ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ಕಣಿವೆಗೆ ಗಾಲ್ಫ್‌ ಕೋರ್ಸ್‌ ಕಳಶ

Last Updated 19 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಚಿಕ್ಕಮಗಳೂರಿನಲ್ಲಿ ರೂಪುಗೊಂಡಿರುವ 18 ಕುಳಿಗಳ ಗಾಲ್ಫ್‌ಕೋರ್ಸ್‌ ರಾಜ್ಯದ ಗಾಲ್ಫ್‌ ನಕ್ಷೆಯಲ್ಲಿ  ಫಳಫಳನೆ ಹೊಳೆಯುತ್ತಿದೆ.  ಈ ಕೇಂದ್ರ ಇದೀಗ  ಆಟಗಾರರನ್ನು ಮತ್ತು ಪ್ರವಾಸಿಗರನ್ನು ಸೂಜಿಗಲ್ಲಂತೆ ಸೆಳೆಯುತ್ತಿದೆ.

ಕೆಲವು ಸಲ ಕನಸುಗಳು ನಿಜವಾಗಿಬಿಡುತ್ತವೆ, ಅದಕ್ಕೊಂದು ನಿದರ್ಶನ ಚಿಕ್ಕಮಗಳೂರಿನ ಗಾಲ್ಫ್‌ ಕೋರ್ಸ್.

ಎರಡು ದಶಕಗಳ ಹಿಂದೆ ಅದೊಂದು ದಿನ ಕಾಫಿ  ಬೆಳೆಗಾರ ಎ.ಬಿ.ಸುದರ್ಶನ್‌ ಅವರಿಗೆ ಹೊಳೆದ ವಿಚಾರ ಈಗ ಕಾರ್ಯರೂಪಕ್ಕೆ ಬಂದಿದೆ. ಇದು ಈ ಜಿಲ್ಲೆಯ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯಲಿದೆ.
ಮೊದಲು 9 ಕುಳಿಗಳಿಂದ ಆರಂಭವಾದ ಗಾಲ್ಫ್‌ ಕೋರ್ಸ್‌ ಈಗ 18 ಕುಳಿಗಳ ಮೈದಾನವಾಗಿ ಮೈದೆಳೆದಿದೆ. ಚಿಕ್ಕಮಗಳೂರಿನ ಗಾಲ್ಫ್‌ ಪ್ರಿಯರು ಒಂದು ಕಾಲದಲ್ಲಿ ಗಾಲ್ಫ್‌ ಆಡಬೇಕೆಂದರೆ ಬೆಂಗಳೂರಿಗೆ ಹೋಗಬೇಕಾಗಿದ್ದ ಸ್ಥಿತಿಯನ್ನು ಹೋಗಲಾಡಿಸಿದೆ.

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ ಶ್ರೇಣಿಯ ತಪ್ಪಲಿನಲ್ಲಿ ಇಂತಹ ಗಾಲ್ಫ್‌ ಅಂಗಳ ತಲೆಎತ್ತಲು ಕಾರಣ  ಕಾಫಿ ಬೆಳೆಗಾರ ಎ.ಬಿ.ಸುದರ್ಶನ್‌ ಅವರ ಆಸಕ್ತಿ. ತಮ್ಮ ತಂದೆ, ಮಾಜಿ ಶಾಸಕ ಬಸವೇಗೌಡರು ನಿಧನರಾದಾಗ ಸುದರ್ಶನ್‌ ಖಿನ್ನತೆಗೆ ಒಳಗಾಗಿದ್ದರು. ಮನಸನ್ನು ಹಗುರಗೊಳಿಸಿಕೊಳ್ಳಲು ದಾರಿ ಕಾಣದೆ ಹೆಣಗುತ್ತಿದ್ದರಂತೆ. ತಮ್ಮ 29ನೇ ವಯಸ್ಸಿನಲ್ಲಿ ಗಾಲ್ಫ್‌ ಆಡಲು ಆರಂಭಿಸಿದ್ದ ಅವರು ಸ್ನೇಹಿತರೊಡಗೂಡಿ ಎರಡು ವಾರಗಳಿಗೆ ಒಮ್ಮೆ ಬೆಂಗಳೂರಿಗೆ ಹೋಗಿ ಗಾಲ್ಫ್‌ ಆಡಿ ಬರುತ್ತಿದ್ದರಂತೆ.   ಅದೊಂದು ದಿನ ಬಾಬಾಬುಡನ್‌ ಗಿರಿಶ್ರೇಣಿಯ ಮಡಿಲಲ್ಲಿಯೇ ಗಾಲ್ಫ್‌ ಕೋರ್ಸ್‌ ರೂಪಿಸುವ ಆಲೋಚನೆ ಹೊಳೆಯಿತಂತೆ. ‘ನನ್ನ ಆಲೋಚನೆಗೆ ಕುಟುಂಬದ ಸದಸ್ಯರು, ಹಿತೈಷಿಗಳು ಕೈಜೋಡಿಸಿದರು. ದೇವರ ಆಶಿರ್ವಾದವೂ ಸಿಕ್ಕಿತು. ಕನಸು ನಿಜವಾಯಿತು ಅಷ್ಟೆ’ ಎನ್ನುತ್ತಾರೆ ಸುದರ್ಶನ್‌.

ಆಲೂಗಡ್ಡೆ, ಗೆಣಸು, ರಾಗಿ ಬೆಳೆಯುತ್ತಿದ್ದ ಹೊಲಗಳು ಮತ್ತು ಬೀಳು ಬಿದ್ದಿದ್ದ ಭೂಮಿ ಇಂದು ಗಾಲ್ಫ್‌ ಪ್ರಿಯರನ್ನು ಮತ್ತು ಚಿಕ್ಕಮಗಳೂರಿಗೆ ಬರುವ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ದನಕರುಗಳನ್ನು ಮೇಯಿಸುತ್ತಾ ದನಗಾಯಿಗಳು ಸಗಣಿ ಉಂಡೆ ಮಾಡಿಕೊಂಡು ಆಟ ಆಡುತ್ತಿದ್ದ ಜಾಗದಲ್ಲಿ ಹವ್ಯಾಸಿಗಳು, ವೃತ್ತಿಪರರು, ಉದಯೋನ್ಮುಖ ಪ್ರತಿಭೆಗಳು ಗಾಲ್ಫ್‌ ಆಡುತ್ತಿದ್ದಾರೆ.  ಮಾಜಿ ಕ್ರಿಕೆಟಿಗರಾದ ಅನಿಲ್‌ ಕುಂಬ್ಳೆ, ರಾಹುಲ್‌ ದ್ರಾವಿಡ್‌ ಹಾಗೂ ಜಾವಗಲ್‌ ಶ್ರೀನಾಥ್‌ ಅವರು ಇತ್ತೀಚೆಗೆ ಇಲ್ಲಿಗೆ ಬಂದು ಕೈಯಲ್ಲಿ ಗಾಲ್ಫ್‌ ಕ್ಲಬ್‌ ಹಿಡಿದು ಸ್ಟ್ರೋಕ್‌ ಹೊಡೆದು, ನವೀಕೃತ ಗಾಲ್ಫ್‌ ಕೋರ್ಸ್‌ಗೆ ಚಾಲನೆ ನೀಡಿ ಹೋಗಿದ್ದಾರೆ.

ಕರಡಿಕಾವಲ್‌ನಲ್ಲಿ ಬೆಳೆದ ಕಥೆ
‘ಕಡೂರು ಕ್ಲಬ್‌ನ ವ್ಯವಸ್ಥಾಪಕರಾಗಿದ್ದ ನಂಜುಂಡಯ್ಯ ಎಂಬುವವರಿಗೆ ಬ್ರಿಟಿಷರು 56 ಎಕರೆ ಜಾಗವನ್ನು ಕರಡಿಹಳ್ಳಿಕಾವಲ್‌ನಲ್ಲಿ ಮಂಜೂರು ಮಾಡಿದ್ದರು. ಅವರು ಆ ಜಾಗವನ್ನು ರೈತರಿಗೆ ಗೇಣಿ ನೀಡಿದ್ದರು. ಅವರಿಗೆ ಸರಿಯಾಗಿ ಗೇಣಿಯೂ ಬರುತ್ತಿರಲಿಲ್ಲ. ನಾವು ಗಾಲ್ಫ್‌ ಕೋರ್ಸ್‌ ಆರಂಭಿಸುವ ಚಿಂತನೆ ತೆರೆದಿಟ್ಟಾಗ ನಂಜುಂಡಯ್ಯ ಅವರು ಜಾಗ ನೀಡಲು ಒಪ್ಪಿಕೊಂಡರು. ಆದರೆ, ಗೇಣಿಗೆ ಪಡೆದಿದ್ದ ರೈತರು ನ್ಯಾಯಾಲಯದ ಮೆಟ್ಟಿಲು ಹತ್ತಿದರು. ರೈತರ ಮನವೊಲಿಸಿ, ಅವರಿಗೆ ಹಣ ಕೊಟ್ಟು ಭೂಮಿ ಖರೀದಿಸಿದೆವು. ಮೊದಲು ಇಲ್ಲಿಗೆ ಬರಲು ರಸ್ತೆ ಕೂಡ ಇರಲಿಲ್ಲ. ಕಾಡಿನ ಹಾದಿಯಲ್ಲಿ ಬರಬೇಕಿತ್ತು.

ಮೊದಲು ನಮಗೂ ಇಲ್ಲಿ ನಮ್ಮ ಉದ್ದೇಶ ಈಡೇರುತ್ತದೋ, ಇಲ್ಲವೋ ಎನ್ನುವ ಅಳುಕು ಇತ್ತು. ನಾನು, ನನ್ನ ಸಹೋದರ ಎ.ಬಿ.ರವಿಶಂಕರ್‌ ಮತ್ತು ಸದಸ್ಯರಾದ ಗೋಪಾಲಕೃಷ್ಣ ಇದೇ ಜಾಗ ಅಂತಿಮಗೊಳಿಸಿದೆವು’ ಎಂದು ಚಿಕ್ಕಮಗಳೂರು ಗಾಲ್ಫ್‌ ಕ್ಲಬ್‌ ಸಂಸ್ಥಾಪಕ ಅಧ್ಯಕ್ಷ ಎ.ಬಿ.ಸುದರ್ಶನ್‌ ತಮ್ಮ ನೆನಪಿನ ಬುತ್ತಿ ಬಿಚ್ಚಿಟ್ಟರು.

‘1996ರಲ್ಲಿ ಜಾಗ ಅಧಿಕೃತವಾಗಿ ನಮ್ಮ ಕೈಸೇರಿತು. 2000ರಲ್ಲಿ ಅಧಿಕೃತವಾಗಿ ಗಾಲ್ಫ್‌ ಕೋರ್ಸ್‌ ನಿರ್ಮಿಸಲು ಕೆಲಸ ಶುರು ಮಾಡಿದೆವು. ಆಸ್ಟ್ರೇಲಿಯಾದ ತಜ್ಞರಾದ ಪೆಸಿಫಿಕ್‌ ಕೋಸ್ಟ್‌ ಡಿಸೈನರ್‌ ಫಿಲ್‌ ರೆಯಾನ್‌ ಅವರನ್ನು ಸಂಪರ್ಕಿಸಿ, ನಮ್ಮ ಉದ್ದೇಶ ವನ್ನು ಅವರಿಗೆ ತಿಳಿಸಿದೆವು.  ನಮ್ಮ ಆಸಕ್ತಿ ಗಮನಿಸಿ ಅವರು ಪಡೆಯುವ ಶುಲ್ಕದಲ್ಲಿ ಕೇವಲ ಶೇಕಡ 10ರಷ್ಟು ಮಾತ್ರ ಪಡೆದು ಗಾಲ್ಫ್‌ ಕೋರ್ಸ್‌ ವಿನ್ಯಾಸಗೊಳಿಸಿದರು. ಈ ಜಾಗದ ನೈಸರ್ಗಿಕ ರೂಪಕ್ಕೆ ಮಾರುಹೋದ ರೆಯಾನ್‌, ನೈಸರ್ಗಿಕವಾಗಿ ಹರಿಯುವ ತೊರೆ ನೋಡಿ ಈ ಮೈದಾನ ‘ನೇಚರ್‌ ಗಿಫ್ಟ್‌’ ಎಂದು ವರ್ಣಿಸಿದ್ದರು. ಇದಕ್ಕೆ ಹೆಚ್ಚಿನ ಮಾರ್ಪಾಡಿನ ಅಗತ್ಯವೇ ಇಲ್ಲ. ಗಾಲ್ಫ್‌ ಆಡಲು ಹೇಳಿ ಮಾಡಿಸಿದಂತಿದೆ ಎಂದಿದ್ದರು. ಸಣ್ಣಪುಟ್ಟ ಮಾರ್ಪಾಡು ಮಾಡಿ 9 ಕುಳಿಗಳ ಗಾಲ್ಫ್‌ ಕೋರ್ಸ್‌ ವಿನ್ಯಾಸಗೊಳಿಸಿಕೊಟ್ಟರು. 2006ರ ಮಾರ್ಚ್‌ 16ರಂದು ಅಂದಿನ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಬಿ.ಎಸ್‌.ಪಾಟೀಲ್‌ ಉದ್ಘಾಟಿಸಿದರು.

ಅವರು ಕೂಡ ಒಳ್ಳೆಯ ಗಾಲ್ಫ್‌ ಆಟಗಾರರಾಗಿದ್ದರು. ತಾಜ್‌ ಸಮೂಹದ ನೆರವಿನೊಂದಿಗೆ ಸಣ್ಣದೊಂದು ಕ್ಲಬ್‌ಹೌಸ್‌ ನಿರ್ಮಿಸಲು ನಮಗೆ ಪ್ರೇರಣೆ ನೀಡಿದರು. ಅವರ ಪ್ರೇರಣೆಯಂತೆ ಸುಮಾರು ರೂ40 ಲಕ್ಷ ವೆಚ್ಚದಲ್ಲಿ ಸಿಜಿಸಿ ಹೌಸ್‌ ಆರಂಭಿಸಿದೆವು.  2008ರಲ್ಲಿ ಕ್ಲಬ್‌ಹೌಸ್‌ ಪೂರ್ಣಗೊಂಡಿತು’ ಎಂದು ಸಿಜಿಸಿ ಬೆಳೆದು ಬಂದ ಹಾದಿ ತೆರೆದಿಟ್ಟರು.

ಪ್ರವಾಸಿ ತಾಣ
ಪಂಚತಾರಾ ಶೈಲಿ ಮತ್ತು ಉತ್ತಮ ಸೌಲಭ್ಯವುಳ್ಳ 12 ಕಾಟೇಜುಗಳು, ಶುಚಿ, ರುಚಿ ಆಹಾರದೊಂದಿಗೆ ಗಾಲ್ಫ್‌ ಪ್ರಿಯರು ಮತ್ತು ಅತಿಥಿಗಣ್ಯರನ್ನು ಸತ್ಕರಿಸುತ್ತಿವೆ. ಇಲ್ಲಿನ ಪ್ರಕೃತಿಯ ಸೌಂದರ್ಯ, ಹಿತವಾದ ವಾತಾವರಣ ರಾಜಕಾರಣಿಗಳನ್ನು ಸೆಳೆಯದೆ ಬಿಟ್ಟಿಲ್ಲ. ಲೋಕಸಭೆಯ ಮಾಜಿ ಸ್ಪೀಕರ್‌ ಮೀರಾಕುಮಾರಿ ಅವರೇ ಅಲ್ಲದೆ ಅನೇಕ ಹೆಸರಾಂತ ರಾಜಕಾರಣಿಗಳು, ಚಲನಚಿತ್ರ ನಟನಟಿಯರು ಇಲ್ಲಿಗೆ ಬಂದು ಕೆಲವು ದಿನ ಉಳಿದು ಹೋಗಿದ್ದಾರೆ.

ಪ್ರವಾಸೋದ್ಯಮಕ್ಕೆ ಉತ್ತೇಜನ
ಚಿಕ್ಕಮಗಳೂರು ನೈಸರ್ಗಿಕ ಸೌಂದರ್ಯದ ತಾಣ. ಇಲ್ಲಿ ಅತಿ ಎತ್ತರದ ಶಿಖರ ಮುಳ್ಯಯ್ಯನಗಿರಿ, ಐದು ನದಿಗಳು, ಭದ್ರಾ ಅಭಯಾರಣ್ಯ, ಹೊರನಾಡು, ಕಳಸ , ಶೃಂಗೇರಿಯಂತಹ ಕೆಲವು ಯಾತ್ರಾ ಸ್ಥಳಗಳು, ಪಕ್ಕದಲ್ಲೇ ಇರುವ ಶಿಲ್ಪಕಲೆಗಳ ಬೀಡಾದ ಬೇಲೂರು ಹಳೆಬೀಡು, ಪಕ್ಷಿ ವೀಕ್ಷಣೆಗೆ ಹೇಳಿ ಮಾಡಿಸಿದ ಭದ್ರಾ ರಿವರ್‌ಟರ್ನ್‌, ಜಲಕ್ರೀಡೆಗೆ ಸೂಕ್ತವಾದ ಯಗಚಿ ಹಿನ್ನೀರು ಎಲ್ಲವೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ಮಹಾನಗರ, ಹೊರ ರಾಜ್ಯ, ಜಿಲ್ಲೆಗಳಿಂದ ಗಾಲ್ಫ್‌ ಕ್ಲಬ್‌ಗೆ ಬರುವ ಗಾಲ್ಫ್‌ಪ್ರಿಯರು, ಗಣ್ಯರು ಇಲ್ಲಿ ಗಾಲ್ಫ್‌ ಆಡುವ ಜತೆಗೆ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಉದ್ದೇಶದಿಂದಲೇ ಬರುತ್ತಾರೆ. ಒಂದು ರೀತಿಯಲ್ಲಿ ಚಿಕ್ಕಮಗಳೂರಿನ ಗಾಲ್ಫ್‌ಕೋರ್ಸ್‌ ಗುಣಮಟ್ಟದ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಎನ್ನುತ್ತಾರೆ ಸುದರ್ಶನ್‌.

‘ಬೇರೆ ಕ್ರೀಡೆಗಳಿಗೆ ಮರ ಕಡಿದು ಮೈದಾನ ನಿರ್ಮಿಸಬೇಕು. ಆದರೆ, ಮರ ಬೆಳೆಸಿ ಕ್ರೀಡೆ ನಡೆಸುವುದು ಗಾಲ್ಫ್‌ ಅಂಗಳದಲ್ಲಿ ಮಾತ್ರ. ಇದರಿಂದ ಪರಿಸರ, ಪಕ್ಷಿ, ವನ್ಯಜೀವಿ ಸಂರಕ್ಷಣೆಗೂ ಅನುಕೂಲ. ಸಿಜಿಸಿ ಅಂಗಳದಲ್ಲಿರುವ ಗಿಡಮರಗಳಲ್ಲಿ ಸಾವಿರಾರು ಪಕ್ಷಿಗಳು ಆಶ್ರಯ ಪಡೆದಿವೆ. ಪಕ್ಷಿ ವೀಕ್ಷಣೆಗೂ ಪಶ್ಚಿಮಘಟ್ಟ ಸ್ವರ್ಗವೆನಿಸಿದೆ. ಅದರಲ್ಲೂ ನಮ್ಮ ಗಾಲ್ಫ್‌ ಅಂಗಳದಲ್ಲೇ ಸುಮಾರು 25ರಿಂದ 30 ಬಗೆಯ ಪಕ್ಷಿಗಳು ವೀಕ್ಷಣೆಗೆ ಸಿಗುತ್ತವೆ. ಇಲ್ಲಿಗೆ ವಲಸೆ ಪಕ್ಷಿಗಳೂ ಬರುತ್ತವೆ. ಮುಂಜಾನೆ ಬಗೆಬಗೆಯ, ಬಣ್ಣಬಣ್ಣದ ಪಕ್ಷಿಗಳ ಕಲರವ ಕೇಳಿಸಿಕೊಳ್ಳುತ್ತಾ ಗಾಲ್ಫ್‌ ಆಡುವ ಆನಂದ ಅನುಭವಿಸಿಯೇ ಹೇಳಬೇಕು’ ಎನ್ನುತ್ತಾರೆ ಅವರು.

ಹತ್ತು ಹಲವು ಟೂರ್ನಿಗಳು
‘ಒಂಬತ್ತು ಕುಳಿ ಯಾರನ್ನೂ ಆಕರ್ಷಿಸುವುದಿಲ್ಲ. ಒಳ್ಳೆಯ ಗಾಲ್ಫ್‌ ಆಟಗಾರ ಯಾವಾಗಲೂ 18 ಕುಳಿಗಳೊಂದಿಗೆ ಆಡಲು ಬಯಸುತ್ತಾನೆ’ ಎನ್ನುವ ಸುದರ್ಶನ್‌, 82 ಎಕರೆಯ ವಿಶಾಲ ಗಾಲ್ಫ್‌ ಮೈದಾನದಲ್ಲಿ ಈಗ 18 ಕುಳಿಗಳಿವೆ. ಪ್ರತಿ ದಿನವೂ ಇಲ್ಲಿ ಕ್ಲಬ್‌ ಸದಸ್ಯರು, ಆಸಕ್ತರು ಬಂದು ಗಾಲ್ಫ್‌ ಆಡುತ್ತಾರೆ ಎನ್ನುತ್ತಾರೆ ಸುದರ್ಶನ್‌.

‘ಇದು ಕೇವಲ ಮನರಂಜನೆ, ಮನಸಂತೋಷವನ್ನಷ್ಟೆ ನೀಡುತ್ತಿಲ್ಲ.  ಆಡಲು ಬಂದವರು ಕನಿಷ್ಠ 3ರಿಂದ 4 ಗಂಟೆ ಕಾಲ ಕಳೆಯುವುದರಿಂದ ಒಬ್ಬರಿಗೊಬ್ಬರು ಹೆಚ್ಚು ಬೆರೆಯಲು ಸಾಧ್ಯವಾಗುತ್ತದೆ. ಬಾಂಧವ್ಯ ಬೆಳೆಸುತ್ತದೆ’ ಎನ್ನುವುದು ಅವರ ಅಭಿಮತ.

ಇಲ್ಲಿ ಪ್ರತಿ ವರ್ಷವೂ ಬ್ರಿಗೇಡ್‌ ಕಪ್‌, ಫೌಂಡರ್‌ ಕಪ್‌, ವಿಸಿಟರ್‌ ಕಪ್‌ ಟೂರ್ನಿಗಳು ನಡೆಯುತ್ತವೆ. ಗಾಲ್ಫ್‌ ಆಟ ಪ್ರೀತಿಸುವ ಕಾರ್ಪೋರೆಟ್‌ ಉದ್ಯಮಿಗಳು, ಐಎಎಸ್‌, ಐಪಿಎಸ್‌ ಅಧಿಕಾರಿಗಳು ವಾರಾಂತ್ಯವನ್ನು ಗಾಲ್ಫ್‌ ಆಡಿ ಕಳೆಯಲು ಇಲ್ಲಿಗೆ ಬರುತ್ತಿದ್ದಾರೆ.

‘ಚಿಕ್ಕಮಗಳೂರು ಗಾಲ್ಫ್‌ ಕ್ಲಬ್‌  ಲಾಭರಹಿತ ಚಾರಿಟೆಬಲ್‌ ಟ್ರಸ್ಟ್. ಅನೇಕ ಸಮಾಜ ಸೇವಾ ಕಾರ್ಯ ನಡೆಸುತ್ತಿದೆ. ಕ್ರೀಡಾಕೂಟಗಳಿಗೆ ನೆರವು ನೀಡುತ್ತಿದೆ, ರಾಜ್ಯದ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸುತ್ತಿದ್ದರೆ ಅವರಿಗೆ ಕೈಲಾದ ನೆರವು ನೀಡುತ್ತಿದೆ. ಕಡೂರು ಮೂಲದ ಟೆನಿಸ್‌ ಪ್ರತಿಭೆ ಬಿ.ಆರ್‌.ನಿಕ್ಷೇಪ್‌ ಅವರಿಗೆ ಹಣಕಾಸು ನೆರವು ನೀಡಿದ್ದೇವೆ. ಗುಜರಾತ್‌ ಭೂಕಂಪ, ಕಾರ್ಗಿಲ್‌ ಯುದ್ಧ ಸಮಯದಲ್ಲಿ ಸಂತ್ರಸ್ಥರಿಗೆ  ಸಹಾಯ ಹಸ್ತ ಚಾಚಿದ್ದೇವೆ. ಡಕಾರ್‌ ರ್‍ಯಾಲಿಯಲ್ಲಿ ಭಾಗವಹಿಸಿರುವ ಬೆಂಗಳೂರಿನ ಸಿ.ಎಸ್‌.ಸಂತೋಷ್‌ ಮತ್ತು ಹೆಸರಾಂತ ಶೂಟರ್‌ ಬಾಬಾ ಎಸ್‌.ಬೇಡಿ ಅವರನ್ನು ಆಹ್ವಾನಿಸಿ ಗೌರವಿಸಿದ್ದೇವೆ’ ಎನ್ನುತ್ತಾರೆ ಅವರು.

‘ಕುಟುಂಬದ ಸದಸ್ಯರು, ಸ್ನೇಹಿತರು ಒಟ್ಟುಗೂಡಿ 51 ಸದಸ್ಯರಿಂದ ಆರಂಭಿಸಿದ್ದ ಕ್ಲಬ್‌ನಲ್ಲಿ ಈಗ ಸದಸ್ಯರ ಸಂಖ್ಯೆ 260ಕ್ಕೇರಿದೆ. ನಾವು ಯಾರೂ ಕೂಡ ಇಷ್ಟರಮಟ್ಟಕ್ಕೆ ಬೆಳೆಯುತ್ತದೆ ಎಂದು ಭಾವಿಸಿರಲಿಲ್ಲ. ನಾವು ಮುಂದಿನ ಪೀಳಿಗೆಗೆ ಶಾಶ್ವತವಾದದ್ದನ್ನು ಉಳಿಸಿದ, ಶುದ್ಧ ಗಾಳಿ, ಸ್ವಚ್ಛ ಪರಿಸರವನ್ನು ಕಾದಿಟ್ಟ ತೃಪ್ತಿ ಇದೆ. ಪ್ರತಿಭೆ ಎಲ್ಲಿ ಅಡಗಿರುತ್ತೋ ಗೊತ್ತಿಲ್ಲ, ಈ ಮೈದಾನ ಬಳಸಿಕೊಂಡು ನಮ್ಮಲ್ಲೊಬ್ಬ ಟೈಗರ್‌ವುಡ್‌ ಪ್ರವರ್ಧಮಾನಕ್ಕೆ ಬರಬಹುದೆಂಬ ದೂರದ ಆಶಾಭಾವನೆಯಂತೂ ಇದ್ದೇ ಇದೆ ಎನ್ನುತ್ತಾರೆ’  ಸುದರ್ಶನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT