ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಒಡಲೊಳಗಿನ ಸೌಂದರ್ಯ

Last Updated 8 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಕಾವೇರಿ ನಾಡಿನ ಜೀವನದಿ, ಆಕೆ ತುಂಬಿ ಹರಿದರೆ ಮಾತ್ರವೇ ಹಲವು ಜಿಲ್ಲೆಗಳ ಲಕ್ಷಾಂತರ ರೈತರು ನೆಮ್ಮದಿಯ ಬದುಕು ನಡೆಸಬಲ್ಲರು. ಅಷ್ಟೇ ಏಕೆ ರಾಜ್ಯದ ರಾಜಧಾನಿಯ ಲಕ್ಷಾಂತರ ಜನ ಹಾಹಾಕಾರವಿಲ್ಲದೆ ನೀರು ಕುಡಿಯಲು ಸಾಧ್ಯ.

ಆದರೆ ಅದೇ ಕಾವೇರಿಯ ಒಡಲೊಳಗೆ ಹುದುಗಿರುವ ಸೌಂದರ್ಯದ ಖನಿ ಬೇಸಿಗೆ ಕಾಲದಲ್ಲೂ ಪ್ರವಾಸಿ ತಾಣಗಳಾಗಿ ಉದ್ಭವಿಸುತ್ತವೆ ಎಂಬುದು ನೋಡಿ ಅನುಭವಿಸಿದವರಿಗಷ್ಟೇ ಗೊತ್ತು. ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಕವೇರ ಮುನಿಯ ಮಗಳಾಗಿ ಕಾವೇರಿ ಮೈದಳೆಯುತ್ತಾಳೆ. ನಂತರ ಅಗಸ್ತ್ಯ ಮುನಿಯ ಪತ್ನಿಯಾಗಿ, ಪತಿಯ ಸಾಂಗತ್ಯವನ್ನು ಬಯಸಿ ಪಡೆಯಲಾಗದ ಆಕೆ ನೀರಾಗಿ ಹರಿದು ನಾಡಿನ ವಿವಿಧ ಜಿಲ್ಲೆಗಳಲ್ಲಿ ಹರಿದು ಕೊನೆಗೆ ತಮಿಳುನಾಡಿನ ಪೂಂಪುಹಾರ್‌ನಲ್ಲಿ ಅಗಸ್ತ್ಯ ಮುನಿಯಿಂದ ವಿಚ್ಛೇದನ ಪಡೆಯುತ್ತಾಳೆ ಎಂಬುದು ಪುರಾಣ.

ತಲಕಾವೇರಿಯಿಂದ ಹಿಡಿದು ಪೂಂಪುಹಾರ್‌ವರೆಗೆ ಕಾವೇರಿ ಹರಿಯುವಲ್ಲೆಲ್ಲಾ ನಿತ್ಯಹರಿದ್ವರ್ಣ ಎಂಬುದು ಆ ತಟದಲ್ಲೆಲ್ಲಾ ಓಡಾಡಿ ನಿಸರ್ಗ ಸೌಂದರ್ಯವನ್ನು ಸವಿದವರಿಗೆ ಗೊತ್ತು. ಅದು ಬಾಹ್ಯ ಸೌಂದರ್ಯವಷ್ಟೇ ಅಲ್ಲ, ಕಾವೇರಿ ಒಡಲ ಆಶ್ರಯಿಸಿ ಬದುಕಿರುವ ಜೀವ ವೈವಿಧ್ಯವೂ ಆ ಸೌಂದರ್ಯವನ್ನು ಅಗಾಧಗೊಳಿಸಿದೆ ಎಂಬುದು ನಿರ್ವಿವಾದ.

ಅಂತಹ ಸಾಕಷ್ಟು ಪ್ರವಾಸಿ ತಾಣಗಳು ಜಿಲ್ಲೆಯ ಹೆಬ್ಬಾಗಿಲು ಕುಶಾಲನಗರಕ್ಕೆ ಹೊಂದಿಕೊಂಡಂತೆ ಇರುವ ಕಾವೇರಿ ನಿಸರ್ಗಧಾಮ, ವಿಶ್ವ ಪ್ರಸಿದ್ಧ ಸಾಕಾನೆ ಶಿಬಿರ ಇರುವ ದುಬಾರೆ, ಸಿದ್ದಾಪುರ ಸೇರಿದಂತೆ ಇನ್ನು ಹಲವು ಸ್ಥಳಗಳಿಗೆ ಭೇಟಿ ನೀಡಿ ನದಿದಂಡೆಯಲ್ಲಿ ಸಾಗುತ್ತಿದ್ದರೆ ಕಾಣಸಿಗುತ್ತವೆ.

ಜುಲೈ ತಿಂಗಳು ಆರಂಭವಾಯಿತೆಂದರೆ ಜಿಲ್ಲೆಯಲ್ಲಿ ಸುರಿಯುವ ಮಳೆಯಿಂದ ಸದಾ ಕಾವೇರಿ ಭೋರ್ಗರೆಯುತ್ತಾ ಮೈದುಂಬಿ ಹರಿಯಲು ಆರಂಭಿಸುತ್ತಾಳೆ. ಈ ಸಂದರ್ಭ ಕಾವೇರಿಯೊಡಲೊಳಗಿನ ನೂರಾರು ಸಸ್ಯ ಸಂಕುಲಗಳು ರಭಸವಾದ ನೀರ ಸೆಳೆತಕ್ಕೆ ಸಿಕ್ಕು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ. ಕಾವೇರಿ ನದಿ ಮಧ್ಯದಲ್ಲಿರುವ ಚಿಕ್ಕಪುಟ್ಟವು, ಅಷ್ಟೇ ಏಕೆ ಬೃಹದಾಕಾರದ ಬಂಡೆಗಳು ನೀರಿನಲ್ಲಿ ಮುಳುಗಿ ನದಿಯನ್ನು ಸಮವಾಗಿಸುತ್ತವೆ. ಈ ವೇಳೆ ನೀರೆಂದರೆ ಭಯಪಡುವವರಿಗೆ ಕಾವೇರಿ ಹರಿಯುವಿಕೆ ನಡುಕ ಹುಟ್ಟಿಸುತ್ತದೆ. ನೀರಿನಲ್ಲಿ ಈಜಾಡಿ ಜಲಸಾಹಸಗಳನ್ನು ಕೈಗೊಂಡು ಸಂತಸಪಡುವವರಿಗೆ ಅದ್ಭುತ ದಿನಗಳನ್ನು ವರವಾಗಿಸುತ್ತಾಳೆ ಕಾವೇರಿ. ಪ್ರವಾಹ ರೀತಿಯಲ್ಲಿ ಹರಿಯುವ ನೀರಿನಲ್ಲಿರ‍್ಯಾಫ್ಟಿಂಗ್‌ ಸಾಹಸ ಮಾಡುವವರು  ಮುಳುಗೇಳುತ್ತಾ, ನಾಲ್ಕಾರು ಕಿಲೋಮೀಟರ್‌ ನೀರಿನಲ್ಲೇ ತೇಲುತ್ತಾ ಆನಂದ ಅನುಭವಿಸುತ್ತಾರೆ. ಆದರೆ ಅದು ಅದೆಷ್ಟೋ ಜನರಿಗೆ ಎದೆನಡುಗಿಸುವಂತಿರುತ್ತದೆ.

ಮಳೆಗಾಲದಲ್ಲಿ ರುದ್ರಭಯಾನಕವಾಗಿ ಹರಿಯುವ ಕಾವೇರಿ ತನ್ನೊಡಲೊಳಗೆ ಸೌಂದರ್ಯದ ಖನಿಯನ್ನೇ ಹುದುಗಿಸಿಟ್ಟುಕೊಂಡಿದ್ದಾಳೆ ಎಂಬುದು ಜನವರಿಯಿಂದ ಮೇ ತಿಂಗಳವರೆಗಿನ ಈ ಅವಧಿಯ ಕಾವೇರಿ ನದಿಯನ್ನು ನೋಡಿ, ಅನುಭವಿಸಿದ ಪ್ರವಾಸಿಗರಿಗಷ್ಟೇ ಗೊತ್ತು.
ಈ ತಿಂಗಳುಗಳಲ್ಲಿ ಕಾವೇರಿ ಜುಳುಜುಳು ನಿನಾದ ಮಾಡುತ್ತ ಶಾಂತವಾಗಿ ಹರಿಯುತ್ತಾಳೆ. ಬೇಸಿಗೆಯ ಝಳದಲ್ಲಿ ಬೆಂದು ಬರುವ, ನೀರೆಂದರೆ ಭಯಪಡುವ ಪ್ರವಾಸಿಗರನ್ನೂ ತನ್ನತ್ತ ಸೆಳೆಯುವ ಸಮಯವದು ಎಂಬುದು ನೀರಲ್ಲಿ ಮಿಂದೆದ್ದು ಮೈಮರೆತು ಆನಂದಿಸುವ ಪ್ರವಾಸಿಗರನ್ನು ಕಂಡರೆ ನೈಜವಾಗಿ ತಿಳಿಯುತ್ತದೆ.

ಇದು ಮತ್ತೊಂದು ರೀತಿಯ ಸೌಂದರ್ಯವೆನಿಸಿದರೆ, ಕಾವೇರಿ ಹರಿಯುವಿಕೆ ಕಿರಿದಾಗುತ್ತಿದ್ದಂತೆ ಅದೆಷ್ಟೋ ಜಲಚರಗಳು ಅದೇ ಸಮಯದಲ್ಲಿ ತಮ್ಮ ಸಂತಾನೋತ್ಪತ್ತಿ ಮಾಡುತ್ತವೆ. ಇನ್ನು ವಿಧ ವಿಧವಾದ ಕೊಕ್ಕರೆ, ಕಿಂಗ್‌ಫಿಷರ್‌ ಪಕ್ಷಿ ಸೇರಿ ಹಲವು ಪಕ್ಷಿಗಳು ನೀರಿನಲ್ಲಿ ಸುಲಭವಾಗಿ ಸಿಗುವ ಸಣ್ಣ ಮೀನುಗಳಿಗಾಗಿ ಹೊಂಚುಹಾಕಿ ಕುಳಿತಿರುತ್ತವೆ. ಮಾರ್ಚಿ ತಿಂಗಳು ಕಳೆದು ವಸಂತ ಕಾಲ ಆರಂಭವಾಗುತ್ತಿದ್ದಂತೆ ನೀರನ್ನೇ ಹೆಚ್ಚು ಆಶ್ರಯಿಸುವ ಗಿಡ ಬಳ್ಳಿಗಳು, ಜೊಂಡುಹುಲ್ಲು ನದಿ ತಟದಲ್ಲಿನ ತೇವಾಂಶವನ್ನು ಹೀರಿಕೊಂಡು ಮತ್ತಷ್ಟು ಹುಲುಸಾಗಿ ಬೆಳೆಯುತ್ತವೆ. ಹೀಗಾಗಿ ನೀರಿನ ಹರಿವು ಕಡಿಮೆಯಾದ ಒಂದೆರಡು ತಿಂಗಳಲ್ಲಿ ಕಾವೇರಿ ನದಿಯೊಡಲು ರುದ್ರಭಯಾನಕ ಅವತಾರವನ್ನು ಕಳಚಿ ನಿತ್ಯಹರಿದ್ವರ್ಣದ ಸೌಂದರ್ಯವನ್ನು ಹೊದ್ದು ಮಲಗುತ್ತಾಳೆ. ಅದನ್ನು ನೋಡುವುದೇ ಆನಂದ.

ಆಳೆತ್ತರದಿಂದ ಜಿಗಿಯುವ ನೀರಿನಲ್ಲಿ ಮುಳುಗಿ ಹೋಗಿದ್ದ ಬಂಡೆಗಲ್ಲುಗಳು ಬೇಸಿಗೆಯ ನದಿಯುದ್ದಕ್ಕೂ ರಾರಾಜಿಸುತ್ತವೆ. ಆದರೆ ಕಡಿಮೆ ಪ್ರಮಾಣದಲ್ಲಿ ಪ್ರಶಾಂತವಾಗಿ ಹರಿಯುವ ನೀರು ಬಂಡೆಗಳ ಸಂದಿಗೊಂದಿಗಳಲ್ಲಿ ಅಲುಗಾಡದಂತೆ ನಿಂತಿದೆಯೇನೋ ಎಂದು ಭಾಸವಾಗುವಂತೆ ಹರಿಯುತ್ತಿರುತ್ತದೆ. ಅದೆಷ್ಟು ಸ್ವಚ್ಛ, ಹೊಳಪು ಹೊಂದಿರುತ್ತದೆ ಎಂದರೆ ನದಿಯ ಎರಡು ಬದಿಗಳಲ್ಲಿ ಬೆಳೆದಿರುವ ಬೃಹದಾಕಾರದ ಮರಗಳ ಸಂದಿಗಳಲ್ಲಿ ಕಾಣುವ ನೀಲಾಕಾಶ ನೀರಿನಲ್ಲಿ ತನ್ನ ಬಣ್ಣವನ್ನು ಕರಗಿಸಿದಂತೆ ಕಾಣುತ್ತಿರುತ್ತದೆ. ಇನ್ನು ನೀರಿನ ಬುಡದಲ್ಲಿ ಬೆಳೆದ ವಿವಿಧ ಜೊಂಡು ಹುಲ್ಲುಗಳ ಬಣ್ಣ, ನದಿ ತಟದಲ್ಲಿನ ಮರಗಳ ಹಸಿರ ಬಣ್ಣ, ನೀರಿನಲ್ಲಿ ಕರಗಿ ಇಡೀ ನೀರನ್ನು ಹಸಿರಾಗಿಸಿರುತ್ತದೆ. ಮತ್ತೊಂದೆಡೆ ನೀರಿನ ಮೇಲೆ ಬಿದ್ದ ಸೂರ್ಯನ ಕಿರಣಗಳು ಪ್ರತಿಫಲಿಸಿ ನೋಡುಗರ ಮುಖಕ್ಕೆ ಚುಂಬಿಸುತ್ತವೆ.

ಈ ಸಂದರ್ಭದಲ್ಲಿ ರ್‍ಯಾಫ್ಟಿಂಗ್‌ ನಡೆಸುವಷ್ಟು ನೀರು ಇರುವುದಿಲ್ಲ. ಆದರೆ ಬೋಟಿಂಗ್‌ ಮಾಡಲು ಬೇಕಾಗಿರುವಷ್ಟು ನೀರು ನಿಸರ್ಗಧಾಮ, ದುಬಾರೆ ಮುಂತಾದೆಡೆಗಳಲ್ಲಿ ಇರುವುದರಿಂದ ಪ್ರವಾಸಿಗರು ಇದರ ಸವಿಯನ್ನು ಪಡೆಯಬಹುದು. ಇಂತಹ ನಿಸರ್ಗ ರಮಣೀಯ ಸೌಂದರ್ಯದೊಳಗೆ ಕುಳಿತು ಏನಾದರೂ ತಿಂದು ಆನಂದದ ಮಾತುಗಳಾಡಿ, ನೀರೊಳಗೆ ಕುಣಿದು ಮಿಂದೆದ್ದು ಸಂಭ್ರಮಿಸಿ ಬರುವುದೆಂದರೆ ಅದು ಸ್ವರ್ಗವೇ ಸರಿ.

ಒಟ್ಟಿನಲ್ಲಿ ಮಳೆಗಾಲದಲ್ಲಿ ಭೋರ್ಗರೆದು ಹರಿಯುವ ಜೀವನದಿ ಕಾವೇರಿ ರುದ್ರಭಯಾನಕವಾಗಿದ್ದರೆ, ಬೇಸಿಗೆಯಲ್ಲಿ ಪ್ರಶಾಂತವಾಗಿ ಹರಿದು ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸಿರುತ್ತಾಳೆ. ಇಡೀ ಪರಿಸರ ತಂಪು ತಂಪಾಗಿ ವಾಹನಗಳ ಬಿಸಿಗೆ, ಬಿಸಿಲ ಜಳಕ್ಕೆ ಸುಸ್ತಾಗಿ ಬಂದಿದ್ದ ಪ್ರವಾಸಿಗರಿಗೆ ಮುದ ನೀಡುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT