ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಸೂಚಿ ಜಾರಿಗೊಳ್ಳಲಿ

Last Updated 10 ಜೂನ್ 2014, 19:30 IST
ಅಕ್ಷರ ಗಾತ್ರ

ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮಾಡಿದ ಭಾಷಣದಲ್ಲಿ  ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಆದ್ಯತೆಗಳನ್ನು ಬಿಡಿಸಿಡಲಾಗಿದೆ. ಆರ್ಥಿಕ, ರಾಜಕೀಯ, ಸಾಮಾಜಿಕ ಹಾಗೂ ವಿದೇಶಾಂಗ ವ್ಯವಹಾರ ಕ್ಷೇತ್ರಗಳಲ್ಲಿ ಮೋದಿ ಸರ್ಕಾರದ ಕಾರ್ಯಸೂಚಿಗಳನ್ನು  ಈ ಭಾಷಣ ಬಿಂಬಿಸಿದೆ.

ಕಳೆದ ಕೆಲವು ವರ್ಷಗಳಿಂದ ಕುಸಿಯುತ್ತಾ ಸಾಗಿರುವ ಆರ್ಥಿಕತೆ  ಪುನಶ್ಚೇತನಕ್ಕೆ  ಮೋದಿ ಸರ್ಕಾರ ತುರ್ತು ಗಮನ ಹರಿಸಿರುವುದು ಸ್ವಾಗತಾರ್ಹ. ಬೆಲೆ ಏರಿಕೆ ನಿಯಂತ್ರಣ ಎನ್‌ಡಿಎ  ಸರ್ಕಾರಕ್ಕೆ ರಾಜಕೀಯವಾಗಿಯೂ ಮುಖ್ಯವಾದದ್ದು. ಕೃಷಿ ಉತ್ಪನ್ನಗಳ ಸರಬರಾಜು ಹೆಚ್ಚಳ ಮಾಡುವುದಲ್ಲದೆ ಸಾರ್ವಜನಿಕ ವಿತರಣಾ ವ್ಯವಸ್ಥೆ ಸುಧಾರಣೆಗೂ ಕ್ರಮಗಳನ್ನು ಕೈಗೊಳ್ಳುವುದಾಗಿ  ಪ್ರಕಟಿಸಲಾಗಿದೆ.

ಬಹು ಬ್ರಾಂಡ್ ರಿಟೇಲ್ ಕ್ಷೇತ್ರದಲ್ಲಿ ವಿದೇಶಿ ನೇರ ಹಣ ಹೂಡಿಕೆಗೆ ಬಿಜೆಪಿ ವಿರೋಧವಿದೆ. ಆದರೆ ಉದ್ಯೋಗಗಳನ್ನು ಸೃಷ್ಟಿಸುವ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳವನ್ನು  ಬೆಂಬಲಿಸುವುದಾಗಿ ಪ್ರಕಟಿಸ­ಲಾಗಿದೆ.  ತೆರಿಗೆ ಸರಳೀಕರಣ ವಿಚಾರಕ್ಕೂ ಒತ್ತು ನೀಡಲಾಗಿದ್ದು,  ಸರಕು ಹಾಗೂ ಸೇವಾ ತೆರಿಗೆ  (ಜಿಎಸ್‌್್್್್್್್್್ ಟಿ) ಅನುಷ್ಠಾನಕ್ಕೆ ಬದ್ಧತೆ ತೋರ­ಲಾಗಿದೆ.

ಆದರೆ  ಜಿಎಸ್‌ಟಿ  ಅನುಷ್ಠಾನ ಮಾಡಲು ಹಿಂದಿನ ಯುಪಿಎ ಸರ್ಕಾರದ ನಿಲುವಿಗೆ ಬಿಜೆಪಿ ಆಡಳಿತವಿದ್ದ ರಾಜ್ಯಗಳು ಸೇರಿದಂತೆ ಅನೇಕ ರಾಜ್ಯಗಳು ವಿರೋಧ ತೋರಿದ್ದವು. ಕೇಂದ್ರ, ರಾಜ್ಯ ಸಂಬಂಧಗಳನ್ನು ಮರು ರೂಪಿಸುವ ವಿಚಾರಕ್ಕೆ ನೀಡಿರುವ ಒತ್ತು ಮುಖ್ಯವಾದುದು.  ಇದರಿಂದ ರಾಜ್ಯಗಳ ತ್ವರಿತ ಪ್ರಗತಿಗೆ ಕೇಂದ್ರ  ಸರ್ಕಾರ ಪೋಷಕಶಕ್ತಿಯಾಗುವುದು ಉತ್ತೇಜನಕಾರಿ. 

ವಾಜಪೇಯಿ ಅವರ ಸುವರ್ಣ ಚತುಷ್ಪಥ ಯೋಜನೆಯ ಮಾದರಿಯಲ್ಲಿ  ವಜ್ರ ಚತುಷ್ಕೋನ ಅತಿ ವೇಗದ ರೈಲು ಯೋಜನೆ ಪ್ರಕಟಿಸಿರುವುದು ಮೂಲ ಸೌಕರ್ಯ­ಗಳ ವೃದ್ಧಿಯಲ್ಲಿ ಮಹತ್ವದ್ದು. ಕಳೆದ ಕೆಲವು ವರ್ಷಗಳಿಂದ ವಿವಾದದ ಸುಳಿಗೆ ಸಿಲುಕಿದ್ದ ಕಲ್ಲಿದ್ದಲು ವಲಯದಲ್ಲಿ ಸುಧಾರಣೆಗಳ ಅಗತ್ಯ ಪ್ರತಿಪಾದಿಸಲಾಗಿದೆ.

ಜೊತೆಗೆ ನಾಗರಿಕ ಪರಮಾಣು ಒಪ್ಪಂದಗಳ ಕಾರ್ಯಾಚರಣೆ  ವಿಚಾರವನ್ನೂ ಮುಂದಿಡಲಾಗಿದ್ದು ಇದು  ಅಮೆರಿಕಕ್ಕೆ ಸೆಪ್ಟೆಂಬರ್‌ನಲ್ಲಿ ಮೋದಿ ಭೇಟಿ ನೀಡುವ ಸಂದರ್ಭದಲ್ಲಿ ಮುಖ್ಯ ಕಾರ್ಯಸೂಚಿಯಾಗಿರಲಿದೆ. ಸಾಮಾಜಿಕ ವಲಯಕ್ಕೆ ಸಂಬಂಧಿಸಿದಂತೆ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದಂತೆ ಪ್ರತಿ ರಾಜ್ಯದಲ್ಲೂ ಐಐಟಿ, ಐಐಎಂ ಹಾಗೂ ಎಐಐಎಂಎಸ್ ನಂತಹ ಸಂಸ್ಥೆಗಳ ಸ್ಥಾಪನೆಗೆ ಬದ್ಧತೆ ಪ್ರದರ್ಶಿ­ಸಿರುವುದು ಮತ್ತೊಂದು ಸ್ವಾಗತಾರ್ಹ ಅಂಶ.

ಆದರೆ 370ನೇ ವಿಧಿ, ಏಕ­ರೂಪ ನಾಗರಿಕ ಸಂಹಿತೆ ಹಾಗೂ ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣ ವಿಚಾರಗಳ ಬಗ್ಗೆ ರಾಷ್ಟ್ರಪತಿ ಭಾಷಣದಲ್ಲಿ ಉಲ್ಲೇಖವಿಲ್ಲ. ಆಹಾರ, ಶಿಕ್ಷಣ ಕಾಯಿದೆ ವಿಚಾರವಾಗಲಿ, ಭೂ ಸ್ವಾಧೀನ ಕಾಯಿದೆ ವಿಚಾರವಾಗಲಿ ಈ ಭಾಷಣದಲ್ಲಿ ಪ್ರಸ್ತಾಪಗೊಂಡಿಲ್ಲ.  

ಹಸಿರು ಅನುಮೋದನೆಗಳಿಗೆ ಸಂಬಂಧಿಸಿದ ವಿಚಾರಗಳು ಅಭಿವೃದ್ಧಿಯ ಪಥದಲ್ಲಿ ಅಡ್ಡಗಾಲಾಗುವುದಕ್ಕೆ ಬಿಡುವುದಿಲ್ಲ ಎಂಬಂಥ ಮಾತುಗಳು ಪರಿಸರವಾದಿಗಳಲ್ಲಿ ಆತಂಕ ಹುಟ್ಟಿಸಬಹುದು. ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದಂತೆ  ಚೀನಾ ಹಾಗೂ ನೆರೆರಾಷ್ಟ್ರಗಳೊಂದಿಗೆ ಬಾಂಧವ್ಯ ವೃದ್ಧಿಯಷ್ಟೇ ಅಲ್ಲದೆ   ಅಮೆರಿಕದ ಜೊತೆಗಿನ ಸಂಬಂಧಕ್ಕೆ ಹೊಸ ಕಸುವು ತುಂಬುವ  ಸೂಚನೆಯಿದೆ.

ಮಹಿಳಾ ಮೀಸಲು ಮಸೂದೆ ಜಾರಿಗೆ ತೋರಿರುವ ಬದ್ಧತೆ ಮೆಚ್ಚುವಂತಹದ್ದು. ‘ಭಾರತದ ಪ್ರಗತಿಯಲ್ಲಿ ಅಲ್ಪಸಂಖ್ಯಾತರೂ ಸಮಾನ ಪಾಲುದಾರರಾಗಿರುತ್ತಾರೆ’ ಎಂಬಂತಹ ಮಾತುಗಳು ಧ್ವನಿಸುವ  ಆಶಯವೂ ಸಕಾರಾತ್ಮಕ. ಸರ್ಕಾರಕ್ಕೆ ನಿಜವಾದ ಪರೀಕ್ಷೆ ಇರುವುದು ಇವುಗಳ ಅನುಷ್ಠಾನದಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT