ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನ್‌ಸ್ಟೆಬಲ್ ಸಾವು, ಎಸ್‌ಐಗೆ ಗಾಯ

ಪಿಸ್ತೂಲು ಪರಿಶೀಲನೆ ವೇಳೆ ಹಾರಿದ ಗುಂಡು
Last Updated 2 ಜುಲೈ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಯೋತ್ಪಾದನಾ ನಿಗ್ರಹ ಪಡೆಯ ಸಿಬ್ಬಂದಿ ಪೊಲೀಸ್ ಬಸ್‌ನಲ್ಲಿ ಕುಳಿತು ಪಿಸ್ತೂಲು ಪರಿಶೀಲಿಸುತ್ತಿದ್ದ ವೇಳೆ ಹಾರಿದ ಗುಂಡು, ಕಾನ್‌ಸ್ಟೆಬಲ್ ಮಹದೇವಸ್ವಾಮಿ (29) ಅವರನ್ನು ಬಲಿ ಪಡೆದಿದೆ. ಘಟನೆಯಲ್ಲಿ ಎಸ್‌ಐ ಮಂಜುಳಾ ಸಹ ಗಾಯಗೊಂಡಿದ್ದಾರೆ.
ನಗರದ ಕೂಡ್ಲು ಬಳಿ ಇರುವ ಆಂತರಿಕ ಭದ್ರತಾ ವಿಭಾಗದ ಭಯೋತ್ಪಾದನಾ ನಿಗ್ರಹ ಕೇಂದ್ರದ (ಸಿಸಿಟಿ) ಆವರಣದಲ್ಲಿ ಗುರುವಾರ ಈ ಅಚಾತುರ್ಯ ನಡೆದಿದೆ.

ಬೆಳಿಗ್ಗೆ 9.30ಕ್ಕೆ ತರಬೇತಿ ಮುಗಿಸಿದ ಸಿಬ್ಬಂದಿ ನಂತರ ಶಸ್ತ್ರಾಸ್ತ್ರಗಳನ್ನು ಮದ್ದು–ಗುಂಡು ಸಂಗ್ರಹ ಕೇಂದ್ರಕ್ಕೆ ಹಿಂದಿರುಗಿಸಬೇಕಿತ್ತು. ತರಬೇತಿ ಸ್ಥಳದಿಂದ ಅರ್ಧ ಕಿ.ಮೀ ದೂರವಿರುವ ಆ ಕೇಂದ್ರಕ್ಕೆ ತೆರಳಲು ಎಲ್ಲರೂ ಬಸ್‌ ಹತ್ತಿ ಕುಳಿತಿದ್ದರು.

‘ಕಾನ್‌ಸ್ಟೆಬಲ್ ರಾಜಶೇಖರ್‌ ಅವರು ಬಸ್‌ನ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದರು. ಅವರ ಮುಂದಿನ ಸೀಟಿನಲ್ಲಿ ಮಹದೇವಸ್ವಾಮಿ ಇದ್ದರು. ಎಲ್ಲ ಗುಂಡುಗಳನ್ನು ತೆಗೆದಿರುವುದಾಗಿ ಭಾವಿಸಿದ  ರಾಜಶೇಖರ್‌, ಮತ್ತೊಮ್ಮೆ ಪರಿಶೀಲಿಸಲು 9 ಎಂ.ಎಂ ಪಿಸ್ತೂಲಿನ ಟ್ರಿಗರ್ ಒತ್ತಿದರು. ಆಗ ಅದರಲ್ಲಿದ್ದ ಗುಂಡು, ಮಹದೇವಸ್ವಾಮಿ ಅವರ ತೊಡೆಯ ಒಳಭಾಗದಿಂದ ತೂರಿ ಹೋಯಿತು. ರಭಸವಾಗಿ ಸಾಗಿದ ಆ ಗುಂಡು ಮುಂದಿನ ಸೀಟನ್ನು ಛಿದ್ರಗೊಳಿಸಿ,  ನಂತರದ ಸೀಟಿನಲ್ಲಿದ್ದ ಮಂಜುಳಾ ಅವರ ಸೊಂಟಕ್ಕೆ ಹೊಕ್ಕಿತು’ ಎಂದು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಅಮರ್‌ಕುಮಾರ್ ಪಾಂಡೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗಾಯಾಳುಗಳನ್ನು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ತೀವ್ರ ರಕ್ತಸ್ರಾವವಾಗಿ ಮಹದೇವಸ್ವಾಮಿ ಮಾರ್ಗಮಧ್ಯೆಯೇ ಕೊನೆಯುಸಿರೆಳೆದರು. ಮಂಜುಳಾ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿ, ಗುಂಡನ್ನು ಹೊರತೆಗೆಯಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ’ ಎಂದರು.

‘ಮಹದೇವಸ್ವಾಮಿ ಮತ್ತು ರಾಜಶೇಖರ್‌ ನಗರ ಸಶಸ್ತ್ರ ಪಡೆಯ (ಸಿಎಆರ್) ಕಾನ್‌ಸ್ಟೆಬಲ್ ಆಗಿದ್ದರು. ಮಂಜುಳಾ ಅವರು ರಾಜ್ಯ ಕೈಗಾರಿಕಾ ಭದ್ರತಾ ಪಡೆಯ (ಕೆಎಸ್‌ಐಎಸ್‌ಎಫ್‌) ಎಸ್‌ಐ ಆಗಿದ್ದಾರೆ. ಅವರನ್ನು ಇತ್ತೀಚೆಗೆ ಭಯೋತ್ಪಾದನಾ ನಿಗ್ರಹ ಪಡೆಗೆ ನಿಯೋಜಿಸಲಾಗಿತ್ತು. ಎಸ್‌ಐ ಮಂಜುಳಾ ಅವರ ಉಸ್ತುವಾರಿಯಲ್ಲೇ ಗುರುವಾರದ ತರಬೇತಿ ನಡೆದಿತ್ತು’ ಎಂದು ಪಾಂಡೆ ಮಾಹಿತಿ ನೀಡಿದರು.

ಮೂಲತಃ ಮಡಿಕೇರಿಯ ಮಂಜುಳಾ, ಎರಡು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ಮೃತ ಮಹದೇವಸ್ವಾಮಿ ಮೂಲತಃ ಚಾಮರಾಜನಗರದವರು. 2014ರ ಮೇ ತಿಂಗಳಲ್ಲಿ ಅವರ ವಿವಾಹವಾಗಿದ್ದು, ಪತ್ನಿ ಐದು ತಿಂಗಳ ಗರ್ಭಿಣಿಯಾಗಿದ್ದಾರೆ. ದಂಪತಿ ಹೆಗಡೆನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.

ಕಾನ್‌ಸ್ಟೆಬಲ್ ಬಂಧನ
‘ತರಬೇತಿ ಮುಗಿದ ಬಳಿಕ ಪಿಸ್ತೂಲಿನಿಂದ ಎಲ್ಲ ಗುಂಡುಗಳನ್ನು ತೆಗೆಯಬೇಕು. ನಂತರ ನಳಿಕೆಯನ್ನು ನೆಲಕ್ಕೆ ತಿರುಗಿಸಿ, ಟ್ರಿಗರ್ ಒತ್ತಿ ಗುಂಡು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ನಾರಾಯಣಸ್ವಾಮಿ ಈ  ನಿಯಮ ಪಾಲಿಸಿಯೇ ಬಸ್‌ನಲ್ಲಿ ಕುಳಿತಿದ್ದಾಗಿ ಹೇಳಿಕೆ ಕೊಟ್ಟಿದ್ದಾರೆ. ಆದರೆ, ಅವರ ಅಚಾತುರ್ಯದಿಂದ ಈ ಘಟನೆ ನಡೆದಿರುವುದು ಖಚಿತವಾಗಿದೆ. ಹೀಗಾಗಿ ನಿರ್ಲಕ್ಷ್ಯ ಆರೋಪದಡಿ (ಐಪಿಸಿ 304ಎ) ಎಚ್‌ಎಸ್‌ಆರ್‌ ಲೇಔಟ್ ಪೊಲೀಸರು ಅವರನ್ನು ಬಂಧಿಸಿದ್ದಾರೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT