ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮೋಡದಲ್ಲಿ ಹೊಸ ಕೈಗಾರಿಕಾ ನೀತಿಯ ಬೆಳ್ಳಿಗೆರೆ

Last Updated 16 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ತಮ್ಮದು ಗ್ರಾಮೀಣರ ಮತ್ತು ಬಡವರ ಪರವಾದ ಸರ್ಕಾರ ಎಂದು ತೋರಿಸಿಕೊಳ್ಳುವುದಕ್ಕಾಗಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದ ಸತತವಾಗಿ ಶ್ರಮಿಸಿದೆ. ಮುಖ್ಯಮಂತ್ರಿಯ ವ್ಯಕ್ತಿತ್ವ, ಅವರಿಗಿರುವ ಅಹಿಂದ ಹಿನ್ನೆಲೆ, ಭಾರೀ ಪ್ರಮಾಣದ ಕಲ್ಯಾಣ ಯೋಜನೆಗಳೆಲ್ಲವೂ ಸಿದ್ದರಾಮಯ್ಯ ಸರ್ಕಾರದ ಕುರಿತ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಿವೆ. ಇದರಿಂದ ಹಲವು ರಾಜಕೀಯ ಲಾಭಗಳಿವೆ. ಆದರೆ ಇದು ಔದ್ಯಮಿಕ ನೀತಿಯಲ್ಲಿ ಸಿದ್ದರಾಮಯ್ಯ ಸರ್ಕಾರ ತಂದ ಪ್ರಜ್ಞಾಪೂರ್ವಕ ಪಲ್ಲಟವನ್ನು ಮರೆ ಮಾಚುವುದಕ್ಕೂ ಕಾರಣವಾಗಿದೆ. ದೂರಗಾಮಿಯಾದ ಪರಿಣಾಮ ಬೀರಬಲ್ಲ ಈ ಪಲ್ಲಟಕ್ಕೆ ಹೆಚ್ಚಿನ ಒತ್ತು ದೊರೆತಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮತ್ತೊಂದು ಮುಖ ಸಾರ್ವಜನಿಕರ ಗಮನಕ್ಕೆ ಬರುತ್ತಿತ್ತು.

ಮೇಲ್ನೋಟಕ್ಕೆ ಕಾಣಿಸುವಂತೆ ಸಿದ್ದರಾಮಯ್ಯ ಸರ್ಕಾರ ಕೈಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೂಲಭೂತವಾಗಿ ಭಿನ್ನವಾದ ಏನನ್ನೂ ಮಾಡಿಲ್ಲ. ಈ ಸರ್ಕಾರ ಒಂದು ಹೊಸ ಕೈಗಾರಿಕಾ ನೀತಿಯನ್ನು ಬಿಡುಗಡೆ ಮಾಡಿದೆ. ಇದನ್ನು ಹಿಂದಿನ ಸರ್ಕಾರಗಳೂ ಮಾಡಿದ್ದವು. ಈ ಸರ್ಕಾರ ಸಂಘಟಿಸಿದ ಜಾಗತಿಕ ಹೂಡಿಕೆದಾರರ ಸಮಾವೇಶವನ್ನೂ ಹಿಂದಿದ್ದ ಸರ್ಕಾರಗಳೂ ಮಾಡಿದ್ದವು. ನಿರ್ದಿಷ್ಟ ಉದ್ಯಮಗಳನ್ನು ಕೇಂದ್ರವಾಗಿಟ್ಟುಕೊಂಡ ಉಪಕ್ರಮಗಳ ವಿಚಾರವೂ ಅಷ್ಟೆ. ಹಿಂದಿನ ಸರ್ಕಾರಗಳೂ ಇದರಲ್ಲಿ ಹಿಂದುಳಿದಿರಲಿಲ್ಲ.

ಮೇಲ್ನೋಟಕ್ಕೆ ಎಲ್ಲರೂ ಮಾಡಿದ ಕೆಲಸಗಳಂತೆಯೇ ಕಾಣುವ ಈ ಕ್ರಿಯೆಗಳಲ್ಲೇ ಒಂದು ವಿಶಿಷ್ಟತೆ ಇದೆ. ಈ ವಿಶಿಷ್ಟತೆಯನ್ನು ಗುರುತಿಸುವುದಕ್ಕೆ ನಾವು ಕೇವಲ ಈ ಸರ್ಕಾರ ಮಾಡಿದ್ದೇನು ಎಂಬುದನ್ನು ನೋಡಿದರೆ ಸಾಕಾಗುವುದಿಲ್ಲ.  ಅದು ಮಾಡದೇ ಇದ್ದದ್ದೇನು ಎಂಬುದನ್ನು ಗಮನಿಸಬೇಕಾಗುತ್ತದೆ.
ಕೈಗಾರಿಕೆ ಮತ್ತು ಸೇವಾ ಕ್ಷೇತ್ರದ ಅಭಿವೃದ್ಧಿಗಾಗಿ ಅನುಸರಿಸಿದ ನೀತಿಯ ನೀಲಿ ನಕಾಶೆ ರೂಪುಗೊಂಡದ್ದು ಎಸ್.ಎಂ. ಕೃಷ್ಣ ಅವರ ಸರ್ಕಾರದ ಅವಧಿಯಲ್ಲಿ. ಐತಿಹಾಸಿಕವಾಗಿ ಬೆಂಗಳೂರಿಗೆ ದೊರೆತ ಅನುಕೂಲಗಳಿಂದ ರೂಪುಗೊಂಡಿದ್ದ ಬೆಂಗಳೂರಿನ ಆರ್ಥಿಕ ಬಲದ ಬೆಂಬಲ ಕೃಷ್ಣ ಅವರಿಗಿತ್ತು.

ಮಹಾರಾಜರ ಸರ್ಕಾರ ಬೆಂಗಳೂರಿನಲ್ಲಿ ವಿಜ್ಞಾನ ಶಿಕ್ಷಣಕ್ಕೆ ಒತ್ತು ನೀಡಿತ್ತು.  ಹಾಗೆಯೇ ಬೆಂಗಳೂರು ಕಂಟೋನ್ಮೆಂಟ್ ಪ್ರದೇಶದ ವಾತಾವರಣ ಬಡವರಿಗೆ ಇಂಗ್ಲಿಷ್ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿತ್ತು. ಇವೆರಡೂ ಸೇರಿದ್ದರ ಪರಿಣಾಮವಾಗಿ ಇಂಗ್ಲಿಷ್ ಅನ್ನು ಬಳಸಬಲ್ಲ ಎಂಜಿನಿಯರಿಂಗ್ ಶಿಕ್ಷಣ ಪಡೆದವರ ದೊಡ್ಡ ಸಮುದಾಯವನ್ನೇ ಸೃಷ್ಟಿಸಿತ್ತು. 1980ರ ದಶಕದ ಮಧ್ಯ ಭಾಗದಲ್ಲಿ ಸಂವಹನ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ಷಿಪ್ರಗತಿಯ ಬೆಳವಣಿಗೆಗಳು ನಡೆದಾಗ ಬೆಂಗಳೂರಿನ ಮಾನವ ಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ಅನೇಕ ಜಾಗತಿಕ ತಂತ್ರಜ್ಞಾನ ಕಂಪೆನಿಗಳು ತಮ್ಮ ಘಟಕಗಳನ್ನು ಆರಂಭಿಸಿದವು. ಇದು ಬೆಂಗಳೂರಿನಲ್ಲಿ ಐಟಿ ಉದ್ಯಮದ ಉತ್ಕರ್ಷಕ್ಕೆ ಕಾರಣವಾಯಿತು.

ಈ ವಾಸ್ತವವನ್ನು ಗಮನದಲ್ಲಿಟ್ಟುಕೊಂಡು ಎಸ್.ಎಂ. ಕೃಷ್ಣ ಅವರ ಸರ್ಕಾರ ತನ್ನ ಕೈಗಾರಿಕೆ ಮತ್ತು ಸೇವಾ ಕ್ಷೇತ್ರದ ಔದ್ಯಮಿಕ ಅಭಿವೃದ್ಧಿ ತಂತ್ರವನ್ನು ಹೆಣೆಯಿತು. ಇದು ಬೆಂಗಳೂರನ್ನು ಕರ್ನಾಟಕದ ಆರ್ಥಿಕತೆಯ ಮೂಲನೆಲೆಯನ್ನಾಗಿ ಇಟ್ಟುಕೊಂಡಿರುವ ಕೈಗಾರಿಕಾ ನೀತಿಗೆ ಕಾರಣವಾಯಿತು. ಈ ನೀತಿ ಬೆಂಗಳೂರಿನ ಮಾಹಿತಿ ತಂತ್ರಜ್ಞಾನದ ಬಲಕ್ಕೆ ಜೈವಿಕ ತಂತ್ರಜ್ಞಾನವನ್ನು ಸೇರಿಸಿತು. ಜಾಗತಿಕ ತಂತ್ರಜ್ಞಾನ ಭೂಪಟದಲ್ಲಿ ಬೆಂಗಳೂರಿಗೊಂದು ಸ್ಥಾನ ದೊರೆಯುವುದರಲ್ಲಿ ಈ ತಂತ್ರ ಪ್ರಮುಖ ಪಾತ್ರವಹಿಸಿತು. ಅಮೆರಿಕದ ಅನೇಕ ತಂತ್ರಜ್ಞಾನ ಕಂಪೆನಿಗಳು ತಮ್ಮ ಕೆಲಸಗಳನ್ನು ಬೆಂಗಳೂರಿನಲ್ಲಿ ಮಾಡಿಸಿಕೊಳ್ಳುವುದು ಅಗ್ಗ ಎಂದು ಭಾವಿಸಿದವು.

ಇದರ ಪರಿಣಾಮವಾಗಿ ಹೊರಗುತ್ತಿಗೆ ಆಧಾರಿತ ಉದ್ಯಮಗಳು ಬೆಳೆದವು. ಈ ಪ್ರಕ್ರಿಯೆಯಲ್ಲಿ ಅಮೆರಿಕದಲ್ಲಿ ಉದ್ಯೋಗ ಕಳೆದುಕೊಂಡವರು ತಮ್ಮ ಸ್ಥಿತಿಯನ್ನು ‘ಬ್ಯಾಂಗಲೋರ್ಡ್’ ಎಂದು ವಿವರಿಸುವಂತೆ ಆಯಿತು. ದೇಶದೊಳಗೂ ಇಂಥದ್ದೊಂದು ಸ್ಪರ್ಧೆ ಇತ್ತು. ಹೈದರಾಬಾದ್ ಮತ್ತು ಬೆಂಗಳೂರು ನಗರಗಳೆರಡೂ ಮಾಹಿತಿ ತಂತ್ರಜ್ಞಾನ ಸ್ನೇಹಿ ನಗರ ಎಂಬ ಹೆಗ್ಗಳಿಕೆಗಾಗಿ ಸ್ಪರ್ಧಿಸಿದವು. ಇವೆಲ್ಲವುಗಳ ಪರಿಣಾಮವಾಗಿ ಬೆಂಗಳೂರು ಬೆಳೆಯಿತು. ಇದು ರಾಜ್ಯದ ಆರ್ಥಿಕತೆಯೂ ಮೇಲೇರುವುದಕ್ಕೆ ಕಾರಣವಾಯಿತು.

ಕ್ಷಿಪ್ರ ಪ್ರಗತಿಯ ಧನಾತ್ಮಕ ಆಯಾಮದ ಮೇಲಷ್ಟೇ ಎಲ್ಲರ ಗಮನ ಇದ್ದುದರಿಂದ ಈ ಪ್ರಕ್ರಿಯೆಯಲ್ಲಿ ಕರ್ನಾಟಕ ಕಳೆದುಕೊಂಡದ್ದೇನು ಎಂಬುದು ಅರಿವಾಗಲೇ ಇಲ್ಲ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿರುವ ಮೂಲ ಸೌಕರ್ಯದ ಮಾದರಿಯನ್ನು ಅನುಕರಿಸುವ ಪ್ರಕ್ರಿಯೆಯಲ್ಲಿ ಅದಕ್ಕೆ ತಗುಲುವ ಖರ್ಚೇನು ಎಂದು ಯೋಚಿಸಲಿಲ್ಲ. ಅನುಕರಣೆಯೇ ಆದರ್ಶವಾಗಿಬಿಟ್ಟಿದ್ದರಿಂದ ದುಬಾರಿ ಆಯ್ಕೆಗಳಷ್ಟೇ ಕಾಣಿಸುತ್ತಿದ್ದವು. ಮಾತ್ರವಲ್ಲ ಕಡಿಮೆ ಖರ್ಚಿನ ಪರಿಣಾಮಕಾರಿ ಪರ್ಯಾಯಗಳನ್ನು ಕಡೆಗಣಿಸಲಾಯಿತು. ಬೆಂಗಳೂರು ಮಾಹಿತಿ ತಂತ್ರಜ್ಞಾನ ಉದ್ದಿಮೆಗಳ ಉತ್ಕರ್ಷದ ಕಾಲದಲ್ಲಿ  ಬೆಳೆದದ್ದಕ್ಕಿಂತ ಹೆಚ್ಚು ವೇಗದಲ್ಲಿ 1970ರ ದಶಕದಲ್ಲಿ ಬೆಳೆಯಿತು ಎಂಬುದನ್ನು ಅನೇಕರು ನಂಬುವುದಿಲ್ಲ.

ಇದಕ್ಕೆ ಮುಖ್ಯ ಕಾರಣ 70ರ ದಶಕದ ಅಭಿವೃದ್ಧಿಯ ಅಡ್ಡ ಪರಿಣಾಮ ಕನಿಷ್ಠ ಮಟ್ಟದಲ್ಲಿ ಇದ್ದದ್ದು. ಇದು ಸಾಧ್ಯವಾಗುವುದರ ಹಿಂದೆ ಆ ಕಾಲದಲ್ಲಿ ಬೆಂಗಳೂರಿನಲ್ಲಿ ನೆಲೆಗೊಂಡ ಉದ್ಯಮಗಳು ಮತ್ತು ಸಂಸ್ಥೆಗಳೆಲ್ಲವೂ ತಮ್ಮದೇ ಆದ ಮೂಲ ಸೌಕರ್ಯವನ್ನು ಸೃಷ್ಟಿಸಿಕೊಂಡ ಕಥನವೂ ಇದೆ. ಈ ಎಲ್ಲಾ ಉದ್ಯಮಗಳಲ್ಲಿ ದುಡಿಯುತ್ತಿದ್ದವರು ತಮ್ಮ ಕೆಲಸದ ಸ್ಥಳಕ್ಕೆ ಬೆಂಗಳೂರಿನ ಮತ್ತೊಂದು ಭಾಗದಿಂದ ಪ್ರಯಾಣಿಸುವ ಅಗತ್ಯವಿರಲಿಲ್ಲ. ಎಲ್ಲಾ ಕೆಲಸಗಾರರೂ ಅವರ ದುಡಿಮೆಯ ಸ್ಥಳಕ್ಕೆ ಹತ್ತಿರದಲ್ಲೇ ಇರುವಂತೆ ಯೋಜನೆಗಳು ರೂಪುಗೊಂಡು ಕಾರ್ಯಗತವಾಗಿದ್ದವು.

ಮಾಹಿತಿ ತಂತ್ರಜ್ಞಾನ ಉದ್ದಿಮೆಯೇನೋ ಬೆಳೆಯಿತು. ಆದರೆ ತನ್ನ ಕೆಲಸಗಾರರು ಎಲ್ಲಿ ವಾಸ ಮಾಡುತ್ತಾರೆ ಅಥವಾ ಅವರು ಹೇಗೆ ಕಚೇರಿಗೆ ಬರುತ್ತಾರೆ ಎಂಬುದರ ಬಗ್ಗೆ ಉದ್ಯಮ ತಲೆಕೆಡಿಸಿಕೊಳ್ಳಲೇ ಇಲ್ಲ. ಬೆಂಗಳೂರಿನ ದಕ್ಷಿಣ ಭಾಗದಿಂದ 20 ಕಿಲೋಮೀಟರ್ ದೂರದಲ್ಲಿ ಎಲೆಕ್ಟ್ರಾನಿಕ್ ಸಿಟಿಯನ್ನು ನಿರ್ಮಿಸಲಾಯಿತು. ಆದರೆ ಅಲ್ಲಿ ಕೆಲಸ ಮಾಡುವವರು ಎಲ್ಲಿ ವಾಸಿಸಬೇಕು ಎಂಬುದರ ಬಗ್ಗೆ ಯಾರೂ ಯೋಚಿಸಲೇ ಇಲ್ಲ. ಇಲ್ಲಿ ಕೆಲಸ ಮಾಡುವವರು ನಗರದ ಬೇರೆ ಬೇರೆ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಿದಾಗ ಸಹಜವಾಗಿಯೇ ಅವರ ಸಂಚಾರ ವ್ಯವಸ್ಥೆಯ ಬೇಡಿಕೆಯೊಂದು ಸೃಷ್ಟಿಯಾಯಿತು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಗರದಿಂದ 35 ಕಿಲೋಮೀಟರ್ ದೂರದಲ್ಲಿದ್ದರೂ ನಗರದೊಳಗಿನ ಸಂಚಾರದ ಒತ್ತಡವೇನೂ ಕಡಿಮೆಯಾಗಲಿಲ್ಲ.

ಏಕೆಂದರೆ ಇದು ಬೆಂಗಳೂರು ಮಾಹಿತಿ ತಂತ್ರಜ್ಞಾನ ಉದ್ಯಮಗಳಿದ್ದ ಪ್ರದೇಶದ ವಿರುದ್ಧ ದಿಕ್ಕಿನಲ್ಲಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಕ್ರಿಯೆಯೂ ನಗರದೊಳಗಿನ ಸಂಚಾರ ದಟ್ಟಣೆಯನ್ನು ಹೆಚ್ಚಿಸುವ ವಾತಾವರಣ ಸೃಷ್ಟಿಸಿದೆ. ಈ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಜನರೇ ಪ್ರಯತ್ನಿಸುವಾಗ ಸಮಸ್ಯೆ ಮತ್ತಷ್ಟು ಸಂಕೀರ್ಣವಾಗುತ್ತದೆ. ಸಮಯಕ್ಕೆ ಸರಿಯಾಗಿ ಕೆಲಸದ ಸ್ಥಳಕ್ಕೆ ತಲುಪಲು ಜನರು ಕಂಡುಕೊಂಡ ಪರಿಹಾರ ಸ್ವಂತ ವಾಹನಗಳು. ಇದು ಸಮಸ್ಯೆಯನ್ನು ಸಂಕೀರ್ಣಗೊಳಿಸಿತಷ್ಟೇ ಅಲ್ಲದೆ ಸಂಚಾರದ ಸಮಸ್ಯೆಯನ್ನು ತೀವ್ರಗೊಳಿಸಿತು.

ಆರ್ಥಿಕ ಪ್ರಗತಿಯ ಹಾದಿಯ ಆಯ್ಕೆಯಲ್ಲಾದ ತಪ್ಪುಗಳು ಅದರ ಪರಿಣಾಮಗಳು ಸೃಷ್ಟಿಸಿದ ಹಣಕಾಸು ಒತ್ತಡಗಳ ಮೂಲಕ ತೀವ್ರಗೊಂಡವು. ಬೆಂಗಳೂರಿನ ಮೂಲ ಸೌಕರ್ಯಕ್ಕೆ ದಟ್ಟಣೆಯನ್ನು ನಿರ್ವಹಿಸಲು ಸಾಧ್ಯವಾಗದೇ ಹೋದಾಗ ಮೂಲ ಸೌಕರ್ಯಕ್ಕೆ ಹೆಚ್ಚಿನ ಹೂಡಿಕೆಯ ಅಗತ್ಯವೆಂಬ ಮಾತು ಕೇಳಿಬರಲಾರಂಭಿಸಿತು. ಈ ಹಣವನ್ನು ಯಾರು ಭರಿಸುತ್ತಾರೆ ಎಂಬ ಪ್ರಶ್ನೆಯ ಕುರಿತು ಮಾತ್ರ ಯಾರೂ ಚಿಂತಿಸಲಿಲ್ಲ. ಇದು ಸಂಚಾರದ ವೆಚ್ಚವನ್ನು ಹೆಚ್ಚಿಸಿತು. ಒಂದೆಡೆ ಟೋಲ್ ರಸ್ತೆಗಳ ಸಂಚಾರ ವೆಚ್ಚದ ಮೇಲೆ ನೇರ ಪರಿಣಾಮ ಬೀರಿದರೆ ಮತ್ತೊಂದೆಡೆ ಸಾರ್ವಜನಿಕ ಸಾರಿಗೆಗೆ ಸರ್ಕಾರಕ್ಕೆ ಯಾವುದೇ ಸಬ್ಸಿಡಿ ನೀಡಲಾಗದ ಆರ್ಥಿಕ ಒತ್ತಡದಿಂದಾಗಿ ಅದೂ ದುಬಾರಿಯಾಯಿತು. ಯಾವುದೇ ರೀತಿಯಲ್ಲಿ ನೋಡಿದರೂ ಬೆಂಗಳೂರಿನಲ್ಲಿ ವಾಸಿಸುವುದು ಮತ್ತು ಉದ್ಯೋಗದಲ್ಲಿರುವುದು ಬಹಳ ದುಬಾರಿ ಎಂಬಂತಾಗಿದೆ.

ರಿಯಲ್ ಎಸ್ಟೇಟ್‌ ದರಗಳಂತೂ ಹೊಸತಾಗಿ ಯಾರೂ ಬೆಂಗಳೂರಿನಲ್ಲಿ ವಾಸಿಸಲೇ ಬರಬಾರದು ಎಂಬಂಥ ಪರಿಸ್ಥಿತಿ ಸೃಷ್ಟಿಸಿವೆ. ಇವೆಲ್ಲವುಗಳ ಪರಿಣಾಮವಾಗಿ ಬೆಂಗಳೂರಿನ ತಜ್ಞ ಮಾನವ ಶಕ್ತಿಯ ಲಭ್ಯತೆಯನ್ನೇ ಕುಂದಿಸುತ್ತಿದೆ. ಇನ್ನೊಂದು ಬಗೆಯಲ್ಲಿ ಹೇಳುವುದಾದರೆ ಬೆಂಗಳೂರಿನ ಅಭಿವೃದ್ಧಿಗೆ ಕಾರಣವಾಗಿದ್ದೇ ತಜ್ಞ ಮಾನವ ಶಕ್ತಿ. ಈಗ ಅದೇ ನಿಧಾನವಾಗಿ ಇಲ್ಲವಾಗುತ್ತಿದೆ. ಬೆಂಗಳೂರು ಕೇಂದ್ರಿತ ಔದ್ಯಮಿಕ ನೀತಿ ತನ್ನ ವೇಗವನ್ನು ಕಳೆದುಕೊಂಡ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಸರ್ಕಾರವು 2014–19ರ ಕೈಗಾರಿಕಾ ನೀತಿಯ ಹೊಸ ಉಸಿರನ್ನು ತುಂಬಿತು. ರಾಜ್ಯದಾದ್ಯಂತ ಔದ್ಯಮಿಕ ಅಭಿವೃದ್ಧಿಯ ಅವಕಾಶಗಳನ್ನು ಒದಗಿಸುವ ಭರವಸೆಯನ್ನು ಈ ನೀತಿ ನೀಡಿದೆ. ಇದರ ಭಾಗವಾಗಿ ಎರಡು ಹೊಸ ಔದ್ಯಮಿಕ ಕಾರಿಡಾರ್‌ಗಳ ಸ್ಥಾಪನೆಗೆ ಕೇಂದ್ರ ಸರ್ಕಾರದ ಕದ ತಟ್ಟುವುದಾಗಿ ಹೇಳಿದೆ. ಆ ಕಾರಿಡಾರ್‌ಗಳಲ್ಲಿ ಒಂದು–ಚೆನ್ನೈ, ಬೆಂಗಳೂರು ಹಾಗೂ ಚಿತ್ರದುರ್ಗವನ್ನು ಸಂಪರ್ಕಿಸಿದರೆ, ಇನ್ನೊಂದು–ಬೆಂಗಳೂರು ಹಾಗೂ ಮುಂಬೈ ನಗರಗಳನ್ನು ಸಂಪರ್ಕಿಸಲಿದೆ.

ಬೆಂಗಳೂರಿನಿಂದ ಹೊರಭಾಗಗಳಲ್ಲಿಯೂ ಉದ್ಯಮ ಪ್ರಗತಿಗೆ ಆದ್ಯತೆ ನೀಡಲು ರಾಜ್ಯ ಮಟ್ಟದ ಏಳು ಕೈಗಾರಿಕಾ ಕಾರಿಡಾರ್‌ಗಳ ಪ್ರಸ್ತಾವನೆಯನ್ನೂ ಅದು ಮಾಡಿದೆ. ಅವುಗಳಲ್ಲಿ ಎರಡರಲ್ಲಿ ಮಾತ್ರ ಬೆಂಗಳೂರು ಸೇರಿರುವುದು. ಈ ಕಾರಿಡಾರ್‌ಗಳ ನಿರ್ಮಾಣವಷ್ಟೇ ಅಲ್ಲದೆ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯಗಳ (ಎನ್‌.ಐ.ಎಂ.ಝಡ್.) ಸ್ಥಾಪನೆಯ ಅಗತ್ಯವನ್ನೂ ಹೊಸ ಔದ್ಯಮಿಕ ನೀತಿ ಒತ್ತಿಹೇಳಿದೆ. ತುಮಕೂರು, ಕೋಲಾರ, ಕಲಬುರ್ಗಿ ಹಾಗೂ ಬೀದರ್‌ನಲ್ಲಿ ಅಂಥ ವಲಯಗಳ ಸ್ಥಾಪನೆಗೆ ಅನುಮತಿ ಪಡೆಯುವಲ್ಲಿಯೂ ಸರ್ಕಾರ ಯಶಸ್ವಿಯಾಗಿದೆ.

‘ಇಡಿಕಿರಿದ ಸ್ಥಿತಿಯಿಂದ ಬೆಂಗಳೂರನ್ನು ಮುಕ್ತಗೊಳಿಸಿ, ಇತರ ಸ್ಥಳಗಳಲ್ಲಿ ಉದ್ಯಮ ಅಭಿವೃದ್ಧಿಗೆ ಒತ್ತು ನೀಡಲು ಸೂಕ್ತ ಅವಕಾಶಗಳಿರುವ ವಿಶೇಷ ಹೂಡಿಕೆ ವಲಯಗಳನ್ನು (ಎಸ್‌ಐಆರ್‌ಗಳು) ಗುರುತಿಸಬೇಕು. ಅಲ್ಲಿ ಸರ್ಕಾರ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು. ಧಾರವಾಡ, ಗದಗ, ಹಾವೇರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಅಂಥ ಎಸ್‌ಐಆರ್‌ಗಳು ಎಲೆಎತ್ತಬೇಕು. ಅವಲ್ಲದೆ ಮೈಸೂರು, ಮಂಗಳೂರು, ಹಾಸನ, ಬಾಗಲಕೋಟೆ, ವಿಜಯಪುರ, ರಾಯಚೂರು, ಕೊಪ್ಪಳ, ಬಳ್ಳಾರಿ ಔದ್ಯಮಿಕ ಘಟಕಗಳಾಗಿ ಬೆಳೆಯಬೇಕು’ ಎಂಬ ಅಂಶವೂ ಕೈಗಾರಿಕಾ ನೀತಿಯಲ್ಲಿ ಇದೆ.

ಹಳೆ ಬೆಂಗಳೂರು ಕೇಂದ್ರಿತ ಔದ್ಯಮಿಕ ಕಾರ್ಯತಂತ್ರದಿಂದ ಬೇರೆಡೆ ಚಲಿಸುವುದು ಎಂದರೆ ಹೊಸ ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸುವುದು ಎಂದಷ್ಟೇ ಅರ್ಥವಲ್ಲ. ಬೆಂಗಳೂರು ಔದ್ಯಮಿಕ ಕೇಂದ್ರಗಳಲ್ಲಿ ಮಾಡಲಾದ ಕನಿಷ್ಠ ಎರಡು ತಪ್ಪುಗಳಾದರೂ ಮರುಕಳಿಸದಂತೆ ಹೊಸ ನೀತಿಯಲ್ಲಿ ಎಚ್ಚರಿಕೆಯ ಅಂಶಗಳೂ ಇವೆ. ಹೊಸ ಕೇಂದ್ರಗಳಲ್ಲಿ ಸಾರಿಗೆ ಸಮಸ್ಯೆಯನ್ನು ತಡೆಗಟ್ಟುವ ಅಗತ್ಯವನ್ನು ಅದು ಒತ್ತಿಹೇಳಿದೆ. ಕೆ.ಐ.ಎ.ಡಿ.ಬಿ. ಅಭಿವೃದ್ಧಿಪಡಿಸಬೇಕಾದ ಹೊಸ ಪ್ರದೇಶಗಳಲ್ಲಿ ಉದ್ಯಮಗಳಷ್ಟೇ ಅಲ್ಲದೆ ಗೃಹಸೌಕರ್ಯವೂ ಇರಬೇಕು ಎಂದು ಹೇಳಿದೆ. ಇದರಿಂದಾಗಿ ಕಾರ್ಮಿಕರು ಮನೆಯಿಂದ ಉದ್ಯೋಗದ ಸ್ಥಳಕ್ಕೆ, ಅಲ್ಲಿಂದ ಮರಳಿ ಮನೆಗೆ ಸಾಗುವ ಅಂತರವನ್ನು ಕಡಿಮೆ ಮಾಡಬಹುದು.

ಅಲ್ಲದೆ, ಉದ್ಯಮಗಳಿಗೆಂದು ನೀಡಿದ ಭೂಮಿಯ ಬಳಕೆ ಬೇರೆ ರೀತಿಯಲ್ಲಿ ಆಗುವುದನ್ನು ತಡೆಯುವ ಅಂಶವೂ ನೀತಿಯಲ್ಲಿ ಇದೆ. ಈ ಮೊದಲು ಉದ್ಯಮ ಕಳೆಗುಂದಿದೆ ಎಂದು ನೆಪವೊಡ್ಡಿ, ಭೂಮಿಯನ್ನು ನಿವೇಶನಗಳಾಗಿ ಪರಿವರ್ತಿಸಿ ಮಾರಾಟ ಮಾಡಿದ ಉದಾಹರಣೆಗಳಿವೆ. ಹೊಸ ನೀತಿಯಲ್ಲಿ ಅದಕ್ಕೆ ಅವಕಾಶವಿಲ್ಲ. ದೀರ್ಘಾವಧಿಯ ಭೋಗ್ಯಕ್ಕಷ್ಟೇ ಜಾಗವನ್ನು ನೀಡಿ, ಅದರ ಬಳಕೆಯ ಮೇಲೆ ನಿಯಂತ್ರಣ ಹೇರಲಾಗುತ್ತದೆ. ಹೊಸ ಕಾರ್ಯತಂತ್ರ ಅನುಷ್ಠಾನಕ್ಕೆ ಬಂದರೆ ಅನೇಕ ತೊಡರುಗಳನ್ನು ದಾಟಿದಂತೆ. ಅಂಥ ಕೆಲವು ತೊಡರುಗಳನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಸೃಷ್ಟಿಸಿದೆ.

ಸಕ್ರಿಯ ಸಾರ್ವಜನಿಕ ಚರ್ಚೆಯನ್ನೇ ನಡೆಸದೆ ಔದ್ಯಮಿಕ ಕಾರ್ಯತಂತ್ರದಲ್ಲಿ ಬದಲಾವಣೆ ತರುವ ಅತ್ಯಗತ್ಯ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಹೊಸ ನೀತಿಯ ಭಾಗವಾಗಿ ದಿಟ್ಟ ತೀರ್ಮಾನಗಳನ್ನು ತೆಗೆದುಕೊಳ್ಳುವ ರಕ್ಷಣಾತ್ಮಕ ಮಾರ್ಗವಿದು ಎನ್ನುವುದನ್ನು ಈ ನಡೆ ಬಿಂಬಿಸುತ್ತದೆ. ಸ್ಮಾರ್ಟ್‌ಸಿಟಿಗಳ ನಿರ್ಮಾಣದ ಕುರಿತು ಕೇಂದ್ರ ಸರ್ಕಾರ ನಿರ್ಣಯ ತೆಗೆದುಕೊಂಡಾಗ, ರಾಜ್ಯ ಪಟ್ಟಿ ಮಾಡಿದ ನಗರಗಳನ್ನು ನೋಡಿದಾಗಲೂ ಈ ನಡೆಗೆ ಪುರಾವೆಗಳು ಸಿಕ್ಕಿದ್ದವು.

ಸ್ಮಾರ್ಟ್‌ಸಿಟಿಗಳಾಗಬೇಕು ಎನ್ನುವ ರಾಜ್ಯದ ಆರು ನಗರಗಳಲ್ಲಿ ಬೆಂಗಳೂರನ್ನು ಸೇರಿಸದೇ ಇದ್ದುದು ಹೊಸ ಕಾರ್ಯತಂತ್ರದ ಸುಳಿವೇ ಆಗಿತ್ತು.  ಅದಕ್ಕೇ ಸರ್ಕಾರವು ಪರ್ಯಾಯ ಘಟಕಗಳನ್ನು ಅಭಿವೃದ್ಧಿಪಡಿಸುವ ಬಗೆಗೆ ಯೋಚಿಸಿದ್ದಷ್ಟೇ ಅಲ್ಲದೆ, ದಿಕ್ಕು ತಪ್ಪಿಸಿದ ನೀತಿ ಉಂಟುಮಾಡಿದ ಕ್ಲೇಶಗಳಿಂದ ರಾಜ್ಯದ ರಾಜಧಾನಿಗೆ ಚೇತರಿಸಿಕೊಳ್ಳಲು ಒಂದಿಷ್ಟು ಕಾಲಾವಕಾಶ ನೀಡಲೂ ನಿರ್ಧರಿಸಿರಬೇಕು. ಆದರೆ ಕೈಗಾರಿಕಾ ನೀತಿಯ ಕುರಿತು ಸಮಗ್ರ ಚರ್ಚೆ ನಡೆಯದೇ ಹೋದದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ಟೀಕಿಸುವುದಕ್ಕಷ್ಟೇ ಪ್ರತಿಕ್ರಿಯೆಗಳು ಸೀಮಿತವಾಗಿಬಿಟ್ಟವು. ರಾಜ್ಯ ಸರ್ಕಾರದ ನಿಯಂತ್ರಣವನ್ನೂ ಮೀರಿದ ಕೆಲವು ಸಂಕಷ್ಟಗಳು ಇವೆ. ಸಿದ್ದರಾಮಯ್ಯ ಸರ್ಕಾರದ ಕೈಗಾರಿಕಾ ನೀತಿಯಲ್ಲಿನ ದಿಟ್ಟ ಕಾರ್ಯತಂತ್ರಗಳಲ್ಲಿ ಒಂದು ‘ಹೈದರಾಬಾದ್‌–ಕರ್ನಾಟಕ ಪ್ರದೇಶದಲ್ಲಿ ಉದ್ಯಮ ಅಭಿವೃದ್ಧಿಗೆ ಪ್ರೋತ್ಸಾಹ’.

ಸಾಕಷ್ಟು ಹಿಂದುಳಿದಿರುವ ಈ ಪ್ರದೇಶದಲ್ಲಿ ಕೈಗಾರೀಕರಣವು ಗಮನಾರ್ಹ ಪರಿಣಾಮ ಬೀರುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಆದರೆ ಈ ಪ್ರದೇಶಕ್ಕೆ ಬಂಡವಾಳವನ್ನು ಆಕರ್ಷಿಸಲು ಕೂಡ ಹಿಂದುಳಿದಿರುವಿಕೆಯೇ ಪರಮ ಕಷ್ಟವನ್ನು ತಂದೊಡ್ಡಬಲ್ಲದು. ನೀತಿಯಲ್ಲಿನ ಈ ಅಂಶವು ವಾಸ್ತವಕ್ಕಿಂತ ಹೆಚ್ಚಾಗಿ ಸದುದ್ದೇಶವನ್ನು ಒಳಗೊಂಡಿದೆ. ನೀತಿಯ ಬಹುಪಾಲು ವಾಸ್ತವಿಕ ಅಂಶಗಳಿಂದ ಕೂಡಿಲ್ಲವಾದರೂ ದಕ್ಷಿಣ ಕನ್ನಡದಲ್ಲಿ ಅಭಿವೃದ್ಧಿಯ ದಾರಿಗಳು ತೆರೆದುಕೊಳ್ಳಬೇಕಾದರೆ ರಾಜ್ಯದ ಒಳನಾಡಿನ ಪ್ರದೇಶಗಳಲ್ಲಿ ಅದು ಸಂಪರ್ಕ ಸಾಧಿಸಬೇಕು ಎಂಬ ಅಂಶವಿದೆ. ಅದರಲ್ಲೂ  ತುಮಕೂರಿನಂಥ ಸ್ಥಳಗಳಲ್ಲಿ ಅಂತಸ್ಥವಾಗಿರುವ ಆರ್ಥಿಕ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂಬ ಪ್ರಸ್ತಾಪವಿದೆ.

ತುಮಕೂರು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿನ ಆರ್ಥಿಕ ಅಂತಃಸತ್ವವನ್ನು ಕೂಡ ನೀತಿಯಲ್ಲಿ ಗುರುತಿಸಲಾಗಿದೆ. ಇದಲ್ಲದೆ ಮೊದಲು ಅಭಿವೃದ್ಧಿ ಪಡಿಸಿ, ಆಮೇಲೆ ಔದ್ಯಮಿಕ ಕ್ಷೇತ್ರಕ್ಕೆ ಭೂಮಿ ಮಂಜೂರು ಮಾಡಬೇಕೆಂಬ ಉಲ್ಲೇಖವಿದೆ. ಮೊದಲು ಯೋಜನೆಗಳಿಗೆ ಅನುಮತಿ ಪಡೆದು, ಆಮೇಲೆ ಭೂಸ್ವಾಧೀನಕ್ಕಾಗಿ ಕಾಯುವ ಪರಿಸ್ಥಿತಿ ಉದ್ಯಮಗಳಿಗೆ ಒದಗುವುದನ್ನು ಇದು ತಪ್ಪಿಸಲಿದೆ. ಈ ಆರ್ಥಿಕ ಕಾರ್ಯತಂತ್ರಕ್ಕೆ ಸರ್ಕಾರ ಬದ್ಧವಾಗಿದೆ ಎನ್ನುವುದು ‘ಇನ್‌ವೆಸ್ಟ್‌ ಕರ್ನಾಟಕ 2016’ರಲ್ಲಿ ಪ್ರತಿಬಿಂಬಿತವಾಯಿತು. ಬಂಡವಾಳ ಎಲ್ಲೆಲ್ಲಿಂದ ಹರಿದುಬರುವುದೋ ಬರಲಿ ಎಂದು ಕಾಯುವುದರ ಬದಲಿಗೆ ಮೊದಲು ಹೊಸ ಔದ್ಯಮಿಕ ನೀತಿಯ ಅನ್ವಯ ರಾಜ್ಯದಾದ್ಯಂತ ರೂಪಿಸಿರುವ ಯೋಜನೆಗಳ ಪಟ್ಟಿಯನ್ನು ಅದು ತಯಾರಿಸಿತು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರೂಪಿಸಿರುವ ವಿಶಾಲ ವ್ಯಾಪ್ತಿಯ ಔದ್ಯಮಿಕ ಕಾರ್ಯತಂತ್ರಕ್ಕೆ ಏನೇ ಬಂಡವಾಳ ಹರಿದುಬಂದರೂ ಅದು ಉದ್ದೇಶವನ್ನು ಬಲಪಡಿಸಿದಂತೆಯೇ. ಇದು ಸಾಕಾರಗೊಂಡಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕರ್ನಾಟಕದ ಔದ್ಯಮಿಕ ವಲಯದ ಭವಿಷ್ಯವನ್ನು ಪರಿಣಾಮಕಾರಿಯಾಗಿ ಬದಲಿಸೀತು ಎಂದೇ ಅರ್ಥ.
(ಲೇಖಕ: ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯ ಸಾಮಾಜಿಕ ವಿಜ್ಞಾನ ಶಾಲೆ ಪ್ರಾಧ್ಯಾಪಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT