ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಮುಷ್ಕರ

ಸಿಐಟಿಯು, ಎಐಟಿಯುಸಿ, ಟಿಯುಸಿಸಿ, ಐಎನ್‌ಟಿಯುಸಿ ಸಂಘಟನೆಗಳು ಭಾಗಿ
Last Updated 2 ಸೆಪ್ಟೆಂಬರ್ 2015, 20:01 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ನೀತಿ, ರಸ್ತೆ ಸುರಕ್ಷತಾ ಮಸೂದೆ ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದವು.

ಸಿಐಟಿಯು, ಎಐಟಿಯುಸಿ, ಟಿಯುಸಿಸಿ, ಐಎನ್‌ಟಿಯುಸಿ, ಎಚ್ಎಂಎಸ್‌ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಪುರಭವನದ ಬಳಿ ಸೇರಿದ ಕಾರ್ಮಿಕರು ರಸ್ತೆ ತಡೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಪ್ರತಿಭಟನಾಕಾರರು ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಸ್ವಾತಂತ್ರ್ಯ ಉದ್ಯಾನದ ಬಳಿಯ ಕಾಳಿದಾಸ ಮಾರ್ಗದಲ್ಲಿ ಪ್ರತಿಭಟನಾ ಸಭೆ ನಡೆಸಿದರು.

ಈ ವೇಳೆ ಮಾತನಾಡಿದ  ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಅನಂತಸುಬ್ಬರಾವ್, ‘ಕೇಂದ್ರ ಸರ್ಕಾರದ ನೀತಿಗಳು ಕಾರ್ಪೊರೇಟ್‌ ಕಂಪೆನಿಗಳು, ವಿದೇಶಿ ಬಂಡವಾಳಗಾರರ ಪರವಾಗಿವೆ. ಪ್ರಧಾನಿ ಮೋದಿ ಅವರು ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತಂದು ದೇಶದ ಕಾರ್ಮಿಕರನ್ನು ಬಹುರಾಷ್ಟ್ರೀಯ ಕಂಪೆನಿಗಳು ಹಾಗೂ ಕಾರ್ಪೊರೇಟ್‌ ಉದ್ದಿಮೆಗಳ ಗುಲಾಮರನ್ನಾಗಿ ಮಾಡಲು ಹೊರಟಿದ್ದಾರೆ’ ಎಂದು ಟೀಕಿಸಿದರು.

ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷ ವಿ.ಜೆ.ಕೆ.ನಾಯರ್‌ ಮಾತನಾಡಿ, ‘ಕಾರ್ಮಿಕ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ ದೇಶದಲ್ಲಿ ಕಾರ್ಮಿಕ ಕಾನೂನುಗಳು ಜಾರಿಗೆ ಬಂದಿವೆ. ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ  ತರಲು ಹೊರಟಿರುವುದು ಕೇಂದ್ರ ಸರ್ಕಾರದ  ಕಾರ್ಮಿಕ ವಿರೋಧಿ ನೀತಿಗೆ ಸಾಕ್ಷಿ’ ಎಂದು ಟೀಕಿಸಿದರು.

ಐಎನ್‌ಟಿಯುಸಿ ಮುಖಂಡ ಶಾಂತಕುಮಾರ್ ಮಾತನಾಡಿ, ‘ಕೇಂದ್ರ ಸರ್ಕಾರವು ಮಾಲೀಕರ ಪರವಾಗಿದೆ. ಅವರಿಗೆ ಲಾಭ ಮಾಡಿ ಕೊಡಲು ಹೊಸ ಕಾರ್ಮಿಕ ನೀತಿ ತರಲು ಹೊರಟಿದೆ’ ಎಂದರು.

ಕೆಪಿಸಿಸಿ ಕಾರ್ಮಿಕ ವಿಭಾಗ ಪ್ರತಿಭಟನೆ: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ (ಕೆಪಿಸಿಸಿ) ಕಾರ್ಮಿಕ ವಿಭಾಗದ ಸದಸ್ಯರು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

‘ಕೇಂದ್ರ ಸರ್ಕಾರವು ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರುವ ಬದಲಿಗೆ ದೇಶದಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಇಎಸ್‌ಐ, ಪಿಎಫ್‌ ಸೇರಿದಂತೆ ಮೂಲ ಸೌಕರ್ಯ ಒದಗಿಸಬೇಕು’ ಎಂದು ಕಾರ್ಮಿಕ ವಿಭಾಗದ ಅಧ್ಯಕ್ಷ ಎಸ್.ಎಸ್.ಪ್ರಕಾಶಂ  ಅಗ್ರಹಿಸಿದರು.

ಮುಷ್ಕರದಲ್ಲಿ ಭಾಗವಹಿಸಿದ್ದ ಸಂಘಟನೆಗಳು: ಹಮಾಲಿ ಕಾರ್ಮಿಕರ ಫೆಡರೇಷನ್, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಸಂಘ, ರಾಜ್ಯ ಅಂಗನವಾಡಿ ನೌಕರರ ಸಂಘ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್, ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿ, ರಾಜ್ಯ ಕೇಂದ್ರ ಸರ್ಕಾರಿ ನೌಕರರು ಮತ್ತು ಕೆಲಸಗಾರರ ಸಮನ್ವಯ ಸಮಿತಿ, ಅಖಿಲ ಕರ್ನಾಟಕ ಸರ್ಕಾರಿ ನೌಕರರ ಒಕ್ಕೂಟ, ಗಾರ್ಮೆಂಟ್ಸ್‌ ಕಾರ್ಮಿಕರ ಸಂಘ.

ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ: ಮುಷ್ಕರದ ಭಾಗವಾಗಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು. ಎಐಡಿಎಸ್‌ಒ, ಎಸ್‌ಎಫ್‌ಐ, ಎಐಎಸ್‌ಎಫ್, ಡಿಎಸ್‌ಎಫ್‌, ಎಐಡಿವೈಒ, ಡಿವೈಎಫ್‌ಐ, ಎಐಎಂಎಸ್‌್ಎಸ್‌ ಸಂಘಟನೆ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಬೇಡಿಕೆಗಳು: ಶಿಕ್ಷಣದ ಕೋಮುವಾದೀಕರಣ ಮತ್ತು ವ್ಯಾಪಾರೀಕರಣ ನಿಲ್ಲಿಸಬೇಕು. ಶಿಕ್ಷಣಕ್ಕಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಶೇಕಡಾ 30 ಮತ್ತು ಕೇಂದ್ರ ಸರ್ಕಾರ ಶೇಕಡಾ 10 ರಷ್ಟು ಹಣ ಮೀಸಲಿಡಬೇಕು. ಸರ್ಕಾರಿ ಶಾಲೆ, ಕಾಲೇಜುಗಳು ಹಾಗೂ ಎಲ್ಲ ವಿಶ್ವವಿದ್ಯಾಲಯಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು. ಹಾಸ್ಟೆಲ್‌ ವಿದ್ಯಾರ್ಥಿಗಳ ಮಾಸಿಕ ಆಹಾರ ಭತ್ಯೆಯನ್ನು ₹ 3,500 ಕ್ಕೆ ಹೆಚ್ಚಿಸಬೇಕು. ಖಾಲಿ ಇರುವ ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು. ವೃತ್ತಿ ಶಿಕ್ಷಣ ಸೀಟುಗಳ ಮಾರಾಟ ತಡೆಗಟ್ಟಬೇಕು.

ಶಾಂತಿಯುತ ಬಂದ್– ಕಮಿಷನರ್: ‘ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದಿರುವುದು ಬಿಟ್ಟರೆ, ಯಾವುದೇ ಅಹಿತಕರ ಘಟನೆಗಳಿಲ್ಲದೆ ನಗರದಲ್ಲಿ ಬಂದ್‌ ಶಾಂತಿಯುತವಾಗಿ ಪೂರ್ಣಗೊಂಡಿತು’ ಎಂದು ನಗರ ಪೊಲೀಸ್ ಕಮಿಷನರ್ ಎನ್.ಎಸ್.ಮೇಘರಿಕ್ ತಿಳಿಸಿದರು.

‘ಬಂದ್‌ಗೆ ವ್ಯಾಪಕ ಬಂದೋಬಸ್ತ್‌ ಮಾಡಿಕೊಳ್ಳಲಾಗಿತ್ತು. ನಗರದ ಅಷ್ಟೂ ಸಿವಿಲ್ ಪೊಲೀಸರ ಜತೆಗೆ ಕೆಎಸ್‌ಆರ್‌ಪಿ ಹಾಗೂ ಸಿಎಆರ್‌ನ 42 ತುಕಡಿಗಳನ್ನು ಭದ್ರತೆಗೆ ಬಳಸಿಕೊಳ್ಳಲಾಯಿತು. ಕಿಡಿಗೇಡಿಗಳು ಬೆಳಿಗ್ಗೆ ಕೆಲವೆಡೆ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

34 ಬಸ್‌ಗಳಿಗೆ ಕಲ್ಲು: ಮೆಜೆಸ್ಟಿಕ್, ಕಾರ್ಪೊರೇಷನ್ ವೃತ್ತ, ಕುಂದಲಹಳ್ಳಿ ಗೇಟ್, ಡೈರಿ ವೃತ್ತ, ಮೈಸೂರು ಬ್ಯಾಂಕ್ ವೃತ್ತ, ಮೇಕ್ರಿ ವೃತ್ತ, ಕೆ.ಆರ್.ವೃತ್ತ, ಕೆ.ಆರ್.ಪುರ ಸಮೀಪದ ಓ ಫಾರಂ ಬಳಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದಿದೆ. 34 ಬಸ್‌ಗಳಿಗೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT