ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಹೈಕಳ ಸಿನಿಮಾ ಪ್ರೀತಿ

Last Updated 28 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಕಾಲೇಜು ದಿನಗಳಲ್ಲಿ ಹೊಸತನದ ಪ್ರಯೋಗಗಳನ್ನು ಮಾಡಲು ಮನಸ್ಸು ತುಡಿಯುತ್ತದೆ. ಮೊದಲಿನಿಂದಲೂ ಕಲೆ, ನೃತ್ಯದ ಬಗ್ಗೆ ಪ್ರೀತಿ ಬೆಳೆಸಿಕೊಂಡ ಇಂಥದ್ದೇ ಮನಸ್ಥಿತಿಯ ಧೀರಜ್‌ ಕಿರುಚಿತ್ರವೊಂದನ್ನು ನಿರ್ಮಿಸಿದ್ದಾರೆ. ‘ಇಂಡಿಪೆಂಡೆಂಟ್‌’ ಎಂಬ ಈ ಕಿರುಚಿತ್ರ ಇತ್ತೀಚೆಗಷ್ಟೇ ಕಲಾಸೌಧದಲ್ಲಿ ತೆರೆಕಂಡಿದೆ.

ಎರಡು ಗಂಟೆಯ ಸಿನಿಮಾವನ್ನು ಕೇವಲ 25 ನಿಮಿಷದಲ್ಲಿ ಹೇಗೆ ಪರಿಣಾಮಕಾರಿಯಾಗಿ  ಬಿಂಬಿಸಬಹುದು ಎಂಬುದನ್ನು ತೋರಿಸುವುದೇ ಸಿನಿಮಾದ ಉದ್ದೇಶ ಎನ್ನುತ್ತಾರೆ ಧೀರಜ್‌. ಐದು ಮುಖ್ಯ ಪಾತ್ರಗಳು ಹಾಗೂ 13ಕ್ಕೂ ಹೆಚ್ಚು ಪೋಷಕ ಪಾತ್ರಗಳು ಈ ಸಿನಿಮಾದಲ್ಲಿದ್ದು ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಹಾಗೂ ಸಿನಿಮಾದಲ್ಲಿ ಬರುವ 1.20ಸೆಕೆಂಡ್‌ನ ಹಾಡನ್ನೂ ಧೀರಜ್‌ ಅವರೇ ರಚಿಸಿರುವುದು ವಿಶೇಷ.

ಕೆಎಸ್‌ಐಟಿ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್‌ ಅಭ್ಯಾಸ ಮಾಡುತ್ತಿರುವ ಧೀರಜ್‌ ನಿರ್ದೇಶಿಸಿದ ಮೊದಲ ಕಿರುಚಿತ್ರವಿದು. ‘ಪರಿಚಯದವರು ಹಾಗೂ ಸ್ನೇಹಿತರನ್ನೇ ಚಿತ್ರದಲ್ಲಿ ಪಾತ್ರಧಾರಿ ಗಳನ್ನಾಗಿಸಿಕೊಂಡಿದ್ದೇನೆ. ಅವರಿಗೆ ಸಂಭಾವನೆ ನೀಡಿಲ್ಲ. ಸಿನಿಮಾ ಮಾಡಲು ಬೇಕಾದ ಉಪಕರಣಗಳು, ಚಿತ್ರೀಕರಣ ಸಂದರ್ಭದ  ಊಟ ತಿಂಡಿ ಖರ್ಚು ವೆಚ್ಚ ಸೇರಿ 30 ಸಾವಿರ ಖರ್ಚಾಯಿತು. ಅದನ್ನೆಲ್ಲಾ ನಾನೇ ಭರಿಸಿದೆ. ಮನೆಯಲ್ಲಿ ನನ್ನ ಕನಸಿಗೆ ಯಾವಾಗಲೂ ಬೆಂಬಲಿಸುತ್ತಾರೆ. ಶೈಕ್ಷಣಿಕವಾಗಿಯೂ ಎಲ್ಲವನ್ನೂ ನಿಭಾಯಿಸುತ್ತಿರುವುದರಿಂದ ಕಾಲೇಜಿನವರೂ ನನ್ನ ಪ್ರಯತ್ನಕ್ಕೆ ಬೆಂಬಲ ನೀಡಿದ್ದಾರೆ’ ಎನ್ನುತ್ತಾರೆ ಧೀರಜ್‌.

ಪ್ರೀತಿ, ಶಿಕ್ಷಣದ ಮಹತ್ವ, ಕನ್ನಡ ಹಾಗೂ ಸಮಾಜದ ಬಗ್ಗೆ ಅಭಿಮಾನ ಹೊಂದಿದ ನಾಯಕನ ಕಥೆಯನ್ನಾಧರಿಸಿದ ಈ ಸಿನಿಮಾಕ್ಕೆ ಬಿಡುಗಡೆಯ ದಿನ ಒಳ್ಳೆಯ ಅಭಿಪ್ರಾಯ ದೊರೆತಿದೆಯಂತೆ. ನಟ ಸಂಚಾರಿ ವಿಜಯ್‌, ಕೃಷ್ಣಮೂರ್ತಿ ಕವತ್ತಾರ್‌, ಯೋಗೇಶ್‌, ಸೀನಿ, ಆರ್‌.ಜೆ. ರಾಜೇಶ್‌ ಮುಂತಾದವರು ಅತಿಥಿಗಳಾಗಿ ಭಾಗವಹಿಸಿ  ಯುವ ಆಸಕ್ತ ಮನಸ್ಸುಗಳನ್ನು ಪ್ರೋತ್ಸಾಹಿಸಿದ್ದಾರೆ.

ಕನ್ನಡದಲ್ಲಿ ಲೆಕ್ಕವಿಲ್ಲದಷ್ಟು ಸಿನಿಮಾಗಳು ಬರುತ್ತಿವೆ. ಉದ್ಯಮದ ದೃಷ್ಟಿಯಿಂದ ಮನಬಂದಂತೆ ಕೆಲವು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಆದರೆ ಹಣ ಕಡಿಮೆ ಖರ್ಚು ಮಾಡಿಯೂ ಉತ್ತಮ ಸಿನಿಮಾ ನೀಡಲು ಸಾಧ್ಯ ಎನ್ನುವುದನ್ನು ತೋರಿಸಲೆಂದು ಕಿರುಚಿತ್ರ ಮಾಡಿದ್ದಾರೆ. ಮೊದಲಿನಿಂದಲೂ ಎಲ್ಲಾ ಬಗೆಯ ಸಿನಿಮಾಗಳನ್ನು ನೋಡುತ್ತಿದ್ದ ಧೀರಜ್‌ ಮುಂದೊಂದು ದಿನ ಕನ್ನಡದಲ್ಲಿ ಜನಮೆಚ್ಚುವ ಸಿನಿಮಾ ಮಾಡುವ ಬಯಕೆ ಹೊಂದಿದ್ದಾರೆ. ಸಾಧನೆಯ ದಾರಿಗೆ ಈ ಕಿರುಚಿತ್ರ ತಾನು ಹಾಕಿಕೊಳ್ಳುತ್ತಿರುವ ಮೊದಲ ಮೆಟ್ಟಿಲು ಎಂಬುದು ಧೀರಜ್‌ ಅವರ ನಂಬಿಕೆ.

ಕಳೆದ ಒಂದು ವರ್ಷದಿಂದ ಸಿನಿಮಾ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಧೀರಜ್‌ ಕಥೆ, ಸಾಹಿತ್ಯ ಹಾಗೂ ನಿರ್ದೇಶನದ ಮೂಲಕ ಭರವಸೆ ಮೂಡಿಸಿದ್ದಾರೆ. ಧೀರಜ್‌ ರಚನೆಯ ‘ಕಣ್ಮಣಿ ನಿನ್ನ ಪ್ರೀತಿಗೆ’ ಹಾಡು ಸೊಗಸಾಗಿದೆ. ಶ್ರೀನಿಧಿ ಹಾಗೂ ವರ್ಷಾ ಮರಿಸ್ವಾಮಿ ಅವರ ಇಂಪಾದ ದನಿಯ ಸೊಬಗಿದೆ. ಪುನೀತ್‌ ಎಂ.ರಂಗನಾಥ ಅವರ ಸಂಗೀತ ಸಂಯೋಜನೆ ಮೆರುಗು ನೀಡಿದೆ. ಸುಜಯ್‌ ಆರ್‌. ಹೆಗಡೆ, ಅನುಶ್ರೀ ಪದ್ಮನಾಭ, ಅಶ್ವಿನಿ ಆನಂದಿತಾ, ಅಶ್ವಿನ್‌ ಭಾರಧ್ವಾಜ್‌, ಸೂರಜ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.      
        
ಅನ್ನೆಚಿರಾ ಶಿವಕುಮಾರ್‌ ಅವರ ಛಾಯಾಗ್ರಹಣ ಆಪ್ತವೆನಿಸುತ್ತದೆ. ‘ಸಿನಿಮಾ ಮಾಡುವ ಅದಮ್ಯ ಆಸೆಯಿಂದ ನನ್ನನ್ನು ನಾನೇ ಹುರಿದುಂಬಿಸಿಕೊಂಡೆ. ಅದಕ್ಕಾಗಿಯೇ ಸಿನಿಮಾಕ್ಕೆ ‘ಇಂಡಿಪೆಂಡೆಂಟ್‌’ ಎಂದು ಹೆಸರಿಟ್ಟೆ’ ಎನ್ನುವ ಧೀರಜ್‌, ತಮ್ಮ ಸಿನಿಮಾದ ನಾಯಕನ ಮೂಲಕ ಸ್ವಚ್ಛ ಬೆಂಗಳೂರಿನ ಪರಿಕಲ್ಪನೆಯನ್ನೂ ಕಟ್ಟಿಕೊಟ್ಟಿದ್ದಾರೆ. ಸಿನಿಮಾದಲ್ಲಿ ಕಲರ್‌ ಕರೆಕ್ಷನ್‌ ಹಾಗೂ ತಾಂತ್ರಿಕ ಕರೆಕ್ಷನ್‌ಗಳಿದ್ದವು. ಹಣಕಾಸಿನ ತೊಂದರೆಯಿಂದ ಅವುಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ನೊಂದುಕೊಳ್ಳುತ್ತಾರೆ ಅವರು.

ಮುಂದೆ ತಮ್ಮ ನಿರ್ದೇಶನದಲ್ಲಿ ಐದು ಹಾಡುಗಳ ಆಲ್ಬಂ ಒಂದನ್ನು ನಿರ್ಮಿಸುವ ಪ್ರಯತ್ನದಲ್ಲಿ ಧೀರಜ್‌ ಇದ್ದಾರೆ. ‘ಮನುಷ್ಯನಿಗೆ ಬೀಳುವ ಕನಸು ಎಂದೂ ಪೂರ್ಣವಾಗಿ ಬೀಳುವುದಿಲ್ಲ ಎಂಬ ವಿಷಯವನ್ನಿಟ್ಟುಕೊಂಡು ‘ನೆವರ್‌ ಎಂಡ್‌’ ಎಂಬ ಕಿರುಚಿತ್ರ ನಿರ್ಮಾಣದ ಹಾದಿಯಲ್ಲಿದ್ದೇನೆ’ ಎಂದು ತಮ್ಮ ಮುಂದಿನ ಕನಸಿನ ಬಗ್ಗೆ ಧೀರಜ್‌ ವಿವರಿಸುತ್ತಾರೆ.
ಮಾಹಿತಿಗೆ: www.facebook.com/pages/Bendakaluru-Productions

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT