ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಕಾನೂನು ತಿದ್ದುಪಡಿ ಸುತ್ತ...

Last Updated 26 ಆಗಸ್ಟ್ 2015, 19:44 IST
ಅಕ್ಷರ ಗಾತ್ರ

ಕೇಂದ್ರದಲ್ಲಿ ಆಡಳಿತ ನಡೆಸಿದ ಸರ್ಕಾರಗಳು ಕಾರ್ಮಿಕ ಕಾನೂನುಗಳ ಆಶಯವನ್ನು ಮೊಟಕುಗೊಳಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನೂ ಮಾಡಿವೆ. ಈಗಿನ ಸರ್ಕಾರವೂ ಅದೇ ಹಾದಿಯಲ್ಲಿ ನಡೆದಿದೆ.

ಕಾರ್ಮಿಕರ ಹಿತಕ್ಕಾಗಿ ಇರುವ ಕಾನೂನುಗಳು ದುಡಿಯುವ ವರ್ಗದ ಅನೇಕ ದಶಕಗಳ ಹೋರಾಟಗಳ ಫಲಶ್ರ್ರುತಿ. ದೇಶದಲ್ಲಿ ದುಡಿಯುವ ವರ್ಗದ ಸುಮಾರು ಶೇ 93ರಷ್ಟು ಮಂದಿ ಅಸಂಘಟಿತ ವಲಯದಲ್ಲಿ, ಉಳಿದ ಶೇ 7ರಷ್ಟು ನೌಕರರು ಸಂಘಟಿತ ವಲಯದಲ್ಲಿದ್ದಾರೆ.

ಅಸಂಘಟಿತ ವಲಯದ ಅಸಂಖ್ಯಾತ ಕಾರ್ಮಿಕರಿಗೆ ಕಾರ್ಮಿಕ ಕಾನೂನುಗಳ ಸಮರ್ಪಕ ಜಾರಿ ಗಗನಕುಸುಮವೇ ಸರಿ. ಇತ್ತೀಚಿನ ದಶಕಗಳಲ್ಲಿ ಸಂಘಟಿತ ವಲಯದ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳಲ್ಲಿ, ರಾಜ್ಯ, ಕೇಂದ್ರ ಸರ್ಕಾರಗಳ ಘಟಕಗಳಲ್ಲಿ ಅರೆಕಾಲಿಕ, ಗುತ್ತಿಗೆ ನೌಕರಿಗೇ ಪ್ರಾಶಸ್ತ್ಯ ನೀಡಲಾಗುತ್ತಿದೆ. ರೈಲ್ವೆ, ರಕ್ಷಣೆ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ವಿಪುಲ ವಿದೇಶಿ ನೇರ ಬಂಡವಾಳಕ್ಕೆ ನೀಡುತ್ತಿರುವ ಪಾರಮ್ಯ, ರೈತರ ಹಿತಾಸಕ್ತಿಗೆ ಮಾರಕವಾಗುವ ಬದಲಾವಣೆಗಳನ್ನು ಭೂ ಸ್ವಾಧೀನ ಕಾಯ್ದೆಯಲ್ಲಿ ಅಡಕಗೊಳಿಸುವ ಸರ್ಕಾರದ ಪ್ರಯತ್ನಗಳ ಹಿನ್ನೆಲೆಯಲ್ಲಿ ಕಾರ್ಮಿಕ ಕ್ಷೇತ್ರದ ಸುಧಾರಣೆಗಳನ್ನು ವಿಶ್ಲೇಷಿಸಿದಾಗ, ಈ ಸರ್ಕಾರದ ಗುರಿಗಳೇನು ಎಂಬುದು ವೇದ್ಯವಾಗುತ್ತದೆ.

ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿರುವ, ಮಾಡಲಿಚ್ಛಿಸುವ ಕೆಲವು ಕಾರ್ಮಿಕ ಕಾನೂನುಗಳ ಅಂಶಗಳು ಕಾರ್ಮಿಕ ವಿರೋಧಿಗಳಾಗಿರುವುದನ್ನು ಖಂಡಿಸಿ  ಕೇಂದ್ರೀಯ ಕಾರ್ಮಿಕ ಸಂಘಟನೆಗಳು, ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಬ್ಯಾಂಕ್, ವಿಮೆ ಮತ್ತಿತರ ಸಂಘಟಿತ ಮತ್ತು ಅಸಂಘಟಿತ ವಲಯಗಳ ಕಾರ್ಮಿಕ ಸಂಘಗಳು ಬರುವ ಸೆಪ್ಟೆಂಬರ್ 2ರಂದು ಅಖಿಲ ಭಾರತ ಮಟ್ಟದ ಮುಷ್ಕರಕ್ಕೆ ಕರೆ ನೀಡಿವೆ.

ಕೇಂದ್ರ ಸರ್ಕಾರದ ಕಾರ್ಮಿಕ ಸಚಿವಾಲಯ 44 ಕೇಂದ್ರೀಯ ಕಾರ್ಮಿಕ ಕಾನೂನುಗಳನ್ನು ನಾಲ್ಕು ಸಂಹಿತೆಗಳನ್ನಾಗಿ ಪರಿವರ್ತಿಸುವ ಯೋಜನೆಯನ್ನು ಹೊಂದಿದೆ. 40 ಕಾರ್ಮಿಕರಿಗಿಂತಲೂ ಕಡಿಮೆಯಿರುವ ಕಾರ್ಖಾನೆಗಳು ಮತ್ತು ಘಟಕಗಳಿಗೆ (ಉತ್ಪಾದನಾ) 14 ಪ್ರಮುಖ ಕಾರ್ಮಿಕ ಕಾನೂನುಗಳಿಂದ ವಿನಾಯಿತಿ ನೀಡಲಾಗುತ್ತದೆ. ಅವೆಂದರೆ- ಕೈಗಾರಿಕಾ ವಿವಾದಗಳ ಕಾಯ್ದೆ, ಕನಿಷ್ಠ ಕೂಲಿ ಕಾಯ್ದೆ, ವೇತನ ಸಂದಾಯ ಕಾಯ್ದೆ, ಕಾರ್ಖಾನೆಗಳ ಕಾಯ್ದೆ, ಉದ್ಯೋಗಿಗಳ ಭವಿಷ್ಯ ನಿಧಿ ಮತ್ತು ಇತರ ಅವಕಾಶಗಳ ಕಾಯ್ದೆ, ಉದ್ಯೋಗಿಗಳ ವಿಮೆ ಕಾಯ್ದೆ, ಗ್ರಾಚುಯಿಟಿ ಕಾಯ್ದೆ, ಪ್ರಸೂತಿ ಸೌಲಭ್ಯ ಕಾಯ್ದೆ, ಬೋನಸ್ ಸಂದಾಯ ಕಾಯ್ದೆ, ಕಾರ್ಮಿಕ ಪರಿಹಾರ ಕಾಯ್ದೆ ಇತ್ಯಾದಿ. ತಿದ್ದುಪಡಿಯಿಂದ ಸಣ್ಣ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು ಶೇ 70ರಷ್ಟು ಕಾರ್ಮಿಕರು ಈ ಕಾಯ್ದೆಗಳ ರಕ್ಷಣೆ ಮತ್ತು ಸೌಲಭ್ಯಗಳಿಂದ ವಂಚಿತರಾಗುತ್ತಾರೆ.

ಪ್ರಸ್ತುತ ಕೈಗಾರಿಕಾ ವಿವಾದಗಳ ಕಾಯ್ದೆಯ ಅನ್ವಯ 100 ಕಾರ್ಮಿಕರನ್ನು ವಜಾ ಮಾಡಬೇಕಿದ್ದರೆ ಸರ್ಕಾರದಿಂದ ಅನುಮತಿ ತೆಗೆದುಕೊಳ್ಳಬೇಕು. ಈ ಸಂಖ್ಯೆಯನ್ನು 300ಕ್ಕೆ ಏರಿಸುವ ಇರಾದೆಯಿದೆ. ಕಳೆದ ವರ್ಷ ಮ್ಯಾಕಿನ್ಸೆ (McKinsey) ಪ್ರಕಟಿಸಿದ ದತ್ತಾಂಶಗಳ ಅನ್ವಯ, 2009ರಲ್ಲಿ ದೇಶದಲ್ಲಿ 50ಕ್ಕೂ ಕಡಿಮೆ ಕಾರ್ಮಿಕರನ್ನು ಹೊಂದಿರುವ ಘಟಕಗಳು ಶೇ 84ರಷ್ಟಿದ್ದವು.  ಚೀನಾದಲ್ಲಿ ಇದ್ದದ್ದು ಶೇ 25 ಮಾತ್ರ.  ತಾಂತ್ರಿಕ ಅಭಿವೃದ್ಧಿ ತ್ವರಿತವಾಗಿ ಮಾನವ ಶ್ರಮವನ್ನು ಕುಗ್ಗಿಸುತ್ತಿರುವ ಇಂದಿನ ದಿನಗಳಲ್ಲಿ ಈ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಂಭವ ತೀರಾ ಕಡಿಮೆ. ಅಂದರೆ ಇನ್ನು ಮುಂದೆ 300ಕ್ಕಿಂತಲೂ ಕಡಿಮೆ ಕಾರ್ಮಿಕರಿರುವ ಕಾರ್ಖಾನೆಗಳ/ ಉತ್ಪಾದನಾ ಘಟಕಗಳ ಆಡಳಿತ ಮಂಡಳಿಗಳು ತಮ್ಮ ಇಚ್ಛಾನುಸಾರ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಬಹುದು! ದೇಶದಲ್ಲಿ ಬಂಡವಾಳ ಹೂಡಿಕೆಗೆ ಪೂರಕವಾಗುವ ವಾತಾವರಣವನ್ನು ಕಲ್ಪಿಸಲು ಇಂಥ ಕ್ರಮ ಅವಶ್ಯ ಎಂಬುದು ಸರ್ಕಾರದ ನಿಲುವು.

ಭವಿಷ್ಯದಲ್ಲಿ ಬಹುತೇಕ ಎಲ್ಲ ಘಟಕಗಳಲ್ಲಿ ಮುಷ್ಕರ ಹೂಡುವುದು ಅಸಂಭವ ಆಗಬಹುದು. ಏಕೆಂದರೆ ಎಲ್ಲ ಕೈಗಾರಿಕಾ ಘಟಕಗಳಲ್ಲಿ ಎರಡು ವಾರಗಳ ಮೊದಲೇ ಮುಷ್ಕರದ ನೋಟಿಸ್ ನೀಡಬೇಕಾಗುತ್ತದೆ. ಹೀಗೆ ನೀಡದೆ ಮುಷ್ಕರ ಹೂಡಿದರೆ ಹಾಗೂ ಸಂಧಾನ ನಡಾವಳಿ ಶುರುವಾದ ಕೂಡಲೇ ಮುಷ್ಕರ ಜರುಗಿದರೆ, ಅಂತಹ ಮುಷ್ಕರವನ್ನು ಕಾನೂನುಬಾಹಿರ ಎಂದು ಘೋಷಿಸಲು ಸರ್ಕಾರ ಯೋಜಿಸುತ್ತಿದೆ. ವಿಪರ್ಯಾಸವೆಂದರೆ, ಸಂಧಾನ ಅಧಿಕಾರಿಗೆ ನೋಟಿಸ್ ತಲುಪಿದ ಕೂಡಲೇ ಸಂಧಾನ ನಡಾವಳಿ ಶುರುವಾಗುತ್ತದೆ ಹಾಗೂ ಈ ಅಧಿಕಾರಿ ಬಾಧಿತ ಕಾರ್ಮಿಕರನ್ನು ಮಾತುಕತೆಗೆ ಕರೆಸುವ ಅಥವಾ ಸಂಪರ್ಕಿಸುವ ಕ್ರಮ ತೆಗೆದುಕೊಳ್ಳಬೇಕಿಲ್ಲ. ಆದಾಗ್ಯೂ ಕಾರ್ಮಿಕರು ಮುಷ್ಕರ ಹೂಡಿದರೆ,  ಕಾರ್ಮಿಕ ಸಂಘವನ್ನು ಅಮಾನ್ಯ ಮಾಡಲಾಗುತ್ತದೆ.

ಪ್ರಸ್ತುತ 7 ಕಾರ್ಮಿಕರು ಕಾರ್ಮಿಕ ಸಂಘವನ್ನು ನೋಂದಾಯಿಸಬಹುದು. ಈ ಸಂಖ್ಯೆಯನ್ನು 100ಕ್ಕೆ ಏರಿಸಲು ಸರ್ಕಾರ ಮುಂದಾಗಿದೆ.  ಸಂಘಟಿತ ವಲಯದಲ್ಲಿ ಹೊರಗಡೆಯವರು ಕಾರ್ಮಿಕ ಸಂಘವೊಂದರ ಪದಾಧಿಕಾರಿಗಳಾಗದಂತೆ ನಿರ್ಬಂಧ ಹೇರಲು, ಅಸಂಘಟಿತ ವಲಯದಲ್ಲಿ ಕಾರ್ಮಿಕ ಸಂಘವೊಂದರಲ್ಲಿ ಹೊರಗಡೆಯ ಇಬ್ಬರು ಮಾತ್ರ ಪದಾಧಿಕಾರಿಗಳಾಗುವಂತೆ (ಈಗ ಶೇ 50ರಷ್ಟಿದೆ) ಅವಕಾಶ ಕಲ್ಪಿಸಲು ಸರ್ಕಾರ ಸಜ್ಜಾಗಿದೆ.

ಕೈಗಾರಿಕಾ ಉದ್ಯೋಗ (ಸ್ಥಾಯಿ ಆಜ್ಞೆಗಳು) ನಿಬಂಧನೆಗಳಲ್ಲಿ ‘ನಿಗದಿತ ಅವಧಿಯ ಉದ್ಯೋಗ’ ಎಂಬ ಅಂಶವನ್ನು  ಸೇರಿಸಲಾಗುತ್ತದೆ. ಇದರರ್ಥ ಕಾಯಂ ಉದ್ಯೋಗಕ್ಕೆ ಕತ್ತರಿ ಪ್ರಯೋಗ!

ಕನಿಷ್ಠ ಕೂಲಿ ಕಾಯ್ದೆಯಡಿ 15ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಮಾದರಿ ಸೂತ್ರ ಮತ್ತು ನಂತರದ ಸುಪ್ರೀಂಕೋರ್ಟ್‌ ತೀರ್ಪಿನಂತೆ ಕನಿಷ್ಠ ಕೂಲಿಯನ್ನು ನಿಗದಿಪಡಿಸುವ ಬದಲು ಏಕರೂಪದ (‘National Floor Level Minimum Wage’) ಕನಿಷ್ಠ ಕೂಲಿ ಯೋಜನೆ ಜಾರಿಗೆ ಉದ್ದೇಶಿಸಲಾಗಿದೆ.  ಅದರಂತೆ ಕನಿಷ್ಠ ಕೂಲಿ ತಿಂಗಳಿಗೆ  ₹ 3400– 3500 ಇರುತ್ತದೆ ಅಷ್ಟೇ.

ಹಾಲಿ ಇರುವ 8 ಗಂಟೆ ಕೆಲಸದ ಅವಧಿಯನ್ನು ತೆಗೆದುಹಾಕಿ, ದಿನಕ್ಕೆ ಕೆಲಸದ ಅವಧಿ ಎಷ್ಟಿರಬೇಕೆಂಬ ವಿಚಾರವನ್ನು ಸರ್ಕಾರದ ಅಧಿಕಾರದ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿ, ಆರೋಗ್ಯ ವಿಮೆ ಕಾಯ್ದೆ ಅನುಷ್ಠಾನವನ್ನು ಐಚ್ಛಿಕಗೊಳಿಸಲಾಗುತ್ತದೆ. ಅಭ್ಯಾಸಿಗಳ ಕಾಯ್ದೆಯನ್ನು (Apprentices Act) ಈಗಾಗಲೇ ತಿದ್ದುಪಡಿ ಮಾಡಲಾಗಿದೆ. ತರಬೇತಿ ಪಡೆಯುವ ಇಂಥ ಅಭ್ಯಾಸಿಗಳ ಸಂಖ್ಯೆಯ ಬಗೆಗೆ ಯಾವುದೇ ಕಟ್ಟುಪಾಡನ್ನು ನಿಗದಿಪಡಿಸಲಾಗಿಲ್ಲ. ಹೀಗಾಗಿ ಕಾಯಂ ಮತ್ತು ಗುತ್ತಿಗೆ ಕಾರ್ಮಿಕರ ಬದಲು ಅಭ್ಯಾಸಿಗಳಿಗೆ ಮಣೆ ಹಾಕಲು ಕಾರ್ಖಾನೆಗಳ, ಉತ್ಪಾದನಾ ಘಟಕಗಳ ಆಡಳಿತ ಮಂಡಳಿಗಳು ಆಸ್ಥೆ ವಹಿಸುತ್ತವೆ.  ಏಕೆಂದರೆ ಅವು ಇಂತಹ ಅಭ್ಯಾಸಿಗಳಿಗೆ ಕನಿಷ್ಠ ಕೂಲಿ ಸಹ ನೀಡಬೇಕಿಲ್ಲ.

ಕನಿಷ್ಠ ಕೂಲಿ ನಿಗದಿ, ಗುತ್ತಿಗೆ ನೌಕರರಿಗೂ ಕಾಯಂ ನೌಕರರಿಗೆ ದೊರಕುವ ಸೌಲಭ್ಯ ವಿಸ್ತರಣೆ, ಅಂಗನವಾಡಿ, ಮಧ್ಯಾಹ್ನದ ಊಟ, ಆಶಾದಂಥ ಯೋಜನೆಯ ಕೆಲಸಗಾರರನ್ನೂ ‘ನೌಕರ’ರೆಂದು ಪರಿಗಣಿಸಬೇಕೆಂಬ ಕಾರ್ಮಿಕ ಸಮ್ಮೇಳನಗಳ ಶಿಫಾರಸುಗಳಿಗೆ ಸರ್ಕಾರ ಸ್ಪಂದಿಸಿಲ್ಲ. ಹೀಗೆ, ಮೇಲೆ ಪ್ರಸ್ತಾಪಿಸಿರುವ ನಾಲ್ಕು ಸಂಹಿತೆಗಳಲ್ಲಿ ಕಾರ್ಮಿಕ ಸಂಘಗಳ ಚಟುವಟಿಕೆಗಳಿಗೆ ವಿಘ್ನ ತರುವಂತಹ ಅನೇಕ ಸೂಚನೆಗಳಿವೆ. ಈಗಾಗಲೇ ಬಿಜೆಪಿ ಆಡಳಿತ ನಡೆಸುತ್ತಿರುವ ರಾಜಸ್ತಾನ, ಗುಜರಾತ್ ಮತ್ತು ಮಧ್ಯ ಪ್ರದೇಶ ಸರ್ಕಾರಗಳು ಈ ಸಂಹಿತೆಗಳಲ್ಲಿ ಉಲ್ಲೇಖಗೊಂಡಿರುವ ಅನೇಕ ಪ್ರಸ್ತಾಪಗಳನ್ನು ಜಾರಿಗೊಳಿಸಿವೆ.

ಕಾರ್ಮಿಕ ಸಂಘಗಳು ವಾರ್ಷಿಕ ಸಾಮಾನ್ಯ ಸಭೆಗಳನ್ನು ನಡೆಸುವ ಕಟ್ಟಾಜ್ಞೆ, ತಮ್ಮ ತಖ್ತೆಗಳ ಸರಿಯಾದ ನಿರ್ವಹಣೆ, ಎರಡು ವರ್ಷಗಳಿಗೊಮ್ಮೆಯಾದರೂ ಪದಾಧಿಕಾರಿ ಸ್ಥಾನಗಳಿಗೆ ಚುನಾವಣೆ ನಡೆಸಬೇಕೆಂಬುದು ಈ ಸಂಹಿತೆಗಳ ಸಕಾರಾತ್ಮಕ ಸಂಗತಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT