ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನಿನ ಬಲ ತುಂಬಿ

Last Updated 26 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

150  ವರ್ಷಗಳಿಗೂ ಹೆಚ್ಚು ಹಳೆಯದಾದ ಬಾಲಬ್ರೂಯಿ  ಕಟ್ಟಡ  ಈಗ ಸರ್ಕಾರಿ ಅತಿಥಿಗೃಹವಾಗಿದೆ. ಈ ಕಟ್ಟಡವನ್ನು ಬೆಂಗಳೂರಿನ ಪಾರಂಪರಿಕ ಕಟ್ಟಡಗಳ ಸಾಲಿನಲ್ಲಿ ಇತಿಹಾಸತಜ್ಞರು ಗುರುತಿಸಿದ್ದಾರೆ. ‘ಇಂತಹ ಕಟ್ಟಡವನ್ನು  ಶಾಸಕರ ಕ್ಲಬ್ ನಿರ್ಮಿಸು­ವು­ದ­ಕ್ಕಾಗಿ ಒಡೆಯುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

‘ಶಾಸಕರಿಗಾಗಿ ಕ್ಲಬ್ ಆರಂಭಿಸುವ ವಿಚಾರ ಹತ್ತು ವರ್ಷ­ಗಳಿಂದ ಚಾಲ್ತಿಯಲ್ಲಿದೆ. ಆದರೆ ಇಂತಹ ಕಡೆಯೇ ಮಾಡುತ್ತೇವೆ ಎನ್ನುವ ವಿಚಾರ ಅಂತಿಮವಾಗಿಲ್ಲ’ ಎಂದು ಮುಖ್ಯಮಂತ್ರಿ­ಗಳು ಹೇಳಿರುವುದು ಸಮಾ­ಧಾನದ ಅಂಶ. ಆದರೆ ಈ ಕುರಿತಂತೆ ಸೃಷ್ಟಿಯಾದ ವಿವಾದ, ಪ್ರತಿ­ಭಟನೆಗಳು ನಮ್ಮ ಪಾರಂಪರಿಕ ಕಟ್ಟಡಗಳ ಕುರಿತಾಗಿ ಸರ್ಕಾರದ ಮಟ್ಟದಲ್ಲಿ ಇರುವ ನೀತಿಯ ಕೊರತೆಯನ್ನು ಬಿಂಬಿಸಿವೆ. ಜೊತೆಗೆ ಪಾರಂಪರಿಕ ಕಟ್ಟಡಗಳ ಮಹತ್ವದ ಕುರಿತಾದ ವಾಗ್ವಾದವನ್ನು ಮುನ್ನೆಲೆಗೆ ತಂದಿದೆ.

ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈ ಕುರಿತು ನೀತಿ­ಯೊಂದನ್ನು ರೂಪಿಸಲು ಇದು ಸಕಾಲ. ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ನಿಜಕ್ಕೂ ಕಾಯಿದೆಯ ಬಲ ಸಿಗಬೇಕು ಎಂಬುದು ಸದ್ಯದ ಅನಿವಾರ್ಯ. ಆಗ ಪಾರಂಪರಿಕ ಕಟ್ಟಡಗಳ ಬಗ್ಗೆ ಹೊಣೆಗೇಡಿ ನಿರ್ಧಾರಗಳನ್ನು ಕೈಗೊಳ್ಳಬಹುದಾದ ಸಾಧ್ಯತೆಗಳನ್ನು ತಪ್ಪಿಸುವುದು ಸಾಧ್ಯವಾಗುತ್ತದೆ. ಜೊತೆಗೆ ಸಾರ್ವಜನಿಕ ವಲಯದಲ್ಲಿ ಈಗ ಉಂಟಾದಂತಹ ಅನುಮಾನ, ಸಂಶಯ ಅಥವಾ ವದಂತಿಗಳಿಗೆ ಆಸ್ಪದವೂ ಇರುವುದಿಲ್ಲ.

ಬ್ರಿಟನ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಪಾರಂಪರಿಕ ಕಟ್ಟಡಗಳ ರಕ್ಷಣೆಗೆ  ಬಿಗಿಯಾದ ಕಾನೂನುಗಳು ಇರುವುದು ನಮಗೆ ಮಾದರಿಯಾಗ­ಬೇಕು.  ಹಾಗೆಯೇ ನಮ್ಮ ಸಾಂಸ್ಕೃತಿಕ ಇತಿಹಾಸ ಹಾಗೂ ಭಾಷೆಯ ಸಂರಕ್ಷಣೆ­ಯಲ್ಲಿ  ಪಾಶ್ಚಿಮಾತ್ಯ ವಿದ್ವಾಂಸರ ಕೊಡುಗೆಯನ್ನು ನಾವು ಮರೆಯುವಂತೆಯೇ ಇಲ್ಲ. ಬೆಂಗಳೂರು ನಗರಕ್ಕೆ ಸುಮಾರು 477 ವರ್ಷ­ಗಳ ಇತಿಹಾಸವಿದೆ. ಕೆಂಪೇಗೌಡನಿಂದ ಆರಂಭಿಸಿ ಬ್ರಿಟಿಷ್ ಆಡಳಿತದವರೆಗಿನ ಅನೇಕ ಕುರುಹುಗಳನ್ನು ಬೆಂಗಳೂರು ನಗರ  ಹೊಂದಿದೆ. ಆದರೆ ಈ ಶ್ರೀಮಂತ ಇತಿಹಾಸದ ಕುರುಹುಗಳು ನಗರದಲ್ಲಿ ಸಂರಕ್ಷಣೆಯಾಗುತ್ತಿಲ್ಲ ಎಂಬುದು ದುರದೃಷ್ಟಕರ.

ಕಳೆದ 10 ವರ್ಷಗಳಲ್ಲಿ  ಖಾಸಗಿ ಹಾಗೂ ಸರ್ಕಾರಕ್ಕೆ ಸೇರಿದ 1000 ಪಾರಂಪರಿಕ ಕಟ್ಟಡಗಳನ್ನು ಬೆಂಗಳೂರು ನಗರ ಕಳೆದುಕೊಂಡಿದೆ ಎಂಬುದು ಒಂದು ಅಂದಾಜು. ಹೀಗಾಗಿ ಮುಂಬೈ, ಗೋವಾ, ನವದೆಹಲಿ, ಜೈಪುರ, ಹೈದರಾಬಾದ್ ಹಾಗೂ ಅಹಮದಾ­ಬಾದ್ ನಗರಗಳಲ್ಲಿರುವಂತೆ ‘ಬೆಂಗಳೂರು ಪಾರಂಪರಿಕ ಕಟ್ಟಡ ನಿಯಂತ್ರಣ ಕಾಯಿದೆ’ ರೂಪು­ಗೊಳ್ಳುವುದು ಅತ್ಯವಶ್ಯ. ಪಾರಂಪರಿಕ ಕಟ್ಟಡಗಳ ರಕ್ಷಣೆಗೆ ಸಂಬಂಧಿಸಿದಂತೆ ಈಗಾಗಲೇ ಕಾಯಿದೆಯ ಕರಡನ್ನು ಬಿಬಿಎಂಪಿಯ ನಗರ ಯೋಜನಾ ವಿಭಾಗದ ನಿರ್ದೇಶಕರು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿದ್ದಾರೆ. ಆದರೆ ಈವರೆಗೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. 

ಈಗಲಾದರೂ ಈ ಕಡತದ ದೂಳು ಕೊಡವಿ ಈ ಸಂಬಂಧದ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಪಾರಂಪರಿಕ ಕಟ್ಟಡಗಳು ಬೆಂಗಳೂರಿನ ಸಾಂಸ್ಕೃತಿಕ ಅಸ್ಮಿತೆಯೂ ಹೌದು. ಇಂತಹ ಕಟ್ಟಡಗಳಿಗಿರುವ ಇತಿಹಾಸ ಹಾಗೂ ಸಾಂಸ್ಕೃತಿಕ ಕೊಂಡಿ­ಗಳನ್ನು ವಿಸ್ಮೃತಿಗೆ ತಳ್ಳುವುದು ಸರಿಯಲ್ಲ. ಚರಿತ್ರೆಯೊಂದಿಗೆ ವರ್ತ­ಮಾನ­ವನ್ನು ಬೆಸೆಯುತ್ತಾ ಭವಿಷ್ಯದ ಭರವಸೆಗಳಿಗೆ ಬೆಳಕಾಗುವ ಇವು ಸಮುದಾಯದ ಸಾಂಸ್ಕೃತಿಕ ಆಸ್ತಿ ಎಂಬುದನ್ನು ಸರ್ಕಾರ ಮನಗಾಣಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT