ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಂ ಪ್ರಾಧ್ಯಾಪಕರಿಲ್ಲ, ಸಮಸ್ಯೆಗಳೇ ಕಾಯಂ!

ಕೆಲವೆಡೆ ಕುಲಪತಿಗಳೇ ಪ್ರಭಾರ * ಯುಜಿಸಿ ಅನುದಾನಕ್ಕೂ ಸಂಚಕಾರ
Last Updated 16 ಜೂನ್ 2016, 0:29 IST
ಅಕ್ಷರ ಗಾತ್ರ

ತಾತ್ಕಾಲಿಕ ಸಿಬ್ಬಂದಿಯಿಂದಲೇ ಸಂಗೀತ ವಿ.ವಿ ನಿರ್ವಹಣೆ
ಮೈಸೂರು:
ಇಲ್ಲಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಬೋಧಕರು ಮತ್ತು ಬೋಧಕೇತರ ಹುದ್ದೆಗಳಲ್ಲವೂ ಖಾಲಿ ಇವೆ. ತಾತ್ಕಾಲಿಕ ಸಿಬ್ಬಂದಿ ಮತ್ತು ಅತಿಥಿ ಉಪನ್ಯಾಸಕರಿಂದಲೇ ವಿ.ವಿ ಚಟುವಟಿಕೆಗಳನ್ನು ನಿರ್ವಹಿಸಲಾಗುತ್ತಿದೆ.

ದಕ್ಷಿಣ ಭಾರತದ ಏಕೈಕ ಸಂಗೀತ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆ ಹೊಂದಿರುವ ಈ ವಿ.ವಿ.ಯು 2009ರಲ್ಲಿ ಸ್ಥಾಪನೆಯಾಗಿದ್ದು, ಈವರೆಗೂ ಯಾವುದೇ ಕಾಯಂ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕಾತಿ ನಡೆದಿಲ್ಲ.

ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಭರತನಾಟ್ಯ ವಿಭಾಗದಲ್ಲಿ ಡಿಪ್ಲೊಮಾ, ಸ್ನಾತಕ, ಸ್ನಾತಕೋತ್ತರ ಪದವಿ ಕೋರ್ಸ್‌ಗಳು ಇವೆ. ಜಾನಪದ, ಸುಗಮ, ಭಕ್ತಿ ಸಂಗೀತ, ರಂಗ ಸಂಗೀತ ಯೋಗ ಸೇರಿ 9 ಸರ್ಟಿಫಿಕೇಟ್‌ ಕೋರ್ಸ್‌ ಇದ್ದು, 129 ವಿದ್ಯಾರ್ಥಿಗಳಿದ್ದಾರೆ.

ಇಲ್ಲಿ ಕಾಯಂ ಪ್ರಾಧ್ಯಾಪಕರು ಇಲ್ಲ, ಮುಖ್ಯಸ್ಥರೂ ಇಲ್ಲ!
ತುಮಕೂರು:
ಇದೊಂದು ವಿಭಾಗ. ಇಲ್ಲಿ  ‘ಯಜಮಾನ’ನೂ ಇಲ್ಲ, ‘ಸದಸ್ಯ’ರೂ ಇಲ್ಲ. ಎಲ್ಲರೂ ಅತಿಥಿಗಳು! ಇದು ತುಮಕೂರು ವಿಶ್ವವಿದ್ಯಾನಿಲಯದ ಭಾರತ ರತ್ನ ಡಾ.ಎಂ.ಎಸ್‌. ಸುಬ್ಬುಲಕ್ಷ್ಮಿ  ಹೆಸರಿನಲ್ಲಿರುವ ಲಲಿತಾ ಕಲಾ ವಿಭಾಗದ ಶೋಚನೀಯ ಸ್ಥಿತಿ.

ಸಸ್ಯವಿಜ್ಞಾನ, ಪ್ರಾಣಿ ವಿಜ್ಞಾನ ವಿಭಾಗಗಳ ಸ್ಥಿತಿಯೂ ಭಿನ್ನವಾಗಿಲ್ಲ. ಸಸ್ಯ ವಿಜ್ಞಾನ ಸ್ನಾತಕೋತ್ತರ ಪದವಿ ವಿಭಾಗಕ್ಕೆ ಹುದ್ದೆ ಮಂಜೂರಾಗದ ಕಾರಣ ಕಾಯುಂ ಪ್ರಾಧ್ಯಾಪಕರಿಲ್ಲ. ಬೋಧಕರು ಇಲ್ಲದ ಈ ವಿಭಾಗ ಸೇರಲು ವಿದ್ಯಾರ್ಥಿಗಳೂ ಬಂದಿಲ್ಲ. ಹೀಗಾಗಿ ವಿಭಾಗವೇ ಆರಂಭಗೊಂಡಿಲ್ಲ.

ಒಂದು ಜಿಲ್ಲೆಗಷ್ಟೇ ಸೀಮಿತವಾದ ವಿಶ್ವವಿದ್ಯಾಲಯವೆಂಬ ದಾಖಲೆ ಇದೆ. ಆದರೆ ದಶಕ ಕಳೆದರೂ ಕಾಯಂ ಬೋಧಕರ ನೇಮಕ ನಡೆದಿಲ್ಲ. ಹೀಗಾಗಿ ಅತಿಥಿ ಉಪನ್ಯಾಸಕರ ಭಾರದಿಂದ ವಿ.ವಿ. ನಲುಗುತ್ತಿದೆ. ಭೌತವಿಜ್ಞಾನ, ರಸಾಯನವಿಜ್ಞಾನ, ವಾಣಿಜ್ಯಶಾಸ್ತ್ರ, ಎಲೆಕ್ಟ್ರಾನಿಕ್ಸ್,  ಪ್ರಾಣಿ ವಿಜ್ಞಾನ, ಮೈಕ್ರೋ ಬಯಾಲಜಿ, ಇಂಗ್ಲಿಷ್‌, ಕಂಪ್ಯೂಟರ್ ಸೈನ್ಸ್, ಗಣಿತಶಾಸ್ತ್ರ, ಪರಿಸರವಿಜ್ಞಾನ ಹಾಗೂ ರಾಜಕೀಯ ಆಡಳಿತ ವಿಭಾಗಗಳಲ್ಲಿ ಅತಿಥಿ ಉಪನ್ಯಾಸಕರ ಸಂಖ್ಯೆ ಹೆಚ್ಚಿದೆ. 

ಕೇವಲ  3 ಮಂದಿ ಎಫ್‌ಡಿಸಿ!:  ಕೇವಲ ಮೂವರು ಮೊದಲ ದರ್ಜೆ ಸಹಾಯಕರು (ಎಫ್‌ಡಿಸಿ)  ಇದ್ದಾರೆ. 6 ಮಂದಿ ದ್ವಿತೀಯ ದರ್ಜೆ ಸಹಾಯಕರು (ಎಸ್‌ಡಿಸಿ) ಇದ್ದಾರೆ! ಉಳಿದವರನ್ನು ಹೊರಗುತ್ತಿಗೆ ಮೇಲೆ  ನೇಮಿಸಿಕೊಳ್ಳಲಾಗಿದೆ.

ಹೆಚ್ಚುವರಿ ಕಾರ್ಯಭಾರದಲ್ಲಿ ಪ್ರಾಧ್ಯಾಪಕರು!
ವಿಜಯಪುರ: 
ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಇತಿಹಾಸ, ರಾಜಕೀಯ ವಿಜ್ಞಾನ, ಸಂಖ್ಯಾ ವಿಜ್ಞಾನ, ಸಂಗೀತ, ಗಣಿತ, ಭೌತವಿಜ್ಞಾನ, ಸಸ್ಯವಿಜ್ಞಾನ, ಜೀವವಿಜ್ಞಾನ, ರಸಾಯನ ವಿಜ್ಞಾನ, ಆಹಾರ ಮತ್ತು ಪೌಷ್ಟಿಕಾಂಶ, ಬಯೋಟೆಕ್ನಾಲಜಿ ಸೇರಿದಂತೆ ಭಾಷಾ ವಿಭಾಗಗಳಾದ ಹಿಂದಿ, ಉರ್ದು ವಿಷಯದಲ್ಲಿ ಕಾಯಂ ಬೋಧಕ ಸಿಬ್ಬಂದಿಯೇ ಇಲ್ಲ.

ಪತ್ರಿಕೋದ್ಯಮ ವಿಭಾಗದಲ್ಲಿ ಒಬ್ಬರು, ಜೈವಿಕ ಮಾಹಿತಿ ವಿಜ್ಞಾನ, ಇಂಗ್ಲಿಷ್‌, ಅರ್ಥಶಾಸ್ತ್ರ, ಸಮಾಜ ಕಾರ್ಯ ವಿಭಾಗದಲ್ಲಿ ತಲಾ ಇಬ್ಬರು ಕಾಯಂ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಉಳಿದ ಬಹುತೇಕ ವಿಷಯಗಳಲ್ಲೂ ಸಂಪೂರ್ಣ ಕಾಯಂ ಸಿಬ್ಬಂದಿಯಿಲ್ಲ. ಶಿಕ್ಷಣ, ದೈಹಿಕ ಶಿಕ್ಷಣ ವಿಭಾಗದಲ್ಲಿ ಮಾತ್ರ ಪೂರ್ಣ ಪ್ರಮಾಣದ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದೆ.

ವಿಜ್ಞಾನ ನಿಕಾಯದ ಪ್ರಮುಖ ವಿಭಾಗಗಳಲ್ಲೇ ಕಾಯಂ ಪ್ರಾಧ್ಯಾಪಕರು ಇಲ್ಲದಿರುವುದರಿಂದ ಕೋಟ್ಯಂತರ ರೂಪಾಯಿ ವೆಚ್ಚದ ಪ್ರಯೋಗಾಲಯ ಉಪಕರಣಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂಬ ದೂರು ವಿದ್ಯಾರ್ಥಿನಿಯರ ಸಮೂಹದಿಂದ ಕೇಳಿ ಬರುತ್ತಿದೆ.

ಬೋಧಕೇತರರೆಲ್ಲ ಹೊರಗುತ್ತಿಗೆ
ಹುಬ್ಬಳ್ಳಿ
: ‘ಜನರ ವಿಶ್ವವಿದ್ಯಾಲಯ’ ಎಂಬ ಘೋಷಣೆಯೊಂದಿಗೆ ಸ್ಥಾಪನೆಯಾದ ರಾಜ್ಯ ಕಾನೂನು ವಿ.ವಿಯಲ್ಲಿ ಆರಂಭದಿಂದಲೂ ಬೋಧಕೇತರ ಸಿಬ್ಬಂದಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಒಟ್ಟು ಏಳು ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳನ್ನು ಹೊಂದಿರುವ ವಿಶ್ವವಿದ್ಯಾಲಯದಲ್ಲಿ ಪಿ.ಜಿ. ಡಿಪ್ಲೊಮಾ ಮತ್ತು ಸಂಶೋಧನೆಗೆ ಅವಕಾಶವಿದೆ.
ರಾಜ್ಯದ 92 ಕಾನೂನು ಕಾಲೇಜುಗಳು ವಿಶ್ವವಿದ್ಯಾಲಯದಲ್ಲಿ ಸಂಲಗ್ನಗೊಂಡಿವೆ.

ಪರೀಕ್ಷೆ, ಘಟಿಕೋತ್ಸವ, ಫಲಿತಾಂಶ ಇತ್ಯಾದಿ ಆಡಳಿತಾತ್ಮಕ ವಿಷಯಗಳಿಗೆ ಈ ಕಾಲೇಜಿನವರು ವಿಶ್ವವಿದ್ಯಾಲಯವನ್ನು ಆಶ್ರಯಿಸಬೇಕು. ಕಾಯಂ ಸಿಬ್ಬಂದಿ ಇಲ್ಲದ ಕಾರಣ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪ ಆಗಾಗ ಕೇಳಿಬರುತ್ತಿದೆ.

ಕೈ ಹಿಡಿದ ತಂತ್ರಜ್ಞಾನ ಬಳಕೆ: ಬೋಧಕೇತರ ಸಿಬ್ಬಂದಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರೂ ವಿ.ವಿ ಕಾರ್ಯ ನಿರ್ವಹಣೆ ಕುರಿತು ಹೆಚ್ಚಿನ ದೂರುಗಳು ಬಾರದೇ ಇರಲು ತಂತ್ರಜ್ಞಾನದ  ಬಳಕೆಯೇ ಕಾರಣ. ತಂತ್ರಜ್ಞಾನವನ್ನು ಸಮರ್ಪಕ ವಾಗಿ ಬಳಸಿದ ಶ್ರೇಯ ವಿ.ವಿಯ ಪರೀಕ್ಷಾಂಗ ವಿಭಾಗದ್ದು.

ಅತಿಥಿ ಉಪನ್ಯಾಸಕರಿಂದ ತುಂಬಿದೆ ದಾವಣಗೆರೆ ವಿ.ವಿ.!
ದಾವಣಗೆರೆ:
ಎಂಟು ವರ್ಷಗಳ ಹಿಂದೆ ಕುವೆಂಪು ವಿಶ್ವವಿದ್ಯಾಲಯದಿಂದ ಬೇರ್ಪಟ್ಟು ಆರಂಭವಾದ ದಾವಣಗೆರೆ ವಿಶ್ವವಿದ್ಯಾಲಯ ಅಂದಿನಿಂದ ಇಂದಿನವರೆಗೂ  ಬಳಲುತ್ತಿರು ವುದು ಸಿಬ್ಬಂದಿ ಕೊರತೆಯಿಂದ. ಬೋಧಕ ಮತ್ತು ಬೋಧ ಕೇತರ ವಿಭಾಗಗಳಲ್ಲಿ ನೂರಾರು ಹುದ್ದೆಗಳು ಖಾಲಿಯಿವೆ. ಆರಂಭವಾದಾಗ ಎಷ್ಟು ಮಂದಿ ಕಾಯಂ ಸಿಬ್ಬಂದಿ ಇದ್ದರೊ, ಅಷ್ಟೇ ಮಂದಿ ಈಗಲೂ ಇದ್ದಾರೆ.

ಕಳೆದ ಏಳು ವರ್ಷಗಳಲ್ಲಿ ಒಂದೇ ಒಂದು ಹೊಸ ನೇಮಕಾತಿಯಾಗಿಲ್ಲ.ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ, ಎಂ.ಬಿ.ಎ, ಸೂಕ್ಷ್ಮ ಜೀವಶಾಸ್ತ್ರ ಮತ್ತು ಜೀವ ರಸಾಯನಶಾಸ್ತ್ರ– ಈ ಐದು ವಿಭಾಗಗಳಲ್ಲಿ ಮಾತ್ರ ಕಾಯಂ ಉಪನ್ಯಾಸಕರಿದ್ದಾರೆ.

ಚಿತ್ರದುರ್ಗದಲ್ಲಿರುವ ವಿ.ವಿ. ಸ್ನಾತಕೋತ್ತರ ಕೇಂದ್ರಗಳಲ್ಲೂ ಪ್ರಾಧ್ಯಾಪಕ ಮತ್ತು ಸಿಬ್ಬಂದಿ ಕೊರತೆ ಕಾಡುತ್ತಿದೆ. ಚಳ್ಳಕೆರೆಯ ಸ್ನಾತಕೋತ್ತರ ಕೇಂದ್ರದಲ್ಲಿ ಮೂರು ವಿಭಾಗಗಳಿದ್ದು, ಅಲ್ಲಿ ತಲಾ ಒಬ್ಬ ಕಾಯಂ ಉಪನ್ಯಾಸಕರಿದ್ದಾರೆ. ಜಿ.ಆರ್‌.ಹಳ್ಳಿ ಕ್ಯಾಂಪಸ್‌ ಮತ್ತು ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲೂ ಪ್ರಾಧ್ಯಾಪಕರ ಕೊರತೆ ಇದೆ. ವಿಶ್ವವಿದ್ಯಾಲಯದ ಅಡಿ ಬರುವ ದೃಶ್ಯಕಲಾ ಕಾಲೇಜಿನ ಪರಿಸ್ಥಿತಿ ಕೂಡ ಶೋಚನೀಯವಾಗಿದೆ.

ಕಾಯಂ ಸಿಬ್ಬಂದಿಯೇ ಇಲ್ಲ!
ಹಾವೇರಿ:
ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯಲ್ಲಿ ಐದು ವರ್ಷಗಳ ಹಿಂದೆ ಸ್ಥಾಪನೆಯಾದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಏಷ್ಯಾದ ಮೊದಲ ಜಾನಪದ ವಿ.ವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಇಲ್ಲಿ ಒಬ್ಬರೇ ಒಬ್ಬರು ಕಾಯಂ ಸಿಬ್ಬಂದಿ ಇಲ್ಲ!

ವಿಶ್ವವಿದ್ಯಾಲಯವು ಯುಜಿಸಿ ‘12 ಬಿ’ ಮನ್ನಣೆ ಪಡೆಯಲು ವಿವಿಧ ಮೂಲಸೌಕರ್ಯಗಳ ಜೊತೆ ಕನಿಷ್ಠ ಆರು ವಿಭಾಗ, ಕಾಯಂ ಸಿಬ್ಬಂದಿ ಕಡ್ಡಾಯವಾಗಿ ಇರಲೇಬೇಕು. ಈ ಹಿನ್ನೆಲೆಯಲ್ಲಿ 2011ರಲ್ಲೇ ವಿಶ್ವವಿದ್ಯಾಲಯವು 450 ಸಿಬ್ಬಂದಿ (ಬೋಧಕ ಮತ್ತು ಬೋಧಕೇತರ) ನೇಮಕಾತಿಗೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.

ಆದರೆ, 2012ರಲ್ಲಿ ಕೇವಲ 56 ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಕ್ಕೆ ಸರ್ಕಾರ ಅನುಮತಿ ನೀಡಿತು. ಈ ಪೈಕಿ ಹಿರಿಯ ಸಂಶೋಧನಾ ಅಧಿಕಾರಿ, ನಿರ್ದೇಶಕರ ಹುದ್ದೆಗೆ ವಿಶ್ವವಿದ್ಯಾಲಯವು ನೇರವಾಗಿ ನೇಮಕಾತಿ ಮಾಡಿದ್ದು, ಈ ಹುದ್ದೆಯ ಅಸ್ತಿತ್ವವನ್ನು ಈಗ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ.

ಸಿಬ್ಬಂದಿ ಕೊರತೆ: ದಕ್ಕದ12 ಬಿ ಮಾನ್ಯತೆ
ಬಳ್ಳಾರಿ:
ಹೈದರಾಬಾದ್‌ ಕರ್ನಾಟಕ ಪ್ರದೇಶ ವ್ಯಾಪ್ತಿಯ ಜಿಲ್ಲಾ ಕೇಂದ್ರದಲ್ಲಿ 2010ರಲ್ಲಿ ಸ್ಥಾಪನೆಯಾದ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ ಇದುವರೆಗೂ ಅಗತ್ಯವಿರುವಷ್ಟು ಸಿಬ್ಬಂದಿ ಇಲ್ಲದೆ, ಯುಜಿಸಿ ಅನುದಾನಕ್ಕೆ ಬೇಕಾದ 12 ಬಿ ಮಾನ್ಯತೆ ಪಡೆಯಲು ಹರಸಾಹಸ ಮಾಡುತ್ತಿದೆ.

ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ವಿಶ್ವವಿದ್ಯಾಲಯದಲ್ಲಿ 2012ರಲ್ಲಿ ಬೋಧಕ ಸಿಬ್ಬಂದಿಯ ನೇಮಕಾತಿ ಪ್ರಯತ್ನ ನಡೆದಿತ್ತು.
ಆದರೆ 371 ಜೆ ವಿಶೇಷ ಮೀಸಲಾತಿ ನಿಯಮಗಳನ್ನು ಪಾಲಿಸದೇ ಇದ್ದುದರಿಂದ ಪೂರ್ಣಪ್ರಮಾಣದಲ್ಲಿ ಪ್ರಕ್ರಿಯೆ ನಡೆದಿರಲಿಲ್ಲ. ನಂತರದ ನಾಲ್ಕು ವರ್ಷಗಳಲ್ಲಿ ಪೂರ್ಣಾವಧಿ ಕುಲಪತಿಗಳನ್ನು ಕಾಣುವ ಅವಕಾಶವೂ ವಿಶ್ವವಿದ್ಯಾಲಯಕ್ಕೆ ದೊರಕಲಿಲ್ಲ.  ಪ್ರಭಾರ ಕುಲಪತಿಗಳ ಅವಧಿಯಲ್ಲಿ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಯಲೇ ಇಲ್ಲ.

ಬೆಳಗಾವಿ ವಿಟಿಯುನಲ್ಲಿ ಕುಲಪತಿಯೇ ಪ್ರಭಾರ!
ಬೆಳಗಾವಿ:
ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕೂಡ ಬೋಧಕ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಪ್ರಸ್ತುತ ಕಾಯಂ ಕುಲಪತಿಯೇ ಇಲ್ಲ!

ಇಲ್ಲಿ ಮೌಲ್ಯಮಾಪನ ವಿಭಾಗದ ಕುಲಸಚಿವರಾಗಿರುವ ಪ್ರೊ.ಎಚ್‌.ಜಿ. ಶೇಖರಪ್ಪ  ಪ್ರಭಾರ ಕುಲಪತಿಯಾಗಿದ್ದರು. ಅವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ, ಡಾ.ವಿ. ಶ್ರೀಧರ್‌ ಅವರನ್ನು ಪ್ರಭಾರ ಕುಲಪತಿಯನ್ನಾಗಿ ನೇಮಿಸಲಾಗಿದೆ. ಇದರಿಂದಾಗಿ ಕೆಲವು ತಿಂಗಳಿಂದ ಇಲ್ಲಿ ಕಾಯಂ ಕುಲಪತಿಯೇ ಇಲ್ಲದಂತಾಗಿದೆ!

1998ರಲ್ಲಿ ಸ್ಥಾಪನೆಯಾದ ಈ ವಿಶ್ವವಿದ್ಯಾಲಯದಲ್ಲಿ 2015ರವರೆಗೂ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ಸಿಬ್ಬಂದಿಯೇ ಕಾರ್ಯನಿರ್ವಹಿಸುತ್ತಿದ್ದರು. ಪ್ರೊ.ಎಚ್‌. ಮಹೇಶಪ್ಪ ಕುಲಪತಿಯಾಗಿದ್ದ ಸಂದರ್ಭದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಕಾಯಂ ಮಾಡಲಾಗಿದೆ.

ಬೆಳಗಾವಿ, ಮೈಸೂರು, ಕಲಬುರ್ಗಿ ಹಾಗೂ ಬೆಂಗಳೂರಿನಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ಹೊಂದಿರುವ ಈ ವಿಶ್ವವಿದ್ಯಾಲಯಕ್ಕೆ, ಸರ್ಕಾರದಿಂದ ಮಂಜೂರಾದ 199 ಬೋಧಕ ಹುದ್ದೆಗಳ ಪೈಕಿ 168 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ.

ಈ ಪ್ರಕಾರ ನೋಡಿದರೆ, 31 ಬೋಧಕ ಹುದ್ದೆಗಳು ಖಾಲಿ ಉಳಿದಿವೆ. ಈ ಹುದ್ದೆಗಳಿಗೆ, ವಿಭಾಗದ ಅಗತ್ಯಗಳಿಗೆ ತಕ್ಕಂತೆ ಅತಿಥಿ ಉಪನ್ಯಾಸಕರನ್ನು ಬಳಸಿಕೊಳ್ಳಲಾ ಗುತ್ತಿದೆ. ವಿಶ್ವವಿದ್ಯಾಲಯದಲ್ಲಿ ಹಿಂದಿನಿಂದಲೂ ಕಾರ್ಯನಿರ್ವಹಿಸುತ್ತಿದ್ದ 318 ಬೋಧಕೇತರ ಸಿಬ್ಬಂದಿಯನ್ನು ಕಾಯಂಗೊಳಿಸಲಾಗಿದೆ.

715 ಹುದ್ದೆಗಳು ಖಾಲಿ
ಹುಬ್ಬಳ್ಳಿ:
ಧಾರವಾಡ, ವಿಜಯಪುರ, ಹನಮನಹಟ್ಟಿ (ಬೆಳಗಾವಿ ಜಿಲ್ಲೆ) ಮತ್ತು ಶಿರಸಿಯಲ್ಲಿ (ಉತ್ತರ ಕನ್ನಡ) ಕ್ಯಾಂಪಸ್‌ಗಳನ್ನು ಹೊಂದಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಒಟ್ಟು 715 ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿ ಇವೆ. ಮಂಜೂರಾದ ಒಟ್ಟು 595 ಬೋಧಕ ಹುದ್ದೆಗಳಲ್ಲಿ 210 ಖಾಲಿ ಇವೆ. 1,073 ಬೋಧಕೇತರ ಹುದ್ದೆಗಳ ಪೈಕಿ 505 ಖಾಲಿ ಇವೆ. ನಿವೃತ್ತಿಯಿಂದ ತೆರವಾಗುವ ಹುದ್ದೆಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿದೆ. ಮೇ ತಿಂಗಳೊಂದರಲ್ಲೇ 29 ಮಂದಿ ನಿವೃತ್ತಿಯಾ ಗಿದ್ದಾರೆ.

ನಿವೃತ್ತಿಯಿಂದ ತೆರವಾಗುವ ಹುದ್ದೆಗಳಿಗೆ ಹೊಸದಾಗಿ ನೇಮಕ ಮಾಡುವ ಅಧಿಕಾರವನ್ನು ವಿ.ವಿ.ಗೇ ನೀಡಬೇಕು. ಅಂದಾಗ ಮಾತ್ರ ನೇಮಕ ಪ್ರಕ್ರಿಯೆ ವೇಗ ಪಡೆದುಕೊಳ್ಳಲಿದೆ ಎಂದು  ಕುಲಪತಿ, ಡಾ. ಡಿ.ಪಿ. ಬಿರಾದಾರ ತಿಳಿಸಿದರು.

* ‘ನೇಮಕಾತಿ ಪ್ರಕ್ರಿಯೆಗೆ ಅನುಮತಿ ಕೋರಿ ಉನ್ನತ ಶಿಕ್ಷಣ ಇಲಾಖೆಗೆ ಹಲವು ಬಾರಿ ಪತ್ರ ಬರೆಯಲಾಗಿದೆ’
–ಡಾ.ಸರ್ವಮಂಗಳಾ ಶಂಕರ್‌, 
ಡಾ.ಗಂಗೂಬಾಯಿ ಹಾನಗಲ್‌ ವಿವಿ ಕುಲಪತಿ


* ಬೋಧಕರ ಕೊರತೆ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುವುದು ಸತ್ಯ. ಸರ್ಕಾರದ ಒಪ್ಪಿಗೆ ಸಿಕ್ಕ ಕೂಡಲೇ ಕಾಯಂ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು.
–ಡಾ. ಎ.ಎಚ್‌.ರಾಜಾಸಾಬ್‌, 
ತುಮಕೂರು ವಿವಿ ಕುಲಪತಿ


* ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಆರಂಭ ಗೊಂಡಿದೆ. ಎಲ್ಲ ವಿಭಾಗಗಳ ಮಾಹಿತಿ ಪಡೆಯಲಾಗಿದೆ.  ಅನುಮೋದನೆ ಸಿಗುತ್ತಿ ದ್ದಂತೆಯೇ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿ ಕೊಡಲಾಗುವುದು
–ಪ್ರೊ.ಟಿ.ಎಂ.ಗೀತಾ,
ಮಹಿಳಾ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ


* ಮಂಜೂರಾದ ಹುದ್ದೆಗಳಿಗೆ ನೇಮಕಾತಿ ಮಾಡಲಾಗುವುದು. ಮೊದಲ ಹಂತದ ಪ್ರಕ್ರಿಯೆ ಮುಗಿದ ಬಳಿಕ ಎರಡನೇ ಹಂತದ ನೇಮಕಾತಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು.
–ಡಾ. ಕೆ.ಚಿನ್ನಪ್ಪ ಗೌಡ, ಕುಲಪತಿ,
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ


* ಹೈದರಾಬಾದ್‌ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಮೀಸಲಾತಿ ಕಲ್ಪಿಸಿದ್ದರಿಂದ ಬೋಧಕೇತರ ಸಿಬ್ಬಂದಿ ನೇಮಕಾತಿ ವಿಳಂಬವಾಗಿದೆ. ಹೊರಗುತ್ತಿಗೆ ಆಧಾರದಲ್ಲಿ ನೇಮಕ ಆದವರಿಂದ ಈಗ ಕೆಲಸ ಮಾಡಿಸಲಾಗುತ್ತಿದೆ.
–ಪ್ರೊ.ಸಿ.ಎಸ್.ಪಾಟೀಲ,
ಪ್ರಭಾರ ಕುಲಪತಿ


(ಪೂರಕ ಮಾಹಿತಿ: ಬಿ.ಜೆ.ಧನ್ಯಪ್ರಸಾದ್‌, ಸಿ.ಕೆ.ಮಹೇಂದ್ರ, ಮನೋಜ್‌ಕುಮಾರ್‌ ಗುದ್ದಿ, ಹರ್ಷವರ್ಧನ ಪಿ.ಆರ್, ಎಂ.ಮಹೇಶ್, ನಾಗರಾಜ ಡಿ.ಬಿ., ಕೆ.ನರಸಿಂಹಮೂರ್ತಿ, ನಾಗೇಶ ಶೆಣೈ, ವಿಕ್ರಂ ಕಾಂತಿಕೆರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT