ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಕಾಯ್ದೆ ತಿದ್ದುಪಡಿ ಬೇಡ

Last Updated 3 ಸೆಪ್ಟೆಂಬರ್ 2015, 10:27 IST
ಅಕ್ಷರ ಗಾತ್ರ

ರಾಮನಗರ: ಕಾರ್ಮಿಕ ವಿರೋಧಿ ಅಂಶಗಳನ್ನು ಸೇರಿಸಿ ಕಾರ್ಮಿಕ ಕಾಯ್ದೆಯನ್ನು ಸಮಗ್ರವಾಗಿ ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರದ ಎನ್‌ಡಿಎ ಸರ್ಕಾರದ ಧೋರಣೆಯನ್ನು ಖಂಡಿಸಿ ಗುತ್ತಿಗೆ ಪೌರ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಅಂಚೆ ಕಚೇರಿ ಎದುರು ಬುಧವಾರ ಪ್ರತಿಭಟಿಸಿದರು.

‘ಭಾರತವನ್ನು ಬದಲಾಯಿಸಿ ಬಿಡುತ್ತೇವೆ’, ‘ಭಾರತದ ಜನರನ್ನು ಸುಖದ ಸಂಭ್ರಮದಲ್ಲಿ ತೇಲಿಸಿ ಬಿಡುತ್ತೇವೆ’ ಎಂಬ ಹುಸಿ ಘೊಷಣೆಗಳ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ನಿಜವಾದ ಬಣ್ಣ ಕಾರ್ಮಿಕರಿಗೆ ಹಾಗೂ ದೇಶದ ಜನರಿಗೆ ಈಗ ಅರ್ಥವಾಗುತ್ತಿದೆ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದರು.

ಉದ್ದೇಶಿತ ವಿವಾದಾತ್ಮಕ ಭೂಸ್ವಾಧೀನ ಮಸೂದೆಯನ್ನು ಬಲವಂತವಾಗಿ ಜಾರಿಗೆ ತರಲು ಹೋಗಿ ವಿಫಲವಾದ ಬಿಜೆಪಿ ಸರ್ಕಾರ ಈಗ ಕಾರ್ಮಿಕ ಕಾಯಿದೆಗಳಿಗೆ ತಿದ್ದುಪಡಿಗೆ ಮುಂದಾಗಿದೆ. ಈ ಮೂಲಕ ದೇಶದ ಕೋಟ್ಯಂತರ ಕಾರ್ಮಿಕರ ಹಕ್ಕುಗಳನ್ನು ಕಸಿಯಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗುತ್ತಿಗೆ ಪೌರಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದೇವೇಂದ್ರ ಮಾತನಾಡಿ, ನೂರಾರು ವರ್ಷಗಳಿಂದ ಕಾರ್ಮಿಕರು ಹೋರಾಟದ ಮೂಲಕ ಗಳಿಸಿದ ಹಲವು ನ್ಯಾಯಯುತ ಹಕ್ಕುಗಳನ್ನು ತಿದ್ದುಪಡಿಯ ಮೂಲಕ ಒಂದೇ ಏಟಿಗೆ ಇಲ್ಲವಾಗುವಂತೆ ಮಾಡಲು ಕೇಂದ್ರ ಸರ್ಕಾರ ಹೊರಟಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಕನಿಷ್ಠ ವೇತನ ಕಾಯ್ದೆ, ಪಿ.ಎಫ್. ಕಾಯ್ದೆ ಇದ್ದಾಗಲು ಇವುಗಳನ್ನು ಪಡೆಯುವುದು ಕಷ್ಟವಾಗಿದೆ. ಇನ್ನು ಇರುವ ಕಾಯ್ದೆಗೆ ತಿದ್ದುಪಡಿ ತಂದು ಅದನ್ನು ಮತ್ತಷ್ಟು ಜಟಿಲ ಮಾಡಲು ಸರ್ಕಾರ ಮುಂದಾಗಿದೆ. ಈ ತಿದ್ದುಪಡಿ ಅಂಶಗಳು ಕಾಯ್ದೆಯ ರೂಪದಲ್ಲಿ ಬಂದರೆ ಕಾರ್ಮಿಕರು ತನ್ನ ಕನಿಷ್ಠ ವೇತನ, ಪಿ.ಎಫ್. ಪಡೆಯುವ ಹಕ್ಕಿನಿಂದಲೂ ವಂಚಿತರಾಗಬೇಕಾಗುತ್ತದೆ. ಕಾರ್ಮಿಕರನ್ನು ಅನುಕೂಲಕ್ಕೆ ತಕ್ಕಂತೆ ಕೆಲಸದಿಂದ ಹೊರಹಾಕುವ ಪ್ರವೃತ್ತಿಗಳು ಹೆಚ್ಚಾಗುತ್ತವೆ. ಈ ತಿದ್ದುಪಡಿ ಅಂಶಗಳು ಕಾರ್ಖಾನೆ ಮಾಲೀಕರು, ಬಂಡವಾಳ ಶಾಹಿಗಳ ರಕ್ಷಣೆಯ ಉದ್ದೇಶವನ್ನು ಮಾತ್ರ ಹೊಂದಿವೆ ಎಂದರು.

ಉದ್ದೇಶಿತ ಕಾರ್ಮಿಕ ಕಾಯ್ದೆ ತಿದ್ದುಪಡಿಯಿಂದ ಕಾರ್ಮಿಕರು ಈವರೆಗೆ ಗಳಿಸಿರುವ ಕನಿಷ್ಠ ವೇತನ, ಪಿ.ಎಫ್ ಭವಿಷ್ಯ ನಿಧಿ ಎಲ್ಲವನ್ನು ಕಳೆದುಕೊಳ್ಳಲ್ಲಿದ್ದಾರೆ. ಇವುಗಳನ್ನು ಕೊಡುವುದು, ನೀಡುವುದು ಮಾಲೀಕನ ಇಲ್ಲವೆ ಗುತ್ತಿಗೆದಾರನ ಇಚ್ಛೆಗೆ ಬಿಟ್ಟ ವಿಚಾರವಾಗುತ್ತದೆ. ಇದಲ್ಲದೆ ಚಿಲ್ಲರೆ ಮಾರಾಟದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅನುಕೂಲ ಮಾಡಿಕೊಡುವುದರಿಂದ ದೇಶಿಯ ವ್ಯಾಪಾರಿಗಳು ನೆಲ ಕಚ್ಚಲಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಗುತ್ತಿಗೆ ಪೌರಕಾರ್ಮಿಕರ ಸಂಘದ ಗೌರವಾಧ್ಯಕ್ಷ ರಾಜು, ಕಾರ್ಯದರ್ಶಿ ಎಲ್.ಚಂದ್ರಶೇಖರ್, ಉಪಾಧ್ಯಕ್ಷ ಆರ್. ಮೋಹನ್, ಖಜಾಂಚಿ ಚಿನ್ನಕ್ಕ, ಸಹಕಾರ್ಯದರ್ಶಿ ವೆಂಕಟರಾಮನ್, ಕರುನಾಡ ಸೇನೆಯ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ಜಗದೀಶ್, ಜಿಲ್ಲಾ ಘಟಕದ ಅಧ್ಯಕ್ಷ ಜಯಕುಮಾರ್ ಇತರರು  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT