ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಾಚರಣೆಯೇ ಸವಾಲು

* ಮೃತಪಟ್ಟವರಲ್ಲಿ ಐವರು ಭಾರತೀಯರು * ತುರ್ತು ಪರಿಸ್ಥಿತಿ ಘೋಷಿಸಿದ ನೇಪಾಳ ಸರ್ಕಾರ * ದೇವಾಲಯಗಳು ನೆಲಸಮ * ಹರಿದು ಬಂದ ನೆರವಿನ ಮಹಾಪೂರ
Last Updated 26 ಏಪ್ರಿಲ್ 2015, 20:27 IST
ಅಕ್ಷರ ಗಾತ್ರ

ಕಠ್ಮಂಡು (ಪಿಟಿಐ): ಮೊದಲ ಭೂಕಂಪದಿಂದ ಚೇತರಿಸಿಕೊಳ್ಳುವ ಮೊದಲೇ ಭಾನುವಾರ ಮತ್ತೆ ಎರಡು ಬಾರಿ ಕಂಪಿಸಿರುವ ನೇಪಾಳದಲ್ಲಿ ಪರಿಹಾರ ಕಾರ್ಯಾಚರಣೆ ಸವಾಲಾಗಿ ಪರಿಣಮಿಸಿದೆ.

ನೆರೆಯ ಭಾರತ, ಪಾಕಿಸ್ತಾನ ಸೇರಿದಂತೆ ಅಮೆರಿಕ ಹಾಗೂ ಐರೋಪ್ಯ ಒಕ್ಕೂಟ ನೇಪಾಳ ರಕ್ಷಣೆಗೆ ಧಾವಿಸಿದ್ದು ಪರಿಹಾರ   ಕಾರ್ಯಾಚರಣೆಗೆ ಕೈಜೋಡಿಸಿವೆ.

ಹಲವು ಅಡ್ಡಿ, ಆತಂಕದ ಮಧ್ಯೆ   ಹಗಲು, ರಾತ್ರಿ ನಿರಂತರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.   ವಿದ್ಯುತ್‌ ಸಂಪರ್ಕ ಕಡಿತ ಮತ್ತು ಬಿರುಕು ಬಿಟ್ಟಿರುವ ರಸ್ತೆಗಳು ಕಾರ್ಯಾಚರಣೆಗೆ ಅಡ್ಡಿಯಾಗಿವೆ.

ಕಟ್ಟಡಗಳ ಅವಶೇಷಗಳ ಅಡಿ ಸಿಲುಕಿದ್ದ ಮತ್ತಷ್ಟು ಶವಗಳನ್ನು ಹೊರ ತೆಗೆಯಲಾಗಿದ್ದು, ಸಾವಿನ ಸಂಖ್ಯೆ ಎರಡೂವರೆ  ಸಾವಿರದ ಗಡಿ ತಲುಪಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ರಾಜಧಾನಿ ಕಠ್ಮಂಡುವೊಂದರಲ್ಲಿಯೇ ಮೃತರ ಸಂಖ್ಯೆ ಸಾವಿರದ ಗಡಿ ದಾಟಿದ್ದು, ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಹೆಣಗಳ ರಾಶಿ ಮತ್ತು ನೆಲಸಮಗೊಂಡ ಕಟ್ಟಡಗಳ ಅವಶೇಷದಿಂದಾಗಿ ಹಾಳು ಸುರಿಯುತ್ತಿದೆ.  ಪಾರಂಪರಿಕ ನಗರದಲ್ಲಿ ಸಾಮೂಹಿಕ ಅಂತ್ಯಕ್ರಿಯೆಗಳು ನಡೆಯುತ್ತಿದ್ದು ಅಕ್ಷರಶಃ ಸ್ಮಶಾನದಂತೆ ಗೋಚರಿಸುತ್ತಿದೆ. 

ಬಹುತೇಕ ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿ ತುಳುಕುತ್ತಿರುವ ಕಾರಣ ರಸ್ತೆ, ಬೀದಿ ಹಾಗೂ ಮರಗಳ ಅಡಿಯಲ್ಲಿಯೂ  ಚಿಕಿತ್ಸೆ ನೀಡಲಾಗುತ್ತಿದೆ.

ಕಂಪನ ತಂದ ಆತಂಕ: ಈ  ನಡುವೆ ಮತ್ತೆ ಎರಡು ಹೊಸ ಕಂಪನಗಳು ಜನರ ಆತಂಕಕ್ಕೆ ಕಾರಣವಾಗಿವೆ. ರಿಕ್ಟರ್‌ ಮಾಪಕದಲ್ಲಿ 6.7 ಮತ್ತು  6.5 ರಷ್ಟು ತೀವ್ರತೆಯ ಭೂಕಂಪದಿಂದ ಹೊಸ ಸಾವು, ನೋವು ಸಂಭವಿಸಿಲ್ಲ.

ಚೀನಾ ಗಡಿಯಲ್ಲಿರುವ ಕೋದಾರಿ ಎಂಬಲ್ಲಿ ಸುಮಾರು ಹತ್ತು ಕಿ.ಮೀ ಆಳದಲ್ಲಿ ಭೂಕಂಪನ ಕೇಂದ್ರ ಪತ್ತೆಯಾಗಿದ್ದು, ಕಳೆದ ಎರಡು ದಿನಗಳಲ್ಲಿ ಒಟ್ಟು 40 ಬಾರಿ ಭೂಮಿ ಕಂಪಿಸಿದೆ. ದೇಶದ ಬಹುತೇಕ ಇತಿಹಾಸ ಪ್ರಸಿದ್ಧ ಹಿಂದೂ ದೇವಾಲಯ, ಬೌದ್ಧ  ಮಂದಿರ ಮತ್ತು ಪಾರಂಪರಿಕ ತಾಣಗಳು ನೆಲಸಮಗೊಂಡಿವೆ.

ಗೂಗಲ್‌ ಅಧಿಕಾರಿ ಸಾವು: ಮೌಂಟ್‌ ಎವರೆಸ್ಟ್‌ ಮಾರ್ಗದಲ್ಲಿ ಹಿಮ ಕುಸಿತಕ್ಕೆ ಬಲಿಯಾದವರ ಪೈಕಿ ಗೂಗಲ್‌ ಸಂಸ್ಥೆಯ ಅಧಿಕಾರಿ ಡ್ಯಾನ್‌ ಫ್ರೆಡಿನ್‌ಬರ್ಗ್‌ ಸೇರಿದ್ದಾರೆ.   54 ವರ್ಷದ ಭಾರತೀಯ ಪರ್ವತಾರೋಹಿ  ಅಂಕುರ್ ಬಾಲ್‌ ಸೇರಿದಂತೆ ಇನ್ನೂ 11 ಪರ್ವತಾರೋಹಿಗಳು ಮೌಂಟ್‌ ಎವರೆಸ್ಟ್‌ ಎರಡನೇ ಶಿಬಿರದಲ್ಲಿ ಸಿಲುಕಿದ್ದಾರೆ.

ವಿದೇಶಿ ಪ್ರವಾಸಿಗರನ್ನು ರಕ್ಷಿಸಲಾಗಿದ್ದು ಆಹಾರ ಮತ್ತು ತಂಗುವ ವ್ಯವಸ್ಥೆ ಇಲ್ಲದೇ ಅವರು ಕಂಗೆಟ್ಟಿದ್ದಾರೆ.

ರಸ್ತೆಗಳಲ್ಲಿ ರಾತ್ರಿ ಕಳೆದ ಜನರು: ಪದೇ ಪದೇ ಭೂಮಿ ಕಂಪಿಸುತ್ತಿರುವ ಕಾರಣ ತೀವ್ರ ಆತಂಕಕ್ಕೆ ಒಳಗಾಗಿರುವ ಜನರು ಬಯಲು ಪ್ರದೇಶ, ರಸ್ತೆಗಳಲ್ಲಿ ತಾವೇ ನಿರ್ಮಿಸಿಕೊಂಡಿರುವ ತಾತ್ಕಾಲಿಕ ಟೆಂಟ್‌ಗಳಲ್ಲಿ ಬೀಡು ಬಿಟ್ಟಿದ್ದಾರೆ.  ಮನೆಗೆ ಮರಳಲು ಹಿಂದೇಟು ಹಾಕುತ್ತಿರುವ ಕಾರಣ ಕಟ್ಟಡಗಳು ಖಾಲಿ ಬಿದ್ದಿವೆ. ವಿದ್ಯುತ್‌ ಸಂಪರ್ಕ ಕಡಿತಗೊಂಡು ಈಗಾಗಲೇ 28 ತಾಸು ಕಳೆದಿದ್ದು, ಇನ್ನೂ ಮೂರ್‍್ನಾಲ್ಕು ದಿನ ಕತ್ತಲಲ್ಲೇ ಕಾಲ ದೂಡಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹರಿದು ಬಂದ ನೆರವು: ಸಂಕಷ್ಟಕ್ಕೆ ಸಿಲುಕಿರುವ ನೇಪಾಳದ ಮನವಿಗೆ ಸ್ಪಂದಿಸಿದ ಅಂತರರಾಷ್ಟ್ರೀಯ ಸಮುದಾಯದಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ.

ಅಮೆರಿಕ ಮತ್ತು ಬ್ರಿಟನ್‌ ತಜ್ಞ ಸಿಬ್ಬಂದಿ ರಕ್ಷಣಾ ಸಾಮಗ್ರಿಗಳೊಂದಿಗೆ  ಇಲ್ಲಿಗೆ ಬಂದಿಳಿಯಲಿದ್ದಾರೆ.  
50 ಟನ್‌ ಆಹಾರ ಸಾಮಗ್ರಿ, ಔಷಧಿ, ಕುಡಿಯುವ ನೀರು, ಬಟ್ಟೆ ಹಾಗೂ 700 ರಕ್ಷಣಾ ತಜ್ಞರನ್ನು ಒಳಗೊಂಡ ಭಾರತೀಯ ವಾಯುಸೇನೆಯ 13 ವಿಮಾನ ಹಾಗೂ ಹೆಲಿಕಾಪ್ಟರ್‌ ಈಗಾಗಲೇ  ಇಲ್ಲಿಗೆ ತಲುಪಿವೆ.

ಮುಖ್ಯಾಂಶಗಳು
* ಮೌಂಟ್‌ ಎವರೆಸ್ಟ್‌ ಹಾದಿಯಲ್ಲಿ  ಮುಂದುವರಿದ  ಭಾರಿ ಹಿಮ ಕುಸಿತ
* ತ್ರಿಶೂಲಿ ಜಲವಿದ್ಯುತ್‌ ಯೋಜನೆಯ ಸುರಂಗದಲ್ಲಿ 60 ಕಾರ್ಮಿಕರು ಸಿಲುಕಿರುವ ಶಂಕೆ

***
ನೇಪಾಳದಲ್ಲಿ
2,500 ಸತ್ತವರು, 6 ಸಾವಿರ ಗಾಯಾಳುಗಳು, 1,053 ಕಠ್ಮಂಡುವಿನಲ್ಲಿ  ಸತ್ತವರು, 22 ಪರ್ವತಾರೋಹಿಗಳ  ಸಾವು, 40 ಒಟ್ಟು ಬಾರಿ ಕಂಪನ, ರೂ 3 ಲಕ್ಷ ಕೋಟಿ ಮರು ನಿರ್ಮಾಣಕ್ಕೆ, 

ಭಾರತದಲ್ಲಿ
56 ಬಿಹಾರದಲ್ಲಿ ಸಾವು, 30 ಉ.ಪ್ರದೇಶದಲ್ಲಿ ಸಾವು, ರೂ 6 ಲಕ್ಷ ಮೃತರ ಕುಟುಂಬಕ್ಕೆ ಪರಿಹಾರ, ರೂ 50 ಸಾವಿರ ಗಾಯಳುಗಳಿಗೆ ಪರಿಹಾರ

***
ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌ ನೇಪಾಳ ಭೂಕಂಪ ಪರಿಹಾರ ನಿಧಿ
ನಮ್ಮ ನೆರೆಯ ದೇಶ ನೇಪಾಳವು  ತೀವ್ರ ಸ್ವರೂಪದ ಭೂಕಂಪದಿಂದ ತತ್ತರಿಸಿದೆ. ಅಪಾರ ಸಾವು – ನೋವು ಸಂಭವಿಸಿವೆ.  ಮನೆ – ಮಠ ಕಳೆದುಕೊಂಡು ಲಕ್ಷಾಂತರ ಜನರು  ನಿರಾಶ್ರಿತರಾಗಿದ್ದಾರೆ. ಭೂಕಂಪ ಸಂತ್ರಸ್ತ ಅಸಹಾಯಕರಿಗೆ ನೆರವಿನ ಹಸ್ತ ಚಾಚಲು  ಪ್ರಜಾವಾಣಿ –ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳು ಪರಿಹಾರ ನಿಧಿ ಸ್ಥಾಪಿಸಿವೆ.  ಈ ನಿಧಿಗೆ ಚೆಕ್‌ ಅಥವಾ ಡಿ.ಡಿ ಮೂಲಕ ಉದಾರವಾಗಿ ದಾನ ನೀಡುವವರು  ಸಂತ್ರಸ್ತರ ನೆರವಿಗೆ ನಿಲ್ಲಬಹುದು. 

ಒಂದು ಸಾವಿರ ರೂಪಾಯಿಗಳಿಗಿಂತ ಹೆಚ್ಚು ದೇಣಿಗೆ ಸಲ್ಲಿಸುವವರ ಹೆಸರನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.

ವಿಳಾಸ: ‘ಡೆಕ್ಕನ್‌ ಹೆರಾಲ್ಡ್‌–ಪ್ರಜಾವಾಣಿ ಪರಿಹಾರ ನಿಧಿ’, # 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು –01

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT