ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಕ್ಕೆ ತಕ್ಕಂತೆ ಬದಲಾಗಲಿ

ಐಪಿಸಿ ಸೆಕ್ಷನ್‌ 124 (ಎ) ವಿವಾದ
Last Updated 11 ಮಾರ್ಚ್ 2016, 19:55 IST
ಅಕ್ಷರ ಗಾತ್ರ

ಭಾರತೀಯ ದಂಡ ಸಂಹಿತೆಯ ಕೆಲವು ಕಾನೂನುಗಳು ಏನು ಹೇಳುತ್ತವೆ ಎನ್ನುವುದಕ್ಕಿಂತ ಅವುಗಳನ್ನು ಯಾರು ಪ್ರಯೋಗಿಸುತ್ತಾರೆ ಮತ್ತು ಯಾರ ಮೇಲೆ ಪ್ರಯೋಗಿಸುತ್ತಾರೆ ಎನ್ನುವುದು ಮುಖ್ಯ.  ದೇಶದ್ರೋಹ, ಪಿತೂರಿಯನ್ನು ಒಳಗೊಂಡ ಸೆಕ್ಷನ್‌ಗಳನ್ನು  ವಿಶ್ಲೇಷಿಸುವ ಕಾಲ ಮತ್ತೆ ಸನ್ನಿಹಿತವಾಗಿದೆ. ಹಿತಾಸಕ್ತಿಗಳಿಗೆ ಬಳಕೆಯಾಗುವ, ಪ್ರಭುತ್ವದ ಹಿತಾಸಕ್ತಿ ರಕ್ಷಿಸಲು, ಭಿನ್ನಮತ, ಅಭಿಪ್ರಾಯಭೇದ ಹೊಂದಿದವರನ್ನು ಸದೆಬಡಿಯುವ, ದೇಶದ್ರೋಹಿಗಳೆಂದು ಸಾರಲು ಅವಕಾಶ ನೀಡುವ ಕಾನೂನುಗಳಿಗೆ ಬದಲಾವಣೆ ತರಬೇಕಾಗಿದೆ.

ಯಾವುದನ್ನು ದೇಶದ್ರೋಹ, ಪಿತೂರಿ  ಎಂದು ಪರಿಗಣಿಸಿ ಬ್ರಿಟಿಷರು ಕಾನೂನು ಮಾಡಿದ್ದರೋ, ಅಂತಹ ಕಾನೂನುಗಳನ್ನು ಅವರು ತಮ್ಮ ದೇಶದಲ್ಲಿ ತೆಗೆದು ಹಾಕಿದ್ದಾರೆ.  ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅಂತಹ ಕಾನೂನಿಗೆ ಬಲಿಯಾಗಿದ್ದ ನಾವು  ಅವುಗಳನ್ನು ಈಗಲೂ ಮುಂದುವರಿಸಿದ್ದೇವೆ. ದಂಡ ಸಂಹಿತೆಯನ್ನು ಪುನರ್ವಿಮರ್ಶಿಸುವುದು  ದೇಶದ್ರೋಹ, ಪಿತೂರಿ ವಿರುದ್ಧದ ಕಾನೂನುಗಳಿಗಾಗಿ ಮಾತ್ರ ಅಲ್ಲ. ಭಾರತ ಸಂವಿಧಾನ ಕೊಡಮಾಡಿದ  ಮೂಲಭೂತ ಹಕ್ಕು, ಸ್ವಾತಂತ್ರ್ಯಗಳಿಗೂ ಕೆಲವು ಕಾನೂನುಗಳು ತಡೆ ಒಡ್ಡಿವೆ.

ಉದಾಹರಣೆಗೆ, ಸೆಕ್ಷನ್‌ 53ರ ಮರಣ ದಂಡನೆ, 295 ಎನಲ್ಲಿ ಬರುವ ಧಾರ್ಮಿಕ ನಂಬಿಕೆಗೆ ಸಂಬಂಧಿಸಿದ ಕಾನೂನು, ಸೆಕ್ಷನ್‌ 499ರಲ್ಲಿ ಹೇಳುವ ಮಾನಹಾನಿ ಕುರಿತ ಕಾನೂನು ಇಂತಹವನ್ನೆಲ್ಲ ತಿದ್ದುಪಡಿಗೆ ಒಳಪಡಿಸಬೇಕಿದೆ. ನ್ಯಾಯಾಲಯಗಳ ವಿಶ್ಲೇಷಣೆಗಳಿಗೆ ಕಾಯದೆ ಮೂಲ ಕಾನೂನಿನಲ್ಲೇ ಬದಲಾವಣೆ ತರಬೇಕಾಗಿದೆ. ಯಾವುದೋ ಕಾಲದಲ್ಲಿನ ಧಾರ್ಮಿಕ ನಂಬಿಕೆ, ಆಚರಣೆಗಳು ಈಗ ಅರ್ಥ ಕಳೆದುಕೊಂಡಿರುತ್ತವೆ. ಅವುಗಳನ್ನು ಪ್ರಶ್ನಿಸಿದರೆ, ಅದು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಎಂದು ಕೋಲಾಹಲಕ್ಕೆ ಕಾರಣವಾಗುತ್ತದೆ. ಹಾಗೆ ಪ್ರಶ್ನಿಸುವುದೂ ಕಾನೂನು ಪ್ರಕಾರ ಅಪರಾಧವಾಗುತ್ತದೆ.

ಕಾಲ ಬದಲಾದಂತೆ ಕಾನೂನುಗಳೂ ಬದಲಾಗಬೇಕು. ಬ್ರಿಟಿಷರು ಭಾರತದ ಬಹುತ್ವವನ್ನು ನಾಶ ಮಾಡಿ, ತಮ್ಮ ಆಡಳಿತಕ್ಕೆ ತಕ್ಕಂತೆ ಕಾನೂನು ರಚಿಸಿದ್ದರು. ಇಂದು ನಮ್ಮದು ಸ್ವತಂತ್ರ ದೇಶ. ಭಿನ್ನತೆಗಳ ಮಧ್ಯೆಯೂ ಏಕತೆ ಹೊಂದಿರುವುದು ದೇಶದ ಶಕ್ತಿ ಮತ್ತು ಸೌಂದರ್ಯ. ಪ್ರಭುತ್ವ ಒಂದು ರಾಜಕೀಯ ಪಕ್ಷದ ನಿಯಂತ್ರಣದಲ್ಲಿರುತ್ತದೆ. ರಾಜಕೀಯ ಪಕ್ಷ ಒಂದು ವರ್ಗದ ಹಿತಾಸಕ್ತಿ ಕಾಯುತ್ತಿರುತ್ತದೆ. ಅಂತಹ ಒಂದು ಪಕ್ಷದ, ಒಂದು ವರ್ಗದ ಹಿತಾಸಕ್ತಿಗಾಗಿ ಪ್ರಭುತ್ವವು ಕಾನೂನಿನ ದುರ್ಬಳಕೆ ಮಾಡುವುದರಿಂದ ದೇಶದ ಐಕ್ಯತೆಗೆ, ಸಮಗ್ರತೆಗೆ, ಅಂತಿಮವಾಗಿ ಸಾರ್ವಭೌಮತೆಗೆ ಧಕ್ಕೆಯಾಗುತ್ತದೆ. ಹಾಗಾಗ ಕೂಡದು.
– ಡಾ. ಸಿದ್ಧನಗೌಡ ಪಾಟೀಲ,
ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT