ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯ ಕೀಲಿ `ಕರ್ನಾಟ ಕಲ್ಪದ್ರುಮಂ'

ಹಳತು ಹೊನ್ನು
Last Updated 10 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

`ಕರ್ನಾಟ ಕಲ್ಪದ್ರುಮಂ' ರಾಮಸ್ವಾಮಿ ಶಾಸ್ತ್ರಿ ಹಾಗೂ ಹೆಸರುಘಟ್ಟದ ಹೊನ್ನಪ್ಪನವರ ಕೃತಿ. `ಕರ್ನಾಟಕ ಶಬ್ದ ಕಲ್ಪದ್ರುಮ' ಎಂದೂ ಈ ಕೃತಿಯನ್ನು ಲೇಖಕರು ಒಂದೆಡೆ ಸೂಚಿಸಿದ್ದಾರೆ. 1885ರಲ್ಲಿ ಬೆಂಗಳೂರಿನ ಲಕ್ಷ್ಮೀ ವಿಲಾಸ ಪ್ರೆಸ್‌ನವರು ಈ ಪುಸ್ತಕದ ಮೊದಲ ಆವೃತ್ತಿಯ 1000 ಪ್ರತಿಗಳನ್ನು ಛಾಪಿಸಿದ್ದಾರೆ. 28+412 ಪುಟಗಳ ಈ ನಿಘಂಟಿನ ಕ್ರಯ 3 ರೂಪಾಯಿ 4 ಆಣೆ.

ಆರಂಭದ ಪುಟದಲ್ಲಿ- `ಶ್ರಿ ಕರ್ನಾಟ ಕಲ್ಪದ್ರುಮಂ-ಕರ್ನಾಟ ಭಾಷಾಭ್ಯಾಸಿಗಳಿಗತ್ಯಂತೋಪಯುಕ್ತಮಾಗಿ' ಟ್ರಾನ್‌ಸ್ಲೇಟರ್ ಮ.ರಾ. ರಾಮಸ್ವಾಮಿ ಶಾಸ್ತ್ರಿಗಳಿಂದ ಪ್ರಾರಂಭಿಸಲ್ಪಟ್ಟ ಈ ಪುಸ್ತಕವು ಬೆಂಗಳೂರು ತಾಲ್ಲೂಕು ಉಪ್ಪಾರಳ್ಳಿ ಸ್ಕೂಲ್ ಟೀಚರ್ ಹೆ. ಹೊನ್ನಪ್ಪನವರಿಂದ ಪೂರೈಸಲ್ಪಟ್ಟು ಬೆಂಗಳೂರು ಬು.ಡಿ. ಪ್ರೊ.ಟಿ. ಸುಬ್ಬರಾಯ ಶಾಸ್ತ್ರಿಗಳಿಂದಲು ಮ. ಗಿರಿಯಪ್ಪನವರಿಂದಲೂ ಪ್ರಕಟಿಸಲ್ಪಟ್ಟಿತು ಎಂಬ ಒಕ್ಕಣೆ ಇದೆ.

ಒಂದು ಕೃತಿ ಒಬ್ಬರಿಂದ ಆರಂಭವಾಗಿ ಇನ್ನೊಬ್ಬರಿಂದ ಮುಕ್ತಾಯಗೊಂಡಿರುವುದು ಈ ಲೇಖನಮಾಲೆಯಲ್ಲಿ ಇದು ಮೂರನೆಯದು. ಮೊದಲನೆಯದು ಜಿ. ವುರ್ತ್ ಆರಂಭಿಸಿ ಜೆ. ಗ್ಯಾರೆಟ್ ಪೂರೈಸಿಕೊಟ್ಟ 1868ರಲ್ಲಿ ಪ್ರಕಟಗೊಂಡ `ಕರ್ನಾಟಕ ಪ್ರಾಕ್ಕಾವ್ಯ ಮಾಲಿಕೆ' (ಸಾ.ಪು: 12 ಫೆಬ್ರುವರಿ 2012). ಎರಡನೆಯದು ಪಂಡಿತ ಕಡಬದ ನಂಜುಂಡ ಶಾಸ್ತ್ರಿಗಳಿಂದ ಆರಂಭಗೊಂಡು ಎಚ್. ನಾಗಪ್ಪನವರಿಂದ ಮುಕ್ತಾಯಗೊಂಡು 1932ರಲ್ಲಿ ಪ್ರಕಟಗೊಂಡ `ಕರ್ನಾಟಕ ಜೈಮಿನಿ ಭಾರತ' (ಸಾ.ಪು: 10 ಮಾರ್ಚ್ 2013). ಈ ಕೃತಿಕಾರರಿಬ್ಬರೂ ಶಾಸ್ತ್ರವೇತ್ತರು ಮತ್ತು ಕನ್ನಡ ಸಂಸ್ಕೃತ ಭಾಷೆಗಳಲ್ಲಿ ಘನ ವಿದ್ವಾಂಸರು.

`ಕರ್ನಾಟ ಕಲ್ಪದ್ರುಮಂ' ಕೃತಿಯನ್ನು ಪ್ರಾರಂಭಿಸಿದ ಮ. ರಾಮಸ್ವಾಮಿ ಶಾಸ್ತ್ರಿಗಳು ಬಹುಶ್ರುತ ವಿದ್ವಾಂಸರು. ಇವರು ವೆಸ್ಲಿಯನ್ ಮಿಷನರಿಗಳ ಸಂಪರ್ಕದಲ್ಲಿದ್ದವರು ಹಾಗೂ ಮೈಸೂರು ಸರ್ಕಾರದ ಟ್ರಾನ್‌ಸ್ಲೇಟರ್ ಆಗಿದ್ದವರು. ಇವರು ರಚಿಸಿರುವ `ಲಘುಲಂಪಕಾ ಗ್ರಂಥ' ಎನ್ನುವ ಜ್ಯೋತಿಷ ಕೃತಿಯು 1872ರಲ್ಲಿ, ಪಂಚಪ್ರಾಣವಾಯುಗಳ ಸ್ವರೂಪವನ್ನು ನಿರೂಪಿಸುವ `ನಾಡೀಶಾಸ್ತ್ರ' 1908ರಲ್ಲಿ ಪ್ರಕಟಗೊಂಡಿದೆ. ಹರ್ಮನ್ ಎಫ್.ಇ. ಎಂಬ ಲೇಖಕನು ಬರೆದ Elementary agricultural class book ಕೃತಿಯ ಅನುವಾದವಾದ, ಮಣ್ಣಿನ ವೈವಿಧ್ಯ ವಿಚಾರಗಳು, ವ್ಯವಸಾಯವನ್ನು ಕುರಿತ ತಿಳಿವಳಿಕೆಯನ್ನು ನಿರೂಪಿಸುವ `ವ್ಯವಸಾಯಕ್ರಮ ಬೋಧಿನಿ'ಯನ್ನು 1879ರಲ್ಲಿ ರಚಿಸಿರುತ್ತಾರೆ.

ಇವರು 1854ರಲ್ಲಿ ರಚಿಸಿದ `ಕರ‌ಣಾಟಕ ವಾಗ್ವಿಧಾಯಿನಿ'ಯು ಅನೇಕ ವರ್ಷಗಳವರೆಗೆ ಪಠ್ಯವಾಗಿದ್ದಿತು. ಹೀಗೆ ವಿಭಿನ್ನ ಶಾಸ್ತ್ರಗಳಾದ ವ್ಯಾಕರಣ, ನಿಘಂಟು, ನಾಡೀಶಾಸ್ತ್ರ, ವ್ಯವಸಾಯಶಾಸ್ತ್ರ ಹಾಗೂ ಜ್ಯೋತಿಷಶಾಸ್ತ್ರಗಳನ್ನು ಕುರಿತ ಕೃತಿ ರಚನೆ ಮಾಡಿರುವುದು ಶಾಸ್ತ್ರಿಗಳ ಅಗಾಧ ವಿದ್ವತ್ತನ್ನು ಸೂಚಿಸುತ್ತದೆ.

ಇನ್ನು ಹೆಸರುಘಟ್ಟದ ಹೊನ್ನಪ್ಪನವರು ಈ ಕೃತಿಯನ್ನು ಪೂರೈಸಿದ್ದಲ್ಲದೆ ಸ್ವತಂತ್ರವಾಗಿ ಇನ್ನೂ ಐದು ಕೃತಿಗಳನ್ನು ರಚಿಸಿರುತ್ತಾರೆ. ಆ ಕೃತಿಗಳೆಂದರೆ- 1884ರಲ್ಲಿ ಬೆಂಗಳೂರು ಬುಕ್ ಡಿಪೋವಿನಲ್ಲಿ ಮುದ್ರಣಗೊಂಡ `ವಿಬುಧಾನಂದಿನೀ' ಎಂಬ ಟೀಕೆಯೊಂದಿಗಿನ `ಸಟೀಕಾ ಕರ್ಣಾಟಕ ಶಬ್ದಮಂಜರಿ', ಬೆಂಗಳೂರಿನ ವಿಚಾರ ದರ್ಪಣ ಮುದ್ರಾಕ್ಷರ ಶಾಲೆಯಲ್ಲಿ 1885ರಲ್ಲಿ 169 ವೃತ್ತಗಳಲ್ಲಿ ಕೋಶ, ಟೀಕೆಯೊಂದಿಗೆ ರಚಿತವಾಗಿರುವ `ನಾನಾರ್ಥ ರತ್ನಾಕರ', 1890ರಲ್ಲಿ ಪ್ರಕಟವಾಗಿರುವ 114 ಪುಟಗಳ `ವ್ಯಾಕರಣ ಸಂಗ್ರಹಂ', ಬೆಂಗಳೂರಿನ ವಿಚಾರ ದರ್ಪಣ ಮುದ್ರಾಕ್ಷರ ಶಾಲೆಯಲ್ಲಿ ಮುದ್ರಣಗೊಂಡ 568 ಪುಟಗಳ `ಸಟೀಕಾ ರಾಜಶೇಖರ ವಿಳಾಸಂ' ಹಾಗೂ 1885ರಲ್ಲಿ ಮುದ್ರಣಗೊಂಡ, ಬೆಂಗಳೂರಿನ ವಾಜಪೇಯಂ ಕೃಷ್ಣಯ್ಯ ಅವರಿಂದ ಪ್ರಕಟಗೊಂಡ ಲಿಂಗಮಂತ್ರಿಯ ಕಬ್ಬಿಗರ ಕೈಪಿಡಿಯ ವಿಬುಧ ಚಕೋರ ಚಂದ್ರಿಕೆ ಎಂಬ ಟೀಕೆಯೊಂದಿಗಿನ ವ್ಯಾಖ್ಯಾನ ಕೃತಿಯಾದ `ಸಟೀಕಾ ಕಬ್ಬಿಗರ ಕೈಪಿಡಿ'.

ಪ್ರಸ್ತುತ ಕೃತಿಯು ಕನ್ನಡ-ಕನ್ನಡ ಏಕಭಾಷಿಕ ನಿಘಂಟು. ಇದರಲ್ಲಿ- ಕರ್ಣಾಟಕ ಶಬ್ದಮಂಜರಿ, ಕಬ್ಬಿಗರ ಕೈಪಿಡಿ, ಕುಮಾರವ್ಯಾಸ ಭಾರತ, ಭಾರತ ನಿಘಂಟು, ಜೈಮಿನಿ ಭಾರತ, ತೊರವೆ ರಾಮಾಯಣ, ಅನುಭವಾಮೃತ, ರಾಜಶೇಖರ ವಿಳಾಸ, ವೃಷಭೇಂದ್ರ ವಿಜಯ, ಶಬರ ಶಂಕರ ವಿಳಾಸ, ಚನ್ನಬಸವ ಪುರಾಣ ಹಾಗೂ ಶಬ್ದಮಣಿದರ್ಪಣ- ಈ ಮುಂತಾದ ಕನ್ನಡ ಕಾವ್ಯಶಾಸ್ತ್ರ ಗ್ರಂಥಗಳಿಂದ ಆರಿಸಿಕೊಂಡ ಶಬ್ದಗಳಿಗೆ ಅರ್ಥಗಳನ್ನು ನೀಡಲಾಗಿದೆ.

ಕನ್ನಡದಲ್ಲಿ ಸಹಜವಾಗಿ ಹೊಂದಿಕೊಂಡಿರುವ ಸಂಸ್ಕೃತ ಶಬ್ದಗಳೂ ಈ ಕೋಶದಲ್ಲಿದೆ. ಒಟ್ಟು ಸುಮಾರು 12,000 ಶಬ್ದಗಳನ್ನು ಇಲ್ಲಿ ಸಂಗ್ರಹಿಸಿ ಅರ್ಥ ನೀಡಲಾಗಿದೆ. ಆದರೆ ಕೃತಿಯೊಳಗೆ ಹೆಚ್ಚಿನ ಮುದ್ರಣ ದೋಷಗಳಿವೆ. 20 ಪುಟಗಳಷ್ಟು ಶುದ್ಧಾಶುದ್ಧ ಪತ್ರಿಕೆ ಇದೆ. ಅಂದರೆ ಸುಮಾರು 500 ಕಡೆ ಮುದ್ರಣ ದೋಷಗಳಿವೆ. ಬಹುಶಃ ಮುದ್ರಣ ದೋಷಗಳಿಗೆ ಇದೊಂದು ದಾಖಲೆಯೇ ಸರಿ. ಅಷ್ಟೇ ಅಲ್ಲದೆ ಕೃತಿಯ ಆರಂಭದಲ್ಲಿಯೇ ಈ ಶುದ್ಧಾಶುದ್ಧ ಪತ್ರಿಕೆಯನ್ನು ನೀಡಿರುವುದು ಕೂಡ ಈ ಪುಸ್ತಕವೊಂದರಲ್ಲೇ ಎಂದು ತೋರುತ್ತದೆ. 

ಪ್ರತಿ ಪುಟದಲ್ಲಿ ಕೋಷ್ಟಕ ರೀತಿಯ ಎರಡು ಭಾಗಗಳಿದ್ದು ಮೊದಲನೆಯ ಭಾಗದಲ್ಲಿ ಶಬ್ದ ಮತ್ತು ಅರ್ಥಗಳನ್ನು ನೀಡಲಾಗಿದೆ. ಎರಡನೆಯ ಭಾಗದಲ್ಲಿ ಆಯಾ ಶಬ್ದಗಳನ್ನು ಬಳಸಿರುವ ಕೃತಿ, ಆಕರ, ವ್ಯಾಕರಣ ವಿಶೇಷ, ಪ್ರಯೋಗ, ಹೆಚ್ಚಿನ ವಿಚಾರಗಳನ್ನು ನೀಡಲಾಗಿದೆ. ಒಂದು ಶಬ್ದಕ್ಕಿರುವ ವಿವಿಧ ರೂಪಗಳನ್ನು ಒಂದೇ ಶಬ್ದದಡಿ ನೀಡಿ ಅರ್ಥೈಸಲಾಗಿದೆ. ಆ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ವಿದ್ವಾಂಸರು ವಿಶೇಷವಾಗಿ ಬಳಕೆಯಲ್ಲಿ ಇಟ್ಟುಕೊಂಡಿದ್ದ ನಿಘಂಟು ಇದು.

ಈ ಕೃತಿಯಲ್ಲಿನ ವಿಶೇಷ ಆಸಕ್ತಿಯ ಅಂಶವೆಂದರೆ ಸೂಚನೆ ಎನ್ನುವ ಭಾಗದಲ್ಲಿ ಹೊನ್ನಪ್ಪನವರು 1885ರಲ್ಲಿ ಹಳಗನ್ನಡದಲ್ಲಿ ಬರೆದಿರುವ ಒಕ್ಕಣೆ. ಆ ಒಕ್ಕಣೆ ಹೀಗಿದೆ:

`ಶ್ರೀಮತ್ಸಕಲಲೋಕದೋಳ್ ಜನರ್ಗತ್ಯಾವಶ್ಯಕಮಾದ ನಾನಾವಿಧಮಪ್ಪ ಭಾಷೆಗಳ್ ಆಯಾಯಾ ದೇಶದವರಿಂ ಪ್ರಸಿದ್ಧಮಾಗಿರ್ಪವು. ಇಂತಿರ್ದೊಡಂ ಆಯಾಯ ಭಾಷೆಯೋಳ್ ಸಮರ್ಥರಾದ ಕವಿಗಳಿಂ ಅನೇಕ ಗ್ರಂಥಂಗಳ್ ಪೇಳಲ್‌ಪಡುವುವು. ಇಂತಪ್ಪ ಗ್ರಂಥಂಗಳಂ ಅಭ್ಯಾಸಮಂ ಮಾಡಿ ಅದರೊಳಿರ್ಪ ಭಾಷೆಯ ಸ್ವಾರಸ್ಯಮಂ ಎಷ್ಟು ಪೇಳ್ದೊಡಂ ಅಲ್ಪಮಾಗಿರ್ಪುದು. ಅದಂತಿರ್ಕೆ. ಈಗಳ್ ಕರ್ಣಾಟ ಭಾಷೆಯೊಳ್ ಅನಂತ ಕವಿಗಳ್ ಪೊಕ್ಕು ಸುಖಮನನುಭವಿಸಿ ಅವರ್ಗಳನುಭವಿಸಿದ ಸುಖಮಂ ಎಲ್ಲರ್ಗುಸುರಲೆಳಸಿ ನಾನಾವಿಧಮಪ್ಪ ವೃತ್ತಂಗಳಿಂ ಷಟ್ಪದಿಗಳಿಂ ಗದ್ಯಂಗಳಿಂ ವಚನಂಗಳಿಂ ರಗಳೆಗಳಿಂ ದಂಡಕಂಗಳಿಂ ಇನ್ನುಮಿರ್ಪ ಛಂದಶ್ಶಾಸ್ತ್ರಾನುಸಾರಮಾಗಿ ಗ್ರಂಥಂಗಳಂ ನಿಘಂಟುಗಳಂ ಪೇಳ್ದರ್.

ಇಂತು ಪೇಳ್ದ ಗ್ರಂಥಂಗಳೊಳುಂ ನಿಘಂಟುಗಳೊಳುಂ ಪ್ರಯೋಗಿಸಿರ್ಪ ಶಬ್ದಂಗಳ್ ಸಾಧಾರಣ ಜನಂಗಳ್ಗಗೋಚರಮಾಗಿರ್ಪುವದರಿಂ ಇವುಗಳೋಳ್ ಕೆಲವಂ ಸಂಗ್ರಹಿಸಿ ವಿದ್ಯಾಭ್ಯಾಸದ ಇಲಾಖೆಯೋಳ್ ಟ್ರಾನ್‌ಸ್ಲೇಟರಾಗಿದರ್ದ್ ಮಹಾರಾಜೇಶ್ರೀ ರಾಮಸ್ವಾಮಿಶಾಸ್ತ್ರಿಗಳ್ ತಾವು ಕರ್ಣಾಟಕ ಶಬ್ದ ಕಲ್ಪದ್ರುಮಂ ಎಂದೊಂದು ಪೆಸರಿಟ್ಟು ಅಕಾರಾದಿಶಬ್ದಂಗಳನುಸುರುತಿರ್ಪುದುಂ ಕೆಲವಾರು ದಿನಂಗಳ್ಗೆ ಪರಲೋಕಯಾತ್ರೆಯಂ ಮಾಳ್ದರ್.

ಇಂತು ಪೇಳಲುಜ್ಜುಗಿಸಿರ್ದ ಕರ್ಣಾಟಕ ಕಲ್ಪದ್ರುಮಮೆಂಬ ಪುಸ್ತಕಮಂ, ಕಲ್ಯಾಣಪುರಿಯೋಳ್ ವಾಸಮಾಗಿರ್ಪ ಮ ಸುಬ್ಬರಾಯ ಶಾಸ್ತ್ರಿಗಳುಂ ಶ್ರೀ ಮಲ್ಲೋಹಳ್ಳಿ ಚಿಕ್ಕಗಿರಿಯಪ್ಪನವರುಂ ಪೂರೈಸಲೆನಗಿತ್ತುದರಿಂ ಆಂ ಪೂರೈಸಲಿಚ್ಛಿಸಿ ಮಾಳ್ದ ಕಜ್ಜಮೆಂತೆನೆ ಪ್ರತಿಪುಟದಾದಿಯೋಳ್ ಅಕಾರಾದಿಶಬ್ದಂಗಳುಂ ಅವಕ್ಕಪ್ಪ ಲಿಂಗಂಗಳುಂ ಅರ್ಥಂಗಳುಂ ಪೇಳ್ದು, ಈ ಶಬ್ದಂಗಳ್ಗೆ ಅಭಿಮುಖಮಾಗಿ ರಾಜಶೇಖರ ವಿಳಾಸ, ವೃಷಭೇಂದ್ರ ವಿಜಯ, ಗಿರಿಜಾ ಕಲ್ಯಾಣ, ಚನ್ನಬಸವಪುರಾಣ, ಭಾರತ, ರಾಮಾಯಣ, ಜೈಮಿನಿ, ಅನುಭವಾಮೃತ, ಶಬರಶಂಕರ ವಿಳಾಸ, ಕಣಾಟಕ ಶಬ್ದಮಂಜರಿ, ಕಬ್ಬಿಗರ ಕೈಪಿಡಿ ಇಂತಪ್ಪ ಅನೇಕ ಗ್ರಂಥಂಗಳೋಳ್ ಪೇಳ್ದ ಶಬ್ದಂಗಳ ಉದಾಹರಣೆಗಳಂ ಪೇಳ್ದಿರ್ಪೆಂ. ಇದರೋಳ್ ಕೆಲವು ಪೊಸಗನ್ನಡದೋಳ್ ಬರ್ಪ ಶಬ್ದಂಗಳಂ ಇವುಗಳ್ಗೆ ವ್ಯವಹಾರದೊಳಿರ್ಪ ಕೆಲವು ವಚನರೂಪಮಾದ ಉದಾಹರಣೆಗಳಂ ಪೇಳಿರ್ದೆನಾದೊಡಂ ಗುಣಜ್ಞರಾದ ಮಹಾನುಭಾವರ್ಕಳ್ ಅದರೋಳ್ ಏನಾದೊಡಂ ತಪ್ಪಿರ್ದೊಡಂ ತಿರ್ದಿ ಆಂ ಮಾಳ್ಪ ವಂದನೆಯಂ ಅಂಗೀಕರಿಸಬೇಕೆಂದು ಅತಿವಿನಯದಿಂ ಬೇಡುತಿರ್ಪ ಹೆಸರುಘಟ್ಟದ ಹೊನ್ನಪ್ಪ'.

ಈ ಕನ್ನಡ-ಕನ್ನಡ ಕೋಶಕ್ಕೆ ಸಂವಾದಿಯಾಗಿ 1919ರಲ್ಲಿ ಬೆಂಗಳೂರಿನ ಟಿ.ಎನ್. ಕೃಷ್ಣಯ್ಯ ಶೆಟ್ಟಿ ಅವರಿಂದ ಪ್ರಕಾಶಗೊಂಡ ಟಿ. ಸುಬ್ರಾಯ ಶಾಸ್ತ್ರಿ ಅವರ `ಶಬ್ದೌಘ ಕಲ್ಪದ್ರುಮ'ವೆಂಬ ಸಂಸ್ಕೃತ ಕೋಶವು ಮುದ್ರಣಗೊಂಡಿರುವುದನ್ನು ಗಮನಿಸಬಹುದು. ದೋಷಗಳಿದ್ದರೂ ಅಂದಿನ ಕಾಲಘಟ್ಟದಲ್ಲಿ ಕನ್ನಡ ಕಾವ್ಯಗಳನ್ನೋದಿ ಅರ್ಥೈಸಲು ಈ `ಕರ್ನಾಟ ಕಲ್ಪದ್ರುಮಂ' ಕೃತಿಯು ಸಹಕಾರಿಯಾಗಿ ಕನ್ನಡ ನಿಘಂಟು ಕ್ಷೇತ್ರಕ್ಕೆ ಒಂದು ಗಣನೀಯ ಕಾಣಿಕೆಯನ್ನಿತ್ತಿದೆ ಎನ್ನಬಹುದು.
-ಕೆ.ಎಸ್. ಮಧುಸೂದನ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT