ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮ–ಕರ್ಮದ ತೆಳುಗೆರೆ

ಬೆಳದಿಂಗಳು
Last Updated 6 ಮೇ 2015, 19:30 IST
ಅಕ್ಷರ ಗಾತ್ರ

‘ಕಾಯಕವೇ ಕೈಲಾಸ’ ಎನ್ನುವುದು ಕನ್ನಡ ಸಂಸ್ಕೃತಿ ಕಂಡುಕೊಂಡ ಒಂದು ಹೊಳಹು. ಇದೇ ಸಂಸ್ಕೃತಿ ‘ಕಾಮವನ್ನು ಕೂಡ ಕರ್ಮದ ಒಂದು ಭಾಗ ಎಂದು ಬಿಂಬಿಸಿದೆ. ಈ ಹಿನ್ನೆಲೆಯಲ್ಲೇ ‘ಸಂಭೋಗದಿಂದ ಸಮಾಧಿ’ ಎನ್ನುವ ಪರಿಕಲ್ಪನೆ ರೂಪುಗೊಂಡಿರುವುದು. ನಮ್ಮ ಅನೇಕ ಋಷಿಮುನಿಗಳು ಸಂಸಾರವೊಂದಿಗರಾಗಿದ್ದೇ ಇಹ–ಪರ ಎರಡರಲ್ಲೂ ಸೈ ಅನ್ನಿಸಿಕೊಂಡಿರುವುದು ಗಮನಾರ್ಹ.

ಐಹೊಳೆ – ಪಟ್ಟದ ಕಲ್ಲುಗಳಿಗೆ ಸಮೀಪದ ‘ಮಹಾಕೂಟ’ ಎನ್ನುವ ಐತಿಹಾಸಿಕ ಸ್ಥಳವಂತೂ ‘ಕಾಮ–ಕರ್ಮ’ ಪ್ರಮೇಯದ ಸಾಕಾರಸ್ಥಾನ ದಂತಿದೆ. ಇದೇನೋ ಸಾಧಕರ, ಹಟಯೋಗಿಗಳ ಮಾತಾಯಿತು. ಅಪ್ಪಟ ಲೌಕಿಕರಾದ ಮಧ್ಯಮವರ್ಗದವರ ಪಾಲಿಗೆ ಈ ಕಾಮ–ಕರ್ಮದ ಪರಿಕಲ್ಪನೆ ಸಾಧ್ಯವಾಗುವುದು ಹೇಗೆ?

ಕಿರಾಣಿ ಅಂಗಡಿಯ ಶೆಟ್ಟರು ಅಥವಾ ಹೋಟೆಲಿನ ಭಟ್ಟರ ದೈನಿಕ ಆರಂಭವಾಗುವುದನ್ನು ಗಮನಿಸಿ. ದೇವರ ಪಟಗಳಿಗೆ ಹೂವು–ನೀರು ಹಾಗೂ ಊದುಬತ್ತಿ ಹೊಗೆ ತೋರಿಸುವುದ ರೊಂದಿಗೆ ಅವರು ವ್ಯಾಪಾರ ಆರಂಭಿಸುತ್ತಾರೆ. ದೈವಕ್ಕೆ ಮೊದಲು ಶರಣೆನ್ನುವ ಮೂಲಕ, ಅಧ್ಯಾತ್ಮದ ಸ್ಮರ್ಶದೊಂದಿಗೆ ಆರಂಭಗೊಳ್ಳುವ ಈ ದೈನಿಕ ನಿಧಾನಕ್ಕೆ ಲೌಕಿಕದ ವ್ಯವಹಾರಗಳಿಗೆ ಹೊರಳುತ್ತದೆ. ಲಾಭ–ನಷ್ಟ, ಕೆಲಸಗಾರರ ದಬಾವಣೆ, ಗ್ರಾಹಕರೊಂದಿಗೆ ಲಲ್ಲೆ ಮಾತು, ಆಹಾರ ತಿನಿಸುಗಳಲ್ಲಿ ಕೊಂಚ ಕಲಬೆರಕೆ, ಬೇಡಲು ಬಂದ ಮುದುಕಿಗೊಂದು ಇಡ್ಲಿ, ದೇಶದಲ್ಲಿನ ಆಗುಹೋಗುಗಳ ವಿಶ್ಲೇಷಣೆ, ರಾಜಕೀಯ ನಡಾವಳಿಗಳ ಕುರಿತು ಟೀಕೆ, ರಸ್ತೆಯಲ್ಲಿ ನಿಂತ ಹೆಣ್ಣುಮಗಳ ಬಗ್ಗೆ ಟಿಪ್ಪಣಿ– ಹೀಗೆ, ದೈನಿಕದ ಹಲವು ಚಿತ್ರಗಳು ಅನಾವರಣಗೊಳ್ಳುತ್ತವೆ.

ಕಿರಾಣಿ ಅಂಗಡಿ ಅಥವಾ ಭಟ್ಟರ ಹೋಟೆಲಿನಿಂದ ಬಹು ರಾಷ್ಟ್ರೀಯ ಸಂಸ್ಥೆಯ ಪರಿಸರಕ್ಕೆ ಬಂದರೆ ಅಲ್ಲಿನ ಚಿತ್ರಗಳಲ್ಲಿ ದೊಡ್ಡ ವ್ಯತ್ಯಾಸವೇನೂ ಕಾಣಿಸುವುದಿಲ್ಲ. ಬೆಳಿಗ್ಗೆ ಅಥವಾ ಪಾಳಿಗಳ ಲೆಕ್ಕದಲ್ಲಿನ ಮಟ ಮಟ ಮಧ್ಯಾಹ್ನ ಅಥವಾ ಮಬ್ಬಿನ ರಾತ್ರಿಗಳಲ್ಲಿ ಆರಂಭಗೊಳ್ಳುವ ಕೆಲಸಕ್ಕೆ ಮುನ್ನ ಅಲ್ಲೂ ದೈವದ ಸ್ಮರಣೆ ನಡೆಯುತ್ತದೆ. ಕಂಪ್ಯೂಟರ್‌ ಪರದೆ ಮೇಲೆ ಗಣಪನೋ ಧನಲಕ್ಷ್ಮಿಯೋ ಪ್ರತ್ಯಕ್ಷರಾಗುತ್ತಾರೆ. ಅವರಿಗೆ ಎಂದೂ ಬಾಡದ ವರ್ಚುಯಲ್‌ ಹೂವುಗಳನ್ನು ಅರ್ಪಿಸುವ ಹಾಗೂ ಕಣ್ಣು ಮಬ್ಬಾಗಿಸದ ಹೊಗೆಯ ಬತ್ತಿಯನ್ನೂ ಕಾವಿಲ್ಲದ ಮಂಗಳಾರತಿಯನ್ನೂ ಬೆಳಗುವ ಮೂಲಕ ಪೂಜೆ ನಡೆಯುತ್ತದೆ. ನಂತರ ದೈನಿಕ (ಇರುಳಿನ ಕೆಲಸವಾದರೆ ಏನೆನ್ನುವುದು?) ಶುರುವಾಗುತ್ತದೆ. ಇ–ಮೇಲ್‌ ಡಬ್ಬಿ ತೆರೆದುಕೊಳ್ಳುತ್ತದೆ. ಯಾರು ಯಾರಿಗೋ ಉತ್ತರ ಬರೆಯಬೇಕು. ನಮ್ಮದಲ್ಲದ ಪಾತ್ರಗಳನ್ನು ನಿರ್ವಹಿಸಬೇಕು.

ನಮ್ಮದಲ್ಲದ ಭಾಷೆ  ಆಡಬೇಕು. ಕಚೇರಿಯ ಕೆಲಸದ ಜೊತೆಗೆ ತನ್ನಿಷ್ಟದ ಬೇರೆಬೇರೆ ಜಾಲತಾಣಗಳ ಕಿಂಡಿಗಳನ್ನು ತೆರೆದಿಟ್ಟುಕೊಂಡು ಅಲ್ಲಿಂದಿಲ್ಲಿಗೆ ಬೆರಳುಗಳ ಜೊತೆಗೆ ಮನಸ್ಸು ಜಿಗಿಯತೊಡಗುತ್ತದೆ. ಈ ಜಿಗಿದಾಟದಲ್ಲಿ ಗಣಪ ಕಾಣಿಸಿಕೊಂಡ ಗಣಕದ ತೆರೆಯ ಮೇಲೆ ದೀಪಿಕಾ ಪಡುಕೋಣೆ ಅಥವಾ ಕತ್ರಿನಾ ಇಣುಕಿಹೋಗುವುದಿದೆ.

ಅದೇ ಪರದೆಯಲ್ಲಿ ಸನ್ನಿ ಲಿಯೋನ್‌ಳ ದರ್ಶನವೂ ಆಗುತ್ತದೆ. ಹೀಗೆ, ಪ್ರಾರ್ಥನೆಯೊಂದಿಗೆ ಶುರುವಾದ ಕಾಯಕ, ತನ್ನ ಚೌಕಟ್ಟನ್ನು ಮೀರಿ ಕಡು ಲೌಕಿಕಕ್ಕೆ ಹೊರಳಿಕೊಳ್ಳುತ್ತದೆ. ಈ ಲೌಕಿಕದ ಚಿತ್ರಗಳು ಕಾಯಕ ಮತ್ತು ಕಾಮದ ಒಂದು ಕೊಲಾಜ್‌ನಂತೆ ಕಾಣಿಸುವುದಿಲ್ಲವೇ? ಈ ಇಣುಕು ಕಾಮ ನೈತಿಕವೋ ಅನೈತಿಕವೋ ಎನ್ನುವುದು ಬೇರೆಯದೇ ಜಿಜ್ಞಾಸೆ.

ಆದರೆ, ದೈನಿಕದ ಕೆಲಸದ ಒತ್ತಡಕ್ಕೆ ಇದೊಂದು ಮನರಂಜನೆಯ ಅಲ್ಪ ವಿರಾಮ. ಈ ಸಂಯೋಗ– ವರ್ತಮಾನದಲ್ಲಿ ಕರ್ಮ ಮತ್ತು ಕಾಮಗಳ ನಡುವಣ ಗೆರೆ ಅಳಿಸಿಹೋಗುತ್ತಿರುವುದಕ್ಕೆ ಉದಾಹರಣೆಯೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT