ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಣದ ಕಡಲಿಗೆ ಹಂಬಲಿಸಿದ ಮನ...

ಐಫೆಲ್ ಗೋಪುರದ ನೆರಳಲ್ಲಿ ಕಂಡ ಭಾರತೀಯ ಮುಖಗಳು
Last Updated 21 ನವೆಂಬರ್ 2015, 19:59 IST
ಅಕ್ಷರ ಗಾತ್ರ

ಸಂಜೆ ಕವಿಯುತ್ತಿದ್ದಂತೆಯೇ ಪ್ಯಾರಿಸ್‌ನ ಐಫೆಲ್ ಗೋಪುರದುದ್ದಕ್ಕೂ ಒಂದೊಂದೇ ದೀಪ ಹೊತ್ತಿಕೊಂಡು, ಆರೆಂಟು ನಿಮಿಷಗಳಲ್ಲಿ ಝಗಮಗಿಸುತ್ತ ಕಂಗೊಳಿಸಲು ಶುರುವಾಗುತ್ತದೆ. ಸೂರ್ಯನ ಹೊಂಬಣ್ಣದ ಬೆಳಕಿನಲ್ಲಿ ಮನದಣಿಯೆ ಫೋಟೊ ತೆಗೆದುಕೊಂಡವರು, ರಾತ್ರಿ ವೈಭವದಲ್ಲಿ ಮಿಂದೇಳಲು ಸಜ್ಜಾಗುತ್ತಾರೆ. ನಂತರದ ಎರಡು ತಾಸುಗಳ ಅವಧಿಯಲ್ಲಿ ಗೋಪುರದ ಸುತ್ತ ಹೊಸದೊಂದು ಲೋಕ ಮೈದಳೆಯುತ್ತದೆ. ಅದು ಮದ್ಯದ ಸಮಾರಾಧನೆಯ ಸಮಯ!

ನಾಲ್ಕು ಕಾಲೂರಿ ಆಗಸದೆತ್ತರ ನಿಂತ ಐಫೆಲ್ ಗೋಪುರದ ಸೌಂದರ್ಯ ಸವಿಯುತ್ತಿದ್ದಾಗ ‘ನಮಸ್ತೆ ಸಾಬ್... ಡ್ರಿಂಕ್ಸ್ ಚಾಹಿಯೇ ಕ್ಯಾ’ ಎಂಬ ಮಾತು ಕೇಳಿ ಅಚ್ಚರಿಯಾಯಿತು. ಐದಾರು ದಿನಗಳ ಅವಧಿಯಲ್ಲಿ ಅಲ್ಲೋ ಇಲ್ಲೋ ನಾಲ್ಕಾರು ಇಂಗ್ಲಿಷ್ ಪದಗಳನ್ನು ಮಾತ್ರ ಕೇಳಿದ್ದ ನನಗೆ, ಸಾವಿರಾರು ಮೈಲು ದೂರದ ಪ್ಯಾರಿಸ್‌ನಲ್ಲಿ ಅನಿರೀಕ್ಷಿತವಾಗಿ ಹಿಂದಿ ಭಾಷೆ ಕೇಳಿದಾಗ ಸೋಜಿಗವಾಗದೆ ಇನ್ನೇನು? ಕೈಯಲ್ಲೊಂದು ದೊಡ್ಡ ಬಕೆಟ್; ಅದರಲ್ಲಿ ಹತ್ತಾರು ಬಿಯರ್ ಬಾಟಲಿಗಳು. ಬಕೆಟ್ ತುಂಬುವಷ್ಟು ಐಸ್ ತುಂಡುಗಳು. ಬಿಯರ್‌ಗಿಂತಲೂ ಆತನ ಜತೆಗೆ ಮಾತಾಡುವುದೇ ಖುಷಿ ಅನಿಸಿದ್ದು ಸುಳ್ಳಲ್ಲ!

ತನ್ನ ಹೆಸರು ಸುರ್ಜಿತ್ ಎಂದಷ್ಟೇ ಹೇಳಿದ ಆ ಇಪ್ಪತ್ತರ ಹುಡುಗ, ವಿಶಾಖಪಟ್ಟಣದವನು. ‘ನಾನೂ ನಿಮ್ಮ ಪಕ್ಕದ ಕರ್ನಾಟಕದವನೇ ಮಾರಾಯ’ ಎಂದ ಮೇಲಷ್ಟೇ ಸುರ್ಜಿತ್ ಮುಖದ ಬಿಗು ಸಡಿಲಿಸಿ ಮಾತನಾಡಲು ಶುರು ಹಚ್ಚಿಕೊಂಡಿದ್ದು. ಬೆಳಗಿನಿಂದ ಸಂಜೆಯವರೆಗೆ ಐಫೆಲ್ ಪ್ರತಿಕೃತಿ ಮಾರಾಟ ಮಾಡುವ ಆ ಯುವಕ, ಸಂಜೆ ಹೊತ್ತಿಗೆ ಬಿಯರ್ ಬಾಟಲಿ ತುಂಬಿದ ಬಕೆಟ್ ಕೈಗೆತ್ತಿಕೊಳ್ಳುತ್ತಾನೆ.

ಒಂದೊಂದಕ್ಕೆ ಎಂಟರಿಂದ ಹತ್ತು ಯೂರೋಗಳು. ದಿನಕ್ಕೆ ಮೂವತ್ತು ಬಾಟಲಿ ಖರ್ಚಾಗುತ್ತವಂತೆ. ಅಂದಹಾಗೆ, ಸುರ್ಜಿತ್ ಪ್ಯಾರಿಸ್‌ಗೆ ಬಂದು ಮೂರು ವರ್ಷಗಳಾಗಿವೆ. ‘ಮತ್ತೆ ಭಾರತಕ್ಕೆ ಯಾವಾಗ ವಾಪಸು ಹೋಗುವುದು’ ಎಂದು ಪ್ರಶ್ನಿಸಿದಾಗ, ಮೇಲೆ ಕೈತೋರಿಸಿ– ‘ಭಗವಾನ್ ಚಾಹೇತೋ ನೆಕ್ಸ್ಟ್ ಇಯರ್...’ ಎಂದ. ಯಾಕೆ ವೀಸಾ ಸಮಸ್ಯೆಯೇ ಎಂದರೆ, ‘ವೀಸಾ..? ಪಾಸ್‌ಪೋರ್ಟೇ ಇಲ್ಲ!’ ಎಂದು ಗಹಗಹಿಸಿ ನಕ್ಕು, ಮುಂದೆ ಹೊರಟು ಹೋದ.

ವಿದೇಶಕ್ಕೆ ಹೋಗುವವರು, ಅದಕ್ಕಿಂತ ಮುಖ್ಯವಾಗಿ ವಾಪಸು ಬರುವವರಿಗೆ ಪಾಸ್‌ಪೋರ್ಟ್‌ – ವೀಸಾ ಕಡ್ಡಾಯ. ಪ್ಯಾರಿಸ್‌ನಲ್ಲಿರುವ ಸಾವಿರಾರು ಜನರಿಗೆ ಆ ರಗಳೆಯೇ ಇಲ್ಲ! ಸುರ್ಜಿತ್‌ನಂಥ ಹಲವು ಭಾರತೀಯರು ಅಲ್ಲಿದ್ದಾರೆ. ಪಾಸ್‌ಪೋರ್ಟ್‌, ವಸತಿ ದಾಖಲೆ, ವಿಮೆ, ಇವೆಲ್ಲದರಿಂದ ಲಭ್ಯವಾಗುವ ವೀಸಾ- ಈ ವ್ಯವಸ್ಥೆಯನ್ನು ಅನ್ನ ಹುಡುಕಲು ಹೊರಟವರು ತಮ್ಮ ಅನುಕೂಲಕ್ಕೆ ಬಳಸಿಕೊಂಡಿರುವ ಬಗೆ ಅಚ್ಚರಿಗೀಡು ಮಾಡುತ್ತದೆ. ಪ್ಯಾರಿಸ್‌ನ ಬೀದಿಗಳಲ್ಲಿ ಅಚಾನಕ್ಕಾಗಿ ಸಿಗುವ ರಸ್ತೆಬದಿ ವ್ಯಾಪಾರಿಗಳನ್ನು ಮಾತಿಗೆಳೆದರೆ, ಹಸಿವಿನ ಎದುರು ಕಾನೂನುಕಟ್ಟಲೆಗಳು ವ್ಯಂಗ್ಯದಂತೆ ಭಾಸವಾಗುತ್ತವೆ. ಹಣ ಗಳಿಸುವ ಆಸೆಯಿಂದ ಹೆತ್ತವರನ್ನೆಲ್ಲ ದೂರದೇಶದಲ್ಲಿ ಬಿಟ್ಟು ಬಂದು ಅಲ್ಲಿ ಪರದಾಡುತ್ತಿರುವವರನ್ನು ಕಂಡಾಗ ವಿಷಾದವೂ ಮೂಡುತ್ತದೆ.
* * *
ಜಗತ್‌ಪ್ರಸಿದ್ಧ ‘ಲೂವ್ರ್ ಮ್ಯೂಸಿಯಂ’ನ ಹೊರಗೆ ಸಣ್ಣದೊಂದು ಕಬ್ಬಿಣದ ಗೋಡೆ ಇದೆ. ಅದರ ಸರಳುಗಳಿಗೆ ಸಾವಿರಾರು ಬೀಗಗಳನ್ನು ಹಾಕಲಾಗಿದೆ. ದೇವರಲ್ಲಿ ಕೋರಿಕೆ ಮಂಡಿಸಿ, ಬೀಗ ಹಾಕಿದರೆ ಸಾಕು; ನಿಮ್ಮ ಬೇಡಿಕೆ ಈಡೇರುತ್ತದೆ ಎಂಬ ನಂಬಿಕೆಯಿಂದ ಜನರು ಅಲ್ಲಿಗೆ ಬಂದು ಬೀಗ ಖರೀದಿಸಿ ಹಾಕುತ್ತಾರೆ. ಇಲ್ಲೂ ಇಂಥದನ್ನು ನಂಬುತ್ತಾರಾ ಎಂದು ಅಂದುಕೊಳ್ಳುವ ಹೊತ್ತಿಗೆ ‘ಭಾಯ್‌ಸಾಬ್, ಆಪ್ ಭೀ ಏಕ್ ಲಾಕ್ ಲೇಲೋ’ ಎಂಬ  ಮಾತು ಕೇಳಿ ಹೊರಳಿದಾಗ ಕಂಡಿದ್ದು, ಭಾರತದ ಬಂಧು! ಭಾರತ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ನಿವಾಸಿಗಳ ಚಹರೆಯನ್ನು ಗಮನಿಸಿ ಹಿಂದಿಯಲ್ಲಿ ಮಾತಾಡಿ ಗಮನ ಸೆಳೆಯುವ ಚಾಕಚಕ್ಯ ಅವರದು. ಆ ಸಾಲಿಗೆ ಗುರ್‌ಪ್ರೀತ್ ಸೇರುತ್ತಾನೆ.

ಆತನ ತಂದೆ ಹದಿನೆಂಟು ವರ್ಷಗಳ ಹಿಂದೆ ಏಜೆಂಟರಿಗೆ ಒಂದು ಲಕ್ಷ ರೂಪಾಯಿ ಕೊಟ್ಟು ಪಂಜಾಬಿನ ಜಲಂಧರ್‌ನಿಂದ ಪ್ಯಾರಿಸ್‌ಗೆ ಬಂದು ನೆಲೆಯೂರಿದ್ದರು. ಇಲ್ಲಿಯೇ ರಸ್ತೆ ಬದಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಆಫ್ರಿಕನ್ ಮೂಲದ ಯುವತಿಯನ್ನು ಮದುವೆಯಾದರು. ಅವರ ಮಗ ಈ ಗುರ್‌ಪ್ರೀತ್. ಭಾರತಕ್ಕೆ ಬರುವುದಿಲ್ಲವೇ ಎಂದು ಕೇಳಿದಾಗ, ‘ವರ್ಕಿಂಗ್ ವೀಸಾದ ಮೇಲೆ ನನ್ನ ತಂದೆ ಇಲ್ಲಿಗೆ ಬಂದರು. ಭಾರತಕ್ಕೆ ಮತ್ತೆ ಹೋಗಲೇ ಇಲ್ಲ. ಇನ್ನು ನಾನಾದರೂ ಯಾಕೆ ಹೋಗಲಿ?’ ಎಂದು ಮರುಪ್ರಶ್ನಿಸಿದ.

ಪ್ರವಾಸಿಗರನ್ನೇ ನೆಚ್ಚಿಕೊಂಡು ಬದುಕುತ್ತಿರುವ ಮಹಾನಗರಿ ಪ್ಯಾರಿಸ್. ಇಲ್ಲಿರುವ ಸಾವಿರಾರು ಹೋಟೆಲ್‌ಗಳಲ್ಲಿ ಕೆಲಸ ಮಾಡಲು ಇಂಥ ವಲಸಿಗರೇ ತುಂಬಿಕೊಂಡಿದ್ದಾರೆ. ಹೆಚ್ಚು ಗಳಿಸುವ ಆಸೆ ಹೊತ್ತು, ಏಷ್ಯಾದ ವಿವಿಧ ದೇಶಗಳಿಂದ ಬರುವ ಜನರನ್ನು ತಲುಪಿಸುವ ಹಲವು ಮಾರ್ಗಗಳಿವೆ. ಅದಕ್ಕಾಗಿ ಏಜೆಂಟರೂ ಇದ್ದಾರೆ. ಕೇಳಿದಷ್ಟು ಹಣ ಕೊಟ್ಟುಬಿಟ್ಟರೆ ಸಾಕು; ಅಗತ್ಯ ದಾಖಲೆಗಳನ್ನು ಒದಗಿಸಿ ಪ್ಯಾರಿಸ್ ಒಳಗೆ ತಂದುಬಿಡುತ್ತಾರೆ. ಬಂದಮೇಲೆ, ಅವರು ಯಾರೋ ಇವರು ಯಾರೋ! ಸಾವಿರಾರು ಯೂರೋ ಗಳಿಸುವುದು ಅವರ ಗುರಿ. ಆದರೆ ಆ ಪೈಕಿ ಒಂದು ಪಾಲನ್ನು ಭಾರತದಲ್ಲಿನ ತಮ್ಮ ಕುಟುಂಬದವರಿಗೆ ಕಳಿಸುವುದೇ ಒಂದು ಸಮಸ್ಯೆ. ಅದಕ್ಕಾಗಿ ಅಲ್ಲಿನ ಸ್ನೇಹಿತರು ಅಥವಾ ಏಜೆಂಟರ ಅಕೌಂಟ್ ಮೂಲಕ ಹಣ ರವಾನಿಸುವ ಮಾರ್ಗವನ್ನು ಕಂಡುಕೊಳ್ಳುತ್ತಾರೆ.
* * *
ಪ್ಯಾರಿಸ್‌ನ ಗಾರ್ ದೇ ನೋರ್ ಎಂಬ ಗಿಜಿಗುಡುವ ಪ್ರದೇಶದಲ್ಲಿ ನೂರಾರು ಕ್ಲಬ್, ಹೋಟೆಲ್‌ಗಳಿವೆ. ಶ್ರೀಲಂಕಾ, ಬಾಂಗ್ಲಾದೇಶದವರು ನಡೆಸುವ ‘ಇಂಡಿಯನ್ ರೆಸ್ಟೊರೆಂಟ್’ಗಳೂ ಅಲ್ಲಿ ಸಾಕಷ್ಟಿವೆ! ‘ಮಹಾರಾಣಿ’ ಎಂಬ ಹೋಟೆಲ್‌ನ ಮಾಣಿ ಶಿವ್ ಎರಡು ವರ್ಷಗಳ ಹಿಂದೆ ಪ್ಯಾರಿಸ್ ಎಂಬ ಬಾಣಲೆಗೆ ಬಂದು ಬಿದ್ದವರು. ಮತ್ತೆ ಭಾರತಕ್ಕೆ ಮರಳುವ ಆಸೆ ಇದೆಯಾದರೂ ಅದಕ್ಕೆ ಬೇಕಾದ ದಾಖಲೆಗಳನ್ನು ಹೊಂದಿಸುವುದು ಅಸಾಧ್ಯ ಎಂಬುದು ಅವರಿಗೂ ಗೊತ್ತು.

ದೆಹಲಿ ಮೂಲದ ಶಿವ್‌ಗೆ ಅಪ್ಪ–ಅಮ್ಮ ಇಲ್ಲ. ಅಣ್ಣನೇ ಆತನಿಗೆ ಎಲ್ಲ. ಅಣ್ಣನ ಜತೆ ವಾಗ್ವಾದ ವಿಕೋಪಕ್ಕೆ ಹೋಗಿ, ‘ಇನ್ನು ಅಲ್ಲಿರಬಾರದು’ ಎಂದು ನಿರ್ಧರಿಸಿದ. ಏನೇನೋ ಮಾಡಿ ಮೂರು ಲಕ್ಷ ರೂಪಾಯಿಗಳನ್ನು ಏಜೆಂಟನ ಕೈಗಿಟ್ಟ ಎರಡು ತಿಂಗಳಲ್ಲಿ ಆತ ಪ್ಯಾರಿಸ್ ನಗರದಲ್ಲಿದ್ದ. ‘ಅದು ಒಂದು ತಿಂಗಳ ಅವಧಿಯ ಟೂರಿಸಂ ವೀಸಾ ಅಂತ ಗೊತ್ತಿತ್ತು. ಆದರೆ ಬಂದು ಎರಡು ವರ್ಷಗಳಾದವು. ಭಾರತಕ್ಕೆ ಹೋಗಬೇಕು ಅಂದರೆ, ಸರಿಯಾದ ದಾಖಲೆಗಳಿಲ್ಲ. ಆ ವಿಷಯ ಗೊತ್ತಾದರೆ ನನ್ನನ್ನು ಇಲ್ಲಿನ ಪೊಲೀಸರು ಜೈಲಿಗೆ ಅಟ್ಟುತ್ತಾರೆ’ ಎಂದು ಹಳಹಳಿಸುತ್ತಾನೆ ಶಿವ್.

ಹಾಗೆ ಜೈಲಿಗೆ ಹೋದವರ ಕಥೆ ಏನಾದೀತು?
ಉತ್ತರ ಮತ್ತಷ್ಟು ಅಚ್ಚರಿ ಮೂಡಿಸುತ್ತದೆ. ಹೋಟೆಲ್, ಅಂಗಡಿ–ಮಳಿಗೆಗಳ ಮೇಲೆ ಆಗಾಗ್ಗೆ ಪೊಲೀಸರು ದಾಳಿ ನಡೆಸಿ ‘ಅಕ್ರಮ’ ವಲಸಿಗರನ್ನು ಪತ್ತೆ ಹಚ್ಚಿ ಬಂಧಿಸಿ, ಒಂದೆಡೆ ಇರಿಸುತ್ತಾರೆ. ಮೂರು ಹೊತ್ತು ಊಟ, ಟೀವಿ, ವಸತಿ ಎಲ್ಲವೂ ಸಿಗುತ್ತದೆ. ‘ಹೆಚ್ಚು ಹೊಡೆಯುವುದು, ಬಡಿಯುವುದು ಇಲ್ಲ. ಆದರೆ ನಮ್ಮನ್ನು ಯಾವ ದೇಶದವರೆಂದು ಅವರು ನಿರ್ಧರಿಸುವುದೇ ತುಂಬ ಕಠಿಣ. ಅದೇ ನಮ್ಮನ್ನು ಬಚಾವ್ ಮಾಡುತ್ತಿದೆ’ ಎನ್ನುತ್ತಾನೆ ರೋಶನ್.

ಖ್ಯಾತ ಕ್ಯಾಬರೆ ಕ್ಲಬ್ ‘ಮೌಲಿನ್ ರೂಗ್’ ಬಳಿ ಸಿಗರೇಟ್ ಲೈಟರ್, ಗೊಂಬೆ ಮಾರಾಟ ಮಾಡುವ ರೋಶನ್‌ ಊರು ಲಖನೌ. ಪಾಲಕರು ಹಾಗೂ ಮೂವರು ಸಹೋದರರನ್ನು ಅಲ್ಲೇ ಬಿಟ್ಟು, ಹೆಚ್ಚು ಹಣ ಗಳಿಸಲು ಪ್ಯಾರಿಸ್‌ಗೆ ಹಾರಿ ಬಂದವ ಈತ. ಆರು ವರ್ಷಗಳಾದರೂ ಇಲ್ಲೇ ಇದ್ದಾನೆ. ಒಮ್ಮೆ ಪೊಲೀಸರು ಹಿಡಿದುಕೊಂಡು ಹೋಗಿ, ಹದಿನೈದು ದಿನ ಬಂಧನದಲ್ಲಿ ಇಟ್ಟು, ವಾಪಸು ಕಳಿಸಿದ್ದರಂತೆ. ‘ನಾನು ಭಾರತೀಯ ಎಂಬುದಕ್ಕೆ ದಾಖಲೆಗಳೇ ನನ್ನಲ್ಲಿಲ್ಲ. ಅಕಸ್ಮಾತ್ ನನ್ನಲ್ಲಿ ಆ ದಾಖಲೆ ಇದ್ದರೆ ವಾಪಸು ಕಳಿಸುತ್ತಿದ್ದರೇನೋ? ಅಥವಾ ಕಾನೂನು ಮೀರಿ ಇಲ್ಲೇ ಇದ್ದುದಕ್ಕೆ ಶಿಕ್ಷೆ ಕೊಡುತ್ತಿದ್ದರೇನೋ? ಒಟ್ಟಿನಲ್ಲಿ ಅದೇನೂ ಆಗಲಿಲ್ಲ’ ಎಂದ ರೋಶನ್. ‘ನಿನ್ನ ಪಾಸ್‌ಪೋರ್ಟ್‌ ಎಲ್ಲಿದೆ’ ಎಂದು ಕೇಳಿದಾಗ, ‘ಪೊಲೀಸರು ನಾಲ್ಕೈದು ಏಟು ಕೊಟ್ಟರೂ ಹೇಳಿಲ್ಲ; ನಿಮಗೆ ಹೇಳುತ್ತೇನಾ?’ ಎಂದು ಕೈಯಾಡಿಸಿ ನಕ್ಕುಬಿಟ್ಟ!
* * *
ಯಾವುದೋ ಕ್ಷಣದಲ್ಲಿ ದೇಶ ತೊರೆದು, ಅಧಿಕ ಹಣ ಗಳಿಕೆಯ ಆಸೆಯಿಂದ ಬಂದು ಪ್ಯಾರಿಸ್ ಬುಟ್ಟಿಯೊಳಗೆ ಬಿದ್ದ ಒಬ್ಬೊಬ್ಬರದೂ ಒಂದೊಂದು ಕಥೆ. ಕೆಲವರು ಕಾನೂನುಬದ್ಧ ವೀಸಾ ತೆಗೆದುಕೊಂಡು ಬರುತ್ತಾರೆ.
*
ವಲಸಿಗರ ದಾರಿ
ಐಷಾರಾಮಿ ಬದುಕು, ವೈಭೋಗದಲ್ಲಿ ಮುಳುಗಿರುವ ಯೂರೋಪ್‌ನ ಮಹಾನ್ ನಗರಿಗಳಲ್ಲಿ ಹೊಟ್ಟೆಪಾಡಿಗೆ ಏನಾದರೂ ಸಿಕ್ಕೀತು ಎಂಬ ಆಸೆಯಿಂದ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಖಂಡದ ಕೆಲವು ದೇಶಗಳ ದುಸ್ಥಿತಿಯು, ಇಂಥ ‘ಅಕ್ರಮ’ ವಲಸಿಗರಿಗೆ ಸುಲಭ ದಾರಿಯನ್ನು ತೋರುವಂತಿದೆ. ಗ್ರೀಸ್, ಬಲ್ಗೇರಿಯಾ, ರೊಮೇನಿಯಾ, ಉಕ್ರೇನ್‌ನಂಥ ದೇಶಗಳ ಮೂಲಕ ಯೂರೋಪ್ ಒಳಗೆ ಬರುವವರ ಸಂಖ್ಯೆ ಪ್ರತಿ ವರ್ಷ ಲಕ್ಷ ದಾಟುತ್ತಿದೆ.

ಅಂತರ್ಯುದ್ಧ, ದಂಗೆ, ಕಲಹಗಳಿಗೆ ಸಿಲುಕಿರುವ ಹಲವು ದೇಶಗಳು ಆರ್ಥಿಕ ದುಸ್ಥಿತಿಯಿಂದಾಗಿ ಕಂಗಾಲಾಗಿವೆ. ಗಡಿಗಳನ್ನು ಭದ್ರವಾಗಿ ಕಾಪಾಡಿಕೊಳ್ಳಲು ಅಸಾಧ್ಯ ಎನಿಸುವಂಥ ಸ್ಥಿತಿ ಅವುಗಳದು. ಏಷ್ಯಾದಲ್ಲಿರುವ ಟರ್ಕಿ, ಐರೋಪ್ಯ ಒಕ್ಕೂಟವನ್ನು ಸೇರಲು ತುದಿಗಾಲಲ್ಲಿ ನಿಂತಿದೆ. ಈ ದೇಶದ ಇಸ್ತಾಂಬುಲ್‌ನ ಸಮೀಪದಲ್ಲಿರುವ ಬಾಸ್ಪರಸ್ ಸೇತುವೆಯು ಒರ್ಟಾಕೊಯ್ ಮೂಲಕ ಯೂರೋಪ್‌ಗೆ ಸಂಪರ್ಕ ಕಲ್ಪಿಸುತ್ತದೆ. ಎರಡು ಖಂಡಗಳು ಸೇರುವ ಜಾಗ ನೋಡಲು ಪ್ರವಾಸಿಗರು ಸಾವಿರಗಟ್ಟಲೇ ಬರುತ್ತಾರೆ. ಈ ನೆಪದಲ್ಲಿ ಯೂರೋಪ್‌ನೊಳಗೆ ಅಕ್ರಮವಾಗಿ ನುಸುಳುವವರ ಸಂಖ್ಯೆಯೂ ಸಾಕಷ್ಟಿದೆ. ಹೇಗಾದರೂ ಮಾಡಿ ಒಂದೊಮ್ಮೆ ಗ್ರೀಸ್‌ನೊಳಗೆ ಕಾಲಿಟ್ಟರೆ ಉಳಿದ ದೇಶಗಳಿಗೆ ಹೋಗಲೆಷ್ಟು ಹೊತ್ತು?!

ತಮ್ಮ ದೇಶಗಳಲ್ಲಿ ಅಸಹನೀಯ ಸ್ಥಿತಿ ಸೃಷ್ಟಿಯಾದಾಗ, ಯಾವ ಮಾರ್ಗದಲ್ಲಾದರೂ ಬೇರೆಡೆ ವಲಸೆ ಹೋಗಲು ಜನರು ಹಾತೊರೆಯುತ್ತಾರೆ. ಅತ್ಯಂತ ಅಪಾಯಕಾರಿ ಎನಿಸುವ ದಾರಿ ಆಯ್ದುಕೊಂಡು, ಕಿರಿದಾದ ದೋಣಿಗಳಲ್ಲಿ ನೂರಾರು ಜನ ಕಿಕ್ಕಿರಿದು ತುಂಬಿ ಪಯಣ ಹೊರಡುತ್ತಾರೆ. ನೆಲ ಮುಟ್ಟುವ ಕನಸು ಮಾರ್ಗ ಮಧ್ಯೆಯೇ ಮುಳುಗುವುದೂ ಉಂಟು. ಜಗತ್ತನ್ನು ತಲ್ಲಣಗೊಳಿಸಿದ ಅಯ್ಲಾನ್ ಕುರ್ದಿ ಎಂಬ ಬಾಲಕನ ಕುಟುಂಬ ಹೀಗೆಯೇ ವಲಸೆ ಹೊರಟಿತ್ತಲ್ಲವೇ?
*
ವರ್ಷದ ಎರಡು ತಿಂಗಳು ಭಾರತಕ್ಕೆ ಹೋಗಿ, ಮತ್ತೆ ಇಲ್ಲಿಗೆ ಬಂದು ಹತ್ತು ತಿಂಗಳು ದುಡಿಯುತ್ತಾರೆ. ಅವಧಿ ಮೀರಿ ನೆಲೆಸುವ ಅಕ್ರಮ ವಲಸಿಗರೂ ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಅಂಥವರಿಗೆ ಆಸರೆ ನೀಡುವ ಮನೆಗಳಿವೆ. ಡಾರ್ಮೆಟರಿ ತರಹದ ಒಂದೊಂದು ಮನೆಯಲ್ಲಿ ಇಪ್ಪತ್ತು–ಮೂವತ್ತು ಜನರು ವಾಸಿಸುತ್ತಾರೆ. ದಿನವಿಡೀ ಸಣ್ಣಪುಟ್ಟ ವಹಿವಾಟು, ಕೆಲಸ. ರಾತ್ರಿ ನಿದ್ರೆಗೆ ಮನೆಯಲ್ಲಿ ಅವಕಾಶ.

‘ನಾವೇನೋ ಹಣ ಗಳಿಸುವ ಆಸೆಯಿಂದ ಇಲ್ಲಿಗೆ ಬಂದೆವು. ಆದರೆ ಇಲ್ಲಿ ಆಗುವ ಖರ್ಚು ನೋಡಿದರೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಉಳಿತಾಯ ಮಾಡಲು ಸಹ ಆಗದು’ ಎಂದ ಕಿರಣ್ ಧಾರ್. ಗಾರ್ ದೇ ನೋರ್‌ ಪ್ರದೇಶದ ಮುಖ್ಯರಸ್ತೆಯಲ್ಲಿ ನಿಂತು ಕರಪತ್ರಗಳನ್ನು ಹಂಚುವುದು ಆತನ ಕೆಲಸ. ಅಪಘಾತದಲ್ಲಿ ಅಪ್ಪ–ಅಮ್ಮ ಇಬ್ಬರೂ ಮೃತಪಟ್ಟಾಗ, ಬಂಧುಮಿತ್ರರಿಂದ ಯಾವ ನೆರವೂ ಸಿಗಲಿಲ್ಲ.

ಪುಟ್ಟ ನಿವೇಶನ ಮಾರಿ, ಸಿಕ್ಕ ನಾಲ್ಕು ಲಕ್ಷ ರೂಪಾಯಿಗಳನ್ನು ಏಜೆಂಟನ ಕೈಯಲ್ಲಿ ಇಟ್ಟಾಗ ವೀಸಾ ಸಿಕ್ಕಿತು. ಚೆನ್ನೈನಿಂದ ಪ್ಯಾರಿಸ್‌ಗೆ ಬಂದು, ಇನ್ನೊಬ್ಬ ಏಜೆಂಟನ ಮೂಲಕ ಈ ಕೆಲಸ ಗಿಟ್ಟಿಸಿದ. ಡಾನ್ಸ್ ಬಾರ್‌ಗಳಲ್ಲಿ ನಡೆಯುವ ನೃತ್ಯ ಕಾರ್ಯಕ್ರಮಗಳ ಕರಪತ್ರ ಹಂಚುವುದು ಕಿರಣ್‌ನ ಕೆಲಸ. ರಸ್ತೆಯಲ್ಲಿ ಸಿಗುವ ಭಾರತದವರನ್ನು ಗುರುತಿಸಿ, ಖುಷಿಯಿಂದ ಮಾತಾಡಿಸುತ್ತಾನೆ (ಆದರೆ ಜತೆಗೆ ಫೋಟೊ ತೆಗೆಸಿಕೊಳ್ಳಲು ಒಪ್ಪುವುದೇ ಇಲ್ಲ. ಇತರ ‘ಅಕ್ರಮ’ ವಲಸಿಗರದೂ ಇದೇ ನಿಲುವು). ಭಾರತಕ್ಕೆ ಹೋಗುವ ಆಸೆಯನ್ನೇ ತ್ಯಜಿಸಿದ್ದಾನೆ. ‘ಇನ್ನೇನಿದ್ದರೂ ಇದೇ ನನ್ನ ನೆಲ’ ಎಂಬ ಸ್ಪಷ್ಟ ನುಡಿ ಆತನದು.

ಕಾಣದ ಕಡಲನ್ನು ಹಂಬಲಿಸಿ ಬಂದವರ ಪೈಕಿ ಸುಖ ಉಂಡವರಿದ್ದಾರೆ; ಕಣ್ಣೀರು ಸುರಿಸಿದವರೂ ಇದ್ದಾರೆ. ಊರಲ್ಲಿದ್ದರೆ ಇಷ್ಟೂ ಕಾಣುತ್ತಿರಲಿಲ್ಲವೇನೋ ಎಂಬ ನಿಟ್ಟುಸಿರು ಇನ್ನೊಂದಿಷ್ಟು ಜನರದು. ಕಾನೂನುಪ್ರಕಾರ ವೀಸಾ ಪಡೆದು ವರ್ಷಕ್ಕಿಷ್ಟು ತಿಂಗಳು ಅಲ್ಲಿ-ಇಲ್ಲಿದ್ದು ಗಳಿಸುವವರೂ ಇದ್ದಾರೆ. ದಾಖಲಾತಿ ಬಚ್ಚಿಟ್ಟು, ಮೂಲವನ್ನೇ ಬಿಟ್ಟು ಕೊಡದೇ ಹೋದಾಗ ಅವರನ್ನು ಕಳಿಸುವುದು ಎಲ್ಲಿಗೆ? ಯಾವ ದೇಶಕ್ಕೆ? ಅಧಿಕಾರಿಗಳಿಗೆ ಇಂಥ ಪೇಚಾಟ ತಂದಿಟ್ಟು ಪಾರಾಗುವವರ ಸಂಖ್ಯೆಯೂ ಸಾಕಷ್ಟಿದೆ.

ಇಟಲಿಯ ರೋಮ್, ವೆನಿಸ್, ಮಿಲಾನ್, ಫ್ರಾನ್ಸ್‌ನ ಪ್ಯಾರಿಸ್ ಇನ್ನಿತರ ಕೆಲವು ನಗರಿಗಳಲ್ಲಿ ಕಟ್ಟುನಿಟ್ಟಿನ ಕಾನೂನು ಇನ್ನೂ ಜಾರಿಯಾಗಿಲ್ಲ. ಅನ್ನ ಹುಡುಕಿಕೊಂಡು ಬಡರಾಷ್ಟ್ರಗಳಿಂದ ಬರುವವರಿಗೆ ಅದು ವರದಾನದಂತೆ! ದುಡಿಯಲು ಬಂದವರಿಗೆ ಸೌಲಭ್ಯ ಒದಗಿಸುವಂತೆ ಸ್ವಯಂಸೇವಾ ಸಂಸ್ಥೆಗಳು ಒತ್ತಾಯಿಸುತ್ತಲೇ ಇವೆ. ಹೀಗಾಗಿ ಒಂದಷ್ಟು ಸಣ್ಣಪುಟ್ಟ ದಾಖಲೆ ಸಲ್ಲಿಸಿದರೆ ಅಂಥವರಿಗೆ ವಲಸೆ ಗುರುತಿನ ಚೀಟಿ ನೀಡುವ ಯೋಜನೆಯೂ ಆಗಾಗ ನಡೆಯುತ್ತದೆ.

‘ಇಲ್ಲಿಗೆ ಬರಲು ಎರಡು ವರ್ಷಗಳ ಹಿಂದೆ ಖರ್ಚು ಮಾಡಿದ ನಾಲ್ಕು ಲಕ್ಷ ರೂಪಾಯಿಗಳನ್ನು ಮತ್ತೆ ಗಳಿಸುವವರೆಗೆ ಭಾರತಕ್ಕೆ ಹೋಗುವ ಪ್ರಶ್ನೆಯೇ ಇಲ್ಲ’ ಎಂದ ಹರಿಯಾಣದ ಯುವಕ ಗುರುಭೂಷಣ್. ಆತ ತನ್ನ ರಾಜ್ಯದ ಆರು ಜನರ ಜತೆ ಪ್ಯಾರಿಸ್‌ಗೆ ಬಂದಿದ್ದಾನೆ. ಬೆಳಿಗ್ಗೆಯೆಲ್ಲ ಸಿಗರೇಟ್ ಲೈಟರ್, ಕೀಚೈನ್, ಡಾನ್ಸಿಂಗ್ ಡಾಲ್ ಮಾರುವ ಆತ ಸಂಜೆಯಾಗುತ್ತಿದ್ದಂತೆ ಬಿಯರ್ ಬಕೆಟ್ ಹಿಡಿದು ಹೊರಡುತ್ತಾನೆ. ಭಾರತದಲ್ಲಿದ್ದರೆ ಏನೂ ಸಿಗದು ಎಂಬ ನಿರಾಶೆಯಿಂದ ಭವಿಷ್ಯ ಅರಸಿ ಬಂದಿರುವ ಸಾವಿರಾರು ಜನರ ಪೈಕಿ ಆತನೂ ಒಬ್ಬ.

ಕತ್ತಲಲ್ಲಿ ಮಿರುಗುವ ಐಫೆಲ್ ಟವರ್ ನೋಡಲು ನಿತ್ಯ ಸಂಜೆ ಸಾವಿರಾರು ಜನರು ಐಷಾರಾಮಿ ದೋಣಿಯಲ್ಲಿ ಕುಳಿತು ಸೆನ್ ನದಿಯಲ್ಲಿ ಸಾಗುತ್ತಾರೆ. ‘ಅಮೇಝಿಂಗ್’, ‘ವಾವ್’ ಎಂದು ಉದ್ಗರಿಸುತ್ತ ಕುಡಿದು ಕುಪ್ಪಳಿಸುವ ಜನರ ಮೋಜು ಹೆಚ್ಚಿಸಲು ರೋಶನ್, ಸುರ್ಜಿತ್‌, ಗುರುಭೂಷಣ್‌ರಂಥ ಯುವಕರು ಕಾಯುತ್ತ ನಿಂತಿರುತ್ತಾರೆ. ಇವರು ಕೊಡುವ ಮದ್ಯ ಹೀರುತ್ತ ಅವರ ಮುಖ ಅರಳುತ್ತದೆ. ಇವರಿಗೋ ಹತ್ತಾರು ಮೈಲು ದೂರವಿರುವ ಮನೆಗೆ ಹೋಗಿ ಊಟ ಮಾಡುವ ಅವಸರ. ಹಸಿವಿನ ಬೆಲೆ ಇವರಿಗಿಂತ ಬೇರೆ ಯಾರಿಗೆ ತಾನೇ ಹೆಚ್ಚು ಗೊತ್ತು?
*
ಏರ್‌ಪೋರ್ಟಿನಲ್ಲಿ 18 ವರ್ಷ!
ನೆಪೋಲಿಯನ್ ಅರಮನೆ ಇದ್ದ ಸ್ಥಳದಲ್ಲಿ ಸುಂದರ ತೋಟ ರೂಪುಗೊಂಡಿದೆ. ಅಲ್ಲಿ ಗ್ರೀಟಿಂಗ್ ಕಾರ್ಡ್‌ ಮಾರುವ ಹಸನ್ (ಮೂಲ ಕೋಲ್ಕತ್ತ) ಜತೆ ಮಾತಾಡುತ್ತಿದ್ದಾಗ, ‘ಮೆಹ್ರನ್ ಕರಿಮಿ ನಾಸಿರ್ ಎದುರು ನಾನೇನೂ ಅಲ್ಲ ಬಿಡಿ’ ಎಂದ. ಮೆಹ್ರನ್ ಕರಿಮಿ– ಸತತ 18 ವರ್ಷಗಳ ಕಾಲ ಪ್ಯಾರಿಸ್‌ನ ಚಾರ್ಲ್ ಡಿ’ಗಾಲೆ ವಿಮಾನ ನಿಲ್ದಾಣದಲ್ಲಿ ಇದ್ದಾತ. ಇರಾನ್ ಮೂಲದ ಮೆಹ್ರನ್‌ನನ್ನು ಅಲ್ಲಿನ ಸರ್ಕಾರ ಗಡೀಪಾರು ಮಾಡಿತು. ಎಲ್ಲೆಲ್ಲೋ ಅಲೆದ ಆತ ಕೊನೆಗೆ 1988ರ ಆಗಸ್ಟ್ 26ರಂದು ಪ್ಯಾರಿಸ್‌ಗೆ ಬಂದ. ಸೂಕ್ತ ದಾಖಲೆ ಇಲ್ಲದ ಕಾರಣ ಆತನನ್ನು ಬೇರೆಡೆ ಕಳಿಸಲು ಅಥವಾ ಒಳಗೆ ಪ್ರವೇಶ ಕೊಡುವುದಾಗಲೀ ಆಗಲಿಲ್ಲ.

ಅಂದಿನಿಂದ ವಿಮಾನ ನಿಲ್ದಾಣ ಆತನ ಮನೆಯಾಯಿತು. ನಿಲ್ದಾಣದ ಒಂದನೇ ಟರ್ಮಿನಲ್‌ನ ಮೂಲೆಯಲ್ಲೊಂದು ಹಾಸಿಗೆ ಹಾಸಿಕೊಂಡು ಅಷ್ಟು ವರ್ಷಗಳ ಕಾಲ ಬದುಕಿದ. ಗಗನಸಖಿಯರು, ವಿಮಾನಗಳ ಸಿಬ್ಬಂದಿ ಸಹಾನುಭೂತಿಯಿಂದಾಗಿ ಆತನಿಗೆ ಊಟ-ತಿಂಡಿ ಕೊರತೆ ಎದುರಾಗಲಿಲ್ಲ. ನಿಲ್ದಾಣದ ಅಧಿಕಾರಿಗಳು ಪ್ರಯತ್ನಪಟ್ಟು ಯಾವುದೋ ಒಂದು ಯೋಜನೆಯಡಿ 2007ರಲ್ಲಿ ಆತನನ್ನು ಹೊರಗೆ ಕಳಿಸಿದರು. ಸದ್ಯಕ್ಕೆ ಆತ ಪ್ಯಾರಿಸ್‌ನ ನಿರಾಶ್ರಿತರ ಶಿಬಿರದಲ್ಲಿ ಬದುಕುತ್ತಿದ್ದಾನೆ. ಅಂದ ಹಾಗೆ, ಈತನ ಬದುಕು ಆಧರಿಸಿದ ‘ಲಾಸ್ಟ್‌ ಇನ್ ಟ್ರಾನ್ಸಿಟ್’ ಎಂಬ ಸಿನಿಮಾ ಕೂಡ ಬಿಡುಗಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT