ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲದ ತಕ್ಕಡಿಯಲ್ಲಿ ಕನ್ನಡ ಸ್ಪಂದನ

Last Updated 4 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಪರಂಪರೆಯ ಭಾರದಿಂದ ಕಳಚಿಕೊಂಡ ಸರಳ ಕನ್ನಡವಷ್ಟೇ ಸಾಕು ಎಂಬುದು ಇಂದಿನವರ ಇಂಗಿತ. ಕನ್ನಡವನ್ನು ಇದ್ದದ್ದು ಇದ್ದ ಹಾಗೆ– ಶುದ್ಧವಾಗೇ ಉಪಯೋಗಿಸಬೇಕು ಎಂಬುದು ಹಿಂದಿನವರ ಹಟ. ಎರಡು ಪೀಳಿಗೆಯವರ ಭಿನ್ನ ಧೋರಣೆಯ ನಡುವೆ ‘ಕನ್ನಡ ತನ್ನ ಇತಿಹಾಸವನ್ನು ಮರೆಯದೆ ವರ್ತಮಾನಕ್ಕೆ ಸ್ಪಂದಿಸಲು ಏನು ಮಾಡಬೇಕು?’ ಪರಂಪರೆಯ ಭಾರದಿಂದ ಕಳಚಿಕೊಂಡ ಸರಳ ಕನ್ನಡವಷ್ಟೇ ಸಾಕು ಎಂಬುದು ಇಂದಿನವರ ಇಂಗಿತ. ಕನ್ನಡವನ್ನು ಇದ್ದದ್ದು ಇದ್ದ ಹಾಗೆ– ಶುದ್ಧವಾಗೇ ಉಪಯೋಗಿಸಬೇಕು ಎಂಬುದು ಹಿಂದಿನವರ ಹಟ. ಎರಡು ಪೀಳಿಗೆಯವರ ಭಿನ್ನ ಧೋರಣೆಯ ನಡುವೆ ‘ಕನ್ನಡ ತನ್ನ ಇತಿಹಾಸವನ್ನು ಮರೆಯದೆ ವರ್ತಮಾನಕ್ಕೆ ಸ್ಪಂದಿಸಲು ಏನು ಮಾಡಬೇಕು?’ ಎಂಬ ಪ್ರಶ್ನೆಯನ್ನು ಓದುಗರ ಮುಂದಿಡಲಾಗಿತ್ತು.

ಹೊಸದಿನಗಳ ಸವಾಲುಗಳೊಂದಿಗೆ, ಸಂಪ್ರದಾಯಿಕ ಸತ್ವವನ್ನು ಬಳಸಿಕೊಂಡು ಕನ್ನಡ ನುಡಿಯನ್ನು ಹೇಗೆಲ್ಲಾ ಕಳೆಗಟ್ಟಿಸಬಹುದು ಎಂಬ ಆಲೋಚನೆಗಳ ಮಹಾಪೂರವೇ ಹರಿದುಬಂದಿತ್ತು. ಅಲ್ಪಪ್ರಾಣ, ಪದಗಳ ಎರವಲು ಹೊರತಾಗಿಯೂ ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳ ‘ಇ’ಯುಗದಲ್ಲಿ ಭಾಷೆಯನ್ನು ಅಪ್ಪಿಕೊಂಡ, ಒಪ್ಪಿಕೊಂಡ ಹಲವು ರೀತಿಯ ಪತ್ರಗಳು ಕೈ ಸೇರಿವೆ. ಇಂದಿನ ನುಡಿಬಿಂಬದೊಟ್ಟಿಗೆ ನಾಳಿನ ಭವಿತವ್ಯದ ಸುಳಿವನ್ನೂ ಕಾಣಿಸಬಲ್ಲ ಅವುಗಳಲ್ಲಿ ಕೆಲವು ಇಲ್ಲಿವೆ...

ಹೃದಯಕ್ಕೊಂದೇ ಭಾಷೆ
ಹೌದು ‘ಕನ್ನಡ’ ಬರೆಯಲು ಓದಲು ಇಂದಿನವರಿಗೆ ಮೊದಲು ಆಸಕ್ತಿಯೇ ಇಲ್ಲ, ಕಲಿಸುವವರಲ್ಲೂ ಆಸಕ್ತಿ ಇಲ್ಲ. ಇದ್ದರೂ ಮಾರ್ಗಗಳು ಸರಿಯಿಲ್ಲದೇ ಕನ್ನಡ ಭಾಷೆ ಅಂಗನವಾಡಿ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಿಂದಲೇ ಕಾಯಿಲೆ ಬಿದ್ದಂತೆ; ಸೊರಗುತ್ತಾ, ಕೊರಗುತ್ತಾ, ನರಳುತ್ತಾ, ತೆವಳುತ್ತಾ, ಹತ್ತನೇ ತರಗತಿ ಬರುವಷ್ಟರಲ್ಲಿ ಅತ್ಯಂತ ಸುಂದರ ಕನ್ನಡ ಭಾಷೆಯ, ಕೈ ಕಾಲುಗಳೇ ಇಲ್ಲದಂತಾಗಿರುತ್ತವೆ. ಇದಕ್ಕೆಲ್ಲಾ ಕಾರಣ, ಶಾಲೆಯಲ್ಲಿನ ಕಲಿಕಾ ಮಾರ್ಗದ ‘ಅಡಿಪಾಯ’ ಸರಿಯಿಲ್ಲದೇ ಇರುವುದು. ನಿಜವಾಗಿಯೂ ಕನ್ನಡ ಉಳಿಯಬೇಕೆಂದರೆ ಮಕ್ಕಳಿಗೆ ಅಂಗನವಾಡಿಯಿಂದಲೇ ‘ಕ’ ತಲಕಟ್ಟು–ಕ, ‘ಕ’ಕ್ಕೆ ಇಳೀಕಾ, ಕ್ಷಙ್ಞವರೆಗೂ ಸರಿಯಾಗಿ ಕಾಗುಣಿತ, ಕಡ್ಡಾಯವಾಗಿ ಕಲಿಸಬೇಕು ಹಾಗೂ ಕಾಗುಣಿತವನ್ನು ಸ್ಪಷ್ಟವಾಗಿ ಕಲಿಸಬೇಕು.

ಶಾಲೆಯ ಎಲ್ಲಾ ಉಪಾಧ್ಯಾಯರು ಅತ್ಯಂತ ಕಾಳಜಿ ವಹಿಸಿ ಇದನ್ನು ಕಲಿಸಿದರೆ, ಮಕ್ಕಳ ಮನಸ್ಸಿನಲ್ಲಿ ಕೊನೇತನಕ ಕನ್ನಡ ಹಸಿರಾಗಿ–ಹೆಸರಾಗಿ ಉಳಿಯುವುದರಲ್ಲಿ ಸಂಶಯವೇ ಇಲ್ಲ.

ಆದರೆ ವಿಶ್ವವ್ಯಾಪಿಯಾಗುತ್ತಿರುವ ‘ಇಂಗ್ಲಿಷ್‌’ಗೆ ತಾಂತ್ರಿಕವಾಗಿ ಪೈಪೋಟಿ ನೀಡಲು, ಸದ್ಯದ ಸ್ಥಿತಿಯಲ್ಲಿ ಆಗದ ಮಾತಾಗಿರುವುದರಿಂದ; ಜೀವನಕ್ಕಾಗಿ ಇಂಗ್ಲಿಷ್ ಬೇಕೇ ಬೇಕಾಗಿದೆ. ನಮ್ಮ ಹೃದಯ ಮನಸ್ಸಿನ, ಪ್ರೀತಿಗೆ ನಮ್ಮ ‘ಕನ್ನಡ’ ಭಾಷೆಯೇ ಇರಲಿ. ಮುಂದಿನ ಪೀಳಿಗೆಯವರಿಗಾಗಿ ಅಳಿಯದೆ ಉಳಿಯಲಿ, ಉಳಿಸಲು ಎಲ್ಲರೂ ಹೃದಯ, ಮನಸ್ಸು ಅರ್ಪಿಸಲಿ.
- ಗುರುಸ್ವಾಮಿ, ಬೆಂಗಳೂರು

ತಾಂತ್ರಿಕ ಶಬ್ದ ಭಂಡಾರ ಬೇಕು
ಸರ್ವಭಾಷೆಗಳಿಗಿಂತಲೂ ವಿಭಿನ್ನ, ವಿಶೇಷಗಳನ್ನು ಒಳಗೊಂಡ, ಅರ್ಥಪೂರ್ಣ ಶಬ್ದಗಳನ್ನೊಳಗೊಂಡ, ವಿಶಾಲವಾದ ವ್ಯಾಕರಣಗಳನ್ನೊಳಗೊಂಡ ಹಾಗೂ ಕವಿ-ಕೋಗಿಲೆಗಳ ಭಾವನಾಲಹರಿಗೆ ಪದಪುಂಜಗಳ ಆಗರವಾಗಿರುವ ಭಾಷೆ ನಮ್ಮೆಲ್ಲರ ನಾಡಭಾಷೆ ಕನ್ನಡ. ಆಂಗ್ಲಭಾಷೆಯ ಅನಿವಾರ್ಯ ವ್ಯಾಮೋಹದಿಂದ ಕನ್ನಡ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿದೆಯೇ ಎಂಬ ಆತಂಕ ಚಿಂತಕರನ್ನೂ, ಕನ್ನಡಾಭಿಮಾನಿಗಳನ್ನೂ ಕಾಡುತ್ತಿದೆ. ಇದಕ್ಕೆ ಕಾರಣ ಹಾಗೂ ಪರಿಹಾರಗಳನ್ನು ಹುಡುಕಹೊರಟಾಗ ಕೆಲವು ಮುಖ್ಯ ಸಂಗತಿಗಳು ನೆನಪಾಗುತ್ತವೆ.

ಅಮ್ಮ ಎನ್ನುವ ತೊದಲ್ನುಡಿಯಿಂದ ಪ್ರಾರಂಭವಾಗುವ ಮಾತೃಭಾಷೆ ಯಾವುದೇ ವಿಶೇಷ ತರಬೇತಿಯ ಅನಿವಾರ್ಯತೆಯಿಲ್ಲದೇ ನಮ್ಮೊಂದಿಗಿರುತ್ತದೆ. ಮನಃಶಾಸ್ತ್ರಜ್ಞರ ಪ್ರಕಾರ, ಮಾತೃಭಾಷೆಯಲ್ಲಿ ಪ್ರಭುತ್ವ ಹೊಂದಿರುವ ವ್ಯಕ್ತಿಯು ಬಹುಬೇಗ ಇನ್ನುಳಿದ ಭಾಷೆಯನ್ನು ಗ್ರಹಿಸುತ್ತಾನೆ. 

ಕನ್ನಡ ಹೊಸ ತಲೆಮಾರಿನವರಿಂದ ದೂರವಾಗುತ್ತಿರುವುದಕ್ಕೆ ಬಹುಮುಖ್ಯ ಕಾರಣವೆಂದರೆ ವಿಜ್ಞಾನ ಕಲಿಕೆ. ತಮ್ಮ ಜ್ಞಾನವನ್ನು ವಿಜ್ಞಾನವಾಗಿಸುವ ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳು ಆಂಗ್ಲಭಾಷೆಯನ್ನೇ ಅನುಸರಿಸಬೇಕಾಗಿದೆ. ವಿಜ್ಞಾನವನ್ನು ಕನ್ನಡದಲ್ಲೇ ಓದಬೇಕೆನ್ನುವ ಕೆಲವರ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ. ಏಕೆಂದರೆ, ಜಗತ್ತಿನ ಎಲ್ಲ ಭಾಷೆಗಳಲ್ಲಿರುವ ವಿಜ್ಞಾನ ಸಾಗರವನ್ನು ಸಂಪೂರ್ಣವಾಗಿ ಕನ್ನಡಕ್ಕೆ ಭಾಷಾಂತರಿಸಿ ಪುಸ್ತಕ ರೂಪದಲ್ಲಿ ನೀಡಲು ಸಾಧ್ಯವೇ? ವಿಜ್ಞಾನವನ್ನು ಅದೇ ಭಾಷೆಯಲ್ಲೇ ಓದಬೇಕಾಗಿದೆ. ಕೆಲವು ಕನ್ನಡಪರ ಸಂಘಟನೆಗಳು ಉದ್ಧಟತನದಿಂದ, ಕನ್ನಡವನ್ನು ಬಳಸಲು ಒತ್ತಾಯಿಸುವುದರಲ್ಲಿ ಅರ್ಥವೇನಿದೆ. ಇಂಗ್ಲಿಷ್ ಪದಗಳನ್ನು ಕನ್ನಡ ಅಕ್ಷರಗಳಿಂದ ಬಳಸಿದಲ್ಲಿ ತಪ್ಪಿಲ್ಲ. ಭಾಷಾಂತರಿಸಲು ಪ್ರಯತ್ನಿಸಿದಲ್ಲಿ ವಿಷಯವನ್ನು ಅರ್ಥೈಸಲಾಗದೇ ಓದುಗರು ಓದುವ ಪ್ರಯತ್ನವನ್ನೇ ನಿಲ್ಲಿಸಬಹುದಲ್ಲವೇ! ಇನ್ನು ಐರೋಪ್ಯ ರಾಷ್ಟ್ರಗಳಲ್ಲಿ ತಮ್ಮ ಮಾತೃಭಾಷೆಯಲ್ಲೇ ವಿಜ್ಞಾನವನ್ನು ಅಭ್ಯಸಿಸುವುದರಿಂದ ಪ್ರಭುತ್ವ ಸಾಧ್ಯವಾಗಿದೆ ಎಂಬುದು ಕೂಡ ಕೆಲವರ ವಾದ. ವಿಜ್ಞಾನ ಸಂಬಂಧಿ ಕನ್ನಡ ಚಾನೆಲ್‌ಗಳು ಕೂಡ ಇಂಗ್ಲಿಷ್ ಹಾಗೂ ಇನ್ನಿತರೇ ಭಾಷೆಯ ಚಾನೆಲ್‌ಗಳಿಗೆ ಹೋಲುವಷ್ಟು ಪರಿಣಾಮಕಾರಿಯಾಗಿಲ್ಲ.

ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಉದ್ಧಟತನದ ಬದಲು ಕನ್ನಡ ಸಾಹಿತ್ಯದ ಅನಾವರಣದೆಡೆ ಗಮನಹರಿಸೋಣ. ಉತ್ತಮ ಪುಸ್ತಕಗಳ ಪರಿಚಯದೊಂದಿಗೆ ವಿದ್ಯಾರ್ಥಿಗಳಿಗೆ ಕನ್ನಡದ ರುಚಿಯುಣಿಸೋಣ. ವಿಜ್ಞಾನ ಬರಹಗಳು, ವೇದೋಪನಿಷತ್ತುಗಳು, ಯೋಗ ಮೊದಲಾದ ಆರೋಗ್ಯ ಸೂತ್ರಗಳು ಕನ್ನಡದಲ್ಲಿ ಇನ್ನೂ ವಿವರವಾಗಿ ಮೂಡಿಬರಲಿ. ಕನ್ನಡ ಸಾಹಿತ್ಯ ಪರಿಷತ್ತು ತೆಗೆದುಕೊಳ್ಳುವ ನಿರ್ಣಯಗಳೂ ಕನ್ನಡದ ಬಲವರ್ಧನೆಗೆ ಪೂರಕವಾಗಿರಲಿ. ಶಾಲಾ-ಕಾಲೇಜುಗಳ ಪುಸ್ತಕಗಳಲ್ಲಿ ಸೇರಿಸಲಾಗುವ ಕನ್ನಡ ಸಾಹಿತ್ಯದ ಭಾಗಗಳು ವಿಶೇಷ ಹಾಗೂ ಸರಳವಾಗಿರಲಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗುರಿಯಾಗಿರಿಸಿಕೊಂಡು ಭಾಷೆಯನ್ನು ಕಠಿಣಗೊಳಿಸುವುದು ಸರಿಯೇ?

ಆಡಳಿತಾತ್ಮಕವಾಗಿ ಕನ್ನಡವನ್ನು ಕಡ್ಡಾಯಗೊಳಿಸುವುದು ಎಷ್ಟರ ಮಟ್ಟಿಗೆ ಯಶಸ್ವಿಯಾಗುವುದೋ ತಿಳಿಯದು. ಕೇವಲ Bangalore- Bengaluru ಎಂಬುದಾಗಿ Hubli -Hubballi ಎಂಬುದಾಗಿ ಬದಲಾದಲ್ಲಿ ಮಾತ್ರ ಪ್ರಯೋಜನವಿಲ್ಲ.

ಈ ಮೂಲಕ ಕನ್ನಡದ ಪುನಃಶ್ಚೇತನಕ್ಕೆ ಮುನ್ನುಡಿ ಬರೆಯೋಣ. ಕನ್ನಡವನ್ನು ಓದಿ, ಕನ್ನಡದ ಸವಿಯನ್ನುಂಡು, ಕನ್ನಡವನ್ನು ಮಧುರವಾಗಿ ಮಾತನಾಡಿ ಕರುನಾಡ ಕನ್ನಡದ ಕಂಪು ಎಲ್ಲೆಡೆ ಪಸರಿಸುವಂತೆ ಮಾಡೋಣ.
- ಸತೀಶಕುಮಾರ ನಾಯ್ಕ, ಧಾರವಾಡ

ಕಾಲಕ್ಕೆ ತಕ್ಕಂತೆ ಕೋಲ ಕಟ್ಟುವರು
ಹಳೇ ಕನ್ನಡ ಹೊಸ ಸ್ಟೈಲ್‌ನಲ್ಲಿದ್ದರೂ ಅರ್ಥವತ್ತಾಗಿರಬೇಕು. ಬೆಳೆಯುವ ಪೈರು ಮೊಳಕೆಯಲ್ಲಿಯೇ ಜೀನ್‌್ಸ ಹೊಂದಿರುತ್ತದೆ. ಜೀನ್‌್ಸ ವ್ಯತ್ಯಾಸ ಮಾಡಿಬಿಟ್ಟಿದ್ದೇವೆ. ಸತ್ಯವೇ ಎಲ್ಲ ಎನ್ನುವವರಿದ್ದರು. ಈಗ ಸತ್ಯಕ್ಕೆ ಕಾಲವಲ್ಲ ಎನ್ನುವ ಸುಳ್ಳಿನ ಸರದಾರರಿದ್ದಾರೆ. ಸ್ವಾಭಿಮಾನವುಳ್ಳವರ ಬಗ್ಗೆ ಈಗ ಅಭಿಮಾನವಿಲ್ಲ. ಮೊದಲು ಗಾಣದ ಬೆಲ್ಲ, ಈಗ ಕಾರ್ಖಾನೆ ಬೆಲ್ಲ. ಸಿಹಿ ಕಹಿಯಾಗಿಲ್ಲ, ಕಹಿ ಸಿಹಿಯಾಗಿಲ್ಲ. ಸಕ್ಕರೆ ಕಾಯಿಲೆ ಜೋರಾಗಿದೆ. ‘ಕಾಲಾಯ ತಸ್ಮೈ ನಮಃ’. ಕಾಲಕ್ಕೆ ತಕ್ಕಂತೆ ಕೋಲ ಕಟ್ಟುತ್ತಾರೆ. ಜನಮರುಳೋ, ಜಾತ್ರೆ ಮರುಳೋ, ಮರುಳಸಿದ್ದರು ನಾವು.

ಅದೇನೇ ಇರಲಿ, ಕನ್ನಡದ ಕಂಪು– ವಿಶ್ವಮಾನವೀಯತೆ. ವಿಶ್ವಮಾನವ ಸಂದೇಶ ಕುವೆಂಪುರವರ ಕನ್ನಡದಲ್ಲಿತ್ತು. ಕಬ್ಬಿಣದ ಕಡಲೆಯಾಗಬಾರದು ಕನ್ನಡ. ತಿದ್ದಬೇಕು, ತೀಡಬೇಕು. ಹಳೇ ತಲೆಮಾರಿನವರ ಹಲ್ಲುಗಳೇ ಇಲ್ಲ. ಹೊಸ ತಲೆಮಾರಿನವರಿಗೆ ವ್ಯಾವಹಾರಿಕ ಭಾಷೆಯ ವ್ಯಾಮೋಹ. ‘ಕನ್ನಡ ಎನ್ನಡ ಮಚ್ಚ’ ಎನ್ನುವವರೇ ಈಗ ಹೆಚ್ಚು. ವೇದಗಳೆಲ್ಲ ಈಗ ಹಳತಾಗಿವೆ. ಹಳೇ ಬೇರಿನಲ್ಲಿ ಹೊಸ ಚಿಗುರು ಬಾರದಷ್ಟು ಬರಡು, ಬಂಜರಾಗಿದೆ ಭೂಮಿ. ಹಸಿರು ಕ್ರಾಂತಿ ತರಲಿಲ್ಲ ಶಾಂತಿ. ರೈತರಿಗೆ ಕುಡಿಸಿದ್ದೇಕೆ ವಿಷ. ವೇದ ಹೇಳುವುದು ಗಾಳ ಹಾಕುವುದು ಎನ್ನುವಂತಾಗಿದೆ.  ತತ್ಸಮ, ತದ್ಭವ, ತರ್ಜುಮೆ ಇವು ಇಂದಿನ ಅಗತ್ಯ. ಇವುಗಳಿಗೆ ಜ್ಞಾನದ ಕಣ್ಣು ಸಾಲದು, ವಿಜ್ಞಾನದ ಕಣ್ಣು ಸಾಲದು, ಆ ಎರಡೂ ಕಣ್ಣುಗಳು ನೋಡುವ ನೋಟ ಒಂದೇ ಆಗಬೇಕು. ಆಲೂ ಎನ್ನುವುದಕ್ಕೆ ಹಾಲೂ, ಹಾಲೂ ಎನ್ನುವುದಕ್ಕೆ ಆಲೂ ಎನ್ನುವುದೇಕೋ ತಿಳಿಯದು? ಈಗಿನ ಹಂಸಳಿಗೆ ಹಂಸಕ್ಷಿರ ನ್ಯಾಯ ಮರೆತಂತಿದೆ.

ಏಕೆಂದರೆ ಕೆರೆಗಳಲ್ಲೆಲ್ಲ ಬರಿಯ ನೊರೆ. ಹಾಗಾಗಿ ಕಾಲಕ್ಕೆ ತಕ್ಕಂತೆ ಅವು ಆಲ್ಕೋಪ್ರಿಯಾ ಹಂಸಗಳಾಗಿವೆ. ಹೋರಾಟ ಸದಾ ಇದ್ದೇ ಇದೆ. ಕೌರವರು–ಪಾಂಡವರದ್ದಲ್ಲ. ಏಕೆಂದರೆ ಈಗ ಸತ್ಯಕ್ಕೆ ಕಾಲವಲ್ಲ.  ಒಳ್ಳೆಯದಕ್ಕೆ ನೆಲೆಯೇ ಇಲ್ಲ. ಸರಿಯನ್ನು ತಪ್ಪೆಂದು, ತಪ್ಪನ್ನು ಸರಿ ಎಂದು ವಾದ ಮಾಡುತ್ತಿರುತ್ತಾರೆ. ಮೂಕಪ್ರೇಕ್ಷಕರಾಗುವವರು ಸಾಮಾನ್ಯರು. ಈಗ ಗಾಂಧಿಯಂತವರು ಇದ್ದಿದ್ದರೆ ಚರಕದ ಬಗ್ಗೆ ಚಕಾರ ಎತ್ತಲಿಕ್ಕೆ ಆಗುತ್ತಿರಲಿಲ್ಲ. ಸತ್ಯ ಸುಳ್ಳಾಗಿಬಿಟ್ಟಿದೆ. ಅಹಿಂಸೆ ಅರ್ಥ ಆಗೋದಿಲ್ಲ. ದಯಾದಾಕ್ಷಿಣ್ಯ ಇಲ್ಲವೇ ಇಲ್ಲ. ಎಲ್ಲವೂ ಸತ್ವಪರೀಕ್ಷೆ ಈಗ ಸತ್ಯಾನ್ವೇಷಣೆಗೆ ಹೊರಟರೆ, ಸತ್ತುಹೋದಂತೆ.

ಒಟ್ಟಿನಲ್ಲಿ ಹಳತು–ಹಳತು. ಈ ನಡುವೆ ಹೊಸತನದ ವಿಶ್ವಮಾನವ ಕೂಸಿನ ಜನನ ವಿಶ್ವ ಸಮುದ್ರದಲ್ಲಿ, ಇಲ್ಲಿ ಜಾಗತೀಕರಣದ ಅಲೆಯಬ್ಬರ. ಈಗಾಗಲೆ ರೆಡ್‌ಮೂನ್‌ ಡೇಂಜರ್‌ ಸಿಗ್ನಲ್‌ ನೀಡಿ ಆಗಿದೆ. ಹೊಸತನದ ಕೂಸಿನ ಪಾಲನೆ ಪೋಷಣೆ ಮಾಡುವವರಿಲ್ಲ. ಏನೇ ಆಗಲಿ ಕನ್ನಡದ ಸ್ಪಂದನೆ ಇದ್ದೇ ಇದೆ. ಕನ್ನಡಿಗರದು ಜಗಹೃದಯ. ಕನ್ನಡಮ್ಮನ ಹರಕೆ– ವಿಶ್ವಮಾನವೀಯತೆ. ಹೊಸತನವ ಸ್ವಾಗತಿಸೋಣ, ಜಾಗತಿಕ ‘ಒಂದೇ ಮಾತರಂ’ ಹಾಡೋಣ, ವಿಶ್ವ ‘ಜನಗಣಮನ’ ಹಾಡೋಣ, ವಿಶ್ವ ಕನ್ನಡಿಗರಾಗೋಣ. ಜಗತ್ತಿನ ಭಾಷೆ ನಮ್ಮದು, ನಮ್ಮ ಭಾಷೆ ಜಗತ್ತಿನದು. ಭಾಷಾ ಒಪ್ಪಂದ ಮಾಡಿಕೊಳ್ಳೋಣ. ಎಲ್ಲಾ ದೇವರು ಎಲ್ಲಾ ದೇಶದ ಗ್ರಾಮಗಳನ್ನು ದತ್ತು ತೆಗೆದುಕೊಳ್ಳೋಣ. ಎಲ್ಲಾ ಗ್ರಾಮಗಳನ್ನು ಗ್ರಾಮ ರಾಜ್ಯಗಳನ್ನಾಗಿ ಪರಿವರ್ತಿಸೋಣ. ವಿಶ್ವ ಮಾನವ ಸಾಮ್ರಾಜ್ಯ ಕಟ್ಟೋಣ. ಜಾಗತೀಕರಣಕ್ಕೆ ಹೊಸ ಅರ್ಥ ನೀಡೋಣ.
- ಎಚ್‌.ಜೆ. ವಿಶ್ವನಾಥ, ಬೇಗೂರು

ಕನ್ನಡ ಬದುಕಿಸುವ ಬಗೆ
ಭಾಷೆ ನಿಂತ ನೀರಲ್ಲ. ಹಾಗಂತ ಯಾರಿಗೂ ಎಟುಕದೆ ಹರಿದು ಪೋಲಾಗುವುದೂ ಅಲ್ಲ. ದಿನದಿಂದ ದಿನಕ್ಕೆ ಭಾಷೆ ವೃದ್ಧಿಸಬೇಕು. ಸಮೃದ್ಧಿಯಾಗಬೇಕು.  ಆದರೆ ಸೂಕ್ಷ್ಮವಾಗಿ ಅವಲೋಕಿಸಿದಾಗ ಕನ್ನಡ ಭಾಷೆಯ ಸ್ಥಿತಿಗತಿಗಳ ಕುರಿತು ಆತಂಕ ಮೂಡದಿರದು. ಬಳಕೆ ಎಂದಾಕ್ಷಣ ತಕ್ಷಣ ನೆನಪಿಗೆ ಬರುವುದು ಸಂಸ್ಕೃತ ಭಾಷೆ. ತುಂಬಾ ಇತಿಹಾಸವಿದ್ದ ಸಂಸ್ಕೃತ ಭಾಷೆ ಕೆಲವು ಅನಾರೋಗ್ಯಕರ ನಿಯಮಗಳಿಂದ ಕೇವಲ ಒಂದೇ ವರ್ಗಕ್ಕೆ ಸೀಮಿತಗೊಂಡು, ಸಂಸ್ಕೃತ ಭಾಷೆ ಬಳಸುವವರು ಅಲ್ಪಸಂಖ್ಯಾತರಾಗಿ ಆ ಭಾಷೆ ಹೆಚ್ಚೂ ಕಡಿಮೆ ಮೃತಭಾಷೆಯಾಗಿ ಮಂತ್ರ ತಂತ್ರಗಳಲ್ಲಷ್ಟೇ ಬಳಕೆಯಾಗುತ್ತಿರುವುದನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಕನ್ನಡಕ್ಕೂ ಇದೇ ಸ್ಥಿತಿ ಬರಬಹುದೆಂಬುದು ಕೆಲವು ಭಾಷಾ ತಜ್ಞರ ಅಭಿಪ್ರಾಯ.

ಭಾಷಾ ಮಾಧ್ಯಮ ನೀತಿಯನ್ನು ನೋಡಿದರೆ ಯಾವ ರಾಜ್ಯವೂ ಬಲವಂತವಾಗಿ ಒಂದು ಭಾಷೆಯನ್ನು ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕಲಿಸುವಂತಿಲ್ಲ. ಅದನ್ನು ನಿರ್ಧರಿಸಬೇಕಾಗಿರುವುದು ಪೋಷಕರು. ಈ ನಿಟ್ಟಿನಲ್ಲಿ ಕನ್ನಡವನ್ನು ಸುಧಾರಿಸುತ್ತೇವೆನ್ನುವುದು ಆಗದ ಮಾತು. ಅದಕ್ಕೆ ಪೋಷಕರು ಮನಸ್ಸು ಮಾಡಬೇಕು. ಸೂಕ್ತ ತಂತ್ರಾಂಶದ ಕೊರತೆ ಕನ್ನಡ ಕೇವಲ ದತ್ತಾಂಶಗಳನ್ನು ದಾಖಲಿಸುವುದಕ್ಕಷ್ಟೇ ಸೀಮಿತವಾಯಿತೇ ವಿನಃ ವ್ಯಾವಹಾರಿಕವಾಗಿ ಹಿಂದುಳಿಯಿತು.

ಕನ್ನಡ ಭಾಷೆಯ ಸ್ವರೂಪವನ್ನು ಇಂದಿನ ಡಿಜಿಟಲ್‌ ಮಾಧ್ಯಮಗಳಿಗೆ ಬಗ್ಗಿಸಿಕೊಳ್ಳದೆ ಒದ್ದಾಡುತ್ತಿರುವ ಈಗಿನ ತಲೆಮಾರು ಹಾಗೂ ಹೊಸ ಪ್ರಯತ್ನ, ತಂತ್ರಜ್ಞಾನಕ್ಕೆ ಬದಲಾಗದೆ ಸಾಂಪ್ರದಾಯಿಕ ಶೈಲಿಯಲ್ಲೇ ಕನ್ನಡವನ್ನು ಬೆಳೆಸುತ್ತೇವೆನ್ನುವ ಹಿಂದಿನ ತಲೆಮಾರಿನವರ ನಡುವೆ ಕನ್ನಡವನ್ನು ವರ್ತಮಾನಕ್ಕೆ ಒಗ್ಗಿಸಿಕೊಳ್ಳುವುದು ನಮಗೆ ಸವಾಲು.  ಪೈಪೋಟಿಯ ನಡುವೆಯೂ ತನ್ನ ಮಹತ್ವವನ್ನು ಕಾಯ್ದುಕೊಳ್ಳುತ್ತಿರುವುದು ಕನ್ನಡದ ಗಟ್ಟಿತನ. ಅದರಲ್ಲೂ ವಾಟ್ಸ್ಆಪ್‌, ಫೇಸ್ಬುಕ್‌ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಹಿಂದೆಂದಿಗಿಂತಲೂ ಹೆಚ್ಚು ಹರಿದಾಡುತ್ತಿದೆ. ಬಹಳಷ್ಟು ತಂತ್ರಾಂಶದಲ್ಲಿ ಸುಧಾರಿಸಿದೆ. 

ಎಲ್ಲಾ ಪ್ರಯತ್ನಗಳಿಗಿಂತ ಹೆಚ್ಚಾಗಿ ನಮ್ಮ ಮನೋಧರ್ಮ ಬದಲಾಗಬೇಕು ಮತ್ತು ಭಾಷೆಯ ಹೆಸರಿನಲ್ಲಿ ಗುಂಪುಗಾರಿಕೆ, ಸಂಘ ಮತ್ತಿತರ ವಿಷಯಗಳಿಂದ ಗಲಭೆ ಎಬ್ಬಿಸಿ ಪರಸ್ಪರ ಕಚ್ಚಾಡುವುದನ್ನು ಬಿಡಬೇಕು. ಒಟ್ಟಾಗಿ ಎಲ್ಲರೂ ಕನ್ನಡಕ್ಕಾಗಿ ದುಡಿಯಬೇಕು.
- ಸ್ವಾಮಿ ಪೊನ್ನಾಚಿ, ಚಾಮರಾಜನಗರ

‘ಬಳಸದೇ ನಂಟು ಹೋಯ್ತು...
‘ಬಳಸದೇ ನಂಟು ಹೋಯ್ತು...’ ಎಂಬ ಮಾತಿನಂತೆ ಕನ್ನಡವನ್ನು ಬಳಸದೇ, ಬರೆಯದೇ, ಓದದೇ, ಅರಿತುಕೊಳ್ಳದೇ ಕನ್ನಡವೆಂದರೆ ‘ಕಬ್ಬಿಣದ ಕಡಲೆ’ ಎಂದು ಬಿರುದು ಕೊಟ್ಟವರು ಕಲಿತವರು!?... ಎರಡು ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಅನೇಕ ಸಂಘರ್ಷ, ಸಂಕಟಗಳನ್ನೆದುರಿಸಿಯೂ ಸಮೃದ್ಧವಾಗುತ್ತಲೇ ಬಂದ ಕನ್ನಡ ಭಾಷೆಗೆ ‘ಕೊಡಲಿ ಪೆಟ್ಟು’ ಕೊಡುತ್ತಿರುವವರು ನಾಡಿನ ವಿದ್ಯಾವಂತರು ಎನ್ನುವುದು ಆಘಾತಕಾರಿ ಅಂಶ!

ಪಾಶ್ಚಾತ್ಯ ನಾಗರೀಕತೆ, ವಿಜ್ಞಾನ, ತಂತ್ರಜ್ಞಾನವನ್ನೆಲ್ಲಾ ಪಳಗಿಸಿಕೊಂಡು ಕನ್ನಡದೆದುರು ಮಗುವಂತಿರುವ ಇಂಗ್ಲಿಷನ್ನೂ ಜೀರ್ಣಿಸಿಕೊಂಡ ಮಹಾ ಮೇದಾವಿಗಳಿಗೆ ಕನ್ನಡವೇಕೆ ಅಜೀರ್ಣವೋ ನಾನರಿಯೆ! ಕನ್ನಡದ ಬಗ್ಗೆಗಿನ ‘ತಾತ್ಸಾರ ತನ’ವೇ ಈ ಎಲ್ಲಾ ಗೋಜಲಿಗೆ ಕಾರಣ ಎಂದು ನನ್ನ ಅನಿಸಿಕೆ.
ಕನ್ನಡದ ಅಳಿವು–ಉಳಿವು, ಬೆಳವಣಿಗೆ, ಶುದ್ಧತೆ ಇಂದಿನ ಸಮಸ್ಯೆಯಲ್ಲ. ‘ಕವಿರಾಜ ಮಾರ್ಗ’ದ (ಕ್ರಿ.ಶ. 814) ಕಾಲದಿಂದಲೂ ಚರ್ಚೆ ನಡೆಯುತ್ತಲೇ ಇದೆ. ಇಲ್ಲಿ ‘ದೋಷ ಪ್ರಕರಣ’ ಎಂಬ ಭಾಗವೇ ಇದೆ. ಸಾಹಿತ್ಯ–ಕಾವ್ಯದ ಸೌಂದರ್ಯ ಶಬ್ದನಿಷ್ಠವಾಗಿರುವುದರಿಂದ ಭಾಷಾ ಶುದ್ಧಿಯ ಬಗ್ಗೆ ನಿರಂತರ ಮೌಲಿಕ ಚರ್ಚೆ ಅಪೇಕ್ಷಣೀಯ. ಪರಭಾಷೆಯ ಒಳಗೊಳ್ಳುವಿಕೆ ಇತಿಮಿತಿಯಲ್ಲಿದ್ದರೆ ಭಾಷಾಚಲನ ಶೀಲತೆಗೆ ಪೂರಕ.

ಅತಿಯಾದರೆ ‘ಅಮೃತವೂ ವಿಷ’ವಾದಂತೆ ಮೂಲ ಭಾಷೆಗೇ ಮಾರಕವಾಗುವ ಅಪಾಯ ‘ಕಟ್ಟಿಟ್ಟ ಬುತ್ತಿ...’. ಕನ್ನಡ ವರ್ಣಮಾಲೆಯನ್ನು ಒತ್ತಕ್ಷರಗಳನ್ನು ಒಮ್ಮೆ ಶುದ್ಧವಾಗಿ ಉಚ್ಚರಿಸಲು ಕಲಿತರೆ ಪ್ರಪಂಚದ ಯಾವುದೇ ಭಾಷೆಯ ಯಾವುದೇ ಪದವನ್ನು ಸುಲಲಿತವಾಗಿ ಉಚ್ಚರಿಸಲು ಸಾಧ್ಯವಾಗುವಂತೆ ನಮ್ಮ ಧ್ವನ್ಯಂಗಗಳು ತರಬೇತಿ ಹೊಂದಿರುತ್ತವೆ. ವಚನ, ಲಿಂಗ, ಕಾಲ ಎಲ್ಲಾ ಒಮ್ಮೆ ಕಲಿತರೆ ಬರೆದದ್ದನ್ನು ‘ಇದಂ ಮಿತ್ಥಂ’ ಎಂದು ಕನ್ನಡದಲ್ಲಿ ಮಾತ್ರ ಹೇಳಲು ಸಾಧ್ಯ. ಹೀಗೆ ವರ್ಣಮಾಲೆ, ವ್ಯಾಕರಣ ರಚಿಸಿದ ಅಂದಿನ ದೂರಗಾಮೀ ದೃಷ್ಟಿಯ ಕನ್ನಡ ಭಾಷಾ ಪಂಡಿತರಿಗೆ ಶಿರಸಾಷ್ಟಾಂಗ ನಮಸ್ಕಾರ.

   ದಿನದಿಂದ ದಿನಕ್ಕೆ ಪ್ರಪಂಚದ ಅನೇಕ ಭಾಷೆಗಳನ್ನು ನುಂಗಿ ನೀರು ಕುಡಿಯುತ್ತಿರುವ, ಕನ್ನಡದೆದುರು ಮಗುವಂತಿರುವ ಇಂಗ್ಲೀಷ್‌ನಲ್ಲಿ ಬರೆಯುವುದಕ್ಕೂ, ಉಚ್ಚಾರಕ್ಕೂ ಅನೇಕ ವೇಳೆ ಸಂಬಂಧವೇ ಇರುವುದಿಲ್ಲ. ಭಾಷಾ ಉಗಮವೇ ವಿಸ್ಮಯ. ಕ್ರಿಸ್ತ ಪೂರ್ವದಿಂದಲೇ ಜನ್ಮ ಪಡೆದು ಖಂಡಾಂತರ ಚಲನೆಯಲ್ಲಿ ಪರಿಪಕ್ವಗೊಂಡು, ಸಹಸ್ರ ಸಹಸ್ರ ವರ್ಷಗಳಿಂದ ಭೋರ್ಗರೆಯುತ್ತಾ ಹರಿದು ಬಂದ ಕನ್ನಡ ನುಡಿಯನ್ನು ನಮ್ಮ ನಾಲಿಗೆಯಲ್ಲೂ ನಲಿದಾಡುವಂತೆ ಮಾಡಿದ್ದು ನಮ್ಮ ಹಿರಿಯರು. ಹಾಗೆಯೇ ಮುಂದಿನ ಪೀಳಿಗೆಗೆ ದಾಟಿಸುವುದು ನಮ್ಮ ಆದ್ಯ ಕರ್ತವ್ಯ. ಮೃದು ಮಧುರ ಭಾಷೆಗೆ ಅಲ್ಪ ಪ್ರಾಣ ‘ಕ,ಚ,ಟ,ತ,ಪ.’ಗಳಾದರೆ ಗಂಡುಗಲಿ ಭಾಷೆಗೆ ಮಹಾ ಪ್ರಾಣಗಳಾದಂತೆ, ‘ಟ ಠ ಡ ಢ ಣ’ವೂ ಹೌದು. ವರ್ಣ ಮಾಲೆಯಲ್ಲಿ ಅದು ಕಷ್ಟ, ಇದನ್ನು ತಂತ್ರಜ್ಞಾನ ಗ್ರಹಿಸುವುದಿಲ್ಲ ಎಂದು ಬಾಲಿಶ ಪಂಡಿತರ ‘ತಾಳಕ್ಕೆ ಕುಣಿದರೆ’ ಭಾಷೆಯ ಸೊಬಗು ಸೊರಗುತ್ತದೆ.

ಕೆಟ್ಟದಾಗಿ ಇಂಗ್ಲಿಷ್‌ ಬಳಸುವ ಕನ್ನಡ ದೃಶ್ಯ ಮಾಧ್ಯಮಗಳು, ಇಂಗ್ಲಿಷ್‌ ಪದ/ಅಕ್ಷರಗಳನ್ನು ಚಿಕ್ಕ ಮಕ್ಕಳಂತೆ ಬಳಸಿ ತೂಕವಿಲ್ಲದ ಪದ/ವಾಕ್ಯ ಸಂಯೋಜನೆ ಮಾಡುವ ದಿನ ಪತ್ರಿಕೆಗಳು, ಬಟ್ಲರ್‌ ಇಂಗ್ಲಿಷ್‌ನಲ್ಲೇ ಮಾತಾಡುವ ನಟ, ನಟಿಯರು, ಆಟಗಾರರು ಕನ್ನಡದ ಶತ್ರುಗಳು. ಜನಾಕರ್ಷಣೆಯ ಇವರೆಲ್ಲರೂ ಮೊದಲು ಸಾರ್ವಜನಿಕವಾಗಿ ಕನ್ನಡದಲ್ಲಿ ವ್ಯವಹರಿಸಿದರೆ, ಕನ್ನಡಿಗರು ‘ಫೇಸ್‌ ಬುಕ್‌’ ಇತ್ಯಾದಿಗಳಲ್ಲಿ ಕನ್ನಡದಲ್ಲೇ ಬರೆದರೆ ದೊಡ್ಡ ಪ್ರಮಾಣದ ಭಾಷಾ ಆಂದೋಲನ ಆಗುವುದರಲ್ಲಿ ಅನುಮಾವೇ ಇಲ್ಲ. ಭಾಷೆಯೊಂದರ ನಾಶವೆಂದರೆ ಕೇವಲ ಭಾಷೆಯ ನಾಶವಲ್ಲ. ಭವ್ಯ ಪರಂಪರೆ, ಸಂಸ್ಕೃತಿ ಇತಿಹಾಸದ ಅವಸಾನ. ಅದಕ್ಕಾಗಿ ಭಾಷೆಯ ಇತಿಹಾಸ, ಮಹತ್ವ, ಶ್ರೇಷ್ಠತೆ ಬಗ್ಗೆ ಜನ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು.  ಅದಕ್ಕಾಗಿ ಪೋಷಕರು ತಮ್ಮ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲೇ ಕೊಡಿಸಬೇಕು. (ನನ್ನ ಮಗಳನ್ನು ಸರ್ಕಾರಿ ಕನ್ನಡ ಶಾಲೆಗೇ ಕಳುಹಿಸುತ್ತಿರುವೆವು. ಮಗನೂ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ಪಡೆದಿದ್ದ.)

ನಗರಗಳಲ್ಲಿ ಕನ್ನಡದ ಉಸಿರಿಗೆ ಆಮ್ಲಜನಕದ ಕೊರತೆ ಕಾಣುತ್ತಿದ್ದರೆ, ಹಳ್ಳಿಗಳಲ್ಲಿ ಇಂದೂ ಯಥೇಚ್ಛ ಆಮ್ಲಜನಕ ಪಡೆದುಕೊಂಡ ಕನ್ನಡ ಆರೋಗ್ಯವಂತವಾಗಿದೆ ಎಂಬುದೇ ಹೆಮ್ಮೆಯ ವಿಷಯ. ಇಚ್ಛಾಶಕ್ತಿ ಇದ್ದರೆ ಇಂದಿನ ತಲೆಮಾರಿನವರಿಗೆ ಕನ್ನಡ ಪರಂಪರೆಯ ಶ್ರೇಷ್ಠತೆ ಅರಿಯುವುದು ಕಷ್ಟವಲ್ಲ. ಹಿರಿಯರು ಮೊಳಕೆಯಲ್ಲೇ ಮಾತೃಭಾಷೆಯ ನೀರೆರೆಯುವ ಕಾರ್ಯ ಕಡ್ಡಾಯ ಮಾಡಬೇಕಷ್ಟೆ.
- ಹಾದಿಗಲ್ಲು ಸರಸ್ವತಿ ರಾಘವೇಂದ್ರ, ಶಿವಮೊಗ್ಗ

ಬಾವಿಯೊಳಗಿನ ಕಪ್ಪೆಯಂತೆ
ಹಳಗನ್ನಡ ಹೋಯ್ತು. ನಡುಗನ್ನಡ ಬಂತು. ನಡುಗನ್ನಡ ಹೋಯ್ತು, ಹೊಸಗನ್ನಡ ಬಂತು. ನವ್ಯ ನವೋದಯ ಇದೇ ಕಾಯಂ ಅಲ್ಲ. ಇದು ಬದಲಾಗ್ತಾ ಇರ್‍ಬೇಕು. ಜನಸಾಮಾನ್ಯರ ಆಡುಭಾಷೆಯ ಸ್ಥಾನ  ಪಡೆಯದೆ, ಪಂಡಿತ–ಪಾಮರರ ಭಾಷೆಗಳು ಕಣ್ಮರೆಯಾಗುತ್ತಲಿವೆ.

ಒಂದು ಚೂರು ಇಂಗ್ಲಿಷ್‌, ಹಿಂದಿ ಜ್ಞಾನ ಇಲ್ದೆ ನಾನು ಕನ್ನಡದಲ್ಲೇ ನಾನು ಎಲ್ಲಾ ಸಾಧಿಸ್ತೇನೆ ಅನ್ನೋದು ಮೂರ್ಖತನ ಆಗುತ್ತೆ. ಸಾವಿರಕೊಬ್ಬ ಮಾಡ್ಬೋದು. ಮಿಕ್ಕ 999 ಮಂದಿಯ ಭವಿಷ್ಯ? ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಲೇಖನವನ್ನೇ ತಗೊಳ್ಳಿ. ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡಿದರೂ ಇಂಗ್ಲಿಷ್‌ ಇತರೆ ಕೆಲವೊಂದು ಭಾಷಾ ವಲಯದಲ್ಲಿ ಅಪಾರ ಪಾಂಡಿತ್ಯ ಮತ್ತು ಅಭಿಮಾನಿ ಬಳಗವನ್ನು  ಸಹೋದ್ಯೋಗಿ ಮಿತ್ರರನ್ನು ಹೊಂದಿದ್ದಾರೆ.

ಭಾಷೆ ಬಗ್ಗೆ ಅಭಿಮಾನ ಇರಬೇಕು. ದುರಭಿಮಾನ ಬೇಡ. ಸಂಕುಚಿತ ಭಾಷಾ ಮನೋಭಾವ ಹೊಂದಿದ ಕೆಲವೊಂದು ಪ್ರಚಾರ ಪ್ರಿಯ, ಅಭಿವೃದ್ಧಿ ವಿರೋಧಿ ಸಂಘಟನೆಗಳಂತೆ ಬಾವಿಯೊಳಗಿನ ಕಪ್ಪೆಗಳಾಗಬಾರದು. ಬಾವಿಯ ಹೊರಗೆ ಕೂಡ ಪ್ರಪಂಚ ಇದೆ. ನಾವು ಅದರ ಒಂದು ಭಾಗ ಅನ್ನೋದನ್ನು ಮರೀಬಾರದು.

ಸ್ವಾಮಿ ವಿವೇಕಾನಂದರು ಹೇಳಿದ ‘ಹಸಿದ ಹೊಟ್ಟೆಗೆ ವೇದಾಂತ ರುಚಿಸದು’ ದಿವ್ಯವಾಣಿಯಂತೆ ಮೊದಲು ಅನ್ನದ ಅರ್ಥಾತ್‌ ಅಭಿವೃದ್ಧಿಯ ಅವಕಾಶಗಳನ್ನು ಒದಗಿಸಿದಲ್ಲಿ ಭಾಷೆ ತನ್ನಿಂತಾನೇ ಬೆಳವಣಿಗೆ ಹೊಂದುತ್ತದೆ. ಕೆಲವೊಂದು ಗಡಿ ಭಾಗದ ಗ್ರಾಮಗಳಲ್ಲಿ ಅನ್ಯಭಾಷಿಕರು ಔದ್ಯೋಗಿಕ ಅನಿವಾರ್ಯಗಳಿಂದಾಗಿ, ಭವಿಷ್ಯದ ದೃಷ್ಟಿಯಿಂದ ತಮ್ಮ ಮಕ್ಕಳಿಗೆ ಕನ್ನಡ–ಇಂಗ್ಲಿಷ್‌ ಶಾಲೆಗಳಲ್ಲಿ ಶಿಕ್ಷಣ ಕೊಡಿಸುತ್ತಿರುವುದು ಉತ್ಪ್ರೇಕ್ಷೆಯೇನಲ್ಲ. ಇನ್ನೂ ಕೆಲವೆಡೆ ಈ ಅಭಿವೃದ್ಧಿಯ ಅವಕಾಶಗಳನ್ನು ಜನರಿಗೆ ಅರ್ಥ ಮಾಡಿಸಲು ವಿಫಲವಾಗಿ ಆ ಪ್ರಾಂತ್ಯದ, ಹಿಂದುಳಿಯುವಿಕೆಗೆ ಕಾರಣವಾಗಿದ್ದೇವೆ.

ಹೈದರಾಬಾದ್‌ – ಕರ್ನಾಟಕ, ಮುಂಬೈ – ಕರ್ನಾಟಕದಲ್ಲಿ ಈಗೀಗ ಪರಿಸ್ಥಿತಿ ಸುಧಾರಿಸುತ್ತಿದೆ. ಕೋಲಾರ– ಚಿಕ್ಕಬಳ್ಳಾಪುರ ಗಡಿ ಗ್ರಾಮಗಳ ಸಂಪೂರ್ಣ ತೆಲುಗು ಮಾತೃ ಭಾಷೆಯ ಮನೆಗಳಲ್ಲೂ ತೆಲುಗು ಸಿನಿಮಾಗಳ ಜೊತೆ ಕನ್ನಡದ ಕಲಿ ನಲಿ ಸರ್ವ ಶಿಕ್ಷಣ ಅಭಿಮಾನಿಗಳೂ ಇಣುಕಿ ಹೊಸ ತಲೆಮಾರೊಂದು ನವ ಕನ್ನಡಿಗರೆನಿಸಿಕೊಳ್ಳಲು ಅಣಿಯಾಗುತ್ತಿದೆ. ಭಾಷೆ ಕೇವಲ ಒಂದು ಭಾಷೆಯಾಗಿರದೆ ಒಂದಿಡೀ ಸಂಸ್ಕೃತಿಯಾಗಿದೆ.   ಇಂದಿನ ಜಾಗತೀಕರಣ ನಾಗಾಲೋಟದಲ್ಲೂ ನಮ್ಮ ಕನ್ನಡ ಹೆಸರು ಮಾಡಿರುವುದು ಹೆಮ್ಮೆಯ ಸಂಗತಿಯಲ್ಲವೇ?
- ಎನ್. ಕೆ. ಅಪ್ಪಾಜಿಗೌಡ, ದೇವನಹಳ್ಳಿ

ಗೊತ್ತಿಲ್ಲವೆನ್ನುವುದೇ ಹೆಮ್ಮೆಯೆ?!
ನಿದ್ರಿಸುವವರನ್ನು ಎಚ್ಚರಿಸಬಹುದು. ನಿದ್ರಿಸುವಂತೆ ನಟಿಸುವವರನ್ನು ಎಚ್ಚರಿಸಲಾಗದು. ಕನ್ನಡ ಚೆನ್ನಾಗಿ ಬಂದರೂ ಬಾರದೆನ್ನುವಂತೆ ವರ್ತಿಸುವವರು ಧಾರಾಳವಾಗಿದ್ದಾರೆ. ಕನ್ನಡ ಗೊತ್ತಿಲ್ಲವೆನ್ನುವುದೇ (ಇಂಗ್ಲಿಷ್ ಅರೆದು ಕುಡಿದವರಂತೆ!) ಘನತೆಯೆನ್ನಿಸಿಬಿಟ್ಟರೆ ಹೇಗೆ?

‘ನಿಮ್ಮ ಮಣೇಲಿ ಪುಲ್ ಓಗರೆ ಮಾಡ್ತಾರಲ್ವ’ ಎಂದೊ ‘ನಂ ನಾಯಿ ಟೈ ಆಗಿದೆ. ಚಿಂದಿ ಬೇಡ ಗೇಟೊಲಗೆ ಬಣ್ಣಿ’ ಎಂದೊ ಕನ್ನಡದ ಜೊತೆಗೆ ಇಂಗ್ಲಿಷ್ ಸಹ ಸೊರಗಿಸುವುದು ಎಂಥ ದುರಂತವಲ್ಲವೆ? ಫಲಕಗಳಲ್ಲೇನೋ ಮುದ್ದಾದ ಕನ್ನಡದ ಅಕ್ಷರಗಳು. ಆದರೆ ಕಾಗುಣಿತ ಹಳಿ ತಪ್ಪಿರುತ್ತದೆ. ಯಾರೆಷ್ಟೇ ಇದು ತಪ್ಪು ಅಂತ ಒತ್ತಿ ಹೇಳಿದರೂ ‘ಶುಭಾಷಯ’ ಎನ್ನುವುದು ‘ಶುಭಾಶಯ’ ಆಗದು. ‘ಮಧ್ಯಾಹ್ನ’ ಎಂದು ಸರಿಯಾಗಿ ಆಮಂತ್ರಣ ಪತ್ರಿಕೆಯಲ್ಲಿ ಕಾಣಿಸಿಕೊಂಡರೆ ದೊಡ್ಡ ಬಹುಮಾನವನ್ನೇ ನೀಡಬಹುದು. ಇದೇಕೆ ಹೀಗಾಗುತ್ತದೆಂದರೆ ಮುದ್ರಕರಿಗೆ, ಬ್ಯಾನರ್, ಬೋರ್ಡು ಬರೆಯುವವರಿಗೆ ಸರಿಯಾದ ತರಬೇತಿಯಾಗಿರುವುದಿಲ್ಲ. ನನಗೆ ನಾಳೆಯೇ ಬರೆದು ಕೊಡಿ ಎಂದು ಅವಸರಿಸುವವರುಂಟು. ಆದರೆ ಅದರ ಜೊತೆಗೆ ಅಲ್ಪ ಪ್ರಾಣ, ಮಹಾಪ್ರಾಣ ಹಾಗೂ ವ್ಯಾಕರಣ ಸರಿಯಾಗಿರಲೆಂದು ಎಷ್ಟು ಮಂದಿ ತಾನೆ ಒತ್ತಾಯಿಸುತ್ತಾರೆ? ಹಲವೆಡೆ  ಬೆಳಕು ಎಂಬ ಅರ್ಥಗೌರವಕ್ಕೆ ಘಾಸಿಯಾಗಿರುತ್ತದೆ. ನನ್ನ ನಮ್ರ ಸಲಹೆಯೆಂದರೆ ಮನೆಮನೆಯಲ್ಲೂ ಒಂದು ಕನ್ನಡ-ಕನ್ನಡ ನಿಘಂಟು ಇರಲೇಬೇಕು ಎನ್ನುವುದು.

ಯಾವುದೇ ಭಾಷೆಯಿಂದ ಪದಗಳು ಕನ್ನಡಕ್ಕೆ ಬಂದರೂ ಅವು ಕನ್ನಡವಾಗಿ ಬರುವುದು ಬಹು ಮುಖ್ಯವಾಗುತ್ತದೆ. ಒಂದು ನಿದರ್ಶನ ನೆನಪಾಗುತ್ತದೆ. ಯಂತ್ರ ಭಾಗಗಳ ಸರಾಗ ಚಲನೆಗೆ ‘ಲೂಬ್ರಿಕೇಟಿಂಗ್ ಆಯಿಲ್’ ಬಳಸಲಾಗುತ್ತದೆ. ಈ ಎಣ್ಣೆಗೆ ಕನ್ನಡದಲ್ಲಿ ಏನೆಂದು ಕರೆಯಬೇಕೆಂದು ಕಮ್ಮಟವೊಂದರಲ್ಲಿ ಭಾಷಾಂತರ ತಜ್ಞರ ನಡುವೆ ಗಂಭೀರ ಜಿಜ್ಞಾಸೆಯೆ ನಡೆಯಿತು. ಒಬ್ಬರಂತೂ ಸಂತೆಗೆ ಹೋಗಿ ವಿಚಾರಿಸಿಕೊಂಡೆ ಬಂದರು. ಸ್ನೇಹಕ ತೈಲ, ಬಿಡಿ ಎಣ್ಣೆ... ಮುಂತಾಗಿ ಏನೇನೊ ಕರೆಸಿಕೊಳ್ಳುತ್ತಿದ್ದ ಆ ತೈಲಕ್ಕೆ ಕಡೆಗೂ ಒಂದು ಯುಕ್ತ ಹೆಸರು ದೊರೆಯಿತು-‘ಎರೆ ಎಣ್ಣೆ’. ಪದಗಳಲ್ಲಿ ಅಪ್ಪಟ ಕನ್ನಡತನ, ಕನ್ನಡ ಸಂಸ್ಕೃತಿ ಎಂದರೆ ಇದೇ ಅಲ್ಲವೆ?

ಇನ್ನು ದೂರದರ್ಶನದಲ್ಲಿ ಉದ್ಘೋಷಕರು, ನಿರೂಪಕರು ಏಕಾದರೂ ಇಂಗ್ಲಿಷ್ ಚಾನೆಲ್ಲುಗಳವರನ್ನು ಅನುಕರಿಸುತ್ತಾರೊ ಕಾಣೆ. ಕನ್ನಡಕ್ಕೆ ಅದರದೇ ಆದ ಧಾಟಿ, ಶ್ರುತಿ, ಲಯ, ಶಾರೀರವಿದೆಯೆನ್ನುವುದನ್ನು ಮರೆಯಬಾರದು. ಸಹಜತೆಯಿಂದ ದೂರವಾಗಿ ನಮ್ಮ ವಾಗ್ಧೋರಣೆ ಬಿಡುವುದು ಬೇಡ ಅಲ್ಲವೆ? ಕನ್ನಡ ಒಂದು ಸಮೃದ್ಧ ಕಣಜ.  ಯಾವುದೇ ಅನ್ಯ ಭಾಷೆಯ ಪದಗಳನ್ನು ಕನ್ನಡದ ಸಂದರ್ಭದಲ್ಲಿ ಅವಗಾಹಿಸಿಕೊಳ್ಳಬಹುದು. ನಮ್ಮ ಸಂಕಲ್ಪವೊಂದೇ ಬಾಕಿ.
- ಬಿಂಡಿಗನವಿಲೆ ಭಗವಾನ್, ಬೆಂಗಳೂರು

ಕನ್ನಡ ಪದಗಳ ಬೆಳವಣಿಗೆಗೆ ಅಡ್ಡಗಾಲಿಟ್ಟವರು
ಇಂಗ್ಲಿಷ್‌ನಂತಹ ನುಡಿಗಳಿಗೆ ಹೋಲಿಸಿದೆವಾದರೆ, ಕನ್ನಡದಲ್ಲಿ ಪದಗಳ ಬೆಳವಣಿಗೆ ತುಂಬಾ ಕಡಿಮೆ ನಡೆದಿರುವುದು ಕಂಡುಬರುತ್ತದೆ. ಒಂದು ನುಡಿಯನ್ನು ಹೆಚ್ಚು ಹೆಚ್ಚು ಬಗೆಯ ತಿಳಿವುಗಳನ್ನು ತಿಳಿಸುವುದಕ್ಕಾಗಿ ಬಳಸಿದಂತೆಲ್ಲ ಅದರಲ್ಲಿರುವ ಪದಗಳ ಎಣಿಕೆ ಹೆಚ್ಚುತ್ತಾ ಹೋಗುತ್ತದೆ ಮತ್ತು ಇರುವ ಪದಗಳ ಹುರುಳಿನ ಹರವು ಹೆಚ್ಚುತ್ತಾ ಹೋಗುತ್ತದೆ. ಆದರೆ, ಕನ್ನಡದಲ್ಲಿ ಈ ಎರಡು ಬಗೆಯ ಬೆಳವಣಿಗೆಗಳೂ ನಡೆದೇ ಇಲ್ಲ. ಹೊಸ ಹೊಸ ಪದಗಳು ಬೇಕಾದಾಗಲೆಲ್ಲ ಕನ್ನಡದವೇ ಆದ ಪದಗಳನ್ನು ಬಳಕೆಗೆ ತರುವ ಬದಲು, ಕನ್ನಡ ಬರಹಗಾರರು ಸಂಸ್ಕ್ರುತ ಪದಗಳನ್ನು ಎರವಲು ಪಡೆಯುತ್ತಿರುವುದೇ ಇದಕ್ಕೆ ಮುಕ್ಯ ಕಾರಣ.

ಕನ್ನಡದ ಯಾವುದೇ ಒಂದು ಪದನೆರಕೆಯನ್ನು ಇಂಗ್ಲಿಶ್‌ನ ಒಂದು ಚಿಕ್ಕ ಪದನೆರಕೆಯೊಂದಿಗೆ ಹೋಲಿಸಿ ನೋಡಿದರೂ ಈ ತೊಡಕಿನ ನೆಲೆ ಯಾವುದೆಂದು ಗೊತ್ತಾಗುತ್ತದೆ. ಇಂಗ್ಲಿಶ್‌ನ ಒಂದು ಪದಕ್ಕೆ ಏಳೆಂಟು ಹುರುಳುಗಳಿವೆಯಾದರೆ, ಅಂತಹದೇ ಕನ್ನಡ ಪದಕ್ಕೆ ಒಂದೆರಡು ಹುರುಳುಗಳು ಮಾತ್ರ ಕಾಣಿಸುತ್ತವೆ. ಇಂಗ್ಲಿಶ್ ಪದಗಳು ಹುರುಳಿನ ಹರವನ್ನು ಹೆಚ್ಚಿಸಿಕೊಂಡ ಹಾಗೆ ಕನ್ನಡ ಪದಗಳು ಹೆಚ್ಚಿಸಿಕೊಂಡಿಲ್ಲ. ಅವು ಹೆಚ್ಚಿಸಿಕೊಳ್ಳದಂತೆ ಅಡ್ಡಗಾಲಿಟ್ಟವರು ಸಂಸ್ಕ್ರುತದ ಮೇಲೆ ಮೋಹವನ್ನು ಬೆಳೆಸಿಕೊಂಡಿರುವ ಈ ಕನ್ನಡದ ಬರಹಗಾರರೇ!

ಇಂಗ್ಲಿಶ್‌ನ ಹಲವಾರು ಪದಗಳಿಗೆ ದಿನಬಳಕೆಯ ಹುರುಳು ಮಾತ್ರವಲ್ಲದೆ ಬೇರೆ ಬೇರೆ ಅರಿಮೆಗಳಿಗೆ ತಕ್ಕುದಾದಂತಹ ಹುರುಳುಗಳೂ ಇವೆ. ಆದರೆ, ಕನ್ನಡದ ಯಾವ ದಿನಬಳಕೆಯ ಪದಕ್ಕೂ ಇಂತಹ ಅರಿಮೆಯ ಹುರುಳಿಲ್ಲ. ಯಾಕೆಂದರೆ, ಅರಿಮೆಯ ಹುರುಳು ಬೇಕಾಗಿರುವಲ್ಲೆಲ್ಲ ಕನ್ನಡದ ಬರಹಗಾರರು ಬೇಕೆಂದೇ ಸಂಸ್ಕ್ರುತದ ಮೊರೆಹೋಗಿದ್ದಾರೆ. ಎತ್ತುಗೆಗಾಗಿ, ಇಂಗ್ಲಿಶ್‌ನ part ಎಂಬ ಪದಕ್ಕೆ ತುಂಡು (ಇಲ್ಲವೇ ಪಾಲು) ಎಂಬ ಹುರುಳಶ್ಟೇ ಅಲ್ಲದೆ ಹೊತ್ತಗೆಯ ಒಂದು ಬಾಗ, ನಾಟಕದ ಒಂದು ಪಾತ್ರ ಎಂಬಂತಹ ಬೇರೆಯೂ ಹಲವು ಹುರುಳುಗಳಿವೆ; ಆದರೆ, ಕನ್ನಡದ ತುಂಡು ಪದಕ್ಕೆ ಇಂತಹ ಹೆಚ್ಚಿನ ಹುರುಳುಗಳಿಲ್ಲ; ಯಾಕೆಂದರೆ, ಅಂತಹ ಹೆಚ್ಚಿನ ಹುರುಳು ಬೇಕಿರುವಲ್ಲಿ ಕನ್ನಡದ ತುಂಡು ಪದವನ್ನು ಬಳಸುವ ಬದಲು, ಸಂಸ್ಕ್ರುತದಿಂದ ಎರವಲು ಪಡೆದ ಬಾಗ ಮತ್ತು ಪಾತ್ರ ಎಂಬ ಪದಗಳನ್ನು ಬಳಸಲಾಗುತ್ತದೆ. ಇಂಗ್ಲಿಶ್‌ನ ಎಸಕ(ಕ್ರಿಯಾ)ಪದಗಳಿಗೆ ಒಟ್ಟು(ಪ್ರತ್ಯಯ)ಗಳನ್ನು ಸೇರಿಸಿ ಹಲವಾರು ಹೆಸರು(ನಾಮ)ಪದಗಳನ್ನು ಉಂಟುಮಾಡಲಾಗುತ್ತಿದೆ; ಆದರೆ, ಕನ್ನಡದ ಪದನೆರಕೆ ಇಂತಹ ಬೆಳವಣಿಗೆಯಲ್ಲೂ ಹಿಂದೆ ಬಿದ್ದಿದೆ. ಎತ್ತುಗೆಗಾಗಿ, ಒಂದು ಎಸಕವನ್ನು ತಿಳಿಸುವ add ಎಂಬ ಎಸಕಪದದೊಂದಿಗೆ ಅದೇ ಎಸಕವನ್ನು ಹೆಸರಿಸುವ addition ಎಂಬ ಹೆಸರುಪದವನ್ನೂ ಅರಿಮೆಯ ಬರಹಗಳಲ್ಲಿ ಆಗಾಗ ಬಳಸಲಾಗುತ್ತದೆ. ಇಂಗ್ಲಿಶ್‌ನ ಅರಿಮೆಯ ಬರಹಗಳಲ್ಲಿ ಇಂತಹ ಸಾವಿರಾರು ಎಸಕಗಳನ್ನು ಹೆಸರಿಸುವ ಹೆಸರುಪದಗಳ ಬಳಕೆಯನ್ನು ಕಾಣಬಹುದು.

ಆದರೆ, ಕನ್ನಡದ ಅರಿಮೆಯ ಬರಹಗಳಲ್ಲಿ ಈ ರೀತಿ ಎಸಕಪದಗಳಿಂದ ಹೆಸರುಪದಗಳನ್ನು ಪಡೆಯುವ ಬದಲು, ಸಂಸ್ಕ್ರುತದಿಂದ ಎರವಲು ಪಡೆದ ಹೆಸರುಪದಗಳನ್ನು ಬಳಸಲಾಗುತ್ತದೆ; ಕೂಡಿಸು ಎಂಬ ಪದದಿಂದ ಕೂಡಿಕೆ ಎಂಬುದನ್ನು, ಮತ್ತು ಕಳೆ ಎಂಬ ಪದದಿಂದ ಕಳೆತ ಎಂಬುದನ್ನು ಪಡೆದು ಬಳಸುವ ಬದಲು, ಕನ್ನಡದ ಅರಿಮೆಯ ಬರಹಗಾರರು ಸಂಕಲನ ಮತ್ತು ವ್ಯವಕಲನ ಎಂಬ ಸಂಸ್ಕ್ರುತ ಎರವಲುಗಳನ್ನು ಬಳಸುತ್ತಾರೆ. ಇದರಿಂದಾಗಿಯೂ ಕನ್ನಡದ ಪದನೆರಕೆ ಹೆಚ್ಚಿನ ಬೆಳವಣಿಗೆಯನ್ನು ಕಾಣದೆ ಉಳಿದಿದೆ.

ಪರಿಚೆ(ಗುಣ)ಪದಗಳನ್ನು ಇಲ್ಲವೇ ಹೆಸರುಪದಗಳನ್ನು ಬೇರೆ ಹೆಸರುಪದಗಳೊಂದಿಗೆ ಸೇರಿಸಿ ಜೋಡುಪದ (compound)ಗಳನ್ನು ಕಟ್ಟಿಕೊಳ್ಳುವ ಕೆಲಸವನ್ನೂ ಇಂಗ್ಲಿಶ್‌ನ ಅರಿಮೆಯ ಬರಹಗಳಲ್ಲಿ ಹೇರಳವಾಗಿ ನಡೆಸಲಾಗುತ್ತದೆ. ಕನ್ನಡದಲ್ಲಿಯೂ ಇದೇ ಕೆಲಸವನ್ನು ನಡೆಸಲು ಬರುತ್ತದೆ. ಇದಲ್ಲದೆ, ಕನ್ನಡದಲ್ಲಿ ನೇರವಾಗಿ ಎಸಕಪದಗಳನ್ನು ಹೆಸರುಪದಗಳೊಂದಿಗೆ ಸೇರಿಸಿಯೂ ಜೋಡುಪದಗಳನ್ನು ಕಟ್ಟಲು ಬರುತ್ತದೆ (ಕಡೆಗೋಲು, ಸಿಡಿಮದ್ದು). ಇದು ಜೋಡುಪದಗಳನ್ನು ಉಂಟುಮಾಡುವಲ್ಲಿ ಕನ್ನಡಕ್ಕೆ ಇನ್ನಶ್ಟು ಹೆಚ್ಚಿನ ಕಸುವನ್ನು ನೀಡಿದೆ.

ಪದಕಟ್ಟಣೆಯಲ್ಲಿ ಕನ್ನಡಕ್ಕಿರುವ ಈ ಕಸುವನ್ನು ಕನ್ನಡದಲ್ಲಿ ಅರಿಮೆಯ ಬರಹಗಳನ್ನು ಮತ್ತು ಬೇರೆ ಬಗೆಯ ಬರಹಗಳನ್ನು ಬರೆಯುವವರು ಸರಿಯಾಗಿ ಬಳಸಿಕೊಂಡಿದ್ದರೆ, ಕನ್ನಡದ ಪದನೆರಕೆ ಇನ್ನಶ್ಟು ಬೆಳವಣಿಗೆಗಳನ್ನು ಕಾಣಬಹುದಿತ್ತು. ಆದರೆ, ಇಂತಹ ಜೋಡುಪದಗಳು ಬೇಕಾಗುವಲ್ಲೆಲ್ಲ ಕನ್ನಡದ ಬರಹಗಾರರು ಸಂಸ್ಕ್ರುತದ ಎರವಲುಗಳಿಗೆ ಮೊರೆಹೋಗಿದ್ದಾರೆ.  ಈ ರೀತಿ ಕನ್ನಡ ಪದಗಳ ಬೆಳವಣಿಗೆಗೆ ಅಡ್ಡಗಾಲಿಟ್ಟಿರುವ ಈ ಬರಹಗಾರರೇ ಇವತ್ತು ಸಂಸ್ಕ್ರುತದ ನೆರವಿಲ್ಲದೆ ಕನ್ನಡದಲ್ಲಿ ಒಳ್ಳೊಳ್ಳೆಯ ಬರಹಗಳನ್ನು ಬರೆಯಲು ಸಾದ್ಯವೇ ಇಲ್ಲ ಎಂಬುದಾಗಿ ಕನ್ನಡ ನುಡಿಯನ್ನು ದೂರುತ್ತಾರೆ. ತಾವು ಮಾಡಿದ ತಪ್ಪನ್ನು ಕನ್ನಡದ ಮೇಲೆ ಹೊರಿಸುತ್ತಾರೆ. ಇದು ಬೆಣ್ಣೆಯನ್ನು ತಿಂದ ಮಂಗ ಕಯ್ಯನ್ನು ಆಡಿನ ಬಾಯಿಗೆ ಸವರಿದ ಹಾಗೆ!

ಇವತ್ತು ಕನ್ನಡ ಬರಹಗಾರರು ಕನ್ನಡ ಪದಗಳ ಕುರಿತಾಗಿ ತಮ್ಮಲ್ಲಿರುವ ಕೀಳರಿಮೆಯನ್ನು ಬಿಟ್ಟುಕೊಟ್ಟು, ಹೆಚ್ಚು ಹೆಚ್ಚು ಕನ್ನಡದವೇ ಆದ ಪದಗಳನ್ನು ಬಳಸುವ ತೀರ್ಮಾನವನ್ನು ತಮ್ಮದಾಗಿಸಿಕೊಳ್ಳಬೇಕಾಗಿದೆ. ಸಂಸ್ಕ್ರುತ ಎರವಲುಗಳ ಬಳಕೆ ಬರಹಕ್ಕೆ ಮೇಲ್ಮೆಯನ್ನು ತರುವುದೆಂಬ ತಪ್ಪು ಅನಿಸಿಕೆಯನ್ನು ಬಿಟ್ಟುಕೊಡಬೇಕಾಗಿದೆ ಮತ್ತು ಅಂತಹ ಬಳಕೆಯಿಂದ ಕನ್ನಡದವೇ ಆದ ಪದಗಳಿಗೆ ಸಿಗಬೇಕಾಗಿರುವ ಹೆಚ್ಚುಗಾರಿಕೆ ಮತ್ತು ಬೆಳವಣಿಗೆ ಸಿಗುವುದಿಲ್ಲ ಎಂಬುದನ್ನು ಮನದಟ್ಟುಮಾಡಿಕೊಳ್ಳಬೇಕಾಗಿದೆ. ಕನ್ನಡ ಪದಗಳ ಹುರುಳುಗಳು ಇಂಗ್ಲಿಶ್ ಪದಗಳ ಹುರುಳುಗಳ ಹಾಗೆ ಹೆಚ್ಚಿನ ಹರವನ್ನು ಪಡೆಯಬೇಕಿದ್ದಲ್ಲಿ ಮತ್ತು ಎಲ್ಲಾ ಬಗೆಯ ವಿಶಯಗಳನ್ನೂ ತಿಳಿಸಲು ಕನ್ನಡ ಬರಹ ತಕ್ಕುದಾಗುವಂತೆ ಮಾಡಬೇಕಿದ್ದಲ್ಲಿ ಕನ್ನಡ ಬರಹಗಾರರು ತಮ್ಮ ಈ ಸಂಸ್ಕ್ರುತ ಮೋಹವನ್ನು ಬಿಟ್ಟುಕೊಡಬೇಕು.
- ಡಿ.ಎನ್.ಶಂಕರ ಬಟ್ ನುಡಿಯರಿಗರು (ಭಾಷಾ ಶಾಸ್ತ್ರಜ್ಞ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT