಲು ಬಿಡಿ. ಇದು ನನ್ನ ಊರು ನನ್ನ ಕಾಡು. ಅದನ್ನು ಕೇಳುವ ಹಕ್ಕು ಯಾರಿಗೂ ಇಲ್ಲ ಎನ್ನೋದು ನನ್ನ ಉತ್ತರ...

ಈ ಪ್ರಶ್ನೆಗಳಿಗೆ ಉತ್ತರವಿದೆಯೇ?
ಒಂದು ಕಡೆ ವನವಾಸಿಗರು ಅರಣ್ಯವನ್ನು ನಾಶಮಾಡುತ್ತಾರೆಂದು ಅವರನ್ನು ಕಾಡಿನಿಂದ ಆಚೆಗೆ ಸಾಗಿಸಲಾಗುತ್ತಿದೆ. ಮತ್ತೊಂದೆಡೆ ಪ್ರವಾಸೋದ್ಯಮದ ಹೆಸರಿನಲ್ಲಿ ಮೋಜು ಮಸ್ತಿ ಮಾಡುವವರಿಗೆ ಪಶ್ಚಿಮ ಘಟ್ಟದಂತಹ ಸೂಕ್ಷ್ಮ ಕಾಡಿನಲ್ಲಿ ರೆಸಾರ್ಟ್‌ಗಳನ್ನು ತೆರೆಯಲಾಗುತ್ತಿದೆ. ಒಣಗಿದ ಮರ, ಬಿದಿರು, ಕುರುಚಲಗಳು ಕಾಡಿನಲ್ಲಿಯೇ ಬಿದ್ದು ಮಣ್ಣಾಗುತ್ತಿವೆ. ಆದರೆ ಉರುವಲಿಗೆಂದು ಕಾಡಿನ ಜನ ಅವುಗಳನ್ನು ತರುವಂತಿಲ್ಲ. ಕಾಡುಗಳ್ಳರು ಸದ್ದಿಲ್ಲದೆ ಕಾಡನ್ನು ಕಡಿಯುತ್ತಾರೆ. ತಡೆಯಲು ಹೋಗುವ ಪ್ರಾಮಾಣಿಕ ಅಧಿಕಾರಿಗಳು ಹತ್ಯೆಯಾಗುತ್ತಾರೆ. 

  ಅಭಿವೃದ್ಧಿ ಎಂದರೆ ಯಾವುದು? ಕಾಡನ್ನು ಕಡೆದು ಮೋಜು ಮಸ್ತಿ ತಾಣಗಳನ್ನು, ಎಸ್ಟೇಟ್‌ಗಳನ್ನು, ಕೈಗಾರಿಕೆಗಳನ್ನು ಮಾಡುವುದೇ? ಸಂರಕ್ಷಣೆ ಎಂದರೆ ಯಾವುದು? ವನವಾಸಿಗರನ್ನು, ಜನಜಾನುವಾರುಗಳನ್ನು ಅವಸಾನ ಮಾಡಿ ನೆಡುತೋಪು ಬೆಳೆಸುವುದೇ? ಪ್ರಬಲರು ದುರ್ಬಲರನ್ನು, ಮುಗ್ಧರನ್ನು ಹೆದರಿಸಿ, ಸಂಪತ್ತನ್ನು ಅನುಭೋಗಿಸುವುದು ಸ್ವಾತಂತ್ರ್ಯ ಮತ್ತು ಸಮಾನತೆಯ ಲಕ್ಷಣವೇ? ರಾಜಕೀಯ ಹಕ್ಕುಗಳ ಯಾವ ಪರಿವೆಯೂ ಇಲ್ಲದ ಈ ಕೊಚ್ಚರಗಿ ಬದುಕುವ ಹಕ್ಕನ್ನು ದೈನ್ಯದಿಂದ ಬೇಡುತ್ತಿದ್ದಾನೆ.

ದಾಖಲೆಯಲ್ಲಿ ಏನಿದೆ?
ರಾಗಿಕಲ್ಲಾಪುರ 17.13 ಎಕರೆ ಗಾಂವ್‌ಠಾಣ ಜಾಗ ಪಾಳುಬಿದ್ದಿದ್ದು, ಅದನ್ನು 1959ರ ಸರ್ಕಾರಿ ಆದೇಶದ ಮೇರೆಗೆ ಹೊಲ್ತಿಕೋಟಿ ಗ್ರಾಮಕ್ಕೆ ಸೇರಿಸಲಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿಗಳ ಆದೇಶ ಹೇಳುತ್ತದೆ. ಹೀಗಾಗಿ ಈ ಊರಿನಲ್ಲಿ ಇರುವವರಿಗೆ ಯಾವುದೇ ಮೂಲ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ. ಮನೆಯನ್ನು ಕಟ್ಟಿಕೊಳ್ಳಲು ಪರವಾನಗಿ ಇಲ್ಲ. ರಾಗಿಕಲ್ಲಾಪುರದಲ್ಲಿ ಒಬ್ಬಂಟಿಯಾಗಿ ಬದುಕುತ್ತಿರುವ ಲಗಮಣ್ಣನಿಗೆ ಮತದಾರರ ಚೀಟಿ ಇದೆ. ಆದರೆ ಅದು ಹೊಲ್ತಿಕೋಟಿ ಗ್ರಾಮದ ವಿಳಾಸವನ್ನು ತೋರಿಸುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT