ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್‌ ಕೂಟದ ಮಾಹಿತಿ ನೋಟ

Last Updated 27 ಜುಲೈ 2014, 19:30 IST
ಅಕ್ಷರ ಗಾತ್ರ

ಕೂಟದ ಮಾಹಿತಿ ನೋಟ: 

ಭಾರತದ ಸಾಧನೆ
ಭಾರತಕ್ಕೆ ಈ ಬಾರಿಯದ್ದು 16ನೇ ಕೂಟ. ಈ ಹಿಂದಿನ 15 ಕೂಟಗಳಲ್ಲಿ ಭಾರತ ಒಟ್ಟು 372 ಪದಕಗಳನ್ನು ಗೆದ್ದುಕೊಂಡಿದೆ. 2010 ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಕೂಟದಲ್ಲಿ 101 ಪದಕಗಳನ್ನು ಜಯಿಸಿರುವುದು ಈವರೆಗಿನ ಅತ್ಯುತ್ತಮ ಸಾಧನೆ ಎನಿಸಿಕೊಂಡಿದೆ.

ಕೂಟದ ಬಗ್ಗೆ
ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಸ್ಕಾಟ್ಲೆಂಡ್‌ನ ಗ್ಲಾಸ್ಗೊದಲ್ಲಿ ಜುಲೈ 23ಕ್ಕೆ ಚಾಲನೆ ಲಭಿಸಿದೆ. 71 ದೇಶಗಳ 4,500ಕ್ಕೂ ಅಧಿಕ ಅಥ್ಲೀಟ್‌ಗಳು ಆಗಸ್ಟ್‌ 3ರ ವರೆಗೆ  ವಿವಿಧ ಕ್ರೀಡೆಗಳಲ್ಲಿ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.

1930ರಲ್ಲಿ ಅರಂಭ
ಕಾಮನ್‌ವೆಲ್ತ್‌ ಕೂಟ 1930 ರಲ್ಲಿ ಮೊದಲ ಬಾರಿ ನಡೆಯಿತು. ಅದಕ್ಕೂ ಮುನ್ನ 1911 ರಲ್ಲಿ ಲಂಡನ್‌ನಲ್ಲಿ ‘ಇಂಟರ್ ಎಂಪೈರ್‌ ಚಾಂಪಿಯನ್‌ಷಿಪ್‌’ ಹೆಸರಿನಲ್ಲಿ ಕೂಟವೊಂದು ನಡೆದಿತ್ತು.

1930 ರಿಂದ 1950ರ ವರೆಗೆ ಈ ಕ್ರೀಡಾಕೂಟವನ್ನು ‘ಬ್ರಿಟಿಷ್‌ ಎಂಪೈರ್‌ ಕ್ರೀಡಾಕೂಟ’ ಹೆಸರಿನಿಂದ ಕರೆಯಲಾಗು ತ್ತಿತ್ತು. 1954 ರಿಂದ 66ರ ವರೆಗೆ ‘ಬ್ರಿಟಿಷ್‌ ಎಂಪೈರ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟ’ ಎಂಬ ಹೆಸರು ಪಡೆದಿತ್ತು. 1970 ಮತ್ತು 1974 ರಲ್ಲಿ ‘ಬ್ರಿಟಿಷ್‌ ಕಾಮನ್‌ವೆಲ್ತ್‌ ಕ್ರೀಡಾಕೂಟ’ ಎಂಬ ಹೆಸರಿನಿಂದ ಕೂಟ ನಡೆದಿತ್ತು. 1978 ರಿಂದ ‘ಕಾಮನ್‌ವೆಲ್ತ್‌ ಕ್ರೀಡಾಕೂಟ’ ಹೆಸರಿನಲ್ಲಿ ಈ ಕೂಟ  ನಡೆಯುತ್ತಿದೆ. ವಿಶ್ವಯುದ್ಧದ ಕಾರಣ 1942 ಮತ್ತು 1946ರ ಕೂಟಗಳು  ನಡೆದಿರಲಿಲ್ಲ.

ಕಾಮನ್‌ವೆಲ್ತ್‌ನಲ್ಲಿ ಕ್ರಿಕೆಟ್‌!
1998ರಲ್ಲಿ ಕ್ವಾಲಾಲಂಪುರದಲ್ಲಿ ನಡೆದ ಕೂಟದಲ್ಲಿ ಕ್ರಿಕೆಟ್‌ ಸೇರ್ಪಡೆಯಾಯಿತು. ಕಾಮನ್‌ವೆಲ್ತ್ ಇತಿಹಾಸದಲ್ಲಿ ಕ್ರಿಕೆಟ್ ನಡೆದಿದ್ದು ಅದೇ ಮೊದಲು ಮತ್ತು ಅದೇ ಕೊನೆ. ಈ ಕೂಟದಲ್ಲಿ ರಾಷ್ಟ್ರೀಯ ತಂಡದ ಪ್ರಮುಖ ಆಟಗಾರರು ಪಾಲ್ಗೊಂಡಿದ್ದು ಕಡಿಮೆ. 16 ‘ಎ’ ತಂಡಗಳ ನಡುವೆ ಪೈಪೋಟಿ ನಡೆದಿತ್ತು. ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವನ್ನು ಸೋಲಿಸಿದ್ದ ದಕ್ಷಿಣ ಆಫ್ರಿಕಾ ಚಿನ್ನ ಜಯಿಸಿತ್ತು. ನ್ಯೂಜಿಲೆಂಡ್‌ ಕಂಚು ಗೆದ್ದುಕೊಂಡಿತ್ತು. 

ಅಜಯ್‌ ಜಡೇಜ ನಾಯಕತ್ವದಲ್ಲಿ ಭಾರತ ಕ್ರಿಕೆಟ್‌ ತಂಡವೂ ಪಾಲ್ಗೊಂಡಿತ್ತು. ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಭಾರತ ತಂಡ ಗುಂಪು ಹಂತದಲ್ಲಿ ಸೋಲು ಕಂಡು ಒಟ್ಟಾರೆ 9ನೇ ಸ್ಥಾನ ಪಡೆದಿತ್ತು. ನಿಖಿಲ್‌ ಛೋಪ್ರಾ, ಹರಭಜನ್‌ ಸಿಂಗ್‌, ರಾಬಿನ್‌ ಸಿಂಗ್‌, ರೋಹನ್‌ ಗಾವಸ್ಕರ್‌, ಸಚಿನ್‌ ತೆಂಡೂಲ್ಕರ್‌ ಮತ್ತು ವಿ.ವಿ.ಎಸ್‌. ಲಕ್ಷ್ಮಣ್‌ ಅವರು ಕಾಮನ್‌ವೆಲ್ತ್‌ ಕೂಟದ ತಂಡದಲ್ಲಿದ್ದ ಪ್ರಮುಖ ಆಟಗಾರರು. ಲೆಗ್‌ ಸ್ಪಿನ್ನರ್‌ ಅನಿಲ್‌ ಕುಂಬ್ಳೆ ಉಪನಾಯಕರಾಗಿದ್ದರು.

ಆಸ್ಟ್ರೇಲಿಯ, ಕೆನಡಾ ನಾಲ್ಕು ಬಾರಿ ಆತಿಥ್ಯ
ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಏಳು ದೇಶಗಳ 18 ನಗರಗಳು ಇದುವರೆಗೆ ಆತಿಥ್ಯ ವಹಿಸಿವೆ. ಆಸ್ಟ್ರೇಲಿಯ ಮತ್ತು ಕೆನಡಾ ತಲಾ ನಾಲ್ಕು ಬಾರಿ ಈ ಕೂಟವನ್ನು ನಡೆಸಿವೆ. ನ್ಯೂಜಿಲೆಂಡ್‌ ಮತ್ತು ಸ್ಕಾಟ್ಲೆಂಡ್‌ನಲ್ಲಿ (ಪ್ರಸಕ್ತ ಕೂಟ ಸೇರಿ) ಮೂರು ಸಲ ನಡೆದಿದೆ.

*ಕೇವಲ ಆರು ರಾಷ್ಟ್ರಗಳು ಮಾತ್ರ ಇದುವರೆಗೆ ನಡೆದಿರುವ ಎಲ್ಲ 20 ಕಾಮನ್‌ವೆಲ್ತ್‌ ಕೂಟಗಳಲ್ಲಿ ಪಾಲ್ಗೊಂಡಿವೆ. ಅವುಗಳೆಂದರೆ ಆಸ್ಟ್ರೇಲಿಯ, ಕೆನಡಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ಸ್ಕಾಟ್ಲೆಂಡ್‌ ಮತ್ತು ವೇಲ್ಸ್‌

* 1930 ರಲ್ಲಿ ನಡೆದ ಮೊದಲ ಕೂಟದಲ್ಲಿ 11 ದೇಶಗಳ ಅಥ್ಲೀಟ್‌ಗಳು ಪಾಲ್ಗೊಂಡಿದ್ದರು.

*ಕಾಮನ್‌ವೆಲ್ತ್ ಕೂಟವನ್ನು ಬಹಿಷ್ಕರಿಸಿದ ಮೊದಲ ದೇಶ ನೈಜೀರಿಯ. 1978ರ ಕೂಟವನ್ನು ಆಫ್ರಿಕಾದ ಈ ದೇಶ ಬಹಿಷ್ಕರಿಸಿತ್ತು.

*ಈ ಕೂಟ ಏಷ್ಯಾದಲ್ಲಿ ಎರಡು ಸಲ ಮಾತ್ರ ನಡೆದಿದೆ. 1998ರ ಕೂಟಕ್ಕೆ ಮಲೇಷ್ಯಾದ ಕ್ವಾಲಾಲಂಪುರ ಆತಿಥ್ಯ ವಹಿಸಿದ್ದರೆ, 2010ರ ಕೂಟ ನವದೆಹಲಿಯಲ್ಲಿ ನಡೆದಿತ್ತು.

*ಒಟ್ಟು ಮೂವರು ಸ್ಪರ್ಧಿಗಳು ಏಳು ಕಾಮನ್‌ವೆಲ್ತ್‌ ಕೂಟಗಳಲ್ಲಿ ಭಾಗವಹಿಸಿದ ಸಾಧನೆ ಮಾಡಿದ್ದಾರೆ. ಸ್ಕಾಟ್ಲೆಂಡ್‌ನ ಲಾನ್‌ ಬೌಲ್ ಸ್ಪರ್ಧಿ ವಿಲೀ ವುಡ್‌ (1974–2002) ಈ ಸಾಧನೆ ಮಾಡಿದ ಮೊದಲ ಅಥ್ಲೀಟ್‌. ನ್ಯೂಜಿಲೆಂಡ್‌ನ ಶೂಟರ್‌ ಗ್ರೆಗ್‌ ಯೆಲಾವಿಚ್‌ (1986–2010) ಮತ್ತು ಐಲ್‌ ಆಫ್‌ ಮ್ಯಾನ್‌ನ ಸೈಕ್ಲಿಸ್ಟ್‌ ಆ್ಯಂಡ್ರ್ಯೂ ರೋಚ್‌ (1990–2014) ಅವರೂ ಏಳು ಕೂಟಗಳಲ್ಲಿ ಪಾಲ್ಗೊಂಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT