ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಪೊರೇಟರ್‌ನಿಂದ ಮುಖ್ಯಮಂತ್ರಿವರೆಗೆ...

ಮಹಾರಾಷ್ಟ್ರದ ಪ್ರಥಮ ಬಿಜೆಪಿ ಸಿ.ಎಂ ಆಗಿ ದೇವೇಂದ್ರ ಫಡ್ನವೀಸ್‌
Last Updated 28 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ
ADVERTISEMENT

ಮುಂಬೈ (ಪಿಟಿಐ): ಮೀಸೆ ಇನ್ನೂ ದಟ್ಟವಾಗಿ ಬೆಳೆ­ಯದ  22ರ ಹುಡುಗಾಟಿಕೆ ವಯಸ್ಸಿನಲ್ಲಿ ನಾಗ­ಪುರ ಪಾಲಿಕೆಯ ಅತ್ಯಂತ ಕಿರಿಯ ಸದಸ್ಯ. 27ರ ಕಿರಿಯ ವಯಸ್ಸಿನಲ್ಲಿ ಮೇಯರ್. 29ನೇ ವಯ­ಸ್ಸಿಗೆ ಶಾಸಕ. 44ನೇ ವಯಸ್ಸಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿ!
ಇದು ಮಹಾರಾಷ್ಟ್ರದ ನೂತನ ಮುಖ್ಯ­ಮಂತ್ರಿ­ಯಾಗಿ ಅಧಿಕಾರ ವಹಿಸಿ­ಕೊಳ್ಳ­­ಲಿರುವ ದೇವೇಂದ್ರ  ಫಡ್ನವೀಸ್‌ ಅವರ ರಾಜಕೀಯ ಹಿನ್ನೆಲೆ.

ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ನಾಗ­ಪುರ ಪಾಲಿಕೆಯ ಮೇಯರ್‌ ಹುದ್ದೆಯನ್ನು ಅಲಂ­ಕರಿ­ಸುವ ಮೂಲಕ  ಅಚ್ಚರಿ ಮೂಡಿಸಿದ್ದ ಫಡ್ನವೀಸ್‌    ಮಹಾ­ರಾಷ್ಟ್ರದ ಮೊದಲ ಬಿಜೆಪಿ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಜತೆಗೆ ಅತ್ಯಂತ ಕಿರಿಯ ವಯಸ್ಸಿನ ಮುಖ್ಯಮಂತ್ರಿ ಎಂಬ ಹೊಸ ದಾಖಲೆ ಕೂಡ ಅವರ ಪಾಲಾಗಲಿದೆ.

ನಾಗಪುರ ಪಾಲಿಕೆ ಸದಸ್ಯನಾಗುವ ಮೂಲಕ ರಾಜ­ಕೀಯ ಜೀವನ ಆರಂಭಿ­ಸಿದ ಫಡ್ನ­ವೀಸ್‌ ರಾಜ­ಕೀಯ­ದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತ ಮೇಲೆ ಬಂದವರು. ಈವರೆಗೂ ಫಡ್ನವೀಸ್‌ ಯಾವುದೇ ಸಚಿವ ಸ್ಥಾನ­ವನ್ನೂ ಅಲಂಕರಿಸಿರಲಿಲ್ಲ.

ಆರ್‌ಎಸ್‌ಎಸ್‌ ಕಟ್ಟಾ ಕಾರ್ಯಕರ್ತ­ರಾಗಿ­ರುವ ಅವರು ಮರಾಠರ ಪ್ರಾಬಲ್ಯ­ವಿರುವ ಮಹಾರಾಷ್ಟ್ರ­ದಲ್ಲಿ ಬ್ರಾಹ್ಮಣ ಸಮು­ದಾಯದಿಂದ ಮುಖ್ಯ­ಮಂತ್ರಿ­ಯಂ­ತಹ ಉನ್ನತ ಹುದ್ದೆಗೆ ಏರುತ್ತಿ­ರುವ ಎರಡನೇ ವ್ಯಕ್ತಿ. ಇದಕ್ಕೂ ಮೊದಲು ಶಿವಸೇನಾದ ಮನೋಹರ ಜೋಶಿ ಮುಖ್ಯಮಂತ್ರಿಯಾಗಿದ್ದರು.

ಲೋಕಸಭೆ ಹಾಗೂ ವಿಧಾನಸಭೆ­ಯಲ್ಲಿ ಬಿಜೆಪಿ ಸಾಧನೆ­ಯನ್ನು ಮೋದಿ ಹಾಗೂ ಷಾ ಮೆಚ್ಚಿಕೊಂಡಿ­ದ್ದರು. ಆ ಯಶಸ್ಸಿನ ಪಾಲು ಸಹಜವಾಗಿಯೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಫಡ್ನವೀಸ್‌ ಅವರಿಗೂ ದಕ್ಕಿತ್ತು.

ಫಡ್ನವೀಸ್‌ ಅವರಿಗೆ ರಾಜಕೀಯ ಹೊಸದಲ್ಲ. ಜನಸಂಘ­ದಲ್ಲಿದ್ದ ಅವರ ತಂದೆ ದಿವಂಗತ ಗಂಗಾಧರ ಫಡ್ನವೀಸ್‌ ಅವ­ರನ್ನು ನಿತಿನ್ ಗಡ್ಕರಿ ತಮ್ಮ ರಾಜ­ಕೀಯ ಗುರು ಎಂದು ಕರೆಯುತ್ತಿದ್ದರು. ವಿದ್ಯಾರ್ಥಿ ದಿಸೆಯಲ್ಲಿಯೇ  ಎಬಿವಿಪಿ ಸೇರಿದ್ದ ಅವರು  22ನೇ ವಯಸ್ಸಿನ­ಲ್ಲಿಯೇ  ನಾಗಪುರ ಪಾಲಿಕೆಯ ಸದಸ್ಯ­ರಾಗಿ ಹಾಗೂ 1997ರಲ್ಲಿ  27ನೇ ವಯಸ್ಸಿ­ನಲ್ಲಿ  ಮೇಯರ್‌ ಆಗಿ ಆಯ್ಕೆ­ಯಾ­­ಗಿ­ದ್ದರು. 1999ರಲ್ಲಿ ಮೊದಲ ಬಾರಿಗೆ ವಿಧಾನ­ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಫಡ್ನವೀಸ್‌ ಮೊದಲ ಯತ್ನ­ದಲ್ಲಿಯೇ ಯಶ ಕಂಡರು. ಅಲ್ಲಿಂದ ಒಮ್ಮೆಯೂ ಅವರು ಹಿಂದಿರುಗಿ ನೋಡಿಲ್ಲ. ಸತತ ನಾಲ್ಕು ಅವಧಿಗೆ ಶಾಸಕ­ರಾಗಿ ಆಯ್ಕೆಯಾಗಿದ್ದಾರೆ.

ಈ ಬಾರಿ ನಾಗಪುರ ನೈರುತ್ಯ ಕ್ಷೇತ್ರ­ದಿಂದ ಆಯ್ಕೆ­ಯಾಗಿರುವ ಅವರು ವಿದರ್ಭ ಪ್ರತ್ಯೇಕ ರಾಜ್ಯಕ್ಕಾಗಿ ನಡೆದ ಹೋರಾ­ಟದ ಮುಂಚೂಣಿ­ಯಲ್ಲಿ­ದ್ದವರು. ಬಿಜೆಪಿ ಮಿತ್ರಪಕ್ಷವಾಗಿದ್ದ ಶಿವಸೇನಾ ಮಹಾ­ರಾಷ್ಟ್ರ ವಿಭಜನೆಗೆ ಬದ್ಧ ವಿರೋಧಿಯಾಗಿದ್ದಾಗಲೂ ವಿದರ್ಭ ಪ್ರದೇಶದಿಂದ ಬಂದ ಫಡ್ನವೀಸ್‌ ಪ್ರತ್ಯೇಕ ವಿದರ್ಭ ರಾಜ್ಯದ ಬೇಡಿಕೆಗಾಗಿ ಪಟ್ಟು ಹಿಡಿದು ಹೋರಾಟ ನಡೆಸಿದ್ದರು.

ಬಿಜೆಪಿ ರಾಜ್ಯವನ್ನು ಒಡೆಯುವ ಹುನ್ನಾರ ನಡೆಸು­ತ್ತಿದೆ ಎಂಬ ಶಿವಸೇನಾ ಆರೋ­ಪದ ಕಾರಣ ಈ ಬಾರಿಯ ವಿಧಾನಸಭಾ ಚುನಾ­ವಣೆಯಲ್ಲಿ ಫಡ್ನವೀಸ್‌ ಎಲ್ಲಿಯೂ ವಿದರ್ಭ ಪ್ರತ್ಯೇಕ ರಾಜ್ಯದ ಬೇಡಿಕೆ ಪ್ರಸ್ತಾಪ ಮಾಡಿರಲಿಲ್ಲ. ಹಿಂದಿನ ಎನ್‌ಸಿಪಿ–ಕಾಂಗ್ರೆಸ್‌ ನೇತೃ­ತ್ವದ ಸರ್ಕಾ­ರದ ಅವಧಿಯಲ್ಲಿ ನಡೆದ ನೀರಾ­ವರಿ ಹಗರಣವನ್ನು ಬೆಳಕಿಗೆ ತರುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT