ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯವೈಖರಿ ಬದಲಾಗಲಿ

Last Updated 17 ಮಾರ್ಚ್ 2014, 19:30 IST
ಅಕ್ಷರ ಗಾತ್ರ
ಉತ್ತರ ಪ್ರದೇಶ ಮೂಲದ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಚಾಲಕ­ನೊಬ್ಬನ ವರ್ತನೆ, ರಾಜಧಾನಿಯಲ್ಲಿ ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ಉಂಟುಮಾಡು­ವುದರ ಜೊತೆಗೆ ಬಿಎಂಟಿಸಿ ವಿಶ್ವಾಸಾರ್ಹತೆಯ ಕುರಿತೂ ಅನುಮಾನ ಹುಟ್ಟಿಸು­ವಂತಿದೆ.

ಘಟನೆಗೆ ಕಾರಣನಾದ ಚಾಲಕ­ನನ್ನು ವಜಾ ಮಾಡಲಾ­ಗಿದೆ. ಅಲ್ಲದೆ ಕರ್ತವ್ಯಲೋಪದ ಆರೋಪದ ಮೇಲೆ ಮತ್ತಿಬ್ಬರು ಅಧಿಕಾರಿ­ಗಳನ್ನು ಅಮಾನತುಗೊಳಿಸುವ ಮೂಲಕ ಪ್ರಕರಣ­ವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಬಿಎಂಟಿಸಿ ಹೇಳಿಕೊಂಡಿದೆ. ಆದರೆ ಈ  ಪ್ರಕ್ರಿಯೆ, ಅಂಟಿಕೊಂಡ ಮಸಿಯನ್ನು ಒರೆಸಿಕೊಳ್ಳುವ ಕೆಲಸದಂತಿ­ದೆಯೇ ಹೊರತು ಸಮಸ್ಯೆಯ ಮೂಲವನ್ನು ಪರಿಹರಿಸಿದಂತಾಗುವುದಿಲ್ಲ. ಪ್ರಕರಣಕ್ಕೆ ಸಂಬಂಧಿ­ಸಿ­ದಂತೆ ಉಂಟಾಗಿರುವ ಕಾನೂನು ಲೋಪವನ್ನು ಗಮ­ನಿ­ಸಿದರೆ, ಪ್ರಕರಣ­ದಲ್ಲಿ ಆರೋಪಿಯಷ್ಟೇ ಬಿಎಂಟಿಸಿ ಪಾತ್ರವೂ ಇದೆ.

ಅಪ­ರಾಧ ಹಿನ್ನೆಲೆ ಇರುವ ವ್ಯಕ್ತಿಯೊಬ್ಬರನ್ನು ರಾತ್ರಿ ಪಾಳಿ ನಿರ್ವಹಣೆಗೆ ನಿಯೋ­ಜಿಸಿದ್ದು ಹಾಗೂ ಆ ಬಸ್ಸಿನಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾ ಇಲ್ಲದೆ ಇದ್ದುದು ಗಂಭೀರ ಲೋಪ. ರಾತ್ರಿ ಪಾಳಿಯ ಬಸ್‌ಗಳಲ್ಲಿ ಚಾಲಕನೊಂದಿಗೆ ನಿರ್ವಾ­ಹಕ ಇರಲೇಬೇಕು ಎನ್ನುವ ಆದೇಶಕ್ಕೆ ನಿಗಮದ ಅಧಿಕಾರಿಗಳೇ ಬೆಲೆ ಕೊಡದಿ­ರು­ವುದು ಪ್ರಕರಣದಿಂದ ಸಾಬೀತಾಗಿದೆ. ದೆಹಲಿಯಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ವರದಿಯಾದ ಸಂದರ್ಭದಲ್ಲಿ ಬಸ್‌ಗಳಲ್ಲಿ ಸಿ.ಸಿ. ಟಿ.ವಿ. ಅಳವಡಿಸಲು ಬಿಎಂಟಿಸಿ ಮುಂದಾಗಿತ್ತು. ಇದರಿಂದಾಗಿ ಕೆಲವು ದುರ್ನಡತೆಯ ಪುರುಷರು ಮತ್ತು ಕಿಸೆಗಳ್ಳರ ಮೇಲೊಂದು ಕಣ್ಣಿಡಬ­ಹು­ದಾಗಿತ್ತು. ಆದರೆ, ಆ ನಿಟ್ಟಿನಲ್ಲಿ ಬಿಎಂಟಿಸಿ ಅಷ್ಟೇನೂ ಆಸಕ್ತಿ ವಹಿಸಿದಂತಿಲ್ಲ. 
 
ಅಡ್ಡಾದಿಡ್ಡಿ ಚಾಲನೆ, ನಿಗದಿತ ನಿಲ್ದಾಣಗಳಲ್ಲಿ ಬಸ್ ನಿಲ್ಲಿಸದಿರುವುದು, ಮಕ್ಕಳು–ಮಹಿಳೆಯರೊಂದಿಗೆ ಉಡಾಫೆ ವರ್ತನೆಯಂಥ ದೂರುಗಳು ಚಾಲಕರು, ನಿರ್ವಾಹಕರ ವಿರುದ್ಧ ಆಗಾಗ ಕೇಳಿಸುತ್ತಲೇ ಇರುತ್ತವೆ. ಸಾರ್ವಜನಿಕರೊಂದಿಗೆ ಸದಾ ಸಂಪರ್ಕದಲ್ಲಿರುವ ನಿರ್ವಾಹಕ–ಚಾಲಕರ ಹಿನ್ನೆಲೆಯ ಬಗ್ಗೆ ಬಿಎಂಟಿಸಿ ಹೆಚ್ಚಿನ ನಿಗಾ ವಹಿಸಬೇಕಾಗಿದೆ ಹಾಗೂ ಪ್ರಯಾಣಿಕ ಸ್ನೇಹಿ ಮನೋಭಾವವನ್ನು ಅವರಲ್ಲಿ ಬೆಳೆಸುವ ನಿಟ್ಟಿನಲ್ಲೂ ಸಂಸ್ಥೆ ಮುಂದಾಗಬೇಕಿದೆ.

ಚಾಲಕನ ದುಂಡಾವರ್ತನೆ ಪ್ರಸಂಗ ಬಿಎಂಟಿಸಿ ಬಗೆಗಿನ ನಂಬಿಕೆಯನ್ನೇ ಬುಡಮೇಲು ಮಾಡುವಂತಿದೆ. ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ತಾಣವಾಗಿ ಗುರ್ತಿಸಿಕೊಂಡಿರುವ ಬೆಂಗ­ಳೂರು ನಗರದ ವರ್ಚಸ್ಸಿಗೆ ಕೂಡ ಇಂಥ ಘಟನೆಗಳು ಹಾನಿಯುಂಟು ಮಾಡು­ತ್ತವೆ. ಹಗಲು ರಾತ್ರಿಯ ವ್ಯತ್ಯಾಸ ಇಲ್ಲದೆ ಚಟುವಟಿಕೆಯಲ್ಲಿರುವ ನಗರ­ದಲ್ಲಿ ರಾತ್ರಿ ಪಾಳಿಗಳಲ್ಲಿ ದುಡಿಯುವ ಮಹಿಳೆಯರ ಸಂಖ್ಯೆ ಹೆಚ್ಚಾ­ಗಿದೆ. ಇವರಲ್ಲಿ ಅನೇಕರು ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುತ್ತಾರೆ.

ಇವರೆಲ್ಲ ಅಳುಕಿನಿಂದ ಪ್ರಯಾಣಿಸುವುದು ಹಾಗೂ ಮನೆಯಿಂದ ಹೊರಗೆ ಹೊರಟ ಹೆಣ್ಣುಮಕ್ಕಳ ಬಗ್ಗೆ ಕುಟುಂಬದವರು ಆತಂಕಪಡುವ ಸ್ಥಿತಿ ರೂಪು­ಗೊಳ್ಳು­ವುದು ಬಿಎಂಟಿಸಿ ಮತ್ತು ಬೆಂಗಳೂರಿನ ಘನತೆಗೆ ತಕ್ಕುದೇನಲ್ಲ. ಐಷಾ­ರಾಮಿ ಬಸ್‌ಗಳನ್ನು ಹೊಂದುವ ಮೂಲಕ ಠಾಕುಠೀಕಾಗಲು ಪ್ರಯತ್ನಿಸುವ ನಿಗಮ, ತನ್ನ ಕಾರ್ಯವೈಖರಿಯಲ್ಲೂ, ಸಿಬ್ಬಂದಿಯ ನಡವಳಿಕೆಯಲ್ಲೂ ನಯ ನಾಜೂಕು ತರಬೇಕಾಗಿದೆ. ಅಂತೆಯೇ ತನ್ನ ಸಿಬ್ಬಂದಿಯ ಮೇಲೆ ಹೆಚ್ಚಿನ ಕರ್ತವ್ಯದ ಹೊರೆ ಹೇರುವುದನ್ನು ಕಡಿಮೆ ಮಾಡಿ ಅವರನ್ನು ಮಾನವೀಯವಾಗಿ ನಡೆಸಿಕೊಳ್ಳಬೇಕಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT