ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡ ಹಾದಿಯಲ್ಲಿ ಕನ್ನಡ ಹೂಗಳು

Last Updated 14 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ವೃತ್ತಿಯಲ್ಲಿ ಕನ್ನಡ ಶಿಕ್ಷಕರು. ಪ್ರವೃತ್ತಿಯಲ್ಲಿ ಕವಿ, ನಾಟಕಕಾರ. ಮೂರು ಕಥಾ ಸಂಕಲನಗಳು, ಐದಾರು ನಾಟಕಗಳು ಇವರ ಜೋಳಿಗೆಯಲ್ಲಿವೆ. ಕನ್ನಡದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿರುವ ಮೇಷ್ಟ್ರು ಕವಿ ಎಲ್.ಎನ್.ಮುಕುಂದರಾಜ್. ಮಾತೃಭಾಷೆಗೆ ಸಂಬಂಧಿಸಿದಂತೆ ‘ಕಾಡ ಹಾದಿಯ ಹೂಗಳು’ ಎಂಬ ಮಕ್ಕಳ ಚಿತ್ರವೊಂದನ್ನು ನಿರ್ದೇಶಿಸಿದ ಅವರು ತಮ್ಮ ಚಿತ್ರದ ಬಗ್ಗೆ ‘ಮೆಟ್ರೊ’ದೊಂದಿಗೆ ಮಾತನಾಡಿದ್ದಾರೆ.

ಚಿತ್ರ ನಿರ್ದೇಶನಕ್ಕೆ ಪ್ರೇರಣೆಯೇನು?
ಮುದ್ದು ತೀರ್ಥಹಳ್ಳಿ ಎನ್ನುವ ಹುಡುಗಿಯೊಬ್ಬಳು ಬರೆದ ಕಾದಂಬರಿ ಆಧರಿಸಿದ ಚಿತ್ರ ಇದು. ಈಗ ಅವಳು ಪ್ರಥಮ ಪಿಯುಸಿ ವಿದ್ಯಾರ್ಥಿನಿ. ಆಕೆ ಆರನೇ ತರಗತಿಯವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಓದಿ, ನಂತರ ಕನ್ನಡ ಮಾಧ್ಯಮದಲ್ಲೇ ಓದಬೇಕೆಂದು ತೀರ್ಮಾನಿಸಿ ಹೆತ್ತವರ ಜೊತೆ ಜಗಳ ಮಾಡಿ ಏಳನೇ ತರಗತಿಯಿಂದ ಕನ್ನಡದಲ್ಲಿಯೇ ಓದುತ್ತಿದ್ದಾಳೆ. ತಾನು ತುಳಿದ ಹಾದಿ, ಅದರ ಅನುಭವಗಳನ್ನೆಲ್ಲ ಒಟ್ಟಾಗಿಸಿ ‘ಕಾಡ ಹಾದಿಯ ಹೂಗಳು’ ಎಂಬ ಕಾದಂಬರಿ ಬರೆದಿದ್ದಾಳೆ. ಅದೇ ಹೆಸರನ್ನು ಇಟ್ಟುಕೊಂಡು ನಾನು ಚಿತ್ರ ಮಾಡಿದ್ದೇನೆ.

ಕಾದಂಬರಿಯನ್ನು ಚಿತ್ರವಾಗಿಸುವ ಉದ್ದೇಶವೇನು?
ಸಿನಿಮಾ ಒಂದು ಬಹುಮುಖ್ಯ ಮಾಧ್ಯಮ. ಒಳ್ಳೆಯ ಕೃತಿ ಪುಸ್ತಕಕ್ಕಷ್ಟೇ ಸೀಮಿತವಾಗಕೂಡದು. ನಾಲ್ಕಾರು ಜನ ನೋಡಬೇಕೆಂದು ತೀರ್ಮಾನಿಸಿದೆ. ಆ ಮೂಲಕ ಕಲಿಕಾ ಭಾಷೆಯ ಬಗ್ಗೆ ಮಕ್ಕಳು ಹಾಗೂ ಪೋಷಕರಿಗೆ ಪ್ರಬಲವಾದ ಸಂದೇಶವನ್ನು ನೀಡುವ ಉದ್ದೇಶದಿಂದ ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದೇನೆ. ಕನ್ನಡದ ಶಕ್ತಿ ಹಾಗೂ ನನ್ನ ಕನ್ನಡ ಪ್ರೀತಿಯ ಫಲ ಇದು. ನಾನು ಚಿತ್ರರಂಗದಿಂದ ಹೆಸರು ಹಣ ಬಯಸಿ ಬಂದವನಲ್ಲ. ಸರ್ಕಾರದ ಸಬ್ಸಿಡಿ, ಅಥವಾ ಯಾವ ಪ್ರಶಸ್ತಿಯ ನಿರೀಕ್ಷೆಯೂ ನನಗಿಲ್ಲ.

ನೀವು ನೀಡ ಹೊರಟಿರುವ ಸಂದೇಶವೇನು?
ಕನ್ನಡ ಭಾಷೆಯಲ್ಲಿ, ಅಂದರೆ ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳ ಅಭಿವ್ಯಕ್ತಿ ಶಕ್ತಿ, ಗ್ರಹಿಕೆ, ಮಾನವೀಯ ಗುಣ, ಅರಿಯುವ ಕುತೂಹಲ ಹಾಗೂ ಕ್ರಿಯಾಶೀಲತೆ ಚೆನ್ನಾಗಿರುತ್ತದೆ. ಅದೇ ಇಂಗ್ಲಿಷ್ ಮೋಹಕ್ಕೆ ಬಿದ್ದು ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಸುವ ಪೋಷಕರು ಮಕ್ಕಳ ಕ್ರಿಯಾಶೀಲತೆಯನ್ನು ಹೇಗೆ ಕೊಲೆ ಮಾಡುತ್ತಾರೆ, ಅಂತಹ ಮಕ್ಕಳ ವ್ಯಕ್ತಿತ್ವ ಹೇಗೆ ಕುಬ್ಜವಾಗುತ್ತ ಹೋಗುತ್ತದೆ ಎಂಬುದು ನಮ್ಮ ಚಿತ್ರದ ಕಥೆ. ಇದರಲ್ಲಿ ಮಕ್ಕಳಿಗೂ ಸಂದೇಶವಿದೆ. ಹಾಗೆಯೇ ದೊಡ್ಡವರಿಗೂ.

ದೊಡ್ಡವರೂ ನೋಡಬೇಕಾದ ಚಿತ್ರವೇ?
ಖಂಡಿತ. ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಅಟ್ಟುವವರು ಹೆತ್ತವರೇ ಅಲ್ಲವೇ. ಅದಕ್ಕಾಗಿ ಹಿರಿಯರೂ ನೋಡಿ ಮನಸ್ಸನ್ನು ಬದಲಿಸಿಕೊಳ್ಳಬೇಕಿದೆ.

ಮಕ್ಕಳ ಚಿತ್ರಕ್ಕೆ ಪ್ರೋತ್ಸಾಹ ಕಡಿಮೆ. ಹೇಗೆ ಧೈರ್ಯ ಮಾಡಿದಿರಿ?
ಮೊದಲನೆಯದಾಗಿ ಹೇಳುವುದಾದರೆ ಚಿತ್ರವನ್ನು ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಿದ್ದೇವೆ. ‘ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಅದಲ್ಲದೆ ‘ಟೀಚರ್ಸ್ ಸಿನಿಮಾ’ ಎಂಬ ಸಬ್ ಬ್ಯಾನರ್ ಅಡಿ ನನ್ನ ಸ್ನೇಹಿತರು ಹಾಗೂ ಸಹೋದ್ಯೋಗಿಗಳೇ ಅಷ್ಟಿಷ್ಟು ಹಣ ಸೇರಿಸಿ ಚಿತ್ರ ಮಾಡಿದ್ದೇವೆ. ಒಂದು ವೇಳೆ ಚಿತ್ರಮಂದಿರಗಳಲ್ಲಿ ಸಿನಿಮಾ ಹಣ ಮಾಡದಿದ್ದರೂ ನಮ್ಮ ಶಿಕ್ಷಕರ ನೆಟ್‌ವರ್ಕ್‌ನಿಂದಾಗಿ ಎಲ್ಲ ಶಾಲೆಗಳಲ್ಲಿ ಚಿತ್ರ ಪ್ರದರ್ಶನ ಮಾಡುತ್ತೇವೆ. ನಾವು ಖರ್ಚು ಮಾಡಿದ್ದು 25 ಲಕ್ಷ ರೂಪಾಯಿಗಳು.

ವೃತ್ತಿ ಜತೆಗೇ ಸಿನಿಮಾಕ್ಕೆ ಹೇಗೆ ಸಮಯ ಹೊಂದಿಸಿಕೊಂಡಿರಿ?
ನಿರ್ದೇಶನ ನನಗೆ ಹೊಸತು. ಆದರೆ ನಾಗತಿಹಳ್ಳಿ, ಟಿ.ಎನ್.ಸೀತಾರಾಮ್ ಅವರ ಒಡನಾಟದಿಂದಾಗಿ ಚಿತ್ರ ನಿರ್ಮಾಣದ ಕ್ರಮ ತಿಳಿದಿತ್ತು. ಚಿತ್ರೀಕರಣ ಬಹುತೇಕ ನಡೆದಿದ್ದು ಮೇ ತಿಂಗಳ ರಜೆಯಲ್ಲಿಯೇ. ಇನ್ನು ಒಂದೆರಡು ದಿನಗಳ ಕೆಲಸ ಬಾಕಿ ಇದೆ. ಅದನ್ನು ಅಕ್ಟೋಬರ್ ರಜೆಯಲ್ಲಿ ಮುಗಿಸಿ, ನವೆಂಬರ್‍ ಹೊತ್ತಿಗೆ ಚಿತ್ರವನ್ನು ತೆರೆಗೆ ತರುವ ಯೋಜನೆ ಇದೆ.

ಪಾತ್ರಗಳ ಆಯ್ಕೆ ಕುರಿತು...
ಸುಮಾರು ಎಪ್ಪತ್ತು ಮಕ್ಕಳು ಚಿತ್ರದಲ್ಲಿದ್ದಾರೆ. ಕೆಲವರನ್ನು ಬೇರೆ ಬೇರೆ ಕಡೆ ವರ್ಕ್‌ಶಾಪ್ ಮಾಡುವ ಮೂಲಕ ಆಯ್ಕೆ ಮಾಡಿಕೊಂಡೆ. ನಾಟಕದಲ್ಲಿ ಪಾತ್ರ ಮಾಡಿದ ಮಕ್ಕಳೂ ಇದ್ದಾರೆ. ಹತ್ತು ಪಾತ್ರಗಳು ಮುಖ್ಯವಾಗಿ ಕಾಣಿಸಿಕೊಳ್ಳಲಿವೆ. ಅಲ್ಲದೇ ನಾಗತಿಹಳ್ಳಿ ಚಂದ್ರಶೇಖರ್, ಬಿ.ಸುರೇಶ್, ಪ್ರಕಾಶ್ ಅರಸ್, ಕೆ.ವಿ.ನಾಗರಾಜ ಮೂರ್ತಿ, ಬಸವರಾಜ ಸಬರದ, ವೆಂಕಟ್ ರಾಜು, ಶಶಿಕಲಾ ಗೌಡ, ಅಪ್ಪಗೆರೆ ತಿಮ್ಮರಾಜು ಹೀಗೆ ಕಲಾವಿದರ ದಂಡೇ ಇದೆ.

ಈ ಸಿನಿಮಾ ಸಂಗೀತದ ಬಗ್ಗೆ ಹೇಳಿ
ಡಾ.ರಾಮಾನುಜಂ ಎಂಬ ಹೊಸಬರ ಸಂಗೀತ ಚಿತ್ರಕ್ಕಿದೆ. ಒಟ್ಟು ನಾಲ್ಕು ಹಾಡುಗಳಿದ್ದು, ಶಿಶುನಾಳ ಷರೀಫರ ‘ಸಾಲಿಯ ನೋಡಿದಿರ ಸರ್ಕಾರದ ಸಾಲಿಯ ನೋಡಿದಿರ...’ ಹಾಡನ್ನೂ ಬಳಸಿಕೊಂಡಿದ್ದೇವೆ. ಉಳಿದಂತೆ ಸಾಹಿತಿಗಳೂ ಹೊಸಬರೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT