ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನಬಿಲ್ಲು ಕಮಾನು ಕಟ್ಟಿದೆ...

Last Updated 13 ಡಿಸೆಂಬರ್ 2014, 19:31 IST
ಅಕ್ಷರ ಗಾತ್ರ

‘ನಮಗೆ ಕಲೆ, ಸಾಂಸ್ಕೃತಿಕ ವೈಭವವಿಲ್ಲ. ಕುಡಿಯಲು ನೀರಿಲ್ಲ, ಬೆಳೆ ಬೆಳೆಯಲು ಭೂಮಿಯಿಲ್ಲ. ಆದರೂ ನಾವು ಸ್ವತಂತ್ರರಾಗಬೇಕಿತ್ತು. ನಮ್ಮ ಕಾಲ ಮೇಲೆ ನಾವು ನಿಂತು ನಮ್ಮ ಅಸ್ತಿತ್ವವನ್ನು ಸಾರಬೇಕಿತ್ತು. ಏಕೆಂದರೆ ಅಂದು ಮಲೇಶಿಯನ್ನರು ನಮ್ಮನ್ನು ಹೊರದಬ್ಬಿದ್ದರು. ಪರಾವಲಂಬಿ ಜೀವಿಗಳೆಂಬಂತೆ ನಮ್ಮನ್ನು ನೋಡಲಾಗಿತ್ತು. ನಾವು ಅಂದೇ ತೀರ್ಮಾನಿಸಿದೆವು. ನಾವು ಮೊದಲಿಗರಾಗುತ್ತೇವೆ. ಎಲ್ಲದರಲ್ಲೂ. ಪ್ರಪಂಚವೇ ಬೆರಗಾಗುವಂತೆ ಅಭಿವೃದ್ಧಿಯಾಗುತ್ತೇವೆ. ನಮಗೆ ಗೊತ್ತಿತ್ತು. ನಮ್ಮದು ಸ್ವಾಭಾವಿಕ ದೇಶವಲ್ಲ, ಮಾನವ ನಿರ್ಮಿತ ರಾಷ್ಟ್ರ. ನಿರ್ಮಾಣ ಮಾತ್ರ ಉತೃಷ್ಟತೆಯ ಪರಮಾವಧಿಯಾಗಿರುತ್ತದೆ...’– ಹೀಗೆ ತಮ್ಮ ಆತ್ಮಕಥನದಂತಿರುವ ‘ಫ್ರಂ ಥರ್ಡ್‌ ವರ್ಲ್ಡ್‌ ಟು ಫಸ್ಟ್‌’ ಎಂಬ ಸಿಂಗಾಪುರ್‌ ಬೆಳೆದುಬಂದ ಬಗೆಗಿನ ಪುಸ್ತಕದಲ್ಲಿ ಬರೆಯುತ್ತಾರೆ ಸಿಂಗಪುರ್‌ನ ಪಿತಾಮಹ ಲೀ ಕ್ಯೂಯಾನ್ ಯಿವ್‌.

ಉತ್ತರದಲ್ಲಿ ಮಲೇಶಿಯಾ, ದಕ್ಷಿಣದಲ್ಲಿ ಇಂಡೊನೇಶಿಯಾ ರಾಷ್ಟ್ರಗಳ ನಡುವಿನ ಪುಟ್ಟ ರಾಷ್ಟ್ರ ಸಿಂಗಾಪುರ ಪ್ರಪಂಚದಲ್ಲೇ ಅತ್ಯಂತ ಶುಚಿಯಾದ ಮತ್ತು ಸುರಕ್ಷತಾ ದೇಶ. ಅರ್ಧ ರಾತ್ರಿಯಲ್ಲಿ ಪ್ರವಾಸಿ, ಮಹಿಳೆ ಅಥವಾ ಯಾರು ಬೇಕಾದರೂ ನಿರ್ಭೀತಿಯಿಂದ ಓಡಾಡುವಷ್ಟು ಸುರಕ್ಷಿತ ನಾಡಿದು.

ಸಿಂಗಾಪುರ ತನ್ನ ಪ್ರಜೆಗಳಿಗೆ ಮೂಲಭೂತ ಸೌಕರ್ಯ ನೀಡುವಲ್ಲಿ ಹಾಗೂ ವಾಣಿಜ್ಯ ಚಟುವಟಿಕೆಗಳಲ್ಲಿ ಅಮೇರಿಕಾ, ಯೂರೋಪ್‌ಗೆ ಸಮನಾಗಿದೆ. ಭೂಪಟದಲ್ಲಿ ಚುಕ್ಕೆಯಂತಿರುವ ಈ ದೇಶ ನಮ್ಮ ಬೆಂಗಳೂರಿನಷ್ಟೂ ಇಲ್ಲ. ಕೇವಲ 24 ಕಿಮೀ ಉದ್ದ 43 ಕಿಮೀ ಅಗಲದ ವಿಸ್ತೀರ್ಣ ಇದರದು. ಆದರೆ, ಇದರ ಅಗಾಧ ಸಾಧನೆಗೆ ಲೀ ಹೇಳುವಂತೆ ಅಲ್ಲಿನ ನಾಗರೀಕರ ಕತೃತ್ವಶಕ್ತಿ, ಕ್ರಿಯಾಶೀಲತೆ, ದೂರದೃಷ್ಟಿ, ಆಡಳಿತ ವ್ಯವಸ್ಥೆ ಎಲ್ಲವೂ ಕಾರಣ. ಹಾಗಾಗಿಯೇ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಈ ರಾಷ್ಟ್ರ ಏಷಿಯಾ ಖಂಡದಲ್ಲೇ ಮುಂಚೂಣಿಯಲ್ಲಿದೆ. 54 ಲಕ್ಷ ಜನಸಂಖ್ಯೆ ಹೊಂದಿರುವ ಈ ರಾಷ್ಟ್ರ ತನ್ನ ಜನಸಂಖ್ಯೆಗಿಂತ ಮೂರು ಪಟ್ಟು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಯಾವುದೇ ಐತಿಹಾಸಿಕ ತಾಣವಿರದಿದ್ದರೂ ಪ್ರವಾಸಿಗರಿಗಾಗಿ ಆಕರ್ಷಣೆಗಳ ಸಾಲನ್ನೇ ಒದಗಿಸಿದೆ.

ಪ್ರವಾಸಿಗರು ನಿದ್ರಿಸಲೂ ಬಯಸದಂತೆ ಸಿಂಗಾಪುರ ತನ್ನನ್ನು ಪ್ರದರ್ಶಿಸಿಕೊಳ್ಳುತ್ತದೆ. ಹಗಲಲ್ಲಿ ಕಂಡ ಸಿಂಗಾಪುರದ ಆಕರ್ಷಕ ಸ್ಥಳಗಳನ್ನು ರಾತ್ರಿಯ ಕತ್ತಲಲ್ಲಿ ವರ್ಣಮಯ ಬೆಳಕಿನಿಂದ ಬೆಳಗಿಸುವುದರಿಂದ ಕನಸಿನ ಲೋಕದಂತೆ ಕಾಣುತ್ತದೆ. ಜುರಾಂಗ್‌ ಪಕ್ಷಿಧಾಮ, ಫ್ಲೈಯರ್‌, ಮರಿನಾ ಬೇ ಸ್ಯಾಂಡ್ಸ್‌, ಜೂ ಮತ್ತು ನೈಟ್‌ ಸಫಾರಿ, ಬೊಟಾನಿಕಲ್‌ ಗಾರ್ಡನ್‌, ಗಾರ್ಡನ್‌ ಬೈ ದಿ ಬೇ, ಕೇಬಲ್‌ ಕಾರ್‌, ಸೆಂಟೋಸಾ ದ್ವೀಪ, ನದಿಯಲ್ಲಿ ದೋಣಿ ವಿಹಾರ, ಲಿಟಲ್‌ ಇಂಡಿಯಾದ ದೇವಾಲಯಗಳು, ನೀರಿನೊಳಗಿನ ಮತ್ಸ್ಯಾಲಯ, ವ್ಯಾಕ್ಸ್ ಮ್ಯೂಸಿಯಂ ನೋಡಲೇಬೇಕಾದ ಸ್ಥಳಗಳು.

ಉದ್ದನೆಯ ದೋಣಿಯನ್ನು ಮೂರು ಕಂಬದ ಮೇಲಿಟ್ಟಂತೆ ಕಟ್ಟಿರುವ 200 ಮೀಟರ್‌ ಎತ್ತರದ ವಾಸ್ತುಶಿಲ್ಪದ ಪರಮಾವಧಿ ಮರಿನಾ ಬೇ ಸ್ಯಾಂಡ್ಸ್‌ನ 57ನೇ ಅಂತಸ್ತಿನಲ್ಲಿ ನಿಂತು ಸಿಂಗಾಪುರವನ್ನು ನೋಡುವುದು ಒಂದು ವಿಶಿಷ್ಟ ಅನುಭವ. ಅದನ್ನೇ ಕತ್ತಲಿನಲ್ಲಿ ದೂರದಿಂದ ವೀಕ್ಷಿಸುವುದು ಮತ್ತೊಂದು ಅದ್ಭುತ ಅನುಭವ.

ಪ್ರಪಂಚದ ಅತ್ಯಂತ ದೊಡ್ಡ ಜೈಂಟ್‌ ವೀಲ್‌ ‘ಸಿಂಗಾಪುರ್‌ ಫೈಯರ್‌’ನಲ್ಲಿ ಕುಳಿತು 540 ಅಡಿ ಎತ್ತರದಿಂದ ಸುತ್ತಲಿನ ಸಿಂಗಾಪುರವನ್ನು ನೋಡಿದರಷ್ಟೇ ಸಾಲದು, ರಾತ್ರಿಯ ವೇಳೆ ವಿವಿಧ ಬಣ್ಣಗಳಿಂದ ಫೈಯರ್‌ ಸುತ್ತಲೂ ಬಿಡಿಸುವ ಬೆಳಕಿನ ಚಿತ್ತಾರವನ್ನು ಕಣ್ತುಂಬಿಕೊಂಡರಷ್ಟೇ ಸಾರ್ಥಕ.

ಸುಮಾರು 101 ಹೆಕ್ಟೇರ್‌ ವಿಸ್ತೀರ್ಣವಿರುವ ‘ಗಾರ್ಡನ್‌ ಬೈ ದಿ ಬೇ’ ಉದ್ಯಾನವನವನ್ನು ನೋಡಲು ಒಂದು ದಿನ ಮತ್ತು ಎರಡು ಕಣ್ಣು ಸಾಲದು. ಅದರಲ್ಲಿನ ಬಳ್ಳಿ ಹಬ್ಬಿ ನಿಂತ ಆಗಸವನ್ನು ಮುಟ್ಟುವಂತಿರುವ ಪಾರದರ್ಶಕ ಹೂ ಕುಂಡಗಳನ್ನು ಕತ್ತಲಿನಲ್ಲಿ ವಿವಿಧ ಬಣ್ಣಗಳ ಸಂಯೋಜನೆಯಲ್ಲಿ ನೋಡದೇ ಬರದಿದ್ದರೆ ಸಿಂಗಾಪುರ ವೀಕ್ಷಣೆ ಅಪೂರ್ಣ.  ಕಾಗೆಗಳನ್ನು ಕೊಂದು ಶುಚಿತ್ವ ಕಾಪಾಡುವ ಸಿಂಗಾಪೂರಿಗರು ನಾನಾ ದೇಶಗಳ ಸುಮಾರು 600 ವಿಧದ ಪಕ್ಷಿಗಳನ್ನು ಜುರಾಂಗ್‌ ಪಾರ್ಕ್‌ನಲ್ಲಿ ಸಾಕಿದ್ದಾರೆ. ಮುಂದಿನ ವರ್ಷಕ್ಕೆ ಸಿಂಗಾಪುರಕ್ಕೆ ಸ್ವಾತಂತ್ರ್ಯ ಬಂದು 50 ವರ್ಷವಾಗುತ್ತದೆ. ಅದಕ್ಕಾಗಿ ಈ ವರ್ಷದಿಂದಲೇ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT