ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲ್ನಡಿಗೆಯ ಕಲರವ

Last Updated 20 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ದೇಹಕ್ಕೆ ಒಂದಿಷ್ಟು ಶ್ರಮ ಕೊಡಲು ಆಟದ ಮೈದಾನಕ್ಕೆ ತೆರಳಿ ಗಾಣದೆತ್ತು ಸುತ್ತಿದಂತೆ ವಾಕ್‌ ಮಾಡುವುದರಲ್ಲಿ ಏನೂ ವಿಶೇಷವಿಲ್ಲ! ಮನೆಯೊಳಗಿನ ಮನಸ್ಸನ್ನು ಕ್ರೀಡಾಂಗಣದೊಳಗೆ ಬರ ಮಾಡಿಕೊಂಡು ನಡುವಿನ ಗೂಟವಲ್ಲದ ಗೂಟಕ್ಕೆ ಕಟ್ಟಿಹಾಕಿ ಕಾಲ್ನಡಿಗೆಯ ಪಾಠ ಹೇಳಲು ಮಧುಮೇಹವೋ, ಸ್ಥೂಲಕಾಯವೋ ಕಾಯುತ್ತಲೆ ಇರುತ್ತವೆ! ಆ ಕರೆಗೆ ಸಮ್ಮೋಹನಗೊಂಡವರಂತೆ ನಾವು ವಾಕ್‌ ಹೊರಡುತ್ತೇವೆ. ಆದರೆ ಸುತ್ತುವ ಕ್ರಿಯೆಗೆ ಸೋತು ಶರಣಾಗದೆ ದಾರಿಯುದ್ದದ ಏರುತಗ್ಗಿಗೆ, ತಿರುವುಗಳಿಗೆ, ಕಾಲ್‌ದಾರಿಗಳಿಗೆ, ಹಳೆಯ ಸಂಕಕ್ಕೆ ತೆರೆದುಕೊಂಡು ನಡೆದಾಡುವ ಒಂದು ಸುಂದರ ‘ಕಾಲ್ನಡಿಗೆಯ ಕಲರವ’ವೂ ಇದೆ! ಈ ಕಲರವ ಕನಸುಗಳ ತವರಾಗಿದೆ. ಮನಸ್ಸುಗಳ ಸಂಗಮಕ್ಕೆ ಸಾಕ್ಷಿಯಾಗುತ್ತದೆ! ಇದು ಅಂತರಂಗದ ನಮ್ಮ ತುಡಿತಗಳನ್ನು ಕೈ ಹಿಡಿದು ಅಷ್ಟು ದೂರ ಕರೆದುಕೊಂಡು ಹೊಗುತ್ತದೆ!

ಕಾಲುಗಳು ಮಾತ್ರ ನಡೆದರೆ ಸಾಲದು; ಮನಸ್ಸೂ ಅವುಗಳ ಜೊತೆ ಹೆಜ್ಜೆ ಹಾಕಬೇಕು. ಆಗ ಮಾತ್ರ ನಡಿಗೆ ನವಿರಾಗಿ ನಲಿಯುತ್ತದೆ! ಹೀಗಾಗಿಯೆ ಬರೀ ನಡಿಗೆ ದೈಹಿಕವಾದರೆ ಮನ ತುಂಬಿ, ಲಹರಿ ಉಕ್ಕಿ ಮಾಡುವ ನಡಿಗೆ ಮಾನಸಿಕವಾಗುತ್ತದೆ. ವಾಕಿಂಗ್‌ ತುಂಬಿ ತುಳುಕುವುದು ಈ ಲಹರಿಯಿಂದ! ಈ ಲಹರಿ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಬರಬಹುದು. ತಮಗಿಷ್ಟವಾದ ಒಂದು ಸಿನಿಮಾ ಹಾಡು ಈ ಲಹರಿಯನ್ನು ಸೃಷ್ಟಿಸಬಹುದು. ಆಗ ಆ ಹಾಡನ್ನು ಗುನುಗುಣಿಸುತ್ತಾ, ತಾವೇ ಹೀರೋ ಎನ್ನುವ ಹಮ್ಮಿನಿಂದ ನಡೆಯುವಾಗ

ಮುಂಜಾನೆ ಅಥವಾ ಸಂಜೆ ‘ವಾಕಿಂಗ್‌’ ಹೆಸರಿನಲ್ಲಿ ಒಂದಷ್ಟು ದೂರ ನಡೆಯುವುದು ಬಹುತೇಕರ ದೈನಿಕದ ಒಂದು ಭಾಗ. ದಿನಕಳೆದಂತೆ ಈ ನಡಿಗೆ ಏಕತಾನತೆ ಎನ್ನಿಸುತ್ತದೆ, ಬೇಸರ ತರಿಸುತ್ತದೆ. ಆದರೂ, ಆರೋಗ್ಯದ ಹಂಬಲದಿಂದ ನಡೆಯುವ ಕಸರತ್ತು ಮುಂದುವರಿಯುತ್ತದೆ. ಹೆಜ್ಜೆಗಳೊಂದಿಗೆ ನಮ್ಮ ಮನಸ್ಸೂ ನಡೆಯುವುದು ಸಾಧ್ಯವಾದಾಗ ಕಾಲ್ನಡಿಗೆ ಅದ್ಭುತ ಅನುಭವವನ್ನು ತಂದುಕೊಡಬಲ್ಲದು. ಅಂಥ ಸಂದರ್ಭದಲ್ಲಿ ಹೆಜ್ಜೆ ಇಟ್ಟಂತೆಲ್ಲ– ನದಿ, ಕಡಲು, ಸಂಗೀತದ ಹೊನಲಿನ ಮುಖಾಮುಖಿ. ಯಾರಿಗೆ ಗೊತ್ತು, ನಮ್ಮನ್ನು ಪ್ರಭಾವಿಸಿದ ಹಲವು ಚೇತನಗಳು ಕೂಡ ಜೊತೆಜೊತೆಯಾಗಿ ಹೆಜ್ಜೆಹಾಕುತ್ತ ಮಾತಿಗಿಳಿಯಬಹುದು.

ವಾಕಿಂಗಿನ ಕಲ್ಪನೆಯೇ ಬದಲಾಗಿ ಬಿಡುತ್ತದೆ!

ಬೆಳಗಿನ ವಾಕಿಂಗ್‌ನಲ್ಲಿ ಒಂದು ಆತುರ ಅಡಗಿರುತ್ತದೆ. ವಾಕಿಂಗ್‌ ಮುಗಿಸಿ ಮನೆ ಸೇರಿ ಅಲ್ಲಿಂದ ಮತ್ತೆ ಕೆಲಸಕ್ಕೆ ಹೋಗುವ ತುರ್ತಿನಲ್ಲಿ ವಾಕಿಂಗ್‌ ಒಂದು ನಿತ್ಯದ ಸಾಮಾನ್ಯ ವಿಷಯ ಆಗಿಬಿಡಬಹುದು. ಆದರೆ ಸಂಜೆಯ ವಾಕಿಂಗ್‌ನಲ್ಲಿ ಸಮಾಧಾನದ, ಸಾವಧಾನದ ಹೆಜ್ಜೆಗಳಿರುತ್ತವೆ. ಅಲ್ಲಿ ಧಾವಂತ ಇರುವುದಿಲ್ಲ.

ಹೀಗಾಗಿಯೇ ಮನಸ್ಸು ತನಗೆ ಬೇಕಾದ ಕಡೆ ತಿರುಗುವುದಕ್ಕೆ, ಹಾಡು ಕಟ್ಟುವುದಕ್ಕೆ ಕನಸು ಕಾಣುವುದಕ್ಕೆ ಮತ್ತು ತಾನು ಹೋಗುವ ಕಡೆಗೆಲ್ಲಾ ನಮ್ಮನ್ನೂ ಕರೆದುಕೊಂಡು ಹೋಗುವುದಕ್ಕೆ ಇಲ್ಲಿ ಸಮಯ ಇರುತ್ತದೆ. ಸಮಯ ಇರುವಲ್ಲಿ ಕವಿಗಳು, ಲೇಖಕರು, ಕತೆಗಾರರು, ಸಂಗೀತಗಾರರು ಜೊತೆಯಾಗುತ್ತಾರೆ! ವಾಕಿಂಗ್‌ ಎನ್ನುವುದು ಎಷ್ಟು ಬಾಹ್ಯವೋ, ಅದಕ್ಕಿಂತ ಹತ್ತುಪಾಲು ಹೆಚ್ಚಾಗಿ ಅದು ಅಂತರಂಗದ ನಡಿಗೆ! ವಾಕಿಂಗ್‌ ಮಾಡುತ್ತಾ ಮಾಡುತ್ತಾ ನಾವು ಒಳಗಿನ ಬಯಲನ್ನೂ, ಗುಡ್ಡ, ಬೆಟ್ಟಗಳನ್ನೂ, ನದಿ, ಹೊಳೆ, ಸಮುದ್ರವನ್ನು ನೋಡುವಂತಾಗಬೇಕು! ಕೊನೇಪಕ್ಷ ಒಳಗಿನ ಆನಂದದ, ಸಂತಸದ ನೆಲೆಯನ್ನಾದರೂ ಕಾಣುವಂತಾಗಬೇಕು. ಹಾಗಾಗದ ನಡಿಗೆ ಕಾಲುಗಳನ್ನು ನೋಯಿಸಬಹುದೆ ಹೊರತು ಮನವನ್ನು ತಣಿಸಬಾರದು.

ಒಂದು ಕಡೆ ಕಿ.ರಂ. ನಾಗರಾಜ ಹೇಳಿದ ಮಾತು ಅದ್ಭುತವೆನಿಸಿದ್ದು ಈ ಎಲ್ಲಾ ಕಾರಣಗಳಿಗಾಗಿಯೆ. ಅಷ್ಟೇ ಅಲ್ಲ, ಆ ಅನುಭವ ನನಗೂ ಅದೆಷ್ಟೋ ಬಾರಿ ಆಗಿರುವುದರಿಂದ ಮತ್ತು ಓದುಗರಿಗೂ ಹೀಗೆ ಆಗಿರುವ ಸಾಧ್ಯತೆಗಳಿರುವುದರಿಂದ ಆ ಮಾತು ಇನ್ನಷ್ಟು ವಿಸ್ಮಯ ಹುಟ್ಟಿಸಿದ್ದೂ ಸತ್ಯವೆ. ಕಿ.ರಂ. ಅವರು ಆಡಿದ  ಮಾತುಗಳು ಹೀಗಿವೆ.

‘‘ಇವತ್ತು ಸಾಯಂಕಾಲ ಅಕ್ಕಮಹಾದೇವಿಯ ಜೊತೆ ವಾಕಿಂಗ್‌ ಹೋಗಿದ್ದೆ’’– ಇದರ ಬಗ್ಗೆ ಎಂ.ಎಸ್‌. ಆಶಾದೇವಿ ಅವರ ಪ್ರಶ್ನೆಗೆ ಉತ್ತರಕೊಡುತ್ತಾ ಕಿ.ರಂ. ಹೇಳುತ್ತಾರೆ;

‘‘ನಾನು ಅಕ್ಕನನ್ನು ಗ್ರಹಿಸಿಕೊಳ್ಳೋದೇ ಹೀಗೆ. ಅವಳು ನನ್ನ ಪರಮ ಸ್ನೇಹಿತೆ. ಕವಿಗಳು ನನಗೆ ಜೀವಂತಗೊಳ್ಳುವುದು ಈ ಬಗೆಯಲ್ಲಿ’’– ಈ  ಕಲ್ಪನೆಯಲ್ಲೆ ಒಂದು ವಿಸ್ಮಯವಿದೆ. ನಮಗಿಷ್ಟವಾದ ಕವಿಯೊಂದಿಗೆ, ಅದೂ ಅತನ ಅನುಪಸ್ಥಿತಿಯಲ್ಲಿ, ವಾಕಿಂಗ್‌ ಹೋಗುವುದಿದೆಯಲ್ಲ... ಅದರಲ್ಲಿ  ಬದುಕಿಗೆ ಬೇಕೇಬೇಕಾದ ಅನುಭಾವದ ಸ್ಪರ್ಶವಿರುತ್ತದೆ. ಈ ಸ್ಪರ್ಶ ನಮ್ಮನ್ನು ಒಮ್ಮಿಂದೊಮ್ಮೆಲೆ ಪುಳಕಿತಗೊಳಿಸಿ, ನೆಲದ ಮೇಲಿನ ಹೆಜ್ಜೆಗಳನ್ನು ಇಷ್ಟೇ ಇಷ್ಟು ಮೇಲಕ್ಕೆ ಏರಿಸಿ ಬಣ್ಣಿಸಲಾಗದ, ಹೇಳಿಕೊಳ್ಳಲಾಗದ ರಸಾನುಭವದೆಡೆಗೆ ಕೊಂಡೊಯ್ಯುತ್ತದೆ!

ಈ ರೀತಿ ನಮಗಿಷ್ಟವಾದ ಲೇಖಕರೊಂದಿಗೆ ವಾಯುವಿಹಾರ ಮಾಡುವುದಕ್ಕೆ ಮುಂಗಾರಿನಷ್ಟು ಅನುಕೂಲವಾದ ಸಮಯ ಇನ್ನೊಂದಿಲ್ಲ! ಮಳೆ ಸುರಿಯುತ್ತಿರುವಾಗಲೆ ಇಷ್ಟದ ಕೊಡೆಯನ್ನು ಬಿಡಿಸಿ ಎಡಗೈಯಲ್ಲಿ ಅದನ್ನು ಸ್ವಲ್ಪವೇ ಸ್ವಲ್ಪ ಎತ್ತಿ ಹಿಡಿದು ಹನಿಹನಿಗಳ ಜೊತೆ ಹೆಜ್ಜೆ ಹಾಕುವುದರಲ್ಲಿರುವ ಸುಖವನ್ನು ಬಿಡಿಸಿ ಹೇಳುವಂತಿಲ್ಲ! ಮೇಲಿನಿಂದ ಮಳೆ ಹನಿಗಳು ಟಪಟಪನೆಂದು ಕೊಡೆಯ ಮೇಲೆ ಬೀಳುವಾಗ ಸಂಗೀತ ಲೋಕವೊಂದು ಸೃಷ್ಟಿಯಾಗುತ್ತದೆ. ಆ ಸಂಗೀತಕ್ಕೆ, ಆ ರಾಗಕ್ಕೆ, ಆ ನಾದಕ್ಕೆ ಏನನ್ನೇ  ಬೇಕಾದರೂ ಸೃಷ್ಟಿಸುವ, ಯಾರೊಂದಿಗೇ ಆದರೂ ಮಾತುಕತೆ ನಡೆಸುವ ಸತ್ತವರಿಗೂ ಮರುಜೀವ ಕೊಟ್ಟು ಮರಳಿ ಮಳೆಗೆ ತಂದು ನಾಲ್ಕು ಹೆಜ್ಜೆ ಹಾಕಿಸುವ ಸಂಜೀವಿನಿ ಸತ್ವವಿದೆ! ಈ ನಾದದಲ್ಲೇ ಅಲ್ಲವೇ ನಾವು ಶಿವರಾಮ ಕಾರಂತರೊಡನೆ, ಬೇಂದ್ರೆ, ಕುವೆಂಪು ಅವರೊಡನೆ, ಓರಮ್‌ ಪಮುಖ್‌ ಜೊತೆ ಮಾತನಾಡುವುದು? ಈ ರಾಗಸುಧೆಯಲ್ಲೇ ಅಲ್ಲವೇ ನಮಗೆ ಎಂ.ಎಸ್‌. ಸುಬ್ಬುಲಕ್ಷ್ಮಿ, ಭೀಮಸೇನ ಜೋಶಿ, ಆಶ್ವಥ್‌ ಹತ್ತಿರವಾಗುವುದು?

ನಾನು ಮೊತ್ತ ಮೊದಲಬಾರಿ, ಮಿಚ್‌ ಆಲ್ಬಂ (Mitch Albom) ಬರೆದ ‘ಟ್ಯೂಸ್‌ಡೇಸ್‌ ವಿದ್‌ ಮೊರೆ’ (Tuesdays with Morrie) ಕಾದಂಬರಿಯನ್ನು ಓದಿದಾಗ ಅವನೊಂದಿಗೆ ಸಂಜೆಯ ವಾಕ್‌ ಹೋಗಿದ್ದೆ. ಸಾವಿನ ಅಂಚಿನಲ್ಲಿರುವ ಗುರುವನ್ನು ಭೇಟಿಯಾಗಲು ಶಿಷ್ಯನೊಬ್ಬ 14 ಮಂಗಳವಾರ ಆತನ ಮನೆಗೆ ಹೋಗುವುದೇ ಇಲ್ಲಿನ ಕತೆ. ಆ 14 ಮಂಗಳವಾರ ಗುರು, ಶಿಷ್ಯರು ಬದುಕಿನ ಬಗ್ಗೆ ಮಾತಾಡುತ್ತಾರೆ. 14ನೇ ಮಂಗಳವಾರ ಗುರು ಕೊನೆಯುಸಿರೆಳೆಯುತ್ತಾನೆ.

ಆ ಚಿಕ್ಕ ಕಾದಂಬರಿಯಲ್ಲಿ ಮೂಡಿ ಬಂದ ಉದಾಹರಣೆಗಳು ಅವನೊಂದಿಗೆ ವಾಕ್‌ ಮಾಡುವ ಹಾಗೆ ಮಾಡಿತ್ತು. ಕೊನೆಯಲ್ಲಿ ಒಂದು ಮಾತು ಬರುತ್ತದೆ– ‘‘ನಿಮ್ಮ ಗುರುಗಳು ಅನಾರೋಗ್ಯದಿಂದ ಬಳಲುತ್ತಿದ್ದಾರೆಂದು ತಿಳಿದರೆ ಕೂಡಲೆ ಭೇಟಿಯಾಗಿ, ನಿಮ್ಮ ಭೇಟಿಯನ್ನು ಒಂದು ದಿನವೂ ಮುಂದೂಡಬೇಡಿ’’. ಈ ಮಾತನ್ನು ಹೃದಯಕ್ಕೆ ಇಳಿಬಿಟ್ಟು ವಾಕ್‌ ಮಾಡಿ ಥ್ರಿಲ್‌ ಪಡೆದದ್ದು ಇನ್ನೂ ನೆನಪಿದೆ. ಅಲ್ಲಿ; ಆ ಗುರು, ಶಿಷ್ಯನಿಗೆ ಜೀವಂತ ಶವಯಾತ್ರೆಯ ಪಾಠ ಮಾಡುತ್ತಾನೆ. ಮಲಗಿರುವಾಗ ನಾವು ಸತ್ತಿರುತ್ತೇವೆ. ಇದರಲ್ಲೇನೂ ಅಚ್ಚರಿಯಿಲ್ಲ. ಆದರೆ ಎಚ್ಚರವಾದ ಮೇಲೆ ನಾವು ನಿಜವಾಗಿಯೂ ಬದುಕಿರುತ್ತೇವೆಯೆ? ಈ ಸತ್ಯ ತಿಳಿಯಲು ಮಳೆಗಾಲದ ಒದ್ದೆ ಒದ್ದೆ ವಾಕಿಂಗ್‌ ಬೇಕಾಗುತ್ತದೆ. ಕೊಡೆಬಿಡಿಸಿ, ಅದನ್ನು ನಮ್ಮನ್ನು ನಾವೇ ಮರೆಮಾಚುವಂತೆ ಹಿಡಿದು ನಡೆಯುವಾಗ ಎದುರಿಗೆ ಅಪ್ಪನೇ ಬರುತ್ತಿದ್ದರೂ ನಾವು  ಅವರಿಗೆ, ಅವರು ನಮಗೆ ಕಾಣುವುದೇ ಇಲ್ಲ. ಹೀಗೆ ನಾವು ಇತರರಿಗೆ ಕಾಣದಿರುವಾಗ ನಮ್ಮನ್ನು ಕಾಣುವುದು ಸರಳವಾಗುತ್ತದೆ! ಪಾದಗಳಷ್ಟೆ ಮುಳುಗುವ ನೀರಿನಲ್ಲಿ ಕಾಲುಗಳನ್ನು ಬಿಡಿಸಿಕೊಂಡು ನಡೆಯುವಾಗ ಎಚ್ಚರದಲ್ಲಿ ಸತ್ತಿರುವ ಸಂಗತಿ ನೆನಪಾದರೂ ಆದೀತು!

ಅಂದಹಾಗೆ ನಮ್ಮಲ್ಲಿ ಅನೇಕರು ಮೊದ ಮೊದಲು ವಾಕಿಂಗ್‌ ಹೋದದ್ದು ನರಸಿಂಹಯ್ಯನವರೊಡನೆಯೇ ಅಲ್ಲವೆ? ಆಗ ನಾವೇ ಪತ್ತೇದಾರಿ ಪುರುಷೋತ್ತಮರಾಗಿ ಅದೆಷ್ಟು ರಹಸ್ಯಗಳನ್ನು ವಾಕಿಂಗ್‌ ಹೋಗಿ ಮನೆ ತಲುಪುವಷ್ಟರಲ್ಲಿ ಬಟಾಬಯಲು ಮಾಡಿಲ್ಲವೆ? ಆಮೇಲೆ ಬಿಡಿ, ನಾಲ್ಕೇ ನಾಲ್ಕು ತಂತಿಗಳನ್ನು ಮೆದುವಾಗಿ ಹಿಡಿದು ಬೇಂದ್ರೆಯವರೊಡನೆ ಗದ್ದೆಗಳ ನಡುವಿನ ಕಟ್ಟೆಪುಣೆಯಲ್ಲಿ, ಅಡಿಕೆ ತೋಟದ ನಡುವಿನ ದಾರಿಯಲ್ಲದ ದಾರಿಯಲ್ಲಿ, ದೇವಸ್ಥಾನದ ಹೊರಸುತ್ತಿನಲ್ಲಿ ಅದೆಷ್ಟು ಬಾರಿ ವಾಕಿಂಗ್‌ ಹೋಗಿಲ್ಲ? ಪೇಟೆಗೆ ಬಂದಮೇಲಂತೂ ನಾನೂ ನೀನು, ಆನೂ ತಾನು ಎನ್ನುವ ನಂಟಿನ ಜೊತೆ ವಾಕ್‌ ಮಾಡುವುದು ಅಭ್ಯಾಸವೇ ಆಗಿಹೋಗಿತ್ತಲ್ಲಾ? ಮದುವೆಯಾದ ಹೊಸತರಲ್ಲಿ ‘ಪರಮೆ ತುಂಬಿ’ ಎನ್ನುವ ಬೇಂದ್ರೆಯವರ ಕವನವೊಂದು ಹೇಗೋ ಕಣ್ಣಿಗೆ ಬಿತ್ತು. ಯಾಕೆ ಬಿತ್ತೋ ಗೊತ್ತಿಲ್ಲ! ಉದ್ದೇಶ ಪೂರ್ವಕವಂತೂ ಆಗಿರಲೇ  ಇಲ್ಲ. ಪ್ರಾಯಶಃ ವಾಯುವಿಹಾರ ಕೂಗಿ ಕರೆದಿರಬೇಕು.

‘ತುಂಬಿ ಮೊರೆದು ಪರಮೆಯನ್ನು ಕರೆಯುತ್ತಿದೆ
ಓವಮ್ಮನ (Ovum) ಮನೆಗೆ
ಪರಮಪ್ಪ (Sperm) ಬಂದ
ಏನಂದ? ಚಂದ!
ಆ ಕಂದ, ಯಾರಿಂದ, ಅಂದ’

ಆ ಕಂದ ಯಾರಿಂದ ಎನ್ನುವ ಸರಳ ಶಬ್ದಗಳ ಜೊತೆ ಬೇಸಿಗೆಯ ಬಿಸಿ ತಪ್ಪಿಸಲು ವಾಕಿಂಗ್‌ ಹೋದದ್ದು ನಿನ್ನೆಯೆ? ಮೊನ್ನೆಯೆ? ಅಥವಾ ಆ ಕಾಲದಲ್ಲೇ? ಹಿೇಗೆ ಯಾವುದೋ ಒಂದು ಕವನದ ಸಾಲು ಬೆಂಬಿಡದೆ ಕಾಡಿ ಒಳಗಿಳಿದು ಹೃದಯದ ಬಳಿಯೇ ಸುಳಿದಾಡುವಾಗ ಆ ಕವಿಯೇ ಕೈಹಿಡಿದ ಹಾಗೆ ಆಗುತ್ತದೆ. ಆಗ ಓದುತ್ತಿರುವ ಕವನವನ್ನೋ ಕತೆಯನ್ನೋ ಅಲ್ಲೇ ಬಿಟ್ಟು ಮನೆಯಿಂದ ಹೊರಗೆ ಹೆಜ್ಜೆಯಿಡುವ, ಹಾಗೆಯೇ ಮನೆಯ ಹಿಂದಿನ ಗುಡ್ಡದ ದಾರಿ ಹಿಡಿದು ವಾಕಿಂಗ್‌ ಹೋಗುವ ಮನಸ್ಸಾಗುತ್ತದೆ! ಗುಡ್ಡದ ಏರು ಮುಗಿದು ಸಿಗುವ ಸಣ್ಣ ಬಯಲಿನ ಹಸಿರಿನಲ್ಲಿ ನಾವೆಂದೂ ಭೇಟಿಯಾಗದ ಕವಿಗಳು ಕಾಣುತ್ತಾರೆ, ಮಾತಾಡಿಸುತ್ತಾರೆ.

ಬಾ ಒಂದಷ್ಟು ದೂರ ನಡೆಯೋಣ ಎನ್ನುತ್ತಾರೆ! ಮೊತ್ತ ಮೊದಲು ಅಶ್ವಥ್‌ ಅವರ ಧ್ವನಿಯಲ್ಲಿ ಶಿಶುನಾಳಧೀಶರ ಅನುಭಾವದ ಹಾಡುಗಳನ್ನು ಕೇಳಿದಾಗ ಒಳ – ಹೊರಗೆಲ್ಲಾ ಶಿಶುನಾಳರೆ ತುಂಬಿಕೊಂಡದ್ದು ಕೋಡಗನ ಕೋಳಿ ನುಂಗಿದಷ್ಟೇ ವಿಚಿತ್ರ ಸತ್ಯ! ಆಗ ಆ ಹಿಂದಣ ಸಮಯದಲ್ಲಿ ಅದೆಷ್ಟೋ ದಿನಗಳಲ್ಲಿ ಶಿಶುನಾಳರ ಜೊತೆಯೇ ವಾಕಿಂಗ್‌ ಹೋಗಿದ್ದೆ! ಬೇರೆ ಯಾರೂ ಬೇಡ ಎನ್ನುವಷ್ಟು ಅವರ ಸಾಂಗತ್ಯದಲ್ಲಿದ್ದೆ. ‘ಸೋರುತಿಹುದು ಮನೆಯ ಮಾಳಿಗೆ’ ಎನ್ನುವುದು ಆ ಬಾಡಿಗೆಯ ಮನೆಯಲ್ಲಿ ಎಷ್ಟು ಸತ್ಯವಾಗಿತ್ತು ಎನ್ನುವುದನ್ನು ಮೀರಿ ಆ ಹಾಡು ಒಳಗಿನ ಪಡಸಾಲೆಗೆ ಕರೆದೊಯ್ದು ಸಾಂತ್ವನ ಹೇಳಿದಂತೆ ಇತ್ತು! ಏಕಾಂತವನ್ನೂ ಏಕಾಂತದಿಂದಲೆ ಗೆಲ್ಲಬೇಕು.

ಏಕಾಂತವನ್ನು  ಹೊಡೆದೋಡಿಸಲು ಐದು ಮಂದಿಯ ಗುಂಪು ಕಟ್ಟಿಕೊಂಡು ವಾಕಿಂಗ್‌ ಹೋದರೆ ಏನೂ ಪ್ರಯೋಜನವಿಲ್ಲ. ವಾಕಿಂಗಿಗೆ ಒಬ್ಬರೇ ಹೋಗಬೇಕು! ಹೋಗುತ್ತಾ ಹೋಗುತ್ತಾ ಅಂತರಂಗದ ಪಡಸಾಲೆಯಲ್ಲಿ ಅಲ್ಲೊಬ್ಬ ಕವಿ, ಇಲ್ಲೊಬ್ಬ ಸಂಗೀತಗಾರ ಬಂದು ಸೇರಿಕೊಳ್ಳಬೇಕು. ಅವರ ಒಡನಾಟದಲ್ಲಿ ಅಷ್ಟು ದೂರ ನಡೆದು, ದಣಿವಾರಿಸಲು ಕಲ್ಲು ಬೆಂಚಿನ ಮೇಲೆ ಕುಳಿತು, ಮತ್ತೆ ಸಾವಿರ ಹೆಜ್ಜೆ ಹಾಕಿ ಸಾವಿರದ ಪುಲಕವನ್ನು ಹಾಗೆಯೇ ಒಳಗೆಳೆದುಕೊಳ್ಳಬೇಕು!

ಓರಮ್‌ ಪಮುಕ್‌ ಒಂದು ಕಡೆ ‘ಜೋಡಿ ಕಣ್ಣುಗಳು ನನ್ನನ್ನೇ ಹಿಂಬಾಲಿಸುತ್ತಿವೆ’ ಎನ್ನುತ್ತಾನೆ. ಆ ಕಣ್ಣುಗಳು ಬೇರೆಯವರದ್ದೆ? ತನ್ನದೆ? ಎನ್ನುವ ಗೊಂದಲವನ್ನೂ ಆತನೇ ಸೃಷ್ಟಿಸುತ್ತಾನೆ. ಕೊನೆಗೆ ಹಿಂಬಾಲಿಸುತ್ತಿರುವ ಕಣ್ಣುಗಳು ತನ್ನನ್ನೇ ಹಿಂದಿಕ್ಕಿ ಮುಂದೆ ಹೋದ ಹಾಗೆ ಅವನಿಗನಿಸುತ್ತದೆ! ಈಗ ಆತ ಆ ಕಣ್ಣುಗಳನ್ನು ಹಿಂಬಾಲಿಸುತ್ತಿದ್ದಾನೆ. ವಾಕಿಂಗಿಗೆ ಥ್ರಿಲ್‌ ಸಿಗುವುದೇ ಹೊರಗಣ್ಣು ನೋಡಲಾಗದ ನೋಟಗಳಿಂದಲೇ ಅಲ್ಲವೆ? ಕೊನೆಗೂ ಹೊರಗಣ್ಣು ನೋಡುವ ಬೆಟ್ಟ. ಗುಡ್ಡ, ನದಿ, ಕೊಳ, ಹೂವುಗಳು, ಚಿಟ್ಟೆಗಳೆಲ್ಲಾ ಇಳಿಯುವುದು ಒಳಗೇ ಅಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT