ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಟೂನ್‌ ರಚನೆಗೆ ಪ್ರೇರಣೆಯಾದ ಭೇಟಿ

Last Updated 28 ಜನವರಿ 2015, 19:30 IST
ಅಕ್ಷರ ಗಾತ್ರ

ಇದು ಸುಮಾರು ನಲವತ್ತು ವರುಷಗಳ ಹಿಂದಿನ  ಹಳೆಯ ನೆನಪು.  ಅದರ ಸಣ್ಣ ಪುಟ್ಟ ವಿಶೇಷ ವಿವರಗಳು ಮಾಸಿ ಹೋಗಿವೆ. ಆದರೆ ಯಾವ ಘಟನೆ ಈಗ ಈ ಮಾಸಿಹೋದ ನೆನಪುಗಳನ್ನು ಮತ್ತೆ ಸಜೀವಿಸಿದೆಯೋ ಅದನ್ನು ಮತ್ತು ಅದರ ಮರುದಿನದ ಪರಿಣಾಮವನ್ನು ಇನ್ನೂ ಮರೆತಿಲ್ಲ. 

ಬಹುಶಃ 1976ರ ನವೆಂಬರ್‌, ಡಿಸೆಂಬರ್‌ ಇರಬಹುದು. ಅಂದಿನ ದಿನಗಳಲ್ಲಿ ಮುಂಬೈನಿಂದ ಪ್ರಕಟವಾಗುತ್ತಿದ್ದ ವಾರಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ತುರ್ತುಪರಿಸ್ಥಿತಿ ಇನ್ನೂ ಚಾಲು ಇತ್ತು. ಆದರೆ ಅದರ ಒತ್ತಡ ಸ್ವಲ್ಪ ಸಡಿಲ ವಾಗುವ ಇಂಗಿತಗಳೂ ಮಸುಕು ಮಸುಕಾಗಿ ಕಾಣುತ್ತಿದ್ದವು. ಒಂದು ಸೋಮವಾರ ಬೆಳಿಗ್ಗೆ ಹತ್ತರ ಸುಮಾರಿಗೆ ಕಟ್ಟಡದ ಆರನೇ ಅಂತಸ್ತಿ­ನಲ್ಲಿರುವ ಆಫೀಸು ಸೇರಿದ ಕೆಲವೇ ನಿಮಿಷಗಳ ನಂತರ ನನ್ನನ್ನು ಕಾಣಲು ಮೂರು ಮಂದಿ ಬಂದರು. ಎಲ್ಲರೂ ಪರಿಚಯಸ್ಥರು.  ಬಂದ­ವ­ರನ್ನು  ವಯಸ್ಸು ಮತ್ತು ದೊಡ್ಡತನದ ಕ್ರಮಶಃ  ಹೇಳುವುದಾದರೆ: ಜಿ.ಬಿ.ಜೋಶಿ, ಧಾರವಾಡದ ಮನೋಹರ ಗ್ರಂಥ ಮಾಲೆಯ ಮುಖ್ಯಸ್ಥರು; ಕೀರ್ತಿನಾಥ ಕುರ್ತಕೋಟಿ, ಮಾಲೆಯ ಸಾಹಿತ್ಯ ಸಲಹೆಗಾರರು ಮತ್ತು ರಮಾಕಾಂತ ಜೋಶಿ, ಜಿಬಿ ಅವರ ಹಿರಿಯ ಮಗ ಹಾಗೂ ಮಾಲೆಯ ನಿರ್ವಾ­ಹಕರು ಮತ್ತು ಆ ದಿನಗಳಲ್ಲಿ ಮಾಲೆಯ ಮುಖ್ಯಸ್ಥರು.

ನನ್ನ ಮೇಜಿನ ಅತ್ತಕಡೆ ಇದ್ದದ್ದು ಎರಡು ಕುರ್ಚಿಗಳು ಮಾತ್ರ. ಜಿಬಿ ಮತ್ತು ಕೀರ್ತಿ ಕುಳಿತು, ‘ಬೇಡ, ಇನ್ನೊಂದು ಕುರ್ಚಿ ಬೇಡ, ನಮಗೆ ಬಹಳ ಸಮಯವಿಲ್ಲ, ನೀನು ನಮ್ಮ ಜೊತೆ ಬರಬೇಕು, ಸುಮಾರು ಒಂದು ಗಂಟೆ ಬಿಡುವು ಮಾಡಿಕೊಂಡು ಬರಬೇಕು. ಇಲ್ಲೇ ಹತ್ತಿರದಲ್ಲೇ ಒಂದು ಕೆಲಸ ಇದೆ, ನೀನು ನಮ್ಮ ಜೊತೆ ಇದ್ದರೆ ಸಾಕು’ ಅಂದರು. ನನಗೆ ಬೆಳಿಗ್ಗೆ ಒಂದು ಗಂಟೆ  ಸಮಯ ಮಾಡಿಕೊಳ್ಳುವುದು ಅಂತಹ  ಸಮಸ್ಯೆ­ಯೇನೂ ಆಗಿರಲಿಲ್ಲ. ಆದರೂ ಕುತೂಹಲ.

‘ಏನ್ರೀ ಮಾರಾಯ್ರೆ, ನಾನು ಸಹಾಯ ಮಾಡೋದು ಏನಿದೆ?’ ಅಂತ ಕೇಳಿದೆ.  ನಿಂತೇ ಇದ್ದ ರಮಾಕಾಂತ ಜೋಶಿ ‘ನಡೀರಿ, ರಸ್ತೇಲೇ ಮಾತಾಡೋಣ, ನಮಗೆ ಹೆಚ್ಚು ಸಮಯ ಇಲ್ಲ’ ಎಂದರು. ಪತ್ರಿಕೆಯ ಸಂಪಾದಕ ಮತ್ತು ಗೆಳೆಯ ಕೃಷ್ಣರಾಜನಿಗೆ ಔಪಚಾರಿಕವಾಗಿ ಮೂವರನ್ನೂ ಪರಿಚಯಿಸಿ ಹೊರಟಾಗ ಆ ಬೆಳಿಗ್ಗೆಯ ಅಸಲು ಕಾರ್ಯಸೂಚಿ ಲಿಫ್ಟಿನಲ್ಲೇ  ಗೊತ್ತಾಯಿತು.

ಮುಂಬರುವ ಕೆಲವು ದಿನಗಳಲ್ಲಿ ಮಾಲೆಯ ಒಂದು ಕಾರ್ಯಕ್ರಮ ಮುಂಬೈನಲ್ಲಿ ಮಾಡುವು­ದಿದೆ, ಆ ಕಾರ್ಯಕ್ರಮಕ್ಕೆ ಆರ್.ಕೆ.ಲಕ್ಷ್ಮಣ್  ಅವರನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಲು ಕರೆಯಬೇಕು, ಅದಕ್ಕೆ ಹೊರಟಿದ್ದೇವೆ. ನೀನು ಈಗ ಮುಂಬೈನವ ಮತ್ತು ಪತ್ರಕರ್ತ ಬೇರೆ. ನೀನು ಜೊತೆಯಲ್ಲಿದ್ದರೆ ಕೆಲಸ ಆಗುತ್ತೆ  ಇತ್ಯಾದಿ ಹೇಳಿದರು.

‘ನಾನು ಮುಂಬೈನವನಲ್ಲ, ಅದಲ್ಲದೆ ಒಂದು ಸಣ್ಣ ವಾರಪತ್ರಿಕೆಯಲ್ಲಿ ಕೆಲಸ ಮಾಡುವ ಜುಜುಬಿ ಪತ್ರಕರ್ತ. ಲಕ್ಷ್ಮಣ್ ಅವರ ಪರಿಚಯ ಬಿಡಿ,  ನಾನು ಅವರನ್ನು ನೋಡೇ ಇಲ್ಲ, ಅದಲ್ಲದೆ ನಾನು ಕೇಳಿರುವಂತೆ ಅವರು ಪುಸ್ತಕ ಬಿಡುಗಡೆ­ಯಂತಹ ಮುಖ್ಯ ಸಮಾರಂಭಗಳಲ್ಲಿ ಪಾಲು ಗೊಳ್ಳುವುದಿಲ್ಲ, ಅತಿಥಿಯಾಗಲು ಒಪ್ಪುವುದಿಲ್ಲ. ಸಾಧಾರಣವಾಗಿ, ಪರಿಚಯವಿಲ್ಲದವರ ಜೊತೆ ಬೆರೆಯುವುದೂ ಇಲ್ಲ’ ಅಂತ ಕಳಚಿಕೊಳ್ಳಲು ಪ್ರಯತ್ನಿಸಿದೆ. ‘ನಡಿ ನಡಿ, ನಮಗೆ ಪರಿಚಯ ಇದೆ, ನೀನು ಸುಮ್ಮನೆ ಜೊತೆಗೆ ಬಾ’ ಅನ್ನುತ್ತಿ­ದ್ದಂತೆಯೇ ಮುಂಬೈನ ‘ಟೈಮ್ಸ್ ಆಫ್ ಇಂಡಿಯಾ’ ಆಫೀಸು ತಲುಪಿದೆವು. ಜಿಬಿ ಅವ­ರನ್ನು ಜೋಪಾನವಾಗಿ ಕೈಹಿಡಿದು ರಸ್ತೆ ದಾಟಿಸಿ ಟಿಒಐನ ಮಹಾದ್ವಾರ ಸಹ ತಲುಪಿದ್ದಾಯಿತು.

ನಮಗೆ ರಿಸೆಪ್ಷನ್ ಕೌಂಟರ್‌ನಿಂದ ಮುಂದೆ ಹೋಗಲು ಬಿಡುವುದೇ ಇಲ್ಲ ಅಂತ ನಾನು ಅಂದು­ಕೊಂಡಿದ್ದೆ. ಆದರೆ ನಮ್ಮ ಪರಿಚಯ, ಲಕ್ಷ್ಮಣ್ ಅವರ ಹೆಸರು ಮತ್ತು ಅವರನ್ನು ಭೇಟಿ ಮಾಡುವ  ಉದ್ದೇಶ ತಿಳಿಸಿದ ಸ್ವಲ್ಪವೇ ಸಮ­ಯದ ನಂತರ ಭೇಟಿಗೆ ಅನುಮತಿ ದೊರೆಯಿತು.  ಜೊತೆಗೆ ನಮಗೆ ದಾರಿ ತೋರಿಸಲು  ಆಫೀಸಿನ ಒಬ್ಬ ಆಳು ಬೇರೆ ಬಂದ.

ಅಷ್ಟು ವಿಶಾಲವೂ ಅಲ್ಲದ ಅಥವಾ ಇಕ್ಕಟ್ಟೂ ಅಲ್ಲದ ಕ್ಯಾಬಿನ್‌ನಲ್ಲಿ ಲಕ್ಷ್ಮಣ್ ಒಬ್ಬರೇ ಕುಳಿತಿ­ದ್ದರು. ಅವರ ಮೇಜಿನ ಮುಂದೆ ಎರಡು–ಮೂರು ಕುರ್ಚಿಗಳಿದ್ದವು. ಜಿಬಿ ಮತ್ತು ಕೀರ್ತಿ ಅವರು ನಾವು ಬಂದ ಉದ್ದಿಶ್ಯದ ಬಗ್ಗೆ ಮಾತು ಆರಂಭಿಸಿದರು. ರಮಾಕಾಂತ ಮತ್ತು ನಾನು ಚುಪ್. ಜಿಬಿ ಮತ್ತು ಕೀರ್ತಿ ಪ್ರಾಯಶಃ ಎರಡು ನಿಮಿಷಗಳು ಮಾತನಾಡಿರಬಹುದು. ಪುಸ್ತಕಗಳ ಬಿಡುಗಡೆ, ಮುಖ್ಯ ಅತಿಥಿ ಈ ಮಾತುಗಳು ಹೊರಬಂದ ಕೂಡಲೇ ಲಕ್ಷ್ಮಣ್ ಅವರು ಆ ಮಾತುಗಳನ್ನು ನಿಲ್ಲಿಸಿ, ‘ಇಲ್ಲ ಇದು ಅಸಾಧ್ಯ, ಇಂತಹ ಕೆಲಸ, ಹವ್ಯಾಸಗಳ ಬಗ್ಗೆ ನನಗೆ ಏನೇನೂ ಆಸಕ್ತಿ ಇಲ್ಲ, ಸಮಯವೂ ಇಲ್ಲ, ಅಭ್ಯಾಸವಂತೂ ಇಲ್ಲವೇ ಇಲ್ಲ,  ದಯವಿಟ್ಟು ಕ್ಷಮಿಸಿ’ ಅನ್ನುತ್ತಲೇ ನಮಗೆ ಬಿದಾಯಿ ಹೇಳಿ­ದರು. ನಾನು ನನ್ನ ಆಫೀಸಿಗೆ ವಾಪಸಾದೆ.  ಅವರ ಜೊತೆಗಾರರೊಡನೆ ಜಿಬಿ ಬೇರೆ ದಾರಿ ಹಿಡಿದರು. ದಿನದ ಮಾಮೂಲು ಕೆಲಸಗಳ ಮಧ್ಯೆ ಆ ಬೆಳಗ್ಗಿನ ಔಟಿಂಗ್ ಕುರಿತು ನಾನು ಮರೆತೇ ಹೋದೆ.

ಮರುದಿನ ಬೆಳಿಗ್ಗೆ ‘ಟೈಮ್ಸ್ ಆಫ್ ಇಂಡಿಯಾ’ ನೋಡಿದಾಗ ಎಂದಿನಂತೆ ಲಕ್ಷ್ಮಣ್ ಅವರ ‘ಯು ಸೆಡ್ ಇಟ್’ ಕಾರ್ಟೂನ್ ಮೇಲೆ ಕಣ್ಣು ಹಾಯಿಸಿದೆ. ಭಾಷಣಕಾರನೊಬ್ಬ ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಅಸಂಬದ್ಧ ಪ್ರಲಾಪ­ಗಳನ್ನು ಮಾಡುತ್ತಿದ್ದ ಒಂದು ಸೊಗಸಾದ ಕಾರ್ಟೂನ್. ಕಣ್ಣಿಟ್ಟು ನೋಡಿದರೆ ಭಾಷಣಕಾರ ಸ್ವಲ್ಪ ಲಕ್ಷ್ಮಣ್ ಹಾಗೇ ಕಾಣುತ್ತಿದ್ದ. ಸಂತೋಷ­ವಾಯಿತು. ಆ ಕಲಾಕಾರನಿಗೆ ಹಿಂದಿನ ಬೆಳಿಗ್ಗೆಯ ನಮ್ಮಗಳ ಭೇಟಿಯೇ ಅಂದಿನ ಕಾರ್ಟೂನ್‌ಗೆ ಪ್ರೇರಣೆ ದೊರಕಿಸಿತ್ತು. ಈಗಲೂ ಆ ಕಾರ್ಟೂನ್ ನನ್ನನ್ನು ಆವರಿಸಿಕೊಂಡಿರುವ ದೂಳು ಕಾಗದಗಳ ಕಾಡಿನಲ್ಲಿ ಎಲ್ಲೋ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT