ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕ ತತ್ವ ಮತ್ತು ಸರ್ಕಾರಿ ರಜೆ

ಅಕ್ಷರ ಗಾತ್ರ

ಕಾಯಕ ಮಾಡುತ್ತಲೇ ಜಯಂತಿಯನ್ನು ಆಚರಿಸುವುದು ಬಸವಣ್ಣ ಮತ್ತಿತರ ಶರಣರಿಗೆ ನಾವು ಸಲ್ಲಿಸುವ ಗೌರವ

ಪ್ರಾಯಶಃ ಆರ್.ಗುಂಡೂರಾವ್ ಆಗ ಮುಖ್ಯಮಂತ್ರಿ ಆಗಿದ್ದರು. ಆ ದಿನಗಳಲ್ಲಿ ಬೆಂಗಳೂರಿನ ಗಾಜಿನ ಮನೆಯಲ್ಲಿ ಬಸವ ಜಯಂತಿ ಆಚರಣೆ ನಡೆದು, ಚಿತ್ರದುರ್ಗದ ಮುರುಘಾಮಠದ ಜಗದ್ಗುರು ಮಲ್ಲಿಕಾರ್ಜುನ ಶ್ರೀಗಳು ಮತ್ತು ಮುಖ್ಯಮಂತ್ರಿಯನ್ನು ಆಮಂತ್ರಿಸಲಾಗಿತ್ತು. ಅದೇ ಪ್ರಥಮ ಸಲವೆಂದು ಕಾಣುತ್ತದೆ ಬಸವ ಜಯಂತಿಯನ್ನು ರಾಜಧಾನಿಯಲ್ಲಿ ಆಚರಿಸಿದ್ದು.

ಆ ಸಂದರ್ಭದಲ್ಲಿ  ಸಮಾಜವು ಸರ್ಕಾರಕ್ಕೆ ಒಂದು ಬೇಡಿಕೆಯನ್ನು ಇಟ್ಟಿತು. ಅದೇನೆಂದರೆ, ಇತರ ಸಮಾಜ ಸುಧಾರಕರ ಜಯಂತಿಯಂದು ಸರ್ಕಾರಿ ರಜೆ ಘೋಷಿಸಿರುವಂತೆ ಬಸವ ಜಯಂತಿಗೂ ಸರ್ಕಾರಿ ರಜೆ ಘೋಷಿಸಬೇಕೆಂಬುದು.

ಗುಂಡೂರಾವ್ ಅವರ ಅಧಿಕಾರದ ಅವಧಿಯಲ್ಲಿ ಕೂಡಲಸಂಗಮ ಮುಳುಗಡೆ ಆಗುವ ಆತಂಕ ಎದುರಾಗಿ, ಲಿಂಗಾಯತ/ ವೀರಶೈವ ಸಮಾಜದ ಗಣ್ಯರು ಮತ್ತು ಮಠಾಧೀಶರು ಇದರ ವಿರುದ್ಧ ಹೋರಾಟಕ್ಕೆ ಇಳಿದರು. ಅನೇಕರು ಪತ್ರ ಚಳವಳಿ ಮಾಡಿದರು. ಸಮಾಜವು ದೊಡ್ಡ ಪ್ರತಿಭಟನೆ ಮಾಡಲು ಮುಂದಾಯಿತು.

ಆಗ ಬಸವಣ್ಣನವರ ಐಕ್ಯ ಕ್ಷೇತ್ರ ಮುಳುಗದಂತೆ ನೋಡಿಕೊಳ್ಳುವುದಾಗಿ ಹೇಳಿದ ಸರ್ಕಾರ, ಅದರ ಸುತ್ತ ತಡೆಗೋಡೆ ನಿರ್ಮಿಸಲಾಗುವುದೆಂದು ಸಮಜಾಯಿಷಿ ನೀಡಿತು. ಜೊತೆಗೆ ಬಸವ ಜಯಂತಿಯಂದು ಸರ್ಕಾರಿ ರಜೆಯನ್ನು ಘೋಷಿಸಿತು.

ಒಂದು ಕಡೆ ಬಸವ ಅನುಯಾಯಿಗಳಿಗೆ ಬಸವಣ್ಣನವರ ಐಕ್ಯ ಕ್ಷೇತ್ರ ಮುಳುಗಿ ಹೋಗುತ್ತದೆಂಬ ಅಸಂತೋಷ; ಇನ್ನೊಂದು ಕಡೆ ಸರ್ಕಾರ ಬಸವ ಜಯಂತಿಯಂದು ರಜೆ ಘೋಷಿಸಿದ್ದಕ್ಕಾಗಿ ಸಂತೋಷ.

ನಂತರ ಬಂದ ಸರ್ಕಾರಗಳು ಇತರ ಸಮಾಜ ಸುಧಾರಕರ ಜಯಂತಿಯಂದು ಸರ್ಕಾರಿ ರಜೆಯನ್ನು ಘೋಷಿಸಿವೆ. ಪ್ರತಿ ಜನಾಂಗಕ್ಕೂ ತನ್ನದೇ ಆದ ಸಾಂಸ್ಕೃತಿಕ ಹಿನ್ನೆಲೆಯಿದ್ದು, ತಮ್ಮ ಧಾರ್ಮಿಕ ಹಾಗೂ ಸಾಮಾಜಿಕ ಸುಧಾರಕರನ್ನು ಮೂಲಪುರುಷರನ್ನಾಗಿಸಿಕೊಂಡಿರುತ್ತವೆ. ಅವರ ಹೆಸರಿನಲ್ಲಿ ಜನಾಂಗವನ್ನು ಸಂಘಟಿಸುವುದು ಸುಲಭವೆಂಬ ಭಾವನೆ.

ಸರ್ಕಾರವು ಪ್ರಮುಖ ಜಾತಿ-ಜನಾಂಗಗಳನ್ನು ಓಲೈಸುವುದು ಅಷ್ಟೇ ಮುಖ್ಯವೆಂದು ಭಾವಿಸಿ, ಸತ್ಪುರುಷರ ಜಯಂತಿಯನ್ನು ಸರ್ಕಾರಿ ವೆಚ್ಚದಲ್ಲಿ ಆಚರಿಸುವ ಹೊಸ ಪರಿಪಾಠ ಜಾರಿಗೆ ಬಂದಿದೆ. ಅದರ ಹೊಣೆಗಾರಿಕೆಯು ಜಿಲ್ಲಾಡಳಿತಕ್ಕೆ. ಜಿಲ್ಲಾ ಸಚಿವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಳಿದಂತೆ ಸರ್ಕಾರಿ ಅಧಿಕಾರಿಗಳು ಪಾಲ್ಗೊಳ್ಳುವಂತೆ ನೋಡಿಕೊಳ್ಳಲಾಗುತ್ತದೆ.

ಹಿಂದಿನ ದಿನಗಳಲ್ಲಿ ಒಂದು ಭಾವನೆ ಇತ್ತು. ಸತ್ಪುರುಷರ ಜಯಂತಿಯಂದು ರಜೆ ನೀಡಿದರೆ ಶಾಲಾ ಕಾಲೇಜು ವಿದ್ಯಾರ್ಥಿಗಳು, ಜನಾಂಗದ ಜನರು ಸೇರಿದಂತೆ ಉಳಿದವರೂ ಅದರಲ್ಲಿ ಭಾಗವಹಿಸುತ್ತಾರೆ ಎಂಬುದು. ಸರ್ಕಾರಿ ರಜೆ ಘೋಷಿಸಿದ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ. ಹೀಗಾಗಿ ವಿದ್ಯಾರ್ಥಿಗಳು ಭಾಗವಹಿಸುವುದಿಲ್ಲ.

ಕುಲಬಾಂಧವರು ಮತ್ತು ಅಧಿಕಾರಿಗಳು ಭಾಗವಹಿಸುವುದು ಅನಿವಾರ್ಯ. ಹೀಗೆ ಆಯಾ ಜನಾಂಗದ ಮೂಲ ಪುರುಷರ ಜಯಂತಿಗೆ ಸಾಂದರ್ಭಿಕವಾಗಿ ಸರ್ಕಾರಗಳು ರಜೆಯನ್ನು ಘೋಷಿಸುತ್ತಾ ಬಂದಿವೆ.

ಹಬ್ಬಹರಿದಿನಗಳು ಮತ್ತು ಜಯಂತಿಗಳು ಸೇರಿ ವರ್ಷದಲ್ಲಿ 25 ಸಾರ್ವಜನಿಕ ರಜಾ ದಿನಗಳು. ರವಿವಾರ ಮತ್ತು ಎರಡನೇ ಶನಿವಾರವನ್ನು ಹೊರತುಪಡಿಸಿ. ವಿವಿಧ ಸಂಘಟನೆಗಳು ಆಗಾಗ ಬಂದ್‌ಗೆ ಕರೆ ಕೊಟ್ಟಾಗಲೆಲ್ಲ ಅನಧಿಕೃತ ರಜೆ.

ರಷ್ಯಾದಂತಹ ದೇಶದಲ್ಲಿ ತಮ್ಮ ಬೇಡಿಕೆಯ ಈಡೇರಿಕೆಗಾಗಿ ಅಲ್ಲಿನ ಉದ್ದಿಮೆಗಳಲ್ಲಿನ ನೌಕರ ವರ್ಗವು ಹೆಚ್ಚುಹೊತ್ತು ಕೆಲಸ ಮಾಡಿ ಆಡಳಿತ ಮಂಡಳಿಗೆ ಕಿರಿಕಿರಿ ಉಂಟುಮಾಡುತ್ತದೆ. ಮತ್ತೊಂದು ಹಂತದಲ್ಲಿ, ಹೆಚ್ಚು ವೇಳೆ ಕೆಲಸ ಮಾಡುವುದರಿಂದ ಉತ್ಪಾದನೆ ಕುಸಿಯದಂತೆ ನೋಡಿಕೊಳ್ಳಲಾಗುತ್ತದೆ. ಆದರೆ ನಮ್ಮಲ್ಲಿ ಇದಕ್ಕೆ ತದ್ವಿರುದ್ಧವಾದ ಪರಿಸ್ಥಿತಿ.

ಸರ್ಕಾರಿ ರಜಾ ದಿನಗಳ ಸಂಖ್ಯೆಯು ಹೆಚ್ಚುತ್ತಿದ್ದು, ರಾಷ್ಟ್ರೀಯ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಬಸವಣ್ಣನವರಂಥ ಸಮಾಜ ಸುಧಾರಕರು ಕಾಯಕಕ್ಕೆ ಹೆಚ್ಚು ಮಹತ್ವ ನೀಡಿದ್ದು, ಕುಳಿತುಣ್ಣುವುದನ್ನು ವಿರೋಧಿಸಿದ್ದರು. ‘ದುಡಿಮೆಯಲ್ಲಿ ದೇವರನ್ನು ಕಾಣು’ ಎಂಬುದು ಅವರು ಜಗತ್ತಿಗೆ ನೀಡಿದ ದಿವ್ಯ ಸಂದೇಶ.

ಗುರು ಲಿಂಗ ಜಂಗಮವು ಶರಣ ಸಂಸ್ಕೃತಿ ಅನುಯಾಯಿಗಳಿಗೆ ಆರಾಧ್ಯ ದೈವ. ಅಂತಹ ಗುರು-ಲಿಂಗ-ಜಂಗಮಕ್ಕೆ (ತ್ರಿವಿಧ) ತನು(ಸೇವೆ)-ಮನ-ಧನವನ್ನು (ತ್ರಿವಿಧ) ಕೊಟ್ಟು ಒಲಿಸಬೇಕಾಗುತ್ತದೆ.

ಕಾಯಕದಿಂದಲೇ ಜೀವನ್ಮುಕ್ತಿ ಎಂದು ಬೋಧಿಸಿದ ಮತ್ತು ಅನುಸರಿಸಿದ ಧರ್ಮವೆಂದರೆ ಶರಣಧರ್ಮ. ಕೂಡಿ ದುಡಿಯುವುದು, ಹಂಚಿ ಉಣ್ಣುವುದು. ಪೂಜೆಗೆ ಯೋಗ್ಯವಾದ ಗುರು ಲಿಂಗ ಜಂಗಮವೇ ದುಡಿಯಬೇಕು ಎಂಬ ತತ್ವದ ಮುಖಾಂತರ ಸಮ ಸಮಾಜ ರಚನೆ.

ಸೇವಕನಿಂದ ರಾಜನವರೆಗೆ ಕಾಯಕ ಮಾಡುವುದು ಕಡ್ಡಾಯ. ಕೆಲ ಧರ್ಮಗಳಲ್ಲಿ ಧರ್ಮ ಬೋಧಕರು ದುಡಿಯುವಂತಿಲ್ಲ. ಆದರೆ ಬಸವ ಧರ್ಮದಲ್ಲಿ ಆತನು ದುಡಿಯಬೇಕು; ದಣಿಯಬೇಕು ಮತ್ತು ದಾಸೋಹಕ್ಕೆ ಸಲ್ಲಿಸಬೇಕು. ಧಾರ್ಮಿಕ ಅಥವಾ ಧರ್ಮ ಬೋಧಕನು ದುಡಿಯಬೇಕೆಂದು ಪ್ರತಿಪಾದಿಸಿದ್ದು ಶರಣ ಚಳವಳಿ.

ಇದರಿಂದ ಅನೇಕರು (ಧಾರ್ಮಿಕರು) ಶರಣರು ಬೋಧಿಸಿದ ತತ್ವಗಳನ್ನು ವಿರೋಧಿಸುತ್ತಾ ಬಂದಿದ್ದಾರೆಂದು ಕಾಣುತ್ತದೆ. ತಮಗೊಂದು ಬಟ್ಟೆಯೇ ಶಾಸ್ತ್ರಕ್ಕೊಂದು ಬಟ್ಟೆಯೇ ಎಂದು ಪ್ರಶ್ನಿಸುತ್ತಾರೆ ಬಸವಣ್ಣ. ಜವಾನನಿಂದ ಹಿಡಿದು ದಿವಾನನವರೆಗೆ ಒಂದೇ ಕಾನೂನು.

ಶರಣರದು ಕಾಯಕ ಸಂಸ್ಕೃತಿ; ಇಂದಿನದು ಮಜಾ ಸಂಸ್ಕೃತಿ. ರಜೆಯನ್ನು ಮಜಾವನ್ನಾಗಿ ಕಳೆಯುವ ಪದ್ಧತಿಯು ಜನಪ್ರಿಯ ಆಗುತ್ತಿದೆ. ದುಡಿದು ದಣಿದ ಜೀವಕ್ಕೆ ವಿಶ್ರಾಂತಿ ಬೇಕು. ದುಡಿಯದ ಜೀವಕ್ಕೆ ವಿಶ್ರಾಂತಿಯ ಅಗತ್ಯವಿಲ್ಲ. ಅವರದು ಕಾಯಕವೇ ಜೀವನ; ಇವರದು ವಿಶ್ರಾಂತಿಯೇ ಜೀವನ. ದುಡಿಯದಿರುವ ದೇಹದಲ್ಲಿ ಒಂದಿಲ್ಲೊಂದು ಕಾಯಿಲೆ.

ಇದನ್ನೆಲ್ಲ ಪರಿಗಣಿಸಿ, ಕಾಯಕ ಅಥವಾ ಕೆಲಸವನ್ನು ಮಾಡುತ್ತಲೇ ಜಯಂತಿಯನ್ನು ಆಚರಿಸುವುದು ಬಸವಣ್ಣ ಮತ್ತಿತರ ಶರಣರಿಗೆ ಸಲ್ಲುವ ಗೌರವ. ಒಡ್ಡೋಲಗದಲ್ಲಿ ಕುಳಿತು ಅನುಭಾವವನ್ನು ಆಲಿಸುತ್ತಿದ್ದ ಆಯ್ದಕ್ಕಿ ಮಾರಯ್ಯನ ಬಳಿ ಬಂದಂತಹ ಅವನ ಸತಿ ಆಯ್ದಕ್ಕಿ ಲಕ್ಕಮ್ಮನು ‘ಕಾಯಕ ನಿಂದಿತ್ತು ಏಳಯ್ಯಾ ಎನ್ನಾಳ್ದನೆ!’ ಎಂದು ಎಚ್ಚರಿಸುತ್ತಾಳೆ. ಕಾಯಕ ಜಾಗೃತಿಗೆ ಇದಕ್ಕಿಂತಲೂ ಮತ್ತೇನು ಉದಾಹರಣೆ ಬೇಕು?

ಇದನ್ನೆಲ್ಲ ಪರಿಗಣಿಸಿ ಸರ್ಕಾರವು ಬಸವ ಜಯಂತಿಯಂದು ಕೊಡಮಾಡುವ ರಜೆಯನ್ನು ಹಿಂಪಡೆಯಬೇಕು. ರಜೆ ಇಲ್ಲದೆ ಜಯಂತಿಯನ್ನು ಆಚರಿಸುತ್ತ ಸತ್ಪುರುಷರಿಗೆ ಗೌರವ ಸಲ್ಲಿಸುವ ಹೊಸ ವಿಧಾನ ಜಾರಿಗೆ ತರಬೇಕು.

ಪಂಚಾಂಗ ಪ್ರಣೀತವಾದ ಅಷ್ಟಮಿ ನವಮಿ ಆಚರಣೆಗೆ ಮುಂದಾದಲ್ಲಿ ಗಣಪದವಿ ತಪ್ಪುವ ಸಾಧ್ಯತೆಯಿದೆ, ಅದಕ್ಕಾಗಿ ಅವುಗಳ ಆಚರಣೆ ಸಲ್ಲದೆನ್ನುತ್ತಾರೆ ಬಸವಾದಿ ಶರಣರು. ಯಾವ ಸತ್ಪುರುಷರೂ ತಮ್ಮ ಜಯಂತಿ ಆಚರಿಸಬೇಕೆಂದು ಬಯಸುವುದಿಲ್ಲ. ಅಂದಮೇಲೆ ಅಂದು ಸಾರ್ವಜನಿಕ ರಜೆ ನೀಡಬೇಕೆಂದು ಸಹ ಇಚ್ಛಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT