ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಜಿಯ ಪರದೆ ಹೊದ್ದು ಬರಲಿ ಪ್ರೀತಿ...

Last Updated 30 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘ಪ್ರೀತಿ ಬರೇ ಪ್ರೀತಿ ಆಗಿರಾಕ ಸಾಧ್ಯನೇ ಇಲ್ಲೇನು?’ ಇಷ್ಟಗಲ ಕಣ್ಣಾಗ ಒಂದೀಟು ನೋವು, ಒಂದೀಟು ಅನುಮಾನ ಎಲ್ಲಾ ತುಂಬ್ಕೊಂಡು ಕೇಳಿದ್ಲು ಆ ಹುಡುಗಿ.
ಹೊಸತಾಗಿ ಮದಿವ್ಯಾಗಿ, ಮೆಹೆಂದಿ ಬಣ್ಣ ಕಂದುವ ಮುನ್ನ ಈ ಪ್ರಶ್ನೆ ಅಕಿನೊಳಗ ಹುಟ್ಟಿದ್ದು, ದಿಗಿಲು ಮೂಡಿಸಿತ್ತು.
ಆ ಕ್ಷಣಕ್ಕ ಅಕಿಗೆ ಮಾತೂ ಬೇಕಾಗಿರಲಿಲ್ಲ. ಉಪದೇಶನೂ ಬೇಕಾಗಿರಲಿಲ್ಲ. ಕೇಳೂ ಕಿವಿ ಬೇಕಾಗಿದ್ವು. ಕೊಟ್ಟು ಸುಮ್ನ ಕುಂತೆ.
ಪ್ರಶ್ನೆ ಒಗದು ಕುಂತ ಹುಡುಗಿ,  ಮಾತಾಡಿದ್ರ ಎಲ್ಲಿ ತುಳಕತಾವ ಅನ್ನೂಹಂಗ ಕಣ್ಕೊಳ ಆಗಿದ್ವು.

‘ಪ್ರೀತಿ ಅಂದ್ರೇನು? ಬರೇ ಪಡಿಯೂದ? ಕಳ್ಕೊಳ್ಳೂದ? ಇಲ್ಲಾ ನಮ್ಮದು ಅಂತ ಸಾಧಸಾಕ ಹೋಗೂದ? ಇದ್ಯಾವುದೂ ಅಲ್ಲ, ಹೌದಲ್ಲೋ? ಆ ಮನಶಾಗ ಗಂಡ ಅನ್ನಾಕೂ ಒಲ್ಲೆ ಅನ್ನಸ್ತದ. ಸಾಕಾಗಿ ಶೆಟಗೊಂಡ್ರ, ನೀನೆ ಚಂದ್ರ, ಸುಂದರ ಅಂತೆಲ್ಲ ಹಾಡಿ ಹೊಗಳ್ತಾನ. ಯಾರಿಗೆ ಬೇಕಾಗೇದ ಈ ಹೊಗಳಕಿ? ನನ್ನ ಛಂದನೆಯ ಕಣ್ಣೊಳಗಿನ ನೀರಿನ ಪಸೆ ಕಾಣದಿದ್ರ ಅವುನ್ನ ನೀ ಹೊಗಳಿದ್ರೆಷ್ಟು, ಪಿಸ್ಸ... ಅಂತ ನೋಡದೇ ಮುಂದ ಹೋದ್ರೆಷ್ಟು?’
ಇನ್ನಾ ಬಿಗುವಾಗಿ ಸಿಡದ್ರ, ‘ಈ ಸುಖಕ್ಕ ಮದಿವಿಯಾಗಬೇಕಿತ್ತ?’ ಅಂತ ಪ್ರಶ್ನೆ ಒಗೀತಾರ. ಹಂಗಾದ್ರ ಬರೇ ‘ಆ’ ಸುಖಕ್ಕ ಮದಿವಿ ಆಗಬೇಕೇನು?

ಕೊನೀಗೆ ಯಾವುದೂ ಬ್ಯಾಡ ಅಂತ ಸಿಡಿದೆದ್ದು ಕೂಗಾಡಿದ್ರ, ನನ್ನ ಅಸ್ತಿತ್ವನೇ ನಿರ್ಲಕ್ಷಿಸೂಹಂಗ ವರ್ತಸ್ತಾನ.
ತೀರ ಒಂದು ಜೀವ ಅನಗತ್ಯ ಆದ್ರ, ಅದರ ಜೊತಿಗೆ ಇಂಥ ಬಾಂಧವ್ಯ ಬೇಕೇನು?
ಉತ್ತರ ಇರಲಿಲ್ಲ. ಸುಮ್ನ ನೋಡ್ತಿದ್ದೆ. ಇವೇ ಪ್ರಶ್ನೆ ಅದೆಷ್ಟು ಸಲ ನಮ್ಮನ್ನ ಕಾಡೂದಿಲ್ಲ, ನಮ್ಮೊಳಗ ಸುಳಿದಾಡಿ, ನಿಟ್ಟುಸಿರಾಗಿ ಹೊರಗ ಬರೂದಿಲ್ಲ?

ನನ್ಮುಂದ ಕುಂತ ಹುಡುಗೀಗೆ ಗೊತ್ತಿತ್ತು. ಸುಮ್ನ ಕುಂತು ಕೇಳುವ ಶಾಸ್ತ್ರ ಅಂತೂ ನಾ ಮಾಡ್ತಿಲ್ಲ ಅನ್ನೂದು. 
ಸುಮ್ನಿದ್ಲು. ಕ್ಯಾಲೆಂಡರ್‌ ಕಡೆ ದಿಟ್ಟಿಸಿದ್ಲು. ‘ಒಂದಾರು ತಿಂಗಳು ಮೊದಲು ಎಷ್ಟು ಅರಾಮಿದ್ದೆ. ನನ್ನ ಪಾಡಿಗೆ ನಾನು. ಈಗ ನೋಡು, ಮುಂಜೇನೆ ತಿಂಡೀನು ನಾನೇ ಮಾಡಬೇಕು. ಗಂಡನ ಬಟ್ಟಿ ಒಗೀಬೇಕು. ಅಡಗಿ ಮಾಡಿಟ್ಟು ಕಚೇರಿಗೆ ಓಡಬೇಕು. ಬಂದ ಮ್ಯಾಲೆ ರಾತ್ರಿ ಅಡಗಿ ಮಾಡಬೇಕು. ಮೊದಲಾದ್ರ, ಮುಂಜೇನೆ ಒಂದೀಟು ಗಂಜಿ ಕುದಿಸಿ ಕುಡೀತಿದ್ದೆ. ರಾತ್ರಿ ಒಂದು ಹಣ್ಣು ತಿಂದು, ಹಾಲು ಕುಡಿದ್ರೂ ಮುಗುದ ಹೋಗ್ತಿತ್ತು. ಈಗೀಗ ಅಡಗಿ ಮಾಡೂದು ಬಿಟ್ರ ಬ್ಯಾರೆ ಯೋಚನೀನೇ ಬರೂದಿಲ್ಲ. ಮಧ್ಯಾಹ್ನಕ್ಕ ಇದು ಮಾಡಿಟ್ಟೇನಿ. ರಾತ್ರಿಗೇನು ಮಾಡಬೇಕು? ಮರುದಿನದ ಬೆಳಗಿಗೇನು ಉಳೀತದ? ಹೋಗೂಮುಂದ ಏನು ತೊಗೊಂಡು ಹೋಗಬೇಕು? ಯವತ್ತರೆ ಹೊರಗ ಹೋಗೂನು ಅಂದ್ರ, ‘ನಂಗ ಹೊರಗ ಹೋಗಿ ಉಣ್ಣಾಕ ಬ್ಯಾಸ್ರ ಅಂತ ಲಗೂ ಲಗ್ನಾ ಆಗೇನಿ. ಅನ್ನಾ ಬೇಯ್ಸಿ ಬರೇ ಸಾರು ಮಾಡಿದ್ರೂ ಸಾಕು’ ಅಂತಾರ. ತಾವೇನೂ ಸಹಾಯ ಮಾಡೂದೇ ಇಲ್ಲ. ಅಡಗಿ ಮಾಡಿ ಹಾಕಾಕೇ ನಾನು ಮದಿವಿ ಆಗಿಲ್ಲ ಅಂತ ಹೇಳಬೇಕನ್ನಿಸಿತ್ತು. ಆದ್ರ ಹಂಗ ಹೇಳಾಕ ಮನಸು ಒಪ್ಲಿಲ್ಲ’

‘ನಂಗೂ ಹೊಸಾ ಸಂಸಾರ. ಹೊಂದ್ಕೊಳ್ಳಾಕ ಸಮಯ ಬೇಕು. ಇಷ್ಟು ದಿನಾ ಅವರ ಬಟ್ಟಿ ಯಾರು ಒಗೀತಿದ್ರು? ತಿಂಡಿ ಹೆಂಗ ತಿಂತಿದ್ರು? ಯಾರನ್ನರೆ ಆಳಬೇಕು ಅಂತನೇ ಮದಿವಿ ಆದಂಗ ಐತಿ... ನಾನು ಯಾರಿಗರೆ ಆಳು ಆಗಬೇಕಂತ ಆಗಿಲ್ಲ ನೋಡ್ರಿ. ಅದನ್ನಂತೂ ಸ್ಪಷ್ಟ ಮಾಡ್ಲೇ ಬೇಕಾಗೇದ’ ಅಂತ ಹೇಳಿದ್ಲು ಹುಡುಗಿ.
ಏನು ಹೇಳೂದು? ಎರಡು ಜೀವ... ಒಂಟಿಯಾಗಿ ಬೆಳೆದು, ಜಂಟಿಯಾಗಿ ಬದುಕಾಕ ಹೊಂಟಾಗ ಇಂಥ ಸಂಘರ್ಷಗಳು ಬಂದೇ ಬರ್ತಾವ. ಆದ್ರ ಈ ಜಗ್ಗಾಟ ತೀರ, ಒಬ್ಬರ ಅಹಂಕಾರ ಇನ್ನೊಬ್ಬರ ಅಭಿಮಾನದ ನಡುವಿನ ಜಗಳಾಗಬಾರದು.

ಇಲ್ಲಿ ಒಂದಂತೂ ಸ್ಪಷ್ಟ, ಇಬ್ಬರೂ ದುಡಿಯೂ ಮುಂದ, ಒಬ್ಬಾಕಿನೆ ಎಲ್ಲಾ ಭಾರ ಹೊರಲಿ, ನನ್ನ ಅನುಕೂಲಕ್ಕೇ ಮದಿವಿ ಆಗಿರೂದು ಅನ್ನೂ ಮನೋಭಾವ ಹುಡುಗರೊಳಗ ಬರಬಾರದು. ಇನ್ನು ಅಕಿ ಇರೂದೆ ತನ್ನ ವಾಂಛೆಗಳನ್ನ ತೀರಸಾಕ ಅನ್ನೂಹಂಗ ವರ್ತಸ್ತಾರ. ‘ನಾನೂ ಜಂಟಲ್‌ಮನ್‌ ಅದೀನಿ. ಯಾವತ್ತೂ ಒತ್ತಾಯಿಸಿಲ್ಲ’. ಅಂತ ಹೇಳೋರು, ಅನುನಯನೂ ಮಾಡಿರೂದಿಲ್ಲ. ಬ್ಯಾಡಂದ್ರ ಬ್ಯಾಡ, ಯಾಕ ಬ್ಯಾಡ ಅಂತ ಅರಿಯಾಕೂ ಹೋಗೂದಿಲ್ಲ. ಬೇಕಿದ್ರ ಬಂದೇ ಬರ್ತಾರ ಅನ್ನೂದೊಂದು ಅಹಂಕಾರ ಇರ್ತದಲ್ಲ, ಹುಡುಗಿಯರನ್ನ ಹತ್ತು ಹೆಜ್ಜಿ ದೂರ ಮಾಡ್ತದ ಅದು.

ಇಷ್ಟಕ್ಕೂ ಪ್ರೀತಿ ಅಂದ್ರ, ಓಲೈಸೂ ಮಾತಲ್ಲ. ನೋಟದೊಳಗಿನ ಮೌನ ಮಾತಾಗಬೇಕು. ನೋಟ ಕೂಡುವಷ್ಟು ಸಮಯ ತಗದಿಡಬೇಕು. ಬರೇ ನನ್ನ ಕೆಲಸ, ನನ್ನ ಜಂಜಾಟ, ನನ್ನ ಹೆಸರು, ನನ್ನ ಉದ್ಯೋಗ, ನನ್ನ ಫೋನು, ನನ್ನ ಸ್ನೇಹಿತರು... ಇಂಥವೇ ‘ನನ್ನ’ಗಳು ಹೆಚ್ಚಾದಷ್ಟು ‘ನನ್ನವಳು’ ಮಾಯವಾಗಿ, ಅವಳು, ಅವಳು ಮಾತ್ರ ಉಳೀತಾಳ. ಅವಾಗ ಹುಡುಗರ ಅಹಂಕಾರದ ಮಾತು ಸುರು ಆಗ್ತಾವ. ಅಕೀಗೇನು ಬೇಕು? ಯಾರಿಗೆ ದುಡೀತೀನಿ? ಯಾರ ಸಲ್ಯಾಗ ದುಡೀತೀನಿ? ಏನು ಕಡಿಮಿ ಮಾಡೇನಿ? ಯಾವುದಕ್ಕ ಕಡಿಮಿ ಮಾಡೇನಿ?
ಎಲ್ಲಾ ಕೊಟ್ಟೂ, ನೀವೇ ಜೊತಿಗಿರಲಿಲ್ಲಂದ್ರ ಎಲ್ಲಾನೂ ಕೊರತಿನೇ ಅಲ್ಲ?

ಇಷ್ಟಕ್ಕೂ ಪ್ರೀತಿನೇ ಇರಲಿ, ಸಂಬಂಧನೇ ಇರಲಿ... ಅದಕ್ಕೊಂದು ಬದ್ಧತೆ ಇದ್ದೇ ಇರ್ತದ. ಅದಕ್ಕ ಒಂದಷ್ಟು ಸಮಯ ಕೊಡಬೇಕು. ಒಂದಷ್ಟು, ತುಸು ಅನ್ನೂವಷ್ಟಾದ್ರೂ ಜೊತಿಗೆ ಇರಬೇಕು. ಹಂಗ ಜೊತಿಗೆ ಇದ್ದಾಗ ಯಾವ ಮಾತೂ ಬ್ಯಾಡ. ಲೆಕ್ಕಾಚಾರನೂ ಬ್ಯಾಡ. ಎಳೀಬಿಸಲಾಗ ಕಣ್ಣಿನ ಹೊಳಪು ನೋಡ್ಕೊಂತ ಎಲ್ಲಾ ಮರೀಬೇಕು. ಕೇಶುಭಾಯಿ ಬಿರ್ಲಾ ಮತ್ತು ಸರಳಾ ಬಿರ್ಲಾ ಇವೊತ್ತಿಗೂ ದಿನಾಲೂ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದೊಳಗ ಕೈಕೈ ಹಿಡಕೊಂಡು ನಡೀತಾರಂತ. ಅವರ ಆ ಸಾಂಗತ್ಯನೇ ಸುಖದ ದಾಂಪತ್ಯದ ಗುಟ್ಟು ಅಂತ ಹೇಳಿದ್ರು.

ಇನ್ನ ನಮಗ, ನಾವು ಒಂದಷ್ಟು ಹೊತ್ತು ತಗದು ಇಡೂದು ತ್ರಾಸಿನ ಕೆಲಸಾನ? ಇಷ್ಟಕ್ಕೂ ಇದು ಆದ್ಯತೆಯ ಪ್ರಶ್ನೆ. ಒಂದಷ್ಟು ಸುಭದ್ರ ಭಾವ, ಒಂದಷ್ಟು ಮೆತ್ತಗಿನ ಮಾತು, ಒಂದಿಷ್ಟು ಕಾಳಜಿ ಇವಿಷ್ಟೂ ತೋರಿಸಿದ್ರ, ಹೆಣ್ಮಕ್ಕಳ ಒಳಗ ಸಮರ್ಪಣಾ ಭಾವ ಬಂದೇ ಬಿಡ್ತದ. ಆಳುವುದರಿಂದ ದಾಸ್ಯತ್ವ ಕಾಣಬಹುದು. ಗೆಲ್ಲೂದರಿಂದ ನಿಮ್ಮತನ ಸಾಧಸಬೇಕು. ಗೆಲ್ಲೂದು ಕಷ್ಟ ಅಲ್ಲ.
ಆದ್ರ ಅಹಂಕಾರದ ಕೋಟಿಯೊಳಗ ಕುಂತ್ರ, ಹೆಂಗಿದ್ರೂ ಪ್ರೀತಿ ಮಾಡೇ ಮಾಡ್ತಾರ ಅನ್ನೂ ಭರವಸೆ ಗಟ್ಟಿಯಾದ್ರ, ನೀವು ಒಳಗೊಳಗೇ ಆ ಪ್ರೀತಿನ ಕಳ್ಕೊಳ್ತೀರಿ. ಕೊನೀಗೆ, ಬಿಡಲಾರದ ಅನಿವಾರ್ಯ ಮಾತ್ರ ಕೂಡಿಡ್ತದ ನಿಮ್ಮನ್ನ. ಬಿಟ್ಟಿರಲಾರದ ಬಾಂಧವ್ಯ ಕೂಡಿಡಬೇಕು ಅಂದ್ರ, ನಿಮ್ಮ ಪ್ರೀತಿ ಕಾಳಜಿಯ ಪರದೆ ಹೊದ್ದು ಬರಬೇಕು. ಕಾಳಜಿ ಇರದ ಪ್ರೀತಿ ಬರೇ ಮೋಹ ಆಗ್ತದ. ಆ ಮೋಹಕ್ಕ ಪಡಿಯೂದಷ್ಟೆ ಗೊತ್ತು. ಕೂಡೂದು ಅಲ್ಲ, ಕೂಡಿ, ಕಳಕೊಳ್ಳೂದು ಅಲ್ಲ. ಯಾಕಂದ್ರ ಪ್ರೀತಿ ಅಂದ್ರ ಬರೇ ಪ್ರೀತಿ ಅಲ್ಲವೇ ಅಲ್ಲ. ಪ್ರೀತಿ ಮಾಡ್ತೇನಿ ಆದ್ರ.... ಅಂತ ಪರಿಸ್ಥಿತಿಗಳ ಪಟ್ಟಿ ಮಾಡೂದು ಬಿಟ್ಟು,  ಎಂಥಾ ಪರಿಸ್ಥಿತಿ ಇದ್ರೂ ಪ್ರೀತಿ ಮಾಡ್ತೀನಿ ಅಂತ ಅನಸೂಹಂಗ ಮಾಡಬೇಕು. ಅದು ಗೆಲುವು. ಅದೇ ಒಲವು.

ಆ ಹುಡುಗಿಗೆ ಅದಿಷ್ಟೂ ಅರ್ಥ ಆಗ್ತದ. ಆಗೇ ಆಗ್ತದ. ಯಾಕಂದ್ರ ‘ಮೆಹೆಂದಿ ಬಣ್ಣ ನೋಡ್ರಿ, ಎಷ್ಟು ಕೆಂಪಾಗೇದ. ನನ್ನಾಂವ ಭಾಳ ಪ್ರೀತಿ ಮಾಡ್ತಾನ’ ಅಂತ ಕಣ್ಣಾಗ ನೀರಿದ್ರೂ ನಕ್ಕೊಂತ ಎದ್ದು ಹೋಗಿದ್ಲು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT