ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ವಿಂಗ್‌ ಕಲಾಕಾರ

Last Updated 7 ಅಕ್ಟೋಬರ್ 2015, 19:54 IST
ಅಕ್ಷರ ಗಾತ್ರ

ತರಕಾರಿ ಮತ್ತು ಹಣ್ಣುಗಳನ್ನು ಬಳಸಿಕೊಂಡು ನೂರಾರು ಬಗೆಯ ಪ್ರಾಣಿ–ಪಕ್ಷಿ, ಮರ–ಗಿಡ, ಹಳ್ಳ–ಕೊಳ್ಳ, ನೂರಾರು ದೇವತೆಗಳು, ಜಗದ್ವಿಖ್ಯಾತ ವ್ಯಕ್ತಿ ಮತ್ತು ಸ್ಥಳಗಳ ಪ್ರತಿಕೃತಿ ರಚಿಸುವ ಮೂಲಕ ನೋಡುಗರನ್ನು ಅವಕ್ಕಾಗಿಸುತ್ತಾರೆ ಹುಬ್ಬಳ್ಳಿಯ ವೀರಾಪುರ ಓಣಿಯ ನಿವಾಸಿ ಇಸ್ಮಾಯಿಲ್ ಹುಸೇನ್‌ಸಾಬ್‌ ತಲವಾಯಿ.

ಯಾವುದಾದರೂ ಹಣ್ಣು–ತರಕಾರಿ ಕಂಡರೆ ಅದರಲ್ಲಿ ಯಾವ ಹೂವು ಅರಳುತ್ತದೆ, ಯಾವ ವ್ಯಕ್ತಿಯ ಪ್ರತಿಕೃತಿ ಮೂಡಬಹುದು  ಎಂಬುದನ್ನು ಚಿಂತಿಸುವ ಅವರು, ಕ್ಯಾರೆಟ್‌ನಲ್ಲಿ 40ಕ್ಕೂ ಹೆಚ್ಚು ಹೂವುಗಳನ್ನು ಅರಳಿಸಬಲ್ಲರು. ಕುಂಬಳಕಾಯಿ ಮತ್ತು ಕಲ್ಲಂಗಡಿಯಲ್ಲಿ ಮೆಕ್ಕಾ–ಮದೀನಾ, ಚರ್ಚ್‌, ದೇವಸ್ಥಾನ, ಬಸವಣ್ಣ, ಗಣೇಶ, ತಾಜ್‌ಮಹಲ್, ಟಿಪ್ಪು ಸುಲ್ತಾನ್‌, ಏಸುಕ್ರಿಸ್ತ ಹೀಗೆ ಹಲವು ಮೂರ್ತಿಗಳಿಗೆ ಜೀವ ತುಂಬುತ್ತಾರೆ.

ಅವರ ಈ ಕಲೆಯ ಹಿಂದಿನ ತಂತ್ರಗಳನ್ನು ಕೇಳಿದರೆ, ‘ಹಣ್ಣು–ತರಕಾರಿ ಬಳಸಿ ಲಕ್ಷಕ್ಕೂ ಹೆಚ್ಚು ವಿವಿಧ ವಸ್ತುಗಳನ್ನು ತಯಾರಿಸುತ್ತೇನೆ. ಇದಕ್ಕೆ ಬೇಕಿರುವುದು ಒಂದು ಚಾಕು ಮತ್ತು ಪೀಲರ್‌ ಅಷ್ಟೆ’ ಎಂದು ನಗುಬೀರುತ್ತಾರೆ ಇಸ್ಮಾಯಿಲ್‌.

ಹಣ್ಣು–ತರಕಾರಿಯಿ ಮಾತ್ರವಲ್ಲ, ಅವುಗಳ ತ್ಯಾಜ್ಯವೂ ಇವರ ಕೈಯಲ್ಲಿ ಕಲೆಯಾಗಿ ಅರಳುತ್ತದೆ. ಅವುಗಳನ್ನು ಬಳಸಿ ಕ್ಷಣಮಾತ್ರದಲ್ಲಿ ಮತ್ತೊಂದು ಆಕರ್ಷಕ ವಸ್ತುವನ್ನಾಗಿಸುತ್ತಾರೆ. ಬಡತನವನ್ನೇ ಹಾಸಿ ಹೊದ್ದಿದ್ದ ಕುಟುಂಬದಲ್ಲಿ ಬೆಳೆದು ಬಂದ ಇಸ್ಮಾಯಿಲ್‌, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ನವದೆಹಲಿ, ಗೋವಾ ಹೀಗೆ ಹಲವಾರು ಕಡೆ ತಮ್ಮ ಕಲೆಗೆ ಶಹಬ್ಬಾಸ್‌ಗಿರಿ ಪಡೆದಿದ್ದಾರೆ. ತಮ್ಮಲ್ಲಿರುವ ಕಲೆಯನ್ನು ಅಭಿವ್ಯಕ್ತಗೊಳಿಸಲು ಅವರಿಗೆ ದುಬೈನಿಂದಲೂ ಸಾಕಷ್ಟು ಬಾರಿ ಆಹ್ವಾನ ಬಂದಿದೆ. ಆದರೆ, ಇಲ್ಲಿಯೇ ಸಾಕಷ್ಟು ಬೇಡಿಕೆ ಇರುವಾಗ ಮತ್ತೊಂದು ದೇಶಕ್ಕೆ ಹೋಗುವ ಅನಿವಾರ್ಯತೆ ಇಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಪ್ರತಿ ವರ್ಷ ರಾಜ್ಯದ ವಿವಿಧ ಕಡೆ ನಡೆಯುವ ಕೃಷಿ ಮೇಳ, ಫಲ–ಪುಷ್ಪ ಪ್ರದರ್ಶನದಲ್ಲಿ ಇಸ್ಮಾಯಿಲ್‌ ಕಲೆ ಅನಾವರಣಗೊಳ್ಳುತ್ತದೆ. ತಮ್ಮ ವಿಶಿಷ್ಟ ಕಲಾ ನೈಪುಣ್ಯದಿಂದಲೇ ಗಮನ ಸೆಳೆಯುವ 27 ವರ್ಷದ ಇಸ್ಮಾಯಿಲ್‌, ಪ್ರತಿ ವರ್ಷ ಕನಿಷ್ಠ 10 ಕೃಷಿ ಮೇಳಗಳಲ್ಲಿ ಕಡ್ಡಾಯವಾಗಿ ಭಾಗವಹಿಸುತ್ತಾರೆ. ಇದಕ್ಕಾಗಿ ಅವರಿಗೆ ಹಲವು ಪ್ರಶಸ್ತಿ–ಪುರಸ್ಕಾರಗಳೂ ಸಂದಿವೆ.

ಮದುವೆ, ಆರತಕ್ಷತೆ, ಜನ್ಮದಿನ, ಶಾಲಾ ಕಾರ್ಯಕ್ರಮಗಳು, ಕಾರ್ಪೊರೇಟ್‌ ವಲಯದ ವಿವಿಧ ಉತ್ಪನ್ನಗಳ ಜಾಹೀರಾತು,
ವಿವಿಧ ಮೋಜಿನ ಕಾರ್ಯಕ್ರಮಗಳಲ್ಲಿ ಇಸ್ಮಾಯಿಲ್‌ಗೆ ಆಹ್ವಾನ ಕಡ್ಡಾಯ.

ಪ್ರತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಕನಿಷ್ಠ ₹2 ಸಾವಿರದಿಂದ ₹50 ಸಾವಿರದವರೆಗೂ ಶುಲ್ಕ ವಿಧಿಸುತ್ತಾರೆ. ಇದರಲ್ಲಿ 10ರಿಂದ 100 ವಸ್ತು ಮತ್ತು ಪ್ರತಿಕೃತಿಗಳನ್ನು ತಯಾರಿಸಿ ಸಮಾರಂಭದ ವೈಭವ ಹೆಚ್ಚಿಸುತ್ತಾರೆ. ಅಂದಹಾಗೆ ಈ ಕಲಾಕೃತಿಗಳನ್ನು ಸಿದ್ಧಪಡಿಸಲು ಹೆಚ್ಚೆಂದರೆ ಐದು ತಾಸು ಬೇಕೇಬೇಕು. ‘ಸಾಮಾನ್ಯವಾಗಿ ಕುಂಬಳಕಾಯಿ ಮತ್ತು ಕಲ್ಲಂಗಡಿಯನ್ನು ಹೆಚ್ಚಾಗಿ ಬಳಸುತ್ತೇವೆ. ಇದನ್ನು ಕನಿಷ್ಠ ನೀರು ಸಿಂಪರಿಸಿ ಐದು ದಿನಗಳವರೆಗೆ ಕಾಪಾಡಬಹುದು ಎಂಬ ಕಾರಣಕ್ಕೆ’ ಎನ್ನುವುದು ಅವರ ಅನುಭವದ ನುಡಿ.

ಕಾರ್ವಿಂಗ್‌ ಕಲಿತ ಬಗೆ
ಎಸ್ಸೆಸ್ಸೆಲ್ಸಿ ಓದಿದ್ದ ಇಸ್ಮಾಯಿಲ್‌ಗೆ ಮೊದಲಿನಿಂದಲೂ ಚಿತ್ರ ಬಿಡಿಸುವುದರಲ್ಲಿ ಆಸಕ್ತಿ ಇತ್ತು. ಒಮ್ಮೆ, ಅಂದರೆ 10 ವರ್ಷಗಳ ಹಿಂದಿನ ಮಾತು. ಬೆಂಗಳೂರಿನಿಂದ ಬಂದಿದ್ದ ಶಶಿ ಮತ್ತು ಅಂಥೋಣಿ ಎಂಬುವರು ಹುಬ್ಬಳ್ಳಿಯ ಮದುವೆಯೊಂದರಲ್ಲಿ ಕಾರ್ವಿಂಗ್‌ ಮಾಡುತ್ತಿದ್ದುದನ್ನು ಗಮನಿಸಿ, ತಾನೂ ಈ ಕಲೆ ಕಲಿಯುವ ಆಸೆ ವ್ಯಕ್ತಪಡಿಸುತ್ತಾರೆ. ಅಂತೆಯೇ ಇಸ್ಮಾಯಿಲ್‌ ಮುಂದಿನ ಎರಡು ವರ್ಷಗಳ ಕಾಲ ಶಶಿ ಮತ್ತು ಅಂಥೋಣಿ ಜೋಡಿಯೊಂದಿಗೆ ಬೆಂಗಳೂರಿನಲ್ಲಿ ಕೆಲಸ ಕಲಿಯುತ್ತಾರೆ.

‘ಅಂದು ನನಗೆ ದಿನಕ್ಕೆ ₹50 ನೀಡುತ್ತಿದ್ದರು. ಇಂದು ನನ್ನ ಜೊತೆ ಎಂಟು ಮಂದಿ ಕೆಲಸ ಮಾಡುತ್ತಾರೆ. ಪ್ರತಿಯೊಬ್ಬರಿಗೆ ₹500 ನೀಡುತ್ತೇನೆ’ ಎಂದು ನಿನ್ನೆಯನ್ನು ಸ್ಮರಿಸಿಕೊಳ್ಳುತ್ತಾರೆ ಅವರು.

‘ದೇಶದಲ್ಲಿ ಸಾಕಷ್ಟು ಮಂದಿ ಕಾರ್ವಿಂಗ್‌ ಕಲೆಯಲ್ಲಿ ಪಳಗಿದ್ದಾರೆ. ಕಲೆಯಲ್ಲಿ ಮತ್ತಷ್ಟು ನೈಪುಣ್ಯ ಸಾಧಿಸಲು ಅವಕಾಶವಿದೆ. ಒಮ್ಮೆ ದೆಹಲಿಯಲ್ಲಿ ನಿಪುಣ ಕಾರ್ವಿಂಗ್ ಕಲಾವಿದರು ಸೇರಿದ್ದರು. ಆ ಮದುವೆ ಸಮಾರಂಭದಲ್ಲಿ ಹಿರಿಯರು ಗಣೇಶ ಮೂರ್ತಿ ಬೇಕು ಎಂದು ಪಟ್ಟು ಹಿಡಿದರು. ಅಲ್ಲಿದ್ದ ಎಂಟು ಮಂದಿ ಕಾರ್ವಿಂಗ್‌ ಕಲಾವಿದರಲ್ಲಿ ನನ್ನಷ್ಟು ಸುಂದರವಾಗಿ ಅವರ್‍್ಯಾರಿಗೂ ಗಣೇಶನ್ನ ತಯಾರಿಸಲು ಆಗಲಿಲ್ಲ. ಅಂತೆಯೇ ಅವರಿಂದ ನಾನು ಡೈನೋಸಾರ್‌, ನವಿಲು ಮತ್ತಿತರ ಪ್ರಾಣಿಗಳನ್ನು ತಯಾರಿಸುವುದನ್ನು ಕಲಿತೆ’ ಎಂದು ವಿನಮ್ರವಾಗಿ ನುಡಿಯುತ್ತಾರೆ.

ಶಿಬಿರ ನಡೆಸುವ ಒತ್ತಡ
‘ಕಾರ್ವಿಂಗ್‌ ಕಲಿಸುವ ಸಲುವಾಗಿಯೇ ಸಾಕಷ್ಟು ಮಂದಿ ಶಿಬಿರ ನಡೆಸುವಂತೆ ಇಸ್ಮಾಯಿಲ್‌ ಅವರ ಮೇಲೆ ಒತ್ತಡ ಹೇರುತ್ತಾರಂತೆ. ಆದರೆ ಒಪ್ಪಿಕೊಂಡ ಕೆಲಸ ಮುಗಿಸಲು ಸಮಯ ಸಾಲುತ್ತಿಲ್ಲ, ಅಂಥದ್ದರಲ್ಲಿ ತರಗತಿಗಳ ಮೂಲಕ ಮಕ್ಕಳಿಗೆ ಕಲಿಸುವುದು ಹೇಗೆ? ಬಿಡುವಿದ್ದಾಗ ಸಾಧ್ಯವಾದಷ್ಟು ನೆರೆ ಹೊರೆಯ ಆಸಕ್ತ ಮಕ್ಕಳಿಗೆ ಕಾರ್ವಿಂಗ್‌’ ಹೇಳಿಕೊಡುತ್ತೇನೆ ಎನ್ನುತ್ತಾರೆ.

‘ಇದರ ಜೊತೆಗೆ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕಲಿಯುವ ವಿದ್ಯಾರ್ಥಿಗಳು ಕಾರ್ವಿಂಗ್‌ ಬಗ್ಗೆ ಮಾಹಿತಿ ಕೇಳುತ್ತಾರೆ. ಕಲಿಯಲು ಉತ್ಸುಕತೆ ವ್ಯಕ್ತಪಡಿಸುತ್ತಾರೆ. ಆದರೆ ಅವರಿಗೆ ಕಲಿಸುವಷ್ಟು ಸಮಯ ನನಗಿಲ್ಲ. ಒಮ್ಮೆ ಧಾರವಾಡದ ಕಲಾಭವನದಲ್ಲಿ ಕಾರ್ವಿಂಗ್‌ ಬಗ್ಗೆ ಸುದೀರ್ಘ ಪಾಠ ಮಾಡಿದ್ದು, ತೃಪ್ತಿ ನೀಡಿದೆ. ಪದವಿ ಪಡೆಯುವುದೇ ಅಂತಿಮವಲ್ಲ. ನಮ್ಮಲ್ಲಿರುವ ಪ್ರತಿಭೆಯನ್ನು ಪತ್ತೆ ಹಚ್ಚಿ ಅದರಲ್ಲಿ ನೈಪುಣ್ಯ ಸಾಧಿಸುವುದಷ್ಟೇ ಮುಖ್ಯ ಎನಿಸಿದ್ದು ಆಗ. ಇದನ್ನೇ ನಾನು ಎಲ್ಲರಿಗೂ ಹೇಳುತ್ತೇನೆ’ ಎನ್ನುವುದು ಅವರ ಅನುಭವದ ನುಡಿ.

ಕಾರ್ವಿಂಗ್‌ನಿಂದ ವೆಜ್‌ ಕೇಕ್‌!
ಒಮ್ಮೆ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಕೆಲವರು ಮೊಟ್ಟೆಯಿಂದ ತಯಾರಿಸಿದ ಕೇಕ್‌ ತಿನ್ನಲು ಇಷ್ಟಪಡಲಿಲ್ಲ. ಇದನ್ನು ಗಮನಿಸಿದ ಇಸ್ಮಾಯಿಲ್, ಹಣ್ಣು–ಹಂಪಲುಗಳನ್ನು ಕತ್ತರಿಸಿ ಫ್ರೂಟ್‌ ಕೇಕ್ ತಯಾರಿಸಿದ್ದರಂತೆ. ಹೀಗೆ ಒಮ್ಮೊಮ್ಮೆ ಸ್ಥಳದಲ್ಲಿಯೇ ಸವಾಲು ಎದುರಾಗುತ್ತದೆ ಎನ್ನುವ ಅವರು, ಸಕಾರಾತ್ಮಕವಾಗಿ ಚಿಂತಿಸುವುದರಿಂದ ಜನಮನ ಗೆಲ್ಲಬಹುದು ಎನ್ನುತ್ತಾರೆ.

ಅಂತೆಯೇ ಮಕ್ಕಳ ಜನ್ಮದಿನದ ಕಾರ್ಯಕ್ರಮಕ್ಕೆ ಅವರ ಹೆಸರು ಮತ್ತು ಅವರದೇ ಚಿತ್ರವನ್ನು ತರಕಾರಿಯ ಮೇಲೆ ಚಿತ್ರಿಸುವುದು, ಪ್ರಿಯಕರ ಮತ್ತು ಪ್ರಿಯತಮೆಗೆ ಅವರ ಸ್ವೀಟ್‌ಹಾರ್ಟ್‌ಗಳು ವಿಶಿಷ್ಟ ವಿನ್ಯಾಸದ ತರಕಾರಿ ಗಿಫ್ಟ್‌ ನೀಡುವಾಗಲೂ ಇಸ್ಮಾಯಿಲ್‌ ಕೈಚಳಕವಿರುತ್ತದೆ. ಈ ಕಲೆ ಸಾಕಷ್ಟು ಮಂದಿಗೆ ವ್ಯಾಪಾರ ಒದಗಿಸಿದೆ’ ಎನ್ನುತ್ತಾರೆ ಇಸ್ಮಾಯಿಲ್‌ ಅವರ ಗೆಳೆಯ, ಹಣ್ಣಿನ ವ್ಯಾಪಾರಿ ಬಾಬಿ ಡಿಯೋಲ್‌.

‘2011ರ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ–ಪಾಕಿಸ್ತಾನದ ನಾಯಕರು ಮತ್ತು ವಿಶ್ವಕಪ್‌ ಮಾದರಿಯನ್ನು ಕಲ್ಲಂಗಡಿಯಲ್ಲಿ ತಯಾರಿಸುವ ಮೂಲಕ ಪಂದ್ಯದ ರೋಚಕತೆಯನ್ನು ಇಸ್ಮಾಯಿಲ್‌್ ಮತ್ತಷ್ಟು ಹೆಚ್ಚಿಸಿದ್ದರು’ ಎಂದು ಸ್ಮರಿಸಿಕೊಳ್ಳುತ್ತಾರೆ ಅವರು.

‘ಒಮ್ಮೆ ಸಮಾರಂಭವೊಂದಕ್ಕೆ ಕಾರ್ವಿಂಗ್ ಮಾಡಲು ತರಕಾರಿ ಖರೀದಿಗೆ ಮಾರುಕಟ್ಟೆಗೆ ಹೋಗಿದ್ದಾಗ, ಅಲ್ಲಿ ಕ್ಷಣಮಾತ್ರದಲ್ಲಿ ಸೋರೆಕಾಯಿಯಲ್ಲಿ ಗಣಪನನ್ನು ತಯಾರಿಸಿಕೊಟ್ಟಿದ್ದೆ. ಫುಲ್‌ ಖುಷ್‌ ಆದ ಅಂಗಡಿಯ ಮಾಲೀಕ ನನಗೆ ತರಕಾರಿಯನ್ನು ರಿಯಾಯಿತಿ ದರದಲ್ಲಿ ನೀಡಿದ್ದರು. ಆ ಸೋರೆಕಾಯಿ ಗಣಪನನ್ನು ಅಭಿಮಾನಿಯೊಬ್ಬರು ಒಂದು ಸಾವಿರ ಕೊಟ್ಟು ಖರೀದಿಸಿದರಂತೆ’ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ ಇಸ್ಮಾಯಿಲ್‌.

ಇನ್ನೊಮ್ಮೆ ಹಾವೇರಿ ಜಿಲ್ಲೆಯ ಬ್ಯಾಡಗಿಗೆ ಹೋಗಿದ್ದಾಗ, ಮೆಣಸಿನಕಾಯಿ ಬಳಸಿ ಹುಂಜ ತಯಾರಿಸಿ, ಮಸಾಲೆ ಅರೆಯಲು ಅಲ್ಲಿನವರಿಗೆ ಹೇಳಿದ್ದೆ ಎಂದು ನಗೆಚಟಾಕಿ ಹಾರಿಸುತ್ತಾರೆ.

ಕಳೆದ ಒಂದು ದಶಕದಲ್ಲಿ ಬದುಕಿನಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹಣ–ಖ್ಯಾತಿಯೂ ಸಿಕ್ಕಿದೆ. ಆದರೆ, ನಾಲ್ಕು ದಿನದಲ್ಲಿ ತರಕಾರಿ ಬಾಡುವುದರಿಂದ ಕಲೆಯೂ ಅದರೊಂದಿಗೆ ಹೋಗಿ ಬಿಡುತ್ತದೆ. ಇದು ಒಮ್ಮೊಮ್ಮೆ ತೀವ್ರ ಕಾಡುತ್ತದೆ ಎನ್ನುವ ಅವರು ಸರ್ವ ಋತುವಿನಲ್ಲಿಯೂ ಬ್ಯುಸಿಯಾಗಿರುತ್ತಾರೆ.
ಇದರೊಂದಿಗೆ ಒಳ್ಳೆಯ ರುಮಾಲಿ ರೋಟಿ, ವಿವಿಧ ಬಗೆಯ ಶಾಖಾಹಾರ ಮತ್ತು ಮಾಂಸಾಹಾರಗಳನ್ನು ತಯಾರಿಸುವ ಮೂಲಕ ಮನಸ್ಸು ಮತ್ತು ನಾಲಿಗೆಯ ಸ್ವಾದವನ್ನು ಹೆಚ್ಚಿಸುತ್ತಿದ್ದಾರೆ ಇವರು. ಇಸ್ಮಾಯಿಲ್‌ ಸಂಪರ್ಕಕ್ಕೆ:  9901462232.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT