ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಣ ತಿಳಿಯುವ ಹಕ್ಕು ಇದೆ

Last Updated 20 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಹಾಕಿರುವ ಎಫ್‌ಐಆರ್‌ ರದ್ದತಿಗೆ ಕೋರಿ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಅನೇಕ ಕುತೂಹಲಕಾರಿ ವಿಚಾರಗಳಿಗೆ ಅವಕಾಶ ಮಾಡಿಕೊಟ್ಟಿದೆ. ಹೈಕೋರ್ಟ್‌ನ ಚರಿತ್ರೆಯಲ್ಲಿ ಇದೊಂದು ಅಪರೂಪದ ಪ್ರಕರಣವಾಗಿ ಕಾಣಿಸಿದ್ದು ಇದೇ ಕಾರಣದಿಂದ. ಅವುಗಳ ಬಗ್ಗೆ ಗಮನಹರಿಸಿದಾಗ ಕುತೂಹಲಕಾರಿ ಹೊಳಹುಗಳು ನಮಗೆ ಕಾಣಸಿಗುತ್ತವೆ.

ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಪ್ರಕರಣಗಳ ವಿಚಾರಣೆಯಿಂದ ಹಿಂದೆ ಸರಿಯುವ ಸ್ವಾತಂತ್ರ್ಯ ಇರುತ್ತದೆ. ತಾವು ಕಿರಿಯ ವಕೀಲರಾಗಿದ್ದಾಗ ತರಬೇತಿ ಪಡೆದಿದ್ದ ವಕೀಲರು  ವಾದ ಮಂಡಿಸುವ ಸಂದರ್ಭದಲ್ಲಿ; ವಾದ ಮಂಡಿಸುವವರು ನಿಕಟ ಸಂಬಂಧಿಗಳಾಗಿದ್ದರೆ ಅಂತಹ ಸಾಮಾನ್ಯ ಸಂದರ್ಭಗಳಲ್ಲಿ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿಯುವು­ದಿದೆ. ಇದಕ್ಕೆ ಕಾನೂನಿನ ಸಮ್ಮತಿ ಇದೆ.

ಆದರೆ ಅನೇಕ ಸಂದರ್ಭಗಳಲ್ಲಿ ಇವುಗಳಿಗೆ ಹೊರತಾದ ಬೆಳವಣಿಗೆಗಳು ಸೃಷ್ಟಿಯಾಗಿ, ಅವುಗಳಿಂದ ವಿಚಲಿತಗೊಂಡು ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿಯುವುದೂ ಉಂಟು.

ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ ಅವರು ಪೀಠಾಸೀನ ನ್ಯಾಯಮೂರ್ತಿ ಎಂ.ಎಸ್‌.ನೇಸರ್ಗಿ ಅವರನ್ನು ಮದುವೆಯಾದ

ಪಟ್ಟಿ ಕೊಡಬೇಕು
ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸುವಾಗ ತಮ್ಮ ಮುಂದೆ ಯಾರ್‍ಯಾರು ವಾದ ಮಂಡಿಸಬಾರದು ಎಂಬ ಪಟ್ಟಿಯನ್ನೇ ಅವರು ಕೋರ್ಟ್‌ನ ಕಚೇರಿಗೆ ಸಲ್ಲಿಸಬೇಕು. ಅದನ್ನು ಆಧರಿಸಿ, ಅಂತಹವರಿಗೆ ಸಂಬಂಧಿಸಿದ ಪ್ರಕರಣಗಳು ಈ ನ್ಯಾಯಮೂರ್ತಿಗಳ ಎದುರು ಹೋಗದಂತೆ ಕಚೇರಿ ಸಿಬ್ಬಂದಿ ಮೊದಲೇ ನಿಗಾ ವಹಿಸುತ್ತಾರೆ. ಅಷ್ಟರ ನಡುವೆಯೂ  ಕೆಲವೊಮ್ಮೆ ಅಚಾನಕ್ಕಾಗಿ ಆ ಪಟ್ಟಿಯಲ್ಲಿದ್ದವರ ಪ್ರಕರಣಗಳು ಸದರಿ ನ್ಯಾಯಮೂರ್ತಿಗಳ ಎದುರು ವಿಚಾರಣೆಗೆ ಬಂದುಬಿಡುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭಗಳಲ್ಲಿ ಸ್ವತಃ ನ್ಯಾಯಮೂರ್ತಿಗಳೇ ವಿಚಾರಣೆಯಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬರುತ್ತಾರೆ.

ಯಾವಾಗ ಹಿಂದೆ ಸರಿಯಬೇಕು?
ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿಯಲೇಬೇಕಾದ ಸಂದರ್ಭಗಳು:
ವಾದ ಮಂಡಿಸುವವರು ತಮ್ಮ ಪತ್ನಿ, ಮಗ, ಅಪ್ಪ, ಅಮ್ಮ, ಅಕ್ಕ, ತಂಗಿ ಆಗಿದ್ದರೆ.
ಕಿರಿಯ ವಕೀಲರಾಗಿದ್ದ ಸಂದರ್ಭದಲ್ಲಿ ತಮಗೆ ತರಬೇತಿ ನೀಡಿದವರು ಅಥವಾ ತಾವು ಹಿಂದೊಮ್ಮೆ ಜೊತೆಗೂಡಿ ಕೆಲಸ ಮಾಡಿದ್ದ ಹಿರಿಯ ವಕೀಲರೇ ವಾದ ಮಂಡನೆಗೆ ಮುಂದಾದರೆ.

ನಂತರ, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ­ಯೊಬ್ಬರ ಮುಂದೆ ವಾದ ಮಂಡನೆಗೆ ಮುಂದಾದರು. ಆಗ ಆ ನ್ಯಾಯಮೂರ್ತಿ ‘ನನ್ನ ಸಹೋದ್ಯೋಗಿ ನ್ಯಾಯಮೂರ್ತಿಗಳ ಶ್ರೀಮತಿ ನೀವು. ನಿಮ್ಮ ವಾದವನ್ನು ನಾನು ಕೇಳುವುದು ಎಷ್ಟು ಸಮಂಜಸ’ ಎಂದು ಕೇಳಿದ್ದರು. ಈ ಪ್ರಶ್ನೆ ಒಂದು ಕಗ್ಗಂಟಾಗಿ ಅನೇಕ ದಿನಗಳವರೆಗೆ ಎಲ್ಲರನ್ನೂ ಕಾಡಿತ್ತು.

ಇಂತಹ ಸಂದರ್ಭಗಳಿಗೆ ಹೊರತಾದ ಪ್ರಶ್ನೆಗಳು ಸಹ ಆಗಾಗ್ಗೆ ಉದ್ಭವವಾಗುತ್ತವೆ. ಅವುಗಳ ಪೈಕಿ ರಾಮಕಥಾ ಗಾಯಕಿ ಮತ್ತು ರಾಘವೇಶ್ವರ ಶ್ರೀಗಳಿಗೆ ಸಂಬಂಧಿಸಿದ ಪ್ರಕರಣವೂ ಒಂದು. ಈ ಪ್ರಕರಣದ ವಿಚಾರಣೆಯಿಂದ ಐವರು ನ್ಯಾಯಮೂರ್ತಿಗಳು ಹಿಂದೆ ಸರಿದಿದ್ದಾರೆ. ಇವರಲ್ಲಿ ನ್ಯಾಯಮೂರ್ತಿಗಳಾದ ಕೆ.ಎನ್‌.ಫಣೀಂದ್ರ, ಎಚ್‌.ಜಿ.ರಮೇಶ್‌ ಮತ್ತು ಪಿ.ಬಿ.ಬಜಂತ್ರಿ ಅವರು ಸಕಾರಣಗಳನ್ನು ಕೊಟ್ಟಿದ್ದಾರೆ. ಆದರೆ ಉಳಿದ ನ್ಯಾಯಮೂರ್ತಿಗಳು ಕಾರಣಗಳನ್ನು ವ್ಯಕ್ತಪಡಿಸದೇ ಹಿಂದೆ ಸರಿದಿದ್ದಾರೆ. ನ್ಯಾಯಮೂರ್ತಿ­ಗಳ ಇಂತಹ ನಡೆ ಸಾರ್ವಜನಿಕವಾಗಿ ಸರಿ ಕಾಣದಾಯಿತು. ಇಂತಹುದಕ್ಕೆ ಕಾರಣಗಳನ್ನು ತಿಳಿಯುವ ಹಕ್ಕು ಸಾರ್ವಜನಿಕರಿಗೆ ಇದೆ. ಆಗಲೇ ಅದು ಸಕಾರಣವೋ ಅಲ್ಲವೋ ಎಂದು ತಿಳಿಯಲು ಸಾಧ್ಯ.

ಇನ್ನು ಕೆಲವು ಸಂದರ್ಭಗಳಲ್ಲಿ ನ್ಯಾಯಾಂಗ ನಿಂದನೆಗೆ ಗುರಿಪಡಿಸಲು ಸಾಧ್ಯವಾಗದಂತಹ ಗುರುತರವಲ್ಲದ ಹೇಳಿಕೆಗಳನ್ನು ಯಾರಾದರೂ ನೀಡಿದರೆ, ನ್ಯಾಯಮೂರ್ತಿಗಳು ಅನವಶ್ಯಕವಾಗಿ ಗೊಂದಲಕ್ಕೆ ಒಳಗಾಗದೆ, ಅದೆಲ್ಲವನ್ನೂ ಮೀರಿ ತಮ್ಮ ಕರ್ತವ್ಯಬದ್ಧತೆಯನ್ನು ವ್ಯಕ್ತಪಡಿಸುವುದೇ ಸೂಕ್ತ.

ಕೆಲವು ನ್ಯಾಯಾಧೀಶರ ಅತಿ ಸೂಕ್ಷ್ಮ ಮನೋಭಾವ ಮತ್ತು ಯಾರಾದರೂ ಏನಾದರೂ ತಿಳಿದಾರು ಎಂಬ ಅಳುಕು ಎಷ್ಟೋ ಸಂದರ್ಭಗಳಲ್ಲಿ ಸಕಾರಣ ಇಲ್ಲದಿದ್ದರೂ ವಿಚಾರಣೆಯಿಂದ ಹಿಂದೆ ಸರಿಯಲು ಕಾರಣವಾಗುತ್ತದೆ. ಇಂತಹ ಸಂದರ್ಭಗಳನ್ನು ಸಂಭಾಳಿಸಿಕೊಂಡು ಹೋಗುವ ದಿಟ್ಟತನ ಎಲ್ಲ ನ್ಯಾಯಮೂರ್ತಿಗಳಿಗೂ ಇರುತ್ತದೆ ಎಂದು ಭಾವಿಸಲು ಸಾಧ್ಯವಿಲ್ಲ. ಅದನ್ನು ಸಾಧ್ಯವಾಗಿಸಲು  ನ್ಯಾಯಮೂರ್ತಿಗಳಿಗೆ ಇರುವ ಏಕೈಕ ಮಾರ್ಗವೆಂದರೆ, ವಿಚಾರಣೆಯಿಂದ ಹಿಂದೆ ಸರಿಯುವ ಮುನ್ನ ಅವರು ತಮ್ಮ ಸಹ ನ್ಯಾಯಮೂರ್ತಿಗಳೊಂದಿಗೆ ಸೂಕ್ತ ಸಮಾಲೋಚನೆ ನಡೆಸಬೇಕು. ಆನಂತರವಷ್ಟೇ ಯುಕ್ತವಾದ ನಿರ್ಧಾರಕ್ಕೆ ಬರಬೇಕು.
(ಲೇಖಕರು ಹೈಕೋರ್ಟ್‌ ವಕೀಲರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT